YouVersion Logo
Search Icon

ಯೋಹಾನ 15

15
ದ್ರಾಕ್ಷಿಯ ಬಳ್ಳಿ ಮತ್ತು ಕವಲುಬಳ್ಳಿಗಳು
1“ನಾನೇ ನಿಜವಾದ ದ್ರಾಕ್ಷಿಯ ಬಳ್ಳಿ, ನನ್ನ ತಂದೆಯೇ ತೋಟಗಾರರು. 2ನನ್ನಲ್ಲಿದ್ದು ಫಲವನ್ನು ಕೊಡದ ಪ್ರತಿಯೊಂದು ಕವಲುಬಳ್ಳಿಯನ್ನು ತಂದೆ ಮೇಲಕ್ಕೆ ಎತ್ತಿಡುವರು. ಆದರೆ ಫಲಕೊಡುವ ಪ್ರತಿಯೊಂದು ಕವಲುಬಳ್ಳಿಯು ಹೆಚ್ಚು ಫಲಕೊಡುವಂತೆ ಅದನ್ನು ಕತ್ತರಿಸಿ ಶುದ್ಧ ಮಾಡುತ್ತಾರೆ. 3ನಾನು ನಿಮಗೆ ಹೇಳಿದ ವಾಕ್ಯದ ದೆಸೆಯಿಂದ ನೀವು ಈಗ ಶುದ್ಧರಾಗಿದ್ದೀರಿ. 4ನಾನು ನಿಮ್ಮಲ್ಲಿ ನೆಲೆಗೊಂಡಿರುವ ಹಾಗೇ ನನ್ನಲ್ಲಿ ನೆಲೆಗೊಂಡಿರಿ. ಕವಲುಬಳ್ಳಿಯು ದ್ರಾಕ್ಷಿಯ ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲ ಕೊಡಲಾರದೋ ಹಾಗೆಯೇ ನೀವೂ ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ.
5“ನಾನೇ ದ್ರಾಕ್ಷಿಯ ಬಳ್ಳಿ, ನೀವು ಕವಲುಬಳ್ಳಿಗಳು. ನೀವು ನನ್ನಲ್ಲಿ ಮತ್ತು ನಾನು ನಿಮ್ಮಲ್ಲಿ ನೆಲೆಗೊಂಡಿದ್ದರೆ ನೀವು ಬಹಳ ಫಲಕೊಡುವಿರಿ. ಏಕೆಂದರೆ ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ. 6ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ನೀವು ಎಸೆಯಲಾದ ಕವಲುಬಳ್ಳಿಯಂತೆ ಒಣಗಿ ಹೋಗುವಿರಿ. ಜನರು ಅವುಗಳನ್ನು ಕೂಡಿಸಿ ಬೆಂಕಿಯೊಳಗೆ ಹಾಕುವರು ಮತ್ತು ಅವುಗಳನ್ನು ಸುಟ್ಟುಹಾಕಲಾಗುವುದು. 7ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನೀವು ಬಯಸುವ ಯಾವುದನ್ನಾದರೂ ಬೇಡಿಕೊಳ್ಳಿರಿ. ಅದು ನಿಮ್ಮದಾಗುವುದು. 8ನೀವು ಬಹಳ ಫಲಕೊಡುವುದರಿಂದಲೇ ನನ್ನ ಶಿಷ್ಯರಾಗಿರುವಿರಿ, ಇದರಿಂದ ನನ್ನ ತಂದೆಗೆ ಮಹಿಮೆಯಾಗುವುದು.
9“ತಂದೆಯು ನನ್ನನ್ನು ಪ್ರೀತಿಸಿದ ಹಾಗೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ. ಈಗ ನೀವು ನನ್ನ ಪ್ರೀತಿಯಲ್ಲಿ ನೆಲೆಗೊಂಡಿರಿ. 10ನಾನು ನನ್ನ ತಂದೆಯ ಆಜ್ಞೆಗಳನ್ನು ಪಾಲಿಸಿ ಅವರ ಪ್ರೀತಿಯಲ್ಲಿ ನೆಲೆಗೊಂಡಿರುವಂತೆಯೇ ನೀವು ನನ್ನ ಆಜ್ಞೆಗಳನ್ನು ಪಾಲಿಸಿ ನಡೆದರೆ ನನ್ನ ಪ್ರೀತಿಯಲ್ಲಿ ನೆಲೆಗೊಳ್ಳುವಿರಿ. 11ನನ್ನ ಆನಂದವು ನಿಮ್ಮಲ್ಲಿ ಇರುವಂತೆಯೂ ಆ ನಿಮ್ಮ ಆನಂದವು ಪರಿಪೂರ್ಣವಾಗುವಂತೆಯೂ ನಾನು ಇವುಗಳನ್ನು ನಿಮಗೆ ಹೇಳಿದ್ದೇನೆ. 12ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದು ನನ್ನ ಆಜ್ಞೆಯಾಗಿದೆ. 13ಒಬ್ಬನು ತನ್ನ ಸ್ನೇಹಿತರಿಗಾಗಿ ತನ್ನ ಪ್ರಾಣವನ್ನೇ ಕೊಡುವ ಪ್ರೀತಿಗಿಂತ ಮಹತ್ತಾದದ್ದು ಯಾರಲ್ಲೂ ಇಲ್ಲ. 14ನಾನು ನಿಮಗೆ ಆಜ್ಞಾಪಿಸಿದ್ದನ್ನು ಪಾಲಿಸಿದರೆ ನೀವು ನನ್ನ ಸ್ನೇಹಿತರು. 15ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳೆಂದು ಕರೆಯುವುದಿಲ್ಲ. ಏಕೆಂದರೆ ತನ್ನ ಧಣಿಯು ಮಾಡುವಂಥದ್ದು ಆಳಿಗೆ ತಿಳಿಯುವುದಿಲ್ಲ. ಆದರೆ ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ. ಏಕೆಂದರೆ ನನ್ನ ತಂದೆಯಿಂದ ಕೇಳಿದ್ದನ್ನೆಲ್ಲಾ ನಾನು ನಿಮಗೆ ತಿಳಿಯಪಡಿಸಿದ್ದೇನೆ. 16ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವು ಹೋಗಿ ಫಲಕೊಡುವಂತೆಯೂ ನಿಮ್ಮ ಫಲವು ಸ್ಥಿರವಾಗಿರುವಂತೆಯೂ ನಾನು ನಿಮ್ಮನ್ನು ನೇಮಿಸಿದ್ದೇನೆ. ಹೀಗೆ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅವರು ನಿಮಗೆ ಕೊಡುವರು. 17ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆಯಾಗಿದೆ.
ಲೋಕವು ಶಿಷ್ಯರನ್ನು ದ್ವೇಷಿಸುತ್ತದೆ
18“ಲೋಕವು ನಿಮ್ಮನ್ನು ದ್ವೇಷಿಸಿದರೆ ನಿಮಗಿಂತ ಮೊದಲು ಅದು ನನ್ನನ್ನು ದ್ವೇಷಿಸಿತು ಎಂದು ನೀವು ತಿಳಿಯಿರಿ. 19ನೀವು ಲೋಕದವರಾಗಿದ್ದರೆ ಲೋಕವು ನಿಮ್ಮನ್ನು ಪ್ರೀತಿಸುತ್ತಿತ್ತು. ಆದರೆ ನೀವು ಲೋಕದವರಲ್ಲದೆ ಇರುವುದರಿಂದಲೂ ನಾನು ಲೋಕದೊಳಗಿಂದ ನಿಮ್ಮನ್ನು ಆರಿಸಿಕೊಂಡದ್ದರಿಂದಲೂ ಲೋಕವು ನಿಮ್ಮನ್ನು ದ್ವೇಷಿಸುತ್ತದೆ. 20‘ಧಣಿಗಿಂತ ಆಳು ದೊಡ್ಡವನಲ್ಲ,’#15:20 ಯೋಹಾನ 13:16 ಎಂದು ನಾನು ನಿಮಗೆ ಹೇಳಿದ ಮಾತನ್ನು ನೆನಪಿಗೆ ತಂದುಕೊಳ್ಳಿರಿ. ಅವರು ನನ್ನನ್ನು ಹಿಂಸಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು. ಅವರು ನನ್ನ ಮಾತನ್ನು ಅನುಸರಿಸಿದರೆ ನಿಮ್ಮ ಮಾತನ್ನು ಸಹ ಅನುಸರಿಸುವರು. 21ಆದರೆ ಅವರು ನನ್ನನ್ನು ಕಳುಹಿಸಿದ ತಂದೆಯನ್ನು ತಿಳಿಯದಿರುವುದರಿಂದಲೇ ನನ್ನ ಹೆಸರಿನ ನಿಮಿತ್ತ ಇವುಗಳನ್ನೆಲ್ಲಾ ನಿಮಗೆ ಮಾಡುವರು. 22ನಾನು ಬಂದು ಅವರೊಂದಿಗೆ ಮಾತನಾಡದಿದ್ದರೆ ಅವರಿಗೆ ಪಾಪವು ಇರುತ್ತಿರಲಿಲ್ಲ. ಆದರೆ ಈಗ ಅವರ ಪಾಪದ ವಿಷಯವಾಗಿ ಅವರಿಗೆ ನೆಪವಿಲ್ಲ. 23ನನ್ನನ್ನು ದ್ವೇಷಿಸುವವರು ನನ್ನ ತಂದೆಯನ್ನು ಸಹ ದ್ವೇಷಿಸುತ್ತಾರೆ. 24ಬೇರೆ ಯಾರೂ ಮಾಡದ ಕ್ರಿಯೆಗಳನ್ನು ನಾನು ಅವರ ನಡುವೆ ಮಾಡದೆ ಹೋಗಿದ್ದರೆ ಅವರಿಗೆ ಪಾಪವು ಇರುತ್ತಿರಲಿಲ್ಲ. ಆದರೆ ಈಗ ಅವರು ನನ್ನ ಕ್ರಿಯೆಗಳನ್ನು ಕಂಡೂ ನನ್ನನ್ನೂ ನನ್ನ ತಂದೆಯನ್ನೂ ದ್ವೇಷಮಾಡಿದ್ದಾರೆ. 25ಆದರೆ, ‘ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಮಾಡಿದರು,’ ಎಂದು ಅವರ ನಿಯಮದಲ್ಲಿ ಬರೆದಿರುವ ಮಾತು ನೆರವೇರುವಂತೆ ಹೀಗಾಯಿತು.#15:25 ಕೀರ್ತನೆ 35:19; 69:4
ಪವಿತ್ರಾತ್ಮ ದೇವರ ಕಾರ್ಯ
26“ಆದರೂ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಆ ಸಹಾಯಕರೊಬ್ಬರು ನಿಮ್ಮ ಬಳಿಗೆ ಬರುವರು. ಆಗ ತಂದೆಯಿಂದ ಬರುವ ಆ ಸತ್ಯದ ಆತ್ಮವಾಗಿರುವವರೇ ನನ್ನ ವಿಷಯವಾಗಿ ಸಾಕ್ಷಿಕೊಡುವರು. 27ನೀವು ಪ್ರಾರಂಭದಿಂದಲೂ ನನ್ನ ಸಂಗಡ ಇದ್ದುದರಿಂದ ನೀವು ಸಹ ನನಗೆ ಸಾಕ್ಷಿಗಳಾಗಿದ್ದೀರಿ.

Currently Selected:

ಯೋಹಾನ 15: KSB

Highlight

Share

Copy

None

Want to have your highlights saved across all your devices? Sign up or sign in