YouVersion Logo
Search Icon

ಲೂಕ. 3

3
ಸ್ನಾನಿಕ ಯೊವಾನ್ನನ ಬೋಧನೆ
(ಮತ್ತಾ. 3:1-12; ಮಾರ್ಕ. 1:1-8; ಯೊವಾ. 1:19-28)
1ಅದು ತಿಬೇರಿಯಸ್ ಚಕ್ರವರ್ತಿಯ ಆಡಳಿತದ ಹದಿನೈದನೆಯ ವರ್ಷ. ಆ ಕಾಲದಲ್ಲಿ ಜುದೇಯ ಪ್ರಾಂತ್ಯಕ್ಕೆ ಪೊನ್ಸಿಯುಸ್#3:1 ಅಥವಾ : ಪೊಂತಿಯ. ಪಿಲಾತನು ರಾಜ್ಯಪಾಲನಾಗಿದ್ದನು. ಗಲಿಲೇಯ ಪ್ರಾಂತ್ಯಕ್ಕೆ ಹೆರೋದನೂ ಇತುರೆಯ ಮತ್ತು ತ್ರಕೋನಿತಿ ಪ್ರಾಂತ್ಯಗಳಿಗೆ ಇವನ ತಮ್ಮನಾದ ಫಿಲಿಪ್ಪನೂ ಮತ್ತು ಅಬಿಲೇನೆ ಪ್ರಾಂತ್ಯಕ್ಕೆ ಲುಸಾನಿಯನೂ ಸಾಮಂತರಾಗಿದ್ದರು. 2ಅನ್ನನು ಮತ್ತು ಕಾಯಫನು ಅಂದಿನ ಪ್ರಧಾನ ಯಾಜಕರು. ಆಗ ಬೆಂಗಾಡಿನಲ್ಲಿ ಜಕರೀಯನ ಮಗ ಯೊವಾನ್ನನಿಗೆ ದೇವರ ಸಂದೇಶದ ಬೋಧೆ ಆಯಿತು. 3ಆತನು ಜೋರ್ಡನ್ ನದಿಯ ಪರಿಸರ ಪ್ರಾಂತದಲ್ಲೆಲ್ಲಾ ಸಂಚರಿಸುತ್ತಾ, “ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ ಮತ್ತು ಸ್ನಾನದೀಕ್ಷೆ ಪಡೆದುಕೊಳ್ಳಿರಿ; ದೇವರು ನಿಮ್ಮ ಪಾಪಗಳನ್ನು ಕ್ಷಮಿಸಿಬಿಡುವರು,” ಎಂದು ಸಾರಿ ಹೇಳುತ್ತಿದ್ದನು. 4ಈ ಬಗ್ಗೆ ಪ್ರವಾದಿ ಯೆಶಾಯನ ಗ್ರಂಥದಲ್ಲಿ ಮುಂಚಿತವಾಗಿಯೇ ಹೀಗೆಂದು ಬರೆದಿಡಲಾಗಿದೆ :
“ ‘ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಪಡಿಸಿರಿ,
ಆತನ ಆಗಮನಕ್ಕಾಗಿ ಹಾದಿಯನ್ನು ಸರಾಗಮಾಡಿರಿ’
ಎಂದು ಬೆಂಗಾಡಿನಲ್ಲಿ ಒಬ್ಬನು ಘೋಷಿಸುತ್ತಿದ್ದಾನೆ.
5ಹಳ್ಳಕೊಳ್ಳಗಳೆಲ್ಲ ಭರ್ತಿಯಾಗಬೇಕು;
ಬೆಟ್ಟಗುಡ್ಡಗಳು ಮಟ್ಟವಾಗಬೇಕು;
ಅಂಕುಡೊಂಕಾದವು ನೆಟ್ಟಗಾಗಬೇಕು;
ತಗ್ಗುಮುಗ್ಗಾದ ಹಾದಿಗಳು ಹಸನಾಗಬೇಕು.
6ಆಗ ದೇವರು ದಯಪಾಲಿಸುವ ಜೀವೋದ್ಧಾರವನ್ನು
ಮಾನವರೆಲ್ಲರು ಕಾಣುವರು.”
7ಯೊವಾನ್ನನ ಬಳಿಗೆ ಸ್ನಾನದೀಕ್ಷೆ ಪಡೆಯಲು ಜನರು ಗುಂಪುಗುಂಪಾಗಿ ಬರುತ್ತಿದ್ದರು. ಆತನು ಅವರಿಗೆ, “ಎಲೈ ವಿಷಸರ್ಪಗಳ ಪೀಳಿಗೆಯೇ, ಬರಲಿರುವ ದೈವಕೋಪದಿಂದ ತಪ್ಪಿಸಿಕೊಳ್ಳಬಹುದೆಂದು ನಿಮಗೆ ಎಚ್ಚರಿಕೆಕೊಟ್ಟವರಾರು? 8ಪಾಪಕ್ಕೆ ವಿಮುಖರಾಗಿದ್ದೀರಿ ಎಂಬುದನ್ನು ಸತ್ಕಾರ್ಯಗಳಿಂದ ವ್ಯಕ್ತಪಡಿಸಿರಿ. ‘ಅಬ್ರಹಾಮನೇ ನಮ್ಮ ಪಿತಾಮಹ,’ ಎಂದು ನಿಮ್ಮ ನಿಮ್ಮಲ್ಲೇ ಕೊಚ್ಚಿಕೊಳ್ಳಬೇಡಿ; ಈ ಕಲ್ಲುಗಳಿಂದಲೂ ದೇವರು ಅಬ್ರಹಾಮನಿಗೆ ಸಂತಾನ ಪ್ರಾಪ್ತಿಯಾಗುವಂತೆ ಮಾಡಬಲ್ಲರೆಂದು ನಾನು ನಿಮಗೆ ಹೇಳುತ್ತೇನೆ. 9ಈಗಾಗಲೇ ಮರದ ಬುಡಕ್ಕೆ ಕೊಡಲಿ ಬಿದ್ದಿದೆ; ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಗೆ ಹಾಕಲಾಗುವುದು,” ಎಂದನು.
10ಆಗ ಜನಸಮೂಹವು, “ಹಾಗಾದರೆ ನಾವೇನು ಮಾಡಬೇಕು?” ಎಂದು ಕೇಳಲು. 11“ನಿಮಗೆ ಎರಡು ಅಂಗಿಗಳಿದ್ದರೆ, ಒಂದನ್ನು ಏನೂ ಇಲ್ಲದವನಿಗೆ ಕೊಡಿ; ಅಂತೆಯೇ ಆಹಾರ ಉಳ್ಳವನು ಇಲ್ಲದವನೊಂದಿಗೆ ಹಂಚಿಕೊಳ್ಳಲಿ,” ಎಂದು ಉತ್ತರಕೊಟ್ಟನು. 12ಅನಂತರ ಸುಂಕದವರು ಸಹ ಸ್ನಾನದೀಕ್ಷೆ ಪಡೆಯಲು ಬಂದು, “ಬೋಧಕರೇ, ನಾವೇನು ಮಾಡಬೇಕು?” ಎಂದು ಕೇಳಿದಾಗ, 13ಗೊತ್ತು ಮಾಡಿರುವುದಕ್ಕಿಂತ ಹೆಚ್ಚಾಗಿ ಕಿತ್ತುಕೊಳ್ಳಬೇಡಿ,” ಎಂದನು. 14“ನಾವು ಮಾಡಬೇಕಾದುದೇನು?” ಎಂದು ಸಿಪಾಯಿಗಳು ಮುಂದೆ ಬಂದು ಪ್ರಶ್ನಿಸಿದಾಗ, “ಬಲಾತ್ಕಾರದಿಂದಾಗಲಿ, ಸುಳ್ಳು ಬೆದರಿಕೆಯಿಂದಾಗಲಿ ಯಾರನ್ನೂ ಸುಲಿಗೆ ಮಾಡಬೇಡಿ; ನಿಮಗೆ ಬರುವ ಸಂಬಳದಿಂದ ತೃಪ್ತರಾಗಿರಿ,” ಎಂದು ಆತ ಉತ್ತರವಿತ್ತನು.
15“ಈ ಯೊವಾನ್ನನೇ ಎಲ್ಲರು ಎದುರುನೋಡುತ್ತಾ ಇರುವ ಅಭಿಷಿಕ್ತನಾದ ಲೋಕೋದ್ಧಾರಕ ಆಗಿರಬಹುದೇ” ಎಂದು ಜನರು ತಮ್ಮ ಮನಸ್ಸಿನಲ್ಲೇ ಆಲೋಚಿಸುತ್ತಿದ್ದರು. 16ಅದಕ್ಕೆ ಉತ್ತರವಾಗಿ ಯೊವಾನ್ನನು, “ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ. ಆದರೆ ನನಗಿಂತಲೂ ಶಕ್ತರೊಬ್ಬರು ಬರುತ್ತಾರೆ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಅರ್ಹನಲ್ಲ; ಅವರು ನಿಮಗೆ ಪವಿತ್ರಾತ್ಮ ಅವರಿಂದಲೂ ಅಗ್ನಿಯಿಂದಲೂ ದೀಕ್ಷಾಸ್ನಾನ ಕೊಡುವರು. 17ಅವರ ಕೈಯಲ್ಲಿ ಮೊರವಿದೆ. ತಮ್ಮ ಕಣದಲ್ಲಿಯ ರಾಶಿಯನ್ನು ತೂರಿ, ಗಟ್ಟಿಕಾಳನ್ನು ಮಾತ್ರ ಕಣಜಕ್ಕೆ ತುಂಬುವರು. ಹೊಟ್ಟನ್ನು ಆರಿಸಲಾಗದ ಬೆಂಕಿಯಲ್ಲಿ ಸುಟ್ಟುಹಾಕುವರು,” ಎಂದು ನುಡಿದನು. 18ಹೀಗೆ ಯೊವಾನ್ನನು ನಾನಾ ವಿಧಗಳಲ್ಲಿ ಪ್ರಬೋಧಿಸುತ್ತಾ ಜನರಿಗೆ ಶುಭಸಂದೇಶವನ್ನು ಸಾರುತ್ತಾ ಇದ್ದನು.
19ಸಾಮಂತ ಹೆರೋದನು ಅನೇಕ ದುಷ್ಕೃತ್ಯಗಳನ್ನು ಮಾಡಿದ್ದನು. ಅಲ್ಲದೆ ತನ್ನ ಸೋದರನ ಹೆಂಡತಿಯಾದ ಹೆರೋದಿಯಳನ್ನು ಇಟ್ಟುಕೊಂಡಿದ್ದನು. ಆದ್ದರಿಂದ ಯೊವಾನ್ನನು ಅವನನ್ನು ಖಂಡಿಸಿದ್ದನು. 20ಹೆರೋದನು ಯೊವಾನ್ನನನ್ನು ಕಾರಾಗೃಹದಲ್ಲಿ ಬಂಧಿಸಿ, ತನ್ನ ದುಷ್ಕೃತ್ಯಗಳಿಗೆ ಮತ್ತೊಂದು ದುಷ್ಕೃತ್ಯವನ್ನು ಕೂಡಿಸಿದ್ದನು.
ಯೇಸು ಪಡೆದ ದೀಕ್ಷಾಸ್ನಾನ#3:20 ಕ್ಲಿಷ್ಟ ಪದಗಳ ಅರ್ಥನೋಡಿ.
(ಮತ್ತಾ. 3:13-17; ಮಾರ್ಕ. 1:9-11; ಯೊವಾ. 1:32-34)
21ಜನರೆಲ್ಲರು ಸ್ನಾನದೀಕ್ಷೆ ಪಡೆಯುತ್ತಾ ಇದ್ದರು. ಯೇಸುಸ್ವಾಮಿಯೂ ಬಂದು ಸ್ನಾನದೀಕ್ಷೆಪಡೆದು ಪ್ರಾರ್ಥಿಸುತ್ತಿರಲು, ಆಕಾಶವು ತೆರೆಯಿತು. 22ಆಗ ಪವಿತ್ರಾತ್ಮ ಸಶರೀರವಾಗಿ ಒಂದು ಪಾರಿವಾಳದ ರೂಪದಲ್ಲಿ ಯೇಸುವಿನ ಮೇಲೆ ಇಳಿದರು. ಅಲ್ಲದೆ, “ನೀನೇ ನನ್ನ ಪುತ್ರ; ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು,” ಎಂಬ ದೈವವಾಣಿ ಕೇಳಿಸಿತು.
ಯೇಸುವಿನ ವಂಶಾವಳಿ
(ಮತ್ತಾ. 3:1-17)
23ಯೇಸುಸ್ವಾಮಿ ಬೋಧಿಸಲು ಪ್ರಾರಂಭಿಸಿದಾಗ ಅವರಿಗೆ ಸುಮಾರು ಮೂವತ್ತು ವರ್ಷ ವಯಸ್ಸು. ಯೇಸು ಜೋಸೆಫನ ಮಗನೆಂದು ಜನರು ಭಾವಿಸಿದ್ದರು. ಜೋಸೆಫನು ಹೇಲಿಯನಿಗೆ ಹುಟ್ಟಿದನು.
24ಹೇಲಿಯನು ಮತ್ತಾತನಿಗೆ, ಮತ್ತಾತನು ಲೇವಿಗೆ, ಲೇವಿ ಮೆಲ್ಕಿಯನಿಗೆ, ಮೆಲ್ಕಿ ಯನ್ನಾಯನಿಗೆ, ಯನ್ನಾಯ ಜೋಸೆಫನಿಗೆ ಹುಟ್ಟಿದರು.
25ಜೋಸೆಫ್ ಮತ್ತಥೀಯನಿಗೆ, ಮತ್ತಥೀಯ ಆಮೋಸನಿಗೆ, ಆಮೋಸನು ನಾಹೂಮನಿಗೆ, ನಾಹೂಮ ಎಸ್ಲಿಯನಿಗೆ, ಎಸ್ಲಿಯ ನಗ್ಗಾಯನಿಗೆ ಹುಟ್ಟಿದರು.
26ನಗ್ಗಾಯ ಮಹಾಥನಿಗೆ, ಮಹಾಥ ಮತ್ತಥೀಯನಿಗೆ, ಮತ್ತಥೀಯ ಶಿಮಿಯಾನಿಗೆ, ಶಿಮಿಯಾ ಯೊಸೇಖನಿಗೆ ಹುಟ್ಟಿದರು.
27ಯೊಸೇಖ ಯೋದನಿಗೆ, ಯೋದನು ಯೊವಾನ್ನನಿಗೆ, ಯೊವಾನ್ನನು ರೇಸನಿಗೆ, ರೇಸನು ಜೆರುಬಾಬೇಲನಿಗೆ, ಜೆರುಬಾಬೆಲ್ ಸಲಥಿಯೇಲನಿಗೆ, ಸಲಥಿಯೇಲನು ಸೇರಿಯನಿಗೆ ಹುಟ್ಟಿದರು.
28ಸೇರಿಯನು ಮೆಲ್ಕಿಯನಿಗೆ, ಮೆಲ್ಕಿಯನು ಅದ್ದಿಯನಿಗೆ, ಅದ್ದಿಯನು ಕೋಸಾಮನಿಗೆ, ಕೋಸಾಮ್ ಎಲ್ಮದಾಮನಿಗೆ, ಎಲ್ಮದಾಮ್ ಏರನಿಗೆ ಹುಟ್ಟಿದರು.
29ಏರ್ ಯೆಹೋಷುವನಿಗೆ, ಯೆಹೋಷುವ ಎಲಿಯೇಜರನಿಗೆ, ಎಲಿಯೇಜರ್ ಯೋರೈಮನಿಗೆ, ಯೋರೈಮ್ ಮತ್ತಾತನಿಗೆ, ಮತ್ತಾತನು ಲೇವಿಗೆ ಹುಟ್ಟಿದರು.
30ಲೇವಿ ಸಿಮಿಯೋನನಿಗೆ, ಸಿಮಿಯೋನ್ ಯೂದನಿಗೆ, ಯೂದ ಜೋಸೆಫನಿಗೆ, ಜೋಸೆಫ್ ಯೊನಾಮನಿಗೆ, ಯೊನಾಮ್ ಎಲಿಯಕೀಮನಿಗೆ ಹುಟ್ಟಿದರು.
31ಎಲಿಯಕೀಮ್ ಮೆಲೆಯಾನಿಗೆ, ಮೆಲೆಯಾ ಮೆನ್ನನಿಗೆ, ಮೆನ್ನ ಮತ್ತಾಥನಿಗೆ, ಮತ್ತಾಥ ನಾತಾನನಿಗೆ, ನಾತಾನ್ ದಾವೀದನಿಗೆ ಹುಟ್ಟಿದರು.
32ದಾವೀದ್ ಜೆಸ್ಸೆಯನಿಗೆ, ಜೆಸ್ಸೆಯ ಓಬೇದನಿಗೆ, ಓಬೇದ್ ಬೋವಜನಿಗೆ, ಬೋವಜ್ ಸಲ್ಮೋನನಿಗೆ, ಸಲ್ಮೋನ್ ನಹಸ್ಸೋನನಿಗೆ ಹುಟ್ಟಿದರು.
33ನಹಸ್ಸೋನ್ ಅಮ್ಮಿನದಾಬನಿಗೆ, ಅಮ್ಮಿನಾದಾಬನು ಅದ್ಮಿನನಿಗೆ, ಅದ್ಮಿನ್ ಆರ್ನೈಯನಿಗೆ, ಆರ್ನೈಯ ಹೆಸ್ರೋನನಿಗೆ, ಹೆಸ್ರೋನ್ ಪೆರೆಸನಿಗೆ, ಪೆರೆಸ್ ಯೂದನಿಗೆ ಹುಟ್ಟಿದರು.
34ಯೂದ ಯಕೋಬನಿಗೆ, ಯಕೋಬ್ ಇಸಾಕನಿಗೆ, ಇಸಾಕ ಅಬ್ರಹಾಮನಿಗೆ, ಅಬ್ರಹಾಮ ತೇರನಿಗೆ, ತೇರ ನಹೋರನಿಗೆ ಹುಟ್ಟಿದರು.
35ನಹೋರ್ ಸೆರೂಗನಿಗೆ, ಸೆರೂಗ್ ರೆಗೂವನಿಗೆ, ರೆಗೂವ ಪೆಲೆಗನಿಗೆ, ಪೆಲೆಗ್ ಹೇಬೆರನಿಗೆ, ಹೇಬೆರ್ ಸಾಲನಿಗೆ ಹುಟ್ಟಿದರು.
36ಸಾಲ ಕಯಿನನಿಗೆ, ಕಯಿನ್ ಅರ್ಫಕ್ಷಾದನಿಗೆ, ಅರ್ಪಕ್ಷಾದ್‍ ಶೇಮನಿಗೆ, ಶೇಮ್ ನೋವನಿಗೆ, ನೋವ ಲಾಮೆಕನಿಗೆ, ಲಾಮೆಕ್ ಮತೂಷಲನಿಗೆ ಹುಟ್ಟಿದರು.
37ಮೆತೂಷಲ ಹನೋಕನಿಗೆ, ಹನೋಕ್ ಯೆರೆದನಿಗೆ, ಯೆರೆದ್ ಮಹಲಲೇಲನಿಗೆ, ಮಹಲಲೇಲ್ ಕಯಿನನಿಗೆ ಹುಟ್ಟಿದರು.
38ಕಯಿನನ್‍ ಎನೋಷನಿಗೆ, ಎನೋಷ ಸೇತನಿಗೆ, ಸೇತ್ ಆದಾಮನಿಗೆ ಹುಟ್ಟಿದರು. ಆದಾಮನು ದೇವರ ಮಗನು.

Currently Selected:

ಲೂಕ. 3: KANCLBSI

Highlight

Share

Copy

None

Want to have your highlights saved across all your devices? Sign up or sign in