ಆದಿಕಾಂಡ 7

7
ಜಲಪ್ರಳಯದ ಪ್ರಾರಂಭ
1ಆಮೇಲೆ ಯೆಹೋವನು ನೋಹನಿಗೆ, “ಈ ಕಾಲದವರಲ್ಲಿ ನೀನೊಬ್ಬನೇ ನೀತಿವಂತನಾಗಿರುವೆ. ಆದ್ದರಿಂದ ನಿನ್ನ ಕುಟುಂಬದವರೆಲ್ಲರನ್ನು ಕರೆದುಕೊಂಡು ನಾವೆಯೊಳಗೆ ಹೋಗು. 2ಎಲ್ಲಾ ಬಗೆಯ ಶುದ್ಧಪ್ರಾಣಿಗಳಲ್ಲಿ ಏಳೇಳು ಜೋಡಿಗಳನ್ನು (ಏಳು ಗಂಡನ್ನು ಮತ್ತು ಏಳು ಹೆಣ್ಣನ್ನು) ತೆಗೆದುಕೊ. ಭೂಮಿಯ ಮೇಲಿನ ಇತರ ಪ್ರಾಣಿಗಳಲ್ಲಿ ಒಂದೊಂದು ಜೋಡಿಯನ್ನು (ಒಂದು ಗಂಡನ್ನು ಮತ್ತು ಒಂದು ಹೆಣ್ಣನ್ನು) ತೆಗೆದುಕೊ. 3ಎಲ್ಲಾ ಬಗೆಯ ಪಕ್ಷಿಗಳಲ್ಲಿ ಏಳೇಳು ಜೋಡಿಗಳನ್ನು (ಏಳು ಗಂಡನ್ನು ಮತ್ತು ಏಳು ಹೆಣ್ಣನ್ನು) ತೆಗೆದುಕೊ. ಉಳಿದ ಜೀವಿಗಳೆಲ್ಲ ನಾಶವಾದಮೇಲೆ, ಇವು ತಮ್ಮ ಸಂತತಿಗಳನ್ನು ಮುಂದುವರಿಸಲಿ. 4ಏಳು ದಿನಗಳ ನಂತರ ನಾನು ದೊಡ್ಡ ಮಳೆಯನ್ನು ಭೂಮಿಯ ಮೇಲೆ ಸುರಿಸುವೆನು. ಈ ಮಳೆಯು ನಲವತ್ತು ದಿವಸ ಹಗಲಿರುಳು ಸುರಿಯುವುದು. ನಾನು ನಿರ್ಮಿಸಿದ ಪ್ರತಿಯೊಂದು ಜೀವಿಯನ್ನೂ ನಾನು ಭೂಮಿಯ ಮೇಲಿಂದ ಅಳಿಸಿಬಿಡುವೆನು” ಎಂದು ಹೇಳಿದನು. 5ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ನೋಹನು ಮಾಡಿದನು.
6ಮಳೆಯು ಆರಂಭವಾದಾಗ ನೋಹನ ವಯಸ್ಸು ಆರುನೂರು ವರ್ಷ. 7ಜಲಪ್ರಳಯದಿಂದ ತಪ್ಪಿಸಿಕೊಳ್ಳಲು ನೋಹನು ತನ್ನ ಹೆಂಡತಿ, ತನ್ನ ಗಂಡುಮಕ್ಕಳು ಮತ್ತು ಸೊಸೆಯರೊಂದಿಗೆ ನಾವೆಯೊಳಗೆ ಹೋದನು. 8ಎಲ್ಲಾ ಶುದ್ಧಪ್ರಾಣಿಗಳು, ಭೂಮಿಯ ಮೇಲಿರುವ ಇತರ ಎಲ್ಲಾ ಪ್ರಾಣಿಗಳು, ಪಕ್ಷಿಗಳು ಮತ್ತು ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದೂ 9ನೋಹನೊಂದಿಗೆ ನಾವೆಯೊಳಗೆ ಹೋದವು. ದೇವರ ಆಜ್ಞೆಯಂತೆ ಈ ಪ್ರಾಣಿಗಳು ಜೋಡಿಜೋಡಿಯಾಗಿ ನಾವೆಯೊಳಗೆ ಹೋದವು. 10ಏಳು ದಿನಗಳ ನಂತರ ಜಲಪ್ರಳಯ ಪ್ರಾರಂಭವಾಯಿತು. ಭೂಮಿಯ ಮೇಲೆ ಮಳೆ ಸುರಿಯತೊಡಗಿತು.
11-13ಎರಡನೆ ತಿಂಗಳಿನ ಹದಿನೇಳನೆಯ ದಿನದಂದು ಭೂಮಿಯ ಕೆಳಗಿರುವ ಸಾಗರದ ಸೆಲೆಗಳು ಒಡೆದು ಭೂಮಿಯೊಳಗಿಂದ ನೀರು ಮೇಲೇರತೊಡಗಿತು; ಭೂಮಿಯ ಮೇಲೆ ಭಾರಿಮಳೆ ಸುರಿಯತೊಡಗಿತು. ಆಕಾಶದ ಕಿಟಕಿ ತೆರೆದಿದೆಯೋ ಎಂಬಂತೆ ನಲವತ್ತು ದಿವಸ ಹಗಲಿರುಳು ಮಳೆ ಸುರಿಯಿತು. ಆ ದಿನದಂದು ನೋಹ ಮತ್ತು ಅವನ ಹೆಂಡತಿ, ಅವನ ಗಂಡುಮಕ್ಕಳಾದ ಶೇಮ್, ಹಾಮ್, ಯೆಫೆತ್ ಮತ್ತು ಅವನ ಸೊಸೆಯಂದಿರು ನಾವೆಯೊಳಗೆ ಹೋದರು. ಆಗ ನೋಹನು ಆರುನೂರು ವರ್ಷವಾಗಿತ್ತು. 14ಅವರು ನಾವೆಯೊಳಗೆ ಇದ್ದರು. ಭೂಮಿಯ ಮೇಲಿರುವ ಪ್ರತಿಯೊಂದು ಬಗೆಯ ಪ್ರಾಣಿಗಳು, ಪ್ರತಿಯೊಂದು ಬಗೆಯ ಪಶುಗಳು, ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಬಗೆಯ ಕ್ರಿಮಿಗಳು ಮತ್ತು ಪ್ರತಿಯೊಂದು ಬಗೆಯ ಪಕ್ಷಿಗಳು ನಾವೆಯೊಳಗೆ ಇದ್ದವು. 15ಉಸಿರಾಡುವ ಪ್ರತಿಯೊಂದು ಬಗೆಯ ಪ್ರಾಣಿಗಳು ತಮ್ಮತಮ್ಮ ಜಾತಿಗನುಸಾರವಾಗಿ ಎರಡೆರಡಾಗಿ ಬಂದವು. 16ದೇವರ ಆಜ್ಞೆಯಂತೆ ಈ ಪ್ರಾಣಿಗಳೆಲ್ಲಾ ನಾವೆಯೊಳಗೆ ಪ್ರವೇಶಿಸಿದವು. ಆಗ ಯೆಹೋವನು ನಾವೆಯ ಬಾಗಿಲನ್ನು ಮುಚ್ಚಿದನು.
17ಭೂಮಿಯ ಮೇಲೆ ಜಲಪ್ರಳಯವು ನಲವತ್ತು ದಿನಗಳವರೆಗೆ ಇತ್ತು. ನೀರು ಮೇಲೇರುತ್ತಾ ನಾವೆಯನ್ನು ಎತ್ತಲು ಅದು ನೀರಿನ ಮೇಲೆ ತೇಲತೊಡಗಿತು. 18ನೀರು ಇನ್ನೂ ಮೇಲೇರತೊಡಗಿದ್ದರಿಂದ ನಾವೆಯೂ ಭೂಮಿಯಿಂದ ಬಹು ಮೇಲೆ ಚಲಿಸತೊಡಗಿತು. 19ನೀರು ಬಹಳವಾಗಿ ಹೆಚ್ಚಿದ್ದರಿಂದ, ಎತ್ತರವಾದ ಬೆಟ್ಟಗಳು ಸಹ ನೀರಿನಿಂದ ಮುಚ್ಚಿಕೊಂಡವು. 20ಬೆಟ್ಟಗಳ ಮೇಲೂ ನೀರು ಹೆಚ್ಚತೊಡಗಿತು. ಅತೀ ಎತ್ತರವಾದ ಬೆಟ್ಟಕ್ಕಿಂತಲೂ ಇಪ್ಪತ್ತು ಅಡಿ ಹೆಚ್ಚಾಗಿ ನೀರು ಆವರಿಸಿಕೊಂಡಿತು.
21-22ಭೂಮಿಯ ಮೇಲಿದ್ದ ಪ್ರತಿಯೊಂದು ಜೀವಿಯು ಸತ್ತುಹೋಯಿತು. ಎಲ್ಲಾ ಪುರುಷರು ಮತ್ತು ಸ್ತ್ರೀಯರು ಸತ್ತುಹೋದರು. ಎಲ್ಲಾ ಪಕ್ಷಿಗಳು, ಪಶುಗಳು, ಪ್ರಾಣಿಗಳು ಮತ್ತು ಪ್ರತಿಯೊಂದು ಬಗೆಯ ಕ್ರಿಮಿಗಳು ಸತ್ತುಹೋದವು. 23ಹೀಗೆ ದೇವರು ಭೂಮಿಯ ಮೇಲಿದ್ದ ಪ್ರತಿಯೊಂದು ಜೀವಿಯನ್ನು ನಾಶಗೊಳಿಸಿದನು. ಪ್ರತಿಯೊಬ್ಬ ಮನುಷ್ಯನು ನಾಶವಾದನು; ಪ್ರತಿಯೊಂದು ಪ್ರಾಣಿಯು, ಹರಿದಾಡುವ ಪ್ರತಿಯೊಂದು ಕ್ರಿಮಿಯು ಮತ್ತು ಪ್ರತಿಯೊಂದು ಪಕ್ಷಿಯು ನಾಶವಾದವು. ಉಳಿದುಕೊಂಡವರೆಂದರೆ, ನೋಹ ಮತ್ತು ಅವನ ಕುಟುಂಬದವರು ಹಾಗೂ ಅವನೊಡನೆ ನಾವೆಯೊಳಗಿದ್ದ ಜೀವಿಗಳು. 24ನೂರೈವತ್ತು ದಿನಗಳವರೆಗೆ ನೀರು ಭೂಮಿಯನ್ನು ಆವರಿಸಿಕೊಂಡಿತ್ತು.

הדגשה

שתף

העתק

None

רוצים לשמור את ההדגשות שלכם בכל המכשירים שלכם? הירשמו או היכנסו