YouVersion Logo
Search Icon

ಆದಿಕಾಂಡ 28

28
1ಆಗ ಇಸಾಕನು ಯಕೋಬನನ್ನು ಕರೆದು, “ನೀನು ಕಾನಾನ್ಯರ ಹೆಣ್ಣನ್ನು ಮದುವೆಮಾಡಿಕೊಳ್ಳಬೇಡ; 2ಮೆಸಪೊಟೇಮಿಯಾ ನಾಡಿನಲ್ಲಿರುವ ನಿನ್ನ ತಾತ ಬೆತೂವೇಲನ ಮನೆಗೆ ಹೊರಟುಹೋಗು. ಅಲ್ಲಿ ನಿನ್ನ ಸೋದರಮಾವನಾದ ಲಾಬಾನನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆಮಾಡಿಕೊ,” ಎಂದು ಅಪ್ಪಣೆ ಮಾಡಿದನು. 3“ಸರ್ವಶಕ್ತ ದೇವರು ನಿನ್ನನ್ನು ಆಶೀರ್ವದಿಸಲಿ; ನಿನಗೆ ಬಹಳ ಸಂತತಿಯನ್ನು ಕೊಡಲಿ; ನಿನ್ನಿಂದ ಅನೇಕ ಜನಾಂಗಗಳು ಹುಟ್ಟುವಂತೆ ಅನುಗ್ರಹಿಸಲಿ; 4ದೇವರು ಅಬ್ರಹಾಮನಿಗೆ ಕೊಟ್ಟ ಆಶೀರ್ವಾದವನ್ನು ನಿನಗೂ ನಿನ್ನ ಸಂತತಿಗೂ ಕೊಡಲಿ; ನೀನು ಪ್ರವಾಸಿಯಾಗಿರುವ ಈ ನಾಡನ್ನು, ಅಂದರೆ ಅಬ್ರಹಾಮನಿಗೆ ದೇವರು ವಾಗ್ದಾನಮಾಡಿದ್ದ ಈ ನಾಡನ್ನು, ನೀನು ಸ್ವಂತ ಸೊತ್ತಾಗಿಸಿಕೊಳ್ಳುವಂತಾಗಲಿ!” ಎಂದು ಹರಸಿ ಕಳುಹಿಸಿಬಿಟ್ಟನು. 5ಯಕೋಬನು ಮೆಸಪೊಟೇಮಿಯಗೆ ಹೊರಟು, ಅರಾಮ್ಯನಾದ ಬೆತೂವೇಲನ ಮಗನೂ ಮತ್ತು ಯಕೋಬ ಹಾಗು ಏಸಾವನಿಗೆ ತಾಯಿಯಾದ ರೆಬೆಕ್ಕಳಿಗೆ ಅಣ್ಣನೂ ಆಗಿದ್ದ ಲಾಬಾನನ ಬಳಿಗೆ ಹೋದನು.
ಏಸಾವನಿಗೆ ಮತ್ತೊಬ್ಬ ಹೆಂಡತಿ
6ಇಸಾಕನು ಯಕೋಬನನ್ನು ಹರಸಿ ಮೆಸಪೊಟೇಮಿಯಾದಲ್ಲಿ ಹೆಣ್ಣನ್ನು ತೆಗೆದುಕೊಳ್ಳುವುದಕ್ಕಾಗಿ ಕಳುಹಿಸಿದ್ದು, ಹರಸುವಾಗ ಕಾನಾನ್ಯರ ಹೆಣ್ಣನ್ನು ತೆಗೆದುಕೊಳ್ಳಬಾರದೆಂದು ಅಪ್ಪಣೆಮಾಡಿದ್ದು, 7ಹಾಗೂ ಯಕೋಬನು ತನ್ನ ತಂದೆ ತಾಯಿಗಳು ಹೇಳಿದಂತೆ ಮೆಸಪೊಟೇಮಿಯಗೆ ಹೋದದ್ದು - ಇದೆಲ್ಲವನ್ನು ಇತ್ತ ಏಸಾವನು ತಿಳಿದುಕೊಂಡನು. 8ಕಾನಾನ್ಯರ ಹೆಣ್ಣುಗಳು ತನ್ನ ತಂದೆ ಇಸಾಕನಿಗೆ ಹಿಡಿಸಲಿಲ್ಲ ಎಂಬುದನ್ನು ಅರಿತುಕೊಂಡ ಅವನು 9ತನಗೆ ಈಗಾಗಲೇ ಇದ್ದ ಹೆಂಡತಿಯರ ಜೊತೆಗೆ ಅಬ್ರಹಾಮನ ಮಗನಾದ ಇಷ್ಮಾಯೇಲನ ಬಳಿಗೆ ಹೋಗಿ, ಅವನ ಮಗಳೂ ನೆಬಾಯೋತನ ತಂಗಿಯೂ ಆಗಿದ್ದ ಮಹಲತ್ ಎಂಬಾಕೆಯನ್ನು ಮದುವೆಮಾಡಿಕೊಂಡನು.
ಯಕೋಬನು ಬೇತೇಲಿನಲ್ಲಿ ಕಂಡ ಕನಸು
10ಯಕೋಬನು ಖಾರಾನಿಗೆ ಹೋಗಬೇಕೆಂದು ಬೇರ್ಷೆಬದಿಂದ ಹೊರಟನು. 11ಪ್ರಯಾಣಮಾಡುತ್ತಾ ಅವನು ಒಂದು ಸ್ಥಳಕ್ಕೆ ಬಂದು ಸೇರಿದನು. ಹೊತ್ತು ಮುಳುಗಿದ್ದ ಕಾರಣ ಆ ರಾತ್ರಿ ಅಲ್ಲಿಯೇ ಇಳಿದುಕೊಂಡನು. ಅಲ್ಲಿದ್ದ ಕಲ್ಲುಗಳಲ್ಲಿ ಒಂದು ಕಲ್ಲನ್ನು ತಲೆದಿಂಬಾಗಿ ಇಟ್ಟುಕೊಂಡು ಆ ಸ್ಥಳದಲ್ಲೇ ಮಲಗಿಕೊಂಡನು. 12ಆ ರಾತ್ರಿ ಅವನಿಗೆ ಒಂದು ಕನಸು ಬಿತ್ತು, ಆ ಕನಸಿನಲ್ಲಿ ಒಂದು ನಿಚ್ಚಣಿಗೆ ನೆಲದ ಮೆಲೆ ನಿಂತಿತ್ತು; ಅದರ ತುದಿ ಆಕಾಶವನ್ನು ಮುಟ್ಟಿತ್ತು. ಅದರ ಮೇಲೆ ದೇವದೂತರು ಹತ್ತುತ್ತಾ ಇಳಿಯುತ್ತಾ ಇದ್ದರು. 13ಇದಲ್ಲದೆ, ಸರ್ವೇಶ್ವರಸ್ವಾಮಿ ಅವನ ಬಳಿಯಲ್ಲೇ ನಿಂತು, “ನಿನ್ನ ತಂದೆಯೂ ಅಬ್ರಹಾಮನ ದೇವರೂ ಇಸಾಕನ ದೇವರೂ ಆಗಿರುವ ಸರ್ವೇಶ್ವರ ನಾನೇ. ನೀನು ಮಲಗಿಕೊಂಡಿರುವ ಈ ನಾಡನ್ನು ನಿನಗೂ ನಿನ್ನ ಸಂತತಿಗೂ ಕೊಡುತ್ತೇನೆ. 14ನಿನ್ನ ಸಂತತಿ ಭೂಮಿಯ ಧೂಳಿನಂತೆ ಅಸಂಖ್ಯ ಆಗುವುದು; ನೀನು ಪೂರ್ವಪಶ್ಚಿಮ - ದಕ್ಷಿಣೋತ್ತರ ದಿಕ್ಕುಗಳಿಗೆ ಹರಡಿಕೊಳ್ಳುವೆ. ನಿನ್ನ ಮುಖಾಂತರ ಹಾಗೂ ನಿನ್ನ ಸಂತತಿಯ ಮುಖಾಂತರ ಜಗದ ಎಲ್ಲ ರಾಷ್ಟ್ರಗಳೂ ಆಶೀರ್ವಾದ ಪಡೆಯುವುವು. 15ಗಮನಿಸು, ನಾನು ನಿನ್ನೊಂದಿಗೆ ಇರುತ್ತೇನೆ. ನೀನು ಎಲ್ಲಿಗೆ ಹೋದರೂ ನಿನ್ನನ್ನು ಕಾಪಾಡಿ ಈ ನಾಡಿಗೆ ಮರಳಿ ಬರಮಾಡುತ್ತೇನೆ. ನಾನು ನಿನಗೆ ಹೇಳಿದ್ದನ್ನೆಲ್ಲ ನೆರವೇರಿಸದೆ ಬಿಡುವುದಿಲ್ಲ,” ಎಂದರು.
16ಯಕೋಬನು ನಿದ್ರೆಯಿಂದ ಎಚ್ಚೆತ್ತನು. "ನಿಶ್ಚಯವಾಗಿ ಸರ್ವೇಶ್ವರ ಈ ಸ್ಥಳದಲ್ಲಿದ್ದಾರೆ; ಇದು ನನಗೆ ತಿಳಿಯದೆಹೋಯಿತು!” ಎಂದುಕೊಂಡನು; 17ಅಲ್ಲದೆ ಭಯಭಕ್ತಿಯಿಂದ, “ಇದು ಮಹಾಗಂಭೀರವಾದ ಸ್ಥಳ; ದೇವರ ಸ್ಥಾನವೇ ಹೊರತು ಬೇರೆಯಲ್ಲ, ಇದು ಪರಲೋಕದ ಬಾಗಿಲು!” ಎಂದನು.
18ಯಕೋಬನು ಬೆಳಗಿನ ಜಾವದಲ್ಲಿ ಎದ್ದು ತಾನು ತಲೆದಿಂಬಾಗಿ ಇಟ್ಟುಕೊಂಡಿದ್ದ ಆ ಕಲ್ಲನ್ನು ಸ್ಮಾರಕಸ್ತಂಭವಾಗಿ ನೆಟ್ಟನು. ಅದರ ಮೇಲೆ ಎಣ್ಣೆ ಹೊಯ್ದು ಅಭ್ಯಂಗಿಸಿದನು. 19‘ಲೂಜ್’ ಎಂದು ಹೆಸರು ಪಡೆದಿದ್ದ ಆ ಊರಿಗೆ ‘ಬೇತೇಲ್’#28:19 ಎಂದರೆ : "ದೇವಮಂದಿರ". ಎಂದು ನಾಮಕರಣ ಮಾಡಿದನು. 20ಅದೂ ಅಲ್ಲದೆ ಅವನು ಹೀಗೆಂದು ಹರಕೆ ಮಾಡಿಕೊಂಡನು; “ದೇವರು ನನ್ನ ಸಂಗಡವಿದ್ದು ನಾನು ಕೈಗೊಂಡ ಪ್ರಯಾಣದಲ್ಲಿ ನನ್ನನ್ನು ಕಾಪಾಡಿ, ಹೊಟ್ಟೆಗೆ ಊಟವನ್ನೂ ಮೈಗೆ ಬಟ್ಟೆಯನ್ನೂ ಕೊಟ್ಟು, 21ನನ್ನ ತಂದೆಯ ಮನೆಗೆ ಸುರಕ್ಷಿತವಾಗಿ ಮರಳಿ ಬರಮಾಡಿದರೆ ಸರ್ವೇಶ್ವರಸ್ವಾಮಿಯೇ ನನಗೆ ದೇವರು ಆಗುವರು. 22ನಾನು ಸ್ಮಾರಕಸ್ತಂಭವಾಗಿ ನೆಟ್ಟಿರುವ ಈ ಕಲ್ಲು ದೇವರ ಮನೆಯಾಗುವುದು; ಅದು ಮಾತ್ರವಲ್ಲ, ನೀವು ನನಗೆ ಕೊಡುವ ಎಲ್ಲ ಆಸ್ತಿಪಾಸ್ತಿಯಲ್ಲಿ ಹತ್ತರಲ್ಲಿ ಒಂದು ಪಾಲನ್ನು ನಿಮಗೆ ಸಮರ್ಪಿಸುತ್ತೇನೆಂದು ಮಾತುಕೊಡುತ್ತೇನೆ.”

Highlight

Share

Copy

None

Want to have your highlights saved across all your devices? Sign up or sign in