Logo YouVersion
Îcone de recherche

ಆದಿಕಾಂಡ 16

16
ಇಷ್ಮಾಯೇಲನ ಜನನವು
1ಅಬ್ರಾಮನ ಹೆಂಡತಿಯಾದ ಸಾರಯಳಿಗೆ ಮಕ್ಕಳಿರಲಿಲ್ಲ. ಆಕೆಗೆ ಐಗುಪ್ತ ದೇಶದವಳಾದ ಹಾಗರಳೆಂಬ ದಾಸಿಯಿದ್ದಳು. 2ಹೀಗಿರಲಾಗಿ ಸಾರಯಳು ಅಬ್ರಾಮನಿಗೆ - ಯೆಹೋವನು ನನಗೆ ಮಕ್ಕಳನ್ನು ಕೊಡಲಿಲ್ಲವಷ್ಟೆ; ನೀನು ನನ್ನ ದಾಸಿಯ ಬಳಿಗೆ ಹೋಗಬೇಕು; ಒಂದು ವೇಳೆ ಅವಳ ಮೂಲಕ ನನಗೆ ಸಂತಾನವಾದೀತು ಎಂದು ಹೇಳಲು ಅಬ್ರಾಮನು ಆಕೆಯ ಮಾತಿಗೆ ಸಮ್ಮತಿಪಟ್ಟನು. 3ಅಬ್ರಾಮನು ಹತ್ತು ವರುಷ ಕಾನಾನ್ ದೇಶದಲ್ಲಿ ವಾಸಿಸಿದ ಮೇಲೆ ಅವನ ಹೆಂಡತಿಯಾದ ಸಾರಯಳು ಐಗುಪ್ತ್ಯಳಾದ ಹಾಗರಳೆಂಬ ದಾಸಿಯನ್ನು ಕರೆದು ತನ್ನ ಗಂಡನಿಗೆ ಹೆಂಡತಿಯಾಗಿ ಒಪ್ಪಿಸಿದಳು. 4ಅವನು ಹಾಗರಳನ್ನು ಕೂಡಲು ಬಸುರಾದಳು. ತಾನು ಬಸುರಾದೆನೆಂದು ತಿಳುಕೊಂಡಾಗ ಅವಳು ಯಾಜಮಾನಿಯನ್ನು ತಾತ್ಸಾರ ಮಾಡಿದಳು. 5ಆಗ ಸಾರಯಳು ಅಬ್ರಾಮನಿಗೆ - ನನ್ನ ಗೋಳು ನಿನಗೆ ತಗಲಲಿ; ನನ್ನ ದಾಸಿಯನ್ನು ನಿನಗೆ ಹೆಂಡತಿಯಾಗಿ ಒಪ್ಪಿಸಿದೆನಷ್ಟೆ; ಅವಳು ತಾನು ಬಸುರಾದೆನೆಂದು ತಿಳಿದು ನನ್ನನ್ನು ತಾತ್ಸಾರಮಾಡುತ್ತಾಳೆ; ನಿನಗೂ ನನಗೂ ಯೆಹೋವನೇ ನ್ಯಾಯತೀರಿಸಲಿ ಎಂದು ಹೇಳಲು ಅಬ್ರಾಮನು - 6ನಿನ್ನ ದಾಸಿಯು ನಿನ್ನ ಕೈಯಲ್ಲೇ ಇದ್ದಾಳೆ; ಮನಸ್ಸುಬಂದಂತೆ ಮಾಡು ಅಂದನು. ಆಗ ಸಾರಯಳು ಅವಳನ್ನು ಬಾಧಿಸಲು ಅವಳು ಓಡಿಹೋದಳು.
7ಅವಳು ಮರಳುಕಾಡಿನಲ್ಲಿ ಶೂರಿನ ಮಾರ್ಗದ ಒರತೆಯ ಹತ್ತಿರ ಇರುವಾಗ ಯೆಹೋವನ ದೂತನು ಅವಳನ್ನು ಕಂಡು - 8ಸಾರಯಳ ದಾಸಿಯಾದ ಹಾಗರಳೇ, ಎಲ್ಲಿಂದ ಬಂದಿ? ಎಲ್ಲಿಗೆ ಹೋಗುತ್ತೀ ಎಂದು ಕೇಳಲು ಅವಳು - ನನ್ನ ಯಜಮಾನಿಯಾದ ಸಾರಯಳ ಬಳಿಯಿಂದ ಓಡಿಹೋಗುತ್ತಾ ಇದ್ದೇನೆ ಅಂದಳು. 9ಅದಕ್ಕೆ ಯೆಹೋವನ ದೂತನು - ನೀನು ಯಜಮಾನಿಯ ಬಳಿಗೆ ಹಿಂದಿರುಗಿ ಹೋಗಿ ಅವಳಿಗೆ ತಗ್ಗಿ ನಡೆದುಕೋ ಅಂದನು. 10ಅದಲ್ಲದೆ ಯೆಹೋವನ ದೂತನು ಅವಳಿಗೆ - ನಿನಗೆ ಬಹುಸಂತಾನವಾಗ ಮಾಡುವೆನು; ಅದು ಲೆಕ್ಕಿಸಕೂಡದಷ್ಟು ಅಪರಿವಿುತವಾಗುವದು ಎಂದು ಹೇಳಿದನು. 11ಮತ್ತು ಯೆಹೋವನ ದೂತನು ಅವಳಿಗೆ -
ನೀನು ಬಸುರಾಗಿದ್ದೀಯಷ್ಟೆ; ನಿನಗೆ ಮಗನು ಹುಟ್ಟುವನು;
ಯೆಹೋವನು ನಿನ್ನ ಕಷ್ಟದ ಕೂಗಿಗೆ ಕಿವಿಗೊಟ್ಟದ್ದರಿಂದ
ಆ ಮಗನಿಗೆ ಇಷ್ಮಾಯೇಲ್#16.11 ಇಷ್ಮಾಯೇಲ್ ಅಂದರೆ ದೇವರು ಕೇಳುವವನು. ಎಂದು ಹೆಸರಿಡಬೇಕು.
12ಅವನು#16.12 ಅವನು ಅಂದರೆ ಅವನ ಸಂತತಿಯವರು. ಕಾಡುಗತ್ತೆಯಂತೆ ಇರುವನು.
ಅವನು ಎಲ್ಲರ ಮೇಲೆ ಕೈಯೆತ್ತುವನು;
ಹಾಗೆಯೇ ಅವನ ಮೇಲೆ ಎಲ್ಲರೂ ಕೈಯೆತ್ತುವರು.
ತನ್ನ ಅಣ್ಣತಮ್ಮಂದಿರ ಎದುರುಗಡೆಯೇ#16.12 ಅಥವಾ: ಪೂರ್ವದಿಕ್ಕಿನಲ್ಲಿ. ವಾಸವಾಗಿರುವನು
ಎಂದು ಹೇಳಿ ಹೋದನು. 13ಅವಳು - ನನ್ನನ್ನು ನೋಡುವಾತನನ್ನು ನಾನು ಇಲ್ಲಿಯೂ ನೋಡಿದ್ದೇನಲ್ಲಾ ಅಂದುಕೊಂಡು ತನ್ನ ಸಂಗಡ ಮಾತಾಡಿದ್ದ ಯೆಹೋವನಿಗೆ [ಎಲ್ಲವನ್ನೂ] ನೋಡುವ#16.13 ಮೂಲ: ನೀನು ನೋಡುವ. ದೇವರೆಂದು ಹೆಸರಿಟ್ಟಳು. 14ಈ ಸಂಗತಿಯಿಂದ ಅಲ್ಲಿರುವ ಬಾವಿಗೆ ಲಹೈರೋಯಿ#16.14 ಅಂದರೆ, ನನ್ನನ್ನು ನೋಡುವ ಜೀವಸ್ವರೂಪನ. ಬಾವಿ ಎಂದು ಹೆಸರಾಯಿತು; ಅದು ಕಾದೇಶಿಗೂ ಬೆರೆದಿಗೂ ನಡುವೆ ಅದೆ. 15ಹಾಗರಳು ಅಬ್ರಾಮನಿಂದ ಮಗನನ್ನು ಹೆತ್ತಳು; ಅಬ್ರಾಮನು ಅವನಿಗೆ ಇಷ್ಮಾಯೇಲ್ ಎಂದು ಹೆಸರಿಟ್ಟನು. 16ಅವಳು ಇಷ್ಮಾಯೇಲನನ್ನು ಹೆತ್ತಾಗ ಅಬ್ರಾಮನು ಎಂಭತ್ತಾರು ವರುಷದವನಾಗಿದ್ದನು.

Surbrillance

Partager

Copier

None

Tu souhaites voir tes moments forts enregistrés sur tous tes appareils? Inscris-toi ou connecte-toi