ಆದಿಕಾಂಡ 19
19
ಸೊದೋಮಿನ ಪಾಪಕೃತ್ಯ
1ಆ ದೂತರಿಬ್ಬರು ಸೊದೋಮಿಗೆ ಬಂದಾಗ ಸಾಯಂಕಾಲವಾಗಿತ್ತು. ಲೋಟನು ಆ ಊರಬಾಗಿಲಲ್ಲೇ ಕುಳಿತುಕೊಂಡಿದ್ದನು. ದೂತರನ್ನು ಕಂಡದ್ದೇ ಅವನು ಎದ್ದುಬಂದು, ಬಾಗಿ ನಮಸ್ಕರಿಸಿ, 2ಸ್ವಾಮಿಗಳೇ, ನಿಮ್ಮ ದಾಸನ ಮನೆಗೆ ಬಂದು ರಾತ್ರಿ ತಂಗಿರಿ. ಕಾಲುಗಳನ್ನು ತೊಳೆದುಕೊಳ್ಳಿ. ಬೆಳಿಗ್ಗೆ ಎದ್ದು ನಿಮ್ಮ ಪ್ರಯಾಣವನ್ನು ಮುಂದುವರಿಸಬಹುದು,” ಎಂದನು. 3ಅವರು, “ಇಲ್ಲ, ನಾವು ಬೀದಿಯಲ್ಲೇ ರಾತ್ರಿಯನ್ನು ಕಳೆಯುತ್ತೇವೆ,” ಎಂದು ಉತ್ತರಿಸಿದರು. ಅವನು ಬಹಳವಾಗಿ ಒತ್ತಾಯಪಡಿಸಿದ್ದರಿಂದ ಅವನ ಮನೆಯಲ್ಲೇ ತಂಗಲು ಒಪ್ಪಿಕೊಂಡರು. ಅವರು ಮನೆಗೆ ಬಂದಾಗ ಲೋಟನು ಹುಳಿಯಿಲ್ಲದ ರೊಟ್ಟಿಗಳನ್ನು ಸುಡಿಸಿ ಔತಣವನ್ನು ಸಿದ್ಧಗೊಳಿಸಿದನು; ಅವರು ಊಟಮಾಡಿದರು.
4ಆದರೆ ಅವರು ಮಲಗುವುದಕ್ಕೆ ಮುಂಚೆ ಆ ಸೊದೋಮ್ ಪಟ್ಟಣದ ಗಂಡಸರು, ಹುಡುಗರು-ಮುದುಕರು ಎನ್ನದೆ, ಎಲ್ಲರೂ ಬಂದು ಆ ಮನೆಯನ್ನು ಮುತ್ತಿದರು. 5ಅಲ್ಲದೆ ಲೋಟನಿಗೆ, "ಈ ರಾತ್ರಿ ತಂಗಲು ನಿನ್ನ ಬಳಿಗೆ ಬಂದ ಆ ಮನುಷ್ಯರು ಎಲ್ಲಿ? ಅವರನ್ನು ಹೊರಕ್ಕೆ ಕರೆದುಕೊಂಡು ಬಾ; ಅವರೊಡನೆ ಸಂಭೋಗಿಸಬೇಕು,” ಎಂದು ಕೂಗಿ ಹೇಳಿದರು. 6ಲೋಟನು, ತನ್ನ ಹಿಂದೆ ಬಾಗಿಲು ಹಾಕಿಕೊಂಡು, ಹೊರಕ್ಕೆ ಬಂದು, 7"ಅಣ್ಣ ತಮ್ಮಂದಿರಾ, ನಿಮ್ಮನ್ನು ವಿನಂತಿಸಿ ಕೇಳಿಕೊಳ್ಳುತ್ತೇನೆ: ಈ ಪಾತಕ ಮಾತ್ರ ಮಾಡಬೇಡಿ; 8ಕೇಳಿ, ಕನ್ಯೆಯರಾದ ಇಬ್ಬರು ಹೆಣ್ಣುಮಕ್ಕಳು ನನಗಿದ್ದಾರೆ; ಅವರನ್ನು ಬೇಕಾದರೆ ಹೊರಗೆ ಕರೆಯಿಸುತ್ತೇನೆ; ನಿಮಗೆ ಇಷ್ಟಬಂದಂತೆ ಮಾಡಬಹುದು. ಆದರೆ ಆ ಮನುಷ್ಯರು ನನ್ನ ಆಶ್ರಯಕ್ಕಾಗಿ ಬಂದವರು; ಅವರಿಗೆ ಏನೂ ಮಾಡಬೇಡಿ,” ಎಂದನು.
9ಅವರಾದರೋ, “ಬಿಡು ದಾರಿ, ಪ್ರವಾಸಿಯಾಗಿ ಬಂದ ಇವನು ನಮಗೆ ನ್ಯಾಯಹೇಳುವವನಾಗಿಬಿಟ್ಟ! ದಾರಿ ಬಿಡದಿದ್ದರೆ ಆ ಮನುಷ್ಯರಿಗಿಂತ ನಿನಗೇ ಹೆಚ್ಚು ಕೇಡಾದೀತು,” ಎಂದು ಹೇಳಿ ಲೋಟನ ಮೇಲೆ ಬಿದ್ದು ತುಳಿದು ಬಾಗಿಲನ್ನು ಒಡೆದುಹಾಕುವುದರಲ್ಲಿದ್ದರು. 10ಅಷ್ಟರಲ್ಲಿ ಒಳಗಿದ್ದ ಆ ಮನುಷ್ಯರು ಕೈಚಾಚಿ ಲೋಟನನ್ನು ತಮ್ಮತ್ತ ಎಳೆದು ಮನೆಯೊಳಗೆ ಹಾಕಿಕೊಂಡು, ಬಾಗಿಲನ್ನು ಮುಚ್ಚಿದರು; 11ದೊಡ್ಡವರು ಚಿಕ್ಕವರು ಎನ್ನದೆ, ಹೊರಗಿದ್ದ ಆ ಜನರೆಲ್ಲರ ಕಣ್ಣು ಕುರುಡಾಗುವಂತೆ ಮಾಡಿದರು; ಬಾಗಿಲು ಯಾವುದೆಂದು ತಿಳಿಯದೆ ಅವರು ತಡಕಾಡುವಂತೆ ಮಾಡಿಬಿಟ್ಟರು.
ಸೊದೋಮ್‍ನಿಂದ ಲೋಟನ ಓಟ
12ಬಳಿಕ ಆ ಮನುಷ್ಯರಿಬ್ಬರು ಲೋಟನಿಗೆ, “ನಿನಗೆ ಇಲ್ಲಿ ಯಾರು ಯಾರು ಇದ್ದಾರೆಯೋ, ಗಂಡುಹೆಣ್ಣು ಮಕ್ಕಳು, ಅಳಿಯಂದಿರು ಹಾಗೂ ಪಟ್ಟಣದಲ್ಲಿ ನಿನಗಿರುವ ಬೇರೆ ಎಲ್ಲರನ್ನೂ ಊರ ಹೊರಕ್ಕೆ ಕರೆದುಕೊಂಡು ಬಾ. 13ನಾವು ಈ ಸ್ಥಳವನ್ನು ನಾಶಮಾಡುವುದಕ್ಕೆ ಬಂದವರು. ಇಲ್ಲಿಯವರ ವಿಷಯವಾಗಿ ಬಂದ ಆಪಾದನೆ ದೊಡ್ಡದಾದುದರಿಂದ ಇವರನ್ನು ನಾಶಮಾಡುವುದಕ್ಕಾಗಿ ಸರ್ವೇಶ್ವರ ನಮ್ಮನ್ನು ಕಳಿಸಿದ್ದಾರೆ,” ಎಂದು ತಿಳಿಸಿದರು.
14ಲೋಟನು ಹೊರಕ್ಕೆ ಹೋಗಿ ತನ್ನ ಹೆಣ್ಣುಮಕ್ಕಳಿಗೆ ಗೊತ್ತುಮಾಡಿದ್ದ ಅಳಿಯಂದಿರಿಗೆ ಸಂಗತಿಯನ್ನು ಹೇಳಿ, “ನೀವೆದ್ದು ಈ ಸ್ಥಳವನ್ನು ಬಿಟ್ಟ ಹೊರಡಿರಿ; ಈ ಊರನ್ನು ಸರ್ವೇಶ್ವರ ಸ್ವಾಮಿ ನಾಶ ಮಾಡಲಿದ್ದಾರೆ” ಎಂದು ಹೇಳಿದನು. ಆ ಅಳಿಯಂದಿರಿಗೆ ಇದೊಂದು ಪರಿಹಾಸ್ಯವಾಗಿ ಕಾಣಿಸಿತು.
15ಹೊತ್ತು ಮೂಡುವುದಕ್ಕೆ ಮುಂಚೆ ದೂತರು ಲೋಟನಿಗೆ, “ಏಳು, ನಿನ್ನ ಹೆಂಡತಿ ಮತ್ತು ಹೆಣ್ಣುಮಕ್ಕಳಿಬ್ಬರನ್ನು ಕರೆದುಕೊಂಡು ಬೇಗನೆ ಹೊರಡು; ಇಲ್ಲದಿದ್ದರೆ ಊರಿಗೆ ಬರಲಿರುವ ದಂಡನೆಯಲ್ಲಿ ನೀನೂ ಸಿಕ್ಕಿಕೊಂಡು ನಾಶವಾಗಬೇಕಾದೀತು,” ಎಂದು ಹೇಳಿ ತ್ವರೆಪಡಿಸಿದರು. 16ಅವನು ಇನ್ನೂ ತಡಮಾಡುತ್ತಿರುವುದನ್ನು ಕಂಡು, ಆ ಮನುಷ್ಯರು ಅವನನ್ನು ಹಾಗು ಅವನ ಹೆಂಡತಿ ಮಕ್ಕಳನ್ನು ಕೈಹಿಡಿದು ಹೊರಗೆ ತಂದು ಊರಾಚೆಗೆ ಬಿಟ್ಟರು. ಸರ್ವೇಶ್ವರ ಸ್ವಾಮಿಗೆ ಅವನ ಮೇಲೆ ಅಷ್ಟು ಕನಿಕರವಿತ್ತು. 17ಊರ ಹೊರಗೆ ಬಿಟ್ಟಾದ ಮೇಲೆ ಆ ಇಬ್ಬರಲ್ಲಿ ಒಬ್ಬನು, “ಪ್ರಾಣ ಉಳಿಸಿಕೊಳ್ಳಬೇಕಾದರೆ ಓಡಬೇಕು, ಹಿಂದಕ್ಕೆ ನೋಡಬಾರದು; ಬಯಲುಸೀಮೆಯಲ್ಲೂ ನಿಲ್ಲದೆ ಗುಡ್ಡಗಾಡಿಗೆ ಓಡಬೇಕು, ಇಲ್ಲವಾದರೆ ನಾಶವಾದೀತು!” ಎಂದು ಎಚ್ಚರಿಸಿದನು.
18ಅದಕ್ಕೆ ಲೋಟನು, “ಸ್ವಾಮೀ ಅದು ನನ್ನಿಂದಾಗದು; 19ನಿಮ್ಮ ದಾಸನ ಮೇಲೆ ಮರುಕವಿಟ್ಟು, ಪ್ರಾಣ ಉಳಿಸಿದ್ದೇನೋ ಮಹಾ ಉಪಕಾರ ಆಯಿತು; ಆದರೆ ಗುಡ್ಡಗಾಡಿಗೆ ಓಡಿಹೋಗಲು ನನ್ನಿಂದಾಗದು, ಅಲ್ಲಿಗೆ ಸೇರುವುದಕ್ಕೆ ಮುಂಚೆಯೇ ಈ ವಿಪತ್ತಿಗೆ ಸಿಕ್ಕಿ ಸತ್ತೇನು. 20ಆದುದರಿಂದ ಅಗೋ, ಅಲ್ಲಿ ಊರೊಂದು ಕಾಣಿಸುತ್ತಿದೆ; ಅದು ಅಷ್ಟೇನು ದೂರವಲ್ಲ, ಚಿಕ್ಕ ಊರು, ಹೌದಲ್ಲವೆ? ಅಲ್ಲಿಗಾದರೂ ಹೋಗಲು ಅಪ್ಪಣೆಯಾದರೆ ಪ್ರಾಣ ಉಳಿಯುತ್ತದೆ,” ಎಂದನು.
21ಅದಕ್ಕಾತನು, “ಸರಿ, ಹಾಗೆಯೇ ಆಗಲಿ, ಈ ನಿನ್ನ ಕೋರಿಕೆಯನ್ನೂ ನೆರವೇರಿಸುತ್ತೇನೆ, ನೀನು ಹೇಳಿದ ಆ ಊರನ್ನು ಹಾಳುಮಾಡುವುದಿಲ್ಲ. 22ಬೇಗನೆ ಅಲ್ಲಿಗೆ ಹೋಗಿ ಸುರಕ್ಷಿತವಾಗಿರು, ನೀನು ಅಲ್ಲಿಗೆ ಮುಟ್ಟುವ ತನಕ ನಾನು ಏನನ್ನೂ ಮಾಡಲಿಕ್ಕಾಗುವುದಿಲ್ಲ,” ಎಂದನು. ಲೋಟನು ಆ ಊರನ್ನು ಚಿಕ್ಕದು ಎಂದು ಕರೆದುದಕ್ಕಾಗಿ ಅದಕ್ಕೆ “ಚೋಗರ್” ಎಂದು ಹೆಸರಾಯಿತು.
ಸೊದೋಮ್ - ಗೊಮೋರಗಳ ವಿನಾಶ
23ಲೋಟನು ಚೋಗರನ್ನು ಮುಟ್ಟುವಷ್ಟರಲ್ಲಿ ಸೂರ್ಯೋದಯವಾಗಿತ್ತು. 24ಆಗ ಸರ್ವೇಶ್ವರ ಸ್ವಾಮಿ ಸೊದೋಮ್ - ಗೊಮೋರಗಳ ಮೇಲೆ ಅಗ್ನಿ ಉರಿಯುತ್ತಿರುವ ಗಂಧಕಮಳೆ ಸುರಿಸಿದರು. 25ಆ ಪಟ್ಟಣಗಳನ್ನು, ಇಡೀ ಆ ಬಯಲುಸೀಮೆಯನ್ನೂ ಅವುಗಳ ನಿವಾಸಿಗಳನ್ನೂ ಹೊಲಗಳ ಬೆಳೆಯೆಲ್ಲವನ್ನೂ ಹಾಳುಮಾಡಿದರು. 26ಲೋಟನ ಹೆಂಡತಿಯೋ, ಅವನ ಹಿಂದೆ ಬರುತ್ತಿದ್ದಾಗ ಹಿಂದಿರುಗಿ ನೋಡಿದಳು; ಕೂಡಲೇ ಉಪ್ಪಿನ ಕಂಬವಾಗಿ ಮಾರ್ಪಟ್ಟಳು.
27ಇತ್ತ ಅಬ್ರಹಾಮನು ಬೆಳಿಗ್ಗೆ ಎದ್ದು ತಾನು ಸರ್ವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ನಿಂತಿದ್ದ ಸ್ಥಳಕ್ಕೆ ಮರಳಿ ಬಂದನು. 28ಸೊದೋಮ್ - ಗೊಮೋರ ಹಾಗೂ ಆ ಬಯಲುಸೀಮೆಯತ್ತ ಅವನು ಕಣ್ಣುಹಾಯಿಸಿದಾಗ, ಇಗೋ, ಆ ಪ್ರದೇಶದಿಂದ ಹೊಗೆ, ದೊಡ್ಡ ಆವಿಗೆಯ ಹೊಗೆಯಂತೆ ಭುಗಿಲೇರುತ್ತಿತ್ತು. 29ದೇವರು ಆ ಬಯಲುಸೀಮೆಯ ಪಟ್ಟಣಗಳನ್ನು ನಾಶಮಾಡಿದಾಗ ಲೋಟನು ವಾಸವಾಗಿದ್ದ ಊರುಗಳನ್ನೇನೋ ಹಾಳುಮಾಡಿದರು, ಆದರೆ ಅಬ್ರಹಾಮನನ್ನು ನೆನಪಿಗೆ ತಂದುಕೊಂಡು ಲೋಟನನ್ನು ತಪ್ಪಿಸಿ ಕಾಪಾಡಿದರು.
ಲೋಟನಿಂದ ಮೋವಾಬ್ಯರ ಹಾಗೂ ಅಮೋನಿಯರ ಉಗಮ
30ಲೋಟನು ಚೋಗರಿನಲ್ಲಿ ಮನೆ ಮಾಡುವುದಕ್ಕೆ ಅಂಜಿದನು. ಈ ಕಾರಣ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಗುಡ್ಡಗಾಡನ್ನು ಹತ್ತಿ ಅಲ್ಲಿದ್ದ ಒಂದು ಗವಿಯಲ್ಲಿ ವಾಸಮಾಡಿದನು. 31ಇಂತಿರಲು, ಅವನ ಹಿರಿಯ ಮಗಳು ತನ್ನ ತಂಗಿಗೆ ಹೀಗೆಂದಳು. “ನಮ್ಮ ತಂದೆ ಮುದುಕ; ಲೋಕ ಪದ್ಧತಿಯ ಪ್ರಕಾರ ನಮ್ಮನ್ನು ಮದುವೆ ಮಾಡಿಕೊಳ್ಳುವ ಗಂಡುಗಳು ಇಲ್ಲೆಲ್ಲಿಯೂ ಇಲ್ಲ. 32ಎಂದೇ ಬಾ ತಂದೆಗೆ ದ್ರಾಕ್ಷಾರಸವನ್ನು ಕುಡಿಸೋಣ; ಅವನ ಸಂಗಡ ಮಲಗಿಕೊಂಡು ತಂದೆಯಿಂದಲಾದರೂ ಸಂತಾನ ಪಡೆದುಕೊಳ್ಳೋಣ,“ ಎಂದಳು. 33ಆ ರಾತ್ರಿ ಅವರು ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದರು. ಹಿರಿಯ ಮಗಳು ಅವನ ಸಂಗಡ ಮಲಗಿಕೊಂಡಳು. ಅವಳು ಯಾವಾಗ ತನ್ನ ಸಂಗಡ ಮಲಗಿಕೊಂಡಳೋ, ಯಾವಾಗ ಎದ್ದು ಹೋದಳೋ ಏನೊಂದೂ ಅವನಿಗೆ ತಿಳಿಯಲಿಲ್ಲ. 34ಮಾರನೆಯ ದಿನ ಹಿರಿಯಳು ಕಿರಿಯಳಿಗೆ, “ನಿನ್ನೆ ರಾತ್ರಿ ನಾನು ಅಪ್ಪನ ಸಂಗಡ ಮಲಗಿದ್ದೆ. ಈ ರಾತ್ರಿ ಕೂಡ ಅವನಿಗೆ ದ್ರಾಕ್ಷಾರಸವನ್ನು ಕುಡಿಸೋಣ; ಆಮೇಲೆ ನೀನು ಅವನ ಸಂಗಡ ಮಲಗಿಕೊ; ಹೀಗಾದರೂ ನಮ್ಮ ತಂದೆಯ ಸಂತಾನ ಉಳಿಸೋಣ”, ಎಂದು ಹೇಳಿದಳು. 35ಆ ರಾತ್ರಿಯೂ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದ ಮೇಲೆ ಕಿರಿಯ ಮಗಳು ಅವನ ಸಂಗಡ ಮಲಗಿಕೊಂಡಳು. ಅವಳು ಯಾವಾಗ ತನ್ನ ಸಂಗಡ ಮಲಗಿದಳೋ, ಯಾವಾಗ ಎದ್ದು ಹೋದಳೋ ಏನೊಂದೂ ಅವನಿಗೆ ತಿಳಿಯಲಿಲ್ಲ. 36ಹೀಗೆ ಲೋಟನ ಇಬ್ಬರು ಹೆಣ್ಣುಮಕ್ಕಳು ಗರ್ಭಿಣಿಯರಾದರು. 37ಹಿರಿಯಳು ಗಂಡುಮಗುವನ್ನು ಹೆತ್ತು ಅದಕ್ಕೆ “ಮೋವಾಬ್” ಎಂದು ಹೆಸರಿಟ್ಟಳು. ಇಂದಿನವರೆಗೂ ಇರುವ ಮೋವಾಬ್ಯರಿಗೆ ಅವನೇ ಮೂಲಪುರುಷ. 38ಕಿರಿಯಳೂ ಗಂಡುಮಗುವನ್ನು ಹೆತ್ತು ಅದಕ್ಕೆ ‘ಬಿನಮ್ಮಿ’ ಎಂದು ಹೆಸರಿಟ್ಟಳು. ಇಂದಿನವರೆಗೂ ಇರುವ ಅಮ್ಮೋನಿಯರಿಗೆ ಇವನೇ ಮೂಲಪುರುಷ.
Currently Selected:
ಆದಿಕಾಂಡ 19: KANCLBSI
Highlight
Share
Copy
Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.