ಯೋಹಾ 16

16
1 “ನೀವು ನಂಬಿಕೆಯಿಂದ ಎಡವಿ ಬಿದ್ದು ಹೋಗಬಾರದೆಂದು ನಾನು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. 2#16:2 ಯೋಹಾ 9:22; 12:42; ಅ. ಕೃ. 9:1, 2; 26:9-11:ಅವರು ನಿಮ್ಮನ್ನು ಸಭಾಮಂದಿರದಿಂದ ಹೊರಗೆ ಹಾಕುವರು; ಅದಲ್ಲದೆ ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಬಲಿಕೊಟ್ಟೆನೆಂದು ಭಾವಿಸುವ ಕಾಲವು ಬರಲಿದೆ. 3ಅವರು ತಂದೆಯನ್ನಾದರೂ ನನ್ನನ್ನಾದರೂ ತಿಳಿಯದವರಾಗಿರುವುದರಿಂದ ಇವೆಲ್ಲವುಗಳನ್ನು ನಿಮಗೆ ಮಾಡುವರು. 4ಆದರೆ ಅವರ ಕಾಲ ಬಂದಾಗ ಆತನು ನಮಗೆ ಇಂಥಿಂಥದ್ದನ್ನು ಹೇಳಿದನಲ್ಲಾ ಎಂದು ನಿಮ್ಮ ನೆನಪಿಗೆ ಬರುವಂತೆ, ನಿಮ್ಮ ಸಂಗಡ ಈ ಮಾತುಗಳನ್ನು ಆಡಿದ್ದೇನೆ. ನಾನು ನಿಮ್ಮ ಸಂಗಡ ಇದ್ದುದರಿಂದ ಮೊದಲು ಇವುಗಳನ್ನು ನಿಮಗೆ ಹೇಳಲಿಲ್ಲ.
5 “ಆದರೆ ಈಗ ನಾನು ನನ್ನನ್ನು ಕಳುಹಿಸಿಕೊಟ್ಟಾತನ ಬಳಿಗೆ ಹೋಗುತ್ತೇನೆ. ‘ನೀನು ಎಲ್ಲಿಗೆ ಹೋಗುತ್ತಿ?’ ಎಂದು ನಿಮ್ಮಲ್ಲಿ ಒಬ್ಬನಾದರೂ ನನ್ನನ್ನು ಕೇಳುವುದಿಲ್ಲ. 6ನಾನು ಈ ಮಾತುಗಳನ್ನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯವು ದುಃಖಭರಿತವಾಗಿದೆ. 7ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ನಾನು ಹೋಗುವುದು ನಿಮಗೆ ಒಳ್ಳೆಯದು, ಹೇಗೆಂದರೆ ನಾನು ಹೋಗದಿದ್ದರೆ #16:7 ಯೋಹಾ 15:26:ಆ ಸಹಾಯಕನು ನಿಮ್ಮ ಬಳಿಗೆ ಬರುವುದಿಲ್ಲ. ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸಿಕೊಡುತ್ತೇನೆ. 8ಆತನು ಬಂದಾಗ ಪಾಪ, ನೀತಿ ಮತ್ತು ನ್ಯಾಯತೀರ್ಪಿನ ಕುರಿತು ಲೋಕಕ್ಕೆ ಮನವರಿಕೆಯನ್ನು ಉಂಟುಮಾಡುವನು. 9ಅವರು ನನ್ನನ್ನು ನಂಬದೇ ಇರುವುದರಿಂದ ಪಾಪದ ಕುರಿತಾಗಿಯೂ 10ನಾನು ನನ್ನ ತಂದೆಯ ಬಳಿಗೆ ಹೋಗಿ, ಇನ್ನು ಮೇಲೆ ನಿಮಗೆ ಕಾಣಿಸದೆ ಇರುವುದರಿಂದ ನೀತಿಯ ಕುರಿತಾಗಿಯೂ, 11#16:11 ಯೋಹಾ 12:31:ಇಹಲೋಕಾಧಿಪತಿಗೆ ನ್ಯಾಯತೀರ್ಪಾಗಿರುವುದರಿಂದ ನ್ಯಾಯತೀರ್ಪಿನ ಕುರಿತಾಗಿಯೂ, ಲೋಕಕ್ಕೆ ಮನವರಿಕೆಯನ್ನು ಉಂಟುಮಾಡುವನು.
12 “ನಾನು ನಿಮಗೆ ಹೇಳಬೇಕಾದ ವಿಷಯಗಳು ಇನ್ನೂ ಬಹಳ ಉಂಟು, ಆದರೆ ನೀವು ಈಗ ಅವುಗಳನ್ನು ಗ್ರಹಿಸಲು ನಿಮ್ಮಲ್ಲಿ ಸಾಮರ್ಥ್ಯವಿಲ್ಲ. 13ಆದರೆ #16:13 ಯೋಹಾ 14:17:ಸತ್ಯದ ಆತ್ಮನು ಬರುವಾಗ ಆತನು ನಿಮ್ಮನ್ನು ಪೂರ್ಣ ಸತ್ಯದ ಕಡೆಗೆ ನಡೆಸುವನು. ಆತನು ತನ್ನಷ್ಟಕ್ಕೆ ತಾನೇ ಮಾತನಾಡದೆ ಕೇಳಿದ ಮಾತುಗಳನ್ನೇ ಆಡುವನು ಮತ್ತು ಮುಂದೆ ನಡೆಯುವ ಸಂಗತಿಗಳನ್ನು ನಿಮಗೆ ತಿಳಿಸುವನು. 14ಆತನು ನನ್ನದನ್ನು ಸ್ವೀಕರಿಸಿ ನಿಮಗೆ ತಿಳಿಯಪಡಿಸುತ್ತಾನಾದ್ದರಿಂದ #16:14 ಯೋಹಾ 7:39:ನನ್ನನ್ನೇ ಮಹಿಮೆಪಡಿಸುವನು. 15#16:15 ಯೋಹಾ 17:10:ತಂದೆಗೆ ಇರುವುದೆಲ್ಲಾ ನನ್ನದು. ಆದುದರಿಂದಲೇ ನನ್ನದನ್ನು ಸ್ವೀಕರಿಸಿ ನಿಮಗೆ ತಿಳಿಸುವನೆಂದು ನಾನು ಹೇಳಿದೆನು. 16ಇನ್ನು ಸ್ವಲ್ಪ ಕಾಲವಾದ ಮೇಲೆ ನಾನು ನಿಮಗೆ ಕಾಣಿಸುವುದಿಲ್ಲ, ಅನಂತರ ಸ್ವಲ್ಪ ಕಾಲವಾದ ಮೇಲೆ ನೀವು ಪುನಃ ನನ್ನನ್ನು ನೋಡುವಿರಿ” ಎಂದನು.
17ಇದನ್ನು ಕೇಳಿ ಆತನ ಶಿಷ್ಯರಲ್ಲಿ ಕೆಲವರು, “ಇದೇನು ಈತನು ಹೇಳುವ ಮಾತು? ‘ಸ್ವಲ್ಪ ಕಾಲವಾದ ಮೇಲೆ ನಾನು ನಿಮಗೆ ಕಾಣಿಸುವುದಿಲ್ಲ ಅನಂತರ ಸ್ವಲ್ಪ ಕಾಲವಾದ ಮೇಲೆ ನೀವು ಪುನಃ ನನ್ನನ್ನು ನೋಡುವಿರಿ ಮತ್ತು ನಾನು ತಂದೆಯ ಬಳಿಗೆ ಹೋಗುತ್ತೇನೆ’ ಎನ್ನುತ್ತಾನಲ್ಲಾ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡು 18“‘ಸ್ವಲ್ಪ ಕಾಲವೆಂದು’ ಈತನು ಹೇಳುವ ಈ ಮಾತೇನು? ಏನು ಮಾತನಾಡುತ್ತಿದ್ದಾನೋ ನಮಗೆ ತಿಳಿಯದು” ಎಂದು ಅಂದುಕೊಳ್ಳುತ್ತಿದ್ದರು. 19ಯೇಸುವು ಇದನ್ನು ಕುರಿತು ತನ್ನನ್ನು ಕೇಳಬೇಕೆಂದಿದ್ದಾರೆಂದು ತಿಳಿದು ಅವರಿಗೆ, “ಸ್ವಲ್ಪ ಕಾಲವಾದ ಮೇಲೆ ನಾನು ನಿಮಗೆ ಕಾಣಿಸುವುದಿಲ್ಲ, ಇನ್ನು ಸ್ವಲ್ಪ ಕಾಲವಾದ ಮೇಲೆ ನನ್ನನ್ನು ನೋಡುವಿರಿ, ಎಂದು ನಾನು ನಿಮಗೆ ಹೇಳಿದ್ದಕ್ಕೆ ನೀವು ನಿಮ್ಮನಿಮ್ಮೊಳಗೆ ವಿಚಾರಿಸಿಕೊಳ್ಳುತ್ತಿದ್ದೀರಾ? 20ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ. #16:20 ಮಾರ್ಕ 16:10:ನೀವು ಅಳುತ್ತಾ ಗೋಳಾಡುತ್ತಾ ಇರುವಿರಿ. ಆದರೆ ಲೋಕವು ಸಂತೋಷಿಸುವುದು. ನಿಮಗೆ ದುಃಖವಾಗುವುದು ಆದರೆ #16:20 ಲೂಕ 24:41, 52:ನಿಮ್ಮ ದುಃಖವು ಹೋಗಿ ಆನಂದ ಬರುವುದು. 21ಒಬ್ಬ ಸ್ತ್ರೀ ಹೆರುವಾಗ ತನ್ನ ಬೇನೆಯ ಕಾಲವು ಬಂದಿತೆಂದು ತಿಳಿದು ಆಕೆಗೆ ದುಃಖವಾಗುತ್ತದೆ, ಆದರೆ ಆಕೆಯು ಕೂಸನ್ನು ಹೆತ್ತ ಮೇಲೆ, ಲೋಕದಲ್ಲಿ ಒಂದು ಮಗು ಹುಟ್ಟಿತೆಂದು ಆನಂದದಿಂದ ಆ ವೇದನೆಯನ್ನು ಪುನಃ ನೆನಸಿಕೊಳ್ಳುವುದಿಲ್ಲ. 22ಹಾಗೆಯೇ, ನಿಮಗೂ ಈಗ ದುಃಖವಿದ್ದರೂ ನಾನು ನಿಮ್ಮನ್ನು ತಿರುಗಿ ನೋಡುವೆನು, ಆಗ ನಿಮ್ಮ ಹೃದಯಕ್ಕೆ ಆನಂದವಾಗುವುದು, ಮತ್ತು ನಿಮ್ಮ ಆನಂದವನ್ನು ಯಾರು ನಿಮ್ಮಿಂದ ತೆಗೆದು ಹಾಕಲು ಸಾಧ್ಯವಿಲ್ಲ. 23ಆ ದಿನದಲ್ಲಿ ನೀವು ನನ್ನನ್ನು ಏನೂ ಕೇಳುವುದಿಲ್ಲ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, #16:23 ಯೋಹಾ 14:13; 15:16: ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅದನ್ನು ಆತನು ನಿಮಗೆ ಕೊಡುವನು. 24ನೀವು ಇದುವರೆಗೆ ನನ್ನ ಹೆಸರಿನಲ್ಲಿ ಏನೊಂದನ್ನೂ ಕೇಳಿಕೊಳ್ಳಲಿಲ್ಲ. ಕೇಳಿಕೊಳ್ಳಿರಿ, ಆಗ ನಿಮ್ಮ ಆನಂದವು ಪರಿಪೂರ್ಣವಾಗುವ ಹಾಗೆ ನಿಮಗೆ ದೊರೆಯುವುದು.
25 “ಈ ಸಂಗತಿಗಳನ್ನು ಸಾಮ್ಯರೂಪವಾಗಿ ನಿಮಗೆ ಹೇಳಿದ್ದೇನೆ, ಆದರೆ ಇನ್ನು ಮೇಲೆ ಸಾಮ್ಯರೂಪವಾಗಿ ನಿಮ್ಮೊಂದಿಗೆ ಮಾತನಾಡದೆ ತಂದೆಯ ಕುರಿತಾಗಿ ಸ್ಪಷ್ಟವಾಗಿ ತಿಳಿಸುವ ಕಾಲವು ಬರುತ್ತದೆ. 26ಆ ದಿನದಲ್ಲಿ ನೀವು ನನ್ನ ಹೆಸರಿನಲ್ಲಿ ಕೇಳಿಕೊಳ್ಳುವಿರಿ, ನಿಮ್ಮ ಪರವಾಗಿ ನಾನು ತಂದೆಯನ್ನು ಬೇಡಿಕೊಳ್ಳುವೆನೆಂದು ನಾನು ನಿಮಗೆ ಹೇಳುವುದಿಲ್ಲ. 27ನೀವು ನನ್ನನ್ನು ಪ್ರೀತಿಸಿ #16:27 ಯೋಹಾ 16:30; 8:42; 17, 8:ನಾನು ತಂದೆಯ ಬಳಿಯಿಂದ ಹೊರಟುಬಂದವನೆಂದು ನಂಬಿದ್ದರಿಂದ #16:27 ಯೋಹಾ 14:21, 23; 17:23:ತಂದೆಯು ತಾನೇ ನಿಮ್ಮನ್ನು ಪ್ರೀತಿಸುತ್ತಾನೆ. 28ನಾನು ತಂದೆಯ ಬಳಿಯಿಂದ ಹೊರಟು ಈ ಲೋಕಕ್ಕೆ ಬಂದಿದ್ದೇನೆ, ಪುನಃ ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುತ್ತೇನೆ” ಎಂದನು.
29ಅದಕ್ಕೆ ಆತನ ಶಿಷ್ಯರು, “ಇಗೋ, ನೀನು ಹೇಳುವ ಸಂಗತಿಯನ್ನು ಈಗ ಸಾಮ್ಯರೂಪವಾಗಿ ಹೇಳದೆ ಸ್ಪಷ್ಟವಾಗಿ ಹೇಳುತ್ತಿದ್ದೀ. 30ನೀನು ಸಮಸ್ತವನ್ನು ತಿಳಿದವನೆಂದೂ, ನಿನಗೆ ಪ್ರಶ್ನೆ ಮಾಡಬೇಕಾದ ಅಗತ್ಯವಿಲ್ಲವೆಂದೂ ಈಗ ನಮಗೆ ತಿಳಿಯಿತು. ಆದುದರಿಂದ ನಿನ್ನನ್ನು ದೇವರ ಬಳಿಯಿಂದ ಬಂದವನೇ ಎಂದು ನಾವು ನಂಬುತ್ತೇವೆ” ಎಂದರು.
31ಅದಕ್ಕೆ ಯೇಸು, “ಈಗ ನೀವು ನಂಬುತ್ತೀರಿ. 32ಇಗೋ, ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸ್ಥಳಕ್ಕೆ ಚದರಿಹೋಗಿ ನನ್ನನ್ನು ಒಬ್ಬಂಟಿಗನಾಗಿ ಬಿಡುವ ಸಮಯವು ಬರುತ್ತದೆ. ಹೌದು, ಅದು ಈಗಲೇ ಬಂದಿದೆ. #16:32 ಯೋಹಾ 8:16, 29:ಆದರೂ ನಾನು ಏಕಾಂಗಿಯಲ್ಲ, ಏಕೆಂದರೆ ತಂದೆಯು ನನ್ನ ಸಂಗಡ ಇದ್ದಾನೆ. 33#16:33 ಯೋಹಾ 14:27; ಕೊಲೊ 3:15:ನೀವು ನನ್ನಲ್ಲಿದ್ದು ಸಮಾಧಾನವನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮ್ಮೊಂದಿಗೆ ಹೇಳಿದ್ದೇನೆ. #16:33 ಯೋಹಾ 15:18-21:ಲೋಕದಲ್ಲಿ ನಿಮಗೆ ಸಂಕಟಗಳುಂಟು. ಆದರೆ ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ” ಎಂದು ಹೇಳಿದನು.

S'ha seleccionat:

ಯೋಹಾ 16: IRVKan

Subratllat

Comparteix

Copia

None

Vols que els teus subratllats es desin a tots els teus dispositius? Registra't o inicia sessió