ಯೋಹಾ 8
8
ವ್ಯಭಿಚಾರಿಣಿಗೂ ಕ್ಷಮಾಪಣೆ#8:1 7:53 ಮೊದಲುಗೊಂಡು 8:11 ರ ತನಕ ಬರೆದಿರುವ ವಚನಗಳು ಕೆಲವು ಪ್ರಾಚೀನ ಪ್ರತಿಗಳಲ್ಲಿ ಸಿಕ್ಕುವುದಿಲ್ಲ; ಕೆಲವು ಪ್ರತಿಗಳಲ್ಲಿ ಹೆಚ್ಚುಕಡಿಮೆ ಉಂಟು.
1ಯೇಸು #8:1 ಆಲಿವ್ ಮರ ಎಣ್ಣೆಮರಗಳ ಗುಡ್ಡಕ್ಕೆ ಹೋದನು. 2ಬೆಳಗಿನಜಾವದಲ್ಲಿ ಆತನು ತಿರುಗಿ ದೇವಾಲಯಕ್ಕೆ ಬಂದಾಗ ಎಲ್ಲಾ ಜನರು ಆತನ ಬಳಿಗೆ ಬಂದರು. ಆತನು ಕುಳಿತುಕೊಂಡು ಅವರಿಗೆ ಬೋಧಿಸಿದನು. 3ಶಾಸ್ತ್ರಿಗಳೂ ಮತ್ತು ಫರಿಸಾಯರೂ ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಒಬ್ಬ ಹೆಂಗಸನ್ನು ಹಿಡಿದು ಆತನ ಬಳಿಗೆ ತಂದು ಆಕೆಯನ್ನು ಅವರ ಗುಂಪಿನ ಮಧ್ಯದಲ್ಲಿ ನಿಲ್ಲಿಸಿ; 4ಯೇಸುವಿಗೆ, “ಬೋಧಕನೇ, ಈ ಸ್ತ್ರೀ ವ್ಯಭಿಚಾರ ಮಾಡುತ್ತಿರುವಾಗಲೇ ಸಿಕ್ಕಿಬಿದ್ದಳು. 5#8:5 ಧರ್ಮೋ 22, 23, 24:ಇಂಥವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯು ಧರ್ಮಶಾಸ್ತ್ರದಲ್ಲಿ ನಮಗೆ ಆಜ್ಞಾಪಿಸಿದ್ದಾನೆ. ಈಕೆಯ ವಿಷಯದಲ್ಲಿ ನೀನು ಏನು ಹೇಳುತ್ತೀ?” ಎಂದು ಆತನನ್ನು ಕೇಳಿದರು. 6ಅವರು ಆತನನ್ನು ಪರೀಕ್ಷಿಸುವವರಾಗಿ ಆತನ ಮೇಲೆ ತಪ್ಪುಹೊರಿಸಬೇಕೆಂದೇ ಹೀಗೆ ಕೇಳಿದರು. ಆದರೆ ಯೇಸು ಬಗ್ಗಿಕೊಂಡು ಬೆರಳಿನಿಂದ ನೆಲದ ಮೇಲೆ ಬರೆಯುತ್ತಾ ಇದ್ದನು. 7ಅವರು ಆತನನ್ನು ಬಿಡದೆ ಪ್ರಶ್ನಿಸುತ್ತಿರುವಾಗ, ಆತನು ನೆಟ್ಟಗೆ ಕುಳಿತುಕೊಂಡು, ಅವರಿಗೆ, “ನಿಮ್ಮಲ್ಲಿ ಪಾಪವಿಲ್ಲದವನು ಯಾರಿದ್ದಾನೋ ಅವನೇ ಮೊದಲು ಆಕೆಯ ಮೇಲೆ ಕಲ್ಲು ಎಸೆಯಲಿ” ಎಂದು ಹೇಳಿದನು 8ತಿರುಗಿ ಆತನು ಬಗ್ಗಿಕೊಂಡು ಬೆರಳಿನಿಂದ ನೆಲದ ಮೇಲೆ ಬರೆಯುತ್ತಾ ಇದ್ದನು. 9ಅದನ್ನು ಅವರು ಕೇಳಿ ಹಿರಿಯರು ಮೊದಲುಗೊಂಡು ಎಲ್ಲರೂ ಒಬ್ಬೊಬ್ಬರಾಗಿ ಹೊರಟು ಹೋದರು; ಆಗ ಯೇಸು ಒಬ್ಬನೇ ಉಳಿದನು. ಆ ಸ್ತ್ರೀಯು ಅಲ್ಲಿಯೇ ನಿಂತಿದ್ದಳು. 10ಯೇಸು ನೆಟ್ಟಗೆ ಕುಳಿತುಕೊಂಡು ಆಕೆಗೆ, “ಸ್ತ್ರೀಯೇ, ಅವರು ಎಲ್ಲಿಗೆ ಹೋದರು? ನಿನ್ನನ್ನು ಖಂಡಿಸುವುದಕ್ಕೆ ಯಾರೂ ಉಳಿಯಲಿಲ್ಲವೋ?” ಎಂದನು. 11ಅದಕ್ಕೆ ಆಕೆಯು “ಕರ್ತನೇ, ಯಾರೂ ಶಿಕ್ಷೆ ವಿಧಿಸಲಿಲ್ಲ” ಎಂದಳು. ಯೇಸು ಆಕೆಗೆ “ನಾನೂ ಸಹ ನಿನ್ನನ್ನು ಶಿಕ್ಷೆ ವಿಧಿಸುವುದಿಲ್ಲ, ಹೋಗು, ಇನ್ನು ಮುಂದೆ ಪಾಪಮಾಡಬೇಡ” ಎಂದು ಹೇಳಿದನು.
ಯೇಸು ಲೋಕದ ಬೆಳಕಾಗಿದ್ದಾನೆ
12ಯೇಸು ಪುನಃ ಜನರೊಂದಿಗೆ ಮಾತನಾಡುತ್ತಾ, #8:12 ಯೋಹಾ 1, 4, 5; 9:5; 12:35; ಯೆಶಾ 42:6:“ನಾನೇ ಲೋಕದ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವನು ಎಂದಿಗೂ ಕತ್ತಲೆಯಲ್ಲಿ ನಡೆಯುವುದಿಲ್ಲ, ಆದರೆ ಅವನು ಜೀವದ ಬೆಳಕನ್ನು ಹೊಂದಿರುವನು” ಎಂದು ಹೇಳಿದನು. 13ಫರಿಸಾಯರು ಆತನಿಗೆ “ನಿನ್ನ ವಿಷಯವಾಗಿ ನೀನೇ ಸಾಕ್ಷಿ ಹೇಳುತ್ತಿರುವೆ, ನಿನ್ನ ಸಾಕ್ಷಿಯು ನಿಜವಲ್ಲ” ಎಂದು ಹೇಳಲು 14ಯೇಸು ಅವರಿಗೆ “ನನ್ನ ವಿಷಯವಾಗಿ ನಾನು ಸಾಕ್ಷಿನೀಡಿದರೂ, ನನ್ನ ಸಾಕ್ಷಿ ಸತ್ಯವಾದದ್ದು. ನಾನು ಎಲ್ಲಿಂದ ಬಂದೆ ಮತ್ತು ಎಲ್ಲಿಗೆ ಹೋಗುತ್ತೇನೆ ಎಂದು ನನಗೆ ತಿಳಿದಿದೆ, ಆದರೆ ನಾನು ಎಲ್ಲಿಂದ ಬಂದೆನೋ ಇಲ್ಲವೆ ಎಲ್ಲಿಗೆ ಹೋಗುತ್ತೇನೋ ಎಂಬುದು ನಿಮಗೆ ತಿಳಿಯದು. 15ನೀವು ಶಾರೀರಿಕ ರೀತಿಯಲ್ಲಿ ತೀರ್ಪು ಮಾಡುತ್ತೀರಿ, ನಾನು ಯಾರಿಗೂ ತೀರ್ಪು ಮಾಡುವುದಿಲ್ಲ. 16ನಾನು ತೀರ್ಪು ಮಾಡಿದರೂ ನನ್ನ ತೀರ್ಪು ಸತ್ಯವಾದದ್ದೇ. ಏಕೆಂದರೆ ನಾನು ಒಬ್ಬಂಟಿಗನಲ್ಲ, ನನ್ನನ್ನು ಕಳುಹಿಸಿಕೊಟ್ಟ ನನ್ನ ತಂದೆಯೂ ನನ್ನ ಜೊತೆಯಲ್ಲಿ ಇದ್ದಾನೆ. 17#8:17 ಧರ್ಮೋ 19:15:ಇಬ್ಬರ ಸಾಕ್ಷಿಯು ಸತ್ಯವಾದದ್ದು ಎಂದು ನಿಮ್ಮ ಧರ್ಮಶಾಸ್ತ್ರದಲ್ಲಿಯೇ ಬರೆದಿದೆ. 18ನನ್ನ ವಿಷಯವಾಗಿ ಸಾಕ್ಷಿ ನೀಡುವವನು ನಾನೇ ಮತ್ತು ನನ್ನನ್ನು ಕಳುಹಿಸಿದ ತಂದೆಯೂ ನನ್ನ ವಿಷಯವಾಗಿ ಸಾಕ್ಷಿ ನೀಡುತ್ತಾನೆ” ಎಂದನು. 19ಅವರು, “ನಿನ್ನ ತಂದೆ ಎಲ್ಲಿದ್ದಾನೆ?” ಎಂದರು. ಅದಕ್ಕೆ ಯೇಸು, “ನೀವು ನನ್ನನ್ನೂ ತಿಳಿದಿಲ್ಲ ಹಾಗೂ ನನ್ನ ತಂದೆಯನ್ನೂ ತಿಳಿದಿಲ್ಲ. ನೀವು ನನ್ನನ್ನು ತಿಳಿದಿದ್ದರೆ ನನ್ನ ತಂದೆಯನ್ನೂ ಸಹ ತಿಳಿದಿರುವಿರಿ” ಎಂದು ಉತ್ತರ ಕೊಟ್ಟನು. 20ಯೇಸು ದೇವಾಲಯದ ಕಾಣಿಕೆಯ ಪೆಟ್ಟಿಗೆಗಳು ಇರುವ ಸ್ಥಳದಲ್ಲಿ ಬೋಧನೆ ಮಾಡುತ್ತಿರುವಾಗ ಈ ಮಾತುಗಳನ್ನು ಹೇಳಿದನು. ಆದರೆ ಆತನ ಸಮಯ ಇನ್ನೂ ಬಾರದೆ ಇದ್ದ ಕಾರಣ ಯಾರೂ ಆತನನ್ನು ಬಂಧಿಸಲಿಲ್ಲ.
21ಯೇಸು ತಿರುಗಿ ಅವರಿಗೆ, “ನಾನು ಹೋಗುತ್ತೇನೆ, ನೀವು ನನ್ನನ್ನು ಹುಡುಕುವಿರಿ ಮತ್ತು ನೀವು ನಿಮ್ಮ ಪಾಪದಲ್ಲೇ ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ” ಎಂದನು. 22ಅದಕ್ಕೆ ಯೆಹೂದ್ಯರು, “ನಾವು ಹೋಗುವಲ್ಲಿಗೆ ನೀವು ಬರಲಾರಿರೆಂದು ಹೇಳುತ್ತಾನಲ್ಲಾ? ಇವನು ತನ್ನನ್ನು ತಾನೇ ಕೊಂದುಕೊಳ್ಳಬೇಕೆಂದಿದ್ದಾನೋ?” ಎಂದು ಮಾತನಾಡಿಕೊಂಡರು. 23ಆತನು ಅವರಿಗೆ, “ನೀವು ಕೆಳಗಿನವರು; ನಾನು ಮೇಲಿನಿಂದ ಬಂದವನು. ನೀವು ಈ ಲೋಕದವರು; ನಾನು ಈ ಲೋಕದವನಲ್ಲ. 24ಆದುದರಿಂದ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರೆಂದು ನಿಮಗೆ ನಾನು ಹೇಳಿದೆನು. ನೀವು #8:24 ನನ್ನನ್ನು ಎಂದರೆ, ಬರಬೇಕಾದ ಕ್ರಿಸ್ತನು. ನನ್ನನ್ನು ಯಾರೆಂದು ನಂಬದೆ ಹೋದರೆ ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ” ಎಂದು ಹೇಳಿದನು. 25ಆಗ ಅವರು ಆತನಿಗೆ, “ನೀನು ಯಾರು?” ಎನ್ನಲೂ, ಯೇಸು ಅವರಿಗೆ, “ಮೊದಲಿನಿಂದಲೇ #8:25 ಅಥವಾ, ನಾನು ಮೊದಲಿಂದಲೂನಾನು ನಿಮಗೆ ಹೇಳಿದಂಥದ್ದೇ. 26ನಿಮ್ಮ ವಿಷಯವಾಗಿ ಮಾತನಾಡುವುದಕ್ಕೂ, ನಿಮ್ಮ ಮೇಲೆ ತೀರ್ಪು ಮಾಡುವುದಕ್ಕೂ ಅನೇಕ ಸಂಗತಿಗಳು ನನಗುಂಟು. ಆದರೆ ನನ್ನನ್ನು ಕಳುಹಿಸಿ ಕೊಟ್ಟಾತನು ಸತ್ಯವಂತನು. ಆತನಿಂದ ನಾನು ಕೇಳಿದವುಗಳನ್ನೇ ಲೋಕಕ್ಕೆ ಹೇಳುತ್ತೇನೆ” ಎಂದನು. 27ಆತನು ತಂದೆಯ ಕುರಿತಾಗಿ ಅವರೊಂದಿಗೆ ಮಾತನಾಡಿದನೆಂದು ಅವರು ಗ್ರಹಿಸಲಿಲ್ಲ. 28ಹೀಗಿರಲಾಗಿ ಯೇಸು ಅವರಿಗೆ, #8:28 ಯೋಹಾ 3:14; 12:32:“ನೀವು ಮನುಷ್ಯಕುಮಾರನನ್ನು ಮೇಲಕ್ಕೆತ್ತಿದಾಗ, ನಾನೇ ಆತನೆಂದೂ, ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನೆಂದು ನೀವು ತಿಳಿದುಕೊಳ್ಳುವಿರಿ. ಆದರೆ ನನ್ನ ತಂದೆಯು ನನಗೆ ಬೋಧಿಸಿದ ಸಂಗತಿಗಳನ್ನೇ ಮಾತನಾಡುತ್ತೇನೆ. 29ನನ್ನನ್ನು ಕಳುಹಿಸಿಕೊಟ್ಟಾತನು ನನ್ನ ಸಂಗಡ ಇದ್ದಾನೆ. ನಾನು ಆತನಿಗೆ ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡುವುದರಿಂದ, ಆತನು ನನ್ನನ್ನು ಒಬ್ಬಂಟಿಗನಾಗಿ ಬಿಡುವುದಿಲ್ಲ” ಎಂದನು.
30ಆತನು ಈ ಮಾತುಗಳನ್ನು ಹೇಳುತ್ತಿದ್ದಾಗಲೇ ಅನೇಕರು ಆತನಲ್ಲಿ ನಂಬಿಕೆಯಿಟ್ಟರು. 31ಆಗ ಯೇಸು ತನ್ನನ್ನು ನಂಬಿದ ಯೆಹೂದ್ಯರಿಗೆ, “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡಿರುವುದಾದರೆ, ನಿಜವಾಗಿಯೂ ನೀವು ನನ್ನ ಶಿಷ್ಯರಾಗಿರುವಿರಿ. 32ಇದಲ್ಲದೆ ನೀವು ಸತ್ಯವನ್ನು ತಿಳಿದುಕೊಳ್ಳುವಿರಿ ಮತ್ತು ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವುದು” ಎಂದು ಹೇಳಿದನು. 33ಅದಕ್ಕವರು ಆತನಿಗೆ, “ನಾವು ಅಬ್ರಹಾಮನ ಸಂತಾನದವರು ಮತ್ತು ನಾವು ಎಂದೂ ಯಾರಿಗೂ ದಾಸರಾಗಿಲ್ಲ, ನಿಮಗೆ ಬಿಡುಗಡೆಯಾಗುವುದೆಂದು ನೀನು ಹೇಳುವುದಾದರೂ ಹೇಗೆ?” ಎಂದು ಪ್ರಶ್ನಿಸಿದರು. 34ಅದಕ್ಕೆ ಯೇಸು, “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಪಾಪ ಮಾಡುವವರೆಲ್ಲರು ಪಾಪಕ್ಕೆ ದಾಸರಾಗಿದ್ದಾರೆ. 35ದಾಸನು ಮನೆಯಲ್ಲಿ ಶಾಶ್ವತವಾಗಿ ಇರುವುದಿಲ್ಲ, ಆದರೆ ಮಗನು ಶಾಶ್ವತವಾಗಿ ಇರುತ್ತಾನೆ. 36ಆದುದರಿಂದ ಮಗನು ನಿಮ್ಮನ್ನು ಬಿಡುಗಡೆ ಮಾಡಿದರೆ, ನಿಜವಾಗಿಯೂ ನಿಮಗೆ ಬಿಡುಗಡೆಯಾಗುವುದು. 37ನೀವು ಅಬ್ರಹಾಮನ ಸಂತಾನದವರೆಂದು ನಾನು ಬಲ್ಲೆನು, ಆದರೂ ನನ್ನ ವಾಕ್ಯಕ್ಕೆ ನಿಮ್ಮಲ್ಲಿ ಸ್ಥಳವಿಲ್ಲದ ಕಾರಣ ನೀವು ನನ್ನನ್ನು ಕೊಲ್ಲುವುದಕ್ಕೆ ನೋಡುತ್ತಿದ್ದೀರಿ. 38ನಾನು #8:38 ಅಥವಾ, ನಿಮ್ಮ ತಂದೆಯಿಂದ ಕೇಳಿದ್ದನ್ನು ಮಾಡುವವರಾಗಿದ್ದೀರಿ. ತಂದೆಯ ಬಳಿಯಲ್ಲಿ ನೋಡಿದ್ದನ್ನೇ ಮಾತನಾಡುತ್ತೇನೆ, ನೀವು ತಂದೆಯಿಂದ ಕೇಳಿದ್ದನ್ನೇ ಮಾಡಿರಿ” ಎಂದನು. 39ಅದಕ್ಕೆ ಅವರು, “ನಮ್ಮ ತಂದೆಯು ಅಬ್ರಹಾಮನೇ” ಎಂದರು. ಅದಕ್ಕೆ ಯೇಸು ಅವರಿಗೆ, “ನೀವು ಅಬ್ರಹಾಮನ ಮಕ್ಕಳಾಗಿದ್ದರೆ, ಅಬ್ರಹಾಮನು ಮಾಡಿದಂಥ ಕೃತ್ಯಗಳನ್ನು ಮಾಡುತ್ತಿದ್ದೀರಿ. 40ಆದರೂ, ನೀವು ಹಾಗೆ ಮಾಡದೇ ದೇವರಿಂದ ಕೇಳಿದ ಸತ್ಯವನ್ನು ನಿಮಗೆ ಹೇಳಿದವನಾದ ನನ್ನನ್ನು ಕೊಲ್ಲುವುದಕ್ಕೆ ಹುಡುಕುತ್ತಿದ್ದೀರಿ. ಅಬ್ರಹಾಮನು ಹೀಗೆ ಮಾಡಲಿಲ್ಲ. 41ನೀವು ನಿಮ್ಮ ತಂದೆಯ ಕಾರ್ಯಗಳನ್ನು ಮಾಡುತ್ತಿದ್ದೀರಿ” ಎಂದನು. ಅದಕ್ಕವರು, “ನಾವು ವ್ಯಭಿಚಾರದಿಂದ ಹುಟ್ಟಿದವರಲ್ಲ. ನಮಗೆ ಒಬ್ಬನೇ ತಂದೆ, ಆತನು ದೇವರೇ” ಎಂದರು. 42ಯೇಸು ಅವರಿಗೆ, “ದೇವರು ನಿಮಗೆ ತಂದೆಯಾಗಿದ್ದರೆ, ನೀವು ನನ್ನನ್ನು ಪ್ರೀತಿಸುತ್ತಿದ್ದಿರಿ, ಏಕೆಂದರೆ ನಾನು ದೇವರಿಂದಲೇ ಹೊರಟು ಲೋಕಕ್ಕೆ ಬಂದವನಾಗಿದ್ದೇನೆ. ನನ್ನಷ್ಟಕ್ಕೆ ನಾನೇ ಬರಲಿಲ್ಲ, ಆದರೆ ದೇವರೇ ನನ್ನನ್ನು ಕಳುಹಿಸಿದ್ದಾನೆ. 43ನೀವು ನನ್ನ ಮಾತನ್ನು ಯಾಕೆ ಗ್ರಹಿಸುತ್ತಿಲ್ಲ? ಏಕೆಂದರೆ ನೀವು ನನ್ನ ವಾಕ್ಯಕ್ಕೆ ಕಿವಿಗೊಡದೆ ಇರುವುದರಿಂದಲೇ. 44#8:44 ಆದಿ 3:4; 4:8; 1 ಯೋಹಾ 3:12, 15:ಸೈತಾನನು ನಿಮ್ಮ ತಂದೆ, ನೀವು ಆತನಿಗೆ ಸೇರಿದವರಾಗಿದ್ದು ನಿಮ್ಮ ತಂದೆಯ ದುರಾಶೆಗಳನ್ನೇ ನೀವು ಮಾಡಬಯಸುತ್ತೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನೆಲೆಗೊಂಡಿಲ್ಲ. ಏಕೆಂದರೆ ಅವನಲ್ಲಿ ಸತ್ಯವೇ ಇಲ್ಲ. ಅವನು ತನ್ನ ಸ್ವಭಾವಕ್ಕನುಸಾರವಾಗಿ ಸುಳ್ಳಾಡುತ್ತಾನೆ, ಏಕೆಂದರೆ ಅವನು ಸುಳ್ಳುಗಾರನೂ ಮತ್ತು ಸುಳ್ಳಿನ ತಂದೆಯೂ ಆಗಿದ್ದಾನೆ. 45ಆದರೂ, ನಾನು ಸತ್ಯವನ್ನು ಹೇಳುವವನಾಗಿದ್ದರೂ ನೀವು ನನ್ನನ್ನು ನಂಬುವುದಿಲ್ಲ. 46ನನ್ನಲ್ಲಿ ಪಾಪವಿದೆಯೆಂದು ಸಮರ್ಥಿಸಬಲ್ಲವರು ನಿಮ್ಮಲ್ಲಿ ಯಾರಿದ್ದಾರೆ? ನಾನು ಸತ್ಯವನ್ನೇ ಹೇಳುವುದಾದರೆ, ನೀವು ನನ್ನನ್ನು ಯಾಕೆ ನಂಬುವುದಿಲ್ಲ? 47ದೇವರಿಗೆ ಸೇರಿದವನು ದೇವರ ವಾಕ್ಯಕ್ಕೆ ಕಿವಿಗೊಡುತ್ತಾನೆ. ನೀವು ದೇವರಿಗೆ ಸೇರಿದವರಲ್ಲದ ಕಾರಣ ನೀವು ದೇವರ ವಾಕ್ಯಕ್ಕೆ ಕಿವಿಗೊಡುವುದಿಲ್ಲ” ಎಂದು ಹೇಳಿದನು.
48ಅದಕ್ಕೆ ಯೆಹೂದ್ಯರು, “ನೀನು ಸಮಾರ್ಯದವನು ಮತ್ತು ನಿನಗೆ ದೆವ್ವಹಿಡಿದಿದೆ ಎಂದು ನಾವು ಹೇಳುವುದು ಸರಿಯಲ್ಲವೋ?” ಎಂದು ಕೇಳಿದರು. 49ಅದಕ್ಕೆ ಯೇಸು; “ನನಗೆ ದೆವ್ವ ಹಿಡಿದಿಲ್ಲ. ನಾನು ನನ್ನ ತಂದೆಯನ್ನು ಗೌರವಿಸುತ್ತೇನೆ, ಆದರೆ ನೀವು ನನಗೆ ಅವಮಾನಪಡಿಸುತ್ತೀದ್ದಿರಿ. 50ನಾನು ನನ್ನ ಮಹಿಮೆಯನ್ನು ಹುಡುಕುವುದಿಲ್ಲ, ಮಹಿಮೆಯನ್ನು ಹುಡುಕುವಾತನು ಒಬ್ಬನಿದ್ದಾನೆ, ಆತನೇ ನ್ಯಾಯಾಧಿಪತಿ. 51ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಯಾವನಾದರೂ ನನ್ನ ವಾಕ್ಯಕ್ಕೆ ವಿಧೇಯನಾದರೆ ಅವನು ನಿತ್ಯಮರಣವನ್ನು ಅನುಭವಿಸುವುದಿಲ್ಲ” ಅಂದನು.
52ಅದಕ್ಕೆ ಯೆಹೂದ್ಯರು “ನೀನು ದೆವ್ವಹಿಡಿದವನೆಂದು ಈಗ ನಮಗೆ ತಿಳಿಯಿತು. ಅಬ್ರಹಾಮನು ಸತ್ತನು ಮತ್ತು ಪ್ರವಾದಿಗಳೂ ಸತ್ತರು, ಆದರೆ ನೀನು ‘ನನ್ನ ವಾಕ್ಯಕ್ಕೆ ವಿಧೇಯನಾದರೆ ಅವನು ನಿತ್ಯಮರಣವನ್ನು ಅನುಭವಿಸುವುದಿಲ್ಲ’ ಎಂದು ಹೇಳುತ್ತೀಯಲ್ಲಾ? 53ಸತ್ತುಹೋದ ನಮ್ಮ ತಂದೆಯಾದ ಅಬ್ರಹಾಮನಿಗಿಂತಲೂ ನೀನು ದೊಡ್ಡವನೋ? ಪ್ರವಾದಿಗಳೂ ಸತ್ತುಹೋದರು, ನಿನ್ನನ್ನೇ ನೀನು ಯಾರೆಂದು ಭಾವಿಸಿಕೊಳ್ಳುತ್ತಿದ್ದೀ?” ಎಂದು ಕೇಳಿದರು. 54ಯೇಸು “ನನ್ನನ್ನು ನಾನೇ ಮಹಿಮೆಪಡಿಸಿಕೊಂಡರೆ ನನ್ನ ಮಹಿಮೆಯು ಏನೂ ಅಲ್ಲ. ನನ್ನನ್ನು ಮಹಿಮೆಪಡಿಸುವವನು ನನ್ನ ತಂದೆಯೇ, ನೀವು ಆತನನ್ನು ನಿಮ್ಮ ದೇವರು ಅನ್ನುತ್ತೀರಿ, 55ಆದರೂ ನೀವು ಆತನನ್ನು ತಿಳಿಯದೆ ಇದ್ದೀರಿ. ನಾನಂತೂ ಆತನನ್ನು ಬಲ್ಲೆನು, ಆತನನ್ನು ಅರಿಯೆನೆಂದು ಹೇಳಿದರೆ ನಿಮ್ಮ ಹಾಗೆ ಸುಳ್ಳುಗಾರನಾಗುವೆನು. ಆದರೆ ನಾನು ಆತನನ್ನು ತಿಳಿದಿದ್ದೇನೆ. ಆತನ ವಾಕ್ಯಕ್ಕೆ ವಿಧೇಯನಾಗುತ್ತೇನೆ. 56ನಿಮ್ಮ ಮೂಲಪುರುಷನಾದ ಅಬ್ರಹಾಮನು ನನ್ನ ದಿನವನ್ನು ತಾನು ನೋಡುತ್ತೇನೆಂದು ಉಲ್ಲಾಸಪಟ್ಟನು ಮತ್ತು ಅದನ್ನು ನೋಡಿ ಸಂತೋಷಪಟ್ಟನು” ಎಂದು ಹೇಳಿದನು. 57ಅದಕ್ಕೆ ಯೆಹೂದ್ಯರು, “ನಿನಗೆ ಇನ್ನೂ ಐವತ್ತು ವರ್ಷವಾಗಿಲ್ಲ, ನೀನು ಅಬ್ರಹಾಮನನ್ನು ನೋಡಿದ್ದೀಯಾ?” ಅಂದರು. 58ಯೇಸು, “ನಿಮಗೆ ನಾನು ನಿಜನಿಜವಾಗಿ ಹೇಳುತ್ತೇನೆ; #8:58 ಯೋಹಾ 8:24; 17:5; ವಿಮೋ 3:14; ಕೊಲೊ 1:17; ಪ್ರಕ 1:8; 21:6; 22:13:ಅಬ್ರಹಾಮನು ಹುಟ್ಟುವುದಕ್ಕಿಂತ ಮುಂಚಿನಿಂದಲೂ ನಾನು ಇದ್ದೇನೆ” ಎಂದನು. 59ಆಗ #8:59 ಯೋಹಾ 10:31; 12:36:ಅವರು ಆತನ ಮೇಲೆ ಎಸೆಯಲು, ಕಲ್ಲುಗಳನ್ನು ಎತ್ತಿಕೊಂಡರು. ಆದರೆ ಯೇಸು ಮರೆಯಾಗಿ ದೇವಾಲಯದೊಳಗಿನಿಂದ ಹೊರಗೆ ಹೊರಟು ಹೋದನು.
Aktualisht i përzgjedhur:
ಯೋಹಾ 8: IRVKan
Thekso
Ndaje
Copy
A doni që theksimet tuaja të jenë të ruajtura në të gjitha pajisjet që keni? Regjistrohu ose hyr
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.