YouVersion Logo
Search Icon

ಯೋಹಾನ 17

17
ಯೇಸು ತನ್ನ ಶಿಷ್ಯರಿಗಾಗಿಯೂ ತನ್ನ ಎಲ್ಲಾ ಭಕ್ತರಿಗಾಗಿಯೂ ದೇವರಿಗೆ ಮಾಡಿದ ವಿಜ್ಞಾಪನೆ
1ಯೇಸು ಈ ಮಾತುಗಳನ್ನಾಡಿದ ಮೇಲೆ ಆಕಾಶದ ಕಡೆಗೆ ಕಣ್ಣೆತ್ತಿ ಹೇಳಿದ್ದೇನಂದರೆ - ತಂದೆಯೇ, ಕಾಲ ಬಂದದೆ; ನಿನ್ನ ಮಗನನ್ನು ಮಹಿಮೆಪಡಿಸು, ಆಗ ಮಗನು ನಿನ್ನನ್ನು ಮಹಿಮೆಪಡಿಸುವದಕ್ಕಾಗುವದು. 2ನೀನು ಅವನಿಗೆ ಯಾರಾರನ್ನು ಕೊಟ್ಟಿದ್ದೀಯೋ ಅವರೆಲ್ಲರಿಗೆ ಅವನು ನಿತ್ಯಜೀವವನ್ನು ಕೊಡಬೇಕೆಂದು ಅವನಿಗೆ ಎಲ್ಲಾ ಮನುಷ್ಯರ ಮೇಲೆ ಅಧಿಕಾರವನ್ನು ಕೊಟ್ಟಿಯಲ್ಲಾ. 3ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು. 4ಮಾಡಬೇಕೆಂದು ನೀನು ನನಗೆ ಕೊಟ್ಟ ಕೆಲಸವನ್ನು ನಾನು ನೆರವೇರಿಸಿ ನಿನ್ನನ್ನು ಭೂಲೋಕದಲ್ಲಿ ಮಹಿಮೆಪಡಿಸಿದೆನು. 5ಈಗ ತಂದೆಯೇ, ನೀನು ನಿನ್ನ ಬಳಿಯಲ್ಲಿ ನನ್ನನ್ನು ಮಹಿಮೆಪಡಿಸು; ಲೋಕ ಉಂಟಾಗುವದಕ್ಕಿಂತ ಮುಂಚೆ ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಿಂದಲೇ ನನ್ನನ್ನು ಮಹಿಮೆಪಡಿಸು.
6ಲೋಕದೊಳಗಿಂದ ನೀನು ನನಗೆ ಕೊಟ್ಟ ಮನುಷ್ಯರಿಗೆ ನಿನ್ನ ಹೆಸರನ್ನು ತಿಳಿಯಪಡಿಸಿದೆನು. ಇವರು ನಿನ್ನವರಾಗಿದ್ದರು, ನೀನು ಇವರನ್ನು ನನಗೆ ಕೊಟ್ಟೆ; ಮತ್ತು ಇವರು ನಿನ್ನ ವಾಕ್ಯವನ್ನು ಕೈಕೊಂಡು ನಡೆದಿದ್ದಾರೆ. 7ನೀನು ನನಗೆ ಕೊಟ್ಟದ್ದೆಲ್ಲಾ ನಿನ್ನಿಂದಲೇ ಬಂದದೆ ಎಂದು ಈಗ ಇವರು ತಿಳುಕೊಂಡಿದ್ದಾರೆ. 8ಹೇಗಂದರೆ ನೀನು ನನಗೆ ಕೊಟ್ಟ ಮಾತುಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ; ಇವರು ಆ ಮಾತುಗಳನ್ನು ಕೈಕೊಂಡು ನನ್ನನ್ನು ನಿನ್ನ ಬಳಿಯಿಂದ ಹೊರಟುಬಂದವನೆಂದು ನಿಜವಾಗಿ ತಿಳಿದು ನೀನೇ ನನ್ನನ್ನು ಕಳುಹಿಸಿಕೊಟ್ಟಿರುವದಾಗಿ ನಂಬಿದ್ದಾರೆ. 9ನಾನು ಇವರಿಗೋಸ್ಕರ ಕೇಳಿಕೊಳ್ಳುತ್ತೇನೆ; ಲೋಕಕ್ಕೋಸ್ಕರ ಕೇಳಿಕೊಳ್ಳದೆ ನೀನು ನನಗೆ ಕೊಟ್ಟವರಿಗೋಸ್ಕರವೇ ಕೇಳಿಕೊಳ್ಳುತ್ತೇನೆ; ನಿನ್ನವರಾಗಿದ್ದಾರೆ. 10ನನ್ನದೆಲ್ಲಾ ನಿನ್ನದೇ, ನಿನ್ನದೆಲ್ಲಾ ನನ್ನದೇ; ಮತ್ತು ಇವರಿಂದ ನನಗೆ ಮಹಿಮೆ ಉಂಟಾಗಿದೆ. 11ಇನ್ನು ನಾನು ಲೋಕದಲ್ಲಿ ಇರುವದಿಲ್ಲ, ಇವರು ಲೋಕದಲ್ಲಿ ಇರುತ್ತಾರೆ, ನಾನು ನಿನ್ನ ಬಳಿಗೆ ಬರುತ್ತೇನೆ. ಪವಿತ್ರನಾದ ತಂದೆಯೇ, ನಾವು ಒಂದಾಗಿರುವ ಹಾಗೆ ಇವರೂ ಒಂದಾಗಿರಬೇಕೆಂದು ನೀನು ನನಗೆ ಕೊಟ್ಟ ನಿನ್ನ ಹೆಸರಿನಲ್ಲಿ ಇವರನ್ನು ಕಾಯಬೇಕು. 12ನಾನು ಇವರ ಸಂಗಡ ಇದ್ದಾಗ ನೀನು ನನಗೆ ಕೊಟ್ಟಿರುವ ನಿನ್ನ ಹೆಸರಿನಲ್ಲಿ ಇವರನ್ನು ಕಾಯುತ್ತಾ ಬಂದೆನು, ಇವರನ್ನು ಕಾಪಾಡಿದೆನು; ಶಾಸ್ತ್ರದ ಮಾತು ನೆರವೇರುವಂತೆ ನಾಶಕ್ಕೆ ಗುರಿಯಾದ ಆ ಮನುಷ್ಯನೇ ಹೊರತು ಇವರಲ್ಲಿ ಮತ್ತಾರೂ ನಾಶವಾಗಲಿಲ್ಲ. 13ಆದರೆ ಈಗ ನಿನ್ನ ಬಳಿಗೆ ಬರುವವನಾಗಿದ್ದೇನೆ; ಆದದರಿಂದ ಇವರಲ್ಲಿ ನನ್ನ ಆನಂದವು ಪರಿಪೂರ್ಣವಾಗಿರುವಂತೆ ಲೋಕದಲ್ಲಿದ್ದು ಈ ಮಾತುಗಳನ್ನು ಆಡುತ್ತೇನೆ. 14ನಾನು ನಿನ್ನ ವಾಕ್ಯವನ್ನು ಇವರಿಗೆ ಕೊಟ್ಟಿದ್ದೇನೆ; ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರೂ ಲೋಕದವರಲ್ಲ; ಆದಕಾರಣ ಲೋಕವು ಇವರ ಮೇಲೆ ದ್ವೇಷ ಮಾಡಿ ಅದೆ. 15ಇವರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವದಿಲ್ಲ; ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ. 16ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ. 17ಇವರನ್ನು ಸತ್ಯದಲ್ಲಿ ಸೇರಿಸಿ ಪ್ರತಿಷ್ಠೆ ಪಡಿಸು; ನಿನ್ನ ವಾಕ್ಯವೇ ಸತ್ಯವು. 18ನೀನು ನನ್ನನ್ನು ಲೋಕಕ್ಕೆ ಕಳುಹಿಸಿಕೊಟ್ಟಂತೆ ನಾನೂ ಇವರನ್ನು ಲೋಕಕ್ಕೆ ಕಳುಹಿಸಿಕೊಟ್ಟೆನು. 19ಇವರು ನಿಜವಾಗಿ ಪ್ರತಿಷ್ಠಿತರಾಗಬೇಕೆಂದು ಇವರಿಗೋಸ್ಕರ ನಾನು ನನ್ನನ್ನು ಪ್ರತಿಷ್ಠೆಪಡಿಸಿಕೊಳ್ಳುತ್ತೇನೆ.
20ಆದರೆ ಇವರಿಗೋಸ್ಕರ ಮಾತ್ರವಲ್ಲದೆ ಇವರ ವಾಕ್ಯದಿಂದ ನನ್ನನ್ನು ನಂಬುವವರಿಗೋಸ್ಕರ ಸಹ ಕೇಳಿಕೊಳ್ಳುತ್ತೇನೆ. 21ನೀನು ನನ್ನನ್ನು ಕಳುಹಿಸಿಕೊಟ್ಟಿದ್ದೀ ಎಂದು ಲೋಕವು ನಂಬುವದಕ್ಕಾಗಿ ಅವರೆಲ್ಲರೂ ಒಂದಾಗಿರಬೇಕೆಂತಲೂ ತಂದೆಯೇ, ನೀನು ನನ್ನಲ್ಲಿಯೂ ನಾನು ನಿನ್ನಲ್ಲಿಯೂ ಇರುವ ಪ್ರಕಾರ ಅವರೂ ನಮ್ಮಲ್ಲಿ ಇರಬೇಕೆಂತಲೂ ಕೇಳಿಕೊಳ್ಳುತ್ತೇನೆ. 22ನಾವು ಒಂದಾಗಿರುವ ಪ್ರಕಾರ ಅವರೂ ಒಂದಾಗಿರಬೇಕೆಂದು ನೀನು ನನಗೆ ಕೊಟ್ಟಿರುವ ಮಹಿಮೆಯನ್ನು ನಾನು ಅವರಿಗೆ ಕೊಟ್ಟಿದ್ದೇನೆ. 23ನಾನು ಅವರಲ್ಲಿಯೂ ನೀನು ನನ್ನಲ್ಲಿಯೂ ಇರಲಾಗಿ ಅವರ ಐಕ್ಯವು ಪೂರ್ಣಸಿದ್ಧಿಗೆ ಬರುವದರಿಂದ ನೀನು ನನ್ನನ್ನು ಕಳುಹಿಸಿಕೊಟ್ಟಿದ್ದೀ ಎಂದೂ ನೀನು ನನ್ನನ್ನು ಪ್ರೀತಿಸಿದಂತೆ ಅವರನ್ನೂ ಪ್ರೀತಿಸಿದ್ದೀ ಎಂದೂ ಲೋಕಕ್ಕೆ ತಿಳಿದುಬರುವದು. 24ತಂದೆಯೇ, ನೀನು ಯಾರನ್ನು ನನಗೆ ಕೊಟ್ಟಿಯೋ ಅವರು ನಾನಿರುವ ಸ್ಥಳದಲ್ಲಿ ನನ್ನ ಕೂಡ ಇದ್ದುಕೊಂಡು ಲೋಕವು ಹುಟ್ಟುವದಕ್ಕಿಂತ ಮುಂಚೆಯೇ ನೀನು ನನ್ನನ್ನು ಪ್ರೀತಿಸಿ ನನಗೆ ಕೊಟ್ಟಿರುವ ಮಹಿಮೆಯನ್ನು ನೋಡಬೇಕೆಂದು ಇಚ್ಫೈಸುತ್ತೇನೆ. 25ನೀತಿಸ್ವರೂಪನಾದ ತಂದೆಯೇ, ಲೋಕವಂತೂ ನಿನ್ನನ್ನು ತಿಳಿಯಲಿಲ್ಲ, ಆದರೆ ನಾನು ನಿನ್ನನ್ನು ತಿಳಿದಿದ್ದೇನೆ; ಮತ್ತು ಇವರು ನೀನೇ ನನ್ನನ್ನು ಕಳುಹಿಸಿಕೊಟ್ಟಿರುವದಾಗಿ ತಿಳುಕೊಂಡಿದ್ದಾರೆ. 26ನಾನು ಅವರಿಗೆ ನಿನ್ನ ಹೆಸರನ್ನು ತಿಳಿಸಿದ್ದೇನೆ, ಇನ್ನೂ ತಿಳಿಸುವೆನು. ನೀನು ನನ್ನ ಮೇಲೆ ಇಟ್ಟಂಥ ಪ್ರೀತಿಯು ಅವರಲ್ಲಿ ಇರಬೇಕೆಂದೂ ನಾನೂ ಅವರಲ್ಲಿ ಇರಬೇಕೆಂದೂ ಪ್ರಾರ್ಥಿಸುತ್ತೇನೆ ಅಂದನು.

Highlight

Share

Copy

None

Want to have your highlights saved across all your devices? Sign up or sign in