ಯೋಹಾ 3

3
ಹೊಸದಾಗಿ ಹುಟ್ಟುವುದು
1ಫರಿಸಾಯರಲ್ಲಿ ಯೆಹೂದ್ಯರ ಹಿರೀಸಭೆಯವನಾದ ನಿಕೊದೇಮನೆಂಬ ಒಬ್ಬ ಮನುಷ್ಯನಿದ್ದನು. 2ಅವನು ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದು ಆತನಿಗೆ, “ಗುರುವೇ, ನೀನು ದೇವರ ಬಳಿಯಿಂದ ಬಂದ ಬೋಧಕನೆಂದು ನಾವು ಬಲ್ಲೆವು. ನೀನು ಮಾಡುವಂಥ ಈ ಸೂಚಕ ಕಾರ್ಯಗಳನ್ನು ದೇವರ ಸಹಾಯವಿಲ್ಲದೆ ಮಾಡುವುದು ಯಾರಿಂದಲೂ ಆಗದು” ಎಂದು ಹೇಳಿದನು. 3ಯೇಸು ಅವನಿಗೆ, “ನಾನು ನಿಜನಿಜವಾಗಿ ಹೇಳುತ್ತೇನೆ, ಒಬ್ಬನು #3:3 ಅಥವಾ, ಮೇಲಿನಿಂದ. ಹೊಸದಾಗಿ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು,” ಎಂದು ಉತ್ತರ ಕೊಟ್ಟನು. 4ನಿಕೊದೇಮನು ಆತನನ್ನು, “ಮನುಷ್ಯನು ಮುದುಕನಾದ ಮೇಲೆ ತಿರುಗಿ ಹುಟ್ಟುವುದು ಹೇಗೆ? ಅವನು ತನ್ನ ತಾಯಿಯ ಗರ್ಭದಲ್ಲಿ ಎರಡನೆಯ ಸಾರಿ ಪ್ರವೇಶಿಸಿ ಹುಟ್ಟುವುದಕ್ಕಾದೀತೇ?” ಎಂದು ಕೇಳಿದನು. 5ಅದಕ್ಕೆ ಯೇಸು “ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಮತ್ತು ಆತ್ಮನಿಂದಲೂ ಹುಟ್ಟದಿದ್ದರೆ ಅವನು ದೇವರ ರಾಜ್ಯದಲ್ಲಿ ಪ್ರವೇಶಿಸಲಾರನು. 6ದೇಹದಿಂದ ಹುಟ್ಟಿದ್ದು ದೇಹವೇ, ಆತ್ಮನಿಂದ ಹುಟ್ಟಿದ್ದು ಆತ್ಮವೇ. 7‘ನೀವು ಹೊಸದಾಗಿ ಹುಟ್ಟಬೇಕು’ ಎಂದು ನಾನು ನಿನಗೆ ಹೇಳಿದ್ದರಿಂದ ಆಶ್ಚರ್ಯಪಡಬೇಡ 8ಗಾಳಿಯು ಇಷ್ಟ ಬಂದ ಕಡೆ ಬೀಸುತ್ತದೆ. ನೀನು ಅದರ ಶಬ್ದವನ್ನು ಕೇಳುತ್ತೀ, ಆದರೆ ಅದು ಎಲ್ಲಿಂದ ಬರುತ್ತದೋ ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು. ಆತ್ಮನಿಂದ ಹುಟ್ಟಿದವರೆಲ್ಲರೂ ಅದರಂತೆಯೇ” ಎಂದನು.
9ಅದಕ್ಕೆ ನಿಕೊದೇಮನು “ಇದೆಲ್ಲಾ ಹೇಗೆ ಸಾಧ್ಯ?” ಎಂದಾಗ, 10ಯೇಸು ಅವನಿಗೆ ಹೇಳಿದ್ದೇನಂದರೆ, “ಇಸ್ರಾಯೇಲರಿಗೆ ಬೋಧಕನಾಗಿರುವ ನಿನಗೆ ಈ ಸಂಗತಿಗಳು ತಿಳಿಯುವುದಿಲ್ಲವೋ? 11ನಿನಗೆ ನಿಜನಿಜವಾಗಿ ಹೇಳುತ್ತೇನೆ, ನಾವು ತಿಳಿದಿರುವುದನ್ನು ಮಾತನಾಡುತ್ತೇವೆ ಮತ್ತು ನೋಡಿದ್ದಕ್ಕೆ ಸಾಕ್ಷಿ ಕೊಡುತ್ತೇವೆ. ಆದರೂ ನೀವು ನಮ್ಮ ಸಾಕ್ಷಿಯನ್ನು ಸ್ವೀಕರಿಸುವುದಿಲ್ಲ. 12ನಾನು ಭೂಲೋಕದ ಕಾರ್ಯಗಳನ್ನು ಕುರಿತು ನಿಮಗೆ ಹೇಳಿದರೆ ನೀವು ನಂಬುವುದಿಲ್ಲ, ಪರಲೋಕದ ಕಾರ್ಯಗಳನ್ನು ಕುರಿತು ನಿಮಗೆ ಹೇಳಿದರೆ ಹೇಗೆ ನಂಬುವಿರಿ? 13#3:13 ಜ್ಞಾ. 30. 4; 1 ಕೊರಿ 15:47; ಎಫೆ 4:9:ಪರಲೋಕದಿಂದ ಇಳಿದು ಬಂದವನೇ, ಅಂದರೆ, #3:13 ಕೆಲವು ಪ್ರತಿಗಳಲ್ಲಿ, ಪರಲೋಕದಲ್ಲಿರುವ ಮನುಷ್ಯ ಕುಮಾರನೇ ಎಂದು ಬರೆದದೆ. ಮನುಷ್ಯಕುಮಾರನೇ ಹೊರತು ಮತ್ತಾರು ಪರಲೋಕಕ್ಕೆ ಏರಿ ಹೋದವರಿಲ್ಲ. 14ಇದಲ್ಲದೆ #3:14 ಅರಣ್ಯ 21:8,9.ಮೋಶೆಯು ಅಡವಿಯಲ್ಲಿ ಕಂಚಿನ ಸರ್ಪವನ್ನು ಮೇಲೆ ಎತ್ತಿ ನಿಲ್ಲಿಸಿದ ಹಾಗೆಯೇ ಮನುಷ್ಯಕುಮಾರನು ಸಹ ಮೇಲಕ್ಕೆ ಎತ್ತಲ್ಪಡಬೇಕು. 15ಹೀಗೆ ಆತನನ್ನು ನಂಬುವವರೆಲ್ಲರೂ ನಿತ್ಯಜೀವವನ್ನು ಹೊಂದುವರು.
16 “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು. 17ದೇವರು ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಆತನನ್ನು ಕಳುಹಿಸಿಕೊಟ್ಟನೇ ಹೊರತು ಅಪರಾಧಿಯೆಂದು ಖಂಡಿಸಲಿಕ್ಕೆ ಕಳುಹಿಸಲಿಲ್ಲ. 18ಆತನನ್ನು ನಂಬುವವನಿಗೆ ನ್ಯಾಯತೀರ್ಪು ಆಗುವುದಿಲ್ಲ, ಆದರೆ ನಂಬದವನಿಗೆ ಆಗಲೇ ತೀರ್ಪಾಯಿತು. ಏಕೆಂದರೆ, ಅವನು ದೇವರ ಒಬ್ಬನೇ ಮಗನ ಹೆಸರಿನ ಮೇಲೆ ನಂಬಿಕೆ ಇಡಲಿಲ್ಲ. 19ಆ ತೀರ್ಪು ಏನೆಂದರೆ #3:19 ಯೋಹಾ 1:4, 5; ಎಫೆ 5:8:ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕೃತ್ಯಗಳು ಕೆಟ್ಟವುಗಳಾಗಿರುವುದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಪ್ರೀತಿಸಿದರು. 20ಕೆಟ್ಟದ್ದನ್ನು ಮಾಡುವವರು ತಮ್ಮ ದುಷ್ಕೃತ್ಯಗಳು ಬಹಿರಂಗವಾಗಬಾರದೆಂದು ಬೆಳಕಿಗೆ ಬರುವುದಿಲ್ಲ ಮತ್ತು ಬೆಳಕನ್ನು ದ್ವೇಷಿಸುತ್ತಾರೆ. 21ಆದರೆ ಸತ್ಯವನ್ನು ಅನುಸರಿಸಿ ನಡೆಯುವವನು ತಾನು ದೇವರಿಂದ ನಡಿಸಿಕೊಂಡು ಬಂದವನಾಗಿ ತನ್ನ ಕೃತ್ಯಗಳನ್ನು ಪ್ರಕಟಪಡಿಸುವುದಕ್ಕಾಗಿ ಬೆಳಕಿಗೆ ಬರುತ್ತಾನೆ.”
ಸ್ನಾನಿಕನಾದ ಯೋಹಾನನು ಯೇಸುವಿನ ವಿಷಯವಾಗಿ ಪುನಃ ಸಾಕ್ಷಿ ಹೇಳಿದ್ದು
22ಆ ಮೇಲೆ ಯೇಸು ತನ್ನ ಶಿಷ್ಯರೊಡನೆ ಯೂದಾಯ ದೇಶಕ್ಕೆ ಬಂದು ಅಲ್ಲಿ ಅವರ ಜೊತೆ ಇದ್ದು, #3:22 ಯೋಹಾ 4:1, 2:ದೀಕ್ಷಾಸ್ನಾನ ಕೊಡುತ್ತಿದ್ದನು. 23ಇದಲ್ಲದೆ ಯೋಹಾನನೂ ಸಹ ಸಾಲಿಮ್ ಎಂಬ ಊರಿಗೆ ಹತ್ತಿರವಿರುವ ಐನೋನೆಂಬ ಸ್ಥಳದಲ್ಲಿದ್ದು ದೀಕ್ಷಾಸ್ನಾನ ಕೊಡುತ್ತಿದ್ದನು, ಏಕೆಂದರೆ, ಅಲ್ಲಿ ಬಹಳ ನೀರಿತ್ತು. ಜನರು ಬಂದು ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು. 24ಆಗ ಇನ್ನೂ #3:24 ಮತ್ತಾ 4:12:ಯೋಹಾನನ್ನು ಸೆರೆಮನೆಯಲ್ಲಿ ಹಾಕಿರಲಿಲ್ಲ. 25ಹೀಗಿರಲಾಗಿ ಯೋಹಾನನ ಶಿಷ್ಯರಲ್ಲಿ ಕೆಲವರಿಗೂ ಒಬ್ಬ ಯೆಹೂದ್ಯನಿಗೂ ಶುದ್ಧಾಚಾರವನ್ನು ಕುರಿತು ವಾದ ಉಂಟಾಯಿತು. 26ಆಗ ಅವರು ಯೋಹಾನನ ಬಳಿಗೆ ಬಂದು ಅವನಿಗೆ “ಗುರುವೇ, ಯೊರ್ದನ್ ನದಿಯ ಆಚೆ ನಿನ್ನ ಬಳಿಯಲ್ಲಿದ್ದ ಒಬ್ಬನ ವಿಷಯದಲ್ಲಿ ನೀನು ಸಾಕ್ಷಿ ಕೊಟ್ಟೆಯಲ್ಲಾ, ಇಗೋ, ಆತನು ದೀಕ್ಷಾಸ್ನಾನ ಕೊಡುತ್ತಿದ್ದಾನೆ, ಆತನ ಬಳಿಗೆ ಎಲ್ಲರೂ ಹೋಗುತ್ತಿದ್ದಾರೆ.” ಎಂದು ಹೇಳಲು 27ಯೋಹಾನನು “ಪರಲೋಕದಿಂದ ಅನುಗ್ರಹಿಸದ ಹೊರತು ಮನುಷ್ಯನು ಏನ್ನನ್ನೂ ಹೊಂದಲಾರನು. 28#3:28 ಯೋಹಾ 1:20, 33; ಮತ್ತಾ 3:3,11.‘ನಾನು ಕ್ರಿಸ್ತನಲ್ಲ,’ ಆದರೆ ‘ಆತನಿಗೆ ಮುಂದಾಗಿ ಕಳುಹಿಸಲ್ಪಟ್ಟವನಾಗಿದ್ದೇನೆ’ ಎಂದು ನಾನು ಹೇಳಿದ್ದಕ್ಕೆ ನೀವೇ ಸಾಕ್ಷಿಗಳಾಗಿದ್ದೀರಿ. 29ಮದಲಗಿತ್ತಿಯುಳ್ಳವನೇ ಮದಲಿಂಗನು. ಆದರೂ ಮದಲಿಂಗನ ಗೆಳೆಯನು ಅವನ ಹತ್ತಿರ ನಿಂತುಕೊಂಡು ಅವನ ಮಾತುಗಳನ್ನು ಕೇಳಿ ಮದಲಿಂಗನ ಧ್ವನಿಗೆ ಬಹು ಸಂತೋಷಪಡುತ್ತಾನಲ್ಲವೇ. ಆದಕಾರಣ ಈ ನನ್ನ ಸಂತೋಷವು ಪರಿಪೂರ್ಣವಾಯಿತು. 30ಆತನು ವೃದ್ಧಿಯಾಗಬೇಕು ನಾನು ಕಡಿಮೆಯಾಗಬೇಕು, ಅಂದನು. 31#3:31 ರೋಮಾ. 9:5; 1 ಕೊರಿ 15:47:ಮೇಲಿನಿಂದ ಬರುವವನು ಎಲ್ಲರಿಗಿಂತಲೂ ಮೇಲಾದವನು, ಭೂಲೋಕದಿಂದ ಹುಟ್ಟಿದವನು ಭೂಲೋಕದವನಾಗಿದ್ದು ಭೂಲೋಕಕ್ಕೆ ಸಂಬಂಧಿಸಿದ ಮಾತುಗಳನ್ನು ಆಡುತ್ತಾನೆ. ಪರಲೋಕದಿಂದ ಬರುವವನು ಎಲ್ಲವುಗಳಿಗಿಂತಲೂ ಮೇಲಾದವನು. 32ತಾನು ಕಂಡು ಕೇಳಿದ್ದಕ್ಕೆ ಸಾಕ್ಷಿ ಕೊಡುತ್ತಾನೆ. ಆದರೆ ಆತನ ಸಾಕ್ಷಿಯನ್ನು ಯಾರೂ ಸ್ವೀಕರಿಸುವುದಿಲ್ಲ. 33ಆತನ ಸಾಕ್ಷಿಯನ್ನು ಸ್ವೀಕರಿಸಿದವನು ದೇವರು ಸತ್ಯವಂತನೆಂದು ದೃಢಪಡಿಸುವವನಾಗಿದ್ದಾನೆ. 34ಹೇಗೆಂದರೆ ದೇವರು ಯಾರನ್ನು ಕಳುಹಿಸಿದ್ದಾನೋ ಆತನಿಗೆ ಆತ್ಮ ವರವನ್ನು ಅಳತೆಮಾಡದೆ ಧಾರಾಳವಾಗಿ ಅನುಗ್ರಹಿಸುವುದರಿಂದ ಆತನು ದೇವರ ಮಾತುಗಳನ್ನೇ ಆಡುತ್ತಾನೆ. 35ತಂದೆಯಾದ ದೇವರು ತನ್ನ ಮಗನನ್ನು ಪ್ರೀತಿಸಿ ಎಲ್ಲವನ್ನೂ ಆತನ ಕೈಯಲ್ಲಿ ಕೊಟ್ಟಿದ್ದಾನೆ. 36ಆತನ ಮಗನನ್ನು ನಂಬುವವನಿಗೆ ನಿತ್ಯಜೀವ ಉಂಟು. ಮಗನಿಗೆ ಅವಿಧೇಯನಾಗುವವನು ಜೀವವನ್ನು ಕಾಣುವುದೇ ಇಲ್ಲ. ಆದರೆ ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವುದು.”

S'ha seleccionat:

ಯೋಹಾ 3: IRVKan

Subratllat

Comparteix

Copia

None

Vols que els teus subratllats es desin a tots els teus dispositius? Registra't o inicia sessió