YouVersion Logo
Search Icon

ಆದಿಕಾಂಡ 20

20
ಅಬ್ರಹಾಮನು ಮತ್ತು ಅಬೀಮೆಲೆಕನು
1ಅಬ್ರಹಾಮನು ಅಲ್ಲಿಂದ ನೆಗೆವ ಕಡೆಗೆ ಕಾದೇಶಿಗೆ ಪ್ರಯಾಣಮಾಡಿ, ಕಾದೇಶ್ ಹಾಗೂ ಶೂರಿನ ಮಧ್ಯದ ಗೆರಾರಿನಲ್ಲಿ ಸ್ವಲ್ಪಕಾಲ ಪ್ರವಾಸಿಯಾಗಿದ್ದನು. 2ಗೆರಾರಿನಲ್ಲಿ ಅಬ್ರಹಾಮನು ತನ್ನ ಹೆಂಡತಿ ಸಾರಳ ವಿಷಯವಾಗಿ, “ಅವಳು ನನ್ನ ತಂಗಿ,” ಎಂದು ಹೇಳಿದ್ದನು. ಆದ್ದರಿಂದ ಗೆರಾರಿನ ಅರಸ ಅಬೀಮೆಲೆಕನು ಸಾರಳನ್ನು ಕರೆಯಿಸಿ ತನ್ನ ಅರಮನೆಗೆ ತೆಗೆದುಕೊಂಡನು.
3ಆದರೆ ದೇವರು ಅಬೀಮೆಲೆಕನಿಗೆ ರಾತ್ರಿಯ ಕನಸಿನಲ್ಲಿ ಬಂದು, “ನೀನು ಆ ಸ್ರೀಯನ್ನು ತೆಗೆದುಕೊಂಡ ಕಾರಣ ಸಾಯತಕ್ಕವನಾಗಿದ್ದಿ, ಏಕೆಂದರೆ ಆಕೆಯು ಆ ಮನುಷ್ಯನ ಹೆಂಡತಿ,” ಎಂದು ಅವನಿಗೆ ಹೇಳಿದರು.
4ಆದರೆ ಅಬೀಮೆಲೆಕನು ಆಕೆಯ ಸಮೀಪಕ್ಕೆ ಬಂದಿರಲಿಲ್ಲ. ಆದ್ದರಿಂದ ಅವನು, “ಪ್ರಭುವೇ, ನಿರಪರಾಧಿಯಾದ ಪ್ರಜೆಯನ್ನು ನೀವು ನಾಶಮಾಡುವಿರೋ? 5ಅವನು ನನಗೆ, ‘ಅವಳು ನನ್ನ ತಂಗಿ,’ ಎಂದು ಹೇಳಲಿಲ್ಲವೋ? ಅವಳೇ, ‘ಅವನು ನನ್ನ ಅಣ್ಣ,’ ಎಂದು ಹೇಳಿದ್ದಾಳೆ. ಆದ್ದರಿಂದ ನಾನು ಯಥಾರ್ಥವಾದ ಹೃದಯದಿಂದಲೂ ನಿರಪರಾಧದ ಹಸ್ತದಿಂದಲೂ ಇದನ್ನು ಮಾಡಿದ್ದೇನೆ,” ಎಂದನು.
6ಅದಕ್ಕೆ ದೇವರು ಕನಸಿನಲ್ಲಿ ಅವನಿಗೆ, “ಹೌದು, ನೀನು ಇದನ್ನು ಯಥಾರ್ಥವಾದ ಹೃದಯದಿಂದಲೇ ಮಾಡಿದ್ದೀಯೆ ಎಂದು ನನಗೂ ತಿಳಿದಿದೆ. ಆದ್ದರಿಂದ ನೀನು ನನಗೆ ವಿರೋಧವಾಗಿ ಪಾಪಮಾಡದಂತೆ ನಾನು ನಿನ್ನನ್ನು ತಡೆದು, ಆಕೆಯನ್ನು ಮುಟ್ಟಗೊಡಿಸಲಿಲ್ಲ. 7ಈಗ ಆ ಮನುಷ್ಯನ ಹೆಂಡತಿಯನ್ನು ನೀನು ಹಿಂದಕ್ಕೆ ಕಳುಹಿಸಿಬಿಡು. ಏಕೆಂದರೆ ಅವನು ಪ್ರವಾದಿಯಾಗಿದ್ದಾನೆ. ನೀನು ಬದುಕುವಂತೆ ಅವನು ನಿನಗೋಸ್ಕರ ಪ್ರಾರ್ಥಿಸುವನು. ನೀನು ಆಕೆಯನ್ನು ಹಿಂದಕ್ಕೆ ಕಳುಹಿಸದಿದ್ದರೆ, ನೀನೂ ನಿನ್ನವರೆಲ್ಲರೂ ಖಂಡಿತವಾಗಿ ಸಾಯುವಿರಿ ಎಂದು ತಿಳಿದುಕೋ,” ಎಂದರು.
8ಅಬೀಮೆಲೆಕನು ಬೆಳಿಗ್ಗೆ ಎದ್ದು, ತನ್ನ ಸೇವಕರೆಲ್ಲರನ್ನೂ ಕರೆದು, ಇವುಗಳನ್ನೆಲ್ಲಾ ಅವರಿಗೆ ಹೇಳಿದನು. ಅದಕ್ಕೆ ಆ ಮನುಷ್ಯರು ಬಹಳವಾಗಿ ಹೆದರಿದರು. 9ಅಬೀಮೆಲೆಕನು ಅಬ್ರಹಾಮನನ್ನು ಕರೆದು ಅವನಿಗೆ, “ನೀನು ನಮಗೆ ಮಾಡಿದ್ದೇನು? ನೀನು ನನ್ನ ಮೇಲೆಯೂ ನನ್ನ ರಾಜ್ಯದ ಮೇಲೆಯೂ ದೊಡ್ಡ ಪಾಪವನ್ನು ಬರಮಾಡುವಂತೆ ನಿನಗೆ ನಾನು ಏನು ಅಪರಾಧ ಮಾಡಿದ್ದೇನೆ? ನೀನು ನನಗೆ ಮಾಡಬಾರದ ಕೆಲಸಗಳನ್ನು ಮಾಡಿದ್ದೀಯೆ,” ಎಂದನು. 10ಇದಲ್ಲದೆ ಅಬೀಮೆಲೆಕನು ಅಬ್ರಹಾಮನಿಗೆ, “ನೀನು ಹೀಗೆ ಮಾಡಿದ ಕಾರಣವೇನು?” ಎಂದು ವಿಚಾರಿಸಿದನು.
11ಅದಕ್ಕೆ ಅಬ್ರಹಾಮನು, “ಈ ಸ್ಥಳದಲ್ಲಿ ಖಂಡಿತವಾಗಿ ದೇವರ ಭಯವು ಇಲ್ಲವೆಂದೂ ನನ್ನ ಹೆಂಡತಿಗಾಗಿ ಅವರು ನನ್ನನ್ನು ಕೊಲ್ಲುವರೆಂದೂ ನಾನು ನೆನಸಿದೆನು. 12ಇದಲ್ಲದೆ ನಿಜವಾಗಿಯೂ ಅವಳು ನನ್ನ ತಂಗಿ, ಆದರೆ ನನ್ನ ತಾಯಿಯ ಮಗಳಲ್ಲ, ನನ್ನ ತಂದೆಯ ಮಗಳೇ, ನನಗೆ ಹೆಂಡತಿಯಾದಳು. 13ದೇವರು ನನ್ನ ತಂದೆಯ ಮನೆಯೊಳಗಿಂದ ನನ್ನನ್ನು ದೇಶಾಂತರಕ್ಕೆ ಕರೆದಾಗ, ನಾನು ಅವಳಿಗೆ, ನೀನು ನನಗೆ ತೋರಿಸತಕ್ಕ ದಯೆಯು ಯಾವುದೆಂದರೆ, ನಾವು ಹೋಗುವ ಪ್ರತಿಯೊಂದು ಸ್ಥಳದಲ್ಲಿ ನನ್ನ ವಿಷಯವಾಗಿ, ‘ಇವನು ನನ್ನ ಅಣ್ಣ,’ ಎಂದು ಹೇಳು ಎಂದು ತಿಳಿಸಿದೆನು,” ಎಂದನು.
14ಆಗ ಅಬೀಮೆಲೆಕನು ಕುರಿಗಳನ್ನೂ ಎತ್ತುಗಳನ್ನೂ ದಾಸರನ್ನೂ ದಾಸಿಯರನ್ನೂ ತೆಗೆದುಕೊಂಡು ಅಬ್ರಹಾಮನಿಗೆ ಕೊಟ್ಟು, ಅವನ ಹೆಂಡತಿ ಸಾರಳನ್ನು ಅವನಿಗೆ ಒಪ್ಪಿಸಿಕೊಟ್ಟನು. 15ಅಬೀಮೆಲೆಕನು, “ನನ್ನ ದೇಶವು ನಿನ್ನ ಮುಂದೆ ಇದೆ, ನಿನಗೆ ಇಷ್ಟವಾಗಿರುವ ಸ್ಥಳದಲ್ಲಿ ವಾಸಮಾಡು,” ಎಂದನು.
16ಸಾರಳಿಗೆ, “ನಿನ್ನ ಅಣ್ಣನಿಗೆ ಸಾವಿರ ಬೆಳ್ಳಿಯ ಹಣವನ್ನು ಕೊಟ್ಟಿದ್ದೇನೆ. ನೋಡು, ನಡೆದ ಘಟನೆಗೆ ಇದು ಪ್ರಾಯಶ್ಚಿತ್ತವಾಗಿದೆ. ನಿನ್ನ ಸಂಗಡ ಇರುವವರೆಲ್ಲರಿಗೂ ಉಳಿದವರೆಲ್ಲರಿಗೂ ನೀನು ನಿರ್ದೋಷಿಯೆಂದು ಇದು ಸಾಕ್ಷಿಯಾಗಿರಲಿ,” ಎಂದನು.
17ಆಗ ಅಬ್ರಹಾಮನು ದೇವರಿಗೆ ಪ್ರಾರ್ಥನೆಮಾಡಿದನು. ದೇವರು ಅಬೀಮೆಲೆಕನನ್ನೂ, ಅವನ ಹೆಂಡತಿಯನ್ನೂ ದಾಸಿಯರನ್ನೂ ವಾಸಿಮಾಡಿದರು. ಆದ್ದರಿಂದ ಅವರಿಗೆ ಮಕ್ಕಳಾದರು. 18ಏಕೆಂದರೆ ಯೆಹೋವ ದೇವರು ಅಬ್ರಹಾಮನ ಹೆಂಡತಿ ಸಾರಳ ನಿಮಿತ್ತ ಅಬೀಮೆಲೆಕನ ಮನೆಯಲ್ಲಿದ್ದ ಮಹಿಳೆಯರನ್ನು ಬಂಜೆಯರನ್ನಾಗಿ ಮಾಡಿದ್ದರು.

Highlight

Share

Copy

None

Want to have your highlights saved across all your devices? Sign up or sign in