YouVersion Logo
Search Icon

ಯೋಹಾನ 3

3
ಯೇಸುವೂ ನಿಕೊದೇಮನೂ
1ಯೆಹೂದ್ಯರ ಆಡಳಿತ ಮಂಡಳಿಯ ಸದಸ್ಯನೂ ಫರಿಸಾಯನೂ ಆದ ನಿಕೊದೇಮನೆಂಬ ಮನುಷ್ಯನಿದ್ದನು. 2ಇವನು ಒಂದು ರಾತ್ರಿ ಯೇಸುವಿನ ಬಳಿಗೆ ಬಂದು, “ಗುರುವೇ, ನೀವು ದೇವರ ಬಳಿಯಿಂದ ಬಂದ ಬೋಧಕರೆಂದು ನಾವು ಬಲ್ಲೆವು. ಏಕೆಂದರೆ ದೇವರು ಒಬ್ಬನ ಸಂಗಡ ಇಲ್ಲದಿದ್ದರೆ ನೀವು ಮಾಡುವ ಸೂಚಕಕಾರ್ಯಗಳನ್ನು ಯಾವ ಮನುಷ್ಯನೂ ಮಾಡಲಾರನು,” ಎಂದನು.
3ಯೇಸು ಅವನಿಗೆ, “ಒಬ್ಬನು ಮತ್ತೊಮ್ಮೆ ಹುಟ್ಟದಿದ್ದರೆ#3:3 ಗ್ರೀಕ್ ಭಾಷೆಯಲ್ಲಿ ಮೇಲಿನಿಂದ ಎಂದಿದೆ. ಅವನು ದೇವರ ರಾಜ್ಯವನ್ನು ಕಾಣಲಾರನು, ಎಂದು ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ.”
4ನಿಕೊದೇಮನು ಯೇಸುವಿಗೆ, “ಒಬ್ಬನು ವಯಸ್ಸಾದ ಮೇಲೆ ಮತ್ತೆ ಹುಟ್ಟುವುದು ಹೇಗೆ? ಅವನು ತನ್ನ ತಾಯಿಯ ಗರ್ಭದಲ್ಲಿ ಎರಡನೆಯ ಸಾರಿ ಪ್ರವೇಶಿಸಿ ಹುಟ್ಟುವುದಾದೀತೇ?” ಎಂದು ಕೇಳಿದನು.
5ಯೇಸು ಅವನಿಗೆ, “ಯಾರು ನೀರಿನಿಂದಲೂ ಆತ್ಮದಿಂದಲೂ ಹುಟ್ಟುವದಿಲ್ಲವೋ ಅವನು ದೇವರ ರಾಜ್ಯದೊಳಗೆ ಪ್ರವೇಶಿಸಲಾರನು, ಎಂದು ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ. 6ಮಾಂಸದಿಂದ ಹುಟ್ಟಿದ್ದು ಮಾಂಸವೇ, ದೇವರಾತ್ಮದಿಂದ ಹುಟ್ಟಿದವರು ಆತ್ಮವೇ. 7‘ನೀವು ಮತ್ತೆ ಹುಟ್ಟಬೇಕಾಗಿದೆ,’ ಎಂದು ನಾನು ನಿನಗೆ ಹೇಳಿದ್ದರಿಂದ ಆಶ್ಚರ್ಯಪಡಬೇಡ. 8ಗಾಳಿಯು ಅದರ ಇಷ್ಟ ಬಂದ ಕಡೆ ಬೀಸುತ್ತದೆ. ನೀನು ಅದರ ಶಬ್ದವನ್ನು ಕೇಳುತ್ತೀ, ಆದರೆ ಅದು ಎಲ್ಲಿಂದ ಬರುತ್ತದೋ ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು. ಅದರಂತೆಯೇ ಆತ್ಮದಿಂದ ಹುಟ್ಟಿದ ಪ್ರತಿಯೊಬ್ಬರೂ ಹೀಗೇ ಇದ್ದಾರೆ,” ಎಂದು ಉತ್ತರಕೊಟ್ಟರು.
9ನಿಕೊದೇಮನು ಯೇಸುವಿಗೆ, “ಇದೆಲ್ಲಾ ಹೇಗೆ ಸಾಧ್ಯ?” ಎಂದು ಕೇಳಿದನು.
10ಯೇಸು ಅವನಿಗೆ, “ಇಸ್ರಾಯೇಲರಿಗೆ ಬೋಧಕನಾಗಿರುವ ನಿನಗೆ ಇವುಗಳು ತಿಳಿಯುವುದಿಲ್ಲವೋ? 11ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ನಾವು ತಿಳಿದಿರುವುದನ್ನು ಮಾತನಾಡುತ್ತೇವೆ ಮತ್ತು ಕಂಡಿದ್ದಕ್ಕೆ ಸಾಕ್ಷಿ ನೀಡುತ್ತೇವೆ. ನೀವಾದರೋ ನಮ್ಮ ಸಾಕ್ಷಿಯನ್ನು ಸ್ವೀಕರಿಸುವುದಿಲ್ಲ. 12ನಾನು ಭೂಲೋಕದ ಕಾರ್ಯಗಳನ್ನು ನಿಮಗೆ ಹೇಳುವಾಗಲೇ ನೀವು ನಂಬುವುದಿಲ್ಲ, ಪರಲೋಕದ ಕಾರ್ಯಗಳನ್ನು ಕುರಿತು ನಿಮಗೆ ಹೇಳಿದರೆ ಹೇಗೆ ನಂಬುವಿರಿ? 13ಪರಲೋಕದಿಂದ ಇಳಿದು ಬಂದ ಮನುಷ್ಯಪುತ್ರನಾದ ನನ್ನನ್ನು ಹೊರತು ಯಾರೂ ಪರಲೋಕಕ್ಕೆ ಏರಿ ಹೋದವರಿಲ್ಲ.#3:13 ಕೆಲವು ಹಸ್ತಪ್ರತಿಗಳಲ್ಲಿ ಪರಲೋಕದಲ್ಲಿರುವ ಮನುಷ್ಯಪುತ್ರ ಎಂದು ಬರೆಯಲಾಗಿದೆ 14ಇದಲ್ಲದೆ ಮೋಶೆಯು ಅರಣ್ಯದಲ್ಲಿ ಸರ್ಪವನ್ನು ಮೇಲೆ ಎತ್ತಿದ ಹಾಗೆಯೇ ಮನುಷ್ಯಪುತ್ರನಾದ ನನ್ನನ್ನು ಸಹ ಮೇಲಕ್ಕೆ ಏರಿಸಬೇಕು. 15ಹೀಗೆ ಮನುಷ್ಯಪುತ್ರನಾದ ನನ್ನನ್ನು ನಂಬುವ ಪ್ರತಿಯೊಬ್ಬರೂ ನಿತ್ಯಜೀವವನ್ನು ಪಡೆಯುವರು.”
16ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತಮ್ಮ ಏಕೈಕ ಪುತ್ರ ಆಗಿರುವ ಕ್ರಿಸ್ತ ಯೇಸುವನ್ನು ಕೊಟ್ಟರು. ಅದಕ್ಕಾಗಿಯೇ ಅವರನ್ನು ನಂಬುವ ಪ್ರತಿಯೊಬ್ಬರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕು. 17ದೇವರು ಲೋಕಕ್ಕೆ ತೀರ್ಪು ಮಾಡುವುದಕ್ಕಾಗಿ ಅಲ್ಲ, ತಮ್ಮ ಪುತ್ರನ ಮುಖಾಂತರ ಲೋಕದ ಜನರನ್ನು ರಕ್ಷಿಸುವುದಕ್ಕಾಗಿಯೇ ಅವರನ್ನು ಲೋಕಕ್ಕೆ ಕಳುಹಿಸಿದರು. 18ಮಗನನ್ನು ನಂಬುವವನಿಗೆ ತೀರ್ಪು ಆಗುವುದಿಲ್ಲ. ನಂಬದವನಿಗೆ ಆಗಲೇ ತೀರ್ಪಾಯಿತು. ಏಕೆಂದರೆ ಅವನು ದೇವರ ಒಬ್ಬನೇ ಪುತ್ರನ ಹೆಸರಿನ ಮೇಲೆ ನಂಬಿಕೆ ಇಡಲಿಲ್ಲ. 19ಆ ತೀರ್ಪು ಏನೆಂದರೆ: ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕೃತ್ಯಗಳು ಕೆಟ್ಟವುಗಳಾಗಿರುವುದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಪ್ರೀತಿ ಮಾಡಿದರು. 20ಕೇಡನ್ನು ಮಾಡುವವರು ಬೆಳಕನ್ನು ದ್ವೇಷಿಸುತ್ತಾರೆ ಮತ್ತು ಬೆಳಕಿಗೆ ಬರುವುದಿಲ್ಲ. ಏಕೆಂದರೆ ಅವರು ಮಾಡಿರುವ ಕೆಟ್ಟ ಕಾರ್ಯಗಳನ್ನೆಲ್ಲಾ ಬೆಳಕು ತೋರಿಸುತ್ತದೆ. 21ಆದರೆ ಸತ್ಯವನ್ನು ಅನುಸರಿಸುವವರು ನಡೆದಿರುವ ತಮ್ಮ ಕೃತ್ಯಗಳು ದೇವರಿಂದ ಆದವುಗಳೆಂದು ಪ್ರಕಟಿಸುವಂತೆ ಬೆಳಕಿಗೆ ಬರುತ್ತಾರೆ.
ಯೇಸುವಿನ ಬಗ್ಗೆ ಸ್ನಾನಿಕ ಯೋಹಾನನ ಸಾಕ್ಷಿ
22ಇವುಗಳಾದ ಮೇಲೆ ಯೇಸುವೂ ಅವರ ಶಿಷ್ಯರೂ ಯೂದಾಯ ಪ್ರಾಂತಕ್ಕೆ ಬಂದರು. ಅಲ್ಲಿ ಯೇಸು ಅವರೊಂದಿಗೆ ಇದ್ದು ದೀಕ್ಷಾಸ್ನಾನ ಮಾಡಿಸುತ್ತಿದ್ದರು. 23ಇದಲ್ಲದೆ ಯೋಹಾನನು ಸಹ ಸಲೀಮ್ ಎಂಬ ಊರಿನ ಸಮೀಪದಲ್ಲಿದ್ದ ಐನೋನ್ ಎಂಬ ಸ್ಥಳದಲ್ಲಿ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಏಕೆಂದರೆ ಅಲ್ಲಿ ಬಹಳ ನೀರು ಇತ್ತು. ಜನರು ಬಂದು ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು. 24ಆಗ ಯೋಹಾನನು ಇನ್ನೂ ಸೆರೆಯಲ್ಲಿ ಬಂಧಿತನಾಗಿರಲಿಲ್ಲ. 25ಯೋಹಾನನ ಶಿಷ್ಯರಿಗೂ ಒಬ್ಬ ಯೆಹೂದ್ಯನಿಗೂ ಶುದ್ಧಾಚಾರವನ್ನು ಕುರಿತು ವಿವಾದ ಉಂಟಾಯಿತು. 26ಅವರು ಯೋಹಾನನ ಬಳಿಗೆ ಬಂದು ಅವನಿಗೆ, “ಗುರುವೇ, ಯೊರ್ದನ್ ನದಿಯ ಆಚೆದಡದಲ್ಲಿ ನಿನ್ನೊಡನೆ ಇದ್ದ ಒಬ್ಬರ ಬಗ್ಗೆ ನೀನು ಸಾಕ್ಷಿ ಕೊಟ್ಟೆಯಲ್ಲಾ. ಇಗೋ, ಅವರು ದೀಕ್ಷಾಸ್ನಾನ ಮಾಡಿಸುತ್ತಿದ್ದಾರೆ ಮತ್ತು ಎಲ್ಲರೂ ಅವರ ಬಳಿಗೆ ಹೋಗುತ್ತಿದ್ದಾರೆ,” ಎಂದರು.
27ಅದಕ್ಕೆ ಯೋಹಾನನು, “ಪರಲೋಕದಿಂದ ಒಬ್ಬ ಮನುಷ್ಯನಿಗೆ ದಯಪಾಲಿಸದ ಹೊರತು ಅವನು ಯಾವುದನ್ನೂ ಹೊಂದಲಾರನು. 28‘ನಾನು ಕ್ರಿಸ್ತನಲ್ಲ, ಆದರೆ ಅವರ ಮುಂದೂತನೆಂದು,’ ಹೇಳಿದ್ದಕ್ಕೆ ನೀವೇ ಸಾಕ್ಷಿ. 29ಮದುಮಗಳು ಮದುಮಗನಿಗೆ ಸೇರಿದವಳು. ಆದರೂ ಮದುಮಗನ ಸ್ನೇಹಿತನು ನಿಂತುಕೊಂಡು ಆತನ ಮಾತಿಗೆ ಕಿವಿಗೊಟ್ಟು, ಮದುಮಗನ ಸ್ವರ ಕೇಳಿ ಸಂತೋಷಪಡುತ್ತಾನೆ. ಆದಕಾರಣ ಈ ನನ್ನ ಸಂತೋಷವು ಪರಿಪೂರ್ಣವಾಯಿತು. 30ಆತನು ಹೆಚ್ಚಾಗಬೇಕು ನಾನು ಕಡಿಮೆಯಾಗಬೇಕು.
31“ಮೇಲಿನಿಂದ ಬರುವವರೇ ಎಲ್ಲರಿಗಿಂತಲೂ ಮೇಲಾದವರು, ಭೂಲೋಕದವನಾದರೋ ಭೂಮಿಗೆ ಸೇರಿದವನಾಗಿದ್ದು ಭೂಸಂಬಂಧವಾದವುಗಳನ್ನು ಮಾತನಾಡುತ್ತಾನೆ; ಪರಲೋಕದಿಂದ ಬರುವವರು ಎಲ್ಲವುಗಳಿಗಿಂತಲೂ ಮೇಲಾದವರು. 32ಅವರು ಯಾವುದನ್ನು ಕಂಡು ಕೇಳಿದರೋ ಅದಕ್ಕೆ ಸಾಕ್ಷಿಕೊಡುತ್ತಾರೆ. ಆದರೆ ಅವರ ಸಾಕ್ಷಿಯನ್ನು ಯಾರೂ ಸ್ವೀಕರಿಸುವುದಿಲ್ಲ. 33ಅವರ ಸಾಕ್ಷಿಯನ್ನು ಸ್ವೀಕರಿಸಿದವರು ದೇವರು ಸತ್ಯವಂತರೆಂದು ಮುದ್ರೆ ಹಾಕಿದ್ದಾರೆ. 34ದೇವರು ಕಳುಹಿಸಿದವರಾದರೋ ದೇವರ ಮಾತುಗಳನ್ನೇ ಆಡುತ್ತಾರೆ. ಏಕೆಂದರೆ ದೇವರು ಅವರಿಗೆ ಆತ್ಮವನ್ನು ಮಿತಿಯಿಲ್ಲದೆ ಕೊಟ್ಟಿದ್ದಾರೆ. 35ತಂದೆಯು ಪುತ್ರನನ್ನು ಪ್ರೀತಿಸಿ ಎಲ್ಲವನ್ನೂ ಅವರ ಕೈಯಲ್ಲಿ ಕೊಟ್ಟಿದ್ದಾರೆ. 36ಯಾರು ದೇವಪುತ್ರ ಆಗಿರುವವರನ್ನು ನಂಬುವರೋ ಅವರು ನಿತ್ಯಜೀವ ಪಡೆದಿರುತ್ತಾರೆ. ದೇವಪುತ್ರ ಆಗಿರುವವರನ್ನು ನಂಬದವರು ನಿತ್ಯಜೀವವನ್ನು ಕಾಣುವುದಿಲ್ಲ. ಆದರೆ ದೇವರ ಕೋಪಾಗ್ನಿಯು ಅವರ ಮೇಲೆ ನೆಲೆಗೊಂಡಿರುವುದು,” ಎಂದು ಹೇಳಿದನು.

Currently Selected:

ಯೋಹಾನ 3: KSB

Highlight

Share

Copy

None

Want to have your highlights saved across all your devices? Sign up or sign in