5
ಮೂವತ್ತೆಂಟು ವರ್ಷದ ರೋಗಿಯ ಸ್ವಸ್ಥತೆ
1ಇದಾದ ಮೇಲೆ ಯೆಹೂದ್ಯರ ಹಬ್ಬವೊಂದು ಬಂತು. ಆದ್ದರಿಂದ, ಯೇಸು ಯೆರೂಸಲೇಮಿಗೆ ಹೋದರು. 2ಯೆರೂಸಲೇಮಿನಲ್ಲಿ “ಕುರಿಬಾಗಿಲು” ಎಂಬ ಸ್ಥಳದ ಬಳಿ ಒಂದು ಕೊಳವಿದೆ. ಇದನ್ನು ಹೀಬ್ರೂ ಭಾಷೆಯಲ್ಲಿ ಬೇತ್ಸಥಾ#5:2 ಅರಾಮಿಕ್ ಭಾಷೆಯಲ್ಲಿ ಕರುಣಾಭವನ ಎಂದು ಅರ್ಥ ಎಂದು ಕರೆಯುತ್ತಾರೆ. ಅದಕ್ಕೆ ಐದು ಮಂಟಪಗಳಿದ್ದವು. 3ಅವುಗಳಲ್ಲಿ ಅಸ್ವಸ್ಥರೂ ಕುರುಡರೂ ಕುಂಟರೂ ಪಾರ್ಶ್ವವಾಯು ಪೀಡಿತರೂ ಆಗಿದ್ದವರ ದೊಡ್ಡ ಸಮೂಹವೇ ಬಿದ್ದುಕೊಂಡು, ನೀರು ಉಕ್ಕುವುದನ್ನೇ ಕಾದು ನೋಡುತ್ತಿದ್ದರು. 4ಏಕೆಂದರೆ ಕೆಲವೊಮ್ಮೆ ದೇವದೂತನು ಇಳಿದುಬಂದು ನೀರನ್ನು ಕಲಕುತ್ತಿದ್ದನು. ನೀರು ಕಲಕಿದೊಡನೆ ಮೊದಲು ಯಾರು ನೀರಿನೊಳಗೆ ಹೆಜ್ಜೆಯಿಡುತ್ತಿದ್ದರೋ ಅವರಿಗೆ ಯಾವ ರೋಗವಿದ್ದರೂ ಅದು ಗುಣವಾಗುತ್ತಿತ್ತು.#5:4 ಕೆಲವು ಮೂಲ ಹಸ್ತಪ್ರತಿಗಳಲ್ಲಿ ಈ ವಾಕ್ಯ ಸೇರ್ಪಡೆಯಾಗಿರುವುದಿಲ್ಲ. 5ಆಗ ಮೂವತ್ತೆಂಟು ವರ್ಷದಿಂದ ರೋಗಿಯಾಗಿದ್ದ ಒಬ್ಬ ಮನುಷ್ಯನು ಅಲ್ಲಿ ಇದ್ದನು. 6ಅವನು ಬಿದ್ದುಕೊಂಡಿರುವುದನ್ನು ಯೇಸು ಕಂಡು ಅವನು ಈಗಾಗಲೇ ಬಹುಕಾಲದಿಂದ ಆ ಸ್ಥಿತಿಯಲ್ಲಿದ್ದಾನೆಂದು ತಿಳಿದು ಅವನಿಗೆ, “ನಿನಗೆ ಗುಣಹೊಂದಲು ಮನಸ್ಸಿದೆಯೋ?” ಎಂದು ಕೇಳಿದರು.
7ಅದಕ್ಕೆ ಆ ರೋಗಿಯು ಯೇಸುವಿಗೆ, “ಸ್ವಾಮಿ, ನೀರು ಉಕ್ಕುವಾಗ ನನ್ನನ್ನು ಕೊಳದೊಳಗೆ ಇಳಿಸುವುದಕ್ಕೆ ನನಗೆ ಯಾರೂ ಇಲ್ಲ. ಆದರೆ ನಾನು ಹೋಗುತ್ತಿರುವಾಗಲೇ ನನಗಿಂತ ಮುಂದಾಗಿ ಮತ್ತೊಬ್ಬನು ಹೋಗುತ್ತಾನೆ,” ಎಂದನು.
8ಯೇಸು ಅವನಿಗೆ, “ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ,” ಎಂದರು. 9ಕೂಡಲೇ ಆ ಮನುಷ್ಯನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆದನು.
ಆ ದಿನವು ಸಬ್ಬತ್ ದಿನವಾಗಿತ್ತು. 10ಆದ್ದರಿಂದ ಯೆಹೂದ್ಯರು ಸ್ವಸ್ಥನಾದವನಿಗೆ, “ಇದು ಸಬ್ಬತ್ ದಿನ ನೀನು ಹಾಸಿಗೆಯನ್ನು ಹೊತ್ತುಕೊಂಡು ನಡೆಯುವುದಕ್ಕೆ ನಿಷೇಧವಿದೆ,” ಎಂದರು.
11ಆದರೆ ಅವನು ಅವರಿಗೆ, “ನನ್ನನ್ನು ಸ್ವಸ್ಥಪಡಿಸಿದವರೇ, ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎಂದು ನನಗೆ ಹೇಳಿದ್ದಾರೆ,” ಎಂದನು.
12ಅದಕ್ಕೆ ಯೆಹೂದ್ಯರು ಅವನಿಗೆ, “ ‘ಅದನ್ನು ಎತ್ತಿಕೊಂಡು ನಡೆ,’ ಎಂದು ನಿನಗೆ ಹೇಳಿದ ಮನುಷ್ಯನು ಯಾರು?” ಎಂದು ಕೇಳಿದರು.
13ಆದರೆ ಆ ವ್ಯಕ್ತಿ ಯಾರೆಂದು ಸ್ವಸ್ಥನಾದವನಿಗೆ ತಿಳಿದಿರಲಿಲ್ಲ. ಏಕೆಂದರೆ ಆ ಸ್ಥಳದಲ್ಲಿ ಜನಸಮೂಹವು ಇದ್ದುದರಿಂದ ಯೇಸು ಅಲ್ಲಿಂದ ಮರೆಯಾಗಿಬಿಟ್ಟಿದ್ದರು.
14ತರುವಾಯ ಯೇಸು ಅವನನ್ನು ದೇವಾಲಯದಲ್ಲಿ ಕಂಡು ಅವನಿಗೆ, “ಇಗೋ, ನೀನು ಸ್ವಸ್ಥನಾಗಿರುವೆ, ಹೆಚ್ಚಿನ ಕೇಡು ಬಾರದಂತೆ ಇನ್ನು ಮೇಲೆ ಪಾಪ ಮಾಡಬೇಡ,” ಎಂದರು. 15ಆಗ ಅವನು ಹೊರಟುಹೋಗಿ ತನ್ನನ್ನು ಸ್ವಸ್ಥಪಡಿಸಿದವರು ಯೇಸುವೇ ಎಂದು ಯೆಹೂದ್ಯರಿಗೆ ತಿಳಿಸಿದನು.
ದೇವಪುತ್ರ ಆಗಿರುವವರ ಮೂಲಕ ಜೀವ
16ಯೇಸು ಇವುಗಳನ್ನು ಸಬ್ಬತ್ ದಿನದಲ್ಲಿ ಮಾಡಿದ ಕಾರಣ ಯೆಹೂದ್ಯರು ಯೇಸುವನ್ನು ಹಿಂಸಿಸತೊಡಗಿದರು. 17ಯೇಸು ಅವರಿಗೆ, “ನನ್ನ ತಂದೆ ಯಾವಾಗಲೂ ಕೆಲಸ ಮಾಡುತ್ತಾರೆ. ನಾನೂ ಕೆಲಸ ಮಾಡುತ್ತೇನೆ,” ಎಂದರು. 18ಯೇಸು ಸಬ್ಬತ್ ದಿನವನ್ನು ಮುರಿದದ್ದು ಅಲ್ಲದೆ ದೇವರನ್ನು ತಮ್ಮ ಸ್ವಂತ ತಂದೆ ಎಂದು ಹೇಳಿ ತಮ್ಮನ್ನು ದೇವರಿಗೆ ಸಮಾನ ಮಾಡಿಕೊಂಡ ಕಾರಣ ಯೆಹೂದ್ಯರು ಯೇಸುವನ್ನು ಕೊಲ್ಲುವುದಕ್ಕೆ ಇನ್ನಷ್ಟು ಪ್ರಯತ್ನಮಾಡಿದರು.
19ಯೇಸು ಅವರಿಗೆ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ತಂದೆಯು ಮಾಡುವುದನ್ನು ಕಂಡು ಪುತ್ರನು ಮಾಡುತ್ತಾನೆ ಹೊರತು ಪುತ್ರನು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು. ಏಕೆಂದರೆ ತಂದೆ ಯಾವುದನ್ನೆಲ್ಲಾ ಮಾಡುವರೋ ಹಾಗೆಯೇ ಪುತ್ರನೂ ಮಾಡುವನು. 20ತಂದೆ ಪುತ್ರನನ್ನು ಪ್ರೀತಿಸಿ ತಾನು ಮಾಡುವುದನ್ನೆಲ್ಲಾ ಪುತ್ರನಿಗೆ ತೋರಿಸುತ್ತಾರೆ. ನೀವು ಆಶ್ಚರ್ಯಪಡುವಂತೆ ಇವುಗಳಿಗಿಂತ ಮಹತ್ತಾದ ಕೆಲಸಗಳನ್ನು ಪುತ್ರನಿಗೆ ತೋರಿಸುವರು. 21ತಂದೆ ಸತ್ತವರನ್ನು ಎಬ್ಬಿಸಿ ಬದುಕಿಸುವಂತೆಯೇ ಪುತ್ರನೂ ತನಗಿಷ್ಟ ಬಂದವರನ್ನು ಬದುಕಿಸುತ್ತಾರೆ. 22ತಂದೆ ಯಾರಿಗೂ ತೀರ್ಪು ಮಾಡುವುದಿಲ್ಲ. ಆದರೆ ತೀರ್ಪು ಮಾಡುವುದನ್ನೆಲ್ಲಾ ಪುತ್ರನಿಗೆ ಒಪ್ಪಿಸಿದ್ದಾರೆ. 23ಎಲ್ಲರೂ ತಂದೆಯನ್ನು ಸನ್ಮಾನಿಸುವಂತೆಯೇ ಪುತ್ರನನ್ನೂ ಸನ್ಮಾನಿಸಬೇಕು. ಪುತ್ರನನ್ನು ಸನ್ಮಾನಿಸದವನು ಆತನನ್ನು ಕಳುಹಿಸಿದ ತಂದೆಯನ್ನೂ ಸನ್ಮಾನಿಸುವುದಿಲ್ಲ.
24“ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿದ ತಂದೆಯನ್ನು ನಂಬುವವರು ನಿತ್ಯಜೀವವನ್ನು ಹೊಂದಿದ್ದಾರೆ. ಅವರು ನ್ಯಾಯತೀರ್ಪಿಗೆ ಗುರಿಯಾಗುವುದಿಲ್ಲ, ಮರಣದಿಂದ ಪಾರಾಗಿ ಜೀವವನ್ನು ಹೊಂದಿದ್ದಾರೆ. 25ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಸತ್ತವರು ದೇವಪುತ್ರನ ಸ್ವರವನ್ನು ಕೇಳುವ ಕಾಲ ಬರುತ್ತದೆ. ಈಗಾಗಲೇ ಬಂದಿದೆ. ಈ ಸ್ವರವನ್ನು ಕೇಳುವವರು ಬದುಕುವರು. 26ತಂದೆಯು ಸ್ವತಃ ಜೀವವುಳ್ಳವರಾಗಿರುವಂತೆಯೇ ಪುತ್ರನೂ ಸಹ ಸ್ವತಃ ಜೀವವುಳ್ಳವನಾಗಿರುವಂತೆ ಅನುಗ್ರಹ ಮಾಡಿದ್ದಾರೆ. 27ನಾನು ಮನುಷ್ಯಪುತ್ರನಾಗಿರುವುದರಿಂದ ನ್ಯಾಯತೀರಿಸುವ ಅಧಿಕಾರವನ್ನು ತಂದೆ ನನಗೆ ಕೊಟ್ಟಿದ್ದಾರೆ.
28“ಇದಕ್ಕೆ ಆಶ್ಚರ್ಯಪಡಬೇಡಿರಿ, ಆಗ ಸಮಾಧಿಗಳಲ್ಲಿ ಇರುವವರೆಲ್ಲರೂ ನನ್ನ ಸ್ವರವನ್ನು ಕೇಳಿ ಹೊರಗೆ ಬರುವ ಒಂದುಕಾಲ ಬರುತ್ತದೆ. 29ಒಳ್ಳೆಯದನ್ನು ಮಾಡಿದವರು ಜೀವಕ್ಕಾಗಿ ಪುನರುತ್ಥಾನವನ್ನೂ ಕೆಟ್ಟದ್ದನ್ನು ಮಾಡಿದವರು ನ್ಯಾಯತೀರ್ಪಿಗಾಗಿ ಪುನರುತ್ಥಾನವನ್ನೂ ಹೊಂದುವರು. 30ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು. ನಾನು ಕೇಳಿರುವಂತೆಯೇ ತೀರ್ಪು ಮಾಡುತ್ತೇನೆ. ನನ್ನ ತೀರ್ಪು ನ್ಯಾಯವಾದದ್ದು. ಏಕೆಂದರೆ ನಾನು ನನ್ನ ಚಿತ್ತವನ್ನಲ್ಲ, ನನ್ನನ್ನು ಕಳುಹಿಸಿದ ತಂದೆಯ ಚಿತ್ತವನ್ನೇ ನೆರವೇರಿಸಲು ಅಪೇಕ್ಷಿಸುತ್ತೇನೆ.
ಯೇಸುವನ್ನು ಕುರಿತು ಸಾಕ್ಷಿ
31“ನನ್ನನ್ನು ಕುರಿತು ನಾನೇ ಸಾಕ್ಷಿಹೇಳಿಕೊಂಡರೆ ನನ್ನ ಸಾಕ್ಷಿಯು ಸತ್ಯವಾದದ್ದಲ್ಲ. 32ನನ್ನನ್ನು ಕುರಿತು ಸಾಕ್ಷಿಕೊಡುವವರು ಬೇರೊಬ್ಬರಿದ್ದಾರೆ. ಅವರು ನನ್ನ ವಿಷಯದಲ್ಲಿ ಕೊಡುವ ಸಾಕ್ಷಿಯೇ ಸತ್ಯವಾದುದೆಂದು ನಾನು ಬಲ್ಲೆನು.
33“ನೀವು ಯೋಹಾನನ ಬಳಿಗೆ ದೂತರನ್ನು ಕಳುಹಿಸಿದಿರಿ. ಅವನು ಸತ್ಯಕ್ಕೆ ಸಾಕ್ಷಿಕೊಟ್ಟನು. 34ನಾನಾದರೋ ಮಾನವರ ಸಾಕ್ಷಿಯನ್ನು ಸ್ವೀಕರಿಸುವುದಿಲ್ಲ. ಆದರೆ ನೀವು ರಕ್ಷಣೆ ಹೊಂದುವಂತೆ ನಾನು ಇವುಗಳನ್ನು ಹೇಳುತ್ತೇನೆ. 35ಯೋಹಾನನು ಉರಿದು ಪ್ರಕಾಶಿಸುವ ದೀಪವಾಗಿದ್ದನು. ನೀವು ಸ್ವಲ್ಪಕಾಲ ಅವನ ಬೆಳಕಿನಲ್ಲಿ ಅತ್ಯಾನಂದಪಡಲು ನೀವು ಇಚ್ಚಿಸಿದಿರಿ.
36“ಆದರೆ ನನಗೆ ಯೋಹಾನನಿಗಿಂತಲೂ ಮಹಾ ಸಾಕ್ಷಿ ಉಂಟು. ಹೇಗೆಂದರೆ, ತಂದೆ ನನಗೆ ಮಾಡಿ ಮುಗಿಸಲು ಕೊಟ್ಟ ಕೆಲಸಗಳು, ಅಂದರೆ, ನಾನು ಮಾಡುತ್ತಿರುವ ಈ ಕೆಲಸಗಳೇ, ತಂದೆ ನನ್ನನ್ನು ಕಳಿಹಿಸಿದ್ದಾರೆಂದು ನನ್ನನ್ನು ಕುರಿತು ಸಾಕ್ಷಿ ಕೊಡುತ್ತವೆ. 37ನನ್ನನ್ನು ಕಳುಹಿಸಿದ ತಂದೆ ತಾವೇ ನನ್ನನ್ನು ಕುರಿತು ಸಾಕ್ಷಿ ಹೇಳಿದ್ದಾರೆ. ನೀವು ಎಂದೂ ಅವರ ಸ್ವರವನ್ನು ಕೇಳಲಿಲ್ಲ, ಅವರ ರೂಪವನ್ನು ಕಾಣಲಿಲ್ಲ. 38ಅವರ ವಾಕ್ಯವು ನಿಮ್ಮಲ್ಲಿ ನೆಲೆಗೊಂಡಿಲ್ಲ. ಏಕೆಂದರೆ ಅವರು ಕಳುಹಿಸಿದವನನ್ನು ನೀವು ನಂಬುವುದಿಲ್ಲ. 39ನೀವು ಪವಿತ್ರ ವೇದದಲ್ಲಿ ನಿತ್ಯಜೀವ ದೊರೆಯುತ್ತದೆ ಎಂದು ನೆನಸಿ, ಅವುಗಳನ್ನು ಪರಿಶೋಧಿಸುತ್ತೀದ್ದಿರಿ. ಆ ಪವಿತ್ರ ವೇದವೇ ನನ್ನ ವಿಷಯವಾಗಿ ಸಾಕ್ಷಿಕೊಡುತ್ತದೆ. 40ಆದರೂ ನೀವು ಜೀವವನ್ನು ಹೊಂದುವುದಕ್ಕಾಗಿ ನನ್ನ ಬಳಿಗೆ ಬರುವುದಕ್ಕೆ ನಿಮಗೆ ಇಷ್ಟವಿಲ್ಲ.
41“ನಾನು ಮನುಷ್ಯರಿಂದ ಮಹಿಮೆಯನ್ನು ಸ್ವೀಕರಿಸುವುದಿಲ್ಲ. 42ಆದರೆ ನಿಮ್ಮನ್ನು ಬಲ್ಲೆನು. ನಿಮ್ಮ ಹೃದಯದಲ್ಲಿ ದೇವರ ಪ್ರೀತಿ ಇಲ್ಲ. 43ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ. ನೀವು ನನ್ನನ್ನು ಸ್ವೀಕರಿಸುವುದಿಲ್ಲ. ಮತ್ತೊಬ್ಬನು ತನ್ನ ಸ್ವಂತ ಹೆಸರಿನಲ್ಲಿ ಬಂದರೆ ನೀವು ಅಂಥವನನ್ನು ಸ್ವೀಕರಿಸುತ್ತೀರಿ. 44ಒಬ್ಬರೇ ದೇವರಿಂದ ಬರುವ ಮಹಿಮೆಯನ್ನು ಹುಡುಕದೆ ಒಬ್ಬರಿಂದೊಬ್ಬರಿಗೆ ಬರುವ ಮಹಿಮೆಯನ್ನು ಸ್ವೀಕರಿಸುವ ನಿಮಗೆ ನಂಬಲು ಹೇಗೆ ಸಾಧ್ಯ?
45“ತಂದೆಯ ಮುಂದೆ ನಿಮ್ಮ ಮೇಲೆ ನಾನು ದೂರು ಹೇಳುತ್ತಿರುವೆನೆಂದು ನೀವು ನೆನಸಬೇಡಿರಿ. ನಿಮ್ಮ ಮೇಲೆ ದೂರು ಹೇಳುವವನು ಒಬ್ಬನಿದ್ದಾನೆ; ನೀವು ನಿರೀಕ್ಷೆಯಿಟ್ಟಿರುವ ಮೋಶೆಯೇ. 46ನೀವು ಮೋಶೆಯನ್ನು ನಂಬಿದ್ದರೆ ನನ್ನನ್ನೂ ನಂಬುತ್ತಿದ್ದಿರಿ. ಏಕೆಂದರೆ ಅವನು ನನ್ನನ್ನು ಕುರಿತು ಬರೆದಿದ್ದಾನೆ. 47ಅವನು ಪವಿತ್ರ ವೇದಗಳಲ್ಲಿ ಬರೆದದ್ದನ್ನು ನೀವು ನಂಬದಿದ್ದರೆ ನನ್ನ ಮಾತುಗಳನ್ನು ಹೇಗೆ ನಂಬುವಿರಿ?” ಎಂದರು.