ಆಗ ಪೇತ್ರನು, “ಅನನೀಯಾ, ನಿನ್ನ ಆಸ್ತಿಯ ವಿಕ್ರಯದಿಂದ ಬಂದ ಹಣದ ಒಂದು ಭಾಗವನ್ನು ಬಚ್ಚಿಟ್ಟುಕೊಂಡು, ನೀನು ಪವಿತ್ರಾತ್ಮ ಅವರಿಗೆ ಏಕೆ ವಂಚನೆಮಾಡಿದೆ? ನಿನ್ನ ಹೃದಯದಲ್ಲಿ ಪಿಶಾಚಿಗೇಕೆ ಎಡೆಮಾಡಿಕೊಟ್ಟೆ? ಮಾರುವುದಕ್ಕೆ ಮೊದಲು ಆಸ್ತಿ ನಿನಗೇ ಸೇರಿತ್ತು; ಮಾರಿದ ನಂತರವೂ ಅದರ ಹಣ ನಿನ್ನದೇ ಆಗಿತ್ತು. ಹೀಗಿರುವಲ್ಲಿ ಇಂಥಾ ದುಷ್ಟಯೋಚನೆ ಮಾಡಲು ನೀನೇಕೆ ಮನಸ್ಸುಮಾಡಿದೆ? ನೀನು ಸುಳ್ಳಾಡಿರುವುದು ಮನುಷ್ಯರಿಗಲ್ಲ, ದೇವರಿಗೆ,” ಎಂದನು. ಈ ಮಾತುಗಳನ್ನು ಕೇಳಿದಾಕ್ಷಣವೇ ಅನನೀಯನು ಸತ್ತುಬಿದ್ದನು.