ಲೂಕ 23
23
1ಆಗ ಅಲ್ಲಿ ಕೂಡಿದ್ದವರೆಲ್ಲರೂ ಎದ್ದು ಯೇಸುವನ್ನು ಪಿಲಾತನ#23:1 ರೋಮಾ ರಾಜ್ಯಪಾಲನು ಬಳಿಗೆ ಕರೆದುಕೊಂಡು ಹೋದರು. 2ಅವರು ಯೇಸುವಿನ ಮೇಲೆ ದೂರು ಹೇಳಲಾರಂಭಿಸಿ, “ಈ ನಮ್ಮ ಜನಾಂಗವು ದಂಗೆಯೇಳುವಂತೆಯೂ ತಾನೇ ಕ್ರಿಸ್ತನೆಂಬ ಒಬ್ಬ ಅರಸನಾಗಿದ್ದೇನೆಂದೂ ಹೇಳಿ ಕೈಸರನಿಗೆ ತೆರಿಗೆ ಕೊಡದಂತೆ ಈತನು ಅಡ್ಡಿಮಾಡುತ್ತಿರುವುದನ್ನೂ ನಾವು ಕಂಡಿದ್ದೇವೆ,” ಎಂದರು.
3ಆಗ ಪಿಲಾತನು ಯೇಸುವಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು.
ಅದಕ್ಕೆ ಯೇಸು ಅವರಿಗೆ, “ನೀವೇ ಹೇಳುತ್ತಿದ್ದೀರಿ,” ಎಂದರು.
4ತರುವಾಯ ಪಿಲಾತನು, ಮುಖ್ಯಯಾಜಕರಿಗೂ ಜನರಿಗೂ, “ಈ ಮನುಷ್ಯನಲ್ಲಿ ನಾನು ಯಾವ ತಪ್ಪನ್ನೂ ಕಾಣಲಿಲ್ಲ,” ಎಂದನು.
5ಅದಕ್ಕೆ ಅವರು, “ಈತನು ಗಲಿಲಾಯ ಪ್ರಾಂತ ಮೊದಲುಗೊಂಡು ಈ ಸ್ಥಳದವರೆಗೂ ಯೂದಾಯ ಪ್ರಾಂತದ ಎಲ್ಲಾ ಕಡೆಗೂ ಬೋಧಿಸುತ್ತಾ, ಜನರನ್ನು ಕ್ರಾಂತಿಗೆ ಪ್ರೇರೇಪಿಸುತ್ತಿದ್ದಾನೆ,” ಎಂದು ಒತ್ತಾಯ ಪೂರ್ವಕವಾಗಿ ಹೇಳಿದರು.
6ಪಿಲಾತನು ಗಲಿಲಾಯದ ವಿಷಯವಾಗಿ ಕೇಳಿದಾಗ, “ಈ ಮನುಷ್ಯನು ಗಲಿಲಾಯದವನೋ?” ಎಂದು ವಿಚಾರಿಸಿದನು. 7ಯೇಸು ಹೆರೋದನ ಅಧಿಕಾರಕ್ಕೆ ಸಂಬಂಧ ಪಟ್ಟವನೆಂದು ತಿಳಿದ ಕೂಡಲೇ ಅದೇ ಸಮಯದಲ್ಲಿ ಯೆರೂಸಲೇಮಿನಲ್ಲಿಯೇ ಇದ್ದ ಹೆರೋದನ ಬಳಿಗೆ ಯೇಸುವನ್ನು ಕಳುಹಿಸಿದನು.
8ಹೆರೋದನು ಯೇಸುವನ್ನು ಕಂಡಾಗ, ಅತ್ಯಂತ ಸಂತೋಷಪಟ್ಟನು. ಏಕೆಂದರೆ ಅವನು ಯೇಸುವಿನ ವಿಷಯವಾಗಿ ಅನೇಕ ಸಂಗತಿಗಳನ್ನು ಕೇಳಿದ್ದರಿಂದ, ಅವರನ್ನು ಕಾಣಲು ಬಹಳ ಕಾಲದಿಂದ ಆಶೆಪಟ್ಟಿದ್ದನು. ಅವರಿಂದಾಗುವ ಸೂಚಕಕಾರ್ಯವನ್ನು ಕಾಣಲು ನಿರೀಕ್ಷಿಸುತ್ತಿದ್ದನು. 9ಅವನು ಯೇಸುವನ್ನು ಅನೇಕ ಪ್ರಶ್ನೆಗಳನ್ನು ಕೇಳಿದರೂ ಯೇಸು ಅವನಿಗೆ ಏನೂ ಉತ್ತರ ಕೊಡಲಿಲ್ಲ. 10ಮುಖ್ಯಯಾಜಕರೂ ನಿಯಮ ಬೋಧಕರು ನಿಂತುಕೊಂಡು ಬಲವಾಗಿ ಯೇಸುವಿನ ಮೇಲೆ ದೂರುಗಳನ್ನು ಹೇಳುತ್ತಿದ್ದರು. 11ಆಗ ಹೆರೋದನು ತನ್ನ ಸೈನಿಕರೊಂದಿಗೆ ಯೇಸುವನ್ನು ತಿರಸ್ಕರಿಸಿ, ಹಾಸ್ಯಮಾಡಿ, ಅವರ ಮೇಲೆ ರಾಜವಸ್ತ್ರವನ್ನು ಹೊದಿಸಿ ಅವರನ್ನು ತಿರುಗಿ ಪಿಲಾತನ ಬಳಿಗೆ ಕಳುಹಿಸಿದನು. 12ಪಿಲಾತನೂ ಹೆರೋದನೂ ಅದೇ ದಿನದಲ್ಲಿ ಒಬ್ಬರಿಗೊಬ್ಬರು ಸ್ನೇಹಿತರಾದರು. ಏಕೆಂದರೆ ಅದುವರೆಗೂ ಅವರು ವೈರಿಗಳಾಗಿದ್ದರು.
13ಪಿಲಾತನು ಮುಖ್ಯಯಾಜಕರನ್ನೂ ಅಧಿಕಾರಿಗಳನ್ನೂ ಜನರನ್ನೂ ಒಟ್ಟಾಗಿ ಕರೆಯಿಸಿ ಅವರಿಗೆ, 14“ಜನರು ತಿರುಗಿ ಬೀಳುವಂತೆ ಮಾಡುತ್ತಾನೆಂದು ನೀವು ಈತನನ್ನು ನನ್ನ ಬಳಿಗೆ ತಂದಿದ್ದೀರಿ. ಇಗೋ, ನೀವು ಈತನ ಮೇಲೆ ತಂದಿರುವ ದೂರುಗಳನ್ನು ನಾನು ನಿಮ್ಮ ಮುಂದೆಯೇ ವಿಚಾರಿಸಿದಾಗ ಈತನಲ್ಲಿ ನನಗೆ ಯಾವ ಅಪರಾಧವೂ ಕಾಣಲಿಲ್ಲ. 15ಮಾತ್ರವಲ್ಲದೆ, ಈತನನ್ನು ನಮ್ಮ ಬಳಿಗೆ ಕಳುಹಿಸಿದ ಹೆರೋದ ಅರಸನಿಗೂ ಸಹ ಈತನಲ್ಲಿ ಯಾವ ಅಪರಾಧವೂ ಕಾಣಲಿಲ್ಲ. ಇಗೋ, ಈತನಲ್ಲಿ ಮರಣಕ್ಕೆ ಯೋಗ್ಯವಾದದ್ದೇನೂ ಕಾಣಲಿಲ್ಲ. 16ಹೀಗಿರುವುದರಿಂದ ನಾನು ಈತನನ್ನು ದಂಡಿಸಿ ಬಿಟ್ಟುಬಿಡುತ್ತೇನೆ,” ಎಂದನು. 17ಏಕೆಂದರೆ ಅಧಿಪತಿಯು ಸೆರೆಯಾಳು ಒಬ್ಬನನ್ನು ಹಬ್ಬದಲ್ಲಿ ಜನರಿಗೋಸ್ಕರ ಬಿಡಿಸುವುದು ಪದ್ಧತಿಯಾಗಿತ್ತು.#23:17 ಕೆಲವು ಮೂಲ ಹಸ್ತಪ್ರತಿಗಳಲ್ಲಿ ಈ ವಾಕ್ಯ ಸೇರ್ಪಡೆಯಾಗಿರುವುದಿಲ್ಲ.
18ಆಗ ಅವರೆಲ್ಲರೂ ಆ ಕ್ಷಣವೇ, “ಈತನಿಗೆ ಮರಣದಂಡನೆ ವಿಧಿಸಿರಿ, ನಮಗೆ ಬರಬ್ಬನನ್ನು ಬಿಡುಗಡೆಮಾಡು,” ಎಂದು ಬೊಬ್ಬೆಹಾಕಿದರು. 19ಬರಬ್ಬನು ಪಟ್ಟಣದಲ್ಲಿ ನಡೆದ ದಂಗೆ ಮತ್ತು ಕೊಲೆಯ ನಿಮಿತ್ತ ಸೆರೆಯಲ್ಲಿ ಹಾಕಿದವನಾಗಿದ್ದನು.
20ಪಿಲಾತನು ಯೇಸುವನ್ನು ಬಿಡಿಸಬೇಕೆಂದು ಮನಸ್ಸುಳ್ಳವನಾಗಿ ಮತ್ತೊಮ್ಮೆ ಜನರಲ್ಲಿ ಮನವಿ ಮಾಡಿಕೊಂಡನು. 21ಅವರಾದರೋ, “ಈತನನ್ನು ಶಿಲುಬೆಗೆ ಹಾಕಿಸು, ಈತನನ್ನು ಶಿಲುಬೆಗೆ ಹಾಕಿಸು!” ಎಂದು ಆರ್ಭಟಿಸತೊಡಗಿದರು.
22ಪಿಲಾತನು ಮೂರನೆಯ ಸಾರಿ ಅವರಿಗೆ, “ಏಕೆ? ಈತನು ಮಾಡಿದ ಅಪರಾಧವೇನು? ಈತನಲ್ಲಿ ಮರಣದಂಡನೆಗೆ ಕಾರಣವಾದದ್ದೇನೂ ನನಗೆ ಕಾಣಲಿಲ್ಲ. ಆದ್ದರಿಂದ ನಾನು ಈತನನ್ನು ದಂಡಿಸಿ ಬಿಟ್ಟುಬಿಡುತ್ತೇನೆ,” ಎಂದನು.
23ಆದರೆ ಯೇಸುವನ್ನು ಶಿಲುಬೆಗೆ ಹಾಕಿಸಬೇಕೆಂದು ಜನರು ಆರ್ಭಟಿಸುತ್ತಾ, ಒತ್ತಾಯಮಾಡಿದರು. ಹೀಗೆ ಅವರ ಕೂಗಾಟವೇ ಗೆದ್ದಿತು. 24ಪಿಲಾತನು ಅವರು ಕೇಳಿಕೊಂಡಂತೆಯೇ ಆಗಲಿ ಎಂದು ನಿರ್ಣಯಿಸಿದನು. 25ಇದಲ್ಲದೆ ಪಿಲಾತನು ಜನರು ಬರಬ್ಬನನ್ನು ಎಂದರೆ, ದಂಗೆ ಮತ್ತು ಕೊಲೆಯ ನಿಮಿತ್ತ ಸೆರೆಮನೆಯೊಳಗೆ ಹಾಕಿದವನನ್ನು ಅವರಿಗೆ ಬಿಟ್ಟುಕೊಟ್ಟು, ಯೇಸುವನ್ನೋ ಅವರ ಇಷ್ಟಕ್ಕೆ ಒಪ್ಪಿಸಿದನು.
ಯೇಸುವನ್ನು ಶಿಲುಬೆಗೆ ಹಾಕಿದ್ದು
26ಸೈನಿಕರು ಯೇಸುವನ್ನು ತೆಗೆದುಕೊಂಡು ಹೋಗುತ್ತಿರುವಾಗ ಹೊಲದಿಂದ ಬರುತ್ತಿದ್ದ ಕುರೇನೆದ#23:26 ಉತ್ತರ ಆಫ್ರಿಕದ ಈಗಿನ ಲಿಬಿಯದ ಒಂದು ಊರು ಸೀಮೋನನೆಂಬವನನ್ನು ಹಿಡಿದು, ಅವನ ಮೇಲೆ ಶಿಲುಬೆಯನ್ನು ಹೊರಿಸಿ, ಯೇಸುವಿನ ಹಿಂದೆ ಹೊತ್ತುಕೊಂಡು ಹೋಗುವಂತೆ ಮಾಡಿದರು. 27ಜನರ ಮಹಾ ಸಮೂಹ ಯೇಸುವಿನ ಹಿಂದೆ ಹೊರಟಿತು. ಅವರಲ್ಲಿ ಯೇಸುವಿಗಾಗಿ ಶೋಕಿಸುತ್ತಾ, ಗೋಳಾಡುತ್ತಿದ್ದ ಮಹಿಳೆಯರು ಸಹ ಇದ್ದರು. 28ಯೇಸು ಅವರ ಕಡೆಗೆ ತಿರುಗಿಕೊಂಡು, “ಯೆರೂಸಲೇಮಿನ ಪುತ್ರಿಯರೇ, ನನಗಾಗಿ ಅಳಬೇಡಿರಿ. ನಿಮಗಾಗಿಯೂ ನಿಮ್ಮ ಮಕ್ಕಳಿಗಾಗಿ ಅಳಿರಿ. 29ಏಕೆಂದರೆ, ‘ಇಗೋ, ಬಂಜೆಯರೂ ಹೆರದವರೂ ಹಾಲು ಕುಡಿಸದವರೂ ಧನ್ಯರು,’ ಎಂದು ಜನರು ಹೇಳುವ ದಿವಸಗಳು ಬರುತ್ತವೆ. 30ಆಗ ಅವರು,
“ ‘ಬೆಟ್ಟಗಳಿಗೆ, “ನಮ್ಮ ಮೇಲೆ ಬೀಳಿರಿ!”
ಗುಡ್ಡಗಳಿಗೆ, “ನಮ್ಮನ್ನು ಮುಚ್ಚಿಕೊಳ್ಳಿರಿ!” ’#23:30 ಹೋಶೇ 10:8
ಎಂದು ಹೇಳಲಾರಂಭಿಸುವರು. 31ಅವರು ಹಸಿ ಮರಕ್ಕೆ ಇವುಗಳನ್ನು ಮಾಡಿದರೆ, ಒಣ ಮರಕ್ಕೆ ಇನ್ನೇನು ಮಾಡಿಯಾರು?” ಎಂದರು.
32ಅಪರಾಧಿಗಳಾದ ಬೇರೆ ಇಬ್ಬರನ್ನು ಕೂಡ ಯೇಸುವಿನೊಂದಿಗೆ ಮರಣದಂಡನೆಗಾಗಿ ಕರೆದುಕೊಂಡು ಹೋದರು. 33ಅವರು “ತಲೆಬುರುಡೆಯ ಸ್ಥಳ” ಎಂದು ಕರೆಯಲಾಗುವ ಸ್ಥಳಕ್ಕೆ ಬಂದಾಗ, ಅಲ್ಲಿ ಯೇಸುವನ್ನು ಶಿಲುಬೆಗೆ ಹಾಕಿದರು. ಆ ಅಪರಾಧಿಗಳಲ್ಲಿ ಒಬ್ಬನನ್ನು ಯೇಸುವಿನ ಬಲಗಡೆಯಲ್ಲಿ ಮತ್ತೊಬ್ಬನನ್ನು ಅವರ ಎಡಗಡೆಯಲ್ಲಿ ಶಿಲುಬೆಗೆ ಹಾಕಿದರು. 34ಆಗ ಯೇಸು, “ತಂದೆಯೇ, ಇವರನ್ನು ಕ್ಷಮಿಸಿ, ತಾವು ಏನು ಮಾಡುತ್ತಿದ್ದಾರೆಂದು ಅರಿಯರು,” ಎಂದರು. ಸೈನಿಕರಾದರೋ ಯೇಸುವಿನ ಉಡುಪನ್ನು ಚೀಟುಹಾಕಿ, ಹಂಚಿಕೊಂಡರು.
35ಜನರು ನೋಡುತ್ತಾ ನಿಂತುಕೊಂಡಿದ್ದರು. ಅವರೊಂದಿಗೆ ಅಧಿಕಾರಿಗಳು ಸಹ ಯೇಸುವನ್ನು ಅಪಹಾಸ್ಯಮಾಡಿ, “ಬೇರೆಯವರನ್ನು ರಕ್ಷಿಸಿದ ಈತನು ದೇವರು ಆರಿಸಿಕೊಂಡ ಕ್ರಿಸ್ತನಾಗಿದ್ದರೆ, ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ,” ಎಂದರು.
36ಸೈನಿಕರು ಸಹ ಯೇಸುವಿನ ಬಳಿಗೆ ಬಂದು ಅವರನ್ನು ಹಾಸ್ಯಮಾಡಿ ಯೇಸುವಿಗೆ ಹುಳಿರಸವನ್ನು ಕೊಟ್ಟು, 37“ನೀನು ಯೆಹೂದ್ಯರ ಅರಸನಾಗಿದ್ದರೆ ನಿನ್ನನ್ನು ನೀನೇ ರಕ್ಷಿಸಿಕೋ,” ಎಂದರು.
38ಯೇಸುವಿನ ಶಿಲುಬೆಯ ಮೇಲ್ಗಡೆಯಲ್ಲಿ ಒಂದು ಲಿಖಿತ ಹೀಗಿತ್ತು:
ಈತನು ಯೆಹೂದ್ಯರ ಅರಸನು.
39ಶಿಲುಬೆಗೆ ಹಾಕಿದ್ದ ಅಪರಾಧಿಗಳಲ್ಲಿ ಒಬ್ಬನು, “ನೀನು ಕ್ರಿಸ್ತನಾಗಿದ್ದರೆ ನಿನ್ನನ್ನು ರಕ್ಷಿಸಿಕೊಂಡು, ನಮ್ಮನ್ನೂ ರಕ್ಷಿಸು,” ಎಂದು ಯೇಸುವನ್ನು ದೂಷಿಸಿದನು.
40ಆದರೆ ಮತ್ತೊಬ್ಬ ಅಫರಾಧಿಯು ಅವನನ್ನು ಖಂಡಿಸುತ್ತಾ, “ನೀನು ಇದೇ ದಂಡನೆಗೆ ಗುರಿಯಾಗಿದ್ದರೂ ದೇವರಿಗೆ ಭಯಪಡುವುದಿಲ್ಲವೋ? 41ನಮಗಾದರೋ ನಮ್ಮ ಕೃತ್ಯಕ್ಕೆ ತಕ್ಕ ಶಿಕ್ಷೆ ನ್ಯಾಯವಾಗಿ ಸಿಕ್ಕಿದೆ. ಈತನಾದರೋ ತಪ್ಪಾದದ್ದೇನೂ ಮಾಡಲಿಲ್ಲ,” ಎಂದನು.
42ಬಳಿಕ ಅವನು, “ಯೇಸುವೇ, ನೀವು ನಿಮ್ಮ ರಾಜ್ಯದಲ್ಲಿ ಬರುವಾಗ ನನ್ನನ್ನು ನೆನಪುಮಾಡಿಕೊಳ್ಳಿರಿ,” ಎಂದನು.
43ಆಗ ಯೇಸು ಅವನಿಗೆ, “ಈ ದಿನವೇ ನೀನು ನನ್ನ ಸಂಗಡ ಪರದೈಸಿನಲ್ಲಿರುವೆ#23:43 ಪರದೈಸ ಅಂದರೆ ಆನಂದದ ಪರಮ ಸ್ಥಳ ಎಂದು ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.
ಯೇಸುವಿನ ಮರಣ
44ಆಗ ಸುಮಾರು ಮಧ್ಯಾಹ್ನವಾಗಿತ್ತು, ಆ ಹೊತ್ತಿನಿಂದ ಮೂರು ಗಂಟೆಯವರೆಗೆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು. 45ಸೂರ್ಯನು ಕಳೆಗುಂದಿದನು ಮತ್ತು ದೇವಾಲಯದ ತೆರೆಯು ಹರಿದು ಎರಡು ಭಾಗವಾಯಿತು. 46ಯೇಸು ಮಹಾಧ್ವನಿಯಿಂದ, “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗಳಲ್ಲಿ ಒಪ್ಪಿಸುತ್ತೇನೆ,”#23:46 ಕೀರ್ತನೆ 31:5 ಎಂದು ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು.
47ಆಗ ಶತಾಧಿಪತಿಯು, ನಡೆದದ್ದನ್ನು ಕಂಡು, “ಈತನು ನೀತಿವಂತನೇ ಸರಿ,” ಎಂದು ಹೇಳಿ ದೇವರನ್ನು ಮಹಿಮೆಪಡಿಸಿದನು. 48ಆ ದೃಶ್ಯವನ್ನು ಕಾಣಲು ಬಂದ ಜನರು ನಡೆದ ಘಟನೆಗಳನ್ನು ಕಂಡು, ತಮ್ಮ ಎದೆಗಳನ್ನು ಬಡಿದುಕೊಂಡು ಹಿಂದಿರುಗಿ ಹೋದರು. 49ಯೇಸುವಿಗೆ ಪರಿಚಯವಿದ್ದವರೆಲ್ಲರೂ ಗಲಿಲಾಯದಿಂದ ಅವರನ್ನು ಹಿಂಬಾಲಿಸಿದ ಸ್ತ್ರೀಯರೂ ದೂರದಲ್ಲಿ ನಿಂತು ಇವುಗಳನ್ನು ನೋಡುತ್ತಿದ್ದರು.
ಯೇಸುವನ್ನು ಸಮಾಧಿಯಲ್ಲಿ ಇಟ್ಟಿದ್ದು
50ಯೋಸೇಫನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು, ಇವನು ಆಲೋಚನಾ ಸಭೆಯವನೂ ಒಳ್ಳೆಯವನೂ ಮತ್ತು ನೀತಿವಂತನೂ ಆಗಿದ್ದನು. 51ಇವನು ಅವರ ತೀರ್ಮಾನಕ್ಕೂ ಕೃತ್ಯಕ್ಕೂ ಒಪ್ಪಿಕೊಂಡಿರಲಿಲ್ಲ. ಇವನು ಯೆಹೂದ್ಯರ ಪಟ್ಟಣವಾದ ಅರಿಮಥಾಯದವನೂ ದೇವರ ರಾಜ್ಯಕ್ಕಾಗಿ ಎದುರುನೋಡುವವನೂ ಆಗಿದ್ದನು. 52ಇವನು ಪಿಲಾತನ ಬಳಿಗೆ ಹೋಗಿ, ಯೇಸುವಿನ ದೇಹವನ್ನು ಕೊಡಲು ಬೇಡಿಕೊಂಡನು. 53ತರುವಾಯ ಇವನು ಶರೀರವನ್ನು ಕೆಳಗೆ ಇಳಿಸಿ, ನಾರುಬಟ್ಟೆಯಲ್ಲಿ ಸುತ್ತಿ, ಬಂಡೆಯಲ್ಲಿ ಕೊರೆದಿದ್ದ ಸಮಾಧಿಯಲ್ಲಿ ಇಟ್ಟನು, ಅದರಲ್ಲಿ ಅದುವರೆಗೆ ಯಾರನ್ನೂ ಇಟ್ಟಿರಲಿಲ್ಲ. 54ಅಂದು ಸಿದ್ಧತೆಯ ದಿನವಾಗಿತ್ತು.#23:54 ಸಬ್ಬತ್ ದಿನ ಶನಿವಾರವಾಗಿತ್ತು, ಆದರೆ ಸಿದ್ಧತೆಯ ದಿನ ಶುಕ್ರವಾರವಾಗಿತ್ತು ಸಬ್ಬತ್ ದಿನ ಪ್ರಾರಂಭವಾಗಲಿತ್ತು.
55ಗಲಿಲಾಯದಿಂದ ಯೇಸುವಿನೊಂದಿಗೆ ಬಂದ ಸ್ತ್ರೀಯರು ಅರಿಮಥಾಯದ ಯೋಸೇಫನೊಂದಿಗೆ ಹೋಗಿ, ಸಮಾಧಿಯನ್ನೂ ದೇಹವನ್ನು ಅದರಲ್ಲಿಟ್ಟ ರೀತಿಯನ್ನೂ ನೋಡಿದರು. 56ಅವರು ಮನೆಗೆ ಹಿಂತಿರುಗಿ ಪರಿಮಳ ದ್ರವ್ಯವನ್ನೂ ಸುಗಂಧ ತೈಲವನ್ನೂ ಸಿದ್ಧಪಡಿಸಿಕೊಂಡರು; ಆದರೆ ಮೋಶೆಯ ಆಜ್ಞಾನುಸಾರವಾಗಿ ಸಬ್ಬತ್ ದಿನದಲ್ಲಿ ವಿಶ್ರಮಿಸಿಕೊಂಡರು.
Цяпер абрана:
ಲೂಕ 23: KSB
Пазнака
Падзяліцца
Капіяваць
Хочаце, каб вашыя адзнакі былі захаваны на ўсіх вашых прыладах? Зарэгіструйцеся або ўвайдзіце
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.