ಆದಿಕಾಂಡ 37
37
ಜೋಸೆಫ್ ಮತ್ತು ಸೋದರರು
1ಯಕೋಬನು ತನ್ನ ತಂದೆ ಪ್ರವಾಸಿ ಆಗಿದ್ದ ಕಾನಾನ್ ನಾಡಿನಲ್ಲಿ ವಾಸ ಆಗಿದ್ದನು. ಅವನ ಮಕ್ಕಳ ಚರಿತ್ರೆ ಇದು:
2ಆಗ ಜೋಸೆಫನಿಗೆ ಹದಿನೇಳು ವರ್ಷ, ಇನ್ನೂ ಯುವಕ, ತನ್ನ ಅಣ್ಣಂದಿರ ಜೊತೆಯಲ್ಲಿ, ಅಂದರೆ ತನ್ನ ಮಲತಾಯಿಯರಾದ ಬಿಲ್ಹಾ, ಜಿಲ್ಪಾ ಎಂಬುವರ ಮಕ್ಕಳ ಜೊತೆಯಲ್ಲಿ, ಆಡುಕುರಿಗಳನ್ನು ಮೇಯಿಸುತ್ತಿದ್ದ, ಅಣ್ಣಂದಿರು ಏನಾದರೂ ತಪ್ಪಿ ನಡೆದರೆ ತಂದೆಗೆ ವರದಿ ಮಾಡುತ್ತಿದ್ದ.
3ಜೋಸೆಫನು ಯಕೋಬನಿಗೆ ಮುಪ್ಪಿನಲ್ಲಿ ಹುಟ್ಟಿದ ಮಗ. ಎಂದೇ ಯಕೋಬನಿಗೆ ಅವನ ಮೇಲೆ ಮಿಕ್ಕ ಮಕ್ಕಳಿಗಿಂತ ಮಿಗಿಲಾದ ಪ್ರೀತಿ. ಅಲಂಕೃತವಾದ ಒಂದು ನಿಲುವಂಗಿಯನ್ನೂ ಅವನಿಗೆ ಮಾಡಿಸಿಕೊಟ್ಟಿದ್ದ. 4ತಂದೆ ತನ್ನ ಎಲ್ಲ ಮಕ್ಕಳಿಗಿಂತ ಇವನನ್ನೇ ಹೆಚ್ಚಾಗಿ ಪ್ರೀತಿಸುವುದನ್ನು ಕಂಡು, ಅಣ್ಣಂದಿರು ಆ ಜೋಸೆಫನನ್ನು ಹಗೆಮಾಡಿದರು. ಅವನೊಡನೆ ಸ್ನೇಹಭಾವದಿಂದಲೂ ಮಾತಾಡದೆಹೋದರು.
5ಒಮ್ಮೆ ಜೋಸೆಫನಿಗೆ ಒಂದು ಕನಸು ಬಿತ್ತು. ಅದನ್ನು ತನ್ನ ಅಣ್ಣಂದಿರಿಗೆ ತಿಳಿಸಿದಾಗ ಅವರು ಅವನನ್ನು ಇನ್ನೂ ಹೆಚ್ಚಾಗಿ ದ್ವೇಷಿಸಿದರು. 6ಅವನು ಅವರಿಗೆ, “ನಾನು ಕನಸಿನಲ್ಲಿ ಕಂಡದ್ದನ್ನು ಹೇಳುತ್ತೇನೆ ಕೇಳಿ; 7ಈ ಕನಸಿನಲ್ಲಿ ನಾವು ಹೊಲದಲ್ಲಿ ಬೆಳೆಕೊಯ್ದು ಕಂತೆಗಳನ್ನು ಕಟ್ಟುತ್ತಾ ಇದ್ದೆವು. ಆಗ ನನ್ನ ಕಂತೆ ಎದ್ದುನಿಂತಿತು. ನಿಮ್ಮ ಕಂತೆಗಳು ಸುತ್ತಲೂ ಬಂದು ನನ್ನ ಕಂತೆಗೆ ಅಡ್ಡಬಿದ್ದುದನ್ನು ಕಂಡೆ,” ಎಂದು ಹೇಳಿದ.
8ಅದಕ್ಕೆ ಅವನ ಅಣ್ಣಂದಿರು, “ಏನು, ನೀನು ನಿಜವಾಗಿ ನಮ್ಮನ್ನು ಆಳುವೆಯಾ? ನಮ್ಮ ಮೇಲೆ ದೊರೆತನ ಮಾಡುವೆಯಾ?” ಎಂದು ಪ್ರಶ್ನಿಸಿದರು. ಅವನ ಕನಸುಗಳು, ಅವನ ಮಾತುಗಳು ಅವರನ್ನು ಮತ್ತಷ್ಟು ಹಗೆಗಳನ್ನಾಗಿ ಮಾಡಿದವು.
9ಜೋಸೆಫನಿಗೆ ಇನ್ನೊಂದು ಕನಸು ಬಿತ್ತು. ಅದನ್ನೂ ಅವನು ಅಣ್ಣಂದಿರಿಗೆ ತಿಳಿಸಿದ: “ನಾನು ಇನ್ನೊಂದು ಕನಸು ಕಂಡಿದ್ದೇನೆ. ಅದರಲ್ಲಿ ಸೂರ್ಯ, ಚಂದ್ರ, ಹಾಗೂ ನಕ್ಷತ್ರಗಳೂ ನನಗೆ ಅಡ್ಡಬಿದ್ದವು,” ಎಂದು ಹೇಳಿದ. 10ಈ ಕನಸನ್ನು ಅಣ್ಣಂದಿರಿಗೆ ಮಾತ್ರವಲ್ಲ, ತಂದೆಗೂ ತಿಳಿಸಿದ. ತಂದೆ ಅವನಿಗೆ, “ಇದೆಂಥ ಕನಸು, ನೀನು ಕಂಡದ್ದು! ನಾನು, ನಿನ್ನ ತಾಯಿ, ಹಾಗು ಅಣ್ಣತಮ್ಮಂದಿರು ನಿನಗೆ ಅಡ್ಡಬೀಳಲು ಬರುತ್ತೇವೋ” ಎಂದು ಹೇಳಿ ಅವನನ್ನು ಗದರಿಸಿದ. 11ಅಣ್ಣಂದಿರೋ ಅವನ ಮೇಲೆ ಹೊಟ್ಟೆಕಿಚ್ಚುಪಟ್ಟರು. ಆದರೆ ತಂದೆ ಈ ವಿಷಯವನ್ನು ಮನಸ್ಸಿನಲ್ಲೇ ಮೆಲುಕುಹಾಕಿದ.
ಈಜಿಪ್ಟಿಗೆ ಜೋಸೆಫನ ಮಾರಾಟ
12ಒಮ್ಮೆ ಜೋಸೆಫನ ಅಣ್ಣಂದಿರು ತಂದೆಯ ಆಡುಕುರಿಗಳನ್ನು ಮೇಯಿಸಲು ಶೆಕೆಮಿಗೆ ಹೋಗಿದ್ದರು. 13ಯಕೋಬನು ಜೋಸೆಫನಿಗೆ, “ನಿನ್ನ ಅಣ್ಣಂದಿರು ಶೆಕೆಮಿನಲ್ಲಿ ಆಡುಕುರಿಗಳನ್ನು ಮೇಯಿಸುತ್ತಿದ್ದಾರೆ, ಅಲ್ಲವೆ? ಅವರ ಬಳಿಗೆ ನಿನ್ನನ್ನು ಕಳಿಸಬೇಕೆಂದಿದ್ದೇನೆ,” ಎನ್ನಲು 14ಅವನು, “ಇಗೋ ಸಿದ್ಧನಿದ್ದೇನೆ,” ಎಂದ.
ಯಕೋಬನು ಅವನಿಗೆ, "ನೀನು ಹೋಗಿ ನಿನ್ನ ಅಣ್ಣಂದಿರ ಹಾಗೂ ಆಡುಕುರಿಗಳ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಬಾ,” ಎಂದು ಅಪ್ಪಣೆಕೊಟ್ಟು ಅವನನ್ನು ಹೆಬ್ರೋನ್ ಕಣಿವೆಯಿಂದ ಕಳಿಸಿಕೊಟ್ಟ. 15ಜೋಸೆಫನು ಹೊರಟ. ಶೆಕೆಮ್‍ಗೆ ಬಂದು ಅಡವಿಯೊಳಗೆ ತಿರುಗಾಡುತ್ತಿರುವಾಗ ಒಬ್ಬ ಮನುಷ್ಯನನ್ನು ಕಂಡ. ಆ ಮನುಷ್ಯ, “ಏನು ಹುಡುಕುತ್ತಾ ಇದ್ದೀಯಾ?” ಎಂದು ವಿಚಾರಿಸಿದ. 16ಜೋಸೆಫನು, “ನನ್ನ ಅಣ್ಣಂದಿರನ್ನು ಹುಡುಕುತ್ತಾ ಇದ್ದೇನೆ; ಅವರು ಆಡುಕುರಿಗಳನ್ನು ಎಲ್ಲಿ ಮೇಯಿಸುತ್ತಿದ್ದಾರೆ, ದಯವಿಟ್ಟು ಹೇಳು” ಎಂದ. 17ಅದಕ್ಕೆ ಆ ಮನುಷ್ಯ, “ಅವರು ಇಲ್ಲಿಂದ ಹೊರಟುಹೋದರು; ‘ದೋತಾನಿಗೆ ಹೋಗೋಣ’ ಎಂದು ಮಾತಾಡುವುದನ್ನು ಕೇಳಿದೆ,” ಎಂದ. ಜೋಸೆಫನು ಅವರನ್ನು ಹುಡುಕುತ್ತಾ ಹೋಗಿ, ದೋತಾನಿನಲ್ಲಿ ಅವರನ್ನು ಕಂಡ.
18ಅಣ್ಣಂದಿರು ಅವನನ್ನು ದೂರದಿಂದಲೇ ನೋಡಿದರು. ಅವನು ತಮ್ಮ ಬಳಿಗೆ ಬರುವಷ್ಟರೊಳಗೆ ಅವನನ್ನು ಕೊಲ್ಲಲು ಒಳಸಂಚು ಮಾಡಿಕೊಂಡರು. 19ಅಗೋ ಆ ಕನಸುಗಾರ ಬರುತ್ತಾ ಇದ್ದಾನೆ! 20ನಾವು ಅವನನ್ನು ಕೊಂದು ಈ ಬಾವಿಯೊಂದರಲ್ಲಿ ಹಾಕಿಬಿಡೋಣ. 'ಕಾಡುಮೃಗ ಅವನನ್ನು ತಿಂದುಬಿಟ್ಟಿತು'; ಎಂದು ಹೇಳಿದರೆ ಆಯಿತು, ಬನ್ನಿ, ಆಗ ಅವನ ಕನಸುಗಳು ಏನಾಗುತ್ತವೋ ನೋಡೋಣ,” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.
21ರೂಬೇನನು ಈ ಮಾತನ್ನು ಕೇಳಿಸಿಕೊಂಡು, ಅವನನ್ನು ಅವರ ಕೈಯಿಂದ ತಪ್ಪಿಸುವ ಉದ್ದೇಶದಿಂದ, “ನಾವು ಅವನ ಪ್ರಾಣ ತೆಗೆಯಬೇಕಾಗಿಲ್ಲ, 22ರಕ್ತಪಾತ ಕೂಡದು, ಕಾಡಿನಲ್ಲಿರುವ ಈ ಬಾವಿ ಒಂದರಲ್ಲಿ ಹಾಕಿಬಿಡಿ, ಅವನ ಮೇಲೆ ಕೈಹಾಕಬೇಡಿ,” ಎಂದು ಅವನಿಗೆ ಹೇಳಿದ. ಅವನನ್ನು ಅವರಿಂದ ತಪ್ಪಿಸಿ ತಂದೆಗೆ ಮತ್ತೆ ಒಪ್ದಿಸಬೇಕೆಂಬ ಗುರಿ ರೂಬೇನನದಾಗಿತ್ತು. 23ಜೋಸೆಫನು ತನ್ನ ಅಣ್ಣಂದಿರ ಹತ್ತಿರಕ್ಕೆ ಬಂದಾಗ ಅವರು ಅವನ ಮೇಲಿದ್ದ ನಿಲುವಂಗಿಯನ್ನು ತೆಗೆದುಬಿಟ್ಟರು. 24ಅವನನ್ನು ಹಿಡಿದು ಬಾವಿಯೊಳಗೆ ಹಾಕಿದರು. ಆ ಬಾವಿ ನೀರಿಲ್ಲದೆ ಬರಿದಾಗಿತ್ತು.
25ತರುವಾಯ ಅವರು ಊಟಕ್ಕೆ ಕುಳಿತುಕೊಂಡರು. ಅಷ್ಟರಲ್ಲಿ, ಇಷ್ಮಾಯೇಲರ ಗುಂಪೊಂದು ಗಿಲ್ಯಾದಿನಿಂದ ಬರುವುದು ಅವರ ಕಣ್ಣಿಗೆ ಕಾಣಿಸಿತು. ಇವರು ತಮ್ಮ ಒಂಟೆಗಳ ಮೇಲೆ ಪರಿಮಳ ಪದಾರ್ಥ, ಸುಗಂಧ ತೈಲ, ರಸಗಂಧ ಇವುಗಳನ್ನು ಹೇರಿಕೊಂಡು, ಈಜಿಪ್ಟಿಗೆ ಪ್ರಯಾಣಮಾಡುತ್ತಿದ್ದರು. 26ಆಗ ಯೆಹೂದನು ತನ್ನ ಅಣ್ಣತಮ್ಮಂದಿರಿಗೆ, “ನಾವು ನಮ್ಮ ತಮ್ಮನನ್ನು ಕೊಂದು ಆ ಕೊಲೆಯನ್ನು ಮರೆಮಾಡಿದರೆ ಪ್ರಯೋಜನವೇನು? 27ಅವನನ್ನು ಆ ಇಷ್ಮಾಯೇಲರಿಗೆ ಮಾರಿಬಿಡೋಣ, ಬನ್ನಿ; ನಾವು ಅವನ ಮೇಲೆ ಕೈ ಹಾಕಬಾರದು, ಅವನು ನಮ್ಮ ತಮ್ಮನಲ್ಲವೆ? ರಕ್ತಸಂಬಂಧಿಯಲ್ಲವೆ?” ಎಂದು ಹೇಳಿದ. ಅವನ ಆ ಮಾತಿಗೆ ಅಣ್ಣತಮ್ಮಂದಿರು ಒಪ್ಪಿದರು. 28ಅಷ್ಟರಲ್ಲಿ, ಮಿದ್ಯಾನಿನ ವರ್ತಕರು ಹಾದುಹೋಗುತ್ತಿದ್ದರು. ಅವರು ಜೋಸೆಫನನ್ನು ಬಾವಿಯೊಳಗಿಂದ ಎತ್ತಿ ಈ ಇಷ್ಮಾಯೇಲರಿಗೆ ಇಪ್ಪತ್ತು ಬೆಳ್ಳಿನಾಣ್ಯಗಳಿಗೆ ಮಾರಿಬಿಟ್ಟರು. ಇವರು ಅವನನ್ನು ಈಜಿಪ್ಟ್ ದೇಶಕ್ಕೆ ತೆಗೆದುಕೊಂಡು ಹೋದರು.
29ರೂಬೇನನು ಮರಳಿ ಆ ಬಾವಿಯ ಬಳಿಗೆ ಬಂದು ನೋಡಿದನು. ಅದರಲ್ಲಿ ಜೋಸೆಫನು ಇರಲಿಲ್ಲ. 30ದುಃಖವನ್ನು ತಾಳಲಾರದೆ ತನ್ನ ಬಟ್ಟೆಯನ್ನು ಹರಿದುಕೊಂಡನು; ತಮ್ಮಂದಿರ ಬಳಿಗೆ ಬಂದು, “ಆ ಹುಡುಗ ಇಲ್ಲವಲ್ಲಾ! ಅಯ್ಯೋ, ನಾನೇನು ಮಾಡಲಿ?” ಎಂದು ಗೋಳಾಡಿದ.
31ಬಳಿಕ ಅವರು ಒಂದು ಹೋತವನ್ನು ಕೊಯ್ದು, ಅದರ ರಕ್ತದಲ್ಲಿ ಜೋಸೆಫನ ನಿಲುವಂಗಿಯನ್ನು ಅದ್ದಿ 32ಆ ಅಂಗಿಯನ್ನು ತಮ್ಮ ತಂದೆಗೆ ಕಳಿಸಿದರು. ಅದನ್ನು ತಂದವರು, “ಇದು ನಮಗೆ ಸಿಕ್ಕಿತು; ಇದು ನಿಮ್ಮ ಮಗನ ಅಂಗಿಯೋ ಅಲ್ಲವೋ ನೋಡಿ,” ಎಂದು ಹೇಳಿದರು.
33ಯಕೋಬನು ಅದರ ಗುರುತನ್ನು ಹಿಡಿದು, ” ಈ ಅಂಗಿ ನಿಶ್ಚಯವಾಗಿ ನನ್ನ ಮಗನದೇ; ಕಾಡುಮೃಗ ಅವನನ್ನು ಕೊಂದು ತಿಂದಿರಬೇಕು, ಜೋಸೆಫನನ್ನು ಅದು ನಿಸ್ಸಂದೇಹವಾಗಿ ಸೀಳಿಹಾಕಿರಬೇಕು,” ಎಂದು ಹೇಳಿ, 34ದುಃಖ ತಾಳಲಾಗದೆ ತನ್ನ ಬಟ್ಟೆಯನ್ನು ಹರಿದುಕೊಂಡ; ನಡುವಿಗೆ ಗೋಣಿತಟ್ಟನ್ನು ಸುತ್ತಿಕೊಂಡ; ತನ್ನ ಮಗನಿಗಾಗಿ ಬಹುದಿನಗಳವರೆಗೂ ಅತ್ತು ಪ್ರಲಾಪಿಸಿದ. 35ದುಃಖಶಮನಮಾಡಲು ಪುತ್ರಪುತ್ರಿಯರೆಲ್ಲರು ಎಷ್ಟು ಪ್ರಯತ್ನಿಸಿದರೂ ಅವನು ಸಾಂತ್ವನಗೊಳ್ಳಲಿಲ್ಲ; "ನಾನು ಹೀಗೆಯೇ ಹಂಬಲಿಸುತ್ತಾ ನನ್ನ ಮಗನಿರುವ ಮೃತ್ಯುಲೋಕವನ್ನು ಸೇರುತ್ತೇನೆ,” ಎಂದು ಮಗನಿಗಾಗಿ ದುಃಖಿಸುತ್ತಲೇ ಇದ್ದ.
36ಮಿದ್ಯಾನ್ಯರು ಜೋಸೆಫನನ್ನು ಈಜಿಪ್ಟ್ ದೇಶಕ್ಕೆ ತೆಗೆದುಕೊಂಡುಹೋಗಿ ಫರೋಹನ ಆಸ್ಥಾನದಲ್ಲಿದ್ದ ಪೋಟೀಫರನಿಗೆ ಮಾರಿದರು; ಇವನು, ದೊಡ್ಡ ಉದ್ಯೋಗಸ್ಥನೂ ಮೈಗಾವಲಿನವರ ದಳಪತಿಯೂ ಆಗಿದ್ದನು.
Currently Selected:
ಆದಿಕಾಂಡ 37: KANCLBSI
Highlight
Share
Copy
Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.