ಆದಿಕಾಂಡ 4

4
ಕಾಯಿನ ಮತ್ತು ಹೇಬೆಲ
1ಆದಾಮನು ತನ್ನ ಹೆಂಡತಿಯಾದ ಹವ್ವಳನ್ನು ಕೂಡಲು, ಆಕೆಯು ಗರ್ಭಿಣಿಯಾಗಿ, ಕಾಯಿನನನ್ನು ಹೆತ್ತು, “ನಾನು ಯೆಹೋವ ದೇವರ ಅನುಗ್ರಹದಿಂದ ಗಂಡು ಮಗುವನ್ನು ಪಡೆದಿದ್ದೇನೆ,” ಎಂದು ಹೇಳಿದಳು. 2ಅನಂತರ ಆಕೆಯು ಅವನ ತಮ್ಮನಾದ ಹೇಬೆಲನನ್ನು ಹೆತ್ತಳು.
ಹೇಬೆಲನು ಕುರಿ ಕಾಯುವವನಾದನು ಮತ್ತು ಕಾಯಿನನು ವ್ಯವಸಾಯ ಮಾಡುವವನಾದನು. 3ಸ್ವಲ್ಪ ಕಾಲದ ತರುವಾಯ, ಕಾಯಿನನು ಹೊಲದ ಬೆಳೆಯಲ್ಲಿ ಕೆಲವನ್ನು ತಂದು, ಯೆಹೋವ ದೇವರಿಗೆ ಕಾಣಿಕೆಯಾಗಿ ಸಮರ್ಪಿಸಿದನು. 4ಹೇಬೆಲನು ಸಹ ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನೂ ಅವುಗಳ ಕೊಬ್ಬನ್ನೂ ತಂದನು. ಯೆಹೋವ ದೇವರು ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿಕೊಂಡರು. 5ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ದೇವರು ಮೆಚ್ಚಲಿಲ್ಲ. ಆದ್ದರಿಂದ ಕಾಯಿನನು ಬಹು ಕೋಪಗೊಂಡನು. ಅವನ ಮುಖವು ಬಾಡಿತು.
6ಆಗ ಯೆಹೋವ ದೇವರು ಕಾಯಿನನಿಗೆ, “ನೀನು ಕೋಪಗೊಂಡಿದ್ದೇಕೆ? ಏಕೆ ನಿನ್ನ ಮುಖವು ಬಾಡಿದೆ? 7ನೀನು ಒಳ್ಳೆಯದನ್ನು ಮಾಡಿದರೆ, ನೀನು ಸ್ವೀಕಾರವಾಗುತ್ತಿದ್ದೆ ಅಲ್ಲವೇ? ನೀನು ಒಳ್ಳೆಯದನ್ನು ಮಾಡದೆ ಹೋದರೆ, ಬಾಗಿಲಲ್ಲಿ ಪಾಪವು ಹೊಂಚಿಕೊಂಡಿರುವುದು ಮತ್ತು ಅದು ನಿನ್ನನ್ನು ನುಂಗಲು ಬಯಸುತ್ತದೆ. ಆದರೂ ನೀನು ಅದರ ಮೇಲೆ ಅಧಿಕಾರ ಮಾಡಬೇಕು,” ಎಂದು ಹೇಳಿದರು.
8ಅನಂತರ ಕಾಯಿನನು, “ಅಡವಿಗೆ ಹೋಗೋಣ ಬಾ,” ಎಂದು ತನ್ನ ತಮ್ಮನಿಗೆ ಹೇಳಿದನು. ಅವರು ಅಲ್ಲಿ ಬಂದಾಗ ಕಾಯಿನನು ತನ್ನ ತಮ್ಮ ಹೇಬೆಲನ ಮೇಲೆ ದಾಳಿಮಾಡಿ, ಅವನನ್ನು ಕೊಂದುಹಾಕಿದನು.
9ಯೆಹೋವ ದೇವರು ಕಾಯಿನನನ್ನು, “ನಿನ್ನ ತಮ್ಮ ಹೇಬೆಲನು ಎಲ್ಲಿ?” ಎಂದು ಕೇಳಲು,
ಅವನು, “ನಾನರಿಯೆ. ನಾನು ನನ್ನ ತಮ್ಮನನ್ನು ಕಾಯುವವನೋ?” ಎಂದು ಉತ್ತರಕೊಟ್ಟನು.
10ಅದಕ್ಕೆ ಯೆಹೋವ ದೇವರು, “ನೀನು ಏನು ಮಾಡಿದೆ? ನಿನ್ನ ತಮ್ಮನ ರಕ್ತವು ಭೂಮಿಯಿಂದ ನನ್ನನ್ನು ಕೂಗುತ್ತಿದೆ. 11ನೀನು ಈಗ ಶಾಪಗ್ರಸ್ತನಾಗಿದ್ದಿ. ನೀನು ಸುರಿಸಿದ ನಿನ್ನ ತಮ್ಮನ ರಕ್ತವನ್ನು ಸ್ವೀಕರಿಸಲು ಬಾಯಿತೆರೆದಿರುವ ಭೂಮಿಯಿಂದ ತಿರಸ್ಕಾರವಾಗಿದ್ದಿ. 12ನೀನು ಭೂಮಿಯನ್ನು ವ್ಯವಸಾಯ ಮಾಡಿದರೂ ಅದು ಇನ್ನು ಮುಂದೆ ಫಲಿಸುವುದಿಲ್ಲ. ನೀನು ಭೂಲೋಕದಲ್ಲಿ ಅಲೆಮಾರಿಯಾಗಿ ತಿರುಗುವವನು ಆಗಿರುವೆ,” ಎಂದರು.
13ಆಗ ಕಾಯಿನನು ಯೆಹೋವ ದೇವರಿಗೆ, “ನನ್ನ ಶಿಕ್ಷೆಯು ತಾಳಲಾರದಷ್ಟು ದೊಡ್ಡದಾಗಿದೆ. 14ಇಗೋ, ನೀವು ಈ ದಿನ ನನ್ನನ್ನು ಸ್ವದೇಶದಿಂದ ಓಡಿಸುತ್ತಿದ್ದೀರಲ್ಲಾ! ನಿಮ್ಮ ಸಮ್ಮುಖದಿಂದ ನಾನು ಮರೆಯಾಗಿರಬೇಕಾಯಿತು. ಭೂಮಿಯಲ್ಲಿ ಅಲೆಮಾರಿಯಾಗಿರಬೇಕು. ಇದಲ್ಲದೆ ನನ್ನನ್ನು ಕಂಡವರು ಕೊಲ್ಲುವರು,” ಎಂದನು.
15ಆದ್ದರಿಂದ ಯೆಹೋವ ದೇವರು ಅವನಿಗೆ, “ಹಾಗಲ್ಲ, ಕಾಯಿನನನ್ನು ಕೊಲ್ಲುವವನ ಮೇಲೆ ಏಳರಷ್ಟು ಪ್ರತೀಕಾರವಿರುವುದು,” ಎಂದು ಹೇಳಿದರು. ಕಾಯಿನನನ್ನು ಕಂಡವರು ಕೊಲ್ಲದ ಹಾಗೆ ಯೆಹೋವ ದೇವರು ಅವನ ಮೇಲೆ ಒಂದು ಗುರುತನ್ನು ಇಟ್ಟರು. 16ಆಗ ಕಾಯಿನನು ಯೆಹೋವ ದೇವರ ಸನ್ನಿಧಿಯಿಂದ ಹೊರಟುಹೋಗಿ, ಏದೆನ್ ಸೀಮೆಗೆ ಪೂರ್ವದಲ್ಲಿದ್ದ ನೋದು#4:16 ಹೀಬ್ರೂ ಭಾಷೆಯಲ್ಲಿ ನೋದು ಎಂದರೆ ಅಲೆದಾಟ; ನೋಡಿರಿ ವಾಕ್ಯ 12 ಎಂಬ ದೇಶದಲ್ಲಿ ವಾಸಿಸಿದನು.
17ಕಾಯಿನನು ತನ್ನ ಹೆಂಡತಿಯನ್ನು ಕೂಡಲು, ಅವಳು ಗರ್ಭಿಣಿಯಾಗಿ ಹನೋಕನನ್ನು ಪಡೆದಳು. ಇದಲ್ಲದೆ ಕಾಯಿನನು ಒಂದು ಊರನ್ನು ಕಟ್ಟಿ, ಅದಕ್ಕೆ ಹನೋಕ್ ಎಂದು ತನ್ನ ಮಗನ ಹೆಸರನ್ನಿಟ್ಟನು. 18ಹನೋಕನಿಂದ ಈರಾದನು ಹುಟ್ಟಿದನು. ಈರಾದನಿಂದ ಮೆಹೂಯಾಯೇಲನು ಹುಟ್ಟಿದನು. ಮೆಹೂಯಾಯೇಲನಿಂದ ಮೆತೂಷಾಯೇಲನು ಹುಟ್ಟಿದನು. ಮೆತೂಷಾಯೇಲನಿಂದ ಲೆಮೆಕನು ಹುಟ್ಟಿದನು.
19ಲೆಮೆಕನು ಇಬ್ಬರು ಸ್ತ್ರೀಯರನ್ನು ಮದುವೆಯಾದನು. ಒಬ್ಬಳ ಹೆಸರು ಆದಾ ಮತ್ತೊಬ್ಬಳ ಹೆಸರು ಚಿಲ್ಲಾ. 20ಆದಾಳು ಯಾಬಾಲನನ್ನು ಹೆತ್ತಳು. ಪಶುಗಳನ್ನು ಸಾಕುತ್ತಾ, ಗುಡಾರಗಳಲ್ಲಿ ವಾಸಿಸುವವರೆಲ್ಲರ ಮೂಲಪುರುಷನು ಇವನೇ. 21ಇವನ ತಮ್ಮನ ಹೆಸರು ಯೂಬಾಲನು. ಇವನು ಕಿನ್ನರಿ ಕೊಳಲುಗಳನ್ನು ನುಡಿಸುವವರ ಮೂಲಪುರುಷನು. 22ಚಿಲ್ಲಾ ತೂಬಲ್ ಕಾಯಿನನನ್ನು ಪಡೆದಳು. ಅವನು ಕಂಚು ಮತ್ತು ಕಬ್ಬಿಣದ ಆಯುಧಗಳನ್ನು ಮಾಡುವವನಾಗಿದ್ದನು.#4:22 ಅಥವಾ ಎಲ್ಲಾ ಕುಲುಮೆ ಕೆಲಸದವರೆಲ್ಲರಿಗೆ ಶಿಕ್ಷಣ ಕೊಡುವವನಾಗಿದ್ದನು ತೂಬಲ್ ಕಾಯಿನನ ತಂಗಿಯ ಹೆಸರು ನಯಮಾ.
23ಲೆಮೆಕನು ತನ್ನ ಹೆಂಡತಿಯರಿಗೆ ಹೀಗೆಂದನು:
“ಆದಾ, ಚಿಲ್ಲಾ, ನನ್ನ ಮಾತನ್ನು ಕೇಳಿರಿ.
ಲೆಮೆಕನ ಹೆಂಡತಿಯರೇ, ನಾನು ಹೇಳುವುದನ್ನು ಗಮನಿಸಿರಿ.
ನನಗೆ ಗಾಯಮಾಡಿದ ಒಬ್ಬ ಮನುಷ್ಯನನ್ನು ಕೊಂದೆನು.
ನನ್ನನ್ನು ಹೊಡೆದ ಯುವಕನನ್ನು ಹತ ಮಾಡಿದೆನು.
24ಕಾಯಿನನನ್ನು ಕೊಂದವನಿಗೆ ಏಳರಷ್ಟು ಪ್ರತೀಕಾರವಾದರೆ,
ಲೆಮೆಕನನ್ನು ಹೊಡೆಯುವವನಿಗೆ, ಎಪ್ಪತ್ತೇಳರಷ್ಟಾಗುವುದು.”
25ಆದಾಮನು ತಿರುಗಿ ತನ್ನ ಹೆಂಡತಿಯನ್ನು ಕೂಡಲು, ಆಕೆ ಗಂಡು ಮಗುವನ್ನು ಹೆತ್ತು, “ಕಾಯಿನನು ಕೊಂದುಹಾಕಿದ ಹೇಬೆಲನಿಗೆ ಬದಲಾಗಿ, ದೇವರು ನನಗೆ ಬೇರೆ ಸಂತಾನವನ್ನು ನೇಮಿಸಿದನು,” ಎಂದು ಆ ಮಗುವಿಗೆ, ಸೇತ್#4:25 ಸೇತ್ ಬಹುಶಃ ಇದರ ಅರ್ಥ ಮಂಜೂರು ಎಂದು ಹೆಸರಿಟ್ಟಳು. 26ಸೇತನಿಗೆ ಒಬ್ಬ ಮಗನು ಹುಟ್ಟಿದನು. ಅವನಿಗೆ ಎನೋಷ್ ಎಂದು ಹೆಸರಿಟ್ಟನು.
ಆ ಕಾಲದಲ್ಲಿ ಜನರು, ಯೆಹೋವ ಎಂಬ ಹೆಸರನ್ನು ಆರಾಧಿಸುವುದಕ್ಕೆ ಪ್ರಾರಂಭಿಸಿದರು.

Цяпер абрана:

ಆದಿಕಾಂಡ 4: KSB

Пазнака

Падзяліцца

Капіяваць

None

Хочаце, каб вашыя адзнакі былі захаваны на ўсіх вашых прыладах? Зарэгіструйцеся або ўвайдзіце