Logo YouVersion
Îcone de recherche

ಯೋಹಾನನ ಸುವಾರ್ತೆ 4

4
ಯೇಸು ಮತ್ತು ಸಮಾರ್ಯ ಸ್ತ್ರೀಯ ಸಂಭಾಷಣೆ
1ತಾನು ಯೋಹಾನನಿಗಿಂತಲೂ ಹೆಚ್ಚು ಶಿಷ್ಯರನ್ನು ಮಾಡಿಕೊಂಡು ಅವರಿಗೆ ದೀಕ್ಷಾಸ್ನಾನ ಮಾಡಿಸುತ್ತಿರುವ ಸುದ್ದಿಯು ಫರಿಸಾಯರಿಗೆ ತಿಳಿಯಿತೆಂಬುದು ಯೇಸುವಿಗೆ ಗೊತ್ತಾಯಿತು. 2(ವಾಸ್ತವವಾಗಿ ಜನರಿಗೆ ದೀಕ್ಷಾಸ್ನಾನ ಕೊಟ್ಟದ್ದು ಯೇಸುವಲ್ಲ. ಆತನ ಶಿಷ್ಯರೇ ಜನರಿಗೆ ದೀಕ್ಷಾಸ್ನಾನ ಮಾಡಿಸಿದರು.) 3ಆಗ, ಆತನು ಜುದೇಯವನ್ನು ಬಿಟ್ಟು ಮತ್ತೆ ಗಲಿಲಾಯಕ್ಕೆ ಹೋದನು. 4ಸಮಾರ್ಯ ಪ್ರಾಂತ್ಯದ ಮೂಲಕವೇ ಗಲಿಲಾಯಕ್ಕೆ ಹೋಗಬೇಕಿತ್ತು.
5ಯೇಸು ಸಮಾರ್ಯದ ಪಟ್ಟಣವಾದ ಸಿಖಾರ್ ಎಂಬಲ್ಲಿಗೆ ಬಂದನು. ಯಾಕೋಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟ ಭೂಮಿಯ ಸಮೀಪದಲ್ಲಿ ಆ ಊರಿದೆ. 6ಯಾಕೋಬನ ಬಾವಿಯು ಅಲ್ಲಿತ್ತು. ಯೇಸು ತನ್ನ ದೀರ್ಘ ಪ್ರಯಾಣದಿಂದ ಆಯಾಸಗೊಂಡಿದ್ದನು. ಆದ್ದರಿಂದ ಆತನು ಬಾವಿಯ ಬಳಿ ಕುಳಿತುಕೊಂಡನು. ಆಗ ಸುಮಾರು ಮಧ್ಯಾಹ್ನದ ಸಮಯವಾಗಿತ್ತು. 7ಸಮಾರ್ಯದ ಸ್ತ್ರೀಯೊಬ್ಬಳು ನೀರನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಆ ಬಾವಿಗೆ ಬಂದಳು. ಯೇಸು ಆಕೆಗೆ, “ದಯವಿಟ್ಟು, ಕುಡಿಯಲು ಸ್ವಲ್ಪ ನೀರು ಕೊಡು” ಎಂದು ಕೇಳಿದನು. 8(ಯೇಸುವಿನ ಶಿಷ್ಯರು ಆಹಾರಪದಾರ್ಥವನ್ನು ಕೊಂಡುಕೊಂಡು ಬರಲು ಪಟ್ಟಣದೊಳಗೆ ಹೋಗಿದ್ದಾಗ ಇದು ಸಂಭವಿಸಿತು.)
9ಸಮಾರ್ಯದ ಸ್ತ್ರೀಯು, “ಕುಡಿಯುವ ನೀರಿಗಾಗಿ ನೀನು ನನ್ನನ್ನು ಕೇಳುತ್ತಿರುವುದು ನನಗೆ ಆಶ್ಚರ್ಯವನ್ನು ಉಂಟುಮಾಡಿದೆ! ನೀನಾದರೋ ಯೆಹೂದ್ಯನು. ನಾನಾದರೋ ಸಮಾರ್ಯದವಳು!” ಎಂದು ಹೇಳಿದಳು. (ಯೆಹೂದ್ಯರು ಸಮಾರ್ಯದವರೊಂದಿಗೆ ಸ್ನೇಹದಿಂದಿರಲಿಲ್ಲ.)
10ಯೇಸು ಆಕೆಗೆ, “ದೇವರು ಏನು ಕೊಡುತ್ತಾನೆಂಬುದು ನಿನಗೆ ಗೊತ್ತಿಲ್ಲ ಮತ್ತು ಕುಡಿಯಲು ನೀರನ್ನು ಕೇಳಿದ ನಾನು ಯಾರೆಂಬುದೂ ನಿನಗೆ ಗೊತ್ತಿಲ್ಲ. ನಿನಗೆ ಈ ಸಂಗತಿಗಳು ಗೊತ್ತಿದ್ದರೆ, ನೀನು ನನ್ನನ್ನು ಕೇಳಿಕೊಳ್ಳುತ್ತಿದ್ದೆ, ಮತ್ತು ನಾನು ನಿನಗೆ ಜೀವಜಲವನ್ನು ಕೊಡುತ್ತಿದ್ದೆ” ಎಂದನು.
11ಆ ಸ್ತ್ರೀಯು, “ಅಯ್ಯಾ, ಆ ಜೀವಜಲ ನಿನಗೆಲ್ಲಿ ಸಿಕ್ಕುವುದು? ಬಾವಿಯು ಬಹು ಆಳವಾಗಿದೆ ಮತ್ತು ನೀರು ಸೇದುವುದಕ್ಕೆ ನಿನ್ನಲ್ಲಿ ಏನೂ ಇಲ್ಲ. 12ನಮ್ಮ ಪಿತೃವಾದ ಯಾಕೋಬನಿಗಿಂತಲೂ ನೀನು ದೊಡ್ಡವನೋ? ನಮಗೆ ಈ ಬಾವಿಯನ್ನು ಯಾಕೋಬನೇ ಕೊಟ್ಟನು. ಸ್ವತಃ ಅವನೇ ಈ ನೀರನ್ನು ಕುಡಿದನು. ಅಲ್ಲದೆ ಅವನ ಮಕ್ಕಳು ಈ ಬಾವಿಯ ನೀರನ್ನು ಕುಡಿದರು ಮತ್ತು ಅವನ ಪಶುಗಳೆಲ್ಲಾ ಈ ಬಾವಿಯ ನೀರನ್ನು ಕುಡಿದವು” ಎಂದು ಹೇಳಿದಳು.
13ಯೇಸು, “ಈ ನೀರನ್ನು ಕುಡಿಯುವ ಪ್ರತಿಯೊಬ್ಬನಿಗೂ ಮತ್ತೆ ದಾಹವಾಗುವುದು. 14ಆದರೆ ನಾನು ಕೊಡುವ ನೀರನ್ನು ಕುಡಿಯುವವನಿಗೆ ದಾಹವಾಗುವುದೇ ಇಲ್ಲ. ನಾನು ಅವನಿಗೆ ಕೊಡುವ ನೀರು ಅವನೊಳಗೆ ಉಕ್ಕಿಹರಿಯುವ ನೀರಿನ ಬುಗ್ಗೆಯಾಗುವುದು. ಆ ನೀರು ಅವನಿಗೆ ನಿತ್ಯಜೀವವನ್ನು ತರುತ್ತದೆ” ಎಂದು ಉತ್ತರಕೊಟ್ಟನು.
15ಆ ಸ್ತ್ರೀಯು ಯೇಸುವಿಗೆ, “ಅಯ್ಯಾ, ಆ ನೀರನ್ನು ನನಗೆ ಕೊಡು. ಆಗ ನನಗೆ ಮತ್ತೆಂದಿಗೂ ದಾಹವಾಗುವುದಿಲ್ಲ. ನೀರನ್ನು ತೆಗೆದುಕೊಂಡು ಹೋಗುವುದಕ್ಕಾಗಿ ನಾನು ಇಲ್ಲಿಗೆ ಮತ್ತೆ ಬರುವ ಅಗತ್ಯವೂ ಇರುವುದಿಲ್ಲ” ಎಂದು ಹೇಳಿದಳು.
16ಯೇಸು ಆಕೆಗೆ, “ಹೋಗಿ ನಿನ್ನ ಗಂಡನನ್ನು ಕರೆದುಕೊಂಡು ಬಾ” ಎಂದನು.
17ಆ ಸ್ತ್ರೀಯು, “ನನಗೆ ಗಂಡನಿಲ್ಲ” ಎಂದು ಹೇಳಿದಳು.
ಯೇಸು ಆಕೆಗೆ, “ಗಂಡನಿಲ್ಲವೆಂದು ಸರಿಯಾಗಿ ಹೇಳಿದೆ. 18ನಿಜವಾಗಿಯೂ ನಿನಗೆ ಐದು ಮಂದಿ ಗಂಡಂದಿರಿದ್ದರು. ಆದರೆ ಈಗ ನೀನು ಯಾರೊಂದಿಗೆ ವಾಸಿಸುತ್ತಿರುವಿಯೋ ಅವನು ನಿನ್ನ ಗಂಡನಲ್ಲ. ನೀನು ನನಗೆ ಸತ್ಯವನ್ನು ತಿಳಿಸಿದೆ” ಎಂದು ಹೇಳಿದನು.
19ಆ ಸ್ತ್ರೀಯು, “ಅಯ್ಯಾ, ನೀನು ಪ್ರವಾದಿಯೆಂದು ಕಾಣುತ್ತದೆ. 20ನಮ್ಮ ಪಿತೃಗಳು ಈ ಗುಡ್ಡದ ಮೇಲೆ ಆರಾಧಿಸಿದರು. ಆದರೆ ಜನರು ಆರಾಧಿಸಬೇಕಾದ ಸ್ಥಳ ಜೆರುಸಲೇಮ್ ಎಂದು ಯೆಹೂದ್ಯರಾದ ನೀವು ಹೇಳುತ್ತೀರಲ್ಲಾ” ಎಂದಳು.
21ಯೇಸು, “ಅಮ್ಮಾ, ನನ್ನನ್ನು ನಂಬು! ನೀವು ಇನ್ನೆಂದಿಗೂ ತಂದೆಯನ್ನು (ದೇವರನ್ನು) ಜೆರುಸಲೇಮಿನಲ್ಲಾಗಲಿ ಈ ಗುಡ್ಡದ ಮೇಲಾಗಲಿ ಆರಾಧಿಸಬೇಕಿಲ್ಲ. 22ನೀವು ನಿಮಗೆ ತಿಳಿದಿಲ್ಲದ ಯಾವುದನ್ನೋ ಆರಾಧಿಸುತ್ತೀರಿ. ನಮಗಾದರೋ ನಾವು ಯಾರನ್ನು ಆರಾಧಿಸುತ್ತಿದ್ದೇವೆ ಎಂಬುದು ತಿಳಿದಿದೆ. ರಕ್ಷಣೆಯು ಯೆಹೂದ್ಯರಿಂದ ಬರುತ್ತದೆ. 23ನಿಜವಾದ ಆರಾಧಕರು ತಂದೆಯ ಚಿತ್ತಕ್ಕನುಸಾರವಾಗಿ ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವ ಕಾಲ ಬರುತ್ತದೆ. ಆ ಕಾಲ ಈಗಲೇ ಬಂದಿದೆ ಮತ್ತು ಅಂಥ ಜನರೇ ತನ್ನ ಆರಾಧಕರಾಗಿರಬೇಕೆಂದು ತಂದೆಯು ಬಯಸುತ್ತಾನೆ. 24ದೇವರು ಆತ್ಮಸ್ವರೂಪಿ. ಆದ್ದರಿಂದ ದೇವರನ್ನು ಆರಾಧಿಸುವವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸಬೇಕು” ಎಂದು ಹೇಳಿದನು.
25ಆ ಸ್ತ್ರೀಯು, “ಮೆಸ್ಸೀಯನು ಬರುತ್ತಾನೆಂದು ನನಗೆ ಗೊತ್ತು. ಆತನು ಬಂದಾಗ ನಮಗೆ ಪ್ರತಿಯೊಂದನ್ನೂ ವಿವರಿಸುವನು” ಎಂದು ಹೇಳಿದಳು. (“ಮೆಸ್ಸೀಯನು” ಅಂದರೆ “ಕ್ರಿಸ್ತನು”)
26ಆಗ ಯೇಸು, “ಆತನೇ ಈಗ ನಿನ್ನೊಂದಿಗೆ ಮಾತಾಡುತ್ತಿದ್ದಾನೆ. ನಾನೇ ಮೆಸ್ಸೀಯ” ಎಂದು ಹೇಳಿದನು.
27ಆ ಸಮಯದಲ್ಲಿ ಆತನ ಶಿಷ್ಯರು ಹಿಂತಿರುಗಿ ಬಂದರು. ಯೇಸು ಒಬ್ಬ ಸ್ತ್ರೀಯೊಂದಿಗೆ ಮಾತಾಡುತ್ತಿರುವುದನ್ನು ನೋಡಿ ಅವರು ಆಶ್ಚರ್ಯಗೊಂಡರು. ಆದರೆ, “ನಿನಗೇನು ಬೇಕು?” ಎಂದಾಗಲಿ “ನೀನು ಆಕೆಯೊಂದಿಗೆ ಏಕೆ ಮಾತಾಡುತ್ತಿರುವೆ?” ಎಂದಾಗಲಿ ಅವರಲ್ಲಿ ಒಬ್ಬರೂ ಕೇಳಲಿಲ್ಲ.
28ಬಳಿಕ ಆ ಸ್ತ್ರೀಯು, ತನ್ನ ಕೊಡವನ್ನು ಅಲ್ಲಿಯೇ ಬಿಟ್ಟು ಊರಿಗೆ ಹಿಂತಿರುಗಿ ಹೋಗಿ ಜನರಿಗೆ, 29“ನಾನು ಈವರೆಗೆ ಮಾಡಿರುವ ಪ್ರತಿಯೊಂದನ್ನೂ ಒಬ್ಬ ವ್ಯಕ್ತಿ ನನಗೆ ತಿಳಿಸಿದನು. ಬಂದು ಅವನನ್ನು ನೋಡಿರಿ. ಆತನೇ ಕ್ರಿಸ್ತನಿರಬಹುದು” ಎಂದು ಹೇಳಿದಳು. 30ಆದ್ದರಿಂದ ಜನರು ಆತನನ್ನು ನೋಡಲು ಪಟ್ಟಣದಿಂದ ಹೊರಬಂದರು.
31ಅಷ್ಟರಲ್ಲಿ ಯೇಸುವಿನ ಶಿಷ್ಯರು, “ಗುರುವೇ, ಊಟಮಾಡು” ಎಂದು ಆತನನ್ನು ಒತ್ತಾಯ ಮಾಡಿದರು.
32ಅದಕ್ಕೆ ಯೇಸು, “ನನ್ನಲ್ಲಿ ಆಹಾರವಿದೆ. ಆ ಆಹಾರದ ಬಗ್ಗೆ ನಿಮಗೇನೂ ಗೊತ್ತಿಲ್ಲ” ಎಂದನು.
33ಆದ್ದರಿಂದ ಶಿಷ್ಯರು, “ಯಾರಾದರೂ ಆತನಿಗೆ ಮೊದಲೇ ಆಹಾರವನ್ನು ತಂದುಕೊಟ್ಟರೇ?” ಎಂದು ತಮ್ಮತಮ್ಮೊಳಗೆ ಕೇಳತೊಡಗಿದರು.
34ಯೇಸು, “ನನ್ನನ್ನು ಕಳುಹಿಸಿದಾತನು (ದೇವರು) ನಾನು ಏನು ಮಾಡಬೇಕೆಂದು ಬಯಸುವನೋ ಅದನ್ನು ಮಾಡುವುದೇ ನನಗೆ ಆಹಾರವಾಗಿದೆ. ಆತನು ನನಗೆ ಕೊಟ್ಟಿರುವ ಕೆಲಸವನ್ನು ಪೂರೈಸುವುದೇ ನನಗೆ ಆಹಾರವಾಗಿದೆ. 35‘ಸುಗ್ಗಿಗೆ ಇನ್ನೂ ನಾಲ್ಕು ತಿಂಗಳು ಕಾಯಬೇಕು’ ಎಂದು ನೀವು ಹೇಳುವಿರಿ. ಆದರೆ ನಾನು ನಿಮಗೆ ಹೇಳುತ್ತೇನೆ, ನಿಮ್ಮ ಕಣ್ಣುಗಳನ್ನು ತೆರೆಯಿರಿ. ಹೊಲಗಳ ಸುತ್ತಲೆಲ್ಲಾ ನೋಡಿರಿ, ಅವು ಕೊಯ್ಲಿಗೆ ಬಂದಿವೆ. 36ಈಗಲೂ ಸಹ, ಬೆಳೆಯನ್ನು ಕೊಯ್ಯುವವನಿಗೆ ಕೂಲಿ ದೊರೆಯುತ್ತದೆ. ಅವನು ಬೆಳೆಗಳನ್ನು ನಿತ್ಯಜೀವಕ್ಕಾಗಿ ಕೂಡಿಸುತ್ತಿದ್ದಾನೆ. ಆದ್ದರಿಂದ ಈಗ ಬಿತ್ತುವವರೂ ಮತ್ತು ಕೊಯ್ಯುವವರೂ ಒಟ್ಟಿಗೆ ಸಂತೋಷವಾಗಿರುವರು. 37‘ಒಬ್ಬನು ಬಿತ್ತುತ್ತಾನೆ, ಆದರೆ ಮತ್ತೊಬ್ಬನು ಬೆಳೆಯನ್ನು ಕೊಯ್ಯುತ್ತಾನೆ’ ಎಂದು ನಾವು ಹೇಳುವ ನಾಣ್ಣುಡಿ ಸತ್ಯವಾದದ್ದು. 38ನೀವು ದುಡಿದಿಲ್ಲದ ಬೆಳೆಯನ್ನು ಕೊಯ್ಯುವುದಕ್ಕಾಗಿ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ. ಬೇರೆಯವರು ದುಡಿದರು, ಆದರೆ ಅವರ ದುಡಿಮೆಯಿಂದ ನೀವು ಲಾಭವನ್ನು ಪಡೆಯುತ್ತೀರಿ” ಎಂದು ಹೇಳಿದನು.
39ಆ ಸಮಾರ್ಯ ಪಟ್ಟಣದ ಜನರಲ್ಲಿ ಅನೇಕರು ಯೇಸುವನ್ನು ನಂಬಿದರು. ಏಕೆಂದರೆ ಆ ಸ್ತ್ರೀಯು ಆತನ ವಿಷಯವಾಗಿ ಅವರಿಗೆ, “ನಾನು ಮಾಡಿರುವ ಪ್ರತಿಯೊಂದನ್ನೂ ಆತನು ನನಗೆ ತಿಳಿಸಿದನು” ಎಂದು ಹೇಳಿದ್ದಳು. 40ಸಮಾರ್ಯದವರು ಯೇಸುವಿನ ಬಳಿಗೆ ಹೋಗಿ ತಮ್ಮೊಂದಿಗೆ ಇರಬೇಕೆಂದು ಆತನನ್ನು ಬೇಡಿಕೊಂಡರು. ಆದ್ದರಿಂದ ಆತನು ಅಲ್ಲಿ ಎರಡು ದಿನ ಇದ್ದನು. 41ಆತನು ಹೇಳಿದ ಸಂಗತಿಗಳನ್ನು ಕೇಳಿ ಇನ್ನೂ ಅನೇಕ ಜನರು ನಂಬಿದರು.
42ಅವರು ಆ ಸ್ತ್ರೀಗೆ, “ನಾವು ಮೊದಲು ನಿನ್ನ ಮಾತನ್ನು ಕೇಳಿ ಯೇಸುವನ್ನು ನಂಬಿದೆವು. ಆದರೆ ಈಗ ಸ್ವತಃ ನಾವೇ ಆತನ ಮಾತನ್ನು ಕೇಳಿದ್ದರಿಂದ ನಂಬುತ್ತೇವೆ. ನಿಜವಾಗಿಯೂ ಈತನೇ ಲೋಕರಕ್ಷಕನೆಂದು ಈಗ ನಮಗೆ ತಿಳಿದಿದೆ” ಎಂದು ಹೇಳಿದರು.
ಗುಣಹೊಂದಿದ ಅಧಿಕಾರಿಯ ಮಗ
(ಮತ್ತಾಯ 8:5-13; ಲೂಕ 7:1-10)
43ಎರಡು ದಿನಗಳಾದ ನಂತರ ಯೇಸು ಅಲ್ಲಿಂದ ಗಲಿಲಾಯಕ್ಕೆ ಹೋದನು. 44(ಪ್ರವಾದಿಗೆ ಸ್ವಂತ ಊರಿನಲ್ಲಿ ಗೌರವವಿಲ್ಲವೆಂದು ಸ್ವತಃ ಯೇಸುವೇ ತಿಳಿಸಿದ್ದನು.) 45ಆತನು ಗಲಿಲಾಯವನ್ನು ತಲುಪಿದಾಗ, ಅಲ್ಲಿಯ ಜನರು ಆತನನ್ನು ಸ್ವಾಗತಿಸಿದರು. ಈ ಜನರು ಪಸ್ಕಹಬ್ಬಕ್ಕಾಗಿ ಜೆರುಸಲೇಮಿಗೆ ಹೋಗಿದ್ದಾಗ ಹಬ್ಬದ ಸಮಯದಲ್ಲಿ ಆತನು ಮಾಡಿದ ಕಾರ್ಯಗಳನ್ನೆಲ್ಲಾ ನೋಡಿದ್ದರು.
46ಯೇಸು ಗಲಿಲಾಯದ ಕಾನಾ ಊರಿಗೆ ಮತ್ತೊಮ್ಮೆ ಭೇಟಿ ನೀಡಿದನು. ಆತನು ನೀರನ್ನು ದ್ರಾಕ್ಷಾರಸವನ್ನಾಗಿ ಮಾರ್ಪಡಿಸಿದ್ದು ಆ ಊರಿನಲ್ಲೇ. ರಾಜನ ಒಬ್ಬ ಅಧಿಕಾರಿಯು ಕಪೆರ್ನೌಮ್ ಪಟ್ಟಣದಲ್ಲಿ ವಾಸವಾಗಿದ್ದನು. ಅವನ ಮಗನಿಗೆ ಕಾಯಿಲೆಯಾಗಿತ್ತು. 47ಯೇಸು ಜುದೇಯದಿಂದ ಬಂದು ಈಗ ಗಲಿಲಾಯದಲ್ಲಿ ಇದ್ದಾನೆ ಎಂಬ ಸುದ್ದಿಯನ್ನು ಅವನು ಕೇಳಿದನು. ಆದ್ದರಿಂದ ಅವನು ಆತನ ಬಳಿಗೆ ಹೋಗಿ ತನ್ನ ಮಗನನ್ನು ಗುಣಪಡಿಸುವುದಕ್ಕಾಗಿ ಕಪೆರ್ನೌಮ್‌ಗೆ ಬರಬೇಕೆಂದು ಆತನನ್ನು ಬೇಡಿಕೊಂಡನು. ಅವನ ಮಗನು ಸಾಯುವ ಸ್ಥಿತಿಯಲ್ಲಿದ್ದನು. 48ಯೇಸು ಅವನಿಗೆ, “ನೀವು ಸೂಚಕಕಾರ್ಯಗಳನ್ನು ಮತ್ತು ಆಶ್ಚರ್ಯಕರವಾದ ಕಾರ್ಯಗಳನ್ನು ನೋಡದ ಹೊರತು ನನ್ನನ್ನು ನಂಬುವುದೇ ಇಲ್ಲ” ಎಂದು ಹೇಳಿದನು.
49ರಾಜನ ಅಧಿಕಾರಿ, “ಸ್ವಾಮೀ, ನನ್ನ ಮಗನು ಸಾಯುವ ಮೊದಲೇ ನೀನು ಬರಬೇಕು” ಎಂದು ಕೇಳಿಕೊಂಡನು.
50ಯೇಸು ಅವನಿಗೆ, “ಹೋಗು, ನಿನ್ನ ಮಗನು ಬದುಕುವನು” ಎಂದು ಉತ್ತರಕೊಟ್ಟನು.
ಯೇಸುವಿನ ಮಾತನ್ನು ಅವನು ನಂಬಿ ಮನೆಗೆ ಹಿಂತಿರುಗಿದನು. 51ಅವನು ಮನೆಗೆ ಹೋಗುತ್ತಿರುವಾಗ ಅವನ ಸೇವಕರುಗಳು ಬಂದು ಅವನನ್ನು ಭೇಟಿಯಾಗಿ, “ನಿನ್ನ ಮಗನು ಗುಣಹೊಂದಿದನು” ಎಂದು ತಿಳಿಸಿದರು.
52ಅವನು, “ನನ್ನ ಮಗನಿಗೆ ಯಾವಾಗ ಗುಣವಾಯಿತು?” ಎಂದು ಕೇಳಿದನು.
ಸೇವಕರುಗಳು, “ನಿನ್ನೆ ಮಧ್ಯಾಹ್ನ ಸುಮಾರು ಒಂದು ಗಂಟೆಯಲ್ಲಿ ಅವನ ಜ್ವರವು ಬಿಟ್ಟಿತು” ಎಂದು ಉತ್ತರಕೊಟ್ಟರು.
53“ನಿನ್ನ ಮಗನು ಬದುಕುವನು” ಎಂದು ಯೇಸು ಹೇಳಿದ್ದು ಇದೇ ಹೊತ್ತಿನಲ್ಲಿ ಎಂಬುದು ತಂದೆಗೆ ತಿಳಿದಿತ್ತು. ಆದ್ದರಿಂದ ಅವನು ಮತ್ತು ಅವನ ಮನೆಯವರೆಲ್ಲ ಯೇಸುವನ್ನು ನಂಬಿದರು.
54ಯೇಸು ಜುದೇಯದಿಂದ ಗಲಿಲಾಯಕ್ಕೆ ಬಂದ ಮೇಲೆ ಮಾಡಿದ ಎರಡನೆಯ ಸೂಚಕಕಾರ್ಯವಿದು.

Surbrillance

Partager

Copier

None

Tu souhaites voir tes moments forts enregistrés sur tous tes appareils? Inscris-toi ou connecte-toi