YouVersion Logo
Search Icon

ಯೊವಾನ್ನ 12

12
ಯೇಸುವಿಗೆ ಅಭಿಷೇಕ
(ಮತ್ತಾ. 26:6-13; ಮಾರ್ಕ. 14:3-9)
1ಪಾಸ್ಕಹಬ್ಬಕ್ಕೆ ಇನ್ನೂ ಆರು ದಿನಗಳಿರುವಾಗ ಯೇಸು ಸ್ವಾಮಿ ಬೆಥಾನಿಯಕ್ಕೆ ಬಂದರು. ಅವರು ಲಾಸರನನ್ನು ಸಾವಿನಿಂದ ಜೀವಕ್ಕೆ ಎಬ್ಬಿಸಿದ ಊರದು. 2ಯೇಸುವಿಗೆ ಅಲ್ಲಿ ಒಂದು ಔತಣವನ್ನು ಏರ್ಪಡಿಸಲಾಗಿತ್ತು. ಮಾರ್ತಳು ಬಡಿಸುತ್ತಿದ್ದಳು. ಯೇಸುವಿನೊಡನೆ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದವರಲ್ಲಿ ಲಾಸರನೂ ಒಬ್ಬ. 3ಆಗ ಮರಿಯಳು ಸುಮಾರು ಅರ್ಧ ಲೀಟರಿನಷ್ಟು, ಅತ್ಯಂತ ಬೆಲೆಬಾಳುವ ಅಚ್ಚ ಜಟಾಮಾಂಸಿ ಸುಗಂಧ ತೈಲವನ್ನು ತಂದು ಯೇಸುವಿನ ಪಾದಗಳಿಗೆ ಹಚ್ಚಿ, ತನ್ನ ತಲೆಗೂದಲಿನಿಂದ ಆ ಪಾದಗಳನ್ನು ಒರಸಿದಳು. ತೈಲದ ಸುವಾಸನೆ ಮನೆಯಲ್ಲೆಲ್ಲಾ ಹರಡಿತು. 4ಯೇಸುವನ್ನು ಹಿಡಿದುಕೊಡಲಿದ್ದ ಹಾಗೂ ಶಿಷ್ಯರಲ್ಲಿ ಒಬ್ಬನಾಗಿದ್ದ ಇಸ್ಕರಿಯೋತಿನ ಯೂದನು, 5“ಈ ಸುಗಂಧ ತೈಲವನ್ನು ಮುನ್ನೂರು ದೆನಾರಿ ನಾಣ್ಯಗಳಿಗೆ ಮಾರಿ, ಬಂದ ಹಣವನ್ನು ಬಡಬಗ್ಗರಿಗೆ ಕೊಡಬಹುದಿತ್ತಲ್ಲಾ?’ ಎಂದನು. 6ಬಡವರ ಹಿತಚಿಂತನೆಯಿಂದೇನೂ ಅವನು ಹೀಗೆ ಹೇಳಲಿಲ್ಲ. ತನ್ನ ವಶದಲ್ಲಿ ಇಡಲಾಗಿದ್ದ ಹಣದ ಚೀಲದಿಂದ ಸ್ವಂತ ಉಪಯೋಗಕ್ಕಾಗಿ ಬಳಸುತ್ತಿದ್ದ ಕಳ್ಳ ಅವನು. 7ಆಗ ಯೇಸು, “ಆಕೆಯ ಗೊಡವೆ ನಿನಗೆ ಬೇಡ. ನನ್ನ ಶವಸಂಸ್ಕಾರದ ದಿನಕ್ಕಾಗಿ ಆಕೆ ಅದನ್ನು ಇಟ್ಟುಕೊಳ್ಳಲಿ. 8ಬಡಬಗ್ಗರು ನಿಮ್ಮ ಬಳಿಯಲ್ಲಿ ಯಾವಾಗಲೂ ಇರುತ್ತಾರೆ. ಆದರೆ ನಾನು ಯಾವಾಗಲೂ ನಿಮ್ಮ ಬಳಿ ಇರುವುದಿಲ್ಲ,” ಎಂದರು.
ಲಾಸರನ ಕೊಲೆಗೆ ಹಂಚಿಕೆ
9ಯೇಸು ಸ್ವಾಮಿ ಅಲ್ಲಿರುವುದನ್ನು ಕೇಳಿ ಯೆಹೂದ್ಯರ ಒಂದು ದೊಡ್ಡ ಗುಂಪು ಬಂದಿತು. ಯೇಸುವನ್ನು ಮಾತ್ರವಲ್ಲ, ಅವರು ಸಾವಿನಿಂದ ಜೀವಕ್ಕೆ ಎಬ್ಬಿಸಿದ ಲಾಸರನನ್ನೂ ಕಾಣಲು ಆ ಜನರು ಅಲ್ಲಿಗೆ ಬಂದಿದ್ದರು. 10-11ಲಾಸರನ ನಿಮಿತ್ತವಾಗಿ ಅನೇಕ ಯೆಹೂದ್ಯರು ತಮ್ಮನ್ನು ಬಿಟ್ಟು ಯೇಸುವಿನಲ್ಲಿ ನಂಬಿಕೆಯಿಟ್ಟ ಕಾರಣ ಲಾಸರನನ್ನು ಕೂಡ ಕೊಲ್ಲಬೇಕೆಂದು ಮುಖ್ಯಯಾಜಕರು ಆಲೋಚಿಸಿದರು.
ಜೆರುಸಲೇಮಿಗೆ ರಾಜಪ್ರವೇಶ
(ಮತ್ತಾ. 21:1-11; ಮಾರ್ಕ. 11:1-11; ಲೂಕ. 19:28-40)
12ಮಾರನೆಯ ದಿನ ಯೇಸು ಸ್ವಾಮಿ ಜೆರುಸಲೇಮಿಗೆ ಬರುತ್ತಿದ್ದಾರೆಂಬ ಸುದ್ದಿ ಹರಡಿತು.ಹಬ್ಬಕ್ಕೆ ಬಂದು ನೆರೆದಿದ್ದ ಜನಸಮೂಹಕ್ಕೆ ಈ ಸುದ್ದಿ ಮುಟ್ಟಿತು. 13ಖರ್ಜೂರದ ಗರಿಗಳನ್ನು ಹಿಡಿದುಕೊಂಡು ಅವರು ಯೇಸುವನ್ನು ಎದುರುಗೊಳ್ಳಲು ಹೊರಟರು.
‘ಸರ್ವೇಶ್ವರನ ನಾಮದಲ್ಲಿ ಬರುವಾತನಿಗೆ ಜಯಜಯವಾಗಲಿ !
ಇಸ್ರಯೇಲಿನ ಅರಸನಿಗೆ ಶುಭವಾಗಲಿ !’
ಎಂದು ಘೋಷಿಸುತ್ತಾ ಅವರನ್ನು ಸ್ವಾಗತಿಸಿದರು. 14ಯೇಸು ದಾರಿಯಲ್ಲಿದ್ದ ಪ್ರಾಯದ ಹೇಸರಗತ್ತೆಯೊಂದನ್ನು ಹತ್ತಿಹೊರಟರು. 15ಇದನ್ನು ಕುರಿತೇ, ‘ಸಿಯೋನ್ ನಗರಿಯೇ, ಅಂಜಬೇಡ. ಇಗೋ ನೋಡು; ಹೇಸರಗತ್ತೆಯನ್ನೇರಿ ಬರುತ್ತಿರುವನು ನಿನ್ನ ಅರಸನು’ ಎಂದಿದೆ ಪವಿತ್ರಗ್ರಂಥ. 16ಇದೆಲ್ಲ ಶಿಷ್ಯರಿಗೆ ಆಗ ಅರ್ಥವಾಗಲಿಲ್ಲ. ಇದೆಲ್ಲವನ್ನೂ ಬರೆದದ್ದು ಅವರನ್ನು ಕುರಿತೇ; ಆ ಪ್ರಕಾರವೇ ನೆರವೇರಿದೆ ಎಂಬುದನ್ನು ಯೇಸು ಮಹಿಮಾಪದವಿಯನ್ನು ಪಡೆದಾದ ಮೇಲೆ ಅವರು ನೆನಪಿಗೆ ತಂದುಕೊಂಡರು. 17ಇದಲ್ಲದೆ ಯೇಸು ಲಾಸರನನ್ನು ಸಮಾಧಿಯಿಂದ ಹೊರಗೆ ಕರೆದು ಸಾವಿನಿಂದ ಜೀವಕ್ಕೆ ಎಬ್ಬಿಸಿದಾಗ ಅವರ ಸಂಗಡ ಇದ್ದವರು ನಡೆದ ವಿಷಯವನ್ನು ಇತರರಿಗೆ ಸಾರುತ್ತಿದ್ದರು. 18ಈ ಸೂಚಕಕಾರ್ಯವನ್ನು ಕೇಳಿದ್ದ ಕಾರಣದಿಂದಲೂ ಜನರು ಯೇಸುವನ್ನು ಎದುರುಗೊಳ್ಳಲು ಹೋಗಿದ್ದರು. 19ಇದನ್ನೆಲ್ಲಾ ಕಂಡ ಫರಿಸಾಯರು ತಮ್ಮತಮ್ಮೊಳಗೆ, “ನೋಡಿದಿರಾ? ನಮ್ಮ ಕೈಯಿಂದ ಏನೂ ಆಗಲಿಲ್ಲ. ಇಡೀ ಜಗತ್ತೇ ಅವನ ಹಿಂದೆ ಹೋಗುತ್ತಿದೆಯಲ್ಲಾ !” ಎಂದುಕೊಂಡರು.
ಗ್ರೀಕರಿಗೂ ಯೇಸುವನ್ನು ಕಾಣುವ ಬಯಕೆ
20ಆರಾಧನೆಗೆಂದು ಹಬ್ಬಕ್ಕೆ ಬಂದಿದ್ದವರಲ್ಲಿ ಕೆಲವರು ಗ್ರೀಕರು. 21ಇವರು ಗಲಿಲೇಯದ ಬೆತ್ಸಾಯಿದ ಎಂಬ ಊರಿನವನಾದ ಫಿಲಿಪ್ಪನ ಬಳಿಬಂದು, “ಅಯ್ಯಾ, ನಾವು ಯೇಸುವನ್ನು ನೋಡಬೇಕೆಂದಿದ್ದೇವೆ,” ಎಂದು ಕೇಳಿಕೊಂಡರು. 22ಫಿಲಿಪ್ಪನು ಬಂದು ಅಂದ್ರೆಯನಿಗೆ ಹೇಳಿದನು. ಅವರಿಬ್ಬರೂ ಹೋಗಿ ಯೇಸುವಿಗೆ ಈ ವಿಷಯವನ್ನು ತಿಳಿಸಿದರು. 23ಅದಕ್ಕೆ ಯೇಸು, “ನರಪುತ್ರನು ಮಹಿಮೆಯನ್ನು ಹೊಂದುವ ಗಳಿಗೆ ಬಂದಿದೆ. 24ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ಗೋದಿಯಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಅದು ಒಂಟಿಯಾಗಿ ಉಳಿಯುತ್ತದೆ; ಅದು ಸತ್ತರೆ ಮಾತ್ರ ಸಮೃದ್ಧಿಯಾದ ಫಲವನ್ನು ಕೊಡುತ್ತದೆ. 25ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ತನ್ನ ಪ್ರಾಣವನ್ನು ಈ ಲೋಕದಲ್ಲಿ ದ್ವೇಷಿಸುವವನು ಅದನ್ನು ನಿತ್ಯಜೀವಕ್ಕಾಗಿ ಕಾಯ್ದಿರಿಸಿಕೊಳ್ಳುತ್ತಾನೆ. 26ನನ್ನ ಸೇವೆಮಾಡಬೇಕೆಂದಿರುವವನು ನನ್ನನ್ನು ಹಿಂಬಾಲಿಸಲಿ. ಆಗ ನಾನಿರುವಲ್ಲಿಯೇ ನನ್ನ ಸೇವಕನೂ ಇರುತ್ತಾನೆ. ನನ್ನ ಸೇವೆಮಾಡುವವನು ನನ್ನ ಪಿತನಿಂದ ಸನ್ಮಾನಹೊಂದುತ್ತಾನೆ,” ಎಂದರು
27ಯೇಸು ಸ್ವಾಮಿ ತಮ್ಮ ಮಾತನ್ನು ಮುಂದುವರಿಸುತ್ತಾ, “ಈಗ ನನ್ನಾತ್ಮ ತತ್ತರಿಸುತ್ತಿದೆ. ನಾನು ಏನೆಂದು ಹೇಳಲಿ? ‘ಪಿತನೇ, ಈ ಗಳಿಗೆಯಿಂದ ನನ್ನನ್ನು ಕಾಪಾಡು ಎನ್ನಲೇ?’ ಇಲ್ಲ, ಅದಕ್ಕೆ ಬದಲಾಗಿ ಇದನ್ನು ಅನುಭವಿಸಲೆಂದೇ ನಾನು ಈ ಗಳಿಗೆಗೆ ಕಾಲಿಟ್ಟಿದ್ದೇನೆ. 28‘ಪಿತನೇ, ನಿಮ್ಮ ನಾಮ ಮಹಿಮೆಯನ್ನು ಬೆಳಗಿಸಿ’ “ ಎಂದು ನುಡಿದರು. ಆಗ, “ಹೌದು, ಆ ಮಹಿಮೆಯನ್ನು ಬೆಳಗಿಸಿದ್ದೇನೆ, ಪುನಃ ಬೆಳಗಿಸುತ್ತೇನೆ,” ಎಂಬ ಸ್ವರ್ಗೀಯ ವಾಣಿ ಕೇಳಿಸಿತು. 29ಅಲ್ಲಿ ನಿಂತುಕೊಂಡಿದ್ದ ಜನರು ಆ ವಾಣಿಯನ್ನು ಕೇಳಿ, “ಇದೇನು ಗುಡುಗಿನ ಸದ್ದು?” ಎಂದರು. ಕೆಲವರು, “ದೇವದೂತನೊಬ್ಬ ಆತನೊಡನೆ ಮಾತನಾಡಿದನು,” ಎಂದರು. 30ಯೇಸು ಸ್ವಾಮಿ, “ಈ ವಾಣಿಯಾದುದು ನಿಮಗಾಗಿ, ನನಗಾಗಿ ಅಲ್ಲ. 31ಈಗ ಈ ಲೋಕವು ನ್ಯಾಯತೀರ್ಪಿಗೆ ಒಳಗಾಗುವುದು. ಇದೀಗಲೇ ಈ ಲೋಕಾಧಿಪತಿಯನ್ನು ಹೊರದೂಡಲಾಗುವುದು. 32ಆದರೆ ನನ್ನನ್ನು ಭೂಮಿಯಿಂದ ಮೇಲೇರಿಸಿದಾಗ, ನಾನು ಎಲ್ಲರನ್ನು ನನ್ನೆಡೆಗೆ ಸೆಳೆದುಕೊಳ್ಳುತ್ತೇನೆ,” ಎಂದು ನುಡಿದರು. 33ಈ ಮಾತಿನಿಂದ ತಮಗೆಂಥ ಮರಣ ಕಾದಿದೆಯೆಂದು ಸೂಚಿಸಿದರು. 34ನೆರೆದಿದ್ದ ಜನರು ಪ್ರತ್ಯುತ್ತರವಾಗಿ, “ಅಭಿಷಿಕ್ತನಾದ ಲೋಕೋದ್ಧಾರಕ ಸದಾಕಾಲ ಇರುವನೆಂದು ಧರ್ಮಶಾಸ್ತ್ರವೇ ತಿಳಿಸುತ್ತದೆ. ಹೀಗಿರುವಲ್ಲಿ, ನರಪುತ್ರನನ್ನು ಮೇಲೇರಿಸಬೇಕಾಗಿದೆ ಎಂದು ನೀನು ಹೇಳುತ್ತೀಯಲ್ಲಾ, ಅದು ಹೇಗೆ? ಆ ನರಪುತ್ರನು ಯಾರು?” ಎಂದು ಕೇಳಿದರು. 35ಅದಕ್ಕೆ ಯೇಸು, “ಇನ್ನು ತುಸುಕಾಲ ಮಾತ್ರ ಜ್ಯೋತಿ ನಿಮ್ಮ ನಡುವೆ ಇರುತ್ತದೆ. ನಿಮ್ಮನ್ನು ಕತ್ತಲು ಕವಿಯದಂತೆ ಜ್ಯೋತಿಯಿರುವಾಗಲೇ ನಡೆಯಿರಿ. ಕತ್ತಲಲ್ಲಿ ನಡೆಯುವವನಿಗೆ ಗೊತ್ತುಗುರಿ ಕಾಣದು. 36ನಿಮ್ಮೊಡನೆ ಇನ್ನೂ ಜ್ಯೋತಿ ಇರುವುದರಿಂದ ಆ ಜ್ಯೋತಿಯಲ್ಲಿ ನಂಬಿಕೆಯಿಡಿ. ಆಗ ನೀವು ಜ್ಯೋತಿಯ ಮಕ್ಕಳು ಆಗುವಿರಿ,” ಎಂದರು. ಇದನ್ನು ಕೇಳಿದ ತರುವಾಯ ಯೇಸು ಅಲ್ಲಿಂದ ಹೊರಟು ಜನರ ಕಣ್ಣಿಗೆ ಬೀಳದಂತೆ ಮರೆಯಾದರು.
ವಿಶ್ವಾಸಹೀನ ಜನರು
37ಯೇಸು ಸ್ವಾಮಿ ಬಹುತೇಕ ಸೂಚಕಕಾರ್ಯಗಳನ್ನು ಜನರ ಕಣ್ಮುಂದೆ ಮಾಡಿದರೂ ಆ ಜನರು ಅವರನ್ನು ವಿಶ್ವಾಸಿಸದೆಹೋದರು. 38ಹೀಗೆ ಯೆಶಾಯ ಪ್ರವಾದಿಯ ಈ ಮಾತು ನೆರವೇರಿತು:
“ಸರ್ವೇಶ್ವರಾ, ನಮ್ಮ ಸಂದೇಶವನ್ನು ನಂಬಿದವರಾರು?
ದೇವರ ಶಕ್ತಿಸಾಮರ್ಥ್ಯ ಗೋಚರವಾದುದು ಯಾರಿಗೆ?”
39ಜನರು ವಿಶ್ವಾಸಿಸದೆ ಹೋದುದಕ್ಕೆ ಯೆಶಾಯನು ಮತ್ತೊಂದು ವಚನದಲ್ಲಿ ಕಾರಣವನ್ನು ಸೂಚಿಸಿದ್ದಾನೆ:
40“ತಮ್ಮ ಕಣ್ಣುಗಳಿಂದ ಅವರು ಕಾಣದಂತೆಯೂ
ತಮ್ಮ ಮನದಿಂದ ಗ್ರಹಿಸದಂತೆಯೂ ಹಾಗೂ
ಮನತಿರುಗಿ ನನ್ನಿಂದ ಗುಣಹೊಂದದಂತೆಯೂ
ಅವರ ಕಣ್ಣುಗಳನ್ನು ಕುರುಡಾಗಿಸಿರುವರು;
ಅವರ ಮನಸ್ಸನ್ನು ಕಲ್ಲಾಗಿಸಿರುವರು ದೇವರು.”
41ಯೇಸುವಿನ ಮಹಿಮೆಯನ್ನು ಮನಗಂಡು, ಅವರನ್ನು ಕುರಿತು ಮಾತನಾಡುವಾಗ ಯೆಶಾಯನು ಹೇಳಿದ ಮಾತುಗಳಿವು. 42ಯೆಹೂದ್ಯರಲ್ಲಿ ಹಲವುಮಂದಿ ಮುಖಂಡರಿಗೆ ಯೇಸುವಿನಲ್ಲಿ ವಿಶ್ವಾಸಮೂಡಿತು. ಆದರೆ ಫರಿಸಾಯರು ಪ್ರಾರ್ಥನಾಮಂದಿರಗಳಿಂದ ತಮಗೆ ಬಹಿಷ್ಕಾರ ಹಾಕಿಯಾರೆಂಬ ಅಂಜಿಕೆಯ ಕಾರಣ ಅವರು ತಮ್ಮ ವಿಶ್ವಾಸವನ್ನು ಬಯಲುಮಾಡಲಿಲ್ಲ. 43ದೇವರಿಂದ ದೊರಕುವ ಮನ್ನಣೆಗಿಂತ ಮಾನವರಿಂದ ಸಿಗುವ ಮನ್ನಣೆಯೇ ಅವರಿಗೆ ಪ್ರಿಯವಾಗಿತ್ತು.
ಯೇಸುವಿನ ಮಾತು ಅಂತಿಮ ತೀರ್ಪು
44ಯೇಸು ಸ್ವಾಮಿ ಗಟ್ಟಿಯಾಗಿ ಕೂಗಿ ಇಂತೆಂದರು : “ನನ್ನಲ್ಲಿ ವಿಶ್ವಾಸವಿಡುವವನು ನನ್ನಲ್ಲಿ ಅಲ್ಲ, ನನ್ನನ್ನು ಕಳುಹಿಸಿದಾತನಲ್ಲೇ ವಿಶ್ವಾಸವಿಡುತ್ತಾನೆ. 45ನನ್ನನ್ನು ಕಾಣುವವನು ನನ್ನನ್ನು ಕಳುಹಿಸಿದಾತನನ್ನೇ ಕಾಣುತ್ತಾನೆ. 46ನನ್ನಲ್ಲಿ ವಿಶ್ವಾಸವಿಡುವವನು ಅಂಧಕಾರದಲ್ಲಿ ಉಳಿಯಬಾರದೆಂದು ನಾನೇ ಜಗಜ್ಯೋತಿಯಾಗಿ ಬಂದಿದ್ದೇನೆ. 47ಯಾವನಾದರೂ ನನ್ನ ಮಾತನ್ನು ಕೇಳಿಯೂ ಅದರಂತೆ ನಡೆಯದೆಹೋದರೆ ಅಂಥವನಿಗೆ ತೀರ್ಪುಕೊಡುವವನು ನಾನಲ್ಲ. ನಾನು ಬಂದುದು ಲೋಕದ ಉದ್ಧಾರಕ್ಕಾಗಿ, ತೀರ್ಪುಕೊಡುವುದಕ್ಕಾಗಿ ಅಲ್ಲ. 48ನನ್ನನ್ನು ನಿರಾಕರಿಸಿ ನನ್ನ ಮಾತುಗಳನ್ನು ಅಂಗೀಕರಿಸದೆ ಹೋದವನಿಗೆ ತೀರ್ಪುಕೊಡುವಂಥದ್ದು ಒಂದು ಇದೆ. 49ಅದು ಯಾವುದೆಂದರೆ ನಾನು ಆಡಿದ ಮಾತೇ. ಅಂತಿಮ ದಿನದಂದು ಅದೇ ಅವನಿಗೆ ತೀರ್ಪುಕೊಡುವುದು. ಏಕೆಂದರೆ, ನನ್ನಷ್ಟಕ್ಕೆ ನಾನೇ ಇದನ್ನೆಲ್ಲಾ ಮಾತನಾಡುತ್ತಿಲ್ಲ. ನನ್ನನ್ನು ಕಳುಹಿಸಿದ ಪಿತನೇ, ನಾನು ಏನು ಹೇಳಬೇಕು, ಯಾವ ಮಾತನ್ನು ಆಡಬೇಕು ಎಂದು ನನಗೆ ಆಜ್ಞೆಮಾಡಿದ್ದಾರೆ. 50ಅವರ ಆಜ್ಞೆಯೇ ನಿತ್ಯಜೀವದಾಯಕ ಎಂದು ನಾನು ಬಲ್ಲೆ. ಆದ್ದರಿಂದಲೇ ಪಿತನು ಹೇಳಿದಂತೆಯೇ ನಾನು ಮಾತನಾಡುತ್ತೇನೆ.”

Highlight

Share

Copy

None

Want to have your highlights saved across all your devices? Sign up or sign in