YouVersion Logo
Search Icon

ಆದಿಕಾಂಡ 22

22
ಅಬ್ರಹಾಮನಿಗೆ ಪರೀಕ್ಷೆ
1ಕೆಲವು ಕಾಲದ ನಂತರ, ದೇವರು ಅಬ್ರಹಾಮನನ್ನು ಪರೀಕ್ಷಿಸುವುದಕ್ಕಾಗಿ ಅವನಿಗೆ, “ಅಬ್ರಹಾಮನೇ,” ಎಂದು ಕರೆದರು.
ಅದಕ್ಕವನು, “ಇಗೋ, ಇಲ್ಲಿದ್ದೇನೆ,” ಎಂದು ಉತ್ತರಕೊಟ್ಟನು.
2ಆಗ ದೇವರು, “ನೀನು ಪ್ರೀತಿ ಮಾಡುವ ನಿನ್ನ ಒಬ್ಬನೇ ಮಗ ಇಸಾಕನನ್ನು ಈಗ ತೆಗೆದುಕೊಂಡು, ಮೊರೀಯಾ ದೇಶಕ್ಕೆ ಹೋಗಿ, ಅಲ್ಲಿ ನಾನು ನಿನಗೆ ಹೇಳುವ ಒಂದು ಬೆಟ್ಟದ ಮೇಲೆ ಅವನನ್ನು ದಹನಬಲಿಯಾಗಿ ಅರ್ಪಿಸು,” ಎಂದರು.
3ಅಬ್ರಹಾಮನು ಬೆಳಿಗ್ಗೆ ಎದ್ದು, ತನ್ನ ಕತ್ತೆಗೆ ತಡಿ ಕಟ್ಟಿ, ತನ್ನ ಸೇವಕರಲ್ಲಿ ಇಬ್ಬರನ್ನೂ, ತನ್ನ ಮಗ ಇಸಾಕನನ್ನೂ, ದಹನಬಲಿಗಳಿಗಾಗಿ ಕಟ್ಟಿಗೆಗಳನ್ನೂ ತೆಗೆದುಕೊಂಡು, ದೇವರು ತನಗೆ ಹೇಳಿದ ಸ್ಥಳಕ್ಕೆ ಹೋದನು. 4ಮೂರನೆಯ ದಿನ ಅಬ್ರಹಾಮನು ಕಣ್ಣೆತ್ತಿ ನೋಡಿದಾಗ, ಆ ಸ್ಥಳವು ದೂರದಲ್ಲಿ ಕಾಣಿಸಿತು. 5ಅಬ್ರಹಾಮನು ತನ್ನ ಸೇವಕರಿಗೆ, “ಕತ್ತೆಯ ಸಂಗಡ ಇಲ್ಲಿಯೇ ಇರಿ. ನಾನೂ, ಹುಡುಗನೂ ಅಲ್ಲಿಗೆ ಹೋಗಿ, ಆರಾಧನೆ ಮಾಡಿ, ನಿಮ್ಮ ಬಳಿಗೆ ಹಿಂದಿರುಗಿ ಬರುತ್ತೇವೆ,” ಎಂದನು.
6ಅಬ್ರಹಾಮನು ದಹನಬಲಿಗಳ ಕಟ್ಟಿಗೆಗಳನ್ನು ತೆಗೆದುಕೊಂಡು, ತನ್ನ ಮಗ ಇಸಾಕನ ಮೇಲೆ ಹೊರಿಸಿ; ಬೆಂಕಿಯನ್ನೂ, ಕತ್ತಿಯನ್ನೂ ತನ್ನ ಕೈಯಲ್ಲಿ ತೆಗೆದುಕೊಂಡನು. ಅವರಿಬ್ಬರೂ ಹೊರಟು ಹೋದರು. 7ಇಸಾಕನು ತನ್ನ ತಂದೆ ಅಬ್ರಹಾಮನಿಗೆ, “ಅಪ್ಪಾ,” ಎಂದನು.
ಆಗ ಅಬ್ರಹಾಮನು, “ಏನು ಮಗನೇ?” ಎಂದನು.
ಅದಕ್ಕೆ ಅವನು, “ಇಗೋ, ಬೆಂಕಿಯೂ, ಕಟ್ಟಿಗೆಯೂ ಇವೆ, ಆದರೆ ದಹನಬಲಿಗೋಸ್ಕರ ಕುರಿಮರಿಯು ಎಲ್ಲಿ?” ಎಂದನು.
8ಅಬ್ರಹಾಮನು, “ನನ್ನ ಮಗನೇ, ದೇವರೇ ದಹನಬಲಿಗೋಸ್ಕರ ಕುರಿಮರಿಯನ್ನು ಒದಗಿಸುವರು,” ಎಂದು ಉತ್ತರಕೊಟ್ಟನು. ಹೀಗೆ ಅವರಿಬ್ಬರೂ ಜೊತೆಯಲ್ಲಿ ಹೋದರು.
9ದೇವರು ಅವನಿಗೆ ಹೇಳಿದ ಸ್ಥಳಕ್ಕೆ ಬಂದಾಗ, ಅಬ್ರಹಾಮನು ಅಲ್ಲಿ ಬಲಿಪೀಠವನ್ನು ಕಟ್ಟಿ, ಕಟ್ಟಿಗೆಗಳನ್ನು ಅದರ ಮೇಲೆ ಕ್ರಮವಾಗಿ ಜೋಡಿಸಿ, ತನ್ನ ಮಗ ಇಸಾಕನನ್ನು ಕಟ್ಟಿ, ಬಲಿಪೀಠದ ಮೇಲೆ ಇದ್ದ ಕಟ್ಟಿಗೆಗಳ ಮೇಲೆ ಇಟ್ಟನು. 10ಅಬ್ರಹಾಮನು ಕೈಚಾಚಿ ತನ್ನ ಮಗನನ್ನು ಕೊಲ್ಲುವುದಕ್ಕೆ ಕತ್ತಿ ತೆಗೆದುಕೊಂಡನು. 11ಆಗ ಯೆಹೋವ ದೇವರ ದೂತನು ಆಕಾಶದೊಳಗಿಂದ, “ಅಬ್ರಹಾಮನೇ, ಅಬ್ರಹಾಮನೇ,” ಎಂದು ಅವನನ್ನು ಕರೆದನು.
ಅವನು, “ಇಲ್ಲಿ ಇದ್ದೇನೆ,” ಎಂದನು.
12ಯೆಹೋವ ದೇವರ ದೂತನು ಅಬ್ರಹಾಮನಿಗೆ, “ಹುಡುಗನ ಮೇಲೆ ಕೈ ಹಾಕಬೇಡ; ಅವನಿಗೆ ಏನೂ ಮಾಡಬೇಡ; ಏಕೆಂದರೆ ನೀನು ದೇವರಿಗೆ ಭಯಪಡುತ್ತೀ ಎಂದು ಈಗ ನಾನು ತಿಳಿದಿದ್ದೇನೆ. ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಅರ್ಪಿಸುವುದಕ್ಕೆ ಹಿಂಜರಿಯಲಿಲ್ಲ,” ಎಂದು ಹೇಳಿದನು.
13ಅಬ್ರಹಾಮನು ಕಣ್ಣೆತ್ತಿ ನೋಡಿದಾಗ, ಅವನ ಹಿಂದೆ ಒಂದು ಟಗರು ಕೊಂಬುಗಳಿಂದ ಪೊದೆಯಲ್ಲಿ ಸಿಕ್ಕಿಕೊಂಡಿತ್ತು. ಅಬ್ರಹಾಮನು ಹೋಗಿ ಆ ಟಗರನ್ನು ತೆಗೆದುಕೊಂಡು, ಅದನ್ನು ತನ್ನ ಮಗನಿಗೆ ಬದಲಾಗಿ ದಹನಬಲಿಯಾಗಿ ಅರ್ಪಿಸಿದನು. 14ಅಬ್ರಹಾಮನು ಆ ಸ್ಥಳಕ್ಕೆ ಯೆಹೋವ ಯೀರೆ#22:14 ಅಥವಾ ಯೆಹೋವ ದೇವರು ಒದಗಿಸುವರು ಎಂದು ಹೆಸರಿಟ್ಟನು. “ಯೆಹೋವ ದೇವರು ಪರ್ವತದ ಮೇಲೆ ಒದಗಿಸುವರು,” ಎಂದು ಇಂದಿನವರೆಗೂ ಜನರು ಹೇಳುತ್ತಾರೆ.
15ಯೆಹೋವ ದೇವರ ದೂತನು ಆಕಾಶದೊಳಗಿಂದ ಎರಡನೆಯ ಸಾರಿ ಅಬ್ರಹಾಮನನ್ನು ಕರೆದು ಅವನಿಗೆ, 16“ನೀನು ಈ ಕಾರ್ಯವನ್ನು ಮಾಡಿ, ನಿನ್ನ ಒಬ್ಬನೇ ಮಗನನ್ನು ಸಹ ನನಗೆ ಕೊಡುವುದಕ್ಕೆ ಹಿಂಜರಿಯದೆ ಇದ್ದುದರಿಂದ, ಯೆಹೋವ ದೇವರಾದ ನಾನು ನಿನಗೆ ಪ್ರಮಾಣವಾಗಿ ಹೇಳುವುದೇನಂದರೆ, 17ನಿಶ್ಚಯವಾಗಿ ನಾನು ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೆನು. ನಿನ್ನ ಸಂತಾನವನ್ನು ಆಕಾಶದ ನಕ್ಷತ್ರಗಳ ಹಾಗೆಯೂ ಸಮುದ್ರದ ತೀರದಲ್ಲಿರುವ ಮರಳಿನ ಹಾಗೆಯೂ ಹೆಚ್ಚಿಸುವೆನು. ನಿನ್ನ ಸಂತಾನದವರು ತಮ್ಮ ಶತ್ರುಗಳ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು. 18ನೀನು ನನಗೆ ವಿಧೇಯನಾದದ್ದರಿಂದ, ನಿನ್ನ ಸಂತತಿಯ ಮೂಲಕ ಭೂಲೋಕದ ಎಲ್ಲಾ ಜನಾಂಗಗಳಿಗೂ ಆಶೀರ್ವಾದ ಉಂಟಾಗುವುದು,” ಎಂದರು.
19ತರುವಾಯ ಅಬ್ರಹಾಮನು ತನ್ನ ಸೇವಕರ ಬಳಿಗೆ ಹಿಂದಿರುಗಿ ಬಂದನು. ಅವರೆಲ್ಲರೂ ಬೇರ್ಷೆಬಕ್ಕೆ ಹೋದರು. ಅಬ್ರಹಾಮನು ಬೇರ್ಷೆಬದಲ್ಲಿ ವಾಸಿಸಿದನು.
ನಾಹೋರನ ಮಕ್ಕಳು
20ಕೆಲ ಸಮಯದ ನಂತರ ಕೆಲವರು ಅಬ್ರಹಾಮನಿಗೆ, “ಮಿಲ್ಕಾಳು ತಾಯಾಗಿದ್ದಾಳೆ. ನಿನ್ನ ಸಹೋದರ ನಾಹೋರನಿಗೆ ಅವಳು ಮಕ್ಕಳನ್ನು ಹೆತ್ತಿದ್ದಾಳೆ,” ಎಂದು ತಿಳಿಸಿದರು.
21ಅವರು ಯಾರೆಂದರೆ, ಅವನ ಚೊಚ್ಚಲು ಮಗ ಊಚ್, ಅವನ ಸಹೋದರ ಬೂಜ್,
ಅರಾಮನ ತಂದೆ ಕೆಮೂಯೇಲ್,
22ಕೆಸೆದ್, ಹಜೋ, ಪಿಲ್ದಾಷ್, ಇದ್ಲಾಫ್, ಬೆತೂಯೇಲ್.
23ಬೆತೂಯೇಲನಿಂದ ರೆಬೆಕ್ಕಳು ಹುಟ್ಟಿದಳು.
ಈ ಎಂಟು ಮಂದಿಯನ್ನು ಮಿಲ್ಕಾಳು ಅಬ್ರಹಾಮನ ಸಹೋದರ ನಾಹೋರನಿಗೆ ಹೆತ್ತಳು.
24ಅವನ ಉಪಪತ್ನಿ ರೂಮಳೆಂಬವಳು ಸಹ
ಟೆಬಹ, ಗಹಮ, ತಹಷ, ಮಾಕಾ ಎಂಬುವರನ್ನು ಹೆತ್ತಳು.

Highlight

Share

Copy

None

Want to have your highlights saved across all your devices? Sign up or sign in