Logoja YouVersion
Ikona e kërkimit

ಆದಿ 20

20
ಅಬ್ರಹಾಮನು ಮತ್ತು ಅಬೀಮೆಲೆಕನು
1ಅಬ್ರಹಾಮನು ಅಲ್ಲಿಂದ ಕಾನಾನ್ ದೇಶದ ದಕ್ಷಿಣ ಸೀಮೆಗೆ ಪ್ರಯಾಣ ಮಾಡುತ್ತಾ ಕಾದೇಶಿಗೂ ಶೂರಿಗೂ ನಡುವೆ ವಾಸ ಮಾಡಿ ಕೆಲವು ಕಾಲ ಗೆರಾರಿನಲ್ಲೂ ವಾಸಮಾಡಿದನು. 2ಅವನು ತನ್ನ ಹೆಂಡತಿಯಾದ ಸಾರಳನ್ನು ತಂಗಿಯೆಂದು ಹೇಳಿಕೊಂಡದ್ದರಿಂದ, ಗೆರಾರಿನ ಅರಸನಾದ ಅಬೀಮೆಲೆಕನು ಆಕೆಯನ್ನು ಕರೆಸಿ ತನ್ನ ಮನೆಯಲ್ಲಿ ಇರಿಸಿಕೊಂಡನು.
3ಆದರೆ ಆ ರಾತ್ರಿ ದೇವರು ಅಬೀಮೆಲೆಕನ ಕನಸಿನಲ್ಲಿ ಬಂದು, “ನೀನು ಆ ಸ್ತ್ರೀಯನ್ನು ಸೇರಿಸಿಕೊಂಡಿರುವುದರಿಂದ ಮರಣಕ್ಕೆ ಯೋಗ್ಯನಾಗಿದ್ದಿ; ಆಕೆ ಮತ್ತೊಬ್ಬ ಪುರುಷನ ಹೆಂಡತಿ” ಎಂದನು.
4ಅಬೀಮೆಲೆಕನು ಆಕೆಯನ್ನು ಸಂಗಮಿಸಿರಲಿಲ್ಲ. ಅವನು, “ಕರ್ತನೇ, ನೀತಿವಂತರಾದ ಜನರನ್ನೂ ನಾಶಮಾಡುವಿಯಾ? 5ಆ ಮನುಷ್ಯನು ಈಕೆ ತನಗೆ ತಂಗಿಯಾಗಬೇಕೆಂದು ಹೇಳಿದನು. ಈಕೆಯೂ ಅವನು ತನಗೆ ಅಣ್ಣನಾಗಬೇಕೆಂದು ಹೇಳಿದಳು. ನಾನು ಯಥಾರ್ಥ ಮನಸ್ಸಿನಿಂದಲೂ, ಶುದ್ಧ ಹಸ್ತದಿಂದಲೂ ಇದನ್ನು ಮಾಡಿದೆನು” ಎಂದನು.
6ಅದಕ್ಕೆ ದೇವರು, “ನೀನು, ಇದನ್ನು ಯಥಾರ್ಥ ಮನಸ್ಸಿನಿಂದ ಮಾಡಿದೆ ಎಂಬುದನ್ನು ನಾನು ಬಲ್ಲೆ; ಆದಕಾರಣ ನೀನು ನನಗೆ ವಿರುದ್ಧವಾಗಿ ಪಾಪಮಾಡದಂತೆ ನಾನು ನಿನ್ನನ್ನು ತಡೆದು ಆಕೆಯನ್ನು ಮುಟ್ಟಗೊಡಿಸಲಿಲ್ಲ. 7ಹೀಗಿರುವಲ್ಲಿ ಆ ಮನುಷ್ಯನ ಹೆಂಡತಿಯನ್ನು ಅವನಿಗೆ ಒಪ್ಪಿಸಿಬಿಡು. ಅವನು ಪ್ರವಾದಿ, ನಿನಗೋಸ್ಕರ ಅವನು ನನಗೆ ವಿಜ್ಞಾಪಿಸುವನು ಮತ್ತು ನೀನು ಬದುಕುವಿ. ಆಕೆಯನ್ನು ಒಪ್ಪಿಸದಿದ್ದರೆ ನೀನೂ ನಿನ್ನವರೆಲ್ಲರೂ ಮರಣಹೊಂದುವಿರಿ ಇದು ಖಂಡಿತ ಎಂದು ತಿಳಿದುಕೋ” ಎಂದು ಕನಸಿನಲ್ಲಿ ಹೇಳಿದನು.
8ಬೆಳಿಗ್ಗೆ ಅಬೀಮೆಲೆಕನು ತನ್ನ ಸೇವಕರೆಲ್ಲರನ್ನು ಕೂಡಿಸಿ ಈ ಸಂಗತಿಗಳನ್ನೆಲ್ಲಾ ತಿಳಿಸಲು ಅವರು ಬಹಳ ಭಯಪಟ್ಟರು. 9ಅಬೀಮೆಲೆಕನು ಅಬ್ರಹಾಮನನ್ನು ಕರೆದು, “ನೀನು ನಮಗೆ ಮಾಡಿದ್ದೇನು? ನಾನು ಯಾವ ಪಾಪ ಮಾಡಿದ್ದರಿಂದ ನೀನು ನನ್ನನ್ನೂ ನನ್ನ ರಾಜ್ಯವನ್ನೂ ಮಹಾಪಾತಕಕ್ಕೆ ಒಳಪಡಿಸಿದಿ? ನೀನು ಮಾಡಬಾರದ ಕಾರ್ಯಗಳನ್ನು ಮಾಡಲು ನಾನು ನಿನಗೇನು ಮಾಡಿದೆ” ಎಂದು ಹೇಳಿ, 10“ನೀನು ಯಾವ ಉದ್ದೇಶದಿಂದ ಈ ಕಾರ್ಯವನ್ನು ಮಾಡಿದೆ” ಎಂದು ಅಬೀಮೆಲೆಕನು ಅಬ್ರಹಾಮನನ್ನು ಕೇಳಿದನು.
11ಅದಕ್ಕೆ ಅಬ್ರಹಾಮನು, “ಈ ಸ್ಥಳದವರು ದೇವರ ಭಯಭಕ್ತಿ ಇಲ್ಲದವರಾಗಿ ನನ್ನ ಹೆಂಡತಿಯ ನಿಮಿತ್ತ ನನ್ನನ್ನು ಕೊಂದಾರೆಂದು ಭಾವಿಸಿದೆನು. 12ಅದಲ್ಲದೆ ಆಕೆ ನಿಜವಾಗಿ ನನ್ನ ತಂಗಿ, ನನ್ನ ತಂದೆಯ ಮಗಳೇ; ಆದರೆ ನನ್ನ ತಾಯಿಯ ಮಗಳಲ್ಲವಾದುದರಿಂದ ನನಗೆ ಹೆಂಡತಿಯಾದಳು. 13ನಾನು ದೇವರ ಸಂಕಲ್ಪದಿಂದ ತಂದೆಯ ಮನೆಯನ್ನು ಬಿಟ್ಟು ದೇಶಾಂತರ ಹೋಗುವುದಕ್ಕೆ ಹೊರಟಾಗ ನಾನು ಆಕೆಗೆ, ‘ನಾವು ಹೋಗುವ ಎಲ್ಲಾ ಸ್ಥಳಗಳಲ್ಲಿಯೂ ನನಗೆ ನಿನ್ನಿಂದ ಒಂದು ದಯೆ ಆಗಬೇಕು. ಅದು, ಏನೆಂದರೆ ನೀನು ನನ್ನನ್ನು ಅಣ್ಣನೆಂಬುದಾಗಿ ಹೇಳಬೇಕು’ ಎಂದು ತಿಳಿಸಿದೆನು” ಎಂದನು.
14ಆಗ ಅಬೀಮೆಲೆಕನು ಅಬ್ರಹಾಮನಿಗೆ ಕುರಿದನಗಳನ್ನೂ ದಾಸದಾಸಿಯರನ್ನೂ ಕೊಟ್ಟು, ಅವನ ಹೆಂಡತಿಯಾದ ಸಾರಳನ್ನು ಅವನಿಗೆ ಒಪ್ಪಿಸಿ, 15“ಇಗೋ, ಇದು ನನ್ನ ದೇಶ; ಇದರೊಳಗೆ ನಿನಗೆ ಇಷ್ಟವಿದ್ದ ಕಡೆಯಲ್ಲಿ ನೀನು ವಾಸ ಮಾಡಬಹುದು” ಎಂದು ಅಬೀಮೆಲೆಕನು ಹೇಳಿದನು.
16ಇದಲ್ಲದೆ ಅವನು ಸಾರಳಿಗೆ, “ನಿನ್ನ ಅಣ್ಣನಿಗೆ ಸಾವಿರ ರೂಪಾಯಿ ಕೊಟ್ಟಿದ್ದೇನೆ; ನಡೆದದ್ದನ್ನು ನಿನ್ನ ಕಡೆಯವರು ಗಮನಕ್ಕೆ ತೆಗೆದುಕೊಳ್ಳದಂತೆ ಇರಲು ಇದು ಪ್ರಾಯಶ್ಚಿವಾಗಿರಲಿ; ನೀನು ಮಾನಸ್ಥಳೆಂದು ಇದರಿಂದ ಎಲ್ಲರೂ ತಿಳಿದುಕೊಳ್ಳುವರು” ಎಂದು ಹೇಳಿದನು.
17ತರುವಾಯ ಅಬ್ರಹಾಮನು ದೇವರನ್ನು ಬೇಡಿಕೊಳ್ಳಲು ದೇವರು ಅಬೀಮೆಲೆಕನನ್ನೂ, ಅವನ ಪತ್ನಿಯನ್ನೂ ಮತ್ತು ದಾಸಿಯರನ್ನೂ ವಾಸಿಮಾಡಿದ್ದರಿಂದ ಅವರಿಗೆ ಮಕ್ಕಳಾದರು. 18ಅಬ್ರಹಾಮನ ಹೆಂಡತಿಯಾದ ಸಾರಳ ನಿಮಿತ್ತ ಮೊದಲು ಯೆಹೋವನು ಅಬೀಮೆಲೆಕನ ಮನೆಯಲ್ಲಿದ್ದ ಸ್ತ್ರೀಯರೆಲ್ಲರನ್ನು ಬಂಜೆಯರನ್ನಾಗಿ ಮಾಡಿದ್ದನು.

Aktualisht i përzgjedhur:

ಆದಿ 20: IRVKan

Thekso

Ndaje

Copy

None

A doni që theksimet tuaja të jenë të ruajtura në të gjitha pajisjet që keni? Regjistrohu ose hyr