ಆದಿಕಾಂಡ 19
19
ದೇವರು ಸೊದೋಮ್ ಗೊಮೋರ ಪಟ್ಟಣಗಳನ್ನು ನಾಶಮಾಡಿ ಲೋಟನನ್ನು ತಪ್ಪಿಸಿದ್ದು
1ಆ ದೂತರಿಬ್ಬರು ಸಾಯಂಕಾಲದಲ್ಲಿ ಸೊದೋವಿುಗೆ ಬಂದಾಗ ಲೋಟನು ಸೊದೋವಿುನ ಊರುಬಾಗಲಲ್ಲಿ ಕೂತುಕೊಂಡಿದ್ದನು. ಅವನು ಅವರನ್ನು ಕಂಡಾಗ ಎದ್ದು ಎದುರುಗೊಂಡು ಬೊಗ್ಗಿ ನಮಸ್ಕರಿಸಿ - 2ಸ್ವಾವಿುಗಳೇ, ನಿಮ್ಮ ದಾಸನ ಮನೆಗೆ ಬಂದು ಇಳುಕೊಂಡು ಕಾಲುಗಳನ್ನು ತೊಳಕೊಳ್ಳಿರಿ; ಬೆಳಿಗ್ಗೆ ನಿಮ್ಮ ಮಾರ್ಗ ಹಿಡುಕೊಂಡು ಹೋಗಬಹುದು ಅಂದನು. ಅವರು - ಹಾಗಲ್ಲ, ಬೀದಿಯಲ್ಲೇ ರಾತ್ರಿ ಕಳೆಯುತ್ತೇವೆ, 3ಅನ್ನಲು ಅವನು ಅವರನ್ನು ಬಹಳ ಬಲವಂತಮಾಡಿದ್ದರಿಂದ ಅವರು ಅವನ ಬಳಿಯಲ್ಲಿ ಇಳುಕೊಳ್ಳುವದಕ್ಕೆ ಒಪ್ಪಿದರು. ಅವರು ಮನೆಗೆ ಬಂದಾಗ ಅವನು ಹುಳಿಯಿಲ್ಲದ ರೊಟ್ಟಿಗಳನ್ನು ಸುಡಿಸಿ ಔತಣವನ್ನು ಮಾಡಿಸಲು ಅವರು ಊಟಮಾಡಿದರು.
4ಅವರು ಮಲಗುವದಕ್ಕಿಂತ ಮುಂಚೆ ಹುಡುಗರು ಮುದುಕರು ಸಹಿತವಾಗಿ ಸೊದೋವಿುನ ಪಟ್ಟಣದವರೆಲ್ಲರೂ ಒಗ್ಗಟ್ಟಾಗಿ ಮನೆಯನ್ನು ಸುತ್ತಿಕೊಂಡು ಲೋಟನಿಗೆ - 5ಈ ರಾತ್ರಿ ನಿನ್ನ ಬಳಿಗೆ ಬಂದ ಮನುಷ್ಯರು ಎಲ್ಲಿ? ಅವರನ್ನು ಹೊರಕ್ಕೆ ತೆಗೆದುಕೊಂಡು ಬಾ; ಅವರೊಡನೆ ನಮಗೆ ಸಂಗಮವಾಗಬೇಕೆಂದು ಕೂಗಿ ಹೇಳಿದರು. 6ಲೋಟನು ಅವರ ಬಳಿಗೆ ಹೊರಕ್ಕೆ ಬಂದು ತನ್ನ ಹಿಂದೆ ಕದಹಾಕಿ - 7ಅಣ್ಣಂದಿರೇ, ಈ ಪಾತಕವನ್ನು ಮಾಡಬೇಡಿರಿ. ಕೇಳಿರಿ, 8ನನಗೆ ಪುರುಷರನ್ನರಿಯದ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ; ಅವರನ್ನಾದರೂ ನಿಮಗೆ ತಂದು ಒಪ್ಪಿಸೇನು; ಮನಸ್ಸು ಬಂದಂತೆ ಮಾಡಬಹುದು; ಆದರೆ ಆ ಮನುಷ್ಯರು ನನ್ನ ಆಶ್ರಯಕ್ಕೆ ಬಂದವರು; ಅವರಿಗೆ ಏನೂ ಮಾಡಕೂಡದು ಎಂದು ಹೇಳಲು ಅವರು - 9ದಾರಿ ಬಿಡು ಎಂದು ಹೇಳಿ - ಇವನು ಯಾರೋ ಒಬ್ಬ ಪರದೇಶಿಯಾಗಿ ಬಂದು ಈಗ ನ್ಯಾಯ ಹೇಳುವವನಾಗಬೇಕೋ; ಆ ಮನುಷ್ಯರಿಗೆ ಕೇಡು ಮಾಡುವದಕ್ಕಿಂತ ಹೆಚ್ಚಾಗಿ ನಿನಗೇ ಕೇಡು ಮಾಡುತ್ತೇವೆ ಎಂದು ಹೇಳಿ ಲೋಟನ ಮೇಲೆ ಬಿದ್ದು ಬಹಳವಾಗಿ ಇರುಕಿಸಿ ಕದವನ್ನು ಒಡೆದು ಬಿಡಬೇಕೆಂದಿದ್ದರು. 10ಆದರೆ ಒಳಗಿದ್ದ ಆ ಮನುಷ್ಯರು ಕೈಚಾಚಿ ಲೋಟನನ್ನು ತಮ್ಮ ಕಡೆಗೆ ಮನೆಯೊಳಗೆ ಸೇರಿಸಿ ಕದಮುಚ್ಚಿದರು. 11ಇದಲ್ಲದೆ ಅವರು ಮನೆಯ ಹೊರಗಿದ್ದ ಮನುಷ್ಯರಿಗೆ ಚಿಕ್ಕವರಿಗೂ ದೊಡ್ಡವರಿಗೂ ಕೂಡ ಕಣ್ಣು ಮೊಬ್ಬಾಗುವಂತೆ ಮಾಡಿದ್ದರಿಂದ ಇವರು ಬಾಗಿಲು ಯಾವದೆಂದು ತಿಳಿಯದೆ ಬೇಸರಗೊಂಡರು.
12ಆಗ ಆ ದೂತರು ಲೋಟನಿಗೆ - ಇಲ್ಲಿ ನಿನಗೆ ಇನ್ನಾರಿದ್ದಾರೆ? ಅಳಿಯಂದಿರನ್ನೂ ಗಂಡು ಹೆಣ್ಣು ಮಕ್ಕಳನ್ನೂ ಪಟ್ಟಣದಲ್ಲಿ ನಿನಗಿರುವ ಬೇರೆ ಎಲ್ಲರನ್ನೂ ಊರಹೊರಕ್ಕೆ ಕರೆದುಕೊಂಡು ಬಾ. 13ನಾವು ಈ ಸ್ಥಳವನ್ನು ನಾಶಮಾಡುವದಕ್ಕೆ ಬಂದವರು. ಇಲ್ಲಿಯವರ ವಿಷಯವಾಗಿ ಬಲು ದೊಡ್ಡ ಮೊರೆಯು ಯೆಹೋವನಿಗೆ ಮುಟ್ಟಿದ್ದರಿಂದ ಇವರನ್ನು ನಾಶಮಾಡುವದಕ್ಕಾಗಿ ಆತನು ನಮ್ಮನ್ನು ಕಳುಹಿಸಿದ್ದಾನೆ ಎಂದು ಹೇಳಿದರು. 14ಆಗ ಲೋಟನು ಹೊರಕ್ಕೆ ಹೋಗಿ ತನ್ನ ಹೆಣ್ಣು ಮಕ್ಕಳನ್ನು ಗೊತ್ತುಮಾಡಿಕೊಂಡಿದ್ದ ಅಳಿಯಂದಿರಿಗೆ ಈ ಸಂಗತಿಯನ್ನು ತಿಳಿಸಿ - ನೀವೆದ್ದು ಈ ಸ್ಥಳವನ್ನು ಬಿಟ್ಟು ಹೋಗಿರಿ, ಯೆಹೋವನು ಈ ಊರನ್ನು ನಾಶಮಾಡುತ್ತಾನೆ ಎಂದು ಹೇಳಿದನು. ಆದರೆ ಅವನು ಅವರಿಗೆ ಗೇಲಿಮಾಡುವವನಾಗಿ ಕಾಣಿಸಿದನು. 15ಹೊತ್ತು ಮೂಡುವದಕ್ಕೆ ಮುಂಚೆ ಆ ದೂತರು ಲೋಟನಿಗೆ - ನೀನೆದ್ದು ಇಲ್ಲಿರುವ ನಿನ್ನ ಹೆಂಡತಿಯನ್ನೂ ನಿನ್ನ ಇಬ್ಬರು ಹೆಣ್ಣು ಮಕ್ಕಳನ್ನೂ ಬೇಗ ಕರಕೊಂಡು ಹೋಗು; ಊರಿಗೆ ಉಂಟಾಗುವ ದಂಡನೆಯಿಂದ ನಿನಗೂ ನಾಶವುಂಟಾದೀತು ಎಂದು ಹೇಳಿ ತ್ವರೆಪಡಿಸಿದರು. 16ಅವನು ತಡಮಾಡಲು ಯೆಹೋವನು ಅವನನ್ನು ಕನಿಕರಿಸಿದ್ದರಿಂದ ಆ ಮನುಷ್ಯರು ಅವನನ್ನೂ ಅವನ ಹೆಂಡತಿ ಮಕ್ಕಳನ್ನೂ ಕೈಹಿಡಿದು ಹೊರಗೆ ತಂದು ಊರಾಚೆಗೆ ಬಿಟ್ಟರು. ಹೊರಗೆ ತಂದ ಮೇಲೆ ಆತನು - 17ಓಡಿಹೋಗು, ಪ್ರಾಣವನ್ನು ಉಳಿಸಿಕೋ; ಹಿಂದಕ್ಕೆ ನೋಡಬೇಡ; ಈ ಪ್ರದೇಶದೊಳಗೆ ಎಲ್ಲಿಯೂ ನಿಲ್ಲದೆ ಬೆಟ್ಟದ ಸೀಮೆಗೆ ಓಡಿಹೋಗು; ನಿನಗೂ ನಾಶವುಂಟಾದೀತು ಅಂದನು. 18ಅದಕ್ಕೆ ಲೋಟನು - ಸ್ವಾವಿು, ಅದು ನನ್ನಿಂದಾಗದು; 19ನೀನು ನಿನ್ನ ದಾಸನ ಮೇಲೆ ದಯವಿಟ್ಟು ನನ್ನ ಪ್ರಾಣವನ್ನು ಉಳಿಸಿದ್ದು ಬಹು ವಿಶೇಷವಾದ ಉಪಕಾರವೇ; ಆದರೆ ಬೆಟ್ಟಕ್ಕೆ ಓಡಿಹೋಗಲಾರೆನು: ನಾನು ಹೋಗುತ್ತಿರುವಾಗ ಆ ವಿಪತ್ತು ನನಗೂ ಉಂಟಾಗಿ ಸತ್ತೇನು. 20ಅಗೋ, ಅಲ್ಲಿ ಒಂದು ಊರು ಹತ್ತಿರವಾಗಿದೆ; ಅದು ಸಣ್ಣದು; ಅಲ್ಲಿಗಾದರೂ ಹೋಗುವದಕ್ಕೆ ಅಪ್ಪಣೆಯಾದರೆ ನನ್ನ ಪ್ರಾಣ ಉಳಿಯುವದು; ಆ ಊರು ಸಣ್ಣದಲ್ಲವೇ ಅಂದನು. 21ಅದಕ್ಕಾತನು - ಈ ವಿಷಯದಲ್ಲಿಯೂ ನಿನಗೆ ಅನುಗ್ರಹಮಾಡಿದ್ದೇನೆ, ನೋಡು; ನೀನು ಹೇಳಿದ ಊರನ್ನು ನಾನು ಕೆಡಹುವದಿಲ್ಲ. 22ಬೇಗ ಅಲ್ಲಿಗೆ ಹೋಗಿ ತಪ್ಪಿಸಿಕೋ; ನೀನು ಅಲ್ಲಿಗೆ ಮುಟ್ಟುವ ತನಕ ನಾನೇನೂ ಮಾಡುವದಕ್ಕಾಗುವದಿಲ್ಲ ಅಂದನು. ಇದರಿಂದ ಆ ಊರಿಗೆ ಚೋಗರ್#19.22 ಸೋಗರ್ ಅಂದರೆ ಸಣ್ಣ ಊರು. ಎಂದು ಹೆಸರಾಯಿತು. 23ಲೋಟನು ಚೋಗರಿಗೆ ಮುಟ್ಟುವಷ್ಟರಲ್ಲಿ ಸೂರ್ಯನು ಮೂಡಿದನು. 24ಆಗ ಯೆಹೋವನು ಸೊದೋಮ್ ಗೊಮೋರಗಳ ಮೇಲೆ 25ಆಕಾಶದಿಂದ#19.25 ಮೂಲ: ಯೆಹೋವನ ಕಡೆಯಿಂದ, ಆಕಾಶದಿಂದ. ಅಗ್ನಿಗಂಧಕಗಳನ್ನು ಸುರಿಸಿ ಆ ಪಟ್ಟಣಗಳನ್ನೂ ಸುತ್ತಲಿರುವ ಸೀಮೆಯೆಲ್ಲವನ್ನೂ ಊರುಗಳಲ್ಲಿದ್ದ ಜನರೆಲ್ಲರನ್ನೂ ಭೂವಿುಯ ಮೇಲಣ ಎಲ್ಲಾ ಬೆಳೆಯನ್ನೂ ಹಾಳುಮಾಡಿದನು. 26ಲೋಟನ ಹೆಂಡತಿ ಅವನ ಹಿಂದೆ ಬರುತ್ತಿರುವಾಗ ಹಿಂದಿರುಗಿ ನೋಡಿದ್ದರಿಂದ ಉಪ್ಪಿನ ಕಂಬವಾದಳು.
27ಇತ್ತಲಾಗಿ ಅಬ್ರಹಾಮನು ಬೆಳಿಗ್ಗೆ ಎದ್ದು ತಾನು ಯೆಹೋವನ ಸನ್ನಿಧಿಯಲ್ಲಿ ನಿಂತಿದ್ದ ಸ್ಥಳಕ್ಕೆ ತಿರಿಗಿ ಬಂದು 28ಸೊದೋಮ್ ಗೊಮೋರಗಳ ಕಡೆಗೂ ಆ ಎಲ್ಲಾ ಸೀಮೆಯ ಕಡೆಗೂ ನೋಡಿದಾಗ, ಅಯ್ಯೋ, ಆ ಪ್ರದೇಶದಿಂದ ಹೊಗೆಯು ಆವಿಗೆಯ ಹೊಗೆಯಂತೆ ಏರಿತು. 29ದೇವರು ಆ ಸೀಮೆಯ ಪಟ್ಟಣಗಳನ್ನು ನಾಶಮಾಡಿದಾಗ ಲೋಟನು ವಾಸವಾಗಿದ್ದ ಊರುಗಳನ್ನು ಕೆಡವಿದರೂ ಅಬ್ರಹಾಮನನ್ನು ನೆನಸಿ ಲೋಟನನ್ನು ತಪ್ಪಿಸಿ ಕಾಪಾಡಿದನು.
ಮೋವಾಬ್ಯರೂ ಅಮ್ಮೋನಿಯರೂ ಲೋಟನಿಂದ ಉತ್ಪತ್ತಿಯಾದದ್ದು
30ಲೋಟನು ಚೋಗರಿನಲ್ಲಿರುವದಕ್ಕೆ ಅಂಜಿ ತನ್ನಿಬ್ಬರು ಹೆಣ್ಣು ಮಕ್ಕಳನ್ನು ಕರಕೊಂಡು ಬೆಟ್ಟವನ್ನು ಹತ್ತಿ ಅಲ್ಲಿ ವಾಸಮಾಡಿದನು. ಅವನೂ ಅವನ ಇಬ್ಬರು ಹೆಣ್ಣುಮಕ್ಕಳೂ ಒಂದು ಗವಿಯಲ್ಲಿ ವಾಸಿಸಿದರು. 31ಹೀಗಿರುವಲ್ಲಿ ಹಿರೀಮಗಳು ತನ್ನ ತಂಗಿಗೆ - ನಮ್ಮ ತಂದೆ ಮುದುಕನಷ್ಟೆ; ಸರ್ವಲೋಕದ ಪದ್ಧತಿಯ ಮೇರೆಗೆ ನಮ್ಮನ್ನು ಮದುವೆ ಮಾಡಿಕೊಳ್ಳುವ ಪುರುಷರು ಎಲ್ಲಿಯೂ ಇಲ್ಲ; 32ನಾವು ತಂದೆಗೆ ದ್ರಾಕ್ಷಾರಸವನ್ನು ಕುಡಿಸಿ, ಅವನ ಸಂಗಡ ಮಲಗಿಕೊಂಡು ತಂದೆಯಿಂದ ಸಂತಾನವನ್ನು ಪಡಕೊಳ್ಳೋಣ ಎಂದು ಹೇಳಿದಳು. 33ಆ ರಾತ್ರಿ ಅವರು ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದಾಗ ಹಿರೀ ಮಗಳು ಅವನ ಸಂಗಡ ಮಲಗಿಕೊಂಡಳು; ಯಾವಾಗ ಮಲಗಿಕೊಂಡಳೋ ಯಾವಾಗ ಎದ್ದು ಹೋದಳೋ ಅವನಿಗೇನೂ ತಿಳಿಯಲಿಲ್ಲ. 34ಮಾರಣೇ ದಿನ ಹಿರಿಯವಳು ಕಿರಿಯವಳಿಗೆ - ನಿನ್ನೆಯ ರಾತ್ರಿ ನಾನೇ ಅಪ್ಪನ ಸಂಗಡ ಮಲಗಿಕೊಂಡೆನು; ಈ ರಾತ್ರಿಯೂ ಅವನಿಗೆ ದ್ರಾಕ್ಷಾರಸವನ್ನು ಕುಡಿಸೋಣ; ಆಮೇಲೆ ನೀನು ಅವನ ಸಂಗಡ ಮಲಗಿಕೋ; ಹೀಗೆ ನಮ್ಮ ತಂದೆಯಿಂದ ಸಂತಾನವನ್ನು ಪಡೆದುಕೊಳ್ಳೋಣ ಎಂದು ಹೇಳಿದಳು. 35ಆ ರಾತ್ರಿಯೂ ಅವರು ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದ ಮೇಲೆ ಕಿರೀ ಮಗಳು ಅವನ ಸಂಗಡ ಮಲಗಿಕೊಂಡಳು; ಅವಳು ಯಾವಾಗ ಮಲಗಿದಳೋ ಯಾವಾಗ ಎದ್ದು ಹೋದಳೋ ಅವನಿಗೇನೂ ತಿಳಿಯಲಿಲ್ಲ. 36ಹೀಗೆ ಲೋಟನ ಇಬ್ಬರು ಹೆಣ್ಣುಮಕ್ಕಳು ತಂದೆಯಿಂದ ಬಸುರಾದರು. 37ಹಿರಿಯವಳು ಗಂಡು ಮಗುವನ್ನು ಹೆತ್ತು ಅದಕ್ಕೆ ಮೋವಾಬ್#19.37 ಮೋವಾಬ್ ಅಂದರೆ ತಂದೆಯಿಂದ ಉಂಟಾದವನು. ಎಂದು ಹೆಸರಿಟ್ಟಳು. ಇಂದಿನವರೆಗೂ ಇರುವ ಮೋವಾಬ್ಯರಿಗೆ ಅವನೇ ಮೂಲ ಪುರುಷನು. 38ಕಿರೀ ಮಗಳು ಗಂಡು ಮಗುವನ್ನು ಹೆತ್ತು ಅದಕ್ಕೆ ಬೆನವ್ಮಿು#19.38 ಬೆನವ್ಮಿು ಅಂದರೆ ರಕ್ತ ಸಂಬಂಧಿಕನ ಮಗ. ಎಂದು ಹೆಸರಿಟ್ಟಳು. ಇಂದಿನವರೆಗೂ ಇರುವ ಅಮ್ಮೋನಿಯರಿಗೆ ಇವನೇ ಮೂಲ ಪುರುಷನು.
Currently Selected:
ಆದಿಕಾಂಡ 19: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.