ಆದಿಕಾಂಡ 32
32
ಯಾಕೋಬನು ಏಸಾವನನ್ನು ಸಂದರ್ಶಿಸಲು ಸಿದ್ಧತೆ
1ಅನಂತರ ಯಾಕೋಬನು ತನ್ನ ಮಾರ್ಗವಾಗಿ ಹೋಗುತ್ತಿದ್ದಾಗ, ದೇವದೂತರು ಅವನ ಎದುರಿಗೆ ಬಂದರು. 2ಯಾಕೋಬನು ಅವರನ್ನು ನೋಡಿದಾಗ, “ಇದು ದೇವರ ಸೈನ್ಯ,” ಎಂದು ಹೇಳಿ, ಆ ಸ್ಥಳಕ್ಕೆ ಮಹನಯಿಮ್#32:2 ಮಹನಯಿಮ್ ಅಂದರೆ ಎರಡು ಸೈನ್ಯ ಎಂದು ಹೆಸರಿಟ್ಟನು.
3ಯಾಕೋಬನು ಎದೋಮ್ಯರ ದೇಶವಾದ ಸೇಯೀರನ ಸೀಮೆಯಲ್ಲಿರುವ ತನ್ನ ಅಣ್ಣನಾದ ಏಸಾವನ ಬಳಿಗೆ ದೂತರನ್ನು ತನ್ನ ಮುಂದಾಗಿ ಕಳುಹಿಸಿದನು. 4ಕಳುಹಿಸುವಾಗ ಅವರಿಗೆ, “ನನ್ನ ಯಜಮಾನನಾದ ಏಸಾವನಿಗೆ ನೀವು ಹೀಗೆ ಹೇಳಬೇಕು: ‘ನಿನ್ನ ದಾಸನಾದ ಯಾಕೋಬನು ಹೀಗೆ ಹೇಳುತ್ತಾನೆ: ಲಾಬಾನನ ಸಂಗಡ ನಾನು ಇಲ್ಲಿಯವರೆಗೆ ಪ್ರವಾಸಿಯಾಗಿದ್ದೆನು. 5ಈಗ ನನಗೆ ಎತ್ತು, ಕತ್ತೆ, ಕುರಿಗಳು, ದಾಸದಾಸಿಯರು ಇದ್ದಾರೆ. ನಾನು ನಿನ್ನ ದೃಷ್ಟಿಯಲ್ಲಿ ದಯೆ ಹೊಂದುವಂತೆ ನಾನು ಈ ಸಂದೇಶವನ್ನು ನನ್ನ ಯಜಮಾನನಾದ ನಿಮಗೆ ತಿಳಿಸುವುದಕ್ಕಾಗಿ ಕಳುಹಿಸಿದ್ದೇನೆ,’ ಎಂದು ಹೇಳಿರಿ,” ಎಂದನು.
6ಆಗ ದೂತರು ಯಾಕೋಬನ ಬಳಿಗೆ ಹಿಂದಿರುಗಿ ಬಂದು, “ನಾವು ನಿನ್ನ ಸಹೋದರ ಏಸಾವನ ಬಳಿಗೆ ಹೋಗಿ ಬಂದಿದ್ದೇವೆ; ಅವನು ನಾನೂರು ಮಂದಿಯನ್ನು ಕರೆದುಕೊಂಡು ನಿನ್ನನ್ನು ಎದುರುಗೊಳ್ಳುವುದಕ್ಕೆ ಬರುತ್ತಿದ್ದಾನೆ,” ಎಂದರು.
7ಆಗ ಯಾಕೋಬನು ಬಹಳವಾಗಿ ಭಯಪಟ್ಟು, ತನ್ನ ಸಂಗಡ ಇದ್ದ ಜನರನ್ನೂ, ಕುರಿಗಳನ್ನೂ, ದನಗಳನ್ನೂ, ಒಂಟೆಗಳನ್ನೂ ಎರಡು ಗುಂಪುಗಳಾಗಿ#32:7 ಅಥವಾ ಸೈನ್ಯ ವಿಭಾಗಿಸಿದನು. 8ಏಕೆಂದರೆ, “ಏಸಾವನು ಒಂದು ಗುಂಪಿನ ಮೇಲೆ ದಾಳಿಮಾಡಿದರೆ, ಉಳಿದ ಗುಂಪು ತಪ್ಪಿಸಿಕೊಂಡು ಹೋಗಬಹುದು,” ಎಂದುಕೊಂಡನು.
9ಇದಲ್ಲದೆ ಯಾಕೋಬನು, “ನನ್ನ ತಂದೆ ಅಬ್ರಹಾಮನ ದೇವರೇ, ನನ್ನ ತಂದೆ ಇಸಾಕನ ದೇವರೇ, ನಿಮ್ಮ ದೇಶಕ್ಕೂ, ನಿನ್ನ ಬಂಧುಗಳ ಬಳಿಗೂ ಹಿಂದಿರುಗಿ ಹೋಗು. ಆಗ ನಾನು ನಿನಗೆ ಒಳ್ಳೆಯದನ್ನು ಮಾಡುವೆನು ಎಂದು ನನಗೆ ಹೇಳಿದ ಯೆಹೋವ ದೇವರೇ, 10ನೀವು ನಿಮ್ಮ ದಾಸನಿಗೆ ತೋರಿಸಿದ ಎಲ್ಲಾ ಕರುಣೆಗಳಿಗೂ, ಎಲ್ಲಾ ಸತ್ಯಕ್ಕೂ ಅಯೋಗ್ಯನಾಗಿದ್ದೇನೆ. ಏಕೆಂದರೆ ನಾನು ಮೊದಲು ಈ ಯೊರ್ದನ್ ಹೊಳೆಯನ್ನು ದಾಟಿದಾಗ, ನನ್ನ ಕೈಯಲ್ಲಿ ಕೋಲು ಮಾತ್ರವೇ ಇತ್ತು, ಈಗ ನನಗೆ ಎರಡು ಗುಂಪುಗಳಿವೆ. 11ನನ್ನ ಅಣ್ಣ ಏಸಾವನ ಕೈಯಿಂದ ನನ್ನನ್ನು ತಪ್ಪಿಸಿರಿ. ಏಕೆಂದರೆ ಅವನು ಬಂದು ನನ್ನನ್ನೂ, ಮಕ್ಕಳೊಂದಿಗೆ ತಾಯಂದಿರನ್ನೂ, ದಾಳಿಮಾಡುವನು ಎಂದು ನಾನು ಅವನಿಗೆ ಭಯಪಡುತ್ತೇನೆ. 12‘ನಿನಗೆ ಖಂಡಿತವಾಗಿ ಒಳ್ಳೆಯದನ್ನು ಮಾಡುವೆನು ಮತ್ತು ನಿನ್ನ ಸಂತತಿಯನ್ನು ಎಣಿಸುವುದಕ್ಕಾಗದ ಸಮುದ್ರದ ಮರಳಿನ ಹಾಗೆ ಮಾಡುವೆನು,’ ಎಂದು ನನಗೆ ಹೇಳಿದ್ದೀರಲ್ಲಾ?” ಎಂದನು.
13ಯಾಕೋಬನು ಆ ರಾತ್ರಿ ಅಲ್ಲೇ ಕಳೆದನು. ತಾನು ತಂದದ್ದರಲ್ಲಿ ಕೆಲವನ್ನು ಅವನ ಅಣ್ಣ ಏಸಾವನಿಗೆ ಕಾಣಿಕೆಗಾಗಿ ತೆಗೆದುಕೊಂಡನು. 14ಅವು ಯಾವುವೆಂದರೆ, ಇನ್ನೂರು ಮೇಕೆಗಳು, ಇಪ್ಪತ್ತು ಹೋತಗಳು, ಇನ್ನೂರು ಕುರಿಗಳು, ಇಪ್ಪತ್ತು ಟಗರುಗಳು, 15ಹಾಲು ಕೊಡುವ ಮೂವತ್ತು ಒಂಟೆಗಳು, ಅವುಗಳ ಮರಿಗಳು, ನಲವತ್ತು ಆಕಳುಗಳು, ಹತ್ತು ಹೋರಿಗಳು, ಇಪ್ಪತ್ತು ಹೆಣ್ಣು ಕತ್ತೆಗಳು, ಹತ್ತು ಗಂಡುಕತ್ತೆಗಳು, 16ಇವುಗಳಲ್ಲಿ ಪ್ರತಿಯೊಂದು ಮಂದೆಯನ್ನೂ, ಪ್ರತ್ಯೇಕವಾಗಿ ಅವನು ತನ್ನ ಸೇವಕರಿಗೆ ಒಪ್ಪಿಸಿ, ಅವರಿಗೆ, “ನನ್ನ ಮುಂದೆ ನಡೆದು ಮಂದೆ ಮಂದೆಗೂ ಮಧ್ಯದಲ್ಲಿ ಸ್ಥಳ ಬಿಡಿರಿ,” ಎಂದನು.
17ಅವನು ಮೊದಲನೆಯವನಿಗೆ, “ನನ್ನ ಅಣ್ಣ ಏಸಾವನು ನಿನ್ನೆದುರಿಗೆ ಬಂದು, ‘ನೀನು ಯಾರ ಕಡೆಯವನು? ಎಲ್ಲಿಗೆ ಹೋಗುತ್ತೀ? ಇಲ್ಲಿ ನಿನ್ನ ಮುಂದೆ ಇರುವ ಇವೆಲ್ಲ ಯಾರವು?’ ಎಂದು ಕೇಳಿದರೆ, 18ನೀನು ಅವನಿಗೆ, ‘ಇವು ನಿನ್ನ ದಾಸನಾದ ಯಾಕೋಬನವುಗಳೇ, ಇದು ನನ್ನ ಯಜಮಾನನಾದ ಏಸಾವನಿಗೆ ಕಳುಹಿಸಲಾದ ಕಾಣಿಕೆ, ಅವನೂ ನಮ್ಮ ಹಿಂದೆ ಇದ್ದಾನೆ,’ ಎಂದು ಅವನಿಗೆ ಹೇಳಬೇಕು,” ಎಂದು ಆಜ್ಞಾಪಿಸಿದನು.
19ಎರಡನೆಯವನಿಗೂ ಮೂರನೆಯವನಿಗೂ ಮಂದೆಗಳ ಹಿಂದೆ ಹೋಗುವವರೆಲ್ಲರಿಗೂ, “ನೀವು ಏಸಾವನನ್ನು ಕಂಡರೆ ಅವನಿಗೆ ಹಾಗೆಯೇ ಹೇಳಬೇಕು. 20ಇದಲ್ಲದೆ, ‘ನಿನ್ನ ದಾಸ ಯಾಕೋಬನು ನಮ್ಮ ಹಿಂದೆ ಬರುತ್ತಾನೆಂದು ಹೇಳಬೇಕು,’ ” ಎಂದು ಆಜ್ಞಾಪಿಸಿದನು. ಏಕೆಂದರೆ ನನ್ನ ಮುಂದೆ ಹೋಗುವ ಕಾಣಿಕೆಯಿಂದ ಅವನನ್ನು ಸಮಾಧಾನಪಡಿಸುವೆನು. ತರುವಾಯ ಅವನ ಮುಖವನ್ನು ಕಾಣುವೆನು. ಅವನು ನನ್ನನ್ನು ಅಂಗೀಕರಿಸುವನೇನೋ ಎಂದುಕೊಂಡನು. 21ಹೀಗೆ ಆ ಕಾಣಿಕೆಯು ಅವನ ಮುಂದಾಗಿ ಹೊರಟುಹೋಯಿತು. ತಾನಾದರೋ ಆ ರಾತ್ರಿ ಅಲ್ಲಿಯೇ ತಂಗಿದನು.
ಯಾಕೋಬನು ದೇವರೊಂದಿಗೆ ಹೋರಾಡಿದ್ದು
22ಆ ರಾತ್ರಿಯಲ್ಲಿ ಯಾಕೋಬನು ಎದ್ದು ತನ್ನ ಇಬ್ಬರು ಹೆಂಡತಿಯರನ್ನೂ, ತನ್ನ ಇಬ್ಬರು ದಾಸಿಯರನ್ನೂ, ತನ್ನ ಹನ್ನೊಂದು ಮಂದಿ ಪುತ್ರರನ್ನೂ ಕರೆದುಕೊಂಡು ಯಬ್ಬೋಕ್ ಎಂಬ ಹೊಳೆಯ ದಂಡೆಯನ್ನು ದಾಟಿದನು. 23ಅವನು ಅವರನ್ನು ಕರೆದುಕೊಂಡು ಹೊಳೆ ದಂಡೆಯನ್ನು ದಾಟಿಸಿದ್ದಲ್ಲದೆ ತನಗಿದ್ದದ್ದನ್ನೆಲ್ಲಾ ದಾಟಿಸಿದನು. 24ಆಗ ಯಾಕೋಬನು ಒಬ್ಬನೇ ಉಳಿದಾಗ, ಒಬ್ಬ ಮನುಷ್ಯನು ಉದಯವಾಗುವವರೆಗೆ ಅವನ ಸಂಗಡ ಹೋರಾಡಿದನು. 25ಆ ಮನುಷ್ಯನು ಅವನನ್ನು ಜಯಿಸದೆ ಇರುವುದನ್ನು ಕಂಡು, ಅವನ ತೊಡೆಯ ಕೀಲನ್ನು ಮುಟ್ಟಿದನು. ಅವನು ಹಾಗೆಯೇ ಸಂಗಡ ಹೋರಾಡುತ್ತಿರುವಾಗಲೇ ಯಾಕೋಬನ ತೊಡೆಯ ಕೀಲು ತಪ್ಪಿತು. 26ಅವನು ಯಾಕೋಬನಿಗೆ, “ಉದಯವಾಯಿತು, ನನ್ನನ್ನು ಹೋಗಗೊಡು,” ಎಂದಾಗ.
ಯಾಕೋಬನು, “ನೀನು ನನ್ನನ್ನು ಆಶೀರ್ವದಿಸದ ಹೊರತು, ನಾನು ನಿನ್ನನ್ನು ಹೋಗಗೊಡಿಸೆನು,” ಎಂದನು.
27ಆ ಮನುಷ್ಯನು ಅವನಿಗೆ, “ನಿನ್ನ ಹೆಸರು ಏನು?” ಎಂದಾಗ.
ಅವನು, “ಯಾಕೋಬ,” ಎಂದನು.
28ಅದಕ್ಕೆ ಅವನು, “ನಿನ್ನ ಹೆಸರು ಇನ್ನು ಮೇಲೆ ಯಾಕೋಬನೆಂದು ಎನಿಸಿಕೊಳ್ಳದೆ, ಇಸ್ರಾಯೇಲ್#32:28 ಇಸ್ರಾಯೇಲ್ ಪದದ ಅರ್ಥ ದೇವರೊಂದಿಗೆ ಹೋರಾಡಿದನು ಎಂದು ನಿನಗೆ ಹೆಸರಾಗುವುದು. ಏಕೆಂದರೆ ನೀನು ದೇವರ ಸಂಗಡವೂ, ಮನುಷ್ಯರ ಸಂಗಡವೂ ಹೋರಾಡಿ ಜಯಿಸಿದ್ದೀ,” ಎಂದನು.
29ಯಾಕೋಬನು, “ನಿನ್ನ ಹೆಸರನ್ನು ನನಗೆ ತಿಳಿಸು,” ಎಂದು ಅವನನ್ನು ಕೇಳಿಕೊಂಡನು.
ಆತನು, “ನನ್ನ ಹೆಸರನ್ನು ಏಕೆ ಕೇಳುತ್ತೀ?” ಎಂದು ಹೇಳಿ ಅವನನ್ನು ಅಲ್ಲೇ ಆಶೀರ್ವದಿಸಿದನು.
30ಆಗ ಯಾಕೋಬನು, “ನಾನು ದೇವರನ್ನು ಮುಖಾಮುಖಿಯಾಗಿ ನೋಡಿದರೂ, ನನ್ನ ಪ್ರಾಣ ಉಳಿಯಿತು,” ಎಂದು ಹೇಳಿ ಆ ಸ್ಥಳಕ್ಕೆ ಪೆನೀಯೇಲ್#32:30 ಪೆನೀಯೇಲ್ ಅಂದರೆ ದೇವರ ಮುಖ ಎಂದು ಹೆಸರಿಟ್ಟನು.
31ಯಾಕೋಬನು ಪೆನೀಯೇಲನ್ನು ದಾಟಿಹೋದಾಗ, ಸೂರ್ಯೋದಯವಾಯಿತು. ಆದರೆ ಅವನು ತೊಡೆಯ ನೋವಿನ ನಿಮಿತ್ತ ಕುಂಟುತ್ತಾ ನಡೆದನು. 32ಆತನು ಯಾಕೋಬನ ತೊಡೆಯ ಕೀಲನ್ನು ಮುದುರಿದ ನರದಲ್ಲಿ ಮುಟ್ಟಿದ್ದರಿಂದ ಇಸ್ರಾಯೇಲರು ತೊಡೆಯ ಕೀಲಿನ ಮೇಲಿರುವ ಮುದುರಿದ ನರವನ್ನು ಈ ದಿನದವರೆಗೂ ತಿನ್ನುವುದಿಲ್ಲ.
Currently Selected:
ಆದಿಕಾಂಡ 32: KSB
Highlight
Share
Copy
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.