YouVersion Logo
Search Icon

ಆದಿಕಾಂಡ 32

32
ಏಸಾವನ ಭೇಟಿಗೆ ಸಿದ್ಧತೆ
1ಇತ್ತ ಯಕೋಬನು ತನ್ನ ಪ್ರಯಾಣವನ್ನು ಮುಂದುವರೆಸಿದನು. 2ದೇವದೂತರು ಅವನೆದುರಿಗೆ ಬಂದರು. ಯಕೋಬನು ಅವರನ್ನು ನೋಡಿ, “ಇದು ದೇವರ ಪಾಳೆಯ,” ಏಂದು ಹೇಳಿ ಆ ಸ್ಥಳಕ್ಕೆ ‘ಮಹನಯಿಮ್’#32:2 ಎಂದರೆ : ಎರಡು ಪಾಳೆಯಗಳು. ಎಂದು ಹೆಸರಿಟ್ಟನು.
3ಬಳಿಕ ಯಕೋಬನು ಎದೋಮ್ಯರ ನಾಡಿನ ‘ಸೇಯೀರ್’ ಎಂಬಲ್ಲಿ ವಾಸವಾಗಿದ್ದ ತನ್ನ ಅಣ್ಣ ಏಸಾವನ ಬಳಿಗೆ ಮುಂದಾಳುಗಳನ್ನು ಕಳಿಸಿದನು. 4ಕಳುಹಿಸುವಾಗ ಅವರಿಗೆ, “ನೀವು ನನ್ನೊಡೆಯ ಏಸಾವನ ಬಳಿಗೆ ಹೋಗಿ ಈ ಸಮಾಚಾರವನ್ನು ಕೊಡಿ: ‘ನಿಮ್ಮ ದಾಸ ಯಕೋಬನಾದ ನಾನು ಇಷ್ಟು ದಿನ ಲಾಬಾನನ ಬಳಿ ವಾಸಮಾಡಬೇಕಾಗಿ ಬಂದಿತು. 5ನನಗೆ ಎತ್ತು - ಕತ್ತೆ, ಆಡು - ಕುರಿ, ದಾಸ - ದಾಸಿಯರು ಇದ್ದಾರೆ. ನನ್ನೊಡೆಯರಾದ ನೀವು ನನ್ನ ಬಗ್ಗೆ ದಯದಾಕ್ಷಿಣ್ಯವುಳ್ಳವರಾಗಿರಬೇಕೆಂಬ ಕೋರಿಕೆಯಿಂದ ನಮ್ಮನ್ನು ನಿಮ್ಮ ಬಳಿಗೆ ಕಳಿಸಿದ್ದಾರೆ' ಎಂದು ತಿಳಿಸಿರಿ” ಎಂದನು.
6ಆ ಆಳುಗಳು ಹೋಗಿ ಯಕೋಬನ ಬಳಿಗೆ ಹಿಂದಿರುಗಿ ಬಂದು, “ನಾವು ನಿಮ್ಮ ಅಣ್ಣ ಏಸಾವನ ಬಳಿಗೆ ಹೋಗಿದ್ದೆವು. ಅವರು ನಾನೂರು ಜನರ ಸಮೇತ ನಿಮ್ಮನ್ನು ಎದುರುಗೊಳ್ಳಲು ಬರುತ್ತಿದ್ದಾರೆ,” ಎಂದು ತಿಳಿಸಿದರು. 7ಆಗ ಯಕೋಬನು ಬಹಳ ದಿಗಿಲುಗೊಂಡನು, ಕಳವಳಗೊಂಡನು; ತನ್ನ ಜನರನ್ನೂ ಕುರಿ, ದನ, ಒಂಟೆಗಳನ್ನೂ ಎರಡು ಪರಿವಾರಗಳಾಗಿ ವಿಂಗಡಿಸಿದನು. 8ಏಸಾವನು ಒಂದು ಪರಿವಾರದ ಮೇಲೆ ಬಿದ್ದರೆ ಇನ್ನೊಂದು ತಪ್ಪಿಸಿಕೊಳ್ಳಬಹುದೆಂಬುದು ಅವನ ಯೋಚನೆಯಾಗಿತ್ತು.
9ಇದಲ್ಲದೆ ಯಕೋಬನು ದೇವರನ್ನು ಹೀಗೆಂದು ಪ್ರಾರ್ಥಿಸಿದನು: “ಸ್ವಾಮಿ ಸರ್ವೇಶ್ವರಾ, ನನ್ನ ತಂದೆ ತಾತಂದಿರಾದ ಇಸಾಕ, ಅಬ್ರಹಾಮರ ದೇವರೇ, ಸ್ವಂತ ನಾಡಿಗೆ, ಬಂಧುಬಳಗದವರ ಬಳಿಗೆ ಹಿಂದಿರುಗಬೇಕೆಂದು ನನಗೆ ನೀವೇ ಆಜ್ಞಾಪಿಸಿದಿರಿ: 'ನಿನಗೆ ಒಳ್ಳೆಯದನ್ನೇ ಮಾಡುತ್ತೇನೆ' ಎಂದು ವಾಗ್ದಾನ ಮಾಡಿದವರು ನೀವೇ ಅಲ್ಲವೆ? 10ದಾಸನಾದ ನನ್ನ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ನಿಮ್ಮ ವಾಗ್ದಾನವನ್ನು ನೆರವೇರಿಸಿದ್ದೀರಿ. ನಾನು ಅದಕ್ಕೆ ಕೇವಲ ಅಪಾತ್ರನು. ನಾನು ಮೊದಲು ಈ ಜೋರ್ಡನ್ ನದಿಯನ್ನು ದಾಟಿದಾಗ ನನಗಿದ್ದುದು ಒಂದು ಊರುಗೋಲು ಮಾತ್ರ. ಈಗ ಎರಡು ಪರಿವಾರಗಳಿಗೆ ಒಡೆಯನಾಗಿದ್ದೇನೆ. 11ನನ್ನ ಅಣ್ಣ ಏಸಾವನು ಬಂದು ನನ್ನನ್ನೂ ನನ್ನ ಮಕ್ಕಳನ್ನೂ ಅವರ ತಾಯಂದಿರನ್ನೂ ಕೊಲ್ಲುವನೋ ಏನೋ ಎಂಬ ಭಯ ನನಗಿದೆ. ಅವನ ಕೈಗೆ ಸಿಕ್ಕದಂತೆ ನಮ್ಮನ್ನು ಕಾಪಾಡಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 12ನಿನಗೆ ಒಳ್ಳೆಯದನ್ನೇ ಮಾಡಿ ನಿನ್ನ ಸಂತತಿಯನ್ನು ಎಣಿಸಲಾಗದ ಕಡಲತೀರದ ಮರಳಿನಂತೆ ಹೆಚ್ಚಿಸುವೆನು, ಎಂದು ಹೇಳಿದವರು ನೀವೇ ಅಲ್ಲವೇ?”
13-15ಯಕೋಬನು ಆ ರಾತ್ರಿಯನ್ನು ಅಲ್ಲೇ ಕಳೆದನು. ಇನ್ನೂರು ಆಡು, ಇಪ್ಪತ್ತು ಹೋತ, ಇನ್ನೂರು ಕುರಿ, ಇಪ್ಪತ್ತು ಟಗರು, ಹಾಲು ಕರೆಯುವ ಮೂವತ್ತು ಒಂಟೆ ಮತ್ತು ಅವುಗಳ ಮರಿ, ನಲವತ್ತು ಆಕಳು, ಹತ್ತು ಹೋರಿ, ಇಪ್ಪತ್ತು ಹೆಣ್ಣುಕತ್ತೆ, ಹತ್ತು ಗಂಡುಕತ್ತೆ ಇವುಗಳನ್ನು ತನ್ನ ಅಣ್ಣ ಏಸಾವನಿಗೆ ಕಾಣಿಕೆಗಾಗಿ ತೆಗೆದುಕೊಂಡನು. 16ಇವುಗಳನ್ನು ಹಿಂಡುಹಿಂಡಾಗಿ ವಿಂಗಡಿಸಿ ತನ್ನ ಆಳುಗಳ ವಶಕ್ಕೆ ಒಪ್ಪಿಸಿದನು. “ನೀವು ನನಗಿಂತ ಮುಂಚಿತವಾಗಿ ಹೋಗಿರಿ; ಹಿಂಡು ಹಿಂಡಿಗೂ ಮಧ್ಯೆ ಸ್ಥಳವಿರಲಿ,” ಎಂದು ಆ ಆಳುಗಳಿಗೆ ಹೇಳಿದನು. 17ಮೊದಲನೆಯ ಹಿಂಡಿನ ಆಳಿಗೆ, “ನನ್ನ ಅಣ್ಣ ಏಸಾವನು ನಿನ್ನೆದುರಿಗೆ ಬಂದು, “ನೀನು ಯಾರ ಆಳು? ಎಲ್ಲಿಗೆ ಹೋಗುತ್ತಿರುವೆ? ನಿನ್ನ ಮುಂದೆ ಇರುವ ಇವೆಲ್ಲ ಯಾರವು?” ಎಂದು ಕೇಳಿದರೆ ನೀನು, 18‘ಇವು ನಿಮ್ಮ ದಾಸ ಯಕೋಬನವು; ಒಡೆಯರಾದ ನಿಮಗೆ ಇವುಗಳನ್ನು ಕಾಣಿಕೆಯಾಗಿ ಕಳಿಸಿಕೊಟ್ಟಿದ್ದಾರೆ; ಅವರೂ ನಮ್ಮ ಹಿಂದೆ ಬರುತ್ತಿದ್ದಾರೆ’ ಎಂದು ಉತ್ತರಕೊಡಬೇಕು,” ಎಂಬುದಾಗಿ ಅಪ್ಪಣೆ ಕೊಟ್ಟನು. 19ಹಾಗೆಯೇ ಎರಡನೆಯವನಿಗೂ ಮೂರನೆಯವನಿಗೂ ಹಿಂಡುಗಳ ಹಿಂದೆ ಹೋದವರೆಲ್ಲರಿಗೂ, “ನೀವು ಏಸಾವನನ್ನು ಕಾಣುವಾಗ ಇದೇ ರೀತಿಯಾಗಿ ಮಾತನಾಡಬೇಕು. 20‘ನಿಮ್ಮ ದಾಸ ಯಕೋಬನು ನಮ್ಮ ಹಿಂದೆ ಬರುತ್ತಿದ್ದಾರೆ,’ ಎನ್ನಿರಿ” ಎಂದು ಆಜ್ಞಾಪಿಸಿದನು. ಯಕೋಬನು ತನ್ನೊಳಗೆ, “ನನಗೆ ಮುಂಚಿತವಾಗಿ ಹೋಗುವ ಈ ಕಾಣಿಕೆಯಿಂದ ಏಸಾವನನ್ನು ಸಮಾಧಾನಪಡಿಸಿದ ಮೇಲೆ ನಾನು ಅವನನ್ನು ಭೇಟಿ ಆಗುತ್ತೇನೆ. ಆಗ ಒಂದು ವೇಳೆ ನನ್ನನ್ನು ಪ್ರೀತಿಯಿಂದ ಅಂಗೀಕರಿಸುವನು,” ಎಂದುಕೊಂಡನು. 21ಆದಕಾರಣ ಅವನು ಆ ಕಾಣಿಕೆಯನ್ನು ಮುಂಚಿತವಾಗಿ ಕಳಿಸಿ, ತಾನು ಆ ರಾತ್ರಿ ಆ ತನ್ನ ಪಾಳೆಯದೊಳಗೇ ಇದ್ದನು.
ದೇವದೂತನೊಡನೆ ಮಲ್ಲಯುದ್ಧ
22ಆ ರಾತ್ರಿ ಯಕೋಬನು ತನ್ನ ಇಬ್ಬರು ಹೆಂಡತಿಯರನ್ನೂ ಇಬ್ಬರು ದಾಸಿಯರನ್ನೂ ಹನ್ನೊಂದು ಮಂದಿ ಮಕ್ಕಳನ್ನೂ ಕರೆದುಕೊಂಡು ‘ಯಬ್ಬೋಕ್’ ಹೊಳೆಯನ್ನು ದಾಟುವ ಸ್ಥಳದಲ್ಲಿ ದಾಟಿದನು. 23ಅವರನ್ನೂ ತನ್ನ ಆಸ್ತಿಪಾಸ್ತಿಯನ್ನೂ ದಾಟಿಸಿದ ಮೇಲೆ 24ಯಕೋಬನು ಒಂಟಿಗನಾಗಿ ಹಿಂದೆ ನಿಂತಿದ್ದನು, ಯಾರೋ ಒಬ್ಬ ಪುರುಷ ಬೆಳಗಾಗುವ ತನಕ ಅವನ ಸಂಗಡ ಹೋರಾಡಿದನು.
25ಆ ಪುರುಷ ತಾನು ಗೆಲ್ಲದೆ ಇರುವುದನ್ನು ಕಂಡು ಯಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಹೋರಾಡುತ್ತಿರುವಾಗಲೆ ಯಕೋಬನ ತೊಡೆಯ ಕೀಲು ತಪ್ಪಿತು. 26ಆ ಪುರುಷ, “ನನ್ನನ್ನು, ಹೋಗಬಿಡು, ಬೆಳಗು ಆಗುತ್ತಿದೆ,” ಎನ್ನಲು ಯಕೋಬನು, “ನೀವು ನನ್ನನ್ನು ಆಶೀರ್ವದಿಸಿದ ಹೊರತು, ನಿಮ್ಮನ್ನು ಹೋಗಬಿಡುವುದಿಲ್ಲ,” ಎಂದನು.
27ಆ ಪುರುಷ, “ನಿನ್ನ ಹೆಸರೇನು?” ಎಂದು ಕೇಳಿದ್ದಕ್ಕೆ ಯಕೋಬನು, “ನನ್ನ ಹೆಸರು ಯಕೋಬ” ಎಂದನು.
28ಅವನು ಯಕೋಬನಿಗೆ, “ಇನ್ನು ಮೇಲೆ ನೀನು ಯಕೋಬ ಎನಿಸಿಕೊಳ್ಳುವುದಿಲ್ಲ; ದೇವರ ಸಂಗಡ ಹಾಗು ಮನುಷ್ಯರ ಸಂಗಡ ಹೋರಾಡಿ ಗೆದ್ದವನಾದ್ದರಿಂದ ನಿನಗೆ ‘ಇಸ್ರಾಯೇಲ್’#32:28 ಎಂದರೆ : ದೇವರ ಸಂಗಡ ಹೋರಾಡಿದವನು. ಎಂದು ಹೆಸರುಂಟಾಗುವುದು,” ಎಂದು ಹೇಳಿದನು.
29ಯಕೋಬನು, “ನಿಮ್ಮ ಹೆಸರನ್ನು ದಯವಿಟ್ಟು ನನಗೆ ತಿಳಿಸಬೇಕು,” ಎಂದಾಗ ಆ ಪುರುಷ, “ನನ್ನ ಹೆಸರನ್ನು ವಿಚಾರಿಸುವುದೇಕೆ?” ಎಂದು ಹೇಳಿ ಅಲ್ಲೇ ಅವನನ್ನು ಆಶೀರ್ವದಿಸಿದನು.
30ಯಕೋಬನು, “ನಾನು ದೇವರನ್ನು ಮುಖಾಮುಖಿಯಾಗಿ ಕಂಡಿದ್ದರೂ ಪ್ರಾಣಸಹಿತ ಉಳಿದಿದ್ದೇನಲ್ಲಾ!” ಎಂದುಕೊಂಡು ಆ ಸ್ಥಳಕ್ಕೆ ‘ಪೆನೀಯೇಲ್’#32:30 ಎಂದರೆ - ದೇವರ ದರ್ಶನ. ಎಂದು ಹೆಸರಿಟ್ಟನು. 31ಅವನು ಪೆನೂವೇಲನ್ನು ದಾಟುತ್ತಿರುವಾಗ ಸೂರ್ಯೋದಯ ಆಯಿತು; ಕೀಲು ಕಳಚಿದ ತೊಡೆಯ ನಿಮಿತ್ತ ಅವನು ಕುಂಟುಕೊಂಡೇ ನಡೆದನು. 32ಆ ಪುರುಷನು ಯಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಇಸ್ರೆಯೇಲರು ಇಂದಿನವರೆಗೂ ತೊಡೆಯ ಕೀಲಿನ ಮೇಲಿರುವ ಮಾಂಸವನ್ನು ತಿನ್ನುವುದಿಲ್ಲ.

Highlight

Share

Copy

None

Want to have your highlights saved across all your devices? Sign up or sign in