Biểu trưng YouVersion
Biểu tượng Tìm kiếm

ಯೊವಾನ್ನ 2

2
ಮೊದಲನೆಯ ಸೂಚಕಕಾರ್ಯ
1ಮಾರನೆಯ ದಿನ ಗಲಿಲೇಯದ ಕಾನಾ ಎಂಬ ಊರಿನಲ್ಲಿ ಒಂದು ಮದುವೆ ನಡೆಯಿತು. 2ಯೇಸು ಸ್ವಾಮಿಯ ತಾಯಿ ಅಲ್ಲಿಗೆ ಬಂದಿದ್ದರು. ಯೇಸುವಿಗೂ ಅವರ ಶಿಷ್ಯರಿಗೂ ಆ ಮದುವೆಗೆ ಆಮಂತ್ರಣವಿತ್ತು. 3ಆ ಸಂದರ್ಭದಲ್ಲಿ ದ್ರಾಕ್ಷಾರಸ ಸಾಲದೆಹೋಯಿತು. ಆಗ ಯೇಸುವಿನ ತಾಯಿ, “ಅವರಲ್ಲಿ ದ್ರಾಕ್ಷಾರಸ ಮುಗಿದುಹೋಗಿದೆ,” ಎಂದು ಯೇಸುವಿಗೆ ಹೇಳಿದರು. 4ಅದಕ್ಕೆ ಯೇಸು, “ಅಮ್ಮಾ, ಇದನ್ನು ನನಗೇಕೆ ಹೇಳುತ್ತೀ? ನನ್ನ ಗಳಿಗೆ ಇನ್ನೂ ಬಂದಿಲ್ಲ,” ಎಂದು ಉತ್ತರಕೊಟ್ಟರು. 5ತಾಯಿ ಸೇವಕರಿಗೆ, “ಆತ ಹೇಳಿದಂತೆ ಮಾಡಿ,” ಎಂದು ತಿಳಿಸಿದರು.
6ಯೆಹೂದ್ಯರ ಶುದ್ಧಾಚಾರ ಪದ್ಧತಿಯಂತೆ ಆರು ಕಲ್ಲುಬಾನೆಗಳನ್ನು ಅಲ್ಲಿ ಇಟ್ಟಿದ್ದರು. ಅವು ಒಂದೊಂದೂ ಎರಡು ಮೂರು ಕೊಡ ನೀರು ಹಿಡಿಯುವಷ್ಟು ದೊಡ್ಡದಾಗಿದ್ದವು. 7ಯೇಸು ಸ್ವಾಮಿ ಸೇವಕರಿಗೆ, “ಆ ಬಾನೆಗಳಲ್ಲಿ ನೀರು ತುಂಬಿರಿ,” ಎಂದು ಹೇಳಿದರು. ಅವರು ಕಂಠದವರೆಗೆ ತುಂಬಿದರು. 8ಯೇಸು, “ಈಗ ತೋಡಿಕೊಂಡು ಹೋಗಿ ಔತಣದ ಮೇಲ್ವಿಚಾರಕನಿಗೆ ಕೊಡಿ,” ಎಂದು ಹೇಳಲು ಅವರು ಹಾಗೆಯೇ ಮಾಡಿದರು. 9ಮೇಲ್ವಿಚಾರಕನು ದ್ರಾಕ್ಷಾರಸವಾಗಿ ಮಾರ್ಪಟ್ಟಿದ್ದ ನೀರಿನ ರುಚಿ ನೋಡಿದನು. ಅದು ಎಲ್ಲಿಂದ ಬಂದಿತೆಂಬುದು ಅವನಿಗೆ ತಿಳಿದಿರಲಿಲ್ಲ. ನೀರನ್ನು ತೋಡಿಕೊಂಡು ಬಂದ ಸೇವಕರಿಗೆ ಮಾತ್ರ ತಿಳಿದಿತ್ತು. 10ಆದುದರಿಂದ ಅವನು ಮದುಮಗನನ್ನು ಕರೆದು, “ಜನರೆಲ್ಲರೂ ಉತ್ತಮವಾದ ದ್ರಾಕ್ಷಾರಸವನ್ನು ಮೊದಲು ಹಂಚುತ್ತಾರೆ; ಅತಿಥಿಗಳು ಯಥೇಚ್ಛವಾಗಿ ಕುಡಿದಾದ ಮೇಲೆ ಸಾಧಾರಣ ದ್ರಾಕ್ಷಾರಸವನ್ನು ಕೊಡುತ್ತಾರೆ. ನೀನಾದರೋ ಉತ್ತಮವಾದುದನ್ನು ಈವರೆಗೂ ಇಟ್ಟಿದ್ದೀಯಲ್ಲಾ!” ಎಂದು ಹೇಳಿದನು.
11ಯೇಸು ಮಾಡಿದ ಮೊದಲನೆಯ ಸೂಚಕಕಾರ್ಯ ಇದು. ಇದನ್ನು ಗಲಿಲೇಯ ನಾಡಿನ ಕಾನಾ ಊರಿನಲ್ಲಿ ಮಾಡಿ ತಮ್ಮ ಮಹಿಮೆಯನ್ನು ತೋರ್ಪಡಿಸಿದರು. ಅವರ ಶಿಷ್ಯರಿಗೂ ಅವರಲ್ಲಿ ವಿಶ್ವಾಸ ಮೂಡಿತು.
12ಇದಾದ ಮೇಲೆ ಯೇಸು, ಅವರ ತಾಯಿ, ಸಹೋದರರು ಮತ್ತು ಶಿಷ್ಯರು ಕಪೆರ್ನವುಮಿಗೆ ಹೋಗಿ ಅಲ್ಲಿ ಕೆಲವು ದಿನ ತಂಗಿದ್ದರು.
ವ್ಯಾಪಾರಿಗಳ ಉಚ್ಛಾಟನೆ
(ಮತ್ತಾ. 21:12-13; ಮಾರ್ಕ. 11:15-17; ಲೂಕ. 19:45-46)
13ಯೆಹೂದ್ಯರ ಪಾಸ್ಕ ಹಬ್ಬವು ಹತ್ತಿರವಾಗಿದ್ದುದರಿಂದ ಯೇಸು ಸ್ವಾಮಿ ಜೆರುಸಲೇಮಿಗೆ ತೆರಳಿದರು. 14ಅಲ್ಲಿಯ ಮಹಾದೇವಾಲಯದಲ್ಲಿ ದನ, ಕುರಿ ಮತ್ತು ಪಾರಿವಾಳಗಳನ್ನು ಮಾರುವವರು ಮತ್ತು ನಾಣ್ಯ ವಿನಿಮಯ ಮಾಡುವವರು ವ್ಯಾಪಾರಕ್ಕೆ ಕುಳಿತಿದ್ದರು. 15ಅದನ್ನು ಕಂಡ ಯೇಸು, ಹಗ್ಗವನ್ನು ಚಾವಟಿಯಂತೆ ಹೆಣೆದು ಅದರಿಂದ ಅವರನ್ನೆಲ್ಲಾ ದೇವಾಲಯದಿಂದ ಹೊರಗಟ್ಟಿದರು. ದನಕುರಿಗಳನ್ನು ಓಡಿಸಿದರು. ನಾಣ್ಯ ವಿನಿಮಯ ಮಾಡುವವರ ಮೇಜುಗಳನ್ನು ಕೆಡವಿ, ಚಿಲ್ಲರೆ ಹಣವನ್ನು ಚೆಲ್ಲಿದರು. 16ಪಾರಿವಾಳಗಳನ್ನು ಮಾರುತ್ತಿದ್ದವರಿಗೆ, “ಇವನ್ನು ಇಲ್ಲಿಂದ ತೆಗೆದುಕೊಂಡು ಹೊರಡಿ. ನನ್ನ ಪಿತನ ಆಲಯವನ್ನು ಸಂತೆಯನ್ನಾಗಿ ಮಾಡಬೇಡಿ,” ಎಂದು ಹೇಳಿದರು. 17‘ನಿನ್ನ ಆಲಯದ ಮೇಲಿನ ಅಭಿಮಾನವು ನನ್ನನ್ನು ಬೆಂಕಿಯಂತೆ ದಹಿಸುತ್ತದೆ,’ ಎಂದು ಪವಿತ್ರಗ್ರಂಥದಲ್ಲೇ ಬರೆದಿರುವ ವಾಕ್ಯವು ಶಿಷ್ಯರಿಗೆ ಆಗ ನೆನಪಾಯಿತು.
18ಯೆಹೂದ್ಯರು, “ಇಷ್ಟೆಲ್ಲಾ ಮಾಡಲು ನಿನಗೆ ಅಧಿಕಾರವಿದೆ ಎಂದು ರುಜುವಾತು ಪಡಿಸುವುದಕ್ಕೆ ಯಾವ ಪವಾಡವನ್ನು ಮಾಡಿತೋರಿಸಬಲ್ಲೆ?” ಎಂದು ಯೇಸುವನ್ನು ಪ್ರಶ್ನಿಸಿದರು. 19ಅದಕ್ಕೆ ಯೇಸು, ‘ಈ ದೇವಾಲಯವನ್ನು ಕೆಡವಿಬಿಡಿ, ಮೂರು ದಿನದಲ್ಲಿ ಅದನ್ನು ಪುನಃ ಎಬ್ಬಿಸುವೆನು,” ಎಂದು ಉತ್ತರಕೊಟ್ಟರು. 20ಚಕಿತರಾದ ಯೆಹೂದ್ಯರು, “ಈ ದೇವಾಲಯವನ್ನು ಕಟ್ಟಲು ನಲವತ್ತಾರು ವರ್ಷಗಳು ಹಿಡಿದಿವೆ. ನೀನು ಮೂರು ದಿನಗಳಲ್ಲೇ ಅದನ್ನು ಎಬ್ಬಿಸಬಲ್ಲೆಯಾ?” ಎಂದು ಕೇಳಿದರು. 21ಯೇಸು ಹೇಳಿದ್ದು ತಮ್ಮ ದೇಹವೆಂಬ ದೇಗುಲವನ್ನು ಕುರಿತು. 22ಅವರು ಸತ್ತು ಪುನರುತ್ಥಾನ ಹೊಂದಿದ ಬಳಿಕ ಶಿಷ್ಯರು ಅವರ ಈ ಮಾತುಗಳನ್ನು ಸ್ಮರಿಸಿಕೊಂಡರು. ಪವಿತ್ರಗ್ರಂಥದಲ್ಲೂ ಯೇಸುವಿನ ಮಾತಿನಲ್ಲೂ ಅವರಿಗೆ ಆಗ ವಿಶ್ವಾಸ ಹುಟ್ಟಿತು.
ಅಂತರಂಗದ ಅರಿಕೆ
23ಯೇಸು ಸ್ವಾಮಿ ಪಾಸ್ಕಹಬ್ಬಕ್ಕಾಗಿ ಜೆರುಸಲೇಮಿನಲ್ಲಿದ್ದಾಗ ಮಾಡಿದ ಸೂಚಕಕಾರ್ಯಗಳನ್ನು ನೋಡಿ ಅನೇಕರು ಅವರನ್ನು ನಂಬಿದರು. 24ಆದರೆ ಯೇಸು ಎಲ್ಲರನ್ನು ಚೆನ್ನಾಗಿ ಬಲ್ಲವರಾದ್ದರಿಂದ ಅವರ ಈ ನಂಬಿಕೆಗೆ ಮಾರುಹೋಗಲಿಲ್ಲ. 25ಜನರನ್ನು ಕುರಿತು ಯಾರೂ ಅವರಿಗೆ ತಿಳಿಸಬೇಕಾದ ಪ್ರಮೇಯವಿರಲಿಲ್ಲ. ಮಾನವನ ಅಂತರಂಗ ಅವರಿಗೆ ಬಹಿರಂಗವಾಗಿತ್ತು.

Tô màu

Chia sẻ

Sao chép

None

Bạn muốn lưu những tô màu trên tất cả các thiết bị của mình? Đăng ký hoặc đăng nhập