ಆದಿಕಾಂಡ 29

29
ಯಾಕೋಬನು ಹದಿನಾಲ್ಕು ವರುಷ ಲಾಬಾನನ ಸೇವೆಮಾಡಿ ಅವನ ಇಬ್ಬರು ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಂಡದ್ದು
1ಆಮೇಲೆ ಯಾಕೋಬನು ದಾರಿ ಹಿಡಿದು ಮೂಡಲ ದೇಶದವರ ಸೀಮೆಗೆ ಬಂದನು. 2ಅಲ್ಲಿಗೆ ಬಂದಾಗ ಅಡವಿಯೊಳಗೆ ಬಾವಿಯನ್ನು ಕಂಡನು. ಬಾವಿಯ ಹತ್ತರ ಮೂರು ಕುರಿಹಿಂಡುಗಳು ಮಲಗಿದ್ದವು. ಕುರಿಗಳನ್ನು ನೀರು ಕುಡಿಸುವದಕ್ಕಾಗಿ ಆ ಬಾವಿಗೆ ಹೊಡಕೊಂಡು ಹೋಗುವ ಪದ್ಧತಿಯಿತ್ತು. ಬಾವಿಯ ಮೇಲೆ ಮುಚ್ಚಿದ್ದ ಕಲ್ಲು ದೊಡ್ಡದಾಗಿತ್ತು. 3ಹಿಂಡುಗಳೆಲ್ಲಾ ಅಲ್ಲಿ ಕೂಡಿದಾಗ ಕಾಯುವವರು ಬಾವಿಯ ಮೇಲೆ ಮುಚ್ಚಿದ್ದ ಕಲ್ಲನ್ನು ಸರಿಸಿ ಕುರಿಗಳಿಗೆ ನೀರು ಕುಡಿಸಿ ತಿರಿಗಿ ಕಲ್ಲನ್ನು ಬಾವಿಯ ಮೇಲೆ ಮುಚ್ಚುವರು. 4ಯಾಕೋಬನು ಅವರಿಗೆ - ಅಣ್ಣಂದಿರಾ, ನೀವು ಯಾವ ಊರಿನವರು ಎಂದು ಕೇಳಲು - ನಾವು ಖಾರಾನ್ ಊರಿನವರು ಅಂದರು. 5ಅವನು ಅವರನ್ನು - ನಾಹೋರನ ಮಗನಾದ ಲಾಬಾನನನ್ನು ಬಲ್ಲಿರಾ ಎಂದು ಕೇಳಿದ್ದಕ್ಕೆ - ಬಲ್ಲೆವು ಅಂದರು. 6ಅವನಿಗೆ ಕ್ಷೇಮವೋ ಎಂದು ಕೇಳಲು ಅವರು - ಕ್ಷೇಮ; ಅಗೋ, ಅವನ ಮಗಳಾದ ರಾಹೇಲಳು ಕುರಿಗಳ ಸಂಗಡ ಬರುತ್ತಾಳೆ ಅಂದರು. 7ಯಾಕೋಬನು - ಇನ್ನೂ ಬಹಳ ಹೊತ್ತು ಇದೆ; ಕುರಿಗಳನ್ನು ಕೂಡಿಸುವ ಸಮಯವಾಗಿಲ್ಲ; ನೀರು ಕುಡಿಸಿ ಅವುಗಳನ್ನು ಮೇಯಿಸಿರಿ ಅನ್ನಲು 8ಅವರು - ಹಿಂಡುಗಳೆಲ್ಲಾ ಕೂಡಿ ಬಂದಾಗ ಕಾಯುವವರು ಬಾವಿಯ ಮೇಲೆ ಮುಚ್ಚಿರುವ ಕಲ್ಲನ್ನು ತೆಗೆಯುವ ತನಕ ಕುಡಿಸಕೂಡದು; ಅನಂತರ ಕುರಿಗಳಿಗೆ ನೀರು ಕುಡಿಸುತ್ತೇವೆ ಅಂದರು. 9ಅವನು ಅವರೊಂದಿಗೆ ಮಾತಾಡುತ್ತಿರುವಾಗಲೇ ರಾಹೇಲಳು ತನ್ನ ತಂದೆಯ ಕುರಿಗಳನ್ನು ಹೊಡಕೊಂಡು ಬಂದಳು; ಆಕೆಯೇ ಅವುಗಳನ್ನು ಮೇಯಿಸುವವಳಾಗಿದ್ದಳು. 10ಯಾಕೋಬನು ತನ್ನ ಸೋದರಮಾವನಾದ ಲಾಬಾನನ ಮಗಳಾಗಿರುವ ರಾಹೇಲಳನ್ನೂ ತನ್ನ ಸೋದರಮಾವನ ಕುರಿಗಳನ್ನೂ ಕಂಡಾಗ ಬಾವಿಯ ಹತ್ತರಕ್ಕೆ ಹೋಗಿ ಅದರ ಮೇಲೆ ಮುಚ್ಚಿದ್ದ ಕಲ್ಲನ್ನು ಸರಿಸಿ ತನ್ನ ಸೋದರಮಾವನ ಕುರಿಗಳಿಗೆ ನೀರು ಕುಡಿಸಿದನು. 11ಅವನು ರಾಹೇಲಳಿಗೆ ಮುದ್ದಿಟ್ಟು ಸ್ವರವೆತ್ತಿ ಕಣ್ಣೀರುಸುರಿಸಿ ಆಕೆಗೆ - 12ನಾನು ನಿನ್ನ ತಂದೆಗೆ ಸೋದರಳಿಯನೂ ರೆಬೆಕ್ಕಳ ಮಗನೂ ಆಗಿದ್ದೇನೆ ಎಂದು ಹೇಳಿದಾಗ ರಾಹೇಲಳು ಓಡಿಹೋಗಿ ಆ ಮಾತನ್ನು ತನ್ನ ತಂದೆಗೆ ತಿಳಿಸಿದಳು. 13ಲಾಬಾನನು ತನ್ನ ಸೋದರಳಿಯನು ಬಂದ ವರ್ತಮಾನವನ್ನು ಕೇಳಿದಾಗ ಅವನನ್ನು ಎದುರುಗೊಳ್ಳುವದಕ್ಕೆ ಓಡಿಬಂದು ಅಪ್ಪಿಕೊಂಡು ಮುದ್ದಿಟ್ಟು ತನ್ನ ಮನೆಗೆ ಕರಕೊಂಡು ಬಂದನು. ಯಾಕೋಬನು ಲಾಬಾನನಿಗೆ ಎಲ್ಲಾ ಸಂಗತಿಗಳನ್ನು ತಿಳಿಸಲು 14ಲಾಬಾನನು ಅವನಿಗೆ - ನಿಜವಾಗಿ ನೀನು ನನ್ನ ರಕ್ತ ಸಂಬಂಧಿಯಾಗಿದ್ದೀ ಎಂದು ಹೇಳಿದನು. ಅವನು ಒಂದು ತಿಂಗಳಿನವರೆಗೂ ಲಾಬಾನನ ಬಳಿಯಲ್ಲಿ ವಾಸಮಾಡಿದನು.
15ಆಮೇಲೆ ಲಾಬಾನನು ಅವನನ್ನು - ನೀನು ನನ್ನನ್ನು ಸಂಬಂಧಿಯೆಂದು ಸುಮ್ಮನೆ ಸೇವಿಸುವದು ನ್ಯಾಯವೋ? ನಿನ್ನ ಕೆಲಸಕ್ಕಾಗಿ ನಾನು ನಿನಗೆ ಏನು ಕೊಡಲಿ ಎಂದು ಕೇಳಿದನು. 16ಲಾಬಾನನಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು; ದೊಡ್ಡವಳ ಹೆಸರು ಲೇಯಾ, ಚಿಕ್ಕವಳ ಹೆಸರು ರಾಹೇಲ್. 17ಲೇಯಾ ಎಂಬಾಕೆಯ ಕಣ್ಣುಗಳು ಕಾಂತಿಹೀನವಾಗಿದ್ದವು; ರಾಹೇಲಳು ರೂಪವತಿಯೂ ಲಾವಣ್ಯವತಿಯೂ ಆಗಿದ್ದಳು. 18ಯಾಕೋಬನು ರಾಹೇಲಳನ್ನು ಮೆಚ್ಚಿಕೊಂಡು - ನಿನ್ನ ಕಿರೀ ಮಗಳಾದ ರಾಹೇಲಳಿಗೋಸ್ಕರ ನಿನ್ನಲ್ಲಿ ಏಳು ವರುಷ ಸೇವೆ ಮಾಡುವೆನು ಎಂದು ಹೇಳಲು 19ಲಾಬಾನನು - ಆಕೆಯನ್ನು ಬೇರೊಬ್ಬನಿಗೆ ಕೊಡುವದಕ್ಕಿಂತ ನಿನಗೆ ಕೊಡುವದೇ ಉಚಿತ; ನನ್ನ ಬಳಿಯಲ್ಲಿರು ಅಂದನು. 20ಆದದರಿಂದ ಯಾಕೋಬನು ರಾಹೇಲಳಿಗೋಸ್ಕರ ಏಳು ವರುಷ ಸೇವೆ ಮಾಡಿದನು; ಆದರೂ ಆಕೆಯಲ್ಲಿ ಬಹಳ ಪ್ರೀತಿಯನ್ನಿಟ್ಟಿದ್ದದರಿಂದ ಅದು ಅವನಿಗೆ ಸ್ವಲ್ಪ ದಿವಸದಂತೆ ಕಾಣಿಸಿತು.
21ತರುವಾಯ ಯಾಕೋಬನು ಲಾಬಾನನಿಗೆ - ಗೊತ್ತುಮಾಡಿದ ಕಾಲವು ಮುಗಿದು ಹೋಯಿತು; ಆಕೆಯನ್ನು ನನ್ನ ಹೆಂಡತಿಯಾಗುವಂತೆ ನನ್ನ ಸ್ವಾಧೀನಕ್ಕೆ ಕೊಡು ಎಂದು ಹೇಳಿದನು. 22ಆಗ ಲಾಬಾನನು ಆ ಸ್ಥಳದವರೆಲ್ಲರನ್ನು ಕರಸಿ ಔತಣವನ್ನು ಮಾಡಿಸಿದನು. 23ಸಾಯಂಕಾಲದಲ್ಲಿ ತನ್ನ ಹಿರೀ ಮಗಳಾದ ಲೇಯಳನ್ನೇ ಯಾಕೋಬನಿಗೆ ಒಪ್ಪಿಸಿಕೊಟ್ಟನು. ಅವನು ಆಕೆಯನ್ನು ಕೂಡಿದನು. 24(ಲಾಬಾನನು ತನ್ನ ಮಗಳಾದ ಲೇಯಳಿಗೆ ಜಿಲ್ಪಾ ಎಂಬ ಒಬ್ಬ ದಾಸಿಯನ್ನು ಕೊಟ್ಟನು.) 25ಬೆಳಿಗ್ಗೆ ಆಕೆ ಲೇಯಳೆಂದು ಯಾಕೋಬನಿಗೆ ತಿಳಿದು ಬರಲು ಅವನು 26ಲಾಬಾನನಿಗೆ - ಇದೇನು ನೀನು ನನಗೆ ಮಾಡಿದ್ದು? ರಾಹೇಲಳಿಗೋಸ್ಕರ ನಿನಗೆ ಸೇವೆಮಾಡಿದೆನಲ್ಲಾ; ಯಾಕೆ ನನಗೆ ಮೋಸಮಾಡಿದಿ ಎಂದು ಕೇಳಿದ್ದಕ್ಕೆ ಲಾಬಾನನು - ಹಿರೀಮಗಳಿಗಿಂತ ಮೊದಲು ಕಿರೀ ಮಗಳನ್ನು ಮದುವೆಮಾಡಿಸಿಕೊಡುವದು ನಮ್ಮ ದೇಶದ ಪದ್ಧತಿಯಲ್ಲ. 27ಆಕೆಯ [ಮದುವೆಯ] ವಾರವನ್ನು ಪೂರೈಸು; ಅನಂತರ ಈ ನನ್ನ ಕಿರೀ ಮಗಳನ್ನೂ ನಿನಗೆ ಕೊಡುತ್ತೇನೆ; ಈಕೆಗೋಸ್ಕರ ನೀನು ಇನ್ನೂ ಏಳು ವರುಷ ಸೇವೆಮಾಡು ಅಂದನು. 28ಯಾಕೋಬನು ಅದಕ್ಕೆ ಒಪ್ಪಿ ಹಿರಿಯವಳ [ಮದುವೆಯ] ವಾರವನ್ನು ತೀರಿಸಿದನು. ಆಗ ಲಾಬಾನನು ತನ್ನ ಮಗಳಾದ ರಾಹೇಲಳನ್ನು 29ಯಾಕೋಬನಿಗೆ ಹೆಂಡತಿಯಾಗಿ ಕೊಟ್ಟು ಆಕೆಗೆ ಬಿಲ್ಹಾ ಎಂಬ ಒಬ್ಬ ದಾಸಿಯನ್ನು ಕೊಟ್ಟನು. 30ಯಾಕೋಬನು ರಾಹೇಲಳನ್ನೂ ಕೂಡಿ ಆಕೆಯನ್ನು ಲೇಯಳಿಗಿಂತ ಹೆಚ್ಚಾಗಿ ಪ್ರೀತಿಸಿದನು. ಆಕೆಗೋಸ್ಕರ ಲಾಬಾನನ ಬಳಿಯಲ್ಲಿ ಇನ್ನೂ ಏಳುವರುಷ ಸೇವೆ ಮಾಡಿದನು.
ಯಾಕೋಬನಿಗೆ ಮಕ್ಕಳು ಹುಟ್ಟಿದ್ದು
31ಲೇಯಳು ಯಾಕೋಬನಿಗೆ ಅಲಕ್ಷ್ಯವಾದಳೆಂದು ಯೆಹೋವನು ನೋಡಿ ಆಕೆಯನ್ನು ಬಸುರಾಗುವಂತೆ ಮಾಡಿದನು; ಆದರೆ ರಾಹೇಲಳು ಬಂಜೆಯಾಗಿದ್ದಳು. 32ಲೇಯಳು ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತು - ಯೆಹೋವನು ನನ್ನ ವ್ಯಥೆಯನ್ನು ನೋಡಿದ್ದಾನೆ; ಇನ್ನು ಮುಂದೆ ನನ್ನ ಗಂಡನು ನನ್ನನ್ನು ಪ್ರೀತಿಸುವನು ಎಂದು ಹೇಳಿ ಅದಕ್ಕೆ ರೂಬೇನೆಂದು#29.32 ವ್ಯಥೆ ನೋಡಿದನು ಎಂದರ್ಥವಿದ್ದ ಹಾಗೆ. ಹೆಸರಿಟ್ಟಳು. 33ಆಕೆ ತಿರಿಗಿ ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತು - ನಾನು ಗಂಡನ ಅಲಕ್ಷ್ಯಕ್ಕೆ ಗುರಿಯಾದೆನೆಂದು ಯೆಹೋವನು ತಿಳಿದಿದ್ದರಿಂದ ಈ ಮಗುವನ್ನೂ ದಯಪಾಲಿಸಿದನೆಂದು ಹೇಳಿ ಅದಕ್ಕೆ ಸಿಮೆಯೋನ್#29.33 (ದೇವರು) ಕೇಳಿ ತಿಳುಕೊಂಡನು ಎಂದರ್ಥವಿದ್ದ ಹಾಗೆ. ಎಂದು ಹೆಸರಿಟ್ಟಳು. 34ಆಕೆಯು ತಿರಿಗಿ ಗರ್ಭಧರಿಸಿ ಗಂಡುಮಗುವನ್ನು ಹೆತ್ತು - ಈಗಲಾದರೂ ನನ್ನ ಗಂಡನೂ ನಾನೂ ಒಂದಾಗುವೆವು; ಅವನಿಗೆ ಮೂರು ಮಂದಿ ಗಂಡು ಮಕ್ಕಳನ್ನು ಹೆತ್ತಿದ್ದೇನಲ್ಲಾ ಎಂದು ಹೇಳಿ ಅದಕ್ಕೆ ಲೇವಿಯೆಂದು#29.34 ಒಂದಾಗುವೆವು ಎಂದರ್ಥವಿದ್ದ ಹಾಗೆ. ಹೆಸರಿಟ್ಟಳು. 35ಆಕೆಯು ತಿರಿಗಿ ಗರ್ಭಿಣಿಯಾಗಿ ಗಂಡುಮಗುವನ್ನು ಹೆತ್ತು - ಈಗ ಯೆಹೋವನಿಗೆ ಉಪಕಾರಸ್ತುತಿ ಮಾಡುವೆನು ಎಂದು ಹೇಳಿ ಅದಕ್ಕೆ ಯೆಹೂದಾ#29.35 ಸ್ತೋತ್ರ ಎಂದರ್ಥವಿದ್ದ ಹಾಗೆ; ಮತ್ತಾ. 1.2; ಆದಿ. 49.8. ಎಂದು ಹೆಸರಿಟ್ಟಳು. ಆಮೇಲೆ ಆಕೆಗೆ ಗರ್ಭಧಾರಣೆಯಾಗುವದು ತಡವಾಯಿತು.

Märk

Dela

Kopiera

None

Vill du ha dina höjdpunkter sparade på alla dina enheter? Registrera dig eller logga in