YouVersion Logo
Search Icon

ಯೋಹಾನ 10

10
1ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಕುರೀಹಟ್ಟಿಯೊಳಗೆ ಬಾಗಲಿಂದ ಬಾರದೆ ಮತ್ತೆಲ್ಲಿಂದಾದರೂ ಹತ್ತಿಬರುವವನು ಕಳ್ಳನೂ ಸುಲುಕೊಳ್ಳುವವನೂ ಆಗಿದ್ದಾನೆ. 2ಬಾಗಲಿಂದ ಒಳಗೆ ಬರುವವನು ಆ ಕುರಿಗಳ ಕುರುಬನು. 3ಬಾಗಲು ಕಾಯುವವನು ಅವನಿಗೆ ಬಾಗಲನ್ನು ತೆರೆಯುತ್ತಾನೆ, ಕುರಿಗಳು ಅವನ ಸ್ವರಕ್ಕೆ ಕಿವಿಗೊಡುತ್ತವೆ. 4ಅವನು ಸ್ವಂತ ಕುರಿಗಳನ್ನು ಹೆಸರು ಹೇಳಿ ಕರೆದು ಹೊರಗೆ ಬಿಡುತ್ತಾನೆ. ಸ್ವಂತ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ಮೇಲೆ ತಾನು ಅವುಗಳ ಮುಂದೆ ಹೋಗುತ್ತಾನೆ; ಕುರಿಗಳು ಅವನ ಸ್ವರವನ್ನು ತಿಳುಕೊಂಡು ಅವನ ಹಿಂದೆ ಹೋಗುತ್ತವೆ. 5ಅವು ಅನ್ಯರ ಸ್ವರವನ್ನು ತಿಳಿಯುವದಿಲ್ಲ; ಅನ್ಯನ ಹಿಂದೆ ಹೋಗದೆ ಅವನ ಬಳಿಯಿಂದ ಓಡಿಹೋಗುತ್ತವೆ. 6ಈ ಉಪಮಾನವನ್ನು ಯೇಸು ಅವರಿಗೆ ಹೇಳಿದನು; ಆದರೂ ಆತನ ಮಾತಿನ ಅರ್ಥವನ್ನು ಅವರು ಗ್ರಹಿಸಲಿಲ್ಲ.
7ಆದಕಾರಣ ಯೇಸು ಮತ್ತೂ ಅವರಿಗೆ - ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಕುರಿಗಳಿಗೆ ನಾನೇ ಬಾಗಲಾಗಿದ್ದೇನೆ. 8ನನಗಿಂತ ಮುಂಚೆ ಬಂದವರೆಲ್ಲರು ಕಳ್ಳರೂ ಸುಲುಕೊಳ್ಳುವವರೂ ಆಗಿದ್ದಾರೆ; ಆದರೆ ಕುರಿಗಳು ಅವರಿಗೆ ಕಿವಿಗೊಡಲಿಲ್ಲ. 9ನಾನೇ ಆ ಬಾಗಲು; ನನ್ನ ಮುಖಾಂತರವಾಗಿ ಯಾವನಾದರೂ ಒಳಗೆ ಹೋದರೆ ಸುರಕ್ಷಿತವಾಗಿದ್ದು ಒಳಗೆ ಹೋಗುವನು, ಹೊರಗೆ ಬರುವನು, ಮೇವನ್ನು ಕಂಡುಕೊಳ್ಳುವನು. 10ಕಳ್ಳನು ಕದ್ದುಕೊಳ್ಳುವದಕ್ಕೂ ಕೊಯ್ಯುವದಕ್ಕೂ ಹಾಳುಮಾಡುವದಕ್ಕೂ ಬರುತ್ತಾನೆ ಹೊರತು ಮತ್ತಾವದಕ್ಕೂ ಬರುವದಿಲ್ಲ; ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿ ಇರಬೇಕೆಂತಲೂ ಬಂದೆನು.
11ನಾನೇ ಒಳ್ಳೇ ಕುರುಬನು; ಒಳ್ಳೇ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ. 12ಕೂಲಿಯಾಳು ಕುರುಬನೂ ಕುರಿಗಳ ಒಡೆಯನೂ ಆಗಿರದೆ ತೋಳ ಬರುವದನ್ನು ಕಾಣುತ್ತಲೇ ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ; ತೋಳವು ಅವುಗಳನ್ನು ಹಿಡುಕೊಂಡು ಹಿಂಡನ್ನು ಚದರಿಸುತ್ತದೆ. 13ಅವನು ಕೂಲಿಯಾಳು; ಕುರಿಗಳ ಚಿಂತೆ ಅವನಿಗಿಲ್ಲ. 14,15ನಾನೇ ಒಳ್ಳೇ ಕುರುಬನು; ತಂದೆಯು ನನ್ನನ್ನು ನಾನು ತಂದೆಯನ್ನು ತಿಳಿದಿರುವಂತೆಯೇ ನಾನು ನನ್ನ ಕುರಿಗಳನ್ನು ತಿಳಿದಿದ್ದೇನೆ; ನನ್ನ ಕುರಿಗಳು ನನ್ನನ್ನು ತಿಳಿದವೆ; ಮತ್ತು ಕುರಿಗಳಿಗೋಸ್ಕರ ನನ್ನ ಪ್ರಾಣವನ್ನು ಕೊಡುತ್ತೇನೆ. 16ಇದಲ್ಲದೆ ಈ ಹಟ್ಟಿಗೆ ಸೇರದಿರುವ ಇನ್ನು ಬೇರೆ ಕುರಿಗಳು ನನಗೆ ಅವೆ, ಅವುಗಳನ್ನೂ ನಾನು ತರಬೇಕು; ಅವು ನನ್ನ ಸ್ವರಕ್ಕೆ ಕಿವಿಗೊಡುವವು; ಆಗ ಒಂದೇ ಹಿಂಡು ಆಗುವದು, ಒಬ್ಬನೇ ಕುರುಬನಿರುವನು. 17ನಾನು ತಿರಿಗಿ ಪಡಕೊಳ್ಳುತ್ತೇನೆಂದು ನನ್ನ ಪ್ರಾಣವನ್ನು ಕೊಡುತ್ತೇನೆ; ಅದರ ನಿವಿುತ್ತವಾಗಿ ತಂದೆಯು ನನ್ನನ್ನು ಪ್ರೀತಿಸುತ್ತಾನೆ. 18ನನ್ನ ಪ್ರಾಣವನ್ನು ಯಾರೂ ನನ್ನಿಂದ ತೆಗೆಯರು, ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ; ಅದನ್ನು ಕೊಡುವದಕ್ಕೆ ನನಗೆ ಅಧಿಕಾರ ಉಂಟು, ಅದನ್ನು ತಿರಿಗಿ ಪಡಕೊಳ್ಳುವದಕ್ಕೆ ನನಗೆ ಅಧಿಕಾರ ಉಂಟು; ಈ ಅಪ್ಪಣೆಯನ್ನು ನನ್ನ ತಂದೆಯಿಂದ ಹೊಂದಿದ್ದೇನೆ ಅಂದನು.
19ಈ ಮಾತುಗಳ ದೆಸೆಯಿಂದ ಯೆಹೂದ್ಯರಲ್ಲಿ ತಿರಿಗಿ ಭೇದವಾಯಿತು. 20ಅವರಲ್ಲಿ ಅನೇಕರು - ಅವನಿಗೆ ದೆವ್ವಹಿಡಿದದೆ, ಹುಚ್ಚುಹಿಡಿದದೆ, ಯಾಕೆ ಅವನ ಮಾತು ಕೇಳುತ್ತೀರಿ? ಅಂದರು. 21ಮತ್ತು ಕೆಲವರು - ಇವು ದೆವ್ವಹಿಡಿದವನ ಮಾತುಗಳಲ್ಲ; ದೆವ್ವವು ಕುರುಡರಿಗೆ ಕಣ್ಣುಕೊಡಬಲ್ಲದೇ? ಅಂದರು.
ಯೇಸು ಪ್ರತಿಷ್ಠೆಯ ಹಬ್ಬದಲ್ಲಿ ತಾನು ದೇವರ ಮಗನೆಂದು ಸೂಚಿಸಲು ಯೆಹೂದ್ಯರು ಆತನನ್ನು ಹಿಡಿಯುವದಕ್ಕೆ ತಿರಿಗಿ ಪ್ರಯತ್ನಮಾಡಿದ್ದು
22ಆ ಕಾಲದಲ್ಲಿ ದೇವಾಲಯಪ್ರತಿಷ್ಠೆಯ ಹಬ್ಬವು ಯೆರೂಸಲೇವಿುನಲ್ಲಿ ನಡೆಯಿತು; ಆಗ ಚಳಿಕಾಲವಾಗಿತ್ತು. 23ಯೇಸು ದೇವಾಲಯದೊಳಗೆ ಸೊಲೊಮೋನನ ಮಂಟಪದಲ್ಲಿ ತಿರುಗಾಡುತ್ತಾ ಇರುವಾಗ ಯೆಹೂದ್ಯರು ಆತನನ್ನು ಸುತ್ತಿಕೊಂಡು - 24ಇನ್ನು ಎಷ್ಟು ಕಾಲ ನಮ್ಮಲ್ಲಿ ಅನುಮಾನ ಹುಟ್ಟಿಸುತ್ತೀ? ನೀನು ಕ್ರಿಸ್ತನಾಗಿದ್ದರೆ ಅದನ್ನು ನಮಗೆ ಸ್ಪಷ್ಟವಾಗಿ ಹೇಳು ಅಂದರು. 25ಅದಕ್ಕೆ ಯೇಸು - ನಿಮಗೆ ಹೇಳಿದೆನು, ಆದರೆ ನೀವು ನಂಬದೆ ಇದ್ದೀರಿ; ನನ್ನ ತಂದೆಯ ಹೆಸರಿನಲ್ಲಿ ನಾನು ಮಾಡುವ ಕ್ರಿಯೆಗಳೇ ನನಗೆ ಸಾಕ್ಷಿಯಾಗಿವೆ. 26ಆದರೂ ನೀವು ನನ್ನ ಕುರಿಗಳಿಗೆ ಸೇರಿದವರಲ್ಲವಾದದರಿಂದ ನಂಬದೆ ಇದ್ದೀರಿ. 27ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ; ನಾನು ಅವುಗಳನ್ನು ಬಲ್ಲೆನು; ಅವು ನನ್ನ ಹಿಂದೆ ಬರುತ್ತವೆ. 28ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ; ಅವು ಎಂದಿಗೂ ನಾಶವಾಗುವದೇ ಇಲ್ಲ; ಅವುಗಳನ್ನು ಯಾರೂ ನನ್ನ ಕೈಯೊಳಗಿಂದ ಕಸಕೊಳ್ಳರು. 29ನನ್ನ ತಂದೆಯು ನನಗೆ ಕೊಟ್ಟದ್ದು ಎಲ್ಲಾದ್ದಕ್ಕಿಂತ ದೊಡ್ಡದು; ಅದನ್ನು#10.29 ಕೆಲವು ಪ್ರತಿಗಳಲ್ಲಿ - ಅವುಗಳನ್ನು ನನಗೆ ಕೊಟ್ಟ ನನ್ನ ತಂದೆಯು ಎಲ್ಲರಿಗಿಂತ ದೊಡ್ಡವನಾಗಿದ್ದಾನೆ; ಅವುಗಳನ್ನು. ತಂದೆಯ ಕೈಯೊಳಗಿಂದ ಯಾರೂ ಕಸಕೊಳ್ಳಲಾರರು. 30ನಾನೂ ತಂದೆಯೂ ಒಂದಾಗಿದ್ದೇವೆ ಅಂದನು.
31ಯೆಹೂದ್ಯರು ಆತನನ್ನು ಹೊಡೆದು ಕೊಲ್ಲಬೇಕೆಂದು ತಿರಿಗಿ ಕಲ್ಲುಗಳನ್ನು ತೆಗೆದುಕೊಂಡು ಬರಲು 32ಯೇಸು ಅವರನ್ನು - ತಂದೆಯ ಕಡೆಯಿಂದ ಅನೇಕ ಒಳ್ಳೇ ಕ್ರಿಯೆಗಳನ್ನು ನಿಮಗೆ ತೋರಿಸಿದೆನು; ಅವುಗಳಲ್ಲಿ ಯಾವ ಕ್ರಿಯೆಯ ದೆಸೆಯಿಂದ ನನ್ನ ಮೇಲೆ ಕಲ್ಲೆಸೆಯುತ್ತೀರಿ ಎಂದು ಕೇಳಿದ್ದಕ್ಕೆ 33ಯೆಹೂದ್ಯರು - ನಾವು ನಿನ್ನ ಮೇಲೆ ಕಲ್ಲೆಸೆಯುವದು ಒಳ್ಳೇ ಕಾರ್ಯದ ದೆಸೆಯಿಂದಲ್ಲ, ದೇವದೂಷಣೆಯ ದೆಸೆಯಿಂದಲೂ ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರನ್ನಾಗಿ ಮಾಡಿಕೊಳ್ಳುವದರ ದೆಸೆಯಿಂದಲೂ ನಿನ್ನ ಮೇಲೆ ಕಲ್ಲೆಸೆಯುತ್ತೇವೆ ಅಂದರು. 34ಅದಕ್ಕೆ ಯೇಸು - ನೀವು ದೇವರುಗಳೇ ಎಂದು ನಾನು ಹೇಳಿದೆನು ಎಂಬದಾಗಿ ನಿಮ್ಮ ಧರ್ಮಶಾಸ್ತ್ರದಲ್ಲಿ ಬರೆದದೆಯಲ್ಲಾ; ಶಾಸ್ತ್ರವು ಸುಳ್ಳಾಗಲಾರದಷ್ಟೆ; 35ಹಾಗಾದರೆ ದೇವರ ವಾಕ್ಯವನ್ನು ಹೊಂದಿದವರನ್ನು ದೇವರುಗಳೆಂದು ಆತನು ಹೇಳಿರುವಲ್ಲಿ 36ತಂದೆಯು ಪ್ರತಿಷ್ಠೆಮಾಡಿ ಲೋಕಕ್ಕೆ ಕಳುಹಿಸಿಕೊಟ್ಟವನಾದ ನಾನು ದೇವರ ಮಗನಾಗಿದ್ದೇನೆಂದು ಹೇಳಿದ್ದಕ್ಕೆ ನೀನು ದೇವದೂಷಣೆ ಮಾಡುತ್ತೀ ಅನ್ನುತ್ತೀರೋ? 37ನಾನು ನನ್ನ ತಂದೆಯ ಕ್ರಿಯೆಗಳನ್ನು ಮಾಡದಿದ್ದರೆ ನನ್ನ ಮಾತನ್ನು ನಂಬಬೇಡಿರಿ; 38ಮಾಡಿದರೆ ನನ್ನ ಮಾತನ್ನು ನಂಬದೆ ಇದ್ದರೂ ಆ ಕ್ರಿಯೆಗಳ ಸಾಕ್ಷಿಯನ್ನಾದರೂ ನಂಬಿರಿ; ಆಗ ನನ್ನಲ್ಲಿ ತಂದೆಯು ಇದ್ದಾನೆಂತಲೂ ತಂದೆಯಲ್ಲಿ ನಾನು ಇದ್ದೇನೆಂತಲೂ ನೀವು ತಿಳುಕೊಂಡು ಮನನಮಾಡಿಕೊಳ್ಳುವಿರಿ ಅಂದನು. 39ಅವರು ತಿರಿಗಿ ಆತನನ್ನು ಹಿಡಿಯುವದಕ್ಕೆ ನೋಡಿದರು; ಆದರೆ ಅವರ ಕೈಗೆ ತಪ್ಪಿಸಿಕೊಂಡು ಹೋದನು.
40ಆಮೇಲೆ ಆತನು ಯೊರ್ದನ್‍ಹೊಳೆಯ ಆಚೆ ಯೋಹಾನನು ಮೊದಲು ಸ್ನಾನಮಾಡಿಸುತ್ತಿದ್ದ ಸ್ಥಳಕ್ಕೆ ತಿರಿಗಿ ಹೋಗಿ ಅಲ್ಲಿ ಇದ್ದನು. 41ಅನೇಕರು ಆತನ ಬಳಿಗೆ ಬಂದು - ಯೋಹಾನನು ಒಂದು ಸೂಚಕಕಾರ್ಯವನ್ನೂ ಮಾಡಲಿಲ್ಲ; ಆದರೆ ಈತನ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲಾ ನಿಜವಾಗಿತ್ತು ಎಂದು ಮಾತಾಡುತ್ತಿದ್ದರು. 42ಅಲ್ಲಿ ಅನೇಕರು ಆತನನ್ನು ನಂಬಿದರು.

Highlight

Share

Copy

None

Want to have your highlights saved across all your devices? Sign up or sign in