ಆದಿಕಾಂಡ 34
34
ದೀನಳಿಗಾದ ಮಾನಭಂಗ
1ಯಕೋಬನಿಗೆ ಲೇಯಳಲ್ಲಿ ಹುಟ್ಟಿದ ದೀನಳು ಒಂದು ದಿನ ಆ ನಾಡಿನ ಮಹಿಳೆಯರನ್ನು ನೋಡಲು ಹೊರಗೆ ಹೋಗಿ ಇದ್ದಳು. 2ಹಿವ್ವಿಯನಾದ ಹಮೋರನ ಮಗನೂ ಆ ನಾಡಿಗೆ ಒಡೆಯನೂ ಆದ ಶೆಕೆಮನು ಆಕೆಯನ್ನು ನೋಡಿ, ಎತ್ತಿಕೊಂಡು ಹೋಗಿ, ಆಕೆಯನ್ನು ಜತೆಗೂಡಿ ಮಾನಭಂಗ ಮಾಡಿದನು. 3ಅವನ ಮನಸ್ಸು ಯಕೋಬನ ಮಗಳಾದ ಆ ದೀನಳ ಮೇಲೆಯೇ ತಲ್ಲೀನಗೊಂಡಿತ್ತು. ಆಕೆಯನ್ನು ಮೋಹಿಸಿ ಅವಳ ಮನವೊಲಿಸುವಂಥ ಮಾತುಗಳನ್ನಾಡಿದನು. 4ತನ್ನ ತಂದೆ ಹಮೋರನನ್ನು, “ಆ ಹುಡುಗಿಯನ್ನು ನನಗೆ ಮದುವೆಮಾಡಿಸಬೇಕು,” ಎಂದು ಕೇಳಿಕೊಂಡನು.
5ತನ್ನ ಮಗಳಾದ ದೀನಳಿಗೆ ಶೆಕೆಮನಿಂದ ಮಾನಭಂಗವಾಯಿತೆಂಬ ಸಮಾಚಾರ ಯಕೋಬನಿಗೆ ಮುಟ್ಟಿದಾಗ ಅವನ ಗಂಡು ಮಕ್ಕಳು ಅಡವಿಯಲ್ಲಿ ದನಕಾಯುತ್ತಿದ್ದರು. ಅವರು ಬರುವ ತನಕ ಯಕೋಬನು ಸುಮ್ಮನೆ ಇದ್ದನು. 6ಅಷ್ಟರಲ್ಲಿ, ಶೆಕೆಮನ ತಂದೆ ಹಮೋರನು ಯಕೋಬನ ಸಂಗಡ ಮಾತನಾಡಲು ಊರಿಂದ ಹೊರಟುಬಂದನು. 7ಇತ್ತ ಯಕೋಬನ ಗಂಡು ಮಕ್ಕಳು ತಂಗಿಯ ಸಂಗತಿಯನ್ನು ಕೇಳಿ ಅಡವಿಯಿಂದ ಬಂದರು. ಶೆಕೆಮನು ತಮ್ಮ ತಂಗಿಯನ್ನು ಬಲಾತ್ಕಾರದಿಂದ ಕೂಡಿ, ಮಾಡಬಾರದನ್ನು ಮಾಡಿ, ಇಸ್ರಯೇಲರಿಗೆ ಘನ ಅವಮಾನವನ್ನು ಮಾಡಿದ್ದರಿಂದ ಅವರು ತಳಮಳಗೊಂಡು ಕಡುಕೋಪದಿಂದ ಇದ್ದರು.
8ಹಮೋರನು ಅವರಿಗೆ, “ನನ್ನ ಮಗ ಶೆಕೆಮನು ನಿಮ್ಮ ಹುಡುಗಿಯನ್ನು ಬಹಳ ಆಸೆಯಿಂದ ಮೋಹಿಸಿದ್ದಾನೆ; ದಯವಿಟ್ಟು ಆಕೆಯನ್ನು ಅವನಿಗೆ ಮದುವೆ ಮಾಡಿಕೊಡಬೇಕು; 9ಅಲ್ಲದೆ ನೀವು ನಮ್ಮಲ್ಲೇ ವಾಸವಾಗಿರಬಹುದು; ನಿಮ್ಮ ಹೆಣ್ಣುಮಕ್ಕಳನ್ನು ನಮಗೆ ಕೊಡಬೇಕು; ನಮ್ಮ ಹೆಣ್ಣು ಮಕ್ಕಳನ್ನು ನೀವು ತೆಗೆದುಕೊಳ್ಳಬೇಕು; ನಾವು ಬೀಗರಾಗಿ ಬಾಳಬೇಕು, ನಾಡೆಲ್ಲಾ ನಿಮ್ಮ ಮುಂದೆ ಇದೆ. 10ಇದರಲ್ಲಿ ವಾಸಿಸಿ, ವ್ಯಾಪಾರಮಾಡಿ, ನೀವು ಆಸ್ತಿಯನ್ನು ಸಂಪಾದಿಸಿಕೊಳ್ಳಬಹುದು,” ಎಂದು ಹೇಳಿದನು.
11ಬಳಿಕ ಶೆಕೆಮನು ಆ ಹುಡುಗಿಯ ತಂದೆ ಮತ್ತು ಸಹೋದರರಿಗೆ , “ನನ್ನ ಮೇಲೆ ನಿಮಗೆ ಕೃಪೆಯಿರಲಿ; ನೀವು ಹೇಳುವಷ್ಟನ್ನು ಕೊಡುತ್ತೇನೆ. 12ಹೆಣ್ಣಿಗಾಗಿ ತೆರವನ್ನೂ ಕಾಣಿಕೆಯನ್ನೂ ನೀವು ಹೇಳುವ ಮೇರೆಗೆ ಎಷ್ಟಾದರೂ ಕೊಡುತ್ತೇನೆ. ಹೇಗೂ ಆ ಹುಡುಗಿಯನ್ನು ನನಗೆ ಮದುವೆ ಮಾಡಿಕೊಡಿ,” ಎಂದು ಕೇಳಿಕೊಂಡನು.
13ಶೆಕೆಮನು ತಮ್ಮ ತಂಗಿ ದೀನಳನ್ನು ಕೆಡಿಸಿದ್ದರಿಂದ ಯಕೋಬನ ಮಕ್ಕಳು ಅವನಿಗೂ ಅವನ ತಂದೆ ಹಮೋರನಿಗೂ ಕಪಟದಿಂದ ಈ ಉತ್ತರಕೊಟ್ಟರು; 14“ಸುನ್ನತಿ ಇಲ್ಲದವರಿಗೆ ನಮ್ಮ ತಂಗಿಯನ್ನು ಕೊಡುವುದಕ್ಕೆ ಆಗುವುದಿಲ್ಲ. ಹಾಗೆ ಕೊಡುವುದು ನಮಗೆ ಅವಮಾನಕರ. 15ನಿಮ್ಮಲ್ಲಿ ಗಂಡಸರೆಲ್ಲರು ಸುನ್ನತಿಮಾಡಿಸಿಕೊಂಡು ನಮ್ಮಂತೆ ಆಗಬೇಕು. 16ಹಾಗೆ ಮಾಡಿಸಿಕೊಂಡರೆ ಮಾತ್ರ ನಾವು ನಿಮ್ಮ ಮಾತಿನಂತೆ ನಮ್ಮ ಹೆಣ್ಣು ಮಕ್ಕಳನ್ನು ನಿಮಗೆ ಕೊಡಬಹುದು, ನಿಮ್ಮ ಹೆಣ್ಣು ಮಕ್ಕಳನ್ನು ನಾವು ತೆಗೆದುಕೊಳ್ಳಬಹುದು; ನಿಮ್ಮಲ್ಲಿ ವಾಸಮಾಡಿ, ನಿಮ್ಮೊಡನೆ ಒಂದೇ ಕುಲವಾಗಿರಬಹುದು. 17ನೀವು ನಮ್ಮ ಮಾತಿಗೆ ಒಪ್ಪಿ ಸುನ್ನತಿಮಾಡಿಸಿಕೊಳ್ಳದೆ ಹೋದರೆ ನಾವು ನಮ್ಮ ಹುಡುಗಿಯನ್ನು ಕರೆದುಕೊಂಡು ಹೊರಟುಹೋಗುತ್ತೇವೆ,” ಎಂದರು.
18ಅವರು ಹೇಳಿದ್ದು ಹಮೋರನಿಗೂ ಅವನ ಮಗ ಶೆಕೆಮನಿಗೂ ಉಚಿತವೆಂದೇ ತೋಚಿತು. 19ಆ ಯುವಕನು ಯಕೋಬನ ಮಗಳಲ್ಲಿ ಅನುರಕ್ತನಾಗಿದ್ದುದರಿಂದ ಅವರು ಹೇಳಿದಂತೆ ಮಾಡಲು ಹಿಂಜರಿಯಲಿಲ್ಲ; ಅಪ್ಪನ ಮನೆಗೆ ಅವನೇ ಮುಖ್ಯಸ್ಥನಾಗಿದ್ದನು.
20ಎಂತಲೆ ಹಮೋರನು ಮತ್ತು ಅವನ ಮಗ ಶೆಕೆಮನು ಊರಬಾಗಿಲಿಗೆ ಬಂದರು. ಊರಿನವರನ್ನೆಲ್ಲಾ ಸಂಬೋಧಿಸುತ್ತಾ, ಹೀಗೆಂದರು: 21“ಈ ಜನರು ನಮ್ಮೊಡನೆ ಶಾಂತಿಸಮಾಧಾನದಿಂದಿದ್ದಾರೆ; ಇವರು ನಮ್ಮ ನಾಡಿನಲ್ಲೇ ವಾಸಮಾಡಿಕೊಂಡು ವ್ಯಾಪಾರಮಾಡಲಿ; ಈ ನಾಡು ಅವರಿಗೂ ನಮಗೂ ಸಾಕಾಗುವಷ್ಟು ವಿಸ್ತಾರವಾಗಿದೆ. ನಾವು ಅವರ ಹೆಣ್ಣು ಮಕ್ಕಳನ್ನು ಮದುವೆಮಾಡಿಕೊಳ್ಳೋಣ, ನಮ್ಮ ಹೆಣ್ಣು ಮಕ್ಕಳನ್ನು ಅವರಿಗೆ ಕೊಡೋಣ. 22ಆದರೆ ಅವರು ಸುನ್ನತಿಮಾಡಿಕೊಂಡವರು. ಆದ್ದರಿಂದ ನಮ್ಮಲ್ಲಿಯೂ ಗಂಡಸರೆಲ್ಲರೂ ಸುನ್ನತಿಮಾಡಿಸಿಕೊಳ್ಳಬೇಕು ಎನ್ನುತ್ತಾರೆ. ಹಾಗೆ ಮಾಡಿಸಿಕೊಂಡರೆ ಮಾತ್ರ ಇವರು ನಮ್ಮಲ್ಲಿ ವಾಸಮಾಡುವುದಕ್ಕೂ ನಮ್ಮ ಸಂಗಡ ಒಂದೇ ಕುಲವಾಗುವುದಕ್ಕೂ ಒಪ್ಪುತ್ತಾರೆ. 23ಅವರ ಕುರಿದನಗಳೂ ಆಸ್ತಿಪಾಸ್ತಿಯೂ ಪಶುಪ್ರಾಣಿಗಳೂ ನಮ್ಮವುಗಳೇ ಆಗುತ್ತವಲ್ಲವೆ? ಆದ್ದರಿಂದ ಅವರು ನಮ್ಮಲ್ಲಿ ವಾಸಮಾಡುವಂತೆ ನಾವು ಅವರ ಮಾತಿಗೆ ಒಪ್ಪಿಕೊಳ್ಳೋಣ". 24ಹಮೋರನ ಮತ್ತು ಅವನ ಮಗ ಶೆಕೆಮನ ಈ ಮಾತಿಗೆ ಊರಿನವರೆಲ್ಲರು ಸಮ್ಮತಿಸಿದರು. ಅಂತೆಯೇ ಅವರಲ್ಲಿದ್ದ ಗಂಡಸರೆಲ್ಲರು ಸುನ್ನತಿಮಾಡಿಸಿಕೊಂಡರು.
25ಮೂರನೆಯ ದಿನ ಆ ಗಂಡಸರೆಲ್ಲರು ಗಾಯದಿಂದ ಇನ್ನು ಬಹಳ ಬಾಧೆಪಡುತ್ತಿದ್ದರು. ಆಗ, ಯಕೋಬನ ಮಕ್ಕಳಲ್ಲಿ ದೀನಳ ಸಹೋದರರಾದ ಸಿಮೆಯೋನ್ ಮತ್ತು ಲೇವಿ ಎಂಬ ಇಬ್ಬರು ಕೈಯಲ್ಲಿ ಕತ್ತಿಹಿಡಿದು ನಿಶ್ಚಿಂತೆ ಇಂದಿದ್ದ ಆ ಊರಿನವರ ಮೇಲೆ ಬಿದ್ದರು. ದಯೆದಾಕ್ಷಿಣ್ಯವಿಲ್ಲದೆ ಗಂಡಸರೆಲ್ಲರನ್ನು ಕೊಂದರು. 26ಹಮೋರ್ ಮತ್ತು ಅವನ ಮಗ ಶೆಕೆಮನನ್ನು ಕೊಂದು ದೀನಳನ್ನು ಅವನ ಮನೆಯಿಂದ ಕರೆದುಕೊಂಡು ಹೊರಟುಹೋದರು. 27ಯಕೋಬನ ಇತರ ಮಕ್ಕಳು ಹತರಾದವರ ಬಳಿಗೆ ಬಂದು, ‘ತಂಗಿಯನ್ನು ಅವಮಾನ ಪಡಿಸಿದವರು ಇವರೇ ಅಲ್ಲವೆ’, ಎಂದುಕೊಂಡು ಆ ಊರನ್ನೇ ಸೂರೆಮಾಡಿಬಿಟ್ಟರು. 28ಊರ ಒಳಗೂ ಹೊರಗೂ ಇದ್ದ ಕುರಿ, ದನ, ಕತ್ತೆಗಳನ್ನು ಕಿತ್ತುಕೊಂಡರು. 29ಮಡದಿ ಮಕ್ಕಳನ್ನೆಲ್ಲ ಸೆರೆಹಿಡಿದರು, ಅವರ ಮನೆಗಳಲ್ಲಿ ಇದ್ದುದನ್ನೆಲ್ಲ ದೋಚಿಕೊಂಡರು.
30ಆಗ ಯಕೋಬನು, ಸಿಮೆಯೋನ್ ಮತ್ತು ಲೇವಿಯರಿಗೆ, “ನೀವು ನನ್ನ ಹೆಸರನ್ನು ಈ ನಾಡಿನ ನಿವಾಸಿಗಳಾದ ಕಾನಾನ್ಯರಿಗೂ ಪೆರಿಜೀಯರಿಗೂ ಅಸಹ್ಯಮಾಡಿಬಿಟ್ಟರಿ; ನನ್ನನ್ನು ಅಪಾಯಕ್ಕೆ ಗುರಿಮಾಡಿದ್ದೀರಿ. ನನಗಿರುವ ಜನರು ಕೆಲವರೇ. ಈ ನಾಡಿನವರೆಲ್ಲರು ಒಟ್ಟಿಗೆ ಬಂದು ನನ್ನ ಮೇಲೆ ಬಿದ್ದರೆ ನಾನು ಮಾತ್ರವಲ್ಲ, ನನ್ನ ಮನೆಯವರೆಲ್ಲರೂ ನಿರ್ಮೂಲವಾಗುತ್ತೇವೆ ಅಲ್ಲವೇ?” ಎಂದನು.
31ಅದಕ್ಕೆ ಅವರು, “ಅವನು ಮಾತ್ರ ನಮ್ಮ ತಂಗಿಯನ್ನು ಒಬ್ಬ ಬೀದಿಯ ಸೂಳೆಯಂತೆ ನಡೆಸಿಕೊಳ್ಳಬಹುದೋ?" ಎಂದು ಪ್ರಶ್ನಿಸಿದರು.
Currently Selected:
ಆದಿಕಾಂಡ 34: KANCLBSI
Highlight
Share
Copy
Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.