ಯೋಹಾನ 19
19
1ಆಮೇಲೆ ಪಿಲಾತನು ಯೇಸುವನ್ನು ಕೊರಡೆಯಿಂದ ಹೊಡಿಸಿದನು. 2ಮತ್ತು ಸಿಪಾಯಿಗಳು ಮುಳ್ಳುಬಳ್ಳಿಯಿಂದ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟು ಕೆಂಪು ಒಲ್ಲಿಯನ್ನು ಆತನಿಗೆ ಹೊದಿಸಿ 3ಆತನ ಬಳಿಗೆ ಬಂದು - ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ; ಎಂದು ಹೇಳಿ ಆತನ ಕೆನ್ನೆಗೆ ಏಟುಹಾಕಿದರು. 4ತರುವಾಯ ಪಿಲಾತನು ತಿರಿಗಿ ಹೊರಗೆ ಬಂದು ಯೆಹೂದ್ಯರಿಗೆ - ನನಗೆ ಅವನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲವೆಂಬದು ನಿಮಗೆ ತಿಳಿಯುವಂತೆ ಅವನನ್ನು ನಿಮ್ಮ ಬಳಿಗೆ ಹೊರಗೆ ತರುತ್ತೇನೆ, ನೋಡಿರಿ ಎಂದು ಹೇಳಿದನು. 5ಆಗ ಯೇಸು ಮುಳ್ಳಿನ ಕಿರೀಟವನ್ನೂ ಕೆಂಪು ಒಲ್ಲಿಯನ್ನೂ ಧರಿಸಿದವನಾಗಿ ಹೊರಕ್ಕೆ ಬಂದನು. ಪಿಲಾತನು ಅವರಿಗೆ - ಇಗೋ, ಈ ಮನುಷ್ಯನು! ಅಂದನು. 6ಮಹಾಯಾಜಕರೂ ಓಲೇಕಾರರೂ ಆತನನ್ನು ಕಾಣುತ್ತಲೇ - ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು ಎಂದು ಕೂಗಿದರು. ಪಿಲಾತನು ಅವರಿಗೆ - ಬೇಕಾದರೆ ನೀವೇ ಅವನನ್ನು ತಕ್ಕೊಂಡುಹೋಗಿ ಶಿಲುಬೆಗೆ ಹಾಕಿಸಿರಿ; ನನಗೆ ಅವನಲ್ಲಿ ಅಪರಾಧವು ಕಾಣಿಸಲಿಲ್ಲವೆಂದು ಹೇಳಿದನು. 7ಯೆಹೂದ್ಯರು ಅವನಿಗೆ - ನಮಗೆ ಒಂದು ನೇಮ ಉಂಟು, ಆ ನೇಮದ ಪ್ರಕಾರ ಇವನು ಸಾಯತಕ್ಕವನು; ಯಾಕಂದರೆ ಅವನು ತನ್ನನ್ನು ದೇವರ ಮಗನಾಗಿ ಮಾಡಿಕೊಂಡಿದ್ದಾನೆ ಎಂದು ಉತ್ತರಕೊಟ್ಟರು. 8ಪಿಲಾತನು ಈ ಮಾತನ್ನು ಕೇಳಿ ಮತ್ತಷ್ಟು ಹೆದರಿಕೊಂಡು 9ತಿರಿಗಿ ಅರಮನೆಯೊಳಕ್ಕೆ ಹೋಗಿ - ನೀನು ಎಲ್ಲಿಂದ ಬಂದವನು ಎಂದು ಯೇಸುವನ್ನು ಕೇಳಿದನು. ಆದರೆ ಯೇಸು ಅವನಿಗೆ ಉತ್ತರಕೊಡಲಿಲ್ಲ. 10ಪಿಲಾತನು - ನನ್ನ ಸಂಗಡಲೂ ನೀನು ಮಾತಾಡುವದಿಲ್ಲವೋ? ನಿನ್ನನ್ನು ಬಿಡಿಸುವ ಅಧಿಕಾರವೂ ನಿನ್ನನ್ನು ಶಿಲುಬೆಗೆ ಹಾಕಿಸುವ ಅಧಿಕಾರವೂ ನನಗೆ ಉಂಟೆಂಬದು ನಿನಗೆ ಗೊತ್ತಿಲ್ಲವೋ ಎಂದು ಆತನನ್ನು ಕೇಳಿದನು. 11ಅದಕ್ಕೆ ಯೇಸು - ಮೇಲಣಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪ ಉಂಟು ಅಂದನು.
12ಈ ಮಾತಿನ ದೆಸೆಯಿಂದ ಪಿಲಾತನು ಆತನನ್ನು ಬಿಡಿಸುವದಕ್ಕೆ ಪೇಚಾಡಿದನು. ಆದರೆ ಯೆಹೂದ್ಯರು - ನೀನು ಇವನನ್ನು ಬಿಡಿಸಿದರೆ ನೀನು ಕೈಸರನಿಗೆ ವಿುತ್ರನಲ್ಲ; ತನ್ನನ್ನು ಅರಸನಾಗಿ ಮಾಡಿಕೊಳ್ಳುವವನು ಕೈಸರನಿಗೆ ವಿರೋಧಿ ಎಂದು ಕೂಗಿ ಹೇಳಿದರು. 13ಈ ಮಾತುಗಳನ್ನು ಪಿಲಾತನು ಕೇಳಿ ಯೇಸುವನ್ನು ಹೊರಕ್ಕೆ ಕರತರಿಸಿ ಇಬ್ರಿಯ ಮಾತಿನಲ್ಲಿ ಗಬ್ಬಥಾಯೆನಿಸಿಕೊಳ್ಳುವ ಕಲ್ಲುಹಾಸಿದ ಕಟ್ಟೆ ಎಂಬ ಹೆಸರುಳ್ಳ ಸ್ಥಳಕ್ಕೆ ಹೋಗಿ ನ್ಯಾಯಪೀಠದ ಮೇಲೆ ಕೂತುಕೊಂಡನು. 14ಪಸ್ಕಹಬ್ಬದ ಸೌರಣೆಯ ದಿವಸದಲ್ಲಿ ಬೆಳಿಗ್ಗೆ#19.14 ಅಥವಾ: ಹಗಲು ಹೆಚ್ಚುಕಡಿಮೆ ಆರು ತಾಸಾಗಿತ್ತು, ಅಂದರೆ ಮಧ್ಯಾಹ್ನವಾಗಿತ್ತು. ಹೆಚ್ಚುಕಡಿಮೆ ಆರು ಘಂಟೆಯಾಗಿತ್ತು. ಅವನು ಯೆಹೂದ್ಯರಿಗೆ - ಇಗೋ, ನಿಮ್ಮ ಅರಸನು! ಎಂದು ಹೇಳಿದನು. 15ಅದಕ್ಕೆ ಅವರು - ಅವನನ್ನು ಕೊಲ್ಲಿಸು, ಕೊಲ್ಲಿಸು, ಶಿಲುಬೆಗೆ ಹಾಕಿಸು ಎಂದು ಕೂಗಿದರು. ಪಿಲಾತನು - ನಿಮ್ಮ ಅರಸನನ್ನು ಶಿಲುಬೆಗೆ ಹಾಕಿಸಲೋ? ಅಂದದ್ದಕ್ಕೆ ಮಹಾಯಾಜಕರು - ಕೈಸರನೇ ಹೊರತು ನಮಗೆ ಬೇರೆ ಅರಸನಿಲ್ಲ ಎಂದು ಉತ್ತರಕೊಟ್ಟರು. 16ಆಗ ಅವನು ಆತನನ್ನು ಶಿಲುಬೆಗೆ ಹಾಕಿಸುವದಕ್ಕೆ ಅವರ ವಶಕ್ಕೆ ಕೊಟ್ಟನು.
ಯೇಸುವನ್ನು ಶಿಲುಬೆಗೆ ಹಾಕಿದ್ದೂ ಹೂಣಿಟ್ಟದ್ದೂ
(ಮತ್ತಾ. 27.32-50,57-61; ಮಾರ್ಕ. 15.21-37,42-47; ಲೂಕ. 23.26,33-46,50-56)
17ಅವರು ಯೇಸುವನ್ನು ತೆಗೆದುಕೊಂಡು ಹೋದರು; ಆತನು ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ಕಪಾಲಸ್ಥಳವೆಂಬ ಸ್ಥಾನಕ್ಕೆ ಹೋದನು. ಇದಕ್ಕೆ ಇಬ್ರಿಯ ಮಾತಿನಲ್ಲಿ ಗೊಲ್ಗೊಥಾ ಎಂದು ಹೆಸರು. 18ಅಲ್ಲಿ ಆತನನ್ನೂ ಆತನ ಸಂಗಡ ಇನ್ನಿಬ್ಬರನ್ನೂ ಶಿಲುಬೆಗೆ ಹಾಕಿದರು; ಅವರಲ್ಲಿ ಆ ಕಡೆ ಒಬ್ಬನನ್ನು ಈ ಕಡೆ ಒಬ್ಬನನ್ನು ನಡುವೆ ಯೇಸುವನ್ನು ಇಟ್ಟರು.
19ಇದಲ್ಲದೆ ಪಿಲಾತನು ಒಂದು ವಿಳಾಸವನ್ನು ಬರೆದು ಆತನ ಶಿಲುಬೆಯ ಮೇಲ್ಗಡೆ ಹಚ್ಚಿಸಿದನು. ಅದೇನಂದರೆ -
ನಜರೇತಿನ ಯೇಸು, ಯೆಹೂದ್ಯರ ಅರಸನು ಎಂಬದೇ.
20ಅವರು ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಳವು ಪಟ್ಟಣಕ್ಕೆ ಹತ್ತಿರವಾಗಿದ್ದದರಿಂದ ಯೆಹೂದ್ಯರಲ್ಲಿ ಬಹಳ ಮಂದಿ ಆ ವಿಳಾಸವನ್ನು ಓದಿದರು. ಅದು ಇಬ್ರಿಯ ಲಾತೀನ್ ಗ್ರೀಕ್ ಭಾಷೆಗಳಲ್ಲಿ ಬರೆದಿತ್ತು. 21ಹೀಗಿರಲಾಗಿ ಯೆಹೂದ್ಯರ ಮಹಾಯಾಜಕರು ಪಿಲಾತನಿಗೆ - ಯೆಹೂದ್ಯರ ಅರಸನು ಎಂದು ಬರೆಯದೆ ನಾನು ಯೆಹೂದ್ಯರ ಅರಸನೆಂದು ಹೇಳಿದವನು ಎಂಬದಾಗಿ ಬರೆಯಬೇಕೆಂತ ಹೇಳಿದರು. 22ಅದಕ್ಕೆ ಪಿಲಾತನು - ನಾನು ಬರೆದದ್ದು ಬರೆದಾಯಿತು ಅಂದನು.
23ಸಿಪಾಯಿಗಳು ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ ಅವರು ಆತನ ಮೇಲುಹೊದಿಕೆಗಳನ್ನು ತಕ್ಕೊಂಡು ನಾಲ್ಕು ಪಾಲು ಮಾಡಿ ಒಬ್ಬೊಬ್ಬ ಸಿಪಾಯಿಗೆ ಒಂದೊಂದು ಪಾಲಿನ ಪ್ರಕಾರ ಹಂಚಿಕೊಂಡರು. ಆತನ ಒಳಂಗಿಯನ್ನು ಸಹ ತಕ್ಕೊಂಡರು; ಆದರೆ ಆ ಅಂಗಿಗೆ ಹೊಲಿಗೆ ಇರಲಿಲ್ಲ. ಅದು ಮೇಲಿನಿಂದ ಅಖಂಡವಾಗಿ ಹೆಣೆದದ್ದಾಗಿತ್ತು. 24ಅದನ್ನು ನೋಡಿ ಅವರು - ನಾವು ಇದನ್ನು ಹರಿಯಬಾರದು; ಚೀಟುಹಾಕಿ ಇದು ಯಾರಿಗೆ ಬರುವದೋ ನೋಡೋಣ ಎಂದು ಮಾತಾಡಿಕೊಂಡರು. ಇದರಿಂದ -
ನನ್ನ ಬಟ್ಟೆಗಳನ್ನು ತಮ್ಮಲ್ಲಿ ಪಾಲುಮಾಡಿಕೊಂಡರು,
ನನ್ನ ಅಂಗಿಗೋಸ್ಕರ ಚೀಟು ಹಾಕಿದರು
ಎಂಬ ಶಾಸ್ತ್ರದ ಮಾತು ನೆರವೇರಿತು. ಸಿಪಾಯಿಗಳು ಇದನ್ನೆಲ್ಲಾ ಮಾಡಿದರು.
25ಯೇಸುವಿನ ಶಿಲುಬೆಯ ಬಳಿಯಲ್ಲಿ ಆತನ ತಾಯಿಯೂ ಆತನ ತಾಯಿಯ ತಂಗಿಯೂ ಕ್ಲೋಪನ ಹೆಂಡತಿಯಾದ ಮರಿಯಳೂ ಮಗ್ದಲದ ಮರಿಯಳೂ ನಿಂತಿದ್ದರು. 26ಯೇಸು ತನ್ನ ತಾಯಿಯನ್ನೂ ಹತ್ತರದಲ್ಲಿ ನಿಂತಿದ್ದ ತನ್ನ ಪ್ರೀತಿಯ ಶಿಷ್ಯನನ್ನೂ ನೋಡಿ ತಾಯಿಗೆ - ಅಮ್ಮಾ, ಇಗೋ ನಿನ್ನ ಮಗನು ಎಂದು ಹೇಳಿದನು. 27ತರುವಾಯ ಆ ಶಿಷ್ಯನಿಗೆ - ಇಗೋ ನಿನ್ನ ತಾಯಿ ಎಂದು ಹೇಳಿದನು. ಆ ಹೊತ್ತಿನಿಂದ ಆ ಶಿಷ್ಯನು ಆಕೆಯನ್ನು ತನ್ನ ಮನೆಯಲ್ಲೇ ಇರಿಸಿಕೊಂಡನು.
28ಇದಾದ ಮೇಲೆ ಯೇಸು ಈಗ ಎಲ್ಲಾ ತೀರಿತೆಂದು ತಿಳಿದು ಶಾಸ್ತ್ರದ ಮಾತು ನೆರವೇರುವಂತೆ - ನನಗೆ ನೀರಡಿಕೆ ಆಗಿದೆ ಅಂದನು. 29ಅಲ್ಲಿ ಹುಳಿರಸ ತುಂಬಿದ ಗಡಿಗೆ ಇಟ್ಟಿರಲಾಗಿ ಅವರು ಸ್ಪಂಜನ್ನು ಹುಳಿರಸದಿಂದ ತುಂಬಿಸಿ ಹಿಸೋಪ್ಗಿಡದ ಕೋಲಿಗೆ ಸಿಕ್ಕಿಸಿ ಆತನ ಬಾಯಿಗೆ ಮುಟ್ಟಿಸಿದರು. 30ಯೇಸು ಆ ಹುಳಿರಸವನ್ನು ತಕ್ಕೊಂಡ ಮೇಲೆ - ತೀರಿತು ಎಂದು ಹೇಳಿ ತಲೇಬಾಗಿಸಿ ಆತ್ಮವನ್ನು ಒಪ್ಪಿಸಿಕೊಟ್ಟನು.
31ಆ ಹೊತ್ತು ಸೌರಣೆಯ ದಿವಸವಾಗಿದ್ದದರಿಂದ ಯೆಹೂದ್ಯರು - ಸಬ್ಬತ್ದಿನದಲ್ಲಿ ಶವಗಳು ಶಿಲುಬೆಯ ಮೇಲೆ ಇರಬಾರದೆಂದು ಪಿಲಾತನನ್ನು - ಅವರ ಕಾಲುಗಳನ್ನು ಮುರಿಸಿ ಅವರನ್ನು ತೆಗೆಸಿಹಾಕಬೇಕೆಂಬದಾಗಿ ಕೇಳಿಕೊಂಡರು; ಯಾಕಂದರೆ ಆ ಸಬ್ಬತ್ದಿನವು ಬಹು ವಿಶೇಷವಾದದ್ದು. 32ಆದದರಿಂದ ಸಿಪಾಯಿಗಳು ಬಂದು ಮೊದಲನೆಯವನ ಕಾಲುಗಳನ್ನೂ ಅವನ ಜೊತೆಯಲ್ಲಿ ಶಿಲುಬೆಗೆ ಹಾಕಿಸಿಕೊಂಡಿದ್ದ ಮತ್ತೊಬ್ಬನ ಕಾಲುಗಳನ್ನೂ ಮುರಿದರು. 33ಆದರೆ ಯೇಸುವಿನ ಬಳಿಗೆ ಬಂದಾಗ ಆತನು ಆಗಲೇ ಸತ್ತಿರುವದನ್ನು ಅವರು ಕಂಡು ಆತನ ಕಾಲುಗಳನ್ನು ಮುರಿಯಲಿಲ್ಲ. 34ಆದರೂ ಸಿಪಾಯಿಗಳಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು; ತಿವಿದ ಕೂಡಲೆ ರಕ್ತವೂ ನೀರೂ ಹೊರಟಿತು. 35ಅದನ್ನು ಕಂಡವನೇ ಸಾಕ್ಷಿ ಹೇಳಿದ್ದಾನೆ, ಅವನ ಸಾಕ್ಷಿ ಸತ್ಯವೇ; ತಾನು ಹೇಳುವದು ಸತ್ಯವೆಂದು ಅವನು#19.35 ಅಥವಾ, ಆತನು. ಬಲ್ಲನು; ನೀವು ಸಹ ನಂಬಬೇಕೆಂದು ಇದನ್ನು ಹೇಳಿದ್ದಾನೆ. 36ಯಾಕಂದರೆ - ಆತನ ಒಂದು ಎಲುಬನ್ನಾದರೂ ಮುರಿಯಕೂಡದು ಎಂದು ಶಾಸ್ತ್ರದಲ್ಲಿ ಬರೆದ ಮಾತು ನೆರವೇರುವಂತೆ ಇದಾಯಿತು; 37ಮತ್ತು - ಅವರು ತಾವು ಇರಿದವನನ್ನು ದಿಟ್ಟಿಸಿನೋಡುವರು ಎಂದು ಶಾಸ್ತ್ರದಲ್ಲಿ ಮತ್ತೊಂದು ಮಾತು ಹೇಳಿ ಅದೆ.
38ಇದಾದ ಮೇಲೆ ಯೆಹೂದ್ಯರ ಭಯದಿಂದ ಗುಪ್ತವಾಗಿ ಯೇಸುವಿನ ಶಿಷ್ಯನಾಗಿದ್ದ ಅರಿಮಥಾಯದ ಯೋಸೇಫನು - ಯೇಸುವಿನ ದೇಹವನ್ನು ತೆಗೆದುಕೊಂಡು ಹೋಗುವದಕ್ಕೆ ಅಪ್ಪಣೆಯಾಗಬೇಕೆಂದು ಪಿಲಾತನನ್ನು ಬೇಡಿಕೊಂಡನು. ಪಿಲಾತನು ಅಪ್ಪಣೆಕೊಡಲಾಗಿ ಅವನು ಬಂದು ಆತನ ದೇಹವನ್ನು ತೆಗೆದುಕೊಂಡು ಹೋದನು. 39ಇದಲ್ಲದೆ ಮೊದಲು ಒಂದು ಸಾರಿ ರಾತ್ರಿವೇಳೆಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಸಹ ರಕ್ತಬೋಳ ಅಗರುಗಳನ್ನು ಕಲಸಿದ ಚೂರ್ಣವನ್ನು ನೂರು ಸೇರಿನಷ್ಟು ತಕ್ಕೊಂಡು ಅಲ್ಲಿಗೆ ಬಂದನು. 40ಅವರು ಯೇಸುವಿನ ದೇಹವನ್ನು ತಕ್ಕೊಂಡು ಯೆಹೂದ್ಯರಲ್ಲಿ ಹೂಣಿಡುವ ಪದ್ಧತಿಯ ಪ್ರಕಾರ ಅದನ್ನು ಆ ಸುಗಂಧದ್ರವ್ಯಗಳ ಸಹಿತವಾಗಿ ನಾರುಬಟ್ಟೆಯಲ್ಲಿ ಸುತ್ತಿದರು. 41ಆತನನ್ನು ಶಿಲುಬೆಗೆ ಹಾಕಿದ ಸ್ಥಳದಲ್ಲಿ ಒಂದು ತೋಟವಿತ್ತು; ಆ ತೋಟದಲ್ಲಿ ಒಂದು ಹೊಸ ಸಮಾಧಿ ಇತ್ತು; ಅದರಲ್ಲಿ ಅದುವರೆಗೆ ಯಾರನ್ನೂ ಇಟ್ಟಿದ್ದಿಲ್ಲ. 42ಆ ದಿನವು ಯೆಹೂದ್ಯರ ಸೌರಣೆಯ ದಿನವಾದದ್ದರಿಂದ ಆ ಸಮಾಧಿ ಹತ್ತರವಿರುತ್ತದೆಂದು ಯೇಸುವನ್ನು ಅಲ್ಲೇ ಇಟ್ಟರು.
Currently Selected:
ಯೋಹಾನ 19: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.