ಯೋಹಾನ 13

13
ಯೇಸು ತಮ್ಮ ಶಿಷ್ಯರ ಪಾದಗಳನ್ನು ತೊಳೆದದ್ದು
1ಅಂದು ಪಸ್ಕಹಬ್ಬದ ಹಿಂದಿನ ದಿನವಾಗಿತ್ತು. ಯೇಸು ತಾವು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಬೇಕಾದ ಸಮಯ ಬಂತೆಂದು ತಿಳಿದು, ಈ ಲೋಕದಲ್ಲಿದ್ದ ತಮ್ಮವರನ್ನು ಪ್ರೀತಿಸುತ್ತಿದ್ದ ಆ ಪ್ರೀತಿಯ ಪರಿಪೂರ್ಣತೆಯನ್ನು ಈಗ ತೋರಿಸಲಿದ್ದರು.
2ಸಾಯಂಕಾಲ ಊಟದ ಸಮಯದಲ್ಲಿ ಯೇಸುವನ್ನು ಹಿಡಿದುಕೊಡಬೇಕೆಂಬ ಯೋಚನೆಯನ್ನು, ಸೈತಾನನು ಸೀಮೋನನ ಮಗನಾದ ಇಸ್ಕರಿಯೋತ ಯೂದನ ಹೃದಯದಲ್ಲಿ ಹಾಕಿದ್ದನು. 3ತಂದೆಯು ತನ್ನ ಕೈಯಲ್ಲಿ ಎಲ್ಲವನ್ನೂ ಕೊಟ್ಟಿದ್ದಾರೆಂದೂ ತಾನು ದೇವರ ಬಳಿಯಿಂದ ಬಂದು ಮರಳಿ ದೇವರ ಬಳಿಗೆ ಹೋಗುತ್ತೇನೆಂದೂ ಯೇಸುವಿಗೆ ತಿಳಿದಿತ್ತು. 4ಯೇಸು ಊಟದಿಂದೆದ್ದು ತಮ್ಮ ಮೇಲು ಹೊದಿಕೆಯನ್ನು ತೆಗೆದಿಟ್ಟು ಅಂಗವಸ್ತ್ರವನ್ನು ತೆಗೆದುಕೊಂಡು ಸೊಂಟಕ್ಕೆ ಕಟ್ಟಿಕೊಂಡರು. 5ಅನಂತರ ಅವರು ಬೋಗುಣಿಯಲ್ಲಿ ನೀರು ಹಾಕಿಕೊಂಡು ಶಿಷ್ಯರ ಪಾದಗಳನ್ನು ತೊಳೆಯುವುದಕ್ಕೂ ತಾವು ಸೊಂಟಕ್ಕೆ ಕಟ್ಟಿಕೊಂಡ ಅಂಗವಸ್ತ್ರದಿಂದ ಪಾದಗಳನ್ನು ಒರೆಸುವುದಕ್ಕೂ ಪ್ರಾರಂಭಿಸಿದರು.
6ಯೇಸು ಸೀಮೋನ ಪೇತ್ರನ ಬಳಿಗೆ ಬಂದಾಗ ಅವನು ಯೇಸುವಿಗೆ, “ಸ್ವಾಮೀ, ನೀವು ನನ್ನ ಪಾದಗಳನ್ನು ತೊಳೆಯುತ್ತೀರೋ?” ಎಂದು ಕೇಳಿದನು.
7ಯೇಸು ಅವನಿಗೆ, “ನಾನು ಮಾಡುವುದು ಏನೆಂದು ಈಗ ನಿನಗೆ ಅರ್ಥವಾಗುವುದಿಲ್ಲ. ಆದರೆ ಇನ್ನು ಮುಂದೆ ನಿನಗೆ ಅರ್ಥವಾಗುವುದು,” ಎಂದರು.
8ಪೇತ್ರನು ಯೇಸುವಿಗೆ, “ನೀವು ನನ್ನ ಪಾದಗಳನ್ನು ಎಂದಿಗೂ ತೊಳೆಯಬಾರದು,” ಎಂದನು.
ಯೇಸು ಅವನಿಗೆ, “ನಾನು ನಿನ್ನ ಪಾದಗಳನ್ನು ತೊಳೆಯದಿದ್ದರೆ ನನ್ನೊಂದಿಗೆ ನಿನಗೆ ಪಾಲು ಇಲ್ಲ,” ಎಂದು ಹೇಳಿದರು.
9ಅದಕ್ಕೆ ಸೀಮೋನ ಪೇತ್ರನು ಯೇಸುವಿಗೆ, “ಸ್ವಾಮೀ, ನನ್ನ ಪಾದಗಳನ್ನು ಮಾತ್ರವಲ್ಲದೆ, ನನ್ನ ಕೈಗಳನ್ನು ಮತ್ತು ತಲೆಯನ್ನು ಸಹ ತೊಳೆ,” ಎಂದನು.
10ಯೇಸು ಅವನಿಗೆ, “ಸ್ನಾನಮಾಡಿಕೊಂಡವರು ತಮ್ಮ ಪಾದಗಳನ್ನು ಮಾತ್ರ ತೊಳೆದುಕೊಂಡರೆ ಸಾಕು. ಅವರು ಸಂಪೂರ್ಣವಾಗಿ ಶುದ್ಧರಾಗಿದ್ದಾರೆ. ನೀವು ಸಹ ಶುದ್ಧರಾಗಿದ್ದೀರಿ. ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ,” ಎಂದರು. 11ತನ್ನನ್ನು ಹಿಡಿದುಕೊಡುವವನು ಯಾರೆಂದು ಯೇಸು ತಿಳಿದಿದ್ದರಿಂದ, “ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ,” ಎಂದು ಹೇಳಿದರು.
12ಯೇಸು ಅವರ ಪಾದಗಳನ್ನು ತೊಳೆದ ಮೇಲೆ ತಮ್ಮ ಮೇಲು ಹೊದಿಕೆಯನ್ನು ಧರಿಸಿ, ತಮ್ಮ ಸ್ಥಳದಲ್ಲಿ ಕುಳಿತುಕೊಂಡು ಅವರಿಗೆ, “ನಾನು ನಿಮಗೆ ಮಾಡಿದ್ದು ಏನೆಂದು ಅರ್ಥವಾಯಿತೋ? 13ನೀವು ನನ್ನನ್ನು ‘ಬೋಧಕರೇ’ ಮತ್ತು ‘ಕರ್ತಾ’ ಎಂದು ಕರೆಯುತ್ತೀರಿ. ನೀವು ಹೇಳುವುದು ಸರಿ. ಹೌದು, ನಾನು ಅಂಥವನೇ ಆಗಿದ್ದೇನೆ. 14ಹಾಗಾದರೆ ನಿಮ್ಮ ಕರ್ತನೂ ಬೋಧಕನೂ ಆಗಿರುವ ನಾನೇ ನಿಮ್ಮ ಪಾದಗಳನ್ನು ತೊಳೆದಿರುವಾಗ ನೀವು ಸಹ ಒಬ್ಬರ ಪಾದಗಳನ್ನೊಬ್ಬರು ತೊಳೆಯಬೇಕು. 15ನಾನು ನಿಮಗೆ ಮಾಡಿದಂತೆಯೇ ನೀವು ಸಹ ಮಾಡಬೇಕೆಂದು ನಾನು ನಿಮಗೆ ಮಾದರಿಯನ್ನು ಕೊಟ್ಟಿದ್ದೇನೆ. 16ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ತನ್ನ ಧಣಿಗಿಂತ ಆಳು ದೊಡ್ಡವನಲ್ಲ, ಹಾಗೆಯೇ ಕಳುಹಿಸಲಾದವನು ಅವನನ್ನು ಕಳುಹಿಸಿದವನಿಗಿಂತ ದೊಡ್ಡವನಲ್ಲ. 17ನೀವು ಇವುಗಳನ್ನು ತಿಳಿದುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು.
ಯೇಸು ತನ್ನನ್ನು ಹಿಡಿದುಕೊಡುವುದನ್ನು ಮುಂತಿಳಿಸಿದ್ದು
18“ನಾನು ನಿಮ್ಮೆಲ್ಲರನ್ನು ಕುರಿತು ಮಾತನಾಡುತ್ತಿಲ್ಲ. ನಾನು ಆರಿಸಿಕೊಂಡವರನ್ನು ನಾನು ಬಲ್ಲೆನು. ಆದರೆ ‘ನನ್ನ ಸಂಗಡ ರೊಟ್ಟಿಯನ್ನು ತಿಂದವನೇ,#13:18 ಗ್ರೀಕ್ ಭಾಷೆಯಲ್ಲಿ, ತನ್ನ ಹಿಮ್ಮಡಿಯನ್ನು ಎತ್ತಿದ್ದಾನೆ ಎಂದಿದೆ ನನಗೆ ದ್ರೋಹ ಬಗೆದನು,’#13:18 ಕೀರ್ತನೆ 41:9 ಎಂಬ ಪವಿತ್ರ ವಾಕ್ಯವು ನೆರವೇರಬೇಕಾಗಿದೆ.
19“ಅದು ಆಗುವುದು, ‘ನಾನೇ ಆತನು’ ಎಂದು ನೀವು ನಂಬುವಂತೆ ಅದು ಸಂಭವಿಸುವುದಕ್ಕಿಂತ ಮುಂಚೆ ಈಗಲೇ ನಿಮಗೆ ಹೇಳುತ್ತಿದ್ದೇನೆ. 20ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ಕಳುಹಿಸಿದ ತಂದೆಯನ್ನು ಸ್ವೀಕರಿಸುವವನು ನನ್ನನ್ನು ಸ್ವೀಕರಿಸುತ್ತಾನೆ; ನನ್ನನ್ನು ಸ್ವೀಕರಿಸುವವನು ನನ್ನನ್ನು ಕಳುಹಿಸಿದ ತಂದೆಯನ್ನೇ ಸ್ವೀಕರಿಸುತ್ತಾನೆ.”
21ಯೇಸು ಇವುಗಳನ್ನು ಹೇಳುತ್ತಾ ಆತ್ಮದಲ್ಲಿ ನೊಂದುಕೊಂಡವರಾಗಿ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಬಗೆಯುವನು,” ಎಂದು ಸ್ವಷ್ಟವಾಗಿ ಹೇಳಿದರು.
22ಆಗ ಶಿಷ್ಯರು ಗಲಿಬಿಲಿಗೊಂಡು, “ಯೇಸು ಯಾರನ್ನು ಕುರಿತು ಹೇಳಿದರು?” ಎಂದು ಒಬ್ಬರನ್ನೊಬ್ಬರು ನೋಡುವವರಾದರು. 23ಶಿಷ್ಯರಲ್ಲಿ ಯೇಸು ಪ್ರೀತಿಸಿದ ಒಬ್ಬನು ಅವರ ಎದೆಗೆ ಒರಗಿಕೊಂಡಿದ್ದನು. 24ಸೀಮೋನ ಪೇತ್ರನು ಅವನಿಗೆ ಸನ್ನೆಮಾಡಿ, “ಅವರು ಯಾರ ವಿಷಯವಾಗಿ ಮಾತನಾಡಿದರು ಕೇಳು,” ಎಂದು ಹೇಳಿದನು.
25ಅವನು ಯೇಸುವಿನ ಎದೆಗೆ ಒರಗಿಕೊಂಡವನಾಗಿ, “ಸ್ವಾಮೀ, ಅವನು ಯಾರು?” ಎಂದು ಯೇಸುವನ್ನು ಕೇಳಿದನು.
26ಅದಕ್ಕೆ ಯೇಸು, “ನಾನು ರೊಟ್ಟಿಯ ತುಂಡನ್ನು ಅದ್ದಿ ಯಾವನಿಗೆ ಕೊಡುತ್ತೇನೋ ಅವನೇ,” ಎಂದರು. ತರುವಾಯ, ಆ ರೊಟ್ಟಿಯ ತುಂಡನ್ನು ಅದ್ದಿ ಸೀಮೋನನ ಮಗನಾದ ಯೂದ ಇಸ್ಕರಿಯೋತನಿಗೆ ಕೊಟ್ಟರು. 27ಅವನು ರೊಟ್ಟಿಯ ತುಂಡನ್ನು ತೆಗೆದುಕೊಂಡು ತಿಂದನು. ಅನಂತರ ಸೈತಾನನು ಅವನೊಳಗೆ ಪ್ರವೇಶಿಸಿದನು.
ಆಗ ಯೇಸು ಅವನಿಗೆ, “ನೀನು ಮಾಡುವುದನ್ನು ಬೇಗನೆ ಮಾಡು,” ಎಂದು ಹೇಳಿದರು. 28ಆದರೆ ಯೇಸು ಅವನಿಗೆ ಇದನ್ನು ಏಕೆ ಹೇಳಿದರೆಂದು ಕುಳಿತವರಲ್ಲಿ ಯಾರಿಗೂ ಗೊತ್ತಾಗಲಿಲ್ಲ. 29ಏಕೆಂದರೆ ಯೂದನು ಹಣದ ಚೀಲವನ್ನು ಇಟ್ಟುಕೊಂಡಿದ್ದರಿಂದ ಯೇಸು ಅವನಿಗೆ, ಹಬ್ಬಕ್ಕೆ ನಮಗೆ ಅವಶ್ಯವಾದವುಗಳನ್ನು ಕೊಂಡುಕೋ, ಎಂದೋ ಬಡವರಿಗೆ ಏನಾದರೂ ಕೊಡು ಎಂದೋ ಯೇಸು ಅವನಿಗೆ ಹೇಳಿದರೆಂದು ಅವರಲ್ಲಿ ಕೆಲವರು ಭಾವಿಸಿದರು. 30ಯೂದನು ಆ ರೊಟ್ಟಿಯ ತುಂಡನ್ನು ತೆಗೆದುಕೊಂಡ ಕೂಡಲೇ ಹೊರಗೆ ಹೋದನು. ಆಗ ರಾತ್ರಿಯಾಗಿತ್ತು.
ಪೇತ್ರನು ತಮ್ಮನ್ನು ಅಲ್ಲಗಳೆಯುವುದನ್ನು ಯೇಸು ಮುಂತಿಳಿಸಿದ್ದು
31ಅವನು ಹೊರಟುಹೋದ ಮೇಲೆ ಯೇಸು, “ಈಗ ಮನುಷ್ಯಪುತ್ರನಾದ ನಾನು ಮಹಿಮೆ ಹೊಂದಲಿದ್ದೇನೆ. ದೇವರೂ ನನ್ನಲ್ಲಿ ಮಹಿಮೆ ಹೊಂದುವರು. 32ದೇವರು ಮನುಷ್ಯಪುತ್ರನಾದ ನನ್ನಲ್ಲಿ ಮಹಿಮೆ ಪಟ್ಟರೆ, ದೇವರು ಸಹ ಮನುಷ್ಯಪುತ್ರನಾದ ನನ್ನನ್ನು ತಮ್ಮಲ್ಲಿ ಮಹಿಮೆಪಡಿಸುವರು ಮತ್ತು ತಕ್ಷಣವೇ ಮಹಿಮೆಪಡಿಸುವರು.
33“ನನ್ನ ಮಕ್ಕಳೇ, ಇನ್ನು ಸ್ವಲ್ಪ ಕಾಲವೇ ನಾನು ನಿಮ್ಮೊಡನೆ ಇರುತ್ತೇನೆ. ‘ನೀವು ನನ್ನನ್ನು ಹುಡುಕುವಿರಿ, ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎಂದು ನಾನು ಯೆಹೂದಿ ನಾಯಕರಿಗೆ ಹೇಳಿದಂತೆಯೇ ನಿಮಗೂ ಈಗ ಹೇಳುತ್ತೇನೆ.
34“ನಾನು ನಿಮಗೊಂದು ಹೊಸ ಆಜ್ಞೆಯನ್ನು ಕೊಡುತ್ತೇನೆ: ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವೂ ಒಬ್ಬರನ್ನೊಬ್ಬರು ಪ್ರೀತಿಸಬೇಕು. 35ನಿಮಗೆ ಪರಸ್ಪರ ಪ್ರೀತಿಯಿದ್ದರೆ, ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳಿದುಕೊಳ್ಳುವರು,” ಎಂದು ಹೇಳಿದರು.
36ಸೀಮೋನ ಪೇತ್ರನು ಯೇಸುವಿಗೆ, “ಸ್ವಾಮೀ, ನೀವು ಎಲ್ಲಿಗೆ ಹೋಗುತ್ತೀರಿ?” ಎಂದು ಕೇಳಿದ್ದಕ್ಕೆ,
ಯೇಸು ಅವನಿಗೆ, “ನಾನು ಹೋಗುವ ಕಡೆಗೆ ಈಗ ನೀನು ನನ್ನನ್ನು ಹಿಂಬಾಲಿಸಲಾರೆ, ನಂತರ ಹಿಂಬಾಲಿಸುವೆ,” ಎಂದರು.
37ಪೇತ್ರನು ಯೇಸುವಿಗೆ, “ಕರ್ತದೇವರೇ, ನಾನು ಈಗ ನಿಮ್ಮನ್ನು ಏಕೆ ಹಿಂಬಾಲಿಸಲಾರೆನು? ನಿಮಗಾಗಿ ನನ್ನ ಪ್ರಾಣವನ್ನೇ ಕೊಡುವೆನು,” ಎಂದನು.
38ಯೇಸು ಅವನಿಗೆ, “ನೀನು ನನಗಾಗಿ ನಿನ್ನ ಪ್ರಾಣವನ್ನೇ ಕೊಡುವೆಯೋ? ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ನನ್ನನ್ನು ಮೂರು ಸಾರಿ ನಿರಾಕರಿಸುವ ತನಕ ಹುಂಜ ಕೂಗುವುದೇ ಇಲ್ಲ,” ಎಂದರು.

Цяпер абрана:

ಯೋಹಾನ 13: KSB

Пазнака

Падзяліцца

Капіяваць

None

Хочаце, каб вашыя адзнакі былі захаваны на ўсіх вашых прыладах? Зарэгіструйцеся або ўвайдзіце