ಯೋಹಾ 7
7
ಗುಡಾರಗಳ ಹಬ್ಬದಲ್ಲಿ ಯೇಸುವಿನ ಉಪದೇಶ
1ಈ ಸಂಗತಿಗಳಾದ ಮೇಲೆ ಯೇಸು ಗಲಿಲಾಯದಲ್ಲಿ ಸಂಚಾರ ಮಾಡಿದನು. ಯೆಹೂದ್ಯರು ಆತನನ್ನು ಕೊಲ್ಲುವ ಪ್ರಯತ್ನದಲ್ಲಿದುದ್ದರಿಂದ ಆತನಿಗೆ ಯೂದಾಯದಲ್ಲಿ ಸಂಚರಿಸಲು ಮನಸ್ಸಾಗಲಿಲ್ಲ. 2ಆಗ ಯೆಹೂದ್ಯರ #7:2 ಯಾಜ 23, 34; ನೆಹೆ 8, 14, 15:ಗುಡಾರಗಳ ಹಬ್ಬವು ಸಮೀಪವಾಗಿತ್ತು, 3ಆದುದರಿಂದ ಆತನ ಸಹೋದರರು ಆತನಿಗೆ “ನೀನು ಮಾಡುವ ಕಾರ್ಯಗಳನ್ನು ನಿನ್ನ ಶಿಷ್ಯರೂ ಸಹ ನೋಡುವಂತೆ, ಇಲ್ಲಿಂದ ಹೊರಟು, ಯೂದಾಯಕ್ಕೆ ಹೋಗು. 4ಪ್ರಸಿದ್ಧಿಗೆ ಬರಬೇಕೆಂದಿರುವವನು ಯಾರೂ ರಹಸ್ಯವಾಗಿ ಯಾವುದನ್ನೂ ಮಾಡುವುದಿಲ್ಲ. ನೀನು ಇವುಗಳನ್ನು ಮಾಡುವುದರಿಂದ, ಲೋಕಕ್ಕೆ ನಿನ್ನನ್ನು ನೀನೇ ತೋರ್ಪಡಿಸಿಕೋ” ಎಂದು ಹೇಳಿದರು. 5ಏಕೆಂದರೆ ಆತನ ಸಹೋದರರು ಸಹ ಆತನನ್ನು ನಂಬಲಿಲ್ಲ. 6ಅದಕ್ಕೆ ಯೇಸು ಅವರಿಗೆ, #7:6 ಯೋಹಾ 7:8, 30. “ನನ್ನ ಸಮಯವು ಇನ್ನೂ ಬಂದಿಲ್ಲ. ನಿಮ್ಮ ಸಮಯವು ಯಾವಾಗಲೂ ಸಿದ್ಧವಾಗಿದೆ. 7ಲೋಕವು ನಿಮ್ಮನ್ನು ದ್ವೇಷಿಸಲಾರದು, ಆದರೆ ನಾನು ಅದರ ಕ್ರಿಯೆಗಳು ಕೆಟ್ಟವುಗಳೆಂದು ಸಾಕ್ಷಿ ಹೇಳುವುದರಿಂದ, ಅದು ನನ್ನನ್ನು ದ್ವೇಷಿಸುತ್ತದೆ. 8ನೀವು ಈ ಹಬ್ಬಕ್ಕೆ ಹೋಗಿರಿ, ನನ್ನ ಸಮಯವು ಇನ್ನೂ ಬಾರದಿರುವುದರಿಂದ ನಾನು ಈ ಹಬ್ಬಕ್ಕೆ ಈಗ ಹೋಗುವುದಿಲ್ಲ” ಎಂದು ಹೇಳಿದನು. 9ಇದನ್ನು ಹೇಳಿದ ಮೇಲೆ ಆತನು ಗಲಿಲಾಯದಲ್ಲಿಯೇ ಉಳಿದುಕೊಂಡನು.
10ಆದರೆ ಆತನ ಸಹೋದರರು ಹೋದ ಮೇಲೆ ಆತನು ಸಹ ಹಬ್ಬಕ್ಕೆ ಬಹಿರಂಗವಾಗಿ ಹೋಗದೆ, ರಹಸ್ಯವಾಗಿ ಹೋದನು. 11ಆ ಹಬ್ಬದಲ್ಲಿ ಯೆಹೂದ್ಯರು, “ಆ ಮನುಷ್ಯನು ಎಲ್ಲಿ?” ಎಂದು ಹುಡುಕುತ್ತಿದ್ದರು. 12ಜನರು ಗುಂಪುಗಳಲ್ಲಿ ಆತನ ವಿಷಯವಾಗಿ ಗೊಣಗುಟ್ಟುತಿದ್ದರು. ಕೆಲವರು “ಆತನು ಒಳ್ಳೆಯ ಮನುಷ್ಯನು” ಎಂದರು, ಇನ್ನು ಕೆಲವರು “ಇಲ್ಲ ಆತನು ಜನರಿಗೆ ಮೋಸ ಮಾಡುತ್ತಾನೆ” ಎಂದರು. 13ಆದರೂ ಯೆಹೂದ್ಯರ ಭಯದಿಂದ ಯಾರೂ ಆತನ ವಿಷಯದಲ್ಲಿ ಬಹಿರಂಗವಾಗಿ ಮಾತನಾಡಲಿಲ್ಲ.
14ಹಬ್ಬದ ಮಧ್ಯಕಾಲದಲ್ಲಿ ಯೇಸು ದೇವಾಲಯಕ್ಕೆ ಹೋಗಿ ಬೋಧಿಸತೊಡಗಿದನು. 15ಯೆಹೂದ್ಯರು ಅದಕ್ಕೆ ಆಶ್ಚರ್ಯಪಟ್ಟು, “ಶಾಸ್ತ್ರಭ್ಯಾಸ ಮಾಡದಿರುವ ಈತನಿಗೆ ಶಾಸ್ತ್ರಗಳು ತಿಳಿದಿರುವುದಾದರೂ ಹೇಗೆ?” ಎಂದರು. 16ಅದಕ್ಕೆ ಯೇಸು #7:16 ಯೋಹಾ 3:34; 8:28; 12:49; 14:10, 24:“ನಾನು ಹೇಳುವ ಬೋಧನೆಯು ನನ್ನದಲ್ಲ. ನನ್ನನ್ನು ಕಳುಹಿಸಿದಾತನದೇ. 17ಯಾರಿಗಾದರೂ ಆತನ ಚಿತ್ತದಂತೆ ನಡೆಯುವುದಕ್ಕೆ ಮನಸ್ಸಿದೆಯೋ ಅವರಿಗೆ ಈ ಬೋಧನೆಯು ದೇವರಿಂದ ಬಂದ್ದದ್ದೋ ಅಥವಾ ನಾನೇ ಮಾತನಾಡುತ್ತೇನೋ ಎಂಬುದು ಗೊತ್ತಾಗುವುದು. 18ತನ್ನಷ್ಟಕ್ಕೆ ತಾನೇ ಮಾತನಾಡುವವನು ತನ್ನ ಸ್ವಂತ ಗೌರವ ಹುಡುಕುತ್ತಾನೆ, ಆದರೆ ತನ್ನನ್ನು ಕಳುಹಿಸಿದಾತನ ಗೌರವನ್ನೇ ಹುಡುಕುವ ಮನುಷ್ಯನೇ ಸತ್ಯವಂತನು; ಆತನಲ್ಲಿ ಕೆಟ್ಟತನವಿಲ್ಲ. 19ಮೋಶೆಯು ನಿಮಗೆ ಧರ್ಮಶಾಸ್ತ್ರವನ್ನು ಕೊಡಲಿಲ್ಲವೇ? ಆದರೂ ನಿಮ್ಮಲ್ಲಿ ಒಬ್ಬನಾದರೂ ಆ ಧರ್ಮಶಾಸ್ತ್ರದಂತೆ ನಡೆಯಲಿಲ್ಲ. ನೀವು ನನ್ನನ್ನು ಕೊಲ್ಲುವುದಕ್ಕೆ ಹುಡುಕುವುದೇಕೆ?” ಎಂದು ಕೇಳಿದನು. 20ಅದಕ್ಕೆ ಆ ಜನರು, “ನಿನಗೆ ದೆವ್ವ ಹಿಡಿದಿದೆ. ನಿನ್ನನ್ನು ಕೊಲ್ಲುವುದಕ್ಕೆ ಯಾರು ಹುಡುಕುತ್ತಿದ್ದಾರೆ?” ಎಂದರು. 21ಯೇಸು ಅವರಿಗೆ “ನಾನು #7:21 ಯೋಹಾ 5:1-9: ಒಂದು ಸೂಚಕ ಕಾರ್ಯವನ್ನು ಮಾಡಿದೆನು, ಅದಕ್ಕೆ ನೀವೆಲ್ಲರೂ ಬೆರಗಾಗಿದ್ದೀರಿ. 22#7:22 ಯಾಜ 12:3:ಮೋಶೆಯು ನಿಮಗೆ ಸುನ್ನತಿಯೆಂಬ ನಿಯಮವನ್ನು ನೇಮಿಸಿದನು, (ಅದು ಮೋಶೆಯಿಂದ ಬಂದದ್ದೆಂದು ನಾನು ಹೇಳುವುದಿಲ್ಲ, #7:22 ಆದಿ 17:10:ಮೂಲಪುರುಷರ ಕಾಲದಿಂದ ಬಂದದ್ದು) ಮತ್ತು ಮನುಷ್ಯನಿಗೆ ಸುನ್ನತಿಯನ್ನು ಸಬ್ಬತ್ ದಿನದಲ್ಲಿಯೂ ಮಾಡುತ್ತೀರಿ. 23ಮೋಶೆಯ ಧರ್ಮಶಾಸ್ತ್ರವನ್ನು ಮೀರಬಾರದೆಂದು ಒಬ್ಬನು ಸಬ್ಬತ್ ದಿನದಲ್ಲಿ ಸುನ್ನತಿಯನ್ನು ಮಾಡಿಸಿಕೊಳ್ಳುವುದಾದರೆ, ನಾನು ಸಬ್ಬತ್ ದಿನದಲ್ಲಿ ಒಬ್ಬ ಮನುಷ್ಯನನ್ನು ಸ್ವಸ್ಥಮಾಡಿದ್ದಕ್ಕೆ ನನ್ನ ಮೇಲೆ ನೀವು ಏಕೆ ಕೋಪಗೊಳ್ಳುತ್ತೀರಿ? 24ತೋರಿಕೆಗೆ ಅನುಸಾರವಾಗಿ ತೀರ್ಪುಮಾಡಬೇಡಿರಿ. ನ್ಯಾಯಬದ್ಧವಾಗಿ ತೀರ್ಪುನ್ನು ಮಾಡಿರಿ” ಎಂದನು.
25ಆಮೇಲೆ ಯೆರೂಸಲೇಮಿನವರಲ್ಲಿ ಕೆಲವರು “ಅವರು ಕೊಲ್ಲಬೇಕೆಂದು ಹುಡುಕುವುದು ಈತನನ್ನೇ ಅಲ್ಲವೇ? 26ನೋಡಿರಿ, ಈತನು ಬಹಿರಂಗವಾಗಿ ಮಾತನಾಡುತ್ತಿದ್ದಾನೆ ಮತ್ತು ಅವರು ಆತನಿಗೆ ಏನೂ ಹೇಳುತ್ತಿಲ್ಲ. ಬಹುಶಃ ಈತನೇ ನಿಜವಾದ ಕ್ರಿಸ್ತನೆಂದು ಅಧಿಕಾರಿಗಳು ತಿಳಿದುಕೊಂಡಿದ್ದಾರೋ? 27ಆದರೆ ಇವನು ಎಲ್ಲಿಂದ ಬಂದವನೆಂದು ನಾವು ಬಲ್ಲೆವು, ಕ್ರಿಸ್ತನು ಬರುವಾಗ ಆತನು ಎಲ್ಲಿಂದ ಬಂದವನೆಂದು ಒಬ್ಬರಿಗೂ ತಿಳಿಯುವುದಿಲ್ಲವೆಂದು ಮಾತನಾಡಿಕೊಳ್ಳುತ್ತಿದ್ದರು.” 28ಯೇಸುವು ಇದನ್ನು ತಿಳಿದು ದೇವಾಲಯದಲ್ಲಿ ಉಪದೇಶ ಮಾಡುವಾಗ, “ನೀವು ನನ್ನನ್ನು ಬಲ್ಲಿರಿ, ನಾನು ಎಲ್ಲಿಂದ ಬಂದವನೆಂದೂ ನೀವು ಬಲ್ಲಿರಿ, ಆದರೂ ನಾನು ನನ್ನಷ್ಟಕ್ಕೆ ನಾನೇ ಬಂದವನಲ್ಲ. ನನ್ನನ್ನು ಕಳುಹಿಸಿದಾತನು ಸತ್ಯವಂತನು. ನೀವು ಆತನನ್ನು ಅರಿತವರಲ್ಲ. 29ಆದರೆ ನಾನು ಆತನನ್ನು ಬಲ್ಲೆನು ಏಕೆಂದರೆ, ನಾನು ಆತನ ಕಡೆಯಿಂದ ಬಂದವನು ಮತ್ತು ಆತನೇ ನನ್ನನ್ನು ಕಳುಹಿಸಿದನು” ಎಂದು ಕೂಗಿ ಹೇಳಿದನು. 30ಇದಕ್ಕಾಗಿ ಆತನನ್ನು ಬಂಧಿಸುವುದಕ್ಕೆ ಪ್ರಯತ್ನಿಸಿದರೂ ಆತನ ಸಮಯ ಇನ್ನೂ ಬಾರದೆ ಇದ್ದ ಕಾರಣ ಯಾರೂ ಆತನ ಮೇಲೆ ಕೈ ಹಾಕಲಿಲ್ಲ. 31ಜನರಲ್ಲಿ ಅನೇಕರು ಆತನನ್ನು ನಂಬಿ, “ಕ್ರಿಸ್ತನು ಬಂದಾಗ ಈತನು ಮಾಡಿದ್ದಕ್ಕಿಂತ ಹೆಚ್ಚು ಸೂಚಕ ಕಾರ್ಯಗಳನ್ನು ಮಾಡುವನೇನೋ?” ಎಂದು ಹೇಳಿದರು.
ಅಧಿಕಾರಿಗಳು ಆತನನ್ನು ಹಿಡಿಯುವುದಕ್ಕೆ ಪ್ರಯತ್ನಮಾಡಿದ್ದು
32ಜನರು ಆತನ ವಿಷಯವಾಗಿ ಗೊಣಗುಟ್ಟಿದ ಮಾತುಗಳನ್ನು ಫರಿಸಾಯರು ಕೇಳಿಸಿಕೊಂಡು ಮುಖ್ಯಯಾಜಕರೂ ಮತ್ತು ಫರಿಸಾಯರೂ ಆತನನ್ನು ಬಂಧಿಸಲು ದೇವಾಲಯದ ಕಾವಲುಗಾರರನ್ನು ಕಳುಹಿಸಿದರು. 33ಆಗ ಯೇಸು ಅವರಿಗೆ #7:33 ಯೋಹಾ 12:35; 16, 5, 16:“ಇನ್ನು ಸ್ವಲ್ಪಕಾಲ ನಾನು ನಿಮ್ಮೊಂದಿಗಿದ್ದು ಆಮೇಲೆ ನನ್ನನ್ನು ಕಳುಹಿಸಿದಾತನ ಬಳಿಗೆ ಹೊರಟು ಹೋಗುತ್ತೇನೆ. 34#7:34 ಯೋಹಾ 8:21:ನೀವು ನನ್ನನ್ನು ಹುಡುಕುವಿರಿ, ಆದರೆ ಕಂಡುಕೊಳ್ಳದೆ ಹೋಗುವಿರಿ. ನಾನು ಇರುವಲ್ಲಿಗೆ ನೀವು ಬರಲಾರಿರಿ” ಎಂದನು. 35ಅದಕ್ಕೆ ಯೆಹೂದ್ಯರು “ಇವನು ನಮಗೆ ಸಿಕ್ಕದ ಹಾಗೆ ಎಲ್ಲಿ ಹೋಗಬೇಕೆಂದಿದ್ದಾನೆ? ಗ್ರೀಕರ ನಡುವೆ ಚದುರಿಕೊಂಡಿರುವ ನಮ್ಮವರ ಬಳಿಗೆ ಹೋಗಿ ಆ ಗ್ರೀಕರಿಗೆ ಬೋಧನೆ ಮಾಡಬೇಕೆಂದಿರುವನೋ? 36‘ನೀವು ನನ್ನನ್ನು ಹುಡುಕುವಿರಿ, ಆದರೆ ನನ್ನನ್ನು ಕಂಡುಕೊಳ್ಳದೆ ಹೋಗುವಿರಿ ಮತ್ತು ನಾನು ಇರುವಲ್ಲಿಗೆ ನೀವು ಬರಲಾರಿರಿ’ ಎಂದು ಹೇಳಿದ ಮಾತಿನ ಅರ್ಥ ಏನಾಗಿರಬಹುದು?” ಎಂದು ತಮ್ಮ ತಮ್ಮೊಳಗೆ ಮಾತನಾಡಿಕೊಂಡರು.
37ಜಾತ್ರೆಯ ಮಹಾದಿನವಾದ ಕಡೆಯ ದಿನದಲ್ಲಿ ಯೇಸು ನಿಂತುಕೊಂಡು #7:37 ಯೆಶಾ 55:1; ಯೋಹಾ 4:14; 6:35:“ಯಾವನಿಗಾದರೂ ನೀರಡಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ. 38ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ನನ್ನಲ್ಲಿ ಯಾವನು ನಂಬಿಕೆಯಿಡುವನೋ ಅವನೊಳಗಿನಿಂದ ಜೀವಕರವಾದ ನೀರಿನ ಬುಗ್ಗೆಗಳು ಹರಿಯುವವು” ಎಂದು ಕೂಗಿ ಹೇಳಿದನು. 39ಆದರೆ ಯೇಸು ತನ್ನನ್ನು ನಂಬುವವರು ಹೊಂದಲಿರುವ ಪವಿತ್ರಾತ್ಮವರವನ್ನು ಕುರಿತು ಹೀಗೆ ಹೇಳಿದನು. ಯೇಸು ಇನ್ನೂ ಮಹಿಮೆಯನ್ನು ಹೊಂದಿರಲಿಲ್ಲವಾದ ಕಾರಣ ಪವಿತ್ರಾತ್ಮವರವು ಇನ್ನೂ ಕೊಡಲ್ಪಟ್ಟಿರಲಿಲ್ಲ. 40ಜನರಲ್ಲಿ ಕೆಲವರು ಆ ಮಾತುಗಳನ್ನು ಕೇಳಿದಾಗ “ನಿಜವಾಗಿಯೂ ಈತನು ಪ್ರವಾದಿಯಾಗಿದ್ದಾನೆ” ಎಂದರು. 41ಕೆಲವರು, “ಈತನು ಕ್ರಿಸ್ತನು” ಎಂದರು, ಆದರೆ ಇನ್ನೂ ಕೆಲವರು “ಕ್ರಿಸ್ತನು ಗಲಿಲಾಯದಿಂದ ಬರುವುದುಂಟೆ? 42#7:42 ಯೆರೆ 23:5; ಮೀಕ. 5:2:ದಾವೀದನ ಸಂತಾನದಿಂದಲೂ ದಾವೀದನು ಇದ್ದ ಬೇತ್ಲೆಹೇಮೆಂಬ ಗ್ರಾಮದಿಂದಲೂ ಕ್ರಿಸ್ತನು ಬರುವನು ಎಂಬುದಾಗಿ ಪವಿತ್ರ ಗ್ರಂಥವು ಹೇಳುತ್ತದಲ್ಲವೇ?” ಅಂದರು. 43ಹೀಗೆ ಆತನ ನಿಮಿತ್ತವಾಗಿ ಜನರಲ್ಲಿ ಭೇದ ಉಂಟಾಯಿತು. 44ಅವರಲ್ಲಿ ಕೆಲವರು ಆತನನ್ನು ಬಂಧಿಸಬೇಕೆಂದಿದ್ದರೂ ಆದರೆ ಯಾರು ಆತನ ಮೇಲೆ ಕೈ ಹಾಕಲಿಲ್ಲ.
45ಬಳಿಕ ಆ ದೇವಾಲಯದ ಕಾವಲುಗಾರರು, ಮುಖ್ಯಯಾಜಕರ ಮತ್ತು ಫರಿಸಾಯರ ಬಳಿಗೆ ಬಂದಾಗ ಅವರು, “ನೀವು ಏಕೆ ಆತನನ್ನು ಕರೆತರಲಿಲ್ಲ?” ಎಂದು ಅವರನ್ನು ಕೇಳಿದ್ದಕ್ಕೆ, 46ಕಾವಲುಗಾರರು “ಈ ಮನುಷ್ಯನು ಮಾತನಾಡುವ ರೀತಿಯಲ್ಲಿ ಯಾರೂ ಎಂದೂ ಮಾತನಾಡಿದ್ದಿಲ್ಲ” ಎಂದು ಉತ್ತರ ಕೊಟ್ಟರು. 47ಆಗ ಫರಿಸಾಯರು ಅವರಿಗೆ “ನೀವೂ ಸಹ ಆತನ ಮಾತಿಗೆ ಮರುಳಾದೀರಾ? 48ಹಿರೀಸಭೆಯವರಲ್ಲಾಗಲಿ ಫರಿಸಾಯರಲ್ಲಾಗಲಿ ಯಾರಾದರೂ ಅವನನ್ನು ನಂಬಿದ್ದಾರೋ? 49ಧರ್ಮಶಾಸ್ತ್ರವನ್ನು ಅರಿಯದ ಈ ಹಿಂಡು ಶಾಪಗ್ರಸ್ತರೇ” ಎಂದು ಹೇಳಿದರು. 50ಮೊದಲು ಯೇಸುವಿನ ಬಳಿಗೆ ಬಂದಿದ್ದ #7:50 ಯೋಹಾ 3:1; 19:39:ನಿಕೊದೇಮನು ಅವರಲ್ಲಿ ಒಬ್ಬನಾಗಿದ್ದನು, 51ಅವನು ಅವರಿಗೆ “ನಮ್ಮ ಧರ್ಮಶಾಸ್ತ್ರವು ಮೊದಲು ಒಬ್ಬನನ್ನು ವಿಚಾರಿಸಿ ಅವನು ಮಾಡುವುದೇನೆಂದು ತಿಳಿದುಕೊಳ್ಳದೆ ಅವನ ವಿಷಯವಾಗಿ ಖಂಡನೆ ಮಾಡುವುದುಂಟೇ?” ಎಂದು ಹೇಳಿದ್ದಕ್ಕೆ, 52ಅವರು ಅವನಿಗೆ “ನೀನು ಸಹ ಗಲಿಲಾಯದವನೋ? ನೀನೇ ಪರಿಶೋಧಿಸಿ ನೋಡು ಗಲಿಲಾಯದಿಂದ ಪ್ರವಾದಿಯು ಬರುವುದಿಲ್ಲ,” ಎಂದರು.
53 # 7:53 ಈ ವಚನವು ಕೆಲವು ಪ್ರತಿಗಳಲ್ಲಿ ಮಾತ್ರ ಲಭ್ಯ ಬಳಿಕ ಎಲ್ಲರೂ ತಮ್ಮ ತಮ್ಮ ಮನೆಗೆ ಹೋದರು.
Currently Selected:
ಯೋಹಾ 7: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.