ಆದಿಕಾಂಡ 28
28
1ಆಗ ಇಸಾಕನು ಯಾಕೋಬನನ್ನು ಕರೆದು ಅವನಿಗೆ - ನೀನು ಕಾನಾನ್ಯರ ಹೆಣ್ಣನ್ನು ಮದುವೆಮಾಡಿಕೊಳ್ಳಬೇಡ; 2ಪದ್ದನ್ಅರಾಮ್ ದೇಶದಲ್ಲಿರುವ ನಿನ್ನ ತಾಯಿಯ ತಂದೆಯಾದ ಬೆತೂವೇಲನ ಮನೆಗೆ ಹೊರಟುಹೋಗಿ ಅಲ್ಲಿ ನಿನ್ನ ಸೋದರ ಮಾವನಾದ ಲಾಬಾನನ ಹೆಣ್ಣು ಮಕ್ಕಳಲ್ಲಿ ಒಬ್ಬಳನ್ನು ಮದುವೆಮಾಡಿಕೋ ಎಂದು ಅಪ್ಪಣೆಕೊಟ್ಟು - 3ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಿ ನಿನಗೆ ಬಹಳ ಸಂತತಿಯನ್ನು ಕೊಟ್ಟು ನಿನ್ನಿಂದ ಅನೇಕ ಜನಾಂಗಗಳು ಹುಟ್ಟುವಂತೆ ಅನುಗ್ರಹಿಸಲಿ; 4ಆತನು ಅಬ್ರಹಾಮನಿಗೆ ಕೊಟ್ಟ ಆಶೀರ್ವಾದವನ್ನು ನಿನಗೂ ನಿನ್ನ ಸಂತತಿಗೂ ಕೊಟ್ಟು ತಾನು ಅಬ್ರಹಾಮನಿಗೆ ವಾಗ್ದಾನ ಮಾಡಿದ್ದೂ ನೀನು ಪ್ರವಾಸವಾಗಿರುವಂಥದೂ ಆಗಿರುವ ಈ ದೇಶವನ್ನು ನೀನು ಬಾಧ್ಯನಾಗಿ ಹೊಂದುವಂತೆ ಮಾಡಲಿ ಎಂದು ಹೇಳಿ ಆಶೀರ್ವದಿಸಿ ಕಳುಹಿಸಿಬಿಟ್ಟನು. 5ಯಾಕೋಬನು ಪದ್ದನ್ಅರಾವಿುಗೆ ಹೊರಟು ಅರಾಮ್ಯನಾದ ಬೆತೂವೇಲನ ಮಗನಾಗಿಯೂ ಯಾಕೋಬನಿಗೂ ಏಸಾವನಿಗೂ ತಾಯಿಯಾದ ರೆಬೆಕ್ಕಳ ಅಣ್ಣನಾಗಿಯೂ ಇದ್ದ ಲಾಬಾನನ ಬಳಿಗೆ ಹೋದನು.
6ಇಸಾಕನು ಯಾಕೋಬನನ್ನು ಆಶೀರ್ವದಿಸಿ ಪದ್ದನ್ಅರಾವಿುನಲ್ಲಿ ಹೆಣ್ಣನ್ನು ತೆಗೆದುಕೊಳ್ಳುವದಕ್ಕೆ ಕಳುಹಿಸಿದ್ದನ್ನೂ ಅವನು ಯಾಕೋಬನನ್ನು ಆಶೀರ್ವದಿಸುವಾಗ ಅವನಿಗೆ - ನೀನು ಕಾನಾನ್ಯರ ಹೆಣ್ಣನ್ನು ತೆಗೆದುಕೊಳ್ಳಬೇಡವೆಂದು ಅಪ್ಪಣೆಕೊಟ್ಟದ್ದನ್ನೂ 7ಯಾಕೋಬನು ತನ್ನ ತಂದೆತಾಯಿಗಳು ಹೇಳಿದಂತೆ ಪದ್ದನ್ಅರಾವಿುಗೆ ಹೋದದ್ದನ್ನೂ ಏಸಾವನು ನೋಡಿದಾಗ 8ಕಾನಾನ್ಯರ ಹೆಣ್ಣುಮಕ್ಕಳು ತನ್ನ ತಂದೆಯಾದ ಇಸಾಕನಿಗೆ ಇಷ್ಟವಿಲ್ಲವೆಂದು ತಿಳುಕೊಂಡು 9ಇಷ್ಮಾಯೇಲನ ಬಳಿಗೆ ಹೋಗಿ ಅಬ್ರಹಾಮನ ಮಗನಾದ ಇಷ್ಮಾಯೇಲನ ಮಗಳೂ ನೆಬಾಯೋತನ ತಂಗಿಯೂ ಆಗಿದ್ದ ಮಹಲತ್ ಎಂಬಾಕೆಯನ್ನು ಮದುವೆ ಮಾಡಿಕೊಂಡು ತನ್ನ ಹೆಂಡರಲ್ಲಿ ಸೇರಿಸಿದನು.
ಯಾಕೋಬನು ಬೇತೇಲಿನಲ್ಲಿ ಕನಸುಕಂಡು ಹರಕೆಮಾಡಿಕೊಂಡದ್ದು
10ಯಾಕೋಬನು ಖಾರಾನಿಗೆ ಹೋಗಬೇಕೆಂದು ಬೇರ್ಷೆಬದಿಂದ ಹೊರಟನು. 11ಅವನು ಹೋಗುತ್ತಿರಲು ಒಂದು ಸ್ಥಳಕ್ಕೆ ಸೇರಿದಾಗ ಹೊತ್ತು ಮುಣುಗಿದ್ದರಿಂದ ಆ ರಾತ್ರಿ ಅಲ್ಲಿಯೇ ಇಳಿದುಕೊಂಡನು. ಅವನು ಅಲ್ಲಿದ್ದ ಕಲ್ಲುಗಳಲ್ಲಿ ಒಂದು ಕಲ್ಲನ್ನು ತಲೆಗಿಂಬಾಗಿ ಇಟ್ಟುಕೊಂಡು ಆ ಸ್ಥಳದಲ್ಲಿ ಮಲಗಿಕೊಂಡನು. 12ಆ ರಾತ್ರಿ ಅವನು ಕನಸುಕಂಡನು. ಆ ಕನಸಿನಲ್ಲಿ ಒಂದು ನಿಚ್ಚಣಿಗೆ ನೆಲದ ಮೇಲೆ ನಿಂತಿತ್ತು; ಅದರ ತುದಿ ಆಕಾಶವನ್ನು ಮುಟ್ಟಿತ್ತು; ಅದರ ಮೇಲೆ ದೇವದೂತರು ಹತ್ತುತ್ತಾ ಇಳಿಯುತ್ತಾ ಇದ್ದರು. 13ಇದಲ್ಲದೆ ಯೆಹೋವನು ಅವನ#28.13 ಅಥವಾ: ಅದರ ಮೇಲೆ. ಬಳಿಯಲ್ಲಿ ನಿಂತು - ನಾನು ನಿನ್ನ ತಂದೆಯಾದ ಅಬ್ರಹಾಮನ ದೇವರೂ ಇಸಾಕನ ದೇವರೂ ಆಗಿರುವ ಯೆಹೋವನು. ನೀನು ಮಲಗಿಕೊಂಡಿರುವ ಈ ದೇಶವನ್ನು ನಿನಗೂ ನಿನ್ನ ಸಂತತಿಗೂ ಕೊಡುತ್ತೇನೆ. 14ನಿನ್ನ ಸಂತತಿಯು ಭೂವಿುಯ ಧೂಳಿನಂತೆ ಅಸಂಖ್ಯವಾಗುವದು; ನೀನು ಪೂರ್ವಪಶ್ಚಿಮದಕ್ಷಿಣೋತ್ತರ ದಿಕ್ಕುಗಳಿಗೆ ಹರಡಿಕೊಳ್ಳುವಿ. ನಿನ್ನ#28.14 ಅಥವಾ: ಭೂವಿುಯ ಎಲ್ಲಾ ಕುಲದವರು ನಿನಗೂ ನಿನ್ನ ಸಂತತಿಗೂ ಇರುವಂಥ ಆಶೀರ್ವಾದವೇ ತಮಗೂ ಆಗಬೇಕೆಂದು ಕೋರುವರು. ಆದಿ. 12.3; 18.18. ಮೂಲಕವೂ ನಿನ್ನ ಸಂತತಿಯ ಮೂಲಕವೂ ಭೂವಿುಯ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವದು. 15ಇದಲ್ಲದೆ ನಾನು ನಿನ್ನ ಸಂಗಡ ಇದ್ದು ನೀನು ಹೋಗುವ ಎಲ್ಲಾ ಸ್ಥಳಗಳಲ್ಲಿ ನಿನ್ನನ್ನು ಕಾಪಾಡಿ ತಿರಿಗಿ ಈ ದೇಶಕ್ಕೆ ಬರಮಾಡುತ್ತೇನೆ. ನಾನು ನಿನಗೆ ಹೇಳಿದ್ದನ್ನೆಲ್ಲಾ ನೆರವೇರಿಸಿದ ಹೊರತು ಬಿಡುವದಿಲ್ಲ ಅಂದನು.
16ಯಾಕೋಬನು ನಿದ್ದೆಯಿಂದ ಎಚ್ಚತ್ತು - ನಿಜವಾಗಿ ಯೆಹೋವನು ಈ ಸ್ಥಳದಲ್ಲಿ ಇದ್ದಾನೆ; 17ಅದು ನನಗೆ ತಿಳಿಯದೆ ಹೋಯಿತು ಅಂದುಕೊಂಡು ಭಯಪಟ್ಟವನಾಗಿ - ಈ ಸ್ಥಳವು ಎಷ್ಟೋ ಭಯಂಕರವಾದದ್ದು; ಇದು ದೇವರ ಮನೆಯೇ ಹೊರತು ಬೇರೆಯಲ್ಲ; ಇದು ಪರಲೋಕದ ಬಾಗಿಲು ಎಂದು ಹೇಳಿದನು. 18ಹೊತ್ತಾರೆ ಅವನು ಎದ್ದಾಗ ತಾನು ತಲೆಗಿಂಬಿಗೆ ಇಟ್ಟುಕೊಂಡಿದ್ದ ಕಲ್ಲನ್ನು ಕಂಬವಾಗಿ ನಿಲ್ಲಿಸಿ ಅದರ ತುದಿಯಲ್ಲಿ ಎಣ್ಣೇ ಹೊಯಿದನು. 19ಆ ಸ್ಥಳಕ್ಕೆ ಬೇತೇಲ್#28.19 ಬೇತೇಲ್ ಅಂದರೆ, ದೇವರ ಮನೆ. ಎಂದು ಹೆಸರಿಟ್ಟನು. ಅಲ್ಲಿರುವ ಊರಿಗೆ ಮೊದಲು ಲೂಜ್ ಎಂದು ಹೆಸರಿತ್ತು. 20ಯಾಕೋಬನು ಅಲ್ಲಿ - ದೇವರು ನನ್ನ ಸಂಗಡ ಇದ್ದು ನಾನು ಹೋಗುವ ಈ ಮಾರ್ಗದಲ್ಲಿ ನನ್ನನ್ನು ಕಾಪಾಡಿ ತಿನ್ನುವದಕ್ಕೆ ಆಹಾರವನ್ನೂ ಉಡುವದಕ್ಕೆ ವಸ್ತ್ರವನ್ನೂ ಕೊಟ್ಟು 21ತಿರಿಗಿ ನನ್ನನ್ನು ತಂದೆಯ ಮನೆಗೆ ಸುರಕ್ಷಿತವಾಗಿ ಬರಮಾಡಿದರೆ ಯೆಹೋವನೇ ನನ್ನ ದೇವರಾಗಿರುವನು. 22ಮತ್ತು ನಾನು ಕಂಬವಾಗಿ ನಿಲ್ಲಿಸಿರುವ ಈ ಕಲ್ಲು ದೇವರ ಮನೆಯಾಗುವದು. ಇದಲ್ಲದೆ ನಿನ್ನಿಂದ ನನಗೆ ಬರುವ ಎಲ್ಲಾ ಆಸ್ತಿಯಲ್ಲಿ ಹತ್ತರಲ್ಲೊಂದು ಪಾಲನ್ನು ನಿನಗೆ ಸಮರ್ಪಿಸುವೆನೆಂಬದಾಗಿ ಮಾತುಕೊಡುತ್ತೇನೆ ಎಂದು ಹರಕೆಮಾಡಿಕೊಂಡನು.
Currently Selected:
ಆದಿಕಾಂಡ 28: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.