Logoja YouVersion
Ikona e kërkimit

ಲೂಕ 24

24
ಯೇಸುವಿನ ಪುನರುತ್ಥಾನ
ಮತ್ತಾ 28:1-10; ಮಾರ್ಕ 16:1-8; ಯೋಹಾ 20:1-10
1ಆ ಸ್ತ್ರೀಯರು ವಾರದ ಮೊದಲನೆಯ ದಿನದಲ್ಲಿ ಇನ್ನೂ ಮೊಬ್ಬಿರುವಾಗಲೇ ಎದ್ದು, ತಾವು ಸಿದ್ಧಮಾಡಿದ್ದ ಸುಗಂಧದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಗೆ ಬಂದರು. 2ಸಮಾಧಿಗೆ ಮುಚ್ಚಿದ ಕಲ್ಲು ಅಲ್ಲಿಂದ ಉರುಳಿಸಲ್ಪಟ್ಟಿರುವುದನ್ನು ಕಂಡು, 3ಒಳಕ್ಕೆ ಹೋಗಿ ನೋಡಿದಾಗ ಯೇಸು ಕರ್ತನ ದೇಹವು ಅಲ್ಲಿ ಕಾಣಲಿಲ್ಲ. 4ಈ ವಿಷಯವಾಗಿ ಅವರಿಗೆ ಗಲಿಬಿಲಿ ಉಂಟಾದಾಗ ಹೊಳೆಯುವ ಉಡುಪನ್ನು ಧರಿಸಿದ್ದ ಇಬ್ಬರು ಪುರುಷರು ಫಕ್ಕನೆ ಅವರ ಬಳಿಯಲ್ಲಿ ನಿಂತುಕೊಂಡರು. 5ಆ ಸ್ತ್ರೀಯರು ಭಯಹಿಡಿದವರಾಗಿ ತಲೆ ತಗ್ಗಿಸಿಕೊಂಡು ನಿಂತಿರುವಾಗ ಆ ಪುರುಷರು ಅವರಿಗೆ, “ಸತ್ತವರೊಳಗೆ ಬದುಕಿರುವವನನ್ನು ಹುಡುಕುವುದೇನು? 6-7ಆತನು ಇಲ್ಲಿ ಇಲ್ಲ, ಜೀವಿತನಾಗಿ ಎದ್ದಿದ್ದಾನೆ. ಆತನು ಇನ್ನೂ ಗಲಿಲಾಯದಲ್ಲಿದ್ದಾಗ, ಮನುಷ್ಯಕುಮಾರನು ಪಾಪಿಗಳಾದ ಮನುಷ್ಯರ ಕೈಗೆ ಒಪ್ಪಿಸಲ್ಪಟ್ಟು, ಶಿಲುಬೆಗೆ ಹಾಕಲ್ಪಟ್ಟು, ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವುದು ಅಗತ್ಯವೆಂದು ನಿಮಗೆ ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಿರಿ” ಎಂದು ಹೇಳಿದನು. 8ಸ್ತ್ರೀಯರು ಆತನ ಮಾತುಗಳನ್ನು ನೆನಪಿಗೆ ತಂದುಕೊಂಡು, 9ಸಮಾಧಿಯ ಬಳಿಯಿಂದ ಹಿಂತಿರುಗಿ ಹೋಗಿ ಆ ಸಂಗತಿಗಳನ್ನೆಲ್ಲಾ ಹನ್ನೊಂದು ಮಂದಿ ಶಿಷ್ಯರಿಗೂ ಉಳಿದವರೆಲ್ಲರಿಗೂ ತಿಳಿಸಿದರು. 10ಆ ಸ್ತ್ರೀಯರು ಯಾರಾರೆಂದರೆ ಮಗ್ದಲದ ಮರಿಯಳು, ಯೋಹಾನಳು, ಯಾಕೋಬನ ತಾಯಿಯಾದ ಮರಿಯಳು ಇವರೇ. ಇವರ ಜೊತೆಯಲ್ಲಿದ್ದ ಬೇರೆ ಸ್ತ್ರೀಯರು ಸಹ ಅಪೊಸ್ತಲರಿಗೆ ಆ ಸಂಗತಿಗಳನ್ನು ಹೇಳಿದರು. 11ಅವರು ನಂಬಲಿಲ್ಲ ಏಕೆಂದರೆ ಆ ಮಾತುಗಳು ಅವರಿಗೆ ಬರೀ ಹರಟೆಯಾಗಿ ತೋರಿದವು. 12ಆದರೆ ಪೇತ್ರನು ಎದ್ದು ಸಮಾಧಿ ಬಳಿಗೆ ಓಡಿಹೋಗಿ, ಬೊಗ್ಗಿ ನೋಡಿ, ನಾರುಬಟ್ಟೆಗಳನ್ನು ಮಾತ್ರ ಕಂಡು, ನಡೆದ ಸಂಗತಿಗೆ ತನ್ನಲ್ಲಿ ಆಶ್ಚರ್ಯಪಡುತ್ತಾ ಹೊರಟು ಹೋದನು.
ಎಮ್ಮಾಹು ಹಳ್ಳಿಗೆ ಪ್ರಯಾಣ
ಮಾರ್ಕ 16:12,13
13ಅದೇ ದಿನದಲ್ಲಿ ಶಿಷ್ಯರಲ್ಲಿ ಇಬ್ಬರು ಯೆರೂಸಲೇಮಿನಿಂದ ಸುಮಾರು ಏಳು ಮೈಲು ದೂರದಲ್ಲಿದ್ದ ಎಮ್ಮಾಹು ಎಂಬ ಹಳ್ಳಿಗೆ ಹೋಗುತ್ತಾ, 14ಸಂಭವಿಸಿದ ಈ ಎಲ್ಲಾ ಕಾರ್ಯಗಳ ವಿಷಯವಾಗಿ ಸಂಭಾಷಣೆಮಾಡುತ್ತಿದ್ದರು. 15ಅವರು ಸಂಭಾಷಣೆಯಲ್ಲಿ ಚರ್ಚಿಸುತ್ತಿರುವಾಗ ಯೇಸು ತಾನೇ ಹತ್ತಿರಕ್ಕೆ ಬಂದು ಅವರ ಜೊತೆಯಲ್ಲಿ ಸಾಗಿದನು. 16ಅವರ ಕಣ್ಣುಕಟ್ಟಿದಂತೆ ಇದುದ್ದರಿಂದ ಅವರು ಆತನ ಗುರುತನ್ನು ಹಿಡಿಯಲಿಲ್ಲ. 17ಯೇಸು, “ನೀವು ಮಾರ್ಗದಲ್ಲಿ ಹೋಗುತ್ತಾ ಚರ್ಚಿಸಿ ಮಾತನಾಡಿಕೊಳ್ಳುವ ಈ ಸಂಗತಿಗಳೇನು” ಎಂದು ಕೇಳಲು, ಅವರು ದುಃಖದ ಮುಖವುಳ್ಳವರಾಗಿ ನಿಂತರು. 18ಅವರಲ್ಲಿ ಕ್ಲೆಯೋಫನೆಂಬವನು ಆತನಿಗೆ, “ಯೆರೂಸಲೇಮಿಗೆ ಬಂದ ಪರಸ್ಥಳದವರೆಲ್ಲರಿಗೂ ಈ ದಿನಗಳಲ್ಲಿ ನಡೆದಿರುವ ಸಂಗತಿಗಳು ಗೊತ್ತಿರಲಾಗಿ ನಿನಗೆ ಮಾತ್ರ ಗೊತ್ತಿಲ್ಲವೋ?” ಎಂದು ಕೇಳಲು,
19ಆತನು ಅವರನ್ನು, “ಯಾವ ಸಂಗತಿಗಳು” ಎಂದು ಕೇಳಿದನು. ಅದಕ್ಕೆ ಅವರು, “ನಜರೇತಿನವನಾದ ಯೇಸುವಿನ ಸಂಗತಿಗಳೇ. ಆತನು ದೇವರ ಮುಂದೆ ಮತ್ತು ಮನುಷ್ಯರ ಮುಂದೆ ಕೃತ್ಯದಲ್ಲಿಯೂ ಮಾತಿನಲ್ಲಿಯೂ ಉನ್ನತನಾದ ಪ್ರವಾದಿಯಾಗಿದ್ದನು. 20ಆತನನ್ನು ಮುಖ್ಯಯಾಜಕರೂ ನಮ್ಮ ಅಧಿಕಾರಿಗಳೂ ಮರಣದಂಡನೆಗೆ ಒಪ್ಪಿಸಿಕೊಟ್ಟು ಶಿಲುಬೆಗೆ ಹಾಕಿಸಿದರು. 21ನಾವಾದರೋ ಇಸ್ರಾಯೇಲ್ ಜನರನ್ನು ಬಿಡಿಸತಕ್ಕವನು ಆತನೇ ಎಂದು ನಿರೀಕ್ಷಿಸಿಕೊಂಡಿದ್ದೆವು. ಇದು ಮಾತ್ರವಲ್ಲದೆ ಆ ಕಾರ್ಯಗಳು ನಡೆದು ಇಂದಿಗೆ ಮೂರನೆಯ ದಿನ. 22-23ಆದರೆ ನಮ್ಮಲ್ಲಿ ಕೆಲವು ಮಂದಿ ಸ್ತ್ರೀಯರು ಬೆಳಗಾಗುವಾಗ ಸಮಾಧಿಯ ಬಳಿಗೆ ಹೋಗಿ ಆತನ ದೇಹವನ್ನು ಕಾಣದೇ, ಅಲ್ಲಿಂದ ಬಂದು ತಮಗೆ ದೇವದೂತರ ದರ್ಶನವಾಯಿತೆಂತಲೂ, ಆತನು ಬದುಕಿದ್ದಾನೆಂದು ಅವರು ಹೇಳಿದರೆಂತಲೂ ತಿಳಿಸಿ ನಮಗೆ ಅತ್ಯಾಶ್ಚರ್ಯವನ್ನುಂಟುಮಾಡಿದರು. 24ನಮ್ಮ ಸಂಗಡ ಇದ್ದವರಲ್ಲಿ ಕೆಲವರು ಸಮಾಧಿಗೆ ಹೋಗಿ ಆ ಸ್ತ್ರೀಯರು ಹೇಳಿದ ಪ್ರಕಾರವೇ ಕಂಡರು. ಆತನನ್ನು ಮಾತ್ರ ಕಾಣಲಿಲ್ಲ” ಎಂದು ಹೇಳಿದರು.
25ಯೇಸು ಅವರಿಗೆ, “ಎಲಾ ಬುದ್ಧಿಯಿಲ್ಲದವರೇ, ಪ್ರವಾದಿಗಳು ಹೇಳಿದ್ದೆಲ್ಲವನ್ನು ನಂಬದ ಮಂದ ಹೃದಯವುಳ್ಳವರೇ, 26ಕ್ರಿಸ್ತನು ಇಂಥ ಶ್ರಮೆಗಳನ್ನು ಅನುಭವಿಸಿ ತನ್ನ ಮಹಿಮಾಪದವಿಗೆ ಸೇರುವುದು ಅಗತ್ಯವಾಗಿತ್ತಲ್ಲವೇ” ಎಂದು ಹೇಳಿದನು. 27ಮೋಶೆಯ ಮತ್ತು ಎಲ್ಲಾ ಪ್ರವಾದಿಗಳ ಗ್ರಂಥಗಳು ಮೊದಲುಗೊಂಡು ಸಮಸ್ತ ಗ್ರಂಥಗಳಲ್ಲಿ ತನ್ನ ವಿಷಯವಾಗಿರುವ ಸೂಚನೆಗಳನ್ನು ಅವರಿಗೆ ವಿವರಿಸಿದನು.
28ಅವರು ಹೋಗುತ್ತಿರುವ ಹಳ್ಳಿಯ ಸಮೀಪಕ್ಕೆ ಬಂದಾಗ ಆತನು ಅವರನ್ನು ದಾಟಿ ಇನ್ನೂ ಮುಂದಕ್ಕೆ ಹೋಗುವವನಂತೆ ತೋರ್ಪಡಿಸಿಕೊಂಡನು. 29ಆದರೆ ಅವರು, “ನಮ್ಮ ಸಂಗಡ ಇರು. ಸಂಜೆಯಾಯಿತು, ಹೊತ್ತು ಇಳಿಯುತ್ತಾ ಬಂದಿತು” ಎಂದು ಆತನಿಗೆ ಹೇಳಿ ಬಲವಂತ ಮಾಡಲು, ಆತನು ಅವರ ಕೂಡ ಇರುವುದಕ್ಕೆ ಹೋದನು. 30ಆತನು ಅವರ ಸಂಗಡ ಊಟಕ್ಕೆ ಕುಳಿತುಕೊಂಡಾಗ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ, ಮುರಿದು ಅವರಿಗೆ ಕೊಡುತ್ತಿರಲಾಗಿ, 31ಅವರ ಕಣ್ಣುಗಳು ತೆರೆದವು. ಆಗ ಅವರು ಆತನ ಗುರುತು ಹಿಡಿದರು. ಆತನು ಅವರ ಕಣ್ಣಿಗೆ ಕಾಣದಂತೆ ಮಾಯವಾದನು. 32ಆಗ ಅವರು ಒಬ್ಬರಿಗೊಬ್ಬರು, “ಆತನು ದಾರಿಯಲ್ಲಿ ನಮ್ಮ ಸಂಗಡ ಮಾತನಾಡಿದಾಗಲೂ, ಗ್ರಂಥಗಳ ಅರ್ಥವನ್ನು ನಮಗೆ ಬಿಡಿಸಿ ಹೇಳಿದಾಗಲೂ, ನಮ್ಮ ಹೃದಯವು ನಮ್ಮೊಳಗೆ ಕುದಿಯಿತಲ್ಲವೇ?” ಎಂದು ಹೇಳಿಕೊಂಡು, 33ಅದೇ ಗಳಿಗೆಯಲ್ಲಿ ಎದ್ದು ಯೆರೂಸಲೇಮಿಗೆ ಹಿಂತಿರುಗಿ ಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರ ಸಂಗಡ ಇದ್ದವರೂ ಒಟ್ಟಾಗಿ ಕೂಡಿಕೊಂಡಿದ್ದರು. 34“ಕರ್ತನು ಎದ್ದದ್ದು ನಿಜ. ಆತನು ಸೀಮೋನನಿಗೆ ಕಾಣಿಸಿಕೊಂಡನು” ಎಂದು ಹೇಳುತ್ತಿದ್ದರು. 35ಆಗ ಅವರಿಬ್ಬರು ದಾರಿಯಲ್ಲಿ ನಡೆದ ಸಂಗತಿಯನ್ನೂ ರೊಟ್ಟಿ ಮುರಿಯುವುದರಲ್ಲಿ ತಾವು ಆತನ ಗುರುತು ಹಿಡಿದೆವೆಂಬುದನ್ನೂ ವಿವರಿಸಿದರು.
ಯೇಸು ತನ್ನ ಶಿಷ್ಯರಿಗೆ ಪ್ರತ್ಯಕ್ಷನಾದದ್ದು
ಮತ್ತಾ 28:16-20; ಮಾರ್ಕ 16:14-18; ಯೋಹಾ 20:19-23; ಅ. ಕೃ. 1:6-8
36ಅವರು ಈ ಸಂಗತಿಗಳನ್ನು ಕುರಿತು ಮಾತನಾಡುತ್ತಿರುವಾಗ ಯೇಸುವೇ ಅವರ ನಡುವೆ ನಿಂತು, “ನಿಮಗೆ ಸಮಾಧಾನವಾಗಲಿ” ಎಂದು ಅವರಿಗೆ ಹೇಳಿದನು#24:36 “ನಿಮಗೆ ಸಮಾಧಾನವಾಗಲಿ” ಕೆಲವು ಪ್ರತಿಗಳಲ್ಲಿ ಈ ಮೇಲಿನ ಭಾಗ ಇಲ್ಲ.. 37ಅವರು ದಿಗಿಲುಬಿದ್ದು ಭಯಹಿಡಿದವರಾಗಿ ತಾವು ಕಂಡದ್ದನ್ನು ಭೂತವೆಂದು ಭಾವಿಸಿದರು. 38ಆತನು ಅವರಿಗೆ, “ಯಾಕೆ ಕಳವಳಗೊಳ್ಳುತ್ತೀರಿ? ನಿಮ್ಮ ಹೃದಯಗಳಲ್ಲಿ ಅನುಮಾನಗಳು ಹುಟ್ಟುವುದೇಕೆ? 39ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿರಿ. ನಾನೇ ಅಲ್ಲವೇ, ನನ್ನನ್ನು ಮುಟ್ಟಿ ನೋಡಿರಿ. ನಿಮಗೆ ಕಾಣುವ ಪ್ರಕಾರ ನನಗೆ ಮಾಂಸವೂ ಎಲುಬುಗಳೂ ಉಂಟು. ಅವು ಭೂತಕ್ಕಿಲ್ಲ” ಎಂದು ಹೇಳಿದನು.
40ಇದನ್ನು ಹೇಳಿದ ಮೇಲೆ ಆತನು ತನ್ನ ಕೈಗಳನ್ನೂ ಕಾಲುಗಳನ್ನೂ ಅವರಿಗೆ ತೋರಿಸಿದನು. 41ಆದರೆ ಅವರು ಸಂತೋಷಭರಿತರಾಗಿ ಇನ್ನೂ ನಂಬದೇ ಆಶ್ಚರ್ಯಪಡುತ್ತಿರಲಾಗಿ ಆತನು, “ತಿನ್ನತಕ್ಕ ಪದಾರ್ಥವೇನಾದರೂ ನಿಮ್ಮಲ್ಲುಂಟೋ?” ಎಂದು ಅವರನ್ನು ಕೇಳಲು, 42ಅವರು ಸುಟ್ಟ ಮೀನಿನ ಒಂದು ತುಂಡನ್ನು ಆತನಿಗೆ ಕೊಟ್ಟರು. 43ಆತನು ಅದನ್ನು ತೆಗೆದುಕೊಂಡು ಅವರ ಮುಂದೆ ತಿಂದನು.
44ತರುವಾಯ ಯೇಸು, “ನಾನು ನಿಮ್ಮ ಸಂಗಡ ಇದ್ದಾಗ ಇದೆಲ್ಲಾ ನಿಮಗೆ ತಿಳಿಸಲಿಲ್ಲವೇ? ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿಯೂ, ಪ್ರವಾದಿಗಳ ಗ್ರಂಥಗಳಲ್ಲಿಯೂ, ಕೀರ್ತನೆಗಳಲ್ಲಿಯೂ ಬರೆದಿರುವುದೆಲ್ಲಾ ನೆರವೇರುವುದು ಅಗತ್ಯವೆಂದು ನಿಮಗೆ ಹೇಳಲಿಲ್ಲವೇ?” ಅಂದನು. 45ಆ ಮೇಲೆ ಅವರು ಶಾಸ್ತ್ರ ವಚನಗಳನ್ನು ತಿಳಿದುಕೊಳ್ಳುವಂತೆ ಆತನು ಅವರ ಮನಸ್ಸುಗಳನ್ನು ತೆರೆದನು. 46ಅನಂತರ, “ಮೊದಲೇ ಪ್ರಕಟವಾದ ಪ್ರಕಾರ ‘ಕ್ರಿಸ್ತನು ಕಷ್ಟ ಪಟ್ಟು, ಸತ್ತು ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವನೆಂತಲೂ, 47ಅದಲ್ಲದೆ ಜನರು ಪಾಪಕ್ಷಮಾಪಣೆಗೋಸ್ಕರ ಪಶ್ಚಾತ್ತಾಪಟ್ಟು, ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಈ ಸುವಾರ್ತೆಯು ಯೆರೂಸಲೇಮ್ ಮೊದಲುಗೊಂಡು ಸಮಸ್ತ ದೇಶದವರಿಗೂ ಆತನ ಹೆಸರಿನಲ್ಲಿ ಸಾರಲ್ಪಡಬೇಕು’ ಎಂದು ಬರೆದದೆ. 48ಇವುಗಳ ವಿಷಯದಲ್ಲಿ ನೀವೇ ಸಾಕ್ಷಿ ಹೇಳುವವರಾಗಿದ್ದೀರಿ. 49ಇಗೋ ನನ್ನ ತಂದೆಯು ವಾಗ್ದಾನ ಮಾಡಿದ ಶಕ್ತಿಯನ್ನು#24:49 ಪವಿತ್ರಾತ್ಮನನ್ನು ನಿಮಗೆ ಕಳುಹಿಸಿಕೊಡುತ್ತೇನೆ. ದೇವರು ಮೇಲಣ ಲೋಕದಿಂದ ನಿಮಗೆ ಶಕ್ತಿಯನ್ನು ಕೊಡುವ ತನಕ ಈ ಪಟ್ಟಣದಲ್ಲೇ ಕಾದುಕೊಂಡಿರಿ” ಎಂದು ಹೇಳಿದನು.
ಯೇಸುವಿನ ಸ್ವರ್ಗಾರೋಹಣವು
ಮಾರ್ಕ 16:19,20; ಅ. ಕೃ. 1:9-11
50ಮತ್ತು ಯೇಸು ಅವರನ್ನು ಬೇಥಾನ್ಯದ ತನಕ ಕರೆದುಕೊಂಡು ಹೋಗಿ, ತನ್ನ ಕೈಗಳನ್ನು ಎತ್ತಿ, ಅವರನ್ನು ಆಶೀರ್ವದಿಸಿದನು. 51ಆಶೀರ್ವದಿಸುತ್ತಿರುವಾಗ ಆತನು ಅವರನ್ನು ಬಿಟ್ಟು ಪರಲೋಕಕ್ಕೆ ಒಯ್ಯಲ್ಪಟ್ಟನು. 52ಅವರು ಆತನನ್ನು ಆರಾಧಿಸಿ, ಬಹು ಸಂತೋಷದಿಂದ ಯೆರೂಸಲೇಮಿಗೆ ಹಿಂತಿರುಗಿ ಹೋಗಿ, 53ನಿರಂತರವಾಗಿ ದೇವಾಲಯದಲ್ಲಿ ದೇವರನ್ನು ಕೊಂಡಾಡುತ್ತಿದ್ದರು.

Aktualisht i përzgjedhur:

ಲೂಕ 24: IRVKan

Thekso

Ndaje

Copy

None

A doni që theksimet tuaja të jenë të ruajtura në të gjitha pajisjet që keni? Regjistrohu ose hyr