ಲೂಕ 14
14
ಯೇಸು ಜಲೋದರ ರೋಗಿಯನ್ನು ಸ್ವಸ್ಥಪಡಿಸಿದ್ದು
1ಆತನು ಸಬ್ಬತ್ ದಿನದಲ್ಲಿ ಫರಿಸಾಯರ ಮುಖ್ಯಸ್ಥರಲ್ಲಿ ಒಬ್ಬನ ಮನೆಗೆ ಊಟಕ್ಕೆ ಹೋದಾಗ ಅವರು ಆತನನ್ನು ಹೊಂಚಿನೋಡುತ್ತಿದ್ದರು. 2ಆಗ ಯೇಸು ತನ್ನೆದುರಿಗೆ ಜಲೋದರವುಳ್ಳ#14:2 ಹೊಟ್ಟೆಯಲ್ಲಿ ನೀರು ತುಂಬಿಕೊಂಡಿರುವ ಒಂದು ರೋಗ ಒಬ್ಬ ಮನುಷ್ಯನಿರುವುದನ್ನು ನೋಡಿ, 3“ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ಸರಿಯೋ ಅಥವಾ ಸರಿಯಲ್ಲವೋ?” ಎಂದು ಧರ್ಮೋಪದೇಶಕರನ್ನೂ ಫರಿಸಾಯರನ್ನೂ ಕೇಳಿದನು. 4ಅವರು ಸುಮ್ಮನೇ ಇರಲು ಆತನು ಅವನ ಕೈ ಹಿಡಿದು ಅವನನ್ನು ವಾಸಿಮಾಡಿ ಕಳುಹಿಸಿ, 5“ನಿಮ್ಮಲ್ಲಿ ಯಾವನೊಬ್ಬನ ಮಗನಾಗಲಿ ಎತ್ತಾಗಲಿ ಬಾವಿಯಲ್ಲಿ ಬಿದ್ದರೆ ಅವನು ತಡಮಾಡದೆ ಸಬ್ಬತ್ ದಿನದಲ್ಲಾದರೂ ಮೇಲಕ್ಕೆ ತೆಗೆಯುವುದಿಲ್ಲವೇ?” ಎಂದು ಅವರನ್ನು ಕೇಳಿದನು. 6ಅವರು ಅದಕ್ಕೆ ಉತ್ತರಕೊಡಲಾರದೆ ಇದ್ದರು.
ನಮ್ರತೆ ಮತ್ತು ಅತಿಥಿ ಸತ್ಕಾರ
7ಊಟಕ್ಕೆ ಕರಿಸಿಕೊಂಡವರು ಪಂಕ್ತಿಯ ಮುಖ್ಯ ಸ್ಥಾನವನ್ನು ಆರಿಸಿಕೊಳ್ಳುವುದನ್ನು ನೋಡಿ ಯೇಸು ಒಂದು ಸಾಮ್ಯವನ್ನು ಹೇಳಿದನು. 8ಅದೇನೆಂದರೆ, “ಯಾವನಾದರೂ ನಿನ್ನನ್ನು ಮದುವೆ ಊಟಕ್ಕೆ ಕರೆದರೆ ಪಂಕ್ತಿಯೊಳಗೆ ಮುಖ್ಯ ಸ್ಥಾನದಲ್ಲಿ ಕುಳಿತುಕೊಳ್ಳಬೇಡ, ಒಂದು ವೇಳೆ ನಿನಗಿಂತ ಗೌರವವುಳ್ಳವನನ್ನು ಅವನು ಕರೆದಿರಬಹುದು 9ಮತ್ತು ನಿನ್ನನ್ನೂ ಅವನನ್ನೂ ಕರೆದವನು ಬಂದು, ‘ಇವನಿಗೆ ಸ್ಥಳ ಬಿಡು’ ಎಂದು ನಿನಗೆ ಹೇಳುವಾಗ ನೀನು ನಾಚಿಕೊಂಡು ಕಡೆಯ ಸ್ಥಾನದಲ್ಲಿ ಕುಳಿತುಕೊಳ್ಳುವುದಕ್ಕೆ ಹೋಗುವಿ. 10ಆದರೆ ಯಾವನಾದರೂ ನಿನ್ನನ್ನು ಕರೆದಾಗ ನೀನು ಹೋಗಿ ಕಡೆಯ ಸ್ಥಾನದಲ್ಲಿ ಕುಳಿತುಕೋ. ಹೀಗೆ ಮಾಡಿದರೆ ನಿನ್ನನ್ನು ಕರೆದವನು ಬಂದು ನಿನ್ನನ್ನು ನೋಡಿ, ‘ಸ್ನೇಹಿತನೇ, ಇನ್ನೂ ಮೇಲಕ್ಕೆ ಬಾ’ ಅನ್ನುವನು. ಆಗ ನಿನ್ನ ಸಂಗಡ ಕುಳಿತಿರುವವರೆಲ್ಲರ ಮುಂದೆ ನಿನಗೆ ಗೌರವ ದೊರಕುವುದು. 11ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು” ಅಂದನು.
12ಆತನು ತನ್ನನ್ನು ಊಟಕ್ಕೆ ಕರೆದವನಿಗೆ ಸಹ ಒಂದು ಮಾತು ಹೇಳಿದನು; ಅದೇನೆಂದರೆ, “ನೀನು ಮಧ್ಯಾಹ್ನದ ಊಟಕ್ಕೆ ಅಥವಾ ಸಾಯಂಕಾಲದ ಊಟಕ್ಕೆ ನಿನ್ನ ಸ್ನೇಹಿತರನ್ನಾಗಲಿ, ನಿನ್ನ ಅಣ್ಣತಮ್ಮಂದಿರನ್ನಾಗಲಿ, ನಿನ್ನ ಬಂಧುಬಾಂಧವರನ್ನಾಗಲಿ, ಐಶ್ವರ್ಯವಂತರಾದ ನೆರೆಯವರನ್ನಾಗಲಿ ಕರೆಯಬೇಡ. ಒಂದು ವೇಳೆ ಅವರು ಸಹ ಪ್ರತಿಯಾಗಿ ನಿನ್ನನ್ನು ಕರೆದಾರು, ಮತ್ತು ನಿನಗೆ ಮುಯ್ಯಿಗೆಮುಯ್ಯಾಗುವುದು. 13ಆದರೆ ನೀನು ಔತಣ ಮಾಡಿಸುವಾಗ ಬಡವರು, ಅಂಗಹೀನವಾದವರು, ಕುಂಟರು, ಕುರುಡರು ಇಂಥವರನ್ನು ಕರೆ, 14ಆಗ ನೀನು ಧನ್ಯನಾಗುವಿ. ಏಕೆಂದರೆ, ಅವರು ನಿನಗೆ ಪ್ರತಿಯಾಗಿ ಏನು ಮಾಡಲೂ ಇಲ್ಲದವರು. ನೀತಿವಂತರು ಪುನರುತ್ಥಾನ ಹೊಂದುವಾಗ ನಿನಗೆ ಪ್ರತಿಫಲ ದೊರಕುವುದು.”
ಮಹಾ ಔತಣದ ಸಾಮ್ಯ
ಮತ್ತಾ 22:1-10
15ಊಟಕ್ಕೆ ಕುಳಿತವರಲ್ಲಿ ಒಬ್ಬನು ಈ ಮಾತುಗಳನ್ನು ಕೇಳಿ, “ದೇವರ ರಾಜ್ಯದಲ್ಲಿ ಊಟಮಾಡುವವನೇ ಧನ್ಯನು” ಎಂದು ಹೇಳಲು, 16ಯೇಸು ಅವನಿಗೆ ಹೇಳಿದ್ದೇನಂದರೆ, “ಒಬ್ಬ ಮನುಷ್ಯನು ಮಹಾ ಔತಣ ಮಾಡಿಸಿ ಅನೇಕರನ್ನು ಆಮಂತ್ರಿಸಿದನು. 17ಊಟವು ಸಿದ್ಧವಾದಾಗ, ಅವನು ಊಟಕ್ಕೆ ಆಹ್ವಾನಿಸಲ್ಪಟ್ಟವರ ಬಳಿಗೆ ಬಂದು, ‘ಈಗ ಔತಣವು ಸಿದ್ಧವಾಗಿದೆ ಊಟಕ್ಕೆ ಬರಬೇಕು’ ಎಂದು ಹೇಳುವುದಕ್ಕೆ ತನ್ನ ಆಳನ್ನು ಕಳುಹಿಸಿದನು. 18ಆದರೆ ಅವರೆಲ್ಲರೂ ಒಂದೇ ಮನಸ್ಸಿನಿಂದ ನೆವ ಹೇಳುವುದಕ್ಕೆ ತೊಡಗಿದರು. ಮೊದಲನೆಯವನು ಆ ಆಳನ್ನು ನೋಡಿ, ‘ನಾನು ಒಂದು ಹೊಲವನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ, ಅದನ್ನು ಹೋಗಿ ನೋಡಬೇಕಾಗಿದೆ. ನನ್ನನ್ನು ಕ್ಷಮಿಸಬೇಕು’ ಎಂದು ಕೇಳಿಕೊಂಡನು. 19ಮತ್ತೊಬ್ಬನು, ‘ನಾನು ಐದು ಜೋಡಿ ಎತ್ತುಗಳನ್ನು ಕೊಂಡುಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸುವುದಕ್ಕೆ ಹೋಗುತ್ತಿದ್ದೇನೆ, ನನ್ನನ್ನು ಕ್ಷಮಿಸಬೇಕು’ ಎಂದು ಕೇಳಿಕೊಂಡನು. 20ಇನ್ನೊಬ್ಬನು, ‘ನಾನು ಮದುವೆಮಾಡಿಕೊಂಡಿದ್ದೇನೆ, ಆದುದರಿಂದ ನಾನು ಬರುವುದಕ್ಕಾಗುವುದಿಲ್ಲ’ ಅಂದನು. 21ಆ ಆಳು ಬಂದು ತನ್ನ ಯಜಮಾನನಿಗೆ ಈ ಸಂಗತಿಗಳನ್ನು ತಿಳಿಸಲು ಮನೆಯ ಯಜಮಾನನು ಸಿಟ್ಟುಗೊಂಡು ಆಳಿಗೆ, ‘ನೀನು ತಟ್ಟನೆ ಈ ಊರಿನ ಬೀದಿಬೀದಿಗೂ ಸಂದುಸಂದಿಗೂ ಹೋಗಿ ಬಡವರು, ಅಂಗಹೀನರು, ಕುರುಡರು, ಕುಂಟರು, ಇಂಥವರನ್ನು ಇಲ್ಲಿಗೆ ಕರೆದುಕೊಂಡು ಬಾ’ ಎಂದು ಹೇಳಿದನು. 22ಬಳಿಕ ಆ ಆಳು, ‘ಅಯ್ಯಾ, ನೀನು ಅಪ್ಪಣೆಕೊಟ್ಟಂತೆ ಮಾಡಿದ್ದಾಯಿತು. ಆದರೂ ಇನ್ನೂ ಸ್ಥಳ ಉಳಿದಿದೆ’ ಅಂದನು. 23ಆಗ ಆ ಯಜಮಾನನು ತನ್ನ ಆಳಿಗೆ ಹೇಳಿದ್ದೇನೆಂದರೆ, ‘ನೀನು ಹಾದಿಗಳಿಗೂ ಬೀದಿಗಳಿಗೂ ಹೋಗಿ ಅಲ್ಲಿ ಸಿಕ್ಕಿದವರನ್ನು ಬಲವಂತಮಾಡಿ ಒಳಕ್ಕೆ ಕರೆದುಕೊಂಡು ಬಾ, ನನ್ನ ಮನೆ ತುಂಬಲಿ. 24ಆದರೆ ಔತಣಕ್ಕೆ ಮೊದಲು ಆಮಂತ್ರಿಸಲ್ಪಟ್ಟವರಲ್ಲಿ ಒಬ್ಬನಾದರೂ ನಾನು ಮಾಡಿಸಿದ ಅಡಿಗೆಯ ರುಚಿಯನ್ನು ಸವಿಯಬಾರದು’ ಎಂದು ನಿಮಗೆ ಹೇಳುತ್ತೇನೆ” ಅಂದನು.
ಶಿಷ್ಯತ್ವದ ಬೆಲೆ
ಮತ್ತಾ 10:37-38
25ಬಹು ಜನರು ಗುಂಪುಗುಂಪಾಗಿ ಯೇಸುವಿನ ಸಂಗಡ ಹೋಗುತ್ತಾ ಇರಲು ಆತನು ತಿರುಗಿಕೊಂಡು ಅವರಿಗೆ ಹೇಳಿದ್ದೇನಂದರೆ, 26“ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆತಾಯಿ, ಹೆಂಡತಿ, ಮಕ್ಕಳು, ಅಣ್ಣತಮ್ಮಂದಿರು, ಅಕ್ಕತಂಗಿಯರು ಇವರನ್ನೂ ತನ್ನ ಪ್ರಾಣವನ್ನು ಸಹ ಹಗೆಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು. 27ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರದ ಹೊರತು ಅವನು ನನ್ನ ಶಿಷ್ಯನಾಗಿರಲಾರನು. 28ನಿಮ್ಮಲ್ಲಿ ಯಾವನಾದರೂ ಒಂದು ಗೋಪುರವನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕುಳಿತುಕೊಂಡು, ಅದಕ್ಕೆ ಎಷ್ಟು ಖರ್ಚು ಆದೀತು, ಅದನ್ನು ತೀರಿಸುವುದಕ್ಕೆ ಸಾಕಾಗುವಷ್ಟು ಹಣ ನನ್ನಲ್ಲಿ ಇದೆಯೋ ಎಂದು ಲೆಕ್ಕಮಾಡುವುದಿಲ್ಲವೇ? 29ಹೀಗೆ ಲೆಕ್ಕಮಾಡದೆ ಅದಕ್ಕೆ ಅಸ್ತಿವಾರ ಹಾಕಿದ ಮೇಲೆ ಆ ಕೆಲಸವನ್ನು ಪೂರೈಸಲಾರದೆ ಹೋದರೆ ನೋಡುವವರೆಲ್ಲರು, 30‘ಈ ಮನುಷ್ಯನು ಕಟ್ಟಿಸುವುದಕ್ಕಂತೂ ತೊಡಗಿದನು, ಕೆಲಸಪೂರೈಸಲಾರದೆ ಹೋದನು’ ಎಂದು ಅವನನ್ನು ಹಾಸ್ಯಮಾಡಾರು. 31ಇಲ್ಲವೆ ಯಾವ ಅರಸನಾದರೂ ಮತ್ತೊಬ್ಬ ಅರಸನ ಸಂಗಡ ಯುದ್ಧಮಾಡುವುದಕ್ಕೆ ಹೋಗುವಾಗ ತನ್ನ ಮೇಲೆ ಇಪ್ಪತ್ತು ಸಾವಿರ ದಂಡು ತೆಗೆದುಕೊಂಡು ಬರುವವನನ್ನು ತಾನು ಹತ್ತು ಸಾವಿರ ದಂಡಿನಿಂದ ಎದುರಿಸುವುದಕ್ಕೆ ಶಕ್ತನಾಗುವೆನೋ ಇಲ್ಲವೋ ಎಂದು ಕುಳಿತುಕೊಂಡು ಆಲೋಚಿಸುವುದಿಲ್ಲವೇ? 32ತಾನು ಶಕ್ತನಲ್ಲದಿದ್ದರೆ ಬರುವ ಅರಸನು ಇನ್ನೂ ದೂರದಲ್ಲಿರುವಾಗಲೇ ರಾಯಭಾರಿಗಳನ್ನು ಕಳುಹಿಸಿ ಸಂಧಾನಕ್ಕೆ ಒಪ್ಪಂದವನ್ನು ಮಾಡಿಕೊಳ್ಳುವನು. 33ಹಾಗೆಯೇ ನಿಮ್ಮಲ್ಲಿ ಯಾವನೇ ಆಗಲಿ ತನಗಿರುವುದನ್ನೆಲ್ಲಾ ಬಿಟ್ಟುಬಿಡದೆ ಹೋದರೆ ಅವನು ನನ್ನ ಶಿಷ್ಯನಾಗಿರಲಾರನು.
ಸಪ್ಪೆಯಾದ ಉಪ್ಪು
ಮತ್ತಾ 5:13; ಮಾರ್ಕ 9:50
34 “ಉಪ್ಪಂತೂ ಒಳ್ಳೆಯ ಪದಾರ್ಥವೇ. ಉಪ್ಪು ಸಪ್ಪಗಾದರೆ ಅದಕ್ಕೆ ಇನ್ನಾತರಿಂದ ರುಚಿಬರಿಸಲು ಸಾಧ್ಯ? 35ಅದು ಭೂಮಿಗಾದರೂ ತಿಪ್ಪೆಗಾದರೂ ಉಪಯೋಗಕ್ಕೆ ಬರುವುದಿಲ್ಲ, ಅದನ್ನು ಹೊರಗೆ ಬಿಸಾಡುತ್ತಾರೆ. ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ” ಅಂದನು.
Currently Selected:
ಲೂಕ 14: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.