YouVersion Logo
Search Icon

ಪ್ರೇಷಿತರ ಕಾರ್ಯಕಲಾಪಗಳು 1

1
ಪೀಠಿಕೆ
1-2ಸನ್ಮಾನ್ಯ ಥೆಯೊಫಿಲನೇ, ಯೇಸುಸ್ವಾಮಿ ಸ್ವರ್ಗಕ್ಕೆ ಆರೋಹಣವಾದ ದಿನದವರೆಗೆ ಮಾಡಿದ ಕಾರ್ಯಗಳನ್ನೂ ನೀಡಿದ ಬೋಧನೆಗಳನ್ನೂ ಕುರಿತು ನನ್ನ ಮೊದಲನೆಯ ಪುಸ್ತಕದಲ್ಲಿ ಬರೆದಿದ್ದೇನೆ. ಸ್ವರ್ಗಾರೋಹಣಕ್ಕೆ ಮೊದಲು ಪ್ರೇಷಿತರನ್ನಾಗಿ ತಾವು ಆರಿಸಿಕೊಂಡಿದ್ದವರಿಗೆ ಪವಿತ್ರಾತ್ಮ ಅವರ ಮುಖಾಂತರ ಉಪದೇಶ ಮಾಡಿದರು. 3ತಮ್ಮ ಮರಣದ ನಂತರ ಅವರು ನಲವತ್ತು ದಿನಗಳವರೆಗೆ ಆ ಪ್ರೇಷಿತರಿಗೆ ಪ್ರತ್ಯಕ್ಷರಾದರು. ತಾವು ಜೀವಂತವಾಗಿರುವುದನ್ನು ವಿವಿಧ ರೀತಿಯಲ್ಲಿ ಸ್ಪಷ್ಟಪಡಿಸಿದರು. ದೇವರ ಸಾಮ್ರಾಜ್ಯವನ್ನು ಕುರಿತು ಅವರಿಗೆ ಬೋಧಿಸಿದರು. 4ಒಮ್ಮೆ ಅವರೆಲ್ಲರೂ ಒಂದುಗೂಡಿದ್ದ ಸಂದರ್ಭದಲ್ಲಿ, “ನೀವು ಜೆರುಸಲೇಮನ್ನು ಬಿಟ್ಟು ಹೋಗಬೇಡಿ; ನಾನು ನಿಮಗೆ ತಿಳಿಸಿದಂತೆ ನನ್ನ ಪಿತನು ವಾಗ್ದಾನ ಮಾಡಿರುವ ವರಕ್ಕಾಗಿ ಕಾದುಕೊಂಡಿರಿ. 5ಏಕೆಂದರೆ, ಯೊವಾನ್ನನು ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದನು; ಆದರೆ ಇನ್ನು ಕೆಲವೇ ದಿನಗಳಲ್ಲಿ ನೀವು ಪವಿತ್ರಾತ್ಮ ಅವರಿಂದ ದೀಕ್ಷಾಸ್ನಾನ ಪಡೆಯುವಿರಿ,” ಎಂದು ಆಜ್ಞಾಪಿಸಿದರು.
ಯೇಸುಸ್ವಾಮಿಯ ಸ್ವರ್ಗಾರೋಹಣ
6ಮತ್ತೊಮ್ಮೆ ಯೇಸುಸ್ವಾಮಿ ತಮ್ಮೊಡನೆ ಇದ್ದಾಗ ಪ್ರೇಷಿತರು, “ಪ್ರಭೂ, ನೀವು ಇದೀಗಲೇ ಇಸ್ರಯೇಲ್ ಜನರ ರಾಜ್ಯವನ್ನು ಪುನರ್‍ಸ್ಥಾಪಿಸುವಿರೋ?” ಎಂದು ಕೇಳಿದರು. 7ಯೇಸು ಪ್ರತ್ಯುತ್ತರವಾಗಿ, “ಸಮಯ ಸಂದರ್ಭಗಳು ನನ್ನ ಪಿತನ ಸ್ವಾಧೀನದಲ್ಲಿವೆ. ಅವುಗಳನ್ನು ತಿಳಿಯುವುದು ನಿಮ್ಮ ಕೆಲಸವಲ್ಲ. 8ಆದರೆ ಪವಿತ್ರಾತ್ಮ ಅವರು ನಿಮ್ಮ ಮೇಲೆ ಬಂದಾಗ ನೀವು ಶಕ್ತಿಯುತರಾಗುವಿರಿ. ಆಗ ನೀವು ಜೆರುಸಲೇಮಿನಲ್ಲೂ ಜುದೇಯದಲ್ಲೂ ಸಮಾರಿಯದಲ್ಲೂ ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗುವಿರಿ,” ಎಂದರು. 9ಇದನ್ನು ಹೇಳಿದ ಮೇಲೆ ಪ್ರೇಷಿತರು ನೋಡುತ್ತಿದ್ದಂತೆಯೇ, ಯೇಸು ಸ್ವರ್ಗಾರೋಹಣವಾದರು. ಮೇಘವೊಂದು ಕವಿದು ಅವರನ್ನು ಕಣ್ಮರೆಮಾಡಿತು.
10ಹೀಗೆ ಮೇಲೇರುತ್ತಿದ್ದ ಯೇಸುಸ್ವಾಮಿಯನ್ನು ನೋಡುತ್ತಿದ್ದ ಪ್ರೇಷಿತರ ದೃಷ್ಟಿ ಇನ್ನೂ ಆಕಾಶದತ್ತ ನಾಟಿತ್ತು. ಆಗ ಬಿಳಿಯ ವಸ್ತ್ರ ಧರಿಸಿದ್ದ ವ್ಯಕ್ತಿಗಳಿಬ್ಬರು ಇದ್ದಕ್ಕಿದ್ದಂತೆ ಅವರ ಪಕ್ಕದಲ್ಲಿ ನಿಂತರು. 11“ಗಲಿಲೇಯದ ಜನರೇ, ನೀವು ಆಕಾಶವನ್ನು ದಿಟ್ಟಿಸಿ ನೋಡುತ್ತಾ ನಿಂತು ಇರುವುದೇಕೆ? ಸ್ವರ್ಗಾರೋಹಣರಾದ ಈ ಯೇಸು ನಿಮ್ಮ ಬಳಿಯಿಂದ ಹೇಗೆ ಸ್ವರ್ಗಕ್ಕೆ ಏರಿಹೋಗುವುದನ್ನು ಕಂಡಿರೋ ಹಾಗೆಯೇ ಅವರು ಹಿಂದಿರುಗಿ ಬರುವರು,” ಎಂದು ಹೇಳಿದರು.
ಮತ್ತೀಯನ ಆಯ್ಕೆ
12ಅನಂತರ ಪ್ರೇಷಿತರು ಓಲಿವ್ ತೋಪಿನ ಗುಡ್ಡದಿಂದ ಸುಮಾರು ಒಂದು ಕಿಲೊಮೀಟರು ದೂರದಲ್ಲಿರುವ ಜೆರುಸಲೇಮಿಗೆ ಹಿಂದಿರುಗಿದರು. 13ಅವರು ಯಾರಾರೆಂದರೆ: ಪೇತ್ರ, ಯೊವಾನ್ನ, ಯಕೋಬ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತಲೊಮಾಯ, ಮತ್ತಾಯ, ಅಲ್ಫಾಯನ ಮಗ ಯಕೋಬ, ದೇಶಾಭಿಮಾನಿ ಆದ ಸಿಮೋನ ಮತ್ತು ಯಕೋಬನ ಮಗ ಯೂದ. ಇವರೆಲ್ಲರು ಪಟ್ಟಣವನ್ನು ಸೇರಿದ್ದೇ, ಮೇಲ್ಮಾಳಿಗೆಯಲ್ಲಿದ್ದ ತಮ್ಮ ಕೊಠಡಿಗೆ ಹೋದರು. 14ಅಲ್ಲಿ ಅವರು ಒಮ್ಮನಸ್ಸಿನಿಂದ ಪ್ರಾರ್ಥನೆಯಲ್ಲಿ ನಿರತರಾಗುತ್ತಿದ್ದರು. ಕೆಲವು ಮಹಿಳೆಯರೂ ಯೇಸುವಿನ ತಾಯಿ ಮರಿಯಳೂ ಯೇಸುವಿನ ಸಹೋದರರೂ ಅವರೊಡನೆ ಇದ್ದರು.
15ಸ್ವಲ್ಪ ದಿನಗಳ ನಂತರ ಸುಮಾರು ನೂರ ಇಪ್ಪತ್ತು ಮಂದಿ ಭಕ್ತವಿಶ್ವಾಸಿಗಳು ಸಭೆ ಸೇರಿದ್ದರು. ಆಗ ಪೇತ್ರನು ಎದ್ದುನಿಂತು ಹೀಗೆಂದನು: 16“ಪ್ರಿಯ ಸಹೋದರರೇ, ಯೇಸುವನ್ನು ಬಂಧಿಸಿದವರಿಗೆ ಮುಂದಾಳಾಗಿದ್ದವನು ಯೂದನು. ಅವನ ವಿಷಯವಾಗಿ ಪವಿತ್ರಾತ್ಮ ಅವರು ದಾವೀದನ ಮುಖಾಂತರ ಮುಂತಿಳಿಸಿದ ವಾಕ್ಯ ನೆರವೇರಲೇಬೇಕಾಗಿತ್ತು. 17ಈ ಯೂದನು ನಮ್ಮಲ್ಲಿ ಒಬ್ಬನಾಗಿದ್ದವನು. ನಾವು ಕೈಗೊಂಡಿರುವ ಸೇವೆಯಲ್ಲಿ ಭಾಗಿಯಾಗಲು ಆಯ್ಕೆಯಾಗಿದ್ದವನು.
18("ಇವನು ತನ್ನ ನೀಚ ಕೃತ್ಯದಿಂದ ಪಡೆದ ಹಣದಿಂದ ಒಂದು ಹೊಲವನ್ನು ಕೊಂಡುಕೊಂಡ. ಆದರೆ ಅದರಲ್ಲೇ ಪ್ರಾಣ ಕಳೆದುಕೊಂಡ. ತಲೆಕೆಳಗಾಗಿ ಬಿದ್ದು, ಹೊಟ್ಟೆ ಬಿರಿದು, ಕರುಳೆಲ್ಲಾ ಹೊರಬಂದು ಸತ್ತುಹೋದ. 19ಈ ವಿಷಯ ಜೆರುಸಲೇಮಿನ ನಿವಾಸಿಗಳಿಗೆಲ್ಲಾ ತಿಳಿಯಿತು. ಆ ಜಮೀನನ್ನು ತಮ್ಮ ಭಾಷೆಯಲ್ಲಿ ‘ಅಖೆಲ್ದಾಮ’ ಅಂದರೆ ‘ನೆತ್ತರನೆಲ’ ಎಂದು ಕರೆಯಲಾರಂಭಿಸಿದರು). 20‘ಅವನ ಮನೆ ಹಾಳಾಗಲಿ, ಅದು ಪಾಳುಬೀಳಲಿ,’ ಎಂದೂ, ‘ಅವನ ಸ್ಥಾನ ಇನ್ನೊಬ್ಬನದಾಗಲಿ,’ ಎಂದೂ ಕೀರ್ತನಗ್ರಂಥದಲ್ಲಿ ಬರೆಯಲಾಗಿದೆ.
21“ಆದುದರಿಂದ ಪ್ರಭುಯೇಸುವಿನ ಪುನರುತ್ಥಾನಕ್ಕೆ ನಮ್ಮೊಡನೆ ಸಾಕ್ಷಿಯಾಗಿರಲು ಒಬ್ಬನನ್ನು ನಾವು ಆರಿಸಬೇಕಾಗಿದೆ. ಅಂಥವನು ಯೇಸುವಿನ ಸೇವಾಸಂಚಾರದಲ್ಲೆಲ್ಲಾ ನಮ್ಮೊಡನೆ ಇದ್ದವನಾಗಿರಬೇಕು. 22ಅಂದರೆ, ಸ್ನಾನಿಕ ಯೊವಾನ್ನನು ಸ್ನಾನದೀಕ್ಷೆಯನ್ನು ಕುರಿತು ಬೋಧಿಸಿದ ದಿನದಿಂದ ಯೇಸುವಿನ ಸ್ವರ್ಗಾರೋಹಣದ ದಿನದವರೆಗೂ ನಮ್ಮ ಸಂಗಡ ಇದ್ದವನಾಗಿರಬೇಕು.”
23ಆಗ ಬಾರ್ನಬ ಎಂದು ಹೆಸರಿಸಲಾದ ಜೋಸೆಫ್ (ಇವನನ್ನು ಯುಸ್ತ ಎಂದೂ ಕರೆಯುತ್ತಿದ್ದರು) ಮತ್ತು ಮತ್ತೀಯ ಎಂಬ ಇಬ್ಬರ ಹೆಸರನ್ನು ಸೂಚಿಸಲಾಯಿತು. 24-25ಅನಂತರ ಎಲ್ಲರೂ ಪ್ರಾರ್ಥನೆಮಾಡುತ್ತಾ, “ಸರ್ವೇಶ್ವರಾ, ನೀವು ಸರ್ವರ ಅಂತರಂಗಗಳನ್ನು ಅರಿತಿರುವಿರಿ. ಯೂದನು ತನ್ನ ಪ್ರೇಷಿತಸ್ಥಾನದಿಂದ ಭ್ರಷ್ಟನಾದ, ತನಗೆ ತಕ್ಕುದಾದ ಸ್ಥಳಕ್ಕೆ ತೆರಳಿದ. ಈ ಸೇವಾಸ್ಥಾನಕ್ಕೆ ಇವರಿಬ್ಬರಲ್ಲಿ ನೀವು ಆರಿಸಿದವನು ಯಾರೆಂದು ನಮಗೆ ತೋರಿಸಿರಿ,” ಎಂದರು. 26ಅನಂತರ ಚೀಟುಹಾಕಿದರು. ಅದು ಮತ್ತೀಯನ ಪರವಾಗಿತ್ತು. ಅವನನ್ನು ಹನ್ನೊಂದು ಮಂದಿಯೊಡನೆ ಪ್ರೇಷಿತಸ್ಥಾನಕ್ಕೆ ಸೇರಿಸಿಕೊಳ್ಳಲಾಯಿತು.

Highlight

Share

Copy

None

Want to have your highlights saved across all your devices? Sign up or sign in