YouVersion Logo
Search Icon

ಆದಿಕಾಂಡ 17

17
ದೇವರು ಅಬ್ರಹಾಮನ ಸಂಗಡ ಒಡಂಬಡಿಕೆ ಮಾಡಿಕೊಂಡು ಸುನ್ನತಿಸಂಸ್ಕಾರವನ್ನು ನೇವಿುಸಿದ್ದೂ ಇಸಾಕನ ಜನನವನ್ನು ಮುಂತಿಳಿಸಿದ್ದೂ
1ಅಬ್ರಾಮನು ತೊಂಭತ್ತೊಂಭತ್ತು ವರುಷದವನಾದಾಗ ಯೆಹೋವನು ಅವನಿಗೆ ದರ್ಶನಕೊಟ್ಟು - ನಾನು ಸರ್ವಶಕ್ತನಾದ ದೇವರು; ನನಗೆ ನಡಕೊಂಡು ದೋಷವಿಲ್ಲದವನಾಗಿರು. 2ನಾನು ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುತ್ತೇನೆ; ಅತ್ಯಧಿಕವಾದ ಸಂತತಿಯನ್ನು ಕೊಡುವೆನು ಅಂದನು. 3ಅಬ್ರಾಮನು ಅಡ್ಡಬೀಳಲು ದೇವರು ಅವನ ಸಂಗಡ ಮಾತಾಡಿ - 4ನಾನಂತೂ ನಿನಗೆ ವಾಗ್ದಾನಮಾಡುತ್ತೇನೆ; ಏನಂದರೆ ನೀನು ಅನೇಕ ಜನಾಂಗಗಳಿಗೆ ಮೂಲಪುರುಷನಾಗುವಿ. 5ಇನ್ನು ಮುಂದೆ ನಿನಗೆ ಅಬ್ರಾಮ ಎಂದು ಹೆಸರಿರುವದಿಲ್ಲ. ನಿನ್ನನ್ನು ಅನೇಕ ಜನಾಂಗಗಳಿಗೆ ಮೂಲ ಪಿತೃವಾಗಿ ನೇವಿುಸಿರುವದರಿಂದ ನಿನಗೆ ಅಬ್ರಹಾಮನೆಂದು#17.5 ಸಮೂಹದ ತಂದೆ ಎಂಬರ್ಥವಿದ್ದಂತೆ. ಹೆಸರಿರುವದು. 6ನಿನಗೆ ಅತ್ಯಧಿಕವಾದ ಸಂತಾನವನ್ನು ಕೊಡುವೆನು; ನಿನ್ನಿಂದ ಜನಾಂಗಗಳು ಉತ್ಪತ್ತಿಯಾಗಿ ಅರಸರೂ ಹುಟ್ಟುವರು. 7ನಿನಗೂ ನಿನ್ನ ಸಂತತಿಗೂ ದೇವರಾಗಿರುವೆನೆಂದು ನಾನು ನಿನಗೋಸ್ಕರವೂ ನಿನ್ನ ಸಂತತಿಯ ಎಲ್ಲಾ ತಲಾಂತರಗಳಿಗೋಸ್ಕರವೂ ಮಾಡಿಕೊಂಡ ನನ್ನ ಒಡಂಬಡಿಕೆಯನ್ನು ಸ್ಥಿರಪಡಿಸುವೆನು. 8ನೀನು ಪ್ರವಾಸವಾಗಿರುವ ಕಾನಾನ್‍ದೇಶವನ್ನೆಲ್ಲಾ ನಿನಗೂ ನಿನ್ನ ಸಂತತಿಗೂ ಶಾಶ್ವತ ಸ್ವಾಸ್ತ್ಯವನ್ನಾಗಿ ಕೊಟ್ಟು ಅವರಿಗೆ ದೇವರಾಗಿರುವೆನು ಅಂದನು.
9ಇದಲ್ಲದೆ ದೇವರು ಅಬ್ರಹಾಮನಿಗೆ - ನೀನಂತೂ ನನ್ನ ಒಡಂಬಡಿಕೆಯನ್ನು ಕೈಕೊಂಡು ನಡೆಯಬೇಕು. ನೀನು ಮಾತ್ರವಲ್ಲದೆ ನಿನ್ನ ಸಂತತಿಯವರೂ ಎಲ್ಲಾ ತಲಾಂತರಗಳಲ್ಲಿ ಅದನ್ನು ಕೈಕೊಂಡು ನಡೆಯಬೇಕು. 10ನೀನೂ ನಿನ್ನ ಹಿಂದೆ ಬರುವ ಸಂತತಿಯವರೂ ಕೈಕೊಳ್ಳಬೇಕಾದ ನನ್ನ ನಿಬಂಧನೆಯು ಯಾವದಂದರೆ - ನಿಮ್ಮಲ್ಲಿ ಪ್ರತಿಯೊಬ್ಬ ಗಂಡಸಿಗೂ ಸುನ್ನತಿಯಾಗಬೇಕೆಂಬದೇ. 11ನೀವು ಮಾನಸ್ಥಾನದಲ್ಲಿ ಸುನ್ನತಿ ಮಾಡಿಸಿಕೊಳ್ಳಬೇಕು; ಅದೇ ನಿಮಗೂ ನನಗೂ ಉಂಟಾದ ಒಡಂಬಡಿಕೆಗೆ ಗುರುತು. 12ಎಲ್ಲಾ ತಲಾಂತರಗಳಲ್ಲಿ ನಿಮ್ಮಲ್ಲಿರುವ ಪ್ರತಿಯೊಬ್ಬ ಗಂಡಸೂ, ಮನೆಯಲ್ಲಿ ಹುಟ್ಟಿದವನಾದರೂ ನಿನ್ನ ಸಂತತಿಯಲ್ಲಿ ಹುಟ್ಟದೆ ಅನ್ಯರಿಂದ ಕ್ರಯಕ್ಕೆ ತೆಗೆದುಕೊಂಡವನಾದರೂ ಎಂಟು ದಿನಗಳ ವಯಸ್ಸುಳ್ಳವನಾದಾಗ ಅವನಿಗೆ ಸುನ್ನತಿ ಮಾಡಿಸಬೇಕು. 13ನಿನ್ನ ಮನೆಯಲ್ಲಿ ಹುಟ್ಟಿದವರಿಗೂ ನೀನು ಕ್ರಯಕ್ಕೆ ತೆಗೆದುಕೊಂಡವರಿಗೂ ತಪ್ಪದೆ ಸುನ್ನತಿಯಾಗಬೇಕು. ಹೀಗೆ ನಾನು ಮಾಡುವ ನಿಬಂಧನೆಯ ಗುರುತು ನಿಮ್ಮ ಶರೀರದಲ್ಲೇ ಇದ್ದು ಶಾಶ್ವತವಾದ ಒಡಂಬಡಿಕೆಯನ್ನು ಸೂಚಿಸುವದು. 14ಸುನ್ನತಿ ಮಾಡಿಸಿಕೊಳ್ಳದ ಗಂಡಸು ನನ್ನ ಒಡಂಬಡಿಕೆಯನ್ನು ಮೀರಿದವನಾದ ಕಾರಣ ಅವನು ಕುಲದಿಂದ#17.14 ಈ ಪದಪ್ರಯೋಗ ಸ್ಥಳಗಳಲ್ಲೆಲ್ಲಾ ಕೆಲವರು ಮರಣಶಿಕ್ಷೆಗೆ ಗುರಿಯಾಗಬೇಕು ಎಂದು ಅರ್ಥ ಮಾಡುವರು. ತೆಗೆದುಹಾಕಲ್ಪಡಬೇಕು ಎಂದು ಹೇಳಿದನು.
15ಇದಲ್ಲದೆ ದೇವರು ಅಬ್ರಹಾಮನಿಗೆ - ನೀನು ಇನ್ನು ಮುಂದೆ ನಿನ್ನ ಪತ್ನಿಯನ್ನು ಸಾರಯಳೆಂದು ಕರೆಯದೆ ಸಾರಾ#17.15 ಸಾರಾ ಅಂದರೆ ರಾಣಿ, ರಾಜಸ್ತ್ರೀ. ಎಂದು ಕರೆಯಬೇಕು. 16ನಾನು ಆಕೆಯನ್ನು ಆಶೀರ್ವದಿಸಿ ಆಕೆಯಲ್ಲಿ ನಿನಗೆ ಮಗನನ್ನು ಕೊಡುವೆನು. ನಾನು ಆಕೆಯನ್ನು ಆಶೀರ್ವದಿಸಿದ್ದರಿಂದ ಆಕೆಯಿಂದ ಅನೇಕ ಜನಾಂಗಗಳೂ ಅರಸರೂ ಉತ್ಪತ್ತಿಯಾಗುವರು ಎಂದು ಹೇಳಲು ಅಬ್ರಹಾಮನು ಅಡ್ಡಬಿದ್ದು ನಕ್ಕು - 17ನೂರು ವರುಷದವನಿಗೆ ಮಗ ಹುಟ್ಟುವದುಂಟೇ? ತೊಂಭತ್ತು ವರುಷದವಳಾದ ಸಾರಳು ಹೆತ್ತಾಳೇ ಎಂದು ಮನಸ್ಸಿನಲ್ಲಿ ಅಂದುಕೊಂಡು ದೇವರಿಗೆ - 18ಇಷ್ಮಾಯೇಲನಿದ್ದಾನಲ್ಲಾ, ಅವನೇ ನಿನ್ನ ದಯೆಹೊಂದಿ ಬಾಳಲಿ ಎನ್ನಲು ದೇವರು - 19ಹಾಗಲ್ಲ, ನಿನ್ನ ಪತ್ನಿಯಾದ ಸಾರಳಲ್ಲಿಯೇ ನಿನ್ನಿಂದ ಮಗನು ಹುಟ್ಟುವನು. ಅವನಿಗೆ ಇಸಾಕನೆಂದು#17.19 ಇಸಾಕ ಅಂದರೆ ನಗುತ್ತಾನೆ. ಹೆಸರಿಡಬೇಕು. ಅವನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸಿಕೊಳ್ಳುವೆನು; ಅದು ಅವನ ಸಂತತಿಯವರಲ್ಲಿಯೂ ಶಾಶ್ವತವಾಗಿರಬೇಕು. 20ಇಷ್ಮಾಯೇಲನ ವಿಷಯದಲ್ಲಿ ನೀನು ಮಾಡಿದ ಬಿನ್ನಹವನ್ನು ಕಿವಿಗೊಟ್ಟು ಕೇಳಿದ್ದೇನೆ. ಅವನನ್ನೂ ಆಶೀರ್ವದಿಸಿದ್ದೇನೆ; ಅವನನ್ನು ಅಭಿವೃದ್ಧಿಮಾಡಿ ಅವನಿಗೆ ಅತ್ಯಧಿಕವಾದ ಸಂತಾನವನ್ನು ಕೊಡುವೆನು. ಅವನು ಹನ್ನೆರಡು ಮಂದಿ ಅರಸರನ್ನು ಪಡೆಯುವನು; ಅವನಿಂದ ದೊಡ್ಡ ಜನಾಂಗವಾಗುವಂತೆ ಮಾಡುವೆನು. 21ಆದರೆ ಆ ನನ್ನ ಒಡಂಬಡಿಕೆಯನ್ನು ಇಸಾಕನ ಸಂಗಡಲೇ ಸ್ಥಾಪಿಸಿಕೊಳ್ಳುತ್ತೇನೆ; ಬರುವ ವರುಷ ಇದೇ ಕಾಲದಲ್ಲಿ ಸಾರಳು ಅವನನ್ನು ಹೆರುವಳು ಅಂದನು. 22ಆಗ ದೇವರು ಅಬ್ರಹಾಮನ ಸಂಗಡ ಮಾತಾಡುವದನ್ನು ಮುಗಿಸಿ ಅವನ ಬಳಿಯಿಂದ ಮೇಲಕ್ಕೆ ಹೋದನು.
23ಅದೇ ದಿನದಲ್ಲಿ ಅಬ್ರಹಾಮನು ತನ್ನ ಮಗನಾದ ಇಷ್ಮಾಯೇಲನಿಗೂ ತನ್ನ ಮನೆಯಲ್ಲಿದ್ದ ಎಲ್ಲಾ ಗಂಡಸರಿಗೂ, ಅಂದರೆ ಮನೆಯಲ್ಲಿ ಹುಟ್ಟಿದವರಿಗೆ ಮಾತ್ರವಲ್ಲದೆ, ತಾನು ಕ್ರಯಕ್ಕೆ ತೆಗೆದುಕೊಂಡವರಿಗೂ ದೇವರ ಅಪ್ಪಣೆಯಂತೆ ಸುನ್ನತಿಮಾಡಿಸಿದನು. 24ಅಬ್ರಹಾಮನಿಗೆ ಸುನ್ನತಿಯಾದಾಗ ಅವನಿಗೆ ತೊಂಭತ್ತೊಂಭತ್ತು ವರುಷವಾಗಿತ್ತು. 25ಇಷ್ಮಾಯೇಲನಿಗೆ ಸುನ್ನತಿಯಾದಾಗ ಅವನಿಗೆ ಹದಿಮೂರು ವರುಷವಾಗಿತ್ತು. 26ಅಬ್ರಹಾಮನಿಗೂ ಅವನ ಮಗನಾದ ಇಷ್ಮಾಯೇಲನಿಗೂ ಒಂದೇ ದಿನದಲ್ಲಿ ಸುನ್ನತಿಯಾಯಿತು. 27ಅವನ ಮನೆಯಲ್ಲಿದ್ದ ಗಂಡಸರೆಲ್ಲರಿಗೂ ಅಂದರೆ ಮನೆಯಲ್ಲಿ ಹುಟ್ಟಿದವರಿಗೆ ಮಾತ್ರವಲ್ಲದೆ ಅನ್ಯರಿಂದ ಕ್ರಯಕ್ಕೆ ತೆಗೆದುಕೊಂಡವರಿಗೂ ಅವನೊಂದಿಗೆ ಸುನ್ನತಿಯಾಯಿತು.

Highlight

Share

Copy

None

Want to have your highlights saved across all your devices? Sign up or sign in