Logo YouVersion
Îcone de recherche

ಆದಿ 13

13
ಅಬ್ರಾಮನು ಲೋಟನನ್ನು ಅಗಲಿದ್ದು
1ಹೀಗೆ ಅಬ್ರಾಮನು ತನ್ನದನ್ನೆಲ್ಲಾ ತೆಗೆದುಕೊಂಡು ಹೆಂಡತಿಯನ್ನೂ, ಲೋಟನನ್ನೂ ಸಂಗಡ ಕರೆದುಕೊಂಡು ಐಗುಪ್ತದೇಶವನ್ನು ಬಿಟ್ಟು ಕಾನಾನ್ ದೇಶದ ದಕ್ಷಿಣ ಪ್ರಾಂತ್ಯಕ್ಕೆ ಬಂದನು. 2ಅಬ್ರಾಮನು ಬಹು ಐಶ್ವರ್ಯವಂತನಾಗಿದ್ದನು; ಅವನಿಗೆ ಪಶುಗಳೂ ಬೆಳ್ಳಿಬಂಗಾರವೂ ಇದ್ದವು.
3ಅವನು ದಕ್ಷಿಣ ದೇಶವನ್ನು ಬಿಟ್ಟು ಮುಂದೆ ಪ್ರಯಾಣ ಮಾಡುತ್ತಾ ಬೇತೇಲಿನವರೆಗೆ ಅಂದರೆ ಬೇತೇಲಿಗೂ ಆಯಿ ಎಂಬ ಊರಿಗೂ 4ನಡುವೆ ಪೂರ್ವದಲ್ಲಿ ಗುಡಾರ ಹಾಕಿಸಿ ಯಜ್ಞವೇದಿಯನ್ನು ಕಟ್ಟಿದ್ದ ಸ್ಥಳಕ್ಕೆ ಅಬ್ರಾಮನು ಹಿಂತಿರುಗಿ ಬಂದು ಅಲ್ಲಿ ಯೆಹೋವನ ಹೆಸರಿನಲ್ಲಿ ಆರಾಧಿಸಿದನು. 5ಅಬ್ರಾಮನ ಜೊತೆಯಲ್ಲಿದ್ದ ಲೋಟನಿಗೂ ಕುರಿ, ಎತ್ತು, #13:5 ಗುಡಾರಗಳು.ಕುಟುಂಬಗಳು ಇದ್ದವು. 6ಆ ಸ್ಥಳವು ಅವರಿಬ್ಬರ ಜೀವನಕ್ಕೆ ಸಾಲದೆ ಹೋಯಿತು. 7ಅವರಿಬ್ಬರ ಆಸ್ತಿ ಬಹಳವಾಗಿದ್ದುದರಿಂದ ಅವರು ಒಟ್ಟಿಗೆ ವಾಸವಾಗಿರುವುದು ಅಸಾಧ್ಯವಾಯಿತು. ಇದರಿಂದ ಅಬ್ರಾಮನ ದನ ಕಾಯುವವರಿಗೂ ಲೋಟನ ದನ ಕಾಯುವವರಿಗೂ ಜಗಳವಾಗುತ್ತಿತ್ತು. ಇದಲ್ಲದೆ ಕಾನಾನ್ಯರೂ ಪೆರಿಜೀಯರೂ ಆ ಕಾಲದಲ್ಲಿ ದೇಶದೊಳಗೆ ವಾಸವಾಗಿದ್ದರು.
8ಹೀಗಿರಲು ಅಬ್ರಾಮನು ಲೋಟನಿಗೆ, “ನನಗೂ ನಿನಗೂ, ನನ್ನ ದನ ಕಾಯುವವರಿಗೂ ನಿನ್ನ ದನ ಕಾಯುವವರಿಗೂ ಜಗಳವಾಗಬಾರದು; ನಾವು ಸಹೋದರರಲ್ಲವೇ. 9ದೇಶವೆಲ್ಲಾ ನಿನ್ನ ಎದುರಿಗೆ ಇದೆ; ದಯವಿಟ್ಟು ನನ್ನನ್ನು ಬಿಟ್ಟು ಪ್ರತ್ಯೇಕವಾಗಿ ಹೋಗು. ನೀನು ಎಡಗಡೆಗೆ ಹೋದರೆ ನಾನು ಬಲಗಡೆಗೆ ಹೋಗುವೆನು; ನೀನು ಬಲಗಡೆಗೆ ಹೋದರೆ ನಾನು ಎಡಗಡೆಗೆ ಹೋಗುವೆನು” ಎಂದು ಹೇಳಿದನು.
10ಲೋಟನು ಕಣ್ಣೆತ್ತಿ ನೋಡಲಾಗಿ, ಯೊರ್ದನ್ ಹೊಳೆಯ ಸುತ್ತಲಿನ ಪ್ರದೇಶವು ಚೋಗರಿನವರೆಗೆ ನೀರಾವರಿಯ ಪ್ರದೇಶವೆಂದು ತಿಳಿದುಕೊಂಡನು. ಯೆಹೋವನು ಸೊದೋಮ್ ಗೊಮೋರ ಪಟ್ಟಣಗಳನ್ನು ನಾಶಮಾಡುವುದಕ್ಕಿಂತ ಮೊದಲು ಆ ಸೀಮೆಯು ಯೆಹೋವನ ವನದಂತೆಯೂ, ಐಗುಪ್ತ ದೇಶದಂತೆಯೂ ನೀರಾವರಿಯ ಪ್ರದೇಶವಾಗಿತ್ತು. 11ಆದುದರಿಂದ ಲೋಟನು ಯೊರ್ದನ್ ಹೊಳೆಯ ಸುತ್ತಣ ಪ್ರದೇಶವನ್ನು ಆರಿಸಿಕೊಂಡು ಮೂಡಣ ಕಡೆಗೆ ಹೊರಟನು. 12ಹೀಗೆ ಅವರಿಬ್ಬರೂ ಪ್ರತ್ಯೇಕವಾದರು. ಅಬ್ರಾಮನು ಕಾನಾನ್ ದೇಶದಲ್ಲಿ ವಾಸಮಾಡಿದನು. ಲೋಟನು ಯೊರ್ದನ್ ಹೊಳೆಯ ಸುತ್ತಣ ಊರುಗಳಲ್ಲಿ ವಾಸ ಮಾಡುತ್ತಾ ಸೊದೋಮಿನ ಸಮೀಪದಲ್ಲಿ ಗುಡಾರ ಹಾಕಿದನು. 13ಆದರೆ ಸೊದೋಮ್ ಪಟ್ಟಣದ ಜನರು ಯೆಹೋವನ ದೃಷ್ಟಿಯಲ್ಲಿ ಬಹು ದುಷ್ಟರೂ ಪಾಪಿಷ್ಠರು ಆಗಿದ್ದರು.
ಅಬ್ರಾಮನು ಹೆಬ್ರೋನಿಗೆ ಬಂದದ್ದು
14ಲೋಟನು ಅಬ್ರಾಮನನ್ನು ಬಿಟ್ಟು ಬೇರೆಯಾದ ನಂತರ ಯೆಹೋವನು ಅಬ್ರಾಮನಿಗೆ, “ನೀನಿರುವ ಸ್ಥಳದಿಂದ ದಕ್ಷಿಣಕ್ಕೂ, ಉತ್ತರಕ್ಕೂ, ಪೂರ್ವಕ್ಕೂ, ಪಶ್ಚಿಮಕ್ಕೂ, ಕಣ್ಣೆತ್ತಿ ನೋಡು. 15ನೀನು ನೋಡುವ ಈ ದೇಶವನ್ನೆಲ್ಲಾ ನಿನಗೂ ನಿನ್ನ ಸಂತತಿಗೂ ಶಾಶ್ವತವಾಗಿ ಕೊಡುವೆನು. 16ನಿನ್ನ ಸಂತಾನದವರನ್ನು ಭೂಮಿಯ ಧೂಳಿನಷ್ಟು ಅಸಂಖ್ಯವಾಗಿ ಮಾಡುವೆನು. ಭೂಮಿಯಲ್ಲಿರುವ ಧೂಳನ್ನು ಲೆಕ್ಕಮಾಡುವುದಾದರೆ ನಿನ್ನ ಸಂತಾನವನ್ನೂ ಲೆಕ್ಕಿಸಬಹುದು. 17ನೀನೆದ್ದು, ಈ ದೇಶದ ಎಲ್ಲಾ ಕಡೆಯಲ್ಲಿಯೂ ತಿರುಗಾಡು; ಇದನ್ನು ನಿನಗೆ ಕೊಡುವೆನು” ಎಂದು ಹೇಳಿದನು.
18ತರುವಾಯ ಅಬ್ರಾಮನು ಗುಡಾರವನ್ನು ತೆಗೆದುಕೊಂಡು ಹೆಬ್ರೋನಿನಲ್ಲಿರುವ ಮಮ್ರೆ ಮೋರೆ ಎಂಬ ತೋಪಿಗೆ ಬಂದು ಅಲ್ಲೇ ವಾಸಮಾಡಿಕೊಂಡು, ಯೆಹೋವನಿಗೆ ಯಜ್ಞವೇದಿಯನ್ನು ಕಟ್ಟಿಸಿದನು.

Sélection en cours:

ಆದಿ 13: IRVKan

Surbrillance

Partager

Copier

None

Tu souhaites voir tes moments forts enregistrés sur tous tes appareils? Inscris-toi ou connecte-toi