19
ಸುಂಕದವನಾದ ಜಕ್ಕಾಯನು
1ಯೇಸು ಯೆರಿಕೋ ಪಟ್ಟಣವನ್ನು ಪ್ರವೇಶಿಸಿ ಅಲ್ಲಿಂದ ಪ್ರಯಾಣ ಮಾಡುತ್ತಿದ್ದರು. 2ಅಲ್ಲಿ ಜಕ್ಕಾಯ ಎಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು; ಅವನು ಸುಂಕದವರಲ್ಲಿ ಮುಖಂಡನೂ ಐಶ್ವರ್ಯವಂತನೂ ಆಗಿದ್ದನು. 3ಅವನು ಯೇಸು ಯಾರೆಂದು ಕಾಣಬೇಕೆಂದು ಅಪೇಕ್ಷಿಸಿದರೂ ತಾನು ಕುಳ್ಳನಾಗಿದ್ದದರಿಂದ ಜನರ ಗುಂಪಿನ ನಿಮಿತ್ತವಾಗಿ ಅವರನ್ನು ಕಾಣಲಾರದೆ ಇದ್ದನು. 4ಆಗ ಯೇಸುವನ್ನು ಕಾಣುವಂತೆ ಅವನು ಮುಂದಾಗಿ ಓಡಿಹೋಗಿ, ಒಂದು ಅತ್ತಿಮರವನ್ನು ಹತ್ತಿದನು. ಏಕೆಂದರೆ ಯೇಸು ಆ ಮಾರ್ಗವಾಗಿಯೇ ಬರುತ್ತಿದ್ದರು.
5ಯೇಸು ಆ ಸ್ಥಳಕ್ಕೆ ಬಂದು, ಮೇಲಕ್ಕೆ ನೋಡಿ ಅವನಿಗೆ, “ಜಕ್ಕಾಯನೇ, ತಕ್ಷಣವೇ ಇಳಿದು ಬಾ. ನಾನು ಇಂದು ನಿನ್ನ ಮನೆಯಲ್ಲಿ ತಂಗಬೇಕು,” ಎಂದರು. 6ಜಕ್ಕಾಯನು ತಕ್ಷಣವೇ ಇಳಿದುಬಂದು ಅವರನ್ನು ಸಂತೋಷದಿಂದ ಬರಮಾಡಿಕೊಂಡನು.
7ಇದನ್ನು ಕಂಡವರೆಲ್ಲರೂ, “ಪಾಪಿಷ್ಠನ ಮನೆಗೆ ಅತಿಥಿಯಾಗಿ ಹೋಗುತ್ತಾನಲ್ಲಾ,” ಎಂದು ಗೊಣಗುಟ್ಟಿದರು.
8ಆದರೆ ಜಕ್ಕಾಯನು ನಿಂತುಕೊಂಡು ಕರ್ತದೇವರಿಗೆ, “ಸ್ವಾಮೀ, ಇಗೋ, ನನ್ನ ಸ್ವತ್ತಿನಲ್ಲಿ ಅರ್ಧವನ್ನು ಬಡವರಿಗೆ ಕೊಟ್ಟುಬಿಡುತ್ತೇನೆ. ನಾನು ಯಾರಿಗಾದರೂ ಏನಾದರೂ ಮೋಸಮಾಡಿ ಅವರಿಂದ ತೆಗೆದುಕೊಂಡಿದ್ದರೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ,” ಎಂದನು.
9ಯೇಸು ಅವನಿಗೆ, “ಈ ದಿನವೇ ಈ ಮನೆಗೆ ರಕ್ಷಣೆ ಬಂದಿದೆ. ಏಕೆಂದರೆ ಇವನು ಸಹ ಅಬ್ರಹಾಮನ ಪುತ್ರನಲ್ಲವೇ? 10ತಪ್ಪಿಹೋದದ್ದನ್ನು ಹುಡುಕಿ ರಕ್ಷಿಸುವುದಕ್ಕಲ್ಲವೇ ಮನುಷ್ಯಪುತ್ರನಾದ ನಾನು ಬಂದೆನು,” ಎಂದು ಹೇಳಿದರು.
ಹತ್ತು ನಾಣ್ಯಗಳ ಸಾಮ್ಯ
11ಜನರು ಈ ಮಾತುಗಳನ್ನು ಕೇಳುತ್ತಿರಲಾಗಿ, ಯೇಸು ತಾನು ಯೆರೂಸಲೇಮಿಗೆ ಸಮೀಪವಾಗಿದ್ದುದರಿಂದಲೂ ದೇವರ ರಾಜ್ಯವು ಕೂಡಲೇ ಪ್ರತ್ಯಕ್ಷವಾಗುವುದೆಂದು ಅವರು ಭಾವಿಸಿದ್ದರಿಂದ 12ಯೇಸು ಇನ್ನೊಂದು ಸಾಮ್ಯವನ್ನು ಹೇಳಿದರು: “ಘನವಂತನಾಗಿದ್ದ ಒಬ್ಬನು ತನಗೋಸ್ಕರ ರಾಜ್ಯವನ್ನು ಪಡೆದುಕೊಂಡು ತಿರುಗಿ ಬರುವುದಕ್ಕಾಗಿ ದೂರದೇಶಕ್ಕೆ ಹೊರಟುಹೋದನು. 13ಆ ವ್ಯಕ್ತಿ ತನ್ನ ಹತ್ತು ಕೆಲಸಗಾರರನ್ನು ಕರೆದು, ಅವರಿಗೆ ಹತ್ತು ನಾಣ್ಯಗಳನ್ನು#19:13 ಒಂದು ನಾಣ್ಯ, ಸುಮಾರು ಮೂರು ತಿಂಗಳ ಕೂಲಿಗೆ ಸಮ ಒಪ್ಪಿಸಿ, ‘ನಾನು ಬರುವವರೆಗೆ ವ್ಯಾಪಾರ ಮಾಡಿಕೊಂಡಿರಿ,’ ಎಂದು ಹೇಳಿದನು.
14“ಆದರೆ ಅವನ ನಾಡಿನವರೋ ಅವನನ್ನು ದ್ವೇಷಿಸುತ್ತಿದ್ದರು. ‘ಇವನು ನಮ್ಮ ಅರಸನಾಗುವುದು ಬೇಡ,’ ಎಂದು ತಿಳಿಸಲು ಅವನ ಹಿಂದೆಯೇ ಪ್ರತಿನಿಧಿಗಳನ್ನು ಕಳುಹಿಸಿದರು.
15“ಆದರೂ ಅವನು ತನ್ನ ರಾಜ್ಯವನ್ನು ಪಡೆದು ಹಿಂದಿರುಗಿದಾಗ, ವ್ಯಾಪಾರದಿಂದ ಇನ್ನೂ ಎಷ್ಟು ಲಾಭಗಳಿಸಿದರೆಂದು ತಿಳಿದುಕೊಳ್ಳುವಂತೆ, ತಾನು ಹಣ ಕೊಟ್ಟ ಆ ಕೆಲಸಗಾರರನ್ನು ತನ್ನ ಬಳಿಗೆ ಕರೆತರಲು ಆಜ್ಞಾಪಿಸಿದನು.
16“ಆಗ ಮೊದಲನೆಯವನು ಬಂದು, ‘ಸ್ವಾಮಿ, ನಿಮ್ಮ ಒಂದು ನಾಣ್ಯದಿಂದ ಇನ್ನೂ ಹತ್ತು ನಾಣ್ಯಗಳನ್ನು ಸಂಪಾದಿಸಿದೆ,’ ಎಂದನು.
17“ಅದಕ್ಕೆ ಅವನು, ‘ಚೆನ್ನಾಗಿ ಮಾಡಿದಿ, ಒಳ್ಳೆಯ ಸೇವಕನೇ. ನೀನು ಅತ್ಯಂತ ಸ್ವಲ್ಪದರಲ್ಲಿ ನಂಬಿಗಸ್ತನಾಗಿದ್ದೀ, ಹತ್ತು ಪಟ್ಟಣಗಳ ಮೇಲೆ ನೀನು ಅಧಿಕಾರಿಯಾಗಿರು,’ ಎಂದನು.
18“ಎರಡನೆಯವನು ಬಂದು, ‘ಸ್ವಾಮಿ, ನಿನ್ನ ಒಂದು ನಾಣ್ಯದಿಂದ ಇನ್ನೂ ಐದು ನಾಣ್ಯಗಳನ್ನು ಸಂಪಾದಿಸಿದೆ,’ ಎಂದನು.
19“ಅದಕ್ಕೆ ಅವನು, ‘ನೀನು ಐದು ಪಟ್ಟಣಗಳ ಮೇಲೆ ಅಧಿಕಾರಿಯಾಗಿರು,’ ಎಂದು ಅವನಿಗೆ ಹೇಳಿದನು.
20“ಆಗ ಮತ್ತೊಬ್ಬನು ಬಂದು, ‘ಸ್ವಾಮಿ, ಇಗೋ, ನಾನು ಕರವಸ್ತ್ರದಲ್ಲಿ ಕಟ್ಟಿಟ್ಟಿದ್ದ ನಿಮ್ಮ ನಾಣ್ಯ ಇದೇ. 21ನೀವು ಕಠಿಣ ಮನುಷ್ಯರೆಂದು ನಾನು ನಿಮಗೆ ಭಯಪಟ್ಟೆನು. ನೀನು ಕೂಡಿಡದಿರುವುದನ್ನು ತೆಗೆದುಕೊಳ್ಳುವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆಗಿದ್ದೀ,’ ಎಂದನು.
22“ಆಗ ಆ ಯಜಮಾನನು, ‘ಕೆಟ್ಟ ಸೇವಕನೇ! ನಿನ್ನ ಮಾತಿನ ಮೇಲೆಯೇ ನಿನಗೆ ನ್ಯಾಯತೀರಿಸುವೆನು. ನಾನು ಕೂಡಿಡದೆ ಇರುವಲ್ಲಿ ತೆಗೆದುಕೊಳ್ಳುವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆದ ಕಠಿಣ ಮನುಷ್ಯನೆಂದು ನಿನಗೆ ತಿಳಿದಿತ್ತಲ್ಲಾ. 23ಹಾಗಿದ್ದರೆ ನನ್ನ ಹಣವನ್ನು ಬಡ್ಡಿ ಅಂಗಡಿಯಲ್ಲಿ#19:23 ಇದು ಈಗಿನ ಬ್ಯಾಂಕ್ ರೀತಿ ಏಕೆ ಹಾಕಲಿಲ್ಲ, ನಾನು ಹಿಂದಿರುಗಿದಾಗ ಹಣವನ್ನು ಬಡ್ಡಿ ಸಮೇತವಾಗಿ ತೆಗೆದುಕೊಳ್ಳುತ್ತಿದ್ದೆನು,’ ಎಂದು ಹೇಳಿದನು.
24“ಯಜಮಾನನು ಹತ್ತಿರ ನಿಂತಿದ್ದವರಿಗೆ, ‘ಇವನಿಂದ ಆ ನಾಣ್ಯವನ್ನು ತೆಗೆದುಕೊಂಡು ಹತ್ತು ನಾಣ್ಯಗಳಿದ್ದವನಿಗೆ ಕೊಡಿರಿ,’ ಎಂದನು.
25“ಆಗ ಅವರು, ‘ಸ್ವಾಮಿ, ಅವನಿಗೆ ಈಗಾಗಲೇ ಹತ್ತು ನಾಣ್ಯಗಳಿವೆಯಲ್ಲಾ!’ ಎಂದರು.
26“ಆಗ ಯಜಮಾನನು, ‘ಇದ್ದ ಪ್ರತಿಯೊಬ್ಬರಿಗೆ ಕೊಡಲಾಗುವುದು ಮತ್ತು ಇಲ್ಲದವರ ಕಡೆಯಿಂದ ಇದ್ದ ಅಲ್ಪವನ್ನೂ ಕಸಿದುಕೊಳ್ಳಲಾಗುವುದು. 27ಆದರೆ ತಮ್ಮ ಮೇಲೆ ನಾನು ಆಳಿಕೆ ಮಾಡುವುದನ್ನು ಇಷ್ಟಪಡದ ಆ ನನ್ನ ವಿರೋಧಿಗಳನ್ನು ಇಲ್ಲಿಗೆ ತಂದು ನನ್ನ ಮುಂದೆ ಸಂಹಾರ ಮಾಡಿರಿ,’ ಎಂದನು.”
ಯೆರೂಸಲೇಮಿನ ಜಯ ಪ್ರವೇಶ
28ಯೇಸು ಹೀಗೆ ಹೇಳಿದ ತರುವಾಯ, ಶಿಷ್ಯರಿಗೆ ಮುಂದಾಗಿ, ಯೆರೂಸಲೇಮಿಗೆ ಹೊರಟರು. 29ಇದಾದ ಮೇಲೆ ಅವರು ಓಲಿವ್ ಗುಡ್ಡದ ಕಡೆಗೆ ಇರುವ ಬೇತ್ಫಗೆಗೂ ಬೇಥಾನ್ಯಕ್ಕೂ ಸಮೀಪಿಸಿದಾಗ, ತಮ್ಮ ಶಿಷ್ಯರಲ್ಲಿ ಇಬ್ಬರನ್ನು ಕರೆದು, 30“ನಿಮ್ಮ ಎದುರಿಗಿರುವ ಹಳ್ಳಿಗೆ ಹೋಗಿರಿ, ನೀವು ಅದರೊಳಗೆ ಪ್ರವೇಶಿಸುತ್ತಿರುವಾಗ, ಅಲ್ಲಿ ಕಟ್ಟಿರುವ ಮತ್ತು ಯಾರೂ ಅದರ ಮೇಲೆ ಸವಾರಿ ಮಾಡದಿರುವ ಒಂದು ಕತ್ತೆಮರಿಯನ್ನು ಅಲ್ಲಿ ಕಾಣುವಿರಿ. ಅದನ್ನು ಬಿಚ್ಚಿ ಇಲ್ಲಿಗೆ ತೆಗೆದುಕೊಂಡು ಬನ್ನಿರಿ. 31ಯಾರಾದರೂ ನಿಮಗೆ, ‘ಏಕೆ ಅದನ್ನು ಬಿಚ್ಚುತ್ತೀರಿ?’ ಎಂದು ಕೇಳಿದರೆ, ನೀವು ಅವರಿಗೆ, ‘ಇದು ಕರ್ತದೇವರಿಗೆ ಬೇಕಾಗಿದೆ,’ ಎಂದು ಹೇಳಿರಿ,” ಎಂದರು.
32ಆ ಶಿಷ್ಯರಿಬ್ಬರೂ ತಮ್ಮ ಮಾರ್ಗವಾಗಿ ಹೊರಟುಹೋಗಿ ಯೇಸು ತಮಗೆ ಹೇಳಿದಂತೆಯೇ ಕಂಡರು. 33ಅವರು ಆ ಕತ್ತೆಮರಿಯನ್ನು ಬಿಚ್ಚುತ್ತಿರುವಾಗ, ಅದರ ಯಜಮಾನರು ಅವರಿಗೆ, “ನೀವು ಕತ್ತೆಮರಿಯನ್ನು ಯಾಕೆ ಬಿಚ್ಚುತ್ತೀರಿ?” ಎಂದು ಕೇಳಿದ್ದಕ್ಕೆ,
34ಅವರು, “ಇದು ಕರ್ತದೇವರಿಗೆ ಬೇಕಾಗಿದೆ,” ಎಂದರು.
35ಶಿಷ್ಯರು ಅದನ್ನು ಯೇಸುವಿನ ಬಳಿಗೆ ತಂದು, ತಮ್ಮ ಬಟ್ಟೆಗಳನ್ನು ಕತ್ತೆಮರಿಯ ಮೇಲೆ ಹಾಕಿ, ಅದರ ಮೇಲೆ ಯೇಸುವನ್ನು ಕೂರಿಸಿದರು. 36ಯೇಸು ಹೋಗುತ್ತಿರುವಾಗ, ಜನರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು.
37ಇದಲ್ಲದೆ ಯೇಸು ಓಲಿವ್ ಗುಡ್ಡದಿಂದ ಇಳಿಜಾರನ್ನು ಸಮೀಪಿಸಿದಾಗ ಶಿಷ್ಯ ಸಮೂಹವೆಲ್ಲಾ ತಾವು ಕಂಡ ಎಲ್ಲ ಮಹತ್ಕಾರ್ಯಗಳಿಗಾಗಿ ಸಂತೋಷಪಡುತ್ತಾ, ಮಹಾ ಸ್ವರದಿಂದ ದೇವರನ್ನು ಹೀಗೆ ಕೊಂಡಾಡಲಾರಂಭಿಸಿದರು:
38“ಕರ್ತದೇವರ ಹೆಸರಿನಲ್ಲಿ ಬರುವ ಅರಸನು ಆಶೀರ್ವಾದ ಹೊಂದಲಿ!”
“ಪರಲೋಕದಲ್ಲಿ ಸಮಾಧಾನ, ಅತ್ಯುನ್ನತದಲ್ಲಿ ಮಹಿಮೆ!”#19:38 ಕೀರ್ತನೆ 118:26
39ಜನಸಮೂಹದಲ್ಲಿದ್ದ ಕೆಲವು ಫರಿಸಾಯರು ಯೇಸುವಿಗೆ, “ಬೋಧಕರೇ, ನಿಮ್ಮ ಶಿಷ್ಯರನ್ನು ಗದರಿಸಿ!” ಎಂದರು.
40ಆಗ ಯೇಸು ಅವರಿಗೆ, “ಇವರು ಸುಮ್ಮನಾದರೆ, ಈ ಕಲ್ಲುಗಳು ಕೂಗುವವು ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
41ತರುವಾಯ ಯೇಸು ಯೆರೂಸಲೇಮ ಪಟ್ಟಣವನ್ನೂ ಅದರ ಸ್ಥಿತಿಯನ್ನೂ ಕಂಡು, ಅದರ ಸಲುವಾಗಿ ಅತ್ತು, 42“ನೀನು ಇಂದಾದರೂ ನಿನ್ನ ಸಮಾಧಾನದ ವಿಷಯಗಳನ್ನು ಅರಿತುಕೊಂಡಿದ್ದರೆ, ಚೆನ್ನಾಗಿತ್ತು. ಆದರೆ ಈಗ ಅದು ನಿನ್ನ ಕಣ್ಣಿಗೆ ಮರೆಯಾಗಿದೆ. 43ನಿನ್ನ ಶತ್ರುಗಳು ನಿನ್ನ ಸುತ್ತಲೂ ಅಡ್ಡಗೋಡೆಯನ್ನು ಕಟ್ಟಿ, ಎಲ್ಲಾ ಕಡೆಯಲ್ಲಿಯೂ ನಿನ್ನನ್ನು ಮುತ್ತಿಗೆ ಹಾಕಿ ಪ್ರತಿಯೊಂದು ಕಡೆಯಿಂದಲೂ ನಿನ್ನನ್ನು ಬಂಧಿಸುವ ದಿನಗಳು ಬರುವವು. 44ಇದಲ್ಲದೆ ಅವರು ಗೋಡೆಯೊಳಗಿನ ನಿನ್ನನ್ನೂ ನಿನ್ನ ಮಕ್ಕಳನ್ನೂ ನೆಲಕ್ಕೆ ಬಡಿಯುವರು. ನಿನ್ನಲ್ಲಿ ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ನಿಲ್ಲದಂತೆ ಮಾಡುವರು. ಏಕೆಂದರೆ ದೇವರು ನಿನ್ನನ್ನು ಸಂಧಿಸಿದ ಸಮಯವನ್ನು ನೀನು ತಿಳಿದುಕೊಳ್ಳಲಿಲ್ಲ,” ಎಂದರು.
ದೇವಾಲಯದಲ್ಲಿ ಯೇಸು
45ಅನಂತರ ಯೇಸು ದೇವಾಲಯದ ಅಂಗಳದೊಳಗೆ ಹೋಗಿ, ಅದರಲ್ಲಿ ವ್ಯಾಪಾರಮಾಡುವವರನ್ನು ಹೊರಗೆ ಹಾಕುವುದಕ್ಕೆ ಪ್ರಾರಂಭಿಸಿ, 46ಅವರಿಗೆ, “ ‘ನನ್ನ ಮನೆಯು ಪ್ರಾರ್ಥನೆಯ ಮನೆಯಾಗಿದೆ,’#19:46 ಯೆಶಾಯ 56:7 ಎಂದು ಬರೆದದೆ. ನೀವೋ ಅದನ್ನು, ‘ಕಳ್ಳರ ಗವಿಯನ್ನಾಗಿ’ ಮಾಡಿದ್ದೀರಿ,”#19:46 ಯೆರೆ 7:11 ಎಂದರು.
47ಯೇಸು ಪ್ರತಿದಿನವೂ ದೇವಾಲಯದಲ್ಲಿ ಬೋಧಿಸುತ್ತಿದ್ದರು. ಆದರೆ ಮುಖ್ಯಯಾಜಕರೂ ನಿಯಮ ಬೋಧಕರೂ ಜನರ ಪ್ರಮುಖರೂ ಯೇಸುವನ್ನು ಕೊಲ್ಲುವುದಕ್ಕೆ ಹವಣಿಸುತ್ತಿದ್ದರು. 48ಜನರೆಲ್ಲರೂ ಯೇಸು ಹೇಳುವ ಒಂದೊಂದು ಮಾತಿಗೂ ಬಹಳ ಲಕ್ಷ್ಯಕೊಟ್ಟು ಯೇಸುವಿನ ಉಪದೇಶವನ್ನು ಕೇಳುತ್ತಿದ್ದುದರಿಂದ, ಅವರಿಗೆ ಏನು ಮಾಡಬೇಕೋ ತೋಚಲಿಲ್ಲ.