ಲೂಕ 19
19
ಯೇಸು ಸುಂಕದವನಾದ ಜಕ್ಕಾಯನ ಮನೆಗೆ ಹೋದದ್ದು
1ಯೇಸು ಯೆರಿಕೋ ಊರನ್ನು ಪ್ರವೇಶಿಸಿ ಹಾದುಹೋಗುವಾಗ, 2ಅಲ್ಲಿ ಜಕ್ಕಾಯನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು. ಅವನು ಸುಂಕವಸೂಲಿಯ ಮುಖ್ಯಸ್ಥನು ಮತ್ತು ಐಶ್ವರ್ಯವಂತನಾಗಿದ್ದನು. 3ಅವನು ಯೇಸು ಹೇಗಿದ್ದಾನೆಂದು ನೋಡಲು ಅಪೇಕ್ಷಿಸಿದರೂ ತಾನು ಕುಳ್ಳನಾಗಿದ್ದುದರಿಂದ, ಜನರ ಗುಂಪಿನ ನಿಮಿತ್ತ ನೋಡಲಾರದೆ ಹೋದನು. 4ಆದಕಾರಣ ಆತನನ್ನು ನೋಡುವುದಕ್ಕಾಗಿ ಮುಂದೆ ಓಡಿಹೋಗಿ ಆತನು ಬರುತ್ತಿರುವ ಮಾರ್ಗದಲ್ಲಿದ್ದ ಆಲದ ಮರವನ್ನು ಹತ್ತಿದನು. 5ಯೇಸು ಅಲ್ಲಿಗೆ ಬಂದು ಮೇಲಕ್ಕೆ ನೋಡಿ, “ಜಕ್ಕಾಯನೇ, ತಟ್ಟನೆ ಇಳಿದು ಬಾ, ನಾನು ಈಹೊತ್ತು ನಿನ್ನ ಮನೆಯಲ್ಲಿ ಉಳಿದುಕೊಳ್ಳಬೇಕು” ಎಂದು ಅವನಿಗೆ ಹೇಳಲು, 6ಅವನು ತಕ್ಷಣ ಇಳಿದು ಬಂದು ಆತನನ್ನು ಸಂತೋಷದಿಂದ ಬರಮಾಡಿಕೊಂಡನು. 7ಇದನ್ನು ನೋಡಿದವರೆಲ್ಲರು, “ಈತನು ಪಾಪಿಯಾಗಿರುವವನ ಬಳಿಯಲ್ಲಿ ಉಳಿದುಕೊಳ್ಳುವುದಕ್ಕೆ ಹೋಗಿದ್ದಾನೆ” ಎಂದು ಗೊಣಗುಟ್ಟಿದರು. 8ಆದರೆ ಜಕ್ಕಾಯನು ನಿಂತುಕೊಂಡು “ಕರ್ತನಿಗೆ, ಕರ್ತನೇ, ನೋಡು, ನನ್ನ ಆಸ್ತಿಯಲ್ಲಿ ಅರ್ಧವನ್ನು ಬಡವರಿಗೆ ಕೊಡುತ್ತೇನೆ ಮತ್ತು ನಾನು ಅನ್ಯಾಯವಾಗಿ ಯಾರಿಂದ ಏನಾದರೂ ಕಿತ್ತುಕೊಂಡಿದ್ದೇಯಾದರೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ” ಎಂದು ಹೇಳಿದನು. 9ಇದನ್ನು ಕೇಳಿ ಯೇಸು, “ಈಹೊತ್ತು ಈ ಮನೆಗೆ ರಕ್ಷಣೆಯಾಯಿತು. ಇವನು ಸಹ ಅಬ್ರಹಾಮನ ವಂಶದವನಲ್ಲವೇ. 10ಮನುಷ್ಯಕುಮಾರನು ದಾರಿತಪ್ಪಿ ಹೋದದ್ದನ್ನು ಹುಡುಕಿ ರಕ್ಷಿಸುವುದಕ್ಕೆ ಬಂದನು” ಎಂದು ಹೇಳಿದನು.
ಹತ್ತು ಚಿನ್ನದ ನಾಣ್ಯದ ಸಾಮ್ಯ
ಮತ್ತಾ 25:14-30
11ಜನರು ಈ ಮಾತುಗಳನ್ನು ಕೇಳುತ್ತಿರಲಾಗಿ ಯೇಸು ತಾನು ಯೆರೂಸಲೇಮಿಗೆ ಸಮೀಪವಾಗಿದ್ದದರಿಂದಲೂ ದೇವರ ರಾಜ್ಯವು ಕೂಡಲೆ ಪ್ರತ್ಯಕ್ಷವಾಗುವ ಹಾಗಿದೆ ಎಂದು ಅವರು ಭಾವಿಸಿದ್ದರಿಂದಲೂ ಇನ್ನೂ ಒಂದು ಸಾಮ್ಯವನ್ನು ಅವರಿಗೆ ಹೇಳಿದನು. 12ಅದೇನೆಂದರೆ, “ಶ್ರೀಮಂತನಾದ ಒಬ್ಬ ಮನುಷ್ಯನು ತಾನು ರಾಜ್ಯಾಧಿಕಾರವನ್ನು ಪಡೆದುಕೊಂಡು ಬರಬೇಕೆಂದು ದೂರದೇಶಕ್ಕೆ ಹೊರಟನು. 13ಹೊರಡುವಾಗ ತನ್ನ ಆಳುಗಳಲ್ಲಿ ಹತ್ತು ಮಂದಿಯನ್ನು ಕರೆದು ಅವರಿಗೆ ಹತ್ತು ಚಿನ್ನದ ನಾಣ್ಯಗಳನ್ನು ಕೊಟ್ಟು, ‘ನಾನು ಬರುವ ತನಕ ವ್ಯಾಪಾರಮಾಡಿಕೊಂಡಿರಿ’ ಎಂದು ಹೇಳಿ ಹೊರಟು ಹೋದನು. 14ಆದರೆ ಅವನ ಪಟ್ಟಣದ ನಿವಾಸಿಗಳು ಅವನನ್ನು ದ್ವೇಷಿಸಿ ಅವನ ಹಿಂದೆ ರಾಯಭಾರಿಗಳನ್ನು ಕಳುಹಿಸಿ ‘ನೀನು ನಮ್ಮ ಮೇಲೆ ದೊರೆತನಮಾಡುವುದು ನಮಗೆ ಇಷ್ಟವಿಲ್ಲ’ ಎಂದು ಹೇಳಿಸಿದರು. 15ಆ ಮೇಲೆ ಅವನು ರಾಜ್ಯಾಧಿಕಾರವನ್ನು ಪಡೆದುಕೊಂಡು ಹಿಂತಿರುಗಿ ಬಂದು, ತಾನು ಹಣವನ್ನು ಕೊಟ್ಟಿದ್ದ ಆಳುಗಳು ವ್ಯಾಪಾರದಿಂದ ಎಷ್ಟೆಷ್ಟು ಲಾಭ ಸಂಪಾದಿಸಿಕೊಂಡಿದ್ದಾರೆಂದು ತಿಳಿದುಕೊಳ್ಳುವುದಕ್ಕಾಗಿ, ಅವರನ್ನು ತನ್ನ ಬಳಿಗೆ ಕರೆಯಿಸಿದನು. 16ಮೊದಲನೆಯವನು ಆತನ ಮುಂದೆ ಬಂದು, ‘ದೊರೆಯೇ, ನೀನು ಕೊಟ್ಟ ನಾಣ್ಯಗಳಿಂದ ಇನ್ನೂ ಹತ್ತು ನಾಣ್ಯಗಳು ಸಂಪಾದನೆಯಾದವು’ ಅನ್ನಲು, 17ಅವನು ಅವನಿಗೆ, ‘ಭಲಾ! ನೀನು ಒಳ್ಳೆಯ ಆಳು, ನೀನು ಬಹು ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾಗಿದ್ದರಿಂದ ಹತ್ತು ಗ್ರಾಮಗಳ ಮೇಲೆ ಅಧಿಕಾರಿಯಾಗಿರು’ ಎಂದು ಹೇಳಿದನು. 18ಎರಡನೆಯವನು ಬಂದು, ‘ದೊರೆಯೇ, ನೀನು ಕೊಟ್ಟ ನಾಣ್ಯಗಳಿಂದ ಇನ್ನೂ ಐದು ನಾಣ್ಯಗಳು ದೊರಕಿದವು’ ಅನ್ನಲು, 19ಅವನು ಆ ಆಳಿಗೆ, ‘ನೀನು ಸಹ ಐದು ಗ್ರಾಮಗಳ ಮೇಲೆ ಅಧಿಕಾರಿಯಾಗಿರು’ ಎಂದು ಹೇಳಿದನು. 20-21ಬಳಿಕ ಮತ್ತೊಬ್ಬನು ಬಂದು, ‘ದೊರೆಯೇ, ಇಗೋ ನೀನು ಕೊಟ್ಟ ನಾಣ್ಯ. ನೀನು ಇಡದೆಯಿರುವುದನ್ನು ಎತ್ತಿಕೊಂಡು ಹೋಗುವವನು, ಬಿತ್ತದೆಯಿರುವುದನ್ನು ಕೊಯ್ಯುವ ಕಠಿಣ ಮನುಷ್ಯನು ಎಂದು ನಿನಗೆ ಹೆದರಿಕೊಂಡು ಇದನ್ನು ವಸ್ತ್ರದಲ್ಲಿ ಕಟ್ಟಿ ಇಟ್ಟುಕೊಂಡೆನು’ ಅಂದನು. 22ಅದಕ್ಕೆ ಅವನು, ‘ನೀನು ಕೆಟ್ಟ ಆಳು, ನಿನ್ನ ಮಾತಿನ ಮೇಲೆಯೇ ನಿನಗೆ ತೀರ್ಪುಮಾಡುತ್ತೇನೆ. ನಾನು ಇಡದೆಯಿರುವುದನ್ನು ಎತ್ತಿಕೊಂಡು ಹೋಗುವವನು, ಬಿತ್ತದೆಯಿರುವುದನ್ನು ಕೊಯ್ಯುವ ಉಗ್ರವಾದ ಮನುಷ್ಯನು ಎಂದು ತಿಳಿದಿರುವೆಯಾ? 23ಹಾಗಾದರೆ ನೀನು ನನ್ನ ಹಣವನ್ನು ಬಡ್ಡಿಗೆ ಯಾಕೆ ಕೊಡಲಿಲ್ಲ? ಆ ಮೇಲೆ ನಾನು ಬಂದು ಅದನ್ನು ಬಡ್ಡಿ ಸಹಿತ ತೆಗೆದುಕೊಳ್ಳುತ್ತಿದ್ದೆನು’ ಎಂದು ಹೇಳಿ, 24ಹತ್ತಿರ ನಿಂತಿದ್ದವರಿಗೆ, ‘ಆ ನಾಣ್ಯವನ್ನು ಅವನಿಂದ ತೆಗೆದುಕೊಂಡು ಹತ್ತು ಚಿನ್ನದ ನಾಣ್ಯಗಳುಳ್ಳವನಿಗೆ ಕೊಡಿರಿ’ ಎಂದು ಹೇಳಿದನು. 25ಅವರು, ‘ದೊರೆಯೇ, ಹತ್ತು ನಾಣ್ಯಗಳು ಅವನಲ್ಲಿ ಅವೆಯಲ್ಲಾ’ ಎಂದು ಅವನಿಗೆ ಹೇಳಿದರು. 26ಅದಕ್ಕವನು, ‘ಇದ್ದವರಿಗೆಲ್ಲಾ ಕೊಡಲ್ಪಡುವುದು, ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವುದು’ ಎಂದು ನಾನು ನಿಮಗೆ ಹೇಳುತ್ತೇನೆ 27ಮತ್ತು ತಮ್ಮ ಮೇಲೆ ನಾನು ದೊರೆತನ ಮಾಡುವುದು ಇಷ್ಟವಿಲ್ಲವೆಂದು ಹೇಳಿದ ಆ ನನ್ನ ವೈರಿಗಳನ್ನು ಇಲ್ಲಿಗೆ ತಂದು ನನ್ನ ಮುಂದೆ ಸಂಹಾರ ಮಾಡಿರಿ” ಅಂದನು.
ಯೇಸು ಅರಸನಂತೆ ಯೆರೂಸಲೇಮಿಗೆ ಪ್ರವೇಶಮಾಡಿದ್ದು
ಮತ್ತಾ 21:1-11; ಮಾರ್ಕ 11:1-11; ಯೋಹಾ 12:12-19
28ಯೇಸು ಈ ಮಾತುಗಳನ್ನು ಹೇಳಿದ ಮೇಲೆ ಗಟ್ಟಾ ಹತ್ತಿ ಯೆರೂಸಲೇಮಿಗೆ ಮುಂದಾಗಿ ಹೋದನು.
29ಅನಂತರ ಆತನು ಎಣ್ಣೆಮರಗಳ ಗುಡ್ಡ ಎನಿಸಿಕೊಳ್ಳುವ ಗುಡ್ಡದ ಬಳಿಯಲ್ಲಿರುವ ಬೇತ್ಫಗೆಗೂ ಬೇಥಾನ್ಯಕ್ಕೂ ಸಮೀಪಿಸಿದಾಗ ಶಿಷ್ಯರಲ್ಲಿ ಇಬ್ಬರನ್ನು ಕರೆದು, 30“ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ, ಅದರೊಳಗೆ ಹೋಗುತ್ತಿರುವಾಗಲೇ ಅಲ್ಲಿ ಕಟ್ಟಿರುವ ಒಂದು ಕತ್ತೆಮರಿಯನ್ನು ಕಾಣುವಿರಿ. ಇದುವರೆಗೆ ಅದರ ಮೇಲೆ ಯಾರೂ ಹತ್ತಿರುವುದಿಲ್ಲ, ಅದನ್ನು ಬಿಚ್ಚಿ ಕರೆತನ್ನಿರಿ. 31ಯಾವನಾದರೂ ನಿಮ್ಮನ್ನು ‘ಮರಿಯನ್ನು ಯಾಕೆ ಬಿಚ್ಚುತ್ತೀರಿ?’ ಎಂದು ಕೇಳಿದರೆ ‘ಇದು ಕರ್ತನಿಗೆ ಬೇಕಾಗಿದೆ ಅನ್ನಿರಿ’” ಎಂದು ಹೇಳಿಕಳುಹಿಸಿದನು. 32ಕಳುಹಿಸಲ್ಪಟ್ಟವರು ಹೋಗಿ ಆತನು ತಮಗೆ ಹೇಳಿದಂತೆಯೇ ಕಂಡರು. 33ಅವರು ಆ ಕತ್ತೆಮರಿಯನ್ನು ಬಿಚ್ಚುತ್ತಿರುವಾಗ ಅದರ ಯಜಮಾನನು, “ಈ ಮರಿಯನ್ನು ಯಾಕೆ ಬಿಚ್ಚುತ್ತೀರಿ?” ಎಂದು ಅವರನ್ನು ಕೇಳಿದ್ದಕ್ಕೆ 34ಅವರು, “ಇದು ಕರ್ತನಿಗೆ ಬೇಕಾಗಿದೆ” ಎಂದು ಹೇಳಿದರು. 35ಅದನ್ನು ಯೇಸುವಿನ ಬಳಿಗೆ ತಂದು ತಮ್ಮ ಬಟ್ಟೆಗಳನ್ನು ಆ ಕತ್ತೆಮರಿಯ ಮೇಲೆ ಹಾಕಿ ಯೇಸುವನ್ನು ಕುಳ್ಳಿರಿಸಿದರು. 36ಆತನು ಹೋಗುತ್ತಿರುವಾಗ ಅವರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು. 37ಆತನು ಪಟ್ಟಣವನ್ನು ಸಮೀಪಿಸಿ ಎಣ್ಣೆಮರಗಳ ಗುಡ್ಡದಿಂದ ಇಳಿಯುವ ಸ್ಥಳಕ್ಕೆ ಬಂದಾಗ ಶಿಷ್ಯರ ಗುಂಪೆಲ್ಲಾ ಸಂತೋಷಪಡುತ್ತಾ ತಾವು ಕಂಡಿದ್ದ ಎಲ್ಲಾ ಮಹತ್ಕಾರ್ಯಗಳ ವಿಷಯದಲ್ಲಿ,
38“ಕರ್ತನ ಹೆಸರಿನಲ್ಲಿ ಬರುವ ಅರಸನಿಗೆ ಆಶೀರ್ವಾದ,
ಪರಲೋಕದಲ್ಲಿ ಸಮಾಧಾನ,
ಮೇಲಣಲೋಕಗಳಲ್ಲಿ ಮಹಿಮೆ”
ಎಂದು ಮಹಾ ಶಬ್ದದಿಂದ ದೇವರನ್ನು ಕೊಂಡಾಡುವುದಕ್ಕೆ ತೊಡಗಿದರು.
39ಜನರ ಗುಂಪಿನೊಳಗಿದ್ದ ಫರಿಸಾಯರಲ್ಲಿ ಕೆಲವರು ಆತನಿಗೆ, “ಬೋಧಕನೇ, ನಿನ್ನ ಶಿಷ್ಯರನ್ನು ಗದರಿಸು” ಎಂದು ಹೇಳಿದ್ದಕ್ಕೆ, 40ಆತನು, “ಇವರು ಸುಮ್ಮನಾದರೆ ಈ ಕಲ್ಲುಗಳೇ ಕೂಗುವವು” ಎಂದು ನಿಮಗೆ ಹೇಳುತ್ತೇನೆ ಅಂದನು.
41ತರುವಾಯ ಆತನು ಯೆರೂಸಲೇಮ್ ಪಟ್ಟಣದ ಸಮೀಪಕ್ಕೆ ಬಂದಾಗ ಆ ಪಟ್ಟಣವನ್ನು ನೋಡಿ ಅದರ ವಿಷಯವಾಗಿ ಕಣ್ಣೀರಿಡುತ್ತಾ, 42“ನೀನಾದರೂ ಸಮಾಧಾನಕ್ಕೆ ಬೇಕಾದದ್ದನ್ನು ಇದೇ ದಿನದಲ್ಲಿ ತಿಳಿದುಕೊಂಡಿದ್ದರೆ ಎಷ್ಟೋ ಒಳ್ಳೆಯದು. ಆದರೆ ಈಗ ಅದು ನಿನ್ನ ಕಣ್ಣಿಗೆ ಮರೆಯಾಗಿದೆ. 43-44ದೇವರು ನಿನಗೆ ದರ್ಶನಕೊಟ್ಟ ಸಮಯವನ್ನು ನೀನು ತಿಳಿದುಕೊಳ್ಳಲಿಲ್ಲವಾದ್ದರಿಂದ, ನಿನ್ನ ವೈರಿಗಳು ನಿನ್ನ ಸುತ್ತಲೂ ಒಡ್ದುಕಟ್ಟಿ, ಮುತ್ತಿಗೆ ಹಾಕಿ, ಎಲ್ಲಾ ಕಡೆಗಳಿಂದ ನಿನ್ನನ್ನು ಒಂದುಗೂಡಿಸಿ, ನಿನ್ನನ್ನೂ ನಿನ್ನೊಳಗಿರುವ ನಿನ್ನ ಜನರನ್ನೂ ನಿರ್ಮೂಲಮಾಡಿ, ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವ ದಿನಗಳು ನಿನ್ನ ಮೇಲೆ ಬರುವವು” ಅಂದನು.
ಯೇಸು ದೇವಾಲಯಕ್ಕೆ ಹೋದದ್ದು
45ಬಳಿಕ ಆತನು ದೇವಾಲಯಕ್ಕೆ ಹೋಗಿ ವ್ಯಾಪಾರಮಾಡುವವರನ್ನು ಹೊರಹಾಕುವುದಕ್ಕೆ ಪ್ರಾರಂಭಿಸಿ ಅವರಿಗೆ, 46“‘ನನ್ನ ಆಲಯವು ಪ್ರಾರ್ಥನಾಲಯವಾಗಿರುವುದು’ ಎಂದು ಬರೆಯಲ್ಪಟ್ಟಿದೆಯಲ್ಲಾ, ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ” ಎಂದು ಹೇಳಿ ಅವರನ್ನು ಹೊರಗೆ ಅಟ್ಟಿದನು. 47ಅಲ್ಲದೆ ಆತನು ಪ್ರತಿದಿನ ದೇವಾಲಯದಲ್ಲಿ ಬಂದು ಬೋಧನೆ ಮಾಡುತ್ತಿದ್ದನು. ಅಷ್ಟರಲ್ಲಿ ಮುಖ್ಯಯಾಜಕರೂ, ಶಾಸ್ತ್ರಿಗಳೂ, ಪ್ರಜೆಗಳಲ್ಲಿ ನಾಯಕರೂ ಆತನನ್ನು ಕೊಲ್ಲುವುದಕ್ಕೆ ಸಂದರ್ಭನೋಡುತ್ತಿದ್ದರು. 48ಆದರೆ ಜನರೆಲ್ಲರು ಆತನ ಹತ್ತಿರದಲ್ಲಿದ್ದುಕೊಂಡು ಬೋಧನೆಯನ್ನು ಗಮನಿಸಿ ಕೇಳುತ್ತಿದ್ದುದರಿಂದ ಏನು ಮಾಡಬೇಕೆಂದು ಅವರಿಗೆ ತಿಳಿಯಲಿಲ್ಲ.
Currently Selected:
ಲೂಕ 19: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.