ಆದಿಕಾಂಡ 21

21
ಇಸಾಕನು ಹುಟ್ಟಿದ್ದು; ಅಬ್ರಹಾಮನು ಇಷ್ಮಾಯೇಲನನ್ನು ಕಳುಹಿಸಿಬಿಟ್ಟದ್ದು
1ಯೆಹೋವನು ತಾನು ಹೇಳಿದ್ದಂತೆಯೇ ಸಾರಳ ಮೇಲೆ ದಯವಿಟ್ಟು ಆಕೆಗೆ ಕೊಟ್ಟ ಮಾತನ್ನು ನೆರವೇರಿಸಿದನು. 2ಹೇಗಂದರೆ ಸಾರಳು ಬಸುರಾಗಿ ದೇವರು ಮೊದಲು ಸೂಚಿಸಿದ ಕಾಲದಲ್ಲಿ ಅಬ್ರಹಾಮನಿಂದ ಅವನ ಮುಪ್ಪಿನಲ್ಲೇ ಮಗನನ್ನು ಹೆತ್ತಳು. 3ಅಬ್ರಹಾಮನು ಸಾರಳಲ್ಲಿ ತನ್ನಿಂದ ಹುಟ್ಟಿದ ಮಗನಿಗೆ 4ಇಸಾಕನೆಂದು ಹೆಸರಿಟ್ಟು ಎಂಟನೆಯ ದಿನದಲ್ಲಿ ದೇವರ ಅಪ್ಪಣೆಯ ಮೇರೆಗೆ ಸುನ್ನತಿ ಮಾಡಿದನು. 5ಇಸಾಕನು ಹುಟ್ಟಿದಾಗ ಅಬ್ರಹಾಮನು ನೂರು ವರುಷದವನಾಗಿದ್ದನು. 6ಸಾರಳು - ದೇವರು ನನ್ನನ್ನು ನಗುವಂತೆ ಮಾಡಿದ್ದಾನೆ; ಕೇಳುವವರೆಲ್ಲರೂ ನನ್ನೊಡನೆ ನಗುವರು. 7ಸಾರಳೂ ಮಕ್ಕಳಿಗೆ ಮೊಲೆ ಕುಡಿಸುವಳೆಂದು ಯಾರಾದರೂ ಅಬ್ರಹಾಮನಿಗೆ ಹೇಳುತ್ತಿದ್ದರೋ? ಆದರೂ ಅವನ ಮುಪ್ಪಿನಲ್ಲೇ ಅವನಿಗೆ ಮಗನನ್ನು ಹೆತ್ತಿದ್ದೇನಷ್ಟೆ ಎಂದು ಹೇಳಿಕೊಂಡಳು. 8ಆ ಕೂಸು ಬೆಳೆದು ಮೊಲೆಬಿಟ್ಟಿತು. ಇಸಾಕನು ಮೊಲೆಬಿಟ್ಟ ದಿನದಲ್ಲಿ ಅಬ್ರಹಾಮನು ದೊಡ್ಡ ಔತಣವನ್ನು ಮಾಡಿಸಿದನು.
9ಆದರೆ ಐಗುಪ್ತ್ಯಳಾದ ಹಾಗರಳಲ್ಲಿ ಅಬ್ರಹಾಮನಿಗೆ ಹುಟ್ಟಿದ ಮಗನು ನಗುವದನ್ನು#21.9 ಅಥವಾ: ಆಡುವದನ್ನು. ಸಾರಳು ಕಂಡು ಅಬ್ರಹಾಮನಿಗೆ - 10ಈ ದಾಸಿಯನ್ನೂ ಅವಳ ಮಗನನ್ನೂ ಹೊರಗೆ ಹಾಕು; ಈ ದಾಸಿಯ ಮಗನು ನನ್ನ ಮಗನಾದ ಇಸಾಕನೊಂದಿಗೆ ಬಾಧ್ಯನಾಗಬಾರದು ಎಂದು ಹೇಳಿದಳು. 11ಮಗನ ದೆಸೆಯಿಂದ ಈ ಮಾತು ಅಬ್ರಹಾಮನಿಗೆ ಬಹುದುಃಖವನ್ನು ಹುಟ್ಟಿಸಿತು. 12ಆದರೆ ದೇವರು ಅವನಿಗೆ - ಮಗನ ಮತ್ತು ದಾಸಿಯ ದೆಸೆಯಿಂದ ನಿನಗೆ ಕರಕರೆಯಾಗಬಾರದು; ಸಾರಳು ಹೇಳಿದಂತೆಯೇ ಮಾಡು; ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು; 13ಈ ದಾಸಿಯ ಮಗನು ನಿನ್ನಿಂದ ಹುಟ್ಟಿದವನಾದ್ದರಿಂದ ಅವನಿಂದಲೂ ಜನಾಂಗವಾಗುವಂತೆ ಮಾಡುವೆನು ಎಂದು ಹೇಳಿದನು. 14ಮಾರಣೇ ದಿನ ಬೆಳಿಗ್ಗೆ ಅಬ್ರಹಾಮನು ಎದ್ದು ಹಾಗರಳಿಗೆ ಬುತ್ತಿಯನ್ನೂ ಒಂದು ತಿತ್ತಿ ತಣ್ಣೀರನ್ನೂ ಕೊಟ್ಟು ಅವಳ ಹೆಗಲಿನ ಮೇಲೆ ಇಟ್ಟು ಮಗುವನ್ನು ಒಪ್ಪಿಸಿ ಕಳುಹಿಸಿಬಿಟ್ಟನು. ಅವಳು ಹೊರಟು ಬೇರ್ಷೆಬದ ಕಾಡಿನಲ್ಲಿ ಅಲೆಯುತ್ತಿದ್ದಳು. 15ತಿತ್ತಿಯಲ್ಲಿದ್ದ ನೀರು ಮುಗಿದ ಮೇಲೆ ಅವಳು ಮಗುವನ್ನು ಒಂದು ಗಿಡದ ನೆರಳಿನಲ್ಲಿ ಹಾಕಿ 16ಮಗುವು ಸಾಯುವದನ್ನು ನೋಡಲಾರೆನು ಅಂದುಕೊಂಡು ಬಿಲ್ಲೆಸುಗೆಯಷ್ಟು ದೂರ ಹೋಗಿ ಅವನೆದುರಾಗಿ ಕೂತುಕೊಂಡು ಗಟ್ಟಿಯಾಗಿ ಅತ್ತಳು. 17ಆ ಹುಡುಗನ ಮೊರೆಯು ದೇವರಿಗೆ ಕೇಳಿಸಿತು; ದೇವದೂತನು ಆಕಾಶದಿಂದ ಹಾಗರಳನ್ನು ಕರೆದು - ಹಾಗರಳೇ, ನಿನಗೇನಾಯಿತು? ಅಂಜಬೇಡ; ಆ ಹುಡುಗನು ಬಿದ್ದಿರುವ ಸ್ಥಳದಿಂದಲೇ ಅವನ ಶಬ್ದವು ದೇವರಿಗೆ ಕೇಳಿಸಿತು; 18ನೀನೆದ್ದು ಅವನನ್ನು ಎತ್ತಿಕೊಂಡು ಕೈಬಿಡದೆ ಇರು; ಅವನಿಂದ ದೊಡ್ಡ ಜನಾಂಗವಾಗುವಂತೆ ಮಾಡುವೆನು ಎಂದು ಹೇಳಿದನು. 19ಇದಲ್ಲದೆ ದೇವರು ಅವಳ ಕಣ್ಣನ್ನು ತೆರೆದದರಿಂದ ಅವಳು ನೀರಿನ ಬಾವಿಯನ್ನು ಕಂಡು ತಿತ್ತಿಯಲ್ಲಿ ನೀರನ್ನು ತುಂಬಿಕೊಂಡು ಹುಡುಗನಿಗೆ ಕುಡಿಸಿದಳು.
20ದೇವರು ಆ ಹುಡುಗನ ಸಂಗಡ ಇದ್ದನು; ಅವನು ಬೆಳೆದು ಕಾಡಿನಲ್ಲಿ ವಾಸವಾಗಿದ್ದು ಬಿಲ್ಲುಗಾರನಾದನು. 21ಅವನು ಪಾರಾನಿನ ಅರಣ್ಯದಲ್ಲಿ ವಾಸಮಾಡಿದನು. ಅವನ ತಾಯಿ ಐಗುಪ್ತದೇಶದಿಂದ ಕನ್ನಿಕೆಯನ್ನು ತರಿಸಿ ಮದುವೆಮಾಡಿಸಿದಳು.
ಅಬ್ರಹಾಮನು ಅಬೀಮೆಲೆಕನ ಸಂಗಡ ಬೇರ್ಷೆಬದಲ್ಲಿ ಒಪ್ಪಂದ ಮಾಡಿಕೊಂಡದ್ದು
22ಆ ಕಾಲದಲ್ಲಿ ಅಬೀಮೆಲೆಕನು ತನ್ನ ಸೇನಾಪತಿಯಾದ ಫೀಕೋಲನ ಸಮೇತ ಅಬ್ರಹಾಮನಿಗೆ - ನೀನು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ದೇವರು ನಿನ್ನ ಸಂಗಡ ಇದ್ದಾನಾದ್ದರಿಂದ 23ನೀನು ಈ ಸ್ಥಳದಲ್ಲಿ ನನ್ನೊಂದಿಗೆ [ಒಡಂಬಡಿಕೆಮಾಡಿಕೊಂಡು] ನೀನು ನನಗಾಗಲಿ ನನ್ನ ಪುತ್ರಪೌತ್ರರಿಗಾಗಲಿ ಏನೂ ಅನ್ಯಾಯ ಮಾಡದೆ ನಾನು ನಿನಗೆ ಹಿತವನ್ನು ಮಾಡಿದಂತೆಯೇ ನನಗೂ ನೀನು ಇಳುಕೊಂಡಿರುವ ಈ ದೇಶಕ್ಕೂ ಹಿತವನ್ನು ಮಾಡುವದಾಗಿ ದೇವರ ಮೇಲೆ ಪ್ರಮಾಣಮಾಡಬೇಕೆಂದು ಹೇಳಿದನು. 24ಅದಕ್ಕೆ ಅಬ್ರಹಾಮನು - ಹಾಗೆಯೇ ಪ್ರಮಾಣ ಮಾಡುತ್ತೇನೆ ಅಂದನು. 25ಅಬೀಮೆಲೆಕನ ಆಳುಗಳು ಒಂದು ಬಾವಿಯನ್ನು ಬಲಾತ್ಕಾರದಿಂದ ಸ್ವಾಧೀನಪಡಿಸಿಕೊಂಡದರಿಂದ ಅಬ್ರಹಾಮನು ಅಬೀಮೆಲೆಕನ ಮೇಲೆ ತಪ್ಪು ಹೊರಿಸಲು ಅಬೀಮೆಲೆಕನು - 26ಈ ಕೆಲಸವನ್ನು ಮಾಡಿದವರು ಯಾರೋ ನಾನರಿಯೆ; ನೀನು ನನಗೆ ತಿಳಿಸಲೂ ಇಲ್ಲ, ಈಗಿನವರೆಗೆ ನಾನು ಈ ಸಂಗತಿಯನ್ನು ಕೇಳಲೂ ಇಲ್ಲ ಅಂದನು. 27ಆಗ ಅಬ್ರಹಾಮನು ಅಬೀಮೆಲೆಕನಿಗೆ ಕುರಿದನಗಳನ್ನು ದಾನಮಾಡಿದನು. ಹೀಗೆ ಅವರಿಬ್ಬರೂ ಒಡಂಬಡಿಕೆಮಾಡಿಕೊಂಡರು. 28ತರುವಾಯ ಅಬ್ರಹಾಮನು ಹಿಂಡಿನ ಏಳು ಕುರಿಗಳನ್ನು ಪ್ರತ್ಯೇಕವಾಗಿ ಇರಿಸಲು ಅಬೀಮೆಲೆಕನು ಅವನನ್ನು 29ನೀನು ಪ್ರತ್ಯೇಕವಾಗಿ ಇರಿಸಿರುವ ಈ ಏಳು ಕುರಿಗಳು ಯಾತಕ್ಕೆ ಎಂದು ಕೇಳಿದನು. ಅದಕ್ಕೆ ಅಬ್ರಹಾಮನು 30ಈ ಬಾವಿಯನ್ನು ತೋಡಿಸಿದವನು ನಾನೇ ಎಂಬದಕ್ಕೆ ಸಾಕ್ಷಿಯಾಗಿ ನೀನು ಈ ಏಳು ಕುರಿಗಳನ್ನು ನನ್ನ ಕೈಯಿಂದ ತೆಗೆದುಕೊಳ್ಳಬೇಕು ಅಂದನು. 31ಅವರಿಬ್ಬರು ಅಲ್ಲಿ ಪ್ರಮಾಣಮಾಡಿದ್ದರಿಂದ ಆ ಸ್ಥಳಕ್ಕೆ ಬೇರ್ಷೆಬ#21.31 ಬೇರ್ಷೆಬ ಅಂದರೆ ಪ್ರಮಾಣದ ಬಾವಿ; ಆದಿ. 26.33. ಎಂದು ಹೆಸರಾಯಿತು. 32ಬೇರ್ಷೆಬದಲ್ಲಿ ಅವರು ಒಡಂಬಡಿಕೆಯನ್ನು ಮಾಡಿಕೊಂಡರು. ತರುವಾಯ ಅಬೀಮೆಲೆಕನೂ ಅವನ ಸೇನಾಪತಿಯಾದ ಫೀಕೋಲನೂ ಫಿಲಿಷ್ಟಿಯರ ದೇಶಕ್ಕೆ ತಿರಿಗಿ ಹೊರಟು ಹೋದರು.
33ಅಬ್ರಹಾಮನು ಬೇರ್ಷೆಬದಲ್ಲಿ ಪಿಚುಲವೃಕ್ಷವನ್ನು ನೆಟ್ಟು ನಿತ್ಯದೇವರಾದ ಯೆಹೋವನ ಹೆಸರನ್ನು ಹೇಳಿಕೊಂಡು ಆರಾಧಿಸಿದನು.
34ಅಬ್ರಹಾಮನು ಫಿಲಿಷ್ಟಿಯರ ದೇಶದಲ್ಲಿ ಬಹುದಿವಸ ಇಳುಕೊಂಡಿದ್ದನು.

Märk

Dela

Kopiera

None

Vill du ha dina höjdpunkter sparade på alla dina enheter? Registrera dig eller logga in