YouVersion Logo
Search Icon

ಆದಿಕಾಂಡ 30

30
1ರಾಹೇಲಳು ತಾನು ಯಾಕೋಬನಿಗೆ ಮಕ್ಕಳನ್ನು ಹೆರಲಿಲ್ಲ ಎಂದು ತಿಳಿದಾಗ, ಆಕೆಯು ತನ್ನ ಸಹೋದರಿಯ ಮೇಲೆ ಹೊಟ್ಟೆಕಿಚ್ಚು ಪಟ್ಟು ಯಾಕೋಬನಿಗೆ, “ನನಗೆ ಮಕ್ಕಳನ್ನು ಕೊಡು, ಇಲ್ಲದಿದ್ದರೆ ನಾನು ಸಾಯುತ್ತೇನೆ,” ಎಂದಳು.
2ಅದಕ್ಕೆ ಯಾಕೋಬನು ರಾಹೇಲಳ ಮೇಲೆ ಕೋಪಿಸಿಕೊಂಡು, “ನಿನಗೆ ಗರ್ಭ ಫಲವನ್ನು ಕೊಡುವ ದೇವರ ಸ್ಥಾನದಲ್ಲಿ ನಾನಿದ್ದೇನೋ?” ಎಂದನು.
3ಅದಕ್ಕೆ ಆಕೆಯು, “ನನ್ನ ದಾಸಿ ಬಿಲ್ಹಳು ಇದ್ದಾಳೆ, ಅವಳ ಬಳಿಗೆ ಹೋಗು, ಅವಳು ಹೆತ್ತು ನನ್ನ ಮಡಿಲಲ್ಲಿ ಇಡಲಿ. ಅವಳಿಂದ ನನಗೆ ಮಕ್ಕಳಾಗುವರು,” ಎಂದಳು.
4ಹೀಗೆ ಅವನಿಗೆ ತನ್ನ ದಾಸಿ ಬಿಲ್ಹಳನ್ನು ಕೊಟ್ಟಳು. ಯಾಕೋಬನು ಅವಳನ್ನು ಸ್ವೀಕರಿಸಿದನು. 5ಬಿಲ್ಹಳು ಗರ್ಭಿಣಿಯಾಗಿ, ಯಾಕೋಬನಿಗೆ ಮಗನನ್ನು ಹೆತ್ತಳು. 6ರಾಹೇಲಳು, “ದೇವರು ನನಗೆ ನ್ಯಾಯತೀರಿಸಿ, ನನ್ನ ಸ್ವರವನ್ನು ಕೇಳಿ, ನನಗೆ ಮಗನನ್ನು ಕೊಟ್ಟಿದ್ದಾರೆ,” ಎಂದು ಹೇಳಿದಳು. ಆದ್ದರಿಂದ ಆಕೆಯು ಅವನಿಗೆ ದಾನ್#30:6 ದಾನ್ ಅಂದರೆ ನ್ಯಾಯತೀರ್ಪು ಎಂದು ಹೆಸರಿಟ್ಟಳು.
7ರಾಹೇಲಳ ದಾಸಿ ಬಿಲ್ಹಳು ಮತ್ತೆ ಗರ್ಭಿಣಿಯಾಗಿ, ಯಾಕೋಬನಿಗೆ ಎರಡನೆಯ ಮಗನನ್ನು ಹೆತ್ತಳು. 8ಆಗ ರಾಹೇಲಳು, “ಅಧಿಕವಾದ ಹೋರಾಟಗಳಿಂದ ನನ್ನ ಸಹೋದರಿಯ ಸಂಗಡ ಹೋರಾಡಿ ಜಯಿಸಿದ್ದೇನೆ,” ಎಂದು ಹೇಳಿ ಅವನಿಗೆ ನಫ್ತಾಲಿ#30:8 ನಫ್ತಾಲಿ ಪದದ ಅರ್ಥ ಹೋರಾಟ ಎಂದು ಹೆಸರಿಟ್ಟಳು.
9ಲೇಯಳು ತಾನು ಹೆರುವುದು ನಿಂತಿತೆಂದು ತಿಳಿದು, ತನ್ನ ದಾಸಿ ಜಿಲ್ಪಳನ್ನು ಯಾಕೋಬನಿಗೆ ಹೆಂಡತಿಯಾಗಿ ಕೊಟ್ಟಳು. 10ಲೇಯಳ ದಾಸಿ ಜಿಲ್ಪಳು ಯಾಕೋಬನಿಗೆ ಮಗನನ್ನು ಹೆತ್ತಳು. 11ಆಗ ಲೇಯಳು, “ಎಂಥಾ ಸೌಭಾಗ್ಯ,” ಎಂದು ಹೇಳಿ ಅವನಿಗೆ ಗಾದ್#30:11 ಗಾದ್ ಅಂದರೆ ಸೌಭಾಗ್ಯ ಎಂದು ಹೆಸರಿಟ್ಟಳು.
12ಲೇಯಳ ದಾಸಿ ಜಿಲ್ಪಳು ಯಾಕೋಬನಿಗೆ ಎರಡನೆಯ ಮಗನನ್ನು ಹೆತ್ತಳು. 13ಆಗ ಲೇಯಳು, “ನಾನು ಧನ್ಯಳಾದೆನು, ಏಕೆಂದರೆ ಸ್ತ್ರೀಯರು ನನ್ನನ್ನು ಧನ್ಯಳೆಂದು ಕರೆಯುವರು,” ಎಂದು ಹೇಳಿ ಅವನಿಗೆ ಆಶೇರ್#30:13 ಆಶೇರ್ ಅಂದರೆ ಧನ್ಯನು ಎಂದು ಹೆಸರಿಟ್ಟಳು.
14ರೂಬೇನನು ಗೋಧಿ ಕೊಯ್ಯುವ ಕಾಲದಲ್ಲಿ ಹೋಗಿ, ಹೊಲದಲ್ಲಿ ದುದಾಯಿ#30:14 ದುದಾಯಿ ಒಂದು ರೀತಿಯ ಕಾಮಜನಕ ಫಲಗಳನ್ನು ಕಂಡು, ತಾಯಿ ಲೇಯಳ ಬಳಿಗೆ ಕೆಲವು ಫಲಗಳನ್ನು ತಂದಾಗ, ರಾಹೇಲಳು ಲೇಯಳಿಗೆ, “ನಿನ್ನ ಮಗನು ತಂದ ಫಲಗಳಲ್ಲಿ ಕೆಲವನ್ನು ನನಗೆ ಕೊಡು,” ಎಂದಳು.
15ಅದಕ್ಕೆ ಆಕೆಯು, “ನೀನು ನನ್ನ ಗಂಡನನ್ನು ತೆಗೆದುಕೊಂಡದ್ದು ಅಲ್ಪಕಾರ್ಯವೋ? ನೀನು ಈಗ ನನ್ನ ಮಗನು ತಂದ ದುದಾಯ ಫಲಗಳನ್ನು ಸಹ ತೆಗೆದುಕೊಳ್ಳುವಿಯೋ?” ಎಂದಳು.
ಅದಕ್ಕೆ ರಾಹೇಲಳು, “ನಿನ್ನ ಮಗನು ತಂದ ದುದಾಯ ಫಲಗಳಿಗೋಸ್ಕರ ಯಾಕೋಬನು ಈ ರಾತ್ರಿ ನಿನ್ನ ಸಂಗಡ ಮಲಗಲಿ,” ಎಂದಳು.
16ಯಾಕೋಬನು ಸಾಯಂಕಾಲದಲ್ಲಿ ಹೊಲದಿಂದ ಬಂದಾಗ, ಲೇಯಳು ಅವನೆದುರಿಗೆ ಹೋಗಿ, “ನೀನು ನನ್ನ ಬಳಿಗೆ ಬರಬೇಕು. ನನ್ನ ಮಗನು ತಂದ ದುದಾಯಿ ಫಲಗಳನ್ನು ಕೊಟ್ಟು ನಿನ್ನನ್ನು ಸಂಪಾದಿಸಿಕೊಂಡಿದ್ದೇನೆ,” ಎಂದಳು. ಆದ್ದರಿಂದ ಅವನು ಆ ರಾತ್ರಿಯಲ್ಲಿ ಆಕೆಯ ಸಂಗಡ ಮಲಗಿದನು.
17ಆಗ ದೇವರು ಲೇಯಳ ಪ್ರಾರ್ಥನೆಯನ್ನು ಕೇಳಿದ್ದರಿಂದ, ಆಕೆಯು ಗರ್ಭಿಣಿಯಾಗಿ ಯಾಕೋಬನಿಗೆ ಐದನೆಯ ಮಗನನ್ನು ಹೆತ್ತಳು. 18ಲೇಯಳು, “ನಾನು ನನ್ನ ಗಂಡನಿಗೆ ನನ್ನ ದಾಸಿಯನ್ನು ಕೊಟ್ಟಿದ್ದರಿಂದ ದೇವರು ನನಗೆ ಪ್ರತಿಫಲವನ್ನು ಕೊಟ್ಟಿದ್ದಾರೆ,” ಎಂದು ಹೇಳಿ, ಅವನಿಗೆ ಇಸ್ಸಾಕಾರ್#30:18 ಇಸ್ಸಾಕಾರ್ ಹೀಬ್ರೂ ಭಾಷೆಯಲ್ಲಿ ಪ್ರತಿಫಲ ಎಂದು ಹೆಸರಿಟ್ಟಳು.
19ಮತ್ತೊಂದು ಸಾರಿ ಲೇಯಳು ಗರ್ಭಿಣಿಯಾಗಿ ಯಾಕೋಬನಿಗೆ ಆರನೆಯ ಮಗನನ್ನು ಹೆತ್ತಳು, 20ಲೇಯಳು, “ದೇವರು ನನಗೆ ಒಳ್ಳೆಯ ವರದಾನವನ್ನು ಕೊಟ್ಟಿದ್ದಾರೆ. ಈಗ ನಾನು ಅವನಿಗೆ ಆರು ಮಕ್ಕಳನ್ನು ಹೆತ್ತದ್ದರಿಂದ, ನನ್ನ ಗಂಡನು ಈಗಲಾದರೂ ನನ್ನನ್ನು ಗೌರವಿಸುವನು,” ಎಂದು ಹೇಳಿ, ಅವನಿಗೆ ಜೆಬುಲೂನ್#30:20 ಜೆಬುಲೂನ್ ಪದದ ಅರ್ಥ ಗೌರವ ಎಂದು ಹೆಸರಿಟ್ಟಳು.
21ತರುವಾಯ ಆಕೆಯು ಒಬ್ಬ ಮಗಳನ್ನು ಹೆತ್ತು, ಆಕೆಗೆ ದೀನಾ ಎಂದು ಹೆಸರಿಟ್ಟಳು.
22ಆಗ ದೇವರು ರಾಹೇಲಳನ್ನು ಜ್ಞಾಪಕಮಾಡಿಕೊಂಡರು. ದೇವರು ಆಕೆಯ ಮೊರೆಯನ್ನು ಕೇಳಿ, ಆಕೆಗೆ ಮಕ್ಕಳಾಗುವಂತೆ ಅನುಗ್ರಹಮಾಡಿದರು. 23ಆಕೆಯು ಗರ್ಭಿಣಿಯಾಗಿ ಮಗನನ್ನು ಹೆತ್ತು, “ದೇವರು ನನ್ನ ನಿಂದೆಯನ್ನು ತೆಗೆದುಬಿಟ್ಟಿದ್ದಾರೆ,” ಎಂದಳು. 24ಆಕೆಯು, “ಯೆಹೋವ ದೇವರು ನನಗೆ ಮತ್ತೊಬ್ಬ ಮಗನನ್ನು ದಯಪಾಲಿಸುವರು,” ಎಂದು ಹೇಳಿ ಅವನಿಗೆ ಯೋಸೇಫ ಎಂದು ಹೆಸರಿಟ್ಟಳು.
ಯಾಕೋಬನ ಕುರಿಮಂದೆಯ ಅಭಿವೃದ್ಧಿ
25ರಾಹೇಲಳು ಯೋಸೇಫನನ್ನು ಹೆತ್ತಾಗ ಯಾಕೋಬನು ಲಾಬಾನನಿಗೆ, “ನಾನು ನನ್ನ ಸ್ಥಳಕ್ಕೂ ಸ್ವದೇಶಕ್ಕೂ ಹೋಗುವಂತೆ ನನ್ನನ್ನು ಕಳುಹಿಸಿಕೊಡು. 26ನಾನು ಯಾರಿಗೋಸ್ಕರ ನಿನಗೆ ಸೇವೆ ಮಾಡಿದೆನೋ, ಆ ನನ್ನ ಹೆಂಡತಿಯರನ್ನೂ, ನನ್ನ ಮಕ್ಕಳನ್ನೂ ನನ್ನೊಂದಿಗೆ ಕಳುಹಿಸಿಕೊಡು. ನಾನು ನಿನಗೆ ಮಾಡಿದ ಸೇವೆಯನ್ನು ನೀನು ಬಲ್ಲವನಾಗಿದ್ದೀಯೆ,” ಎಂದನು.
27ಲಾಬಾನನು ಅವನಿಗೆ, “ನಾನು ನಿನ್ನ ದೃಷ್ಟಿಯಲ್ಲಿ ದಯೆ ಹೊಂದಿದವನಾಗಿದ್ದರೆ, ನನ್ನ ಬಳಿಯಲ್ಲಿಯೇ ಇರು. ಏಕೆಂದರೆ ಯೆಹೋವ ದೇವರು ನಿನಗೋಸ್ಕರ ನನ್ನನ್ನು ಆಶೀರ್ವದಿಸಿದ್ದಾರೆಂದು ನಾನು ಭವಿಷ್ಯಜ್ಞಾನ ಅನುಭವದಿಂದ ಕಲಿತುಕೊಂಡಿದ್ದೇನೆ. 28ನೀನು ನಿನ್ನ ಸಂಬಳವನ್ನು ನಿರ್ಣಯಿಸು. ಅದನ್ನು ನಾನು ನಿನಗೆ ಕೊಡುವೆನು,” ಎಂದನು.
29ಅದಕ್ಕೆ ಯಾಕೋಬನು ಅವನಿಗೆ, “ನಾನು ನಿನಗೆ ಮಾಡಿದ ಸೇವೆಯನ್ನೂ, ನಿನ್ನ ಪಶುಗಳು ನನ್ನ ಬಳಿಯಲ್ಲಿ ಹೇಗೆ ಅಭಿವೃದ್ಧಿ ಆಗಿವೆ ಎಂಬುದನ್ನೂ ನೀನು ಬಲ್ಲೆ. 30ನಾನು ಬರುವುದಕ್ಕಿಂತ ಮುಂಚೆ ನಿನಗಿದ್ದದ್ದು ಸ್ವಲ್ಪವೇ. ಈಗ ಅದು ಬಹಳವಾಗಿ ಹೆಚ್ಚಿದೆ. ನಾನು ಬಂದಂದಿನಿಂದ ಯೆಹೋವ ದೇವರು ನಿನ್ನನ್ನು ಆಶೀರ್ವದಿಸಿದ್ದಾರೆ. ಈಗ ನಾನು ನನ್ನ ಸ್ವಂತ ಮನೆಗೋಸ್ಕರ ಯಾವಾಗ ಸಂಪಾದಿಸಲಿ?” ಎಂದನು.
31ಅದಕ್ಕೆ ಲಾಬಾನನು, “ನಿನಗೆ ನಾನು ಏನು ಕೊಡಲಿ?” ಎಂದನು.
ಯಾಕೋಬನು, “ಏನೂ ಕೊಡಬೇಡ, ಒಂದು ವಿಷಯದಲ್ಲಿ ಒಪ್ಪಿಕೊಂಡರೆ, ನಾನು ಮತ್ತೆ ನಿನ್ನ ಮಂದೆಯನ್ನು ಮೇಯಿಸಿ ಕಾಯುವೆನು. 32ಈ ಹೊತ್ತು ನಾನು ನಿನ್ನ ಎಲ್ಲಾ ಮಂದೆಯ ಮಧ್ಯದಲ್ಲಿ ಹಾದು ಹೋಗುವೆನು. ಕುರಿಗಳಲ್ಲಿ ಕಂದುಬಣ್ಣದವುಗಳನ್ನೆಲ್ಲಾ, ಮೇಕೆಗಳಲ್ಲಿ ಚುಕ್ಕೆ ಮತ್ತು ಮಚ್ಚೆ ಉಳ್ಳವುಗಳನ್ನೆಲ್ಲಾ ಬೇರೆ ಮಾಡುವೆನು. ಅವೇ ನನ್ನ ಕೂಲಿಯಾಗಿರಲಿ. 33ಹೀಗಿದ್ದರೆ ಬರುವ ಕಾಲದಲ್ಲಿ ನನ್ನ ಸಂಬಳಕ್ಕಾಗಿ ನಾನು ನಿನ್ನ ಮುಂದೆ ಬಂದಾಗ, ನನ್ನ ಪ್ರಾಮಾಣಿಕತೆಯೇ ನನಗೆ ಸಾಕ್ಷಿಕೊಡುವುದು. ಮೇಕೆಗಳಲ್ಲಿ ಚುಕ್ಕೆ ಮತ್ತು ಮಚ್ಚೆ ಕುರಿಗಳಲ್ಲಿ ಕಂದು ಬಣ್ಣವಿಲ್ಲದವುಗಳು ನನ್ನ ಬಳಿಯಲ್ಲಿದ್ದರೆ, ಅವು ಕದ್ದವುಗಳು ಎಂದು ಎಣಿಕೆಯಾಗಿರಲಿ,” ಎಂದನು.
34ಲಾಬಾನನು, “ನೀನು ಹೇಳಿದಂತೆಯೇ ಆಗಲಿ,” ಎಂದನು. 35ಅದೇ ದಿನದಲ್ಲಿ ಲಾಬಾನನು ಹೋತಗಳಲ್ಲಿ ರೇಖೆ, ಮಚ್ಚೆ ಇದ್ದವುಗಳನ್ನೂ ಮತ್ತು ಸ್ವಲ್ಪ ಬಿಳುಪಾದ ಬಣ್ಣವಿದ್ದ ಎಲ್ಲವುಗಳನ್ನೂ, ಕುರಿಗಳಲ್ಲಿ ಕಂದು ಬಣ್ಣವಿದ್ದವುಗಳನ್ನೂ ವಿಂಗಡಿಸಿ, ತನ್ನ ಪುತ್ರರ ಕೈಗೆ ಕೊಟ್ಟನು. 36ತನಗೂ, ಯಾಕೋಬನಿಗೂ ಮಧ್ಯದಲ್ಲಿ ಮೂರು ದಿನಗಳ ಪ್ರಯಾಣದಷ್ಟು ಅಂತರವನ್ನು ಬಿಟ್ಟನು. ಯಾಕೋಬನು ಲಾಬಾನನ ಮಿಕ್ಕ ಮಂದೆಯನ್ನು ಮೇಯಿಸಿದನು.
37ಹೀಗಿರುವಲ್ಲಿ ಯಾಕೋಬನು ಲಿಬ್ನೆ, ಲೂಜು, ಅರ್ಮೋನ್ ಎಂಬ ಮರಗಳ ಹಸಿ ಕೋಲುಗಳನ್ನು ತೆಗೆದುಕೊಂಡು, ಪಟ್ಟೆಪಟ್ಟೆಯಾಗಿ ತೊಗಟೆಯನ್ನು ಸುಲಿದು, ಅವುಗಳಲ್ಲಿರುವ ಬಿಳಿಯ ಬಣ್ಣವು ಕಾಣಿಸುವಂತೆ ಮಾಡಿದನು. 38ಮಂದೆಗಳು ನೀರು ಕುಡಿಯುವುದಕ್ಕೆ ಬಂದಾಗ, ಅವು ಗರ್ಭಧರಿಸಬೇಕೆಂದು ನೀರು ಕುಡಿಯುವ ದೋಣಿಗಳಲ್ಲಿ ತಾನು ತೊಗಟೆ ಸುಲಿದ ಕೋಲುಗಳನ್ನು ಅವುಗಳ ಮುಂದೆ ಇಟ್ಟನು. 39ಮಂದೆಗಳು ಆ ಕೋಲುಗಳನ್ನು ನೋಡಿ, ಸಂಗಮ ಮಾಡಿದ್ದರಿಂದ, ಚುಕ್ಕೆ ಮಚ್ಚೆ ರೇಖೆಗಳುಳ್ಳ ಮರಿಗಳನ್ನು ಈಯುತ್ತಿದ್ದವು. 40ಯಾಕೋಬನು ಕುರಿಗಳನ್ನು ಬೇರೆ ಮಾಡಿ, ಲಾಬಾನನ ಮಂದೆಯಲ್ಲಿರುವ ರೇಖೆಗಳುಳ್ಳ ಆಡುಕುರಿಗಳೆದುರಾಗಿಯೂ ಕಂದು ಬಣ್ಣ ಉಳ್ಳವುಗಳೆದುರಾಗಿಯೂ ಕುರಿಗಳನ್ನು ಇರಿಸಿದನು. ಅವನು ತನ್ನ ಮಂದೆಯನ್ನು ಲಾಬಾನನ ಮಂದೆಗಳೊಂದಿಗೆ ಸೇರಿಸದೆ, ಅವುಗಳನ್ನು ಬೇರೆ ಇಟ್ಟುಕೊಂಡನು. 41ಬಲವಾದ ಕುರಿಗಳು ಸಂಗಮ ಮಾಡುವಾಗ ಯಾಕೋಬನು ಆ ಕುರಿಗಳು ಕೋಲುಗಳನ್ನು ನೋಡುತ್ತಾ ಗರ್ಭಧರಿಸುವ ಹಾಗೆ ಕೋಲುಗಳನ್ನು ಕುರಿಗಳ ಕಣ್ಣೆದುರಾಗಿ ದೋಣಿಗಳಲ್ಲಿ ಇಡುತ್ತಿದ್ದನು. 42ಆದರೆ ಕುರಿಗಳು ಬಲಹೀನವಾಗಿದ್ದಾಗ, ಅವನು ಕೋಲುಗಳನ್ನು ದೋಣಿಗಳಲ್ಲಿ ಇಡಲಿಲ್ಲ. ಹೀಗಾಗಿ ಬಲಹೀನವಾದವುಗಳು ಲಾಬಾನನಿಗೂ, ಬಲವಾದವುಗಳು ಯಾಕೋಬನಿಗೂ ಆದವು. 43ಈ ಪ್ರಕಾರ ಯಾಕೋಬನು ಅತ್ಯಧಿಕವಾಗಿ ಅಭಿವೃದ್ಧಿಯಾದ್ದರಿಂದ, ಬಹು ಕುರಿಗಳೂ ದಾಸದಾಸಿಯರೂ ಒಂಟೆಗಳೂ ಕತ್ತೆಗಳೂ ಅವನಿಗೆ ದೊರೆತವು.

Highlight

Share

Copy

None

Want to have your highlights saved across all your devices? Sign up or sign in