YouVersion 標識
搜索圖示

ಆದಿಕಾಂಡ 16

16
ಇಷ್ಮಾಯೇಲನ ಜನನ
1ಅಬ್ರಾಮನ ಹೆಂಡತಿ ಸಾರಯಳಿಗೆ ಮಕ್ಕಳಿರಲಿಲ್ಲ. ಆಕೆಗೆ ಈಜಿಪ್ಟ್ ದೇಶದವಳಾದ ಹಾಗರಳೆಂಬ ಒಬ್ಬ ದಾಸಿ ಇದ್ದಳು. 2ಎಂದೇ ಸಾರಯಳು ಅಬ್ರಾಮನಿಗೆ, “ನೋಡಿ, ನನಗೇನೋ ಸರ್ವೇಶ್ವರ ಸ್ವಾಮಿ ಮಕ್ಕಳನ್ನು ದಯಪಾಲಿಸಲಿಲ್ಲ; ನೀವು ನನ್ನ ದಾಸಿಯನ್ನು ಸೇರಬೇಕು. ಬಹುಶಃ ಅವಳ ಮೂಲಕವಾದರೂ ನನಗೆ ಮಕ್ಕಳಾದೀತು,” ಎಂದು ಹೇಳಿದಳು. ಅಬ್ರಾಮನು ಆಕೆಯ ಮಾತಿಗೆ ಸಮ್ಮತಿಸಿದನು. 3ಹೀಗೆ ಹತ್ತು ವರ್ಷ ಕಾನಾನ್ ನಾಡಿನಲ್ಲಿ ವಾಸಮಾಡಿದ ಮೇಲೆ ಅಬ್ರಾಮನ ಹೆಂಡತಿ ಸಾರಯಳು ಈಜಿಪ್ಟಿನ ಹಾಗರಳೆಂಬ ದಾಸಿಯನ್ನು ತನ್ನ ಗಂಡನಿಗೆ ಉಪಪತ್ನಿಯಾಗಿ ಒಪ್ಪಿಸಿದಳು. 4ಅಬ್ರಾಮನು ಹಾಗರಳನ್ನು ಕೂಡಿದನು. ಅವಳು ಗರ್ಭಿಣಿಯಾದಳು. ತಾನು ಗರ್ಭಿಣಿಯಾದೆನೆಂದು ತಿಳಿದ ಅವಳು, ತನ್ನ ಯಜಮಾನಿಯನ್ನೇ ತಾತ್ಸಾರ ಮಾಡತೊಡಗಿದಳು.
5ಆಗ ಸಾರಯಳು ಅಬ್ರಾಮನಿಗೆ, “ನನಗೆ ಅನ್ಯಾಯವಾಗುತ್ತಿದೆ; ಇದಕ್ಕೆ ನೀವೇ ಹೊಣೆ, ನನ್ನ ದಾಸಿಯನ್ನು ನಿಮಗೆ ಉಪಪತ್ನಿಯಾಗಿ ಕೊಟ್ಟೆನಷ್ಟೆ; ಇವಳೋ, ತಾನು ಗರ್ಭಿಣಿಯಾದೆನೆಂದು ತಿಳಿದದ್ದೆ, ನನ್ನನ್ನು ತಾತ್ಸಾರ ಮಾಡುತ್ತಿದ್ದಾಳೆ; ಈಗ ಸರ್ವೇಶ್ವರ ಸ್ವಾಮಿಯೇ ನಿಮಗೂ ನನಗೂ ನ್ಯಾಯ ತೀರಿಸಬೇಕು,” ಎಂದು ದೂರಿದಳು.
6ಅದಕ್ಕೆ ಅಬ್ರಾಮನು, “ನಿನ್ನ ದಾಸಿ ನಿನ್ನ ಕೈಯಲ್ಲೇ ಇದ್ದಾಳೆ. ನಿನಗಿಷ್ಟ ಬಂದಂತೆ ಮಾಡು,” ಎಂದುಬಿಟ್ಟನು. ಬಳಿಕ ಸಾರಯಳು ಕೊಡುತ್ತಿದ್ದ ಕಿರುಕುಳವನ್ನು ತಾಳಲಾರದೆ ಹಾಗರಳು ಓಡಿಹೋದಳು.
7ಮರಳುಗಾಡಿನಲ್ಲಿ ಶೂರಿಗೆ ಹೋಗುವ ಹಾದಿಪಕ್ಕದಲ್ಲಿದ್ದ ಒಂದು ಒರತೆಯ ಬಳಿ ಸ್ವಾಮಿಯ ದೂತನು ಅವಳನ್ನು ಕಂಡನು. 8“ಸಾರಯಳ ದಾಸಿಯಾದ ಹಾಗರಳೇ, ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿರುವೆ?” ಎಂದು ವಿಚಾರಿಸಿದನು. “ನನ್ನ ಯಜಮಾನಿ ಸಾರಯಳ ಬಳಿಯಿಂದ ಓಡಿಹೋಗುತ್ತಿದ್ದೇನೆ,” ಎಂದು ಉತ್ತರಕೊಟ್ಟಳು. 9ಅದಕ್ಕೆ ಆ ದೂತನು, “ನಿನ್ನ ಯಜಮಾನಿಯ ಬಳಿಗೆ ಹಿಂತಿರುಗು, ಅವಳಿಗೆ ತಗ್ಗಿ ನಡೆದುಕೊ,” ಎಂದು ತಿಳಿಸಿದನು. 10ಅದೂ ಅಲ್ಲದೆ ಸ್ವಾಮಿಯ ದೂತನು, “ನಿನ್ನ ಸಂತಾನವನ್ನು ಲೆಕ್ಕಿಸಲಾಗದಷ್ಟು ದೊಡ್ಡದಾಗಿಸುವೆನು”, ಎಂದು ಹೇಳಿ ಇಂತೆಂದನು:
11ಹುಟ್ಟುವನು ಮಗನೊಬ್ಬನು
ಗರ್ಭಿಣಿಯಾದ ನಿನಗೆ
ಇಷ್ಮಾಯೇಲೆಂಬ#16:11 ಎಂದರೆ, “ದೇವರು ಆಲಿಸುತ್ತಾರೆ. ಹೆಸರನು
ಇಡು ಅವನಿಗೆ
ಕಾರಣ - ಸರ್ವೇಶ್ವರ
ಕಿವಿಗೊಟ್ಟಿಹನು ನಿನ್ನ ಮೊರೆಗೆ.
12ಬಾಳುವವನು ಕಾಡುಗತ್ತೆಯಂತೆ
ಎತ್ತುವನು ಕೈಯನು ಎಲ್ಲರ ಮೇಲೆ,
ಎತ್ತುವರೆಲ್ಲರು ಕೈ ಅವನ ಮೇಲೆ
ಬಾಳುವನು ಸೋದರರಿಗೆ ಎದುರು ಬದುರಾಗೆ.”
13ಹಾಗರಳು, “ನನ್ನನ್ನು ನೋಡುವಾತ ದೇವರನ್ನು ನಾನಿಲ್ಲೇ ನೋಡಿಬಿಟ್ಟೆನಲ್ಲಾ!” ಎಂದುಕೊಂಡು ತನ್ನ ಸಂಗಡ ಮಾತನಾಡಿದ ಸರ್ವೇಶ್ವರ ಸ್ವಾಮಿಗೆ, “ಎಲ್ಲವನ್ನು ನೋಡುವಾತ ದೇವರು"#16:13 ಅಥವಾ: ‘ಎಲ್ ರೋಯಿ’. ಎಂದು ಹೆಸರಿಟ್ಟಳು. 14ಈ ಕಾರಣ ಅಲ್ಲಿದ್ದ ಬಾವಿಗೆ “ಲಹೈರೋಯಿ” (ನನ್ನನ್ನು ನೋಡುವ ಜೀವಸ್ವರೂಪನ ಬಾವಿ) ಎಂದು ಹೆಸರಾಯಿತು. 15ಹಾಗರಳು ಅಬ್ರಾಮನಿಗೆ ಒಬ್ಬ ಮಗನನ್ನು ಹೆತ್ತಳು. ಅಬ್ರಾಮನು ಅವನಿಗೆ ಇಷ್ಮಾಯೇಲ್ ಎಂದು ಹೆಸರಿಟ್ಟನು. 16ಆಗ ಅಬ್ರಾಮನಿಗೆ ಎಂಬತ್ತಾರು ವರ್ಷವಾಗಿತ್ತು.

醒目顯示

分享

複製

None

想要在所有設備上保存你的醒目顯示嗎? 註冊或登入