ಲೂಕ 17
17
ಯೇಸುವಿನ ನಾನಾ ವಚನಗಳು
ಮತ್ತಾ 18:6,7,21,22; ಮಾರ್ಕ 9:42
1ಯೇಸು ತನ್ನ ಶಿಷ್ಯರಿಗೆ, “ಶೋಧನೆಗಳು ಬರುವುದು ಸಹಜ, ಆದರೂ ಅವು ಯಾವನಿಂದ ಬರುತ್ತವೆಯೋ ಅವನ ಗತಿಯನ್ನು ಏನು ಹೇಳಲಿ? 2ಅಂಥವನು ಈ ಚಿಕ್ಕವರಲ್ಲಿ ಒಬ್ಬನಿಗೆ ಪಾಪಮಾಡುವುದಕ್ಕೆ ಕಾರಣನಾಗುವುದಕ್ಕಿಂತ ತನ್ನ ಕುತ್ತಿಗೆಗೆ ಬೀಸುವ ಕಲ್ಲನ್ನು ಕಟ್ಟಿಸಿಕೊಂಡು ಸಮುದ್ರದಲ್ಲಿ ಹಾಕಿಸಿಕೊಳ್ಳುವುದೇ ಲೇಸು. 3ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ನಿನ್ನ ಸಹೋದರನು ತಪ್ಪುಮಾಡಿದರೆ ಅವನನ್ನು ಗದರಿಸು. ಅವನು ಪಶ್ಚಾತ್ತಾಪಪಟ್ಟರೆ ಅವನ ತಪ್ಪನ್ನು ಕ್ಷಮಿಸಿಬಿಡು. 4ಅವನು ದಿನಕ್ಕೆ ಏಳು ಸಾರಿ ನಿನಗೆ ತಪ್ಪುಮಾಡಿ ಏಳು ಸಾರಿಯೂ ನಿನ್ನ ಕಡೆಗೆ ತಿರುಗಿಕೊಂಡು, ‘ನಾನು ಪಶ್ಚಾತ್ತಾಪಪಡುತ್ತೇನೆ ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡರೆ ಅವನನ್ನು ಕ್ಷಮಿಸು” ಎಂದು ಹೇಳಿದನು.
ನಂಬಿಕೆ
5ಅಪೊಸ್ತಲರು ಕರ್ತನಿಗೆ, “ನಮ್ಮ ನಂಬಿಕೆಯನ್ನು ಹೆಚ್ಚಿಸು” ಎಂದು ಹೇಳಲು, 6ಕರ್ತನು, “ಸಾಸಿವೇ ಕಾಳಷ್ಟು ನಂಬಿಕೆ ನಿಮಗಿರುವುದಾದರೆ ನೀವು ಈ ಅತ್ತಿಮರಕ್ಕೆ, ‘ನೀನು ಬೇರುಸಹಿತ ಕಿತ್ತುಕೊಂಡುಹೋಗಿ ಸಮುದ್ರದಲ್ಲಿ ನಾಟಿಕೊ’ ಎಂದು ಹೇಳಿದರೂ ಅದು ನಿಮ್ಮ ಮಾತನ್ನು ಕೇಳುವುದು” ಅಂದನು.
ಆಳಿನ ಕರ್ತವ್ಯ
7 “ನಿಮ್ಮಲ್ಲಿ ಯಾವನಿಗಾದರೂ ವ್ಯವಸಾಯ ಮಾಡುವ ಅಥವಾ ಕುರಿಮೇಯಿಸುವ ಆಳಿರಲಾಗಿ, ಅವನು ಹೊಲದಿಂದ ಮನೆಗೆ ಬಂದ ಆ ಆಳಿಗೆ, ‘ನೀನು ತಟ್ಟನೆ ಬಂದು ಊಟಕ್ಕೆ ಕುಳಿತುಕೋ’ ಎಂದು ಹೇಳುವನೇ? 8ಹಾಗೆ ಹೇಳದೆ, ‘ನೀನು ನನ್ನ ಊಟಕ್ಕೇನಾದರೂ ಸಿದ್ಧಮಾಡು, ನಾನು ಊಟಮಾಡುವ ತನಕ ನಡುಕಟ್ಟಿಕೊಂಡು ನನಗೆ ಸೇವೆಮಾಡು. ಆ ಮೇಲೆ ನೀನು ಊಟಮಾಡು, ಕುಡಿ’ ಎಂದು ಹೇಳುವನಲ್ಲವೇ. 9ತನ್ನ ಅಪ್ಪಣೆಯಂತೆ ನಡೆದ ಆ ಆಳಿಗೆ, ನಿನ್ನಿಂದ ಉಪಕಾರವಾಯಿತೆಂದು ಅವನಿಗೆ ಹೇಳುವನೇ? ಇದರಂತೆಯೇ ನಿಮ್ಮ ಸಂಗತಿ. 10ನೀವು ನಿಮಗೆ ಅಪ್ಪಣೆಯಾಗಿರುವುದನ್ನೆಲ್ಲಾ ಮಾಡಿದ ಮೇಲೆ ‘ನಾವು ಆಳುಗಳು, ಪ್ರಯೋಜನವಿಲ್ಲದವರು, ಮಾಡಬೇಕಾದದ್ದನ್ನೇ ಮಾಡಿದ್ದೇವೆ’ ಅನ್ನಿರಿ” ಎಂದು ಹೇಳಿದನು.
ಯೇಸು ಹತ್ತುಮಂದಿ ಕುಷ್ಠರೋಗಿಗಳನ್ನು ಸ್ವಸ್ಥಮಾಡಿದ್ದು
11ಯೇಸು ಯೆರೂಸಲೇಮಿಗೆ ಪ್ರಯಾಣಮಾಡುವಾಗ ಸಮಾರ್ಯ, ಗಲಿಲಾಯ ಸೀಮೆಗಳ ನಡುವೆ ಹಾದುಹೋದನು. 12ಒಂದು ಹಳ್ಳಿಗೆ ಬಂದಾಗ ಹತ್ತುಮಂದಿ ಕುಷ್ಠರೋಗಿಗಳು ಆತನ ಎದುರಿಗೆ ಬಂದು ದೂರದಲ್ಲಿ ನಿಂತು, 13“ಯೇಸುವೇ, ಗುರುವೇ, ನಮ್ಮ ಮೇಲೆ ದಯವಿಡು” ಎಂದು ಕೂಗಿ ಹೇಳಿದರು. 14ಆತನು ಅವರನ್ನು ನೋಡಿ, “ನೀವು ಹೋಗಿ ಯಾಜಕರಿಗೆ ನಿಮ್ಮ ಮೈ ತೋರಿಸಿಕೊಳ್ಳಿರಿ” ಎಂದು ಹೇಳಿದನು. ಅವರು ಹೋಗುತ್ತಿರುವಾಗಲೇ ಶುದ್ಧರಾದರು. 15ಅವರಲ್ಲಿ ಒಬ್ಬನು ತನಗೆ ಗುಣವಾದದ್ದನ್ನು ನೋಡಿ, ಮಹಾಶಬ್ದದಿಂದ ದೇವರನ್ನು ಕೊಂಡಾಡುತ್ತಾ ಹಿಂತಿರುಗಿ ಬಂದು, 16ಯೇಸುವಿನ ಪಾದಗಳಿಗೆ ಅಡ್ಡಬಿದ್ದು, ಆತನಿಗೆ ಕೃತಜ್ಞತಾಸುತ್ತಿಯನ್ನು ಸಲ್ಲಿಸಿದನು. ಅವನು ಸಮಾರ್ಯದವನು. 17ಯೇಸು ಇದನ್ನು ನೋಡಿ, “ಹತ್ತು ಮಂದಿ ಶುದ್ಧರಾದರಲ್ಲವೇ. ಮಿಕ್ಕ ಒಂಭತ್ತು ಮಂದಿ ಎಲ್ಲಿ? 18ದೇವರನ್ನು ಸ್ತುತಿಸುವುದಕ್ಕೆ ಈ ಅನ್ಯದೇಶದವನೇ ಹೊರತು ಇನ್ನಾರೂ ಹಿಂತಿರುಗಿ ಬರಲಿಲ್ಲವೇ?” ಎಂದು ಹೇಳಿ, 19ಅವನಿಗೆ, “ಎದ್ದು ಹೋಗು, ನಿನ್ನ ನಂಬಿಕೆಯು ನಿನ್ನನ್ನು ಸ್ವಸ್ಥಮಾಡಿಯದೆ” ಎಂದು ಹೇಳಿದನು.
ದೇವರ ರಾಜ್ಯದ ಆಗಮನ
ಮತ್ತಾ 24:23-28,37-41
20ದೇವರ ರಾಜ್ಯವು ಯಾವಾಗ ಬರುವುದೆಂದು ಫರಿಸಾಯರು ಆತನನ್ನು ಕೇಳಿದಾಗ ಆತನು ಅವರಿಗೆ, “ದೇವರ ರಾಜ್ಯವು ನೀವು ಗಮನಿಸುತ್ತಾ ಕಾಯುತ್ತಿರುವಾಗ ಪ್ರತ್ಯಕ್ಷವಾಗಿ ಬರುವಂಥದಲ್ಲ. 21‘ಇಗೋ ಇಲ್ಲಿ ಇದೆ, ಅಗೋ ಅಲ್ಲಿ ಅದೆ’ ಎಂದು ಹೇಳುವುದಕ್ಕಾಗದು. ದೇವರ ರಾಜ್ಯವು ನಿಮ್ಮಲ್ಲಿಯೇ ಅದೆ ಎಂದು ತಿಳಿದುಕೊಳ್ಳಿರಿ” ಎಂದು ಹೇಳಿದನು.
22ಮತ್ತು ಆತನು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ, “ಒಂದು ಕಾಲ ಬರುತ್ತದೆ, ಆ ಕಾಲದಲ್ಲಿ ನೀವು ಮನುಷ್ಯಕುಮಾರನ ದಿನಗಳೊಳಗೆ ಒಂದು ದಿನವನ್ನು ನೋಡಬೇಕೆಂದು ಅಪೇಕ್ಷಿಸಿದರೂ ಅದನ್ನು ನೋಡದೆ ಇರುವಿರಿ. 23ಜನರು ನಿಮಗೆ, ‘ಅಗೋ ಅಲ್ಲಿದ್ದಾನೆ, ಇಗೋ ಇಲ್ಲಿದ್ದಾನೆ’ ಎಂದು ಹೇಳಿದರೆ ನೀವು ಅವರು ಹೇಳುವಲ್ಲಿಗೆ ಹೊರಟುಹೋಗಬೇಡಿರಿ, ಅವರನ್ನು ಹಿಂಬಾಲಿಸಲೂ ಬೇಡಿರಿ. 24ಏಕೆಂದರೆ ಮಿಂಚು ಮಿಂಚುತ್ತಾ ಆಕಾಶದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ಹೇಗೆ ಹೊಳೆಯುವುದೋ ಹಾಗೆಯೇ ಮನುಷ್ಯಕುಮಾರನು ತನ್ನ ದಿನದಲ್ಲಿರುವನು. 25ಆದರೆ ಮೊದಲು ಆತನು ಬಹು ಕಷ್ಟಗಳನ್ನನುಭವಿಸಿ ಈಗಿನ ಕಾಲದ ಸಂತತಿಯಿಂದ ತಿರಸ್ಕರಿಸಲ್ಪಡಬೇಕು. 26ನೋಹನ ದಿನಗಳಲ್ಲಿ ನಡೆದ ಹಾಗೆಯೇ ಮನುಷ್ಯಕುಮಾರನ ದಿನಗಳಲ್ಲಿಯೂ ನಡೆಯುವುದು. 27ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಮದುವೆಮಾಡಿಕೊಳ್ಳುತ್ತಿದ್ದರು, ಮದುವೆಮಾಡಿಕೊಡುತ್ತಿದ್ದರು. ಆಗ ಜಲಪ್ರಳಯವು ಬಂದು ಎಲ್ಲರನ್ನು ನಾಶಮಾಡಿತು. 28ಮತ್ತು ಲೋಟನ ದಿನಗಳಲ್ಲಿ ನಡೆದ ಪ್ರಕಾರ ನಡೆಯುವುದು. ಅವರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಕೊಂಡುಕೊಳ್ಳುತ್ತಿದ್ದರು, ಮಾರಾಟಮಾಡುತ್ತಿದ್ದರು, ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು. 29ಆದರೆ ಲೋಟನು ಸೊದೋಮ್ ಊರನ್ನು ಬಿಟ್ಟುಹೋದ ದಿನದಲ್ಲಿ, ಆಕಾಶದಿಂದ ಬೆಂಕಿ ಗಂಧಕಗಳು ಸುರಿದು ಅವರೆಲ್ಲರನ್ನು ನಾಶಮಾಡಿದವು. 30ಮನುಷ್ಯಕುಮಾರನು ಪ್ರತ್ಯಕ್ಷವಾಗುವ ದಿನದಲ್ಲಿ ಅದೇ ರೀತಿಯಾಗಿ ಇರುವುದು. 31ಆ ದಿನದಲ್ಲಿ ಮಾಳಿಗೆಯ ಮೇಲೆ ಇರುವವನು ಮನೆಯೊಳಗಿರುವ ತನ್ನ ವಸ್ತುಗಳನ್ನು ತೆಗೆದುಕೊಳ್ಳುವುದಕ್ಕೆ ಇಳಿದು ಬರಬಾರದು. ಅದೇ ಪ್ರಕಾರ ಹೊಲದಲ್ಲಿರುವವನು ಸಹ ತಿರುಗಿ ಹಿಂದಕ್ಕೆ ಹೋಗಬಾರದು. 32ಲೋಟನ ಹೆಂಡತಿಯನ್ನು ನೆನಪಿಗೆ ತಂದುಕೊಳ್ಳಿರಿ. 33ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು, ಪ್ರಾಣವನ್ನು ಕಳೆದುಕೊಂಡವನು ಅದನ್ನು ರಕ್ಷಿಸಿಕೊಳ್ಳುವನು. 34ಆ ರಾತ್ರಿಯಲ್ಲಿ ಇಬ್ಬರು ಒಂದೇ ಹಾಸಿಗೆಯಲ್ಲಿ ಇರುವರು. ಒಬ್ಬನು ತೆಗೆದುಕೊಳ್ಳಲ್ಪಡುವನು, ಮತ್ತೊಬ್ಬನು ಕೈ ಬಿಡಲ್ಪಡುವನು. 35ಇಬ್ಬರು ಹೆಂಗಸರು ಒಂದೇ ಕಲ್ಲಲ್ಲಿ ಬೀಸುತ್ತಿರುವರು. ಒಬ್ಬಳು ತೆಗೆದುಕೊಳ್ಳಲ್ಪಡುವಳು, ಮತ್ತೊಬ್ಬಳು ಬಿಡಲ್ಪಡುವಳು.” 36#17:36 ಕೆಲವು ಪ್ರತಿಗಳಲ್ಲಿ ಈ ವಚನವಿಲ್ಲ. “ಹೊಲದಲ್ಲಿ ಇಬ್ಬರಿರುವರು; ಒಬ್ಬನು ತೆಗೆದುಕೊಳ್ಳಲ್ಪಡುವನು, ಮತ್ತೊಬ್ಬನು ಬಿಡಲ್ಪಡುವನು” ಅಂದನು. 37ಈ ಮಾತಿಗೆ ಶಿಷ್ಯರು, “ಕರ್ತನೇ, ಅದು ಎಲ್ಲಿ ಆಗುವುದು?” ಎಂದು ಕೇಳಲು ಆತನು ಅವರಿಗೆ, “ಹೆಣ ಎಲ್ಲಿಯೋ ಅಲ್ಲಿಯೇ ರಣಹದ್ದುಗಳು ಬಂದು ಸೇರುವವು” ಎಂದು ಉತ್ತರಕೊಟ್ಟನು.
Currently Selected:
ಲೂಕ 17: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.