YouVersion लोगो
खोज आइकन

ಯೋಹಾ 5

5
ಯೇಸು ಸಬ್ಬತ್ ದಿನದಲ್ಲಿ ಒಬ್ಬ ರೋಗಿಯನ್ನು ಸ್ವಸ್ಥಮಾಡಿದ್ದರಿಂದ ಯೆಹೂದ್ಯರು ಆತನನ್ನು ವಿರೋಧಿಸಿದ್ದು
1ಇದಾದ ಮೇಲೆ ಯೆಹೂದ್ಯರ ಒಂದು #5:1 ಅಥವಾ, ಹಬ್ಬ. ಜಾತ್ರೆ ಇದ್ದುದರಿಂದ ಯೇಸು ಯೆರೂಸಲೇಮಿಗೆ ಹೋದನು. 2ಅಲ್ಲಿ ಕುರಿಬಾಗಿಲು ಎಂಬ ಸ್ಥಳದ ಬಳಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಅದನ್ನು ಇಬ್ರಿಯ ಭಾಷೆಯಲ್ಲಿ #5:2 ಕೆಲವು ಪ್ರತಿಗಳಲ್ಲಿ ಬೇತ್ಸಾಯಿದವೆಂದು, ಬೇರೆ ಕೆಲವು ಪ್ರತಿಗಳಲ್ಲಿ ಬೇಥೆಸ್ಥ ಎಂದು ಬರೆದಿದೆ. ಬೇತ್ಸಥಾ ಎಂದು ಕರೆಯುತ್ತಾರೆ. 3-4ಇವುಗಳಲ್ಲಿ ಅಸ್ವಸ್ಥರೂ, ರೋಗಿಗಳೂ, ಕುರುಡರೂ, ಕುಂಟರೂ, ಪಾರ್ಶ್ವವಾಯು ಪೀಡಿತರು ಮೊದಲಾದ ಅನೇಕ ರೋಗಿಗಳು ಅಲ್ಲಿ ಬಿದ್ದುಕೊಂಡಿರುತ್ತಿದ್ದರು. #5:3-4 ಕೆಲವು ಪ್ರತಿಗಳಲ್ಲಿ ಈ ಭಾಗವು ಕಂಡುಬರುವುದಿಲ್ಲ(ನೀರು ಕಲಕುವುದನ್ನು ಕಾದುಕೊಂಡು ಅಲ್ಲಿ ಬಿದ್ದುಕೊಂಡಿರುತ್ತಿದ್ದರು. ಆಗಾಗ ಒಬ್ಬ ದೂತನು ಬಂದು ಕೊಳದ ನೀರನ್ನು ಕಲಕಿಹೊಗುತ್ತಿದ್ದನು. ಆಗ ಮೊದಲು ಯಾರು ಕೊಳದೊಳಗೆ ಇಳಿಯುತ್ತಿದ್ದರೋ ಅವರ ರೋಗವು ವಾಸಿಯಾಗುತ್ತಿತ್ತು.) 5ಅಲ್ಲಿ ಮೂವತ್ತೆಂಟು ವರ್ಷಗಳಿಂದ ರೋಗಿಯಾಗಿದ್ದ ಒಬ್ಬ ಮನುಷ್ಯನಿದ್ದನು. 6ಅವನು ಬಿದ್ದುಕೊಂಡಿರುವುದನ್ನು ಯೇಸು ನೋಡಿ ಇವನಿಗೆ ಹೀಗಾಗಿ ಬಹು ಕಾಲವಾಗಿದೆ ಎಂದು ಅರಿತು ಅವನಿಗೆ “ನಿನಗೆ ಗುಣಹೊಂದಲು ಮನಸ್ಸಿದೆಯೋ?” ಎಂದು ಕೇಳಿದನು. 7ಅದಕ್ಕೆ ಆ ರೋಗಿಯು “ಆಯ್ಯಾ, ನೀರು ಉಕ್ಕುವಾಗ ನನ್ನನ್ನು ಕೊಳದೊಳಗೆ ಇಳಿಸುವುದಕ್ಕೆ ಯಾರೂ ಇಲ್ಲ. ನಾನು ಹೋಗುವುದರೊಳಗೆ ನನಗಿಂತ ಮೊದಲು ಮತ್ತೊಬ್ಬನು ಇಳಿಯುತ್ತಾನೆ” ಎಂದನು. 8ಯೇಸು ಅವನಿಗೆ, “ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ” ಎಂದು ಹೇಳಿದನು. 9ಕೂಡಲೇ ಆ ಮನುಷ್ಯನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆದನು. ಅಂದು ಸಬ್ಬತ್ ದಿನವಾಗಿತ್ತು,
10ಆದುದರಿಂದ ಯೆಹೂದ್ಯರು ಸ್ವಸ್ಥವಾದವನಿಗೆ, “ಈ ದಿನ ಸಬ್ಬತ್ ದಿನವಾದುದರಿಂದ ನೀನು ಹಾಸಿಗೆಯನ್ನು ಹೊತ್ತುಕೊಂಡು ಹೋಗುವುದು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆಯೆಂದು” ಹೇಳಿದ್ದಕ್ಕೆ, 11ಅವನು, “ನನ್ನನ್ನು ಸ್ವಸ್ಥಮಾಡಿದವನೇ ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎಂದು ನನಗೆ ಹೇಳಿದನು” ಎಂದನು. 12ಅದಕ್ಕೆ ಯೆಹೂದ್ಯರು ಅವನಿಗೆ, “ಅದನ್ನು ಎತ್ತಿಕೊಂಡು ನಡೆ ಎಂದು ನಿನಗೆ ಹೇಳಿದ ಮನುಷ್ಯನು ಯಾರು?” ಎಂದು ಕೇಳಿದರು. 13ಆದರೆ ಆತನು ಯಾರೆಂದು ಸ್ವಸ್ಥನಾದವನಿಗೆ ತಿಳಿದಿರಲಿಲ್ಲ, ಏಕೆಂದರೆ, ಯೇಸು ಆ ಸ್ಥಳದಲ್ಲಿ ಇದ್ದ ಜನರ ಗುಂಪಿನ ಮಧ್ಯದಲ್ಲಿ ಮರೆಯಾದನು. 14ಇದಾದ ಮೇಲೆ ಯೇಸು ಅವನನ್ನು ದೇವಾಲಯದಲ್ಲಿ ಕಂಡು, “ನಿನಗೆ ಸ್ವಸ್ಥವಾಯಿತಲ್ಲಾ; #5:14 ಯೋಹಾ 8:11:ಇನ್ನು ಮೇಲೆ ಪಾಪ ಮಾಡಬೇಡ, ನಿನಗೆ ಹೆಚ್ಚಿನ ಕೇಡು ಬಂದೀತು” ಎಂದನು. 15ಆ ಮನುಷ್ಯನು ಅಲ್ಲಿಂದ ಹೋಗಿ, ತನ್ನನ್ನು ಸ್ವಸ್ಥಪಡಿಸಿದಾತನು ಯೇಸುವೇ ಎಂದು ಯೆಹೂದ್ಯರಿಗೆ ತಿಳಿಸಿದನು. 16ಆದಕಾರಣ ಯೆಹೂದ್ಯರು, ಯೇಸು ಸಬ್ಬತ್ ದಿನಗಳಲ್ಲಿ ಇಂಥಾ ಕಾರ್ಯಗಳನ್ನು ಮಾಡುತ್ತಾನಲ್ಲಾ ಎಂದು ಆತನನ್ನು ಹಿಂಸಿಸತೊಡಗಿದರು. 17ಅದಕ್ಕೆ ಯೇಸು ಅವರಿಗೆ, “ನನ್ನ ತಂದೆಯು ಇಂದಿನವರೆಗೂ ಕೆಲಸ ಮಾಡುತ್ತಿದ್ದಾನೆ, ನಾನೂ ಕೆಲಸ ಮಾಡುತ್ತೇನೆ” ಎಂದು ಹೇಳಿದನು. 18ಯೇಸು ಈ ಮಾತನ್ನು ಹೇಳಿದ್ದರಿಂದ, ಆತನು ಸಬ್ಬತ್ ದಿನವನ್ನು ಅಲಕ್ಷ್ಯಮಾಡಿದ್ದಲ್ಲದೇ, ದೇವರನ್ನು ತನ್ನ ಸ್ವಂತ ತಂದೆ ಎಂದು ಹೇಳಿ ತನ್ನನ್ನು ದೇವರಿಗೆ ಸರಿಸಮಾನ ಮಾಡಿಕೊಂಡನೆಂದು ಯೆಹೂದ್ಯರು ಆತನನ್ನು ಕೊಲ್ಲುವುದಕ್ಕೆ ಇನ್ನಷ್ಟು ಪ್ರಯತ್ನಪಟ್ಟರು.
ದೇವಕುಮಾರನ ಅಧಿಕಾರವನ್ನು ಮತ್ತು ಆತನಿಗಿರುವ ಸಾಕ್ಷಿಯನ್ನು ಕುರಿತು ಯೇಸು ಮಾಡಿದ ಉಪದೇಶ
19ಯೇಸು ಅವರಿಗೆ, “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ತಂದೆಯು ಮಾಡುವುದನ್ನು ಕಂಡು ಮಗನು ಮಾಡುತ್ತಾನೆಯೇ, ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು. ಏಕೆಂದರೆ ಆತನು ಯಾವುದನ್ನೆಲ್ಲಾ ಮಾಡುವನೋ ಹಾಗೆಯೇ ಮಗನೂ ಮಾಡುತ್ತಾನೆ. 20ಏಕೆಂದರೆ, ತಂದೆಯು ಮಗನನ್ನು ಪ್ರೀತಿಸುತ್ತಾನೆ, ತಾನು ಮಾಡುವುದನ್ನೆಲ್ಲಾ ಅವನಿಗೆ ತೋರಿಸುತ್ತಾನೆ. ಇದಲ್ಲದೆ ಇವುಗಳಿಗಿಂತ ಮಹತ್ತಾದ ಕೆಲಸಗಳನ್ನು ಆತನಿಗೆ ತೋರಿಸುವನು. ಅವುಗಳನ್ನು ನೋಡಿ ನಿಮಗೆ ಆಶ್ಚರ್ಯವಾಗುವುದು. 21ತಂದೆಯು ಹೇಗೆ ಸತ್ತವರನ್ನು ಎಬ್ಬಿಸಿ ಬದುಕಿಸುತ್ತಾನೋ ಹಾಗೆಯೇ ಮಗನು ಸಹ ತನಗೆ ಬೇಕಾದವರನ್ನು ಬದುಕಿಸುತ್ತಾನೆ. 22ಇದಲ್ಲದೆ ತಂದೆಯು ಯಾರಿಗೂ ತೀರ್ಪುಮಾಡುವುದಿಲ್ಲ, ಆದರೆ ಎಲ್ಲಾ ತೀರ್ಪನ್ನು ಮಗನಿಗೆ ಕೊಟ್ಟಿದ್ದಾನೆ. 23ಎಲ್ಲರೂ ತಂದೆಯನ್ನು ಯಾವ ರೀತಿಯಲ್ಲಿ ಗೌರವಿಸುವರೋ ಅದೇ ರೀತಿಯಲ್ಲಿ ಮಗನನ್ನೂ ಗೌರವಿಸಬೇಕೆಂದು ಹಾಗೆ ಮಾಡಿದ್ದಾನೆ. ಮಗನನ್ನು ಗೌರವಿಸದವನು ಆತನನ್ನು ಕಳುಹಿಸಿದ ತಂದೆಯನ್ನು ಗೌರವಿಸಲಾರನು. 24ನಿಮಗೆ ನಿಜನಿಜವಾಗಿ ಹೇಳುತ್ತೇನೆ ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು ನಿತ್ಯ ಜೀವವನ್ನು ಹೊಂದಿದ್ದಾನೆ, ಅವನು ಖಂಡನೆಗೆ ಗುರಿಯಾಗುವುದಿಲ್ಲ, ಮರಣದಿಂದ ಪಾರಾಗಿ ಜೀವದಲ್ಲಿ ಸೇರಿದ್ದಾನೆ. 25ನಿಮಗೆ ನಿಜನಿಜವಾಗಿ ಹೇಳುತ್ತೇನೆ ಸತ್ತವರು ದೇವಕುಮಾರನ ಸ್ವರವನ್ನು ಕೇಳುವ ಕಾಲ ಬರುತ್ತದೆ, ಅದು ಈಗಾಗಲೇ ಬಂದಿದೆ, ಕೇಳಿದವರು ಬದುಕುವರು. 26ತಂದೆಯು ತಾನು ಹೇಗೆ ಸ್ವತಃ ಜೀವವುಳ್ಳವನಾಗಿದ್ದಾನೋ, ಹಾಗೆಯೇ ಮಗನೂ ಸ್ವತಃ ಜೀವವುಳ್ಳವನಾಗಿರುವಂತೆ ಮಾಡಿದ್ದಾನೆ. 27ಮಗನು ಮನುಷ್ಯಕುಮಾರನಾಗಿರುವುದರಿಂದ ನ್ಯಾಯತೀರ್ಪು ಮಾಡುವ ಅಧಿಕಾರವನ್ನೂ ತಂದೆ ಆತನಿಗೆ ಕೊಟ್ಟಿದ್ದಾನೆ. 28ಅದಕ್ಕೆ ಆಶ್ಚರ್ಯಪಡಬೇಡಿರಿ. ಒಂದು ಕಾಲ ಬರುತ್ತದೆ, ಆಗ #5:28 ದಾನಿ. 12:2; ಪ್ರಕ 20:4,5,12,13:ಸಮಾಧಿಗಳಲ್ಲಿರುವವರೆಲ್ಲಾ ಆತನ ಸ್ವರವನ್ನು ಕೇಳಿ, 29ಎದ್ದು ಹೊರಗೆ ಬರುವರು. ಒಳ್ಳೆಯದನ್ನು ಮಾಡಿದವರಿಗೆ ನಿತ್ಯಜೀವಕ್ಕಾಗಿ ಪುನರುತ್ಥಾನವಾಗುವುದು. ಕೆಟ್ಟದ್ದನ್ನು ಮಾಡಿದವರು ಖಂಡನೆಗಾಗಿ ಪುನರುತ್ಥಾನವನ್ನೂ ಹೊಂದುವರು.
30 “ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು ತಂದೆಯು ಹೇಳಿದ್ದನ್ನು ನಾನು ಕೇಳಿ ನ್ಯಾಯತೀರಿಸುತ್ತೇನೆ ಮತ್ತು ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ನಾನು ಬಯಸುವುದರಿಂದ ನಾನು ಮಾಡುವ ತೀರ್ಪು ನ್ಯಾಯವಾಗಿದೆ. 31ನನ್ನ ವಿಷಯವಾಗಿ ನಾನೇ ಸಾಕ್ಷಿ ಹೇಳಿಕೊಂಡರೆ ನನ್ನ ಸಾಕ್ಷಿಯು ಸತ್ಯವಾದದ್ದಲ್ಲ. 32ನನ್ನ ವಿಷಯವಾಗಿ ಸಾಕ್ಷಿ ಹೇಳುವವನು ಮತ್ತೊಬ್ಬನಿದ್ದಾನೆ. ಆತನು ನನ್ನ ವಿಷಯವಾಗಿ ಹೇಳುವ ಸಾಕ್ಷಿಯು ನಿಜವೆಂದು ನಾನು ಬಲ್ಲೆನು. 33ನೀವು ಯೋಹಾನನ ಬಳಿಗೆ ದೂತರನ್ನು ಕೇಳಿಕೊಂಡು ಬರುವುದಕ್ಕೆ ಕಳುಹಿಸಿದಿರಿ. ಅವನು ಸತ್ಯಕ್ಕೆ ಸಾಕ್ಷಿ ಹೇಳಿದನು. 34ನಾನಂತೂ ನನಗೆ ಬೇಕಾದ ಸಾಕ್ಷಿಯನ್ನು ಮನುಷ್ಯರಿಂದ ಸ್ವೀಕರಿಸುವುದಿಲ್ಲ. ಆದರೂ ನಿಮಗೆ ರಕ್ಷಣೆಯಾಗಬೇಕೆಂದು ಇದನ್ನು ನಿಮಗೆ ಹೇಳಿದ್ದೇನೆ. 35ಯೋಹಾನನು ಉರಿಯುವ ದೀಪದಂತೆ ಪ್ರಕಾಶಿಸಿದನು. ಅವನು ಕೊಡುವ ಬೆಳಕಿನಲ್ಲಿ ಸ್ವಲ್ಪ ಕಾಲ ಅತ್ಯಾನಂದಪಡುವುದಕ್ಕೆ ಮನಸ್ಸು ಮಾಡಿದಿರಿ. 36ನನಗಂತೂ ಯೋಹಾನನ ಸಾಕ್ಷಿಗಿಂತ ದೊಡ್ಡದಾದಸಾಕ್ಷಿ ಉಂಟು. ಹೇಗೆಂದರೆ, ಪೂರೈಸುವುದಕ್ಕೆ ತಂದೆಯು ನನಗೆ ಕೊಟ್ಟಿರುವ ಕೆಲಸಗಳೇ, ಅಂದರೆ ನಾನು ಮಾಡುವ ಈ ಕೆಲಸಗಳೇ ತಂದೆಯು ನನ್ನನ್ನು ಕಳುಹಿಸಿದ್ದಾನೆಂದು ನನ್ನ ವಿಷಯವಾಗಿ ಸಾಕ್ಷಿ ಕೊಡುತ್ತವೆ. 37ಇದಲ್ಲದೆ ನನ್ನನ್ನು ಕಳುಹಿಸಿಕೊಟ್ಟ ತಂದೆಯು ನನ್ನ ವಿಷಯವಾಗಿ ಸಾಕ್ಷಿ ಹೇಳಿದ್ದಾನೆ. ನೀವು ಎಂದಾದರೂ ಆತನ ಸ್ವರವನ್ನು ಕೇಳಿದ್ದೂ ಇಲ್ಲ, ಆತನ ರೂಪವನ್ನು ನೋಡಿದ್ದೂ ಇಲ್ಲ. 38ಆತನ ವಾಕ್ಯವು ನಿಮ್ಮಲ್ಲಿ ನೆಲೆಗೊಂಡಿಲ್ಲ. ಏಕೆಂದರೆ ಆತನು ಕಳುಹಿಸಿದಾತನನ್ನು ನೀವು ನಂಬದೇ ಇದ್ದೀರಿ. 39#5:39 ಲೂಕ 24:27, 44-47; ಅ. ಕೃ. 17:11:ಧರ್ಮಶಾಸ್ತ್ರಗಳಿಂದ ನಿತ್ಯಜೀವವು ದೊರೆಯುತ್ತದೆಂದು ನೀವು ತಿಳಿದು ಅವುಗಳನ್ನು ಪರಿಶೋಧಿಸುತ್ತಿರಾ? ಅವುಗಳೂ ನನ್ನ ವಿಷಯದಲ್ಲಿ ಸಾಕ್ಷಿ ಕೊಡುವವುಗಳಾಗಿವೆ. 40ಆದರೂ ಜೀವ ಹೊಂದುವುದಕ್ಕಾಗಿ ನನ್ನ ಬಳಿಗೆ ಬರುವುದಕ್ಕೆ ನಿಮಗೆ ಮನಸ್ಸಿಲ್ಲ.
41 “ನಾನು ಮನುಷ್ಯರಿಂದ ಬರುವ ಪ್ರಶಂಸೆಯನ್ನು ಸ್ವೀಕರಿಸುವುದಿಲ್ಲ, 42ಆದರೆ ನಿಮ್ಮನ್ನು ನಾನು ಬಲ್ಲೆನು. ದೇವರ ಪ್ರೀತಿ ನಿಮ್ಮೊಳಗೆ ಇಲ್ಲವೆಂದು ನನಗೆ ತಿಳಿದಿದೆ. 43ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ ಆದರೂ ನನ್ನನ್ನು ನೀವು ಸ್ವೀಕರಿಸುವುದಿಲ್ಲ. ಮತ್ತೊಬ್ಬನು ತನ್ನ ಸ್ವಂತ ಹೆಸರಿನಲ್ಲಿ ಬಂದರೆ ಅವನನ್ನು ನೀವು ಸ್ವೀಕರಿಸುತ್ತೀರಿ. 44ಒಬ್ಬನೇ ದೇವರಿಂದ ಬರುವ ಮಹಿಮೆಯನ್ನು ಅಪೇಕ್ಷಿಸದೇ ನಿಮ್ಮ ನಿಮ್ಮೊಳಗೇ ಪ್ರಶಂಸೆಯನ್ನು ಸ್ವೀಕರಿಸುವವರಾದ ನೀವು ಅದನ್ನು ನಂಬಲು ಹೇಗೆ ಸಾಧ್ಯ? 45ನಾನು ತಂದೆಯ ಮುಂದೆ ನಿಮ್ಮ ಮೇಲೆ ಅಪವಾದ ಹೊರಿಸುತ್ತಿದ್ದೇನೆಂದು ತಿಳಿಯಬೇಡಿರಿ. ನಿಮ್ಮ ಮೇಲೆ ಅಪವಾದ ಹೊರಿಸುವವನು ಒಬ್ಬನಿದ್ದಾನೆ; ಅವನೇ ನೀವು ನಿರೀಕ್ಷೆಯಿಟ್ಟಿರುವ ಮೋಶೆ! 46ಅವನು ನನ್ನ ವಿಷಯವಾಗಿ ಬರೆದನು, ಆದುದರಿಂದ ನೀವು ಮೋಶೆಯನ್ನೂ ನಂಬುವವರಾಗಿದ್ದರೆ ನನ್ನನ್ನೂ ನಂಬುತ್ತಿದ್ದಿರಿ. 47ಅವನು ಧರ್ಮಶಾಸ್ತ್ರದಲ್ಲಿ ಬರೆದಿರುವುದನ್ನು ನೀವು ನಂಬದಿದ್ದರೆ ನಾನು ಹೇಳುವ ಮಾತುಗಳನ್ನು ಹೇಗೆ ನಂಬುವಿರಿ?” ಎಂದನು.

अहिले सेलेक्ट गरिएको:

ಯೋಹಾ 5: IRVKan

हाइलाइट

शेयर गर्नुहोस्

कपी गर्नुहोस्

None

तपाईंका हाइलाइटहरू तपाईंका सबै यन्त्रहरूमा सुरक्षित गर्न चाहनुहुन्छ? साइन अप वा साइन इन गर्नुहोस्