ಆದಿಕಾಂಡ 34
34
ದೀನಾ ಹಾಗೂ ಶೆಕೆಮಿನವರು
1ಲೇಯಳು ಯಾಕೋಬನಿಗೆ ಹೆತ್ತ ಮಗಳಾದ ದೀನಳು ದೇಶದ ಸ್ತ್ರೀಯರನ್ನು ನೋಡುವುದಕ್ಕಾಗಿ ಹೊರಗೆ ಹೋದಳು. 2ದೇಶದ ಪ್ರಭುವಾಗಿದ್ದ ಹಿವ್ವಿಯನಾದ ಹಮೋರನ ಮಗ ಶೆಕೆಮನು ಆಕೆಯನ್ನು ತೆಗೆದುಕೊಂಡುಹೋಗಿ ಮಾನಭಂಗ ಮಾಡಿದನು. 3ಅವನ ಮನಸ್ಸು ಯಾಕೋಬನ ಮಗಳಾದ ದೀನಳ ಮೇಲೆಯೇ ಇತ್ತು. ಅವನು ಆ ಹುಡುಗಿಯನ್ನು ಪ್ರೀತಿಸಿ, ಆಕೆಯೊಂದಿಗೆ ಅನುರಾಗದಿಂದ ಮಾತನಾಡಿದನು. 4ಶೆಕೆಮನು ತನ್ನ ತಂದೆ ಹಮೋರನಿಗೆ, “ಈ ಹುಡುಗಿಯನ್ನು ನನಗೆ ಹೆಂಡತಿಯಾಗಿರುವಂತೆ ಹೇಳು,” ಎಂದನು.
5ಯಾಕೋಬನು ತನ್ನ ಮಗಳಾದ ದೀನಳನ್ನು ಶೆಕೆಮನು ಕೆಡಿಸಿದ್ದಾನೆಂದು ಕೇಳಿದಾಗ, ಅವನ ಮಕ್ಕಳು ಅವನ ಪಶುಗಳ ಸಂಗಡ ಹೊಲದಲ್ಲಿದ್ದರು. ಅವರು ಬರುವವರೆಗೆ ಯಾಕೋಬನು ಸುಮ್ಮನಿದ್ದನು.
6ಆಗ ಶೆಕೆಮನ ತಂದೆ ಹಮೋರನು ಯಾಕೋಬನ ಸಂಗಡ ಮಾತನಾಡುವುದಕ್ಕೆ ಬಂದನು. 7ಯಾಕೋಬನ ಮಕ್ಕಳು ಆ ವಿಷಯವನ್ನು ಕೇಳಿದ ಕೂಡಲೇ ಹೊಲದಿಂದ ಬಂದರು. ಶೆಕೆಮನು ಯಾಕೋಬನ ಮಗಳ ಸಂಗಡ ಮಲಗಿ, ಇಸ್ರಾಯೇಲಿನಲ್ಲಿ ಅವಮಾನಕರವಾದದ್ದನ್ನು ಮಾಡಿದ್ದರಿಂದ, ಅವರು ವ್ಯಸನಪಟ್ಟು, ಬಹಳ ಕೋಪಗೊಂಡರು. ಅದು ಹಾಗೆ ಆಗಬಾರದಾಗಿತ್ತು.
8ಹಮೋರನು ಅವರಿಗೆ, “ನನ್ನ ಮಗ ಶೆಕೆಮನ ಮನಸ್ಸು ನಿಮ್ಮ ಮಗಳನ್ನು ಆಶಿಸುತ್ತದೆ. ಆಕೆಯನ್ನು ಅವನಿಗೆ ಹೆಂಡತಿಯಾಗಿ ಕೊಡಿರಿ, ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ. 9ನೀವು ನಮ್ಮೊಂದಿಗೆ ಮದುವೆ ಸಂಬಂಧ ಮಾಡಿಕೊಳ್ಳಿರಿ. ನಿಮ್ಮ ಪುತ್ರಿಯರನ್ನು ನಮಗೆ ಕೊಡಿರಿ, ನಮ್ಮ ಪುತ್ರಿಯರನ್ನು ನೀವು ಮದುವೆಯಾಗಿರಿ. 10ಇದಲ್ಲದೆ ನೀವು ನಮ್ಮ ಸಂಗಡ ವಾಸಮಾಡಿರಿ. ದೇಶವು ನಿಮ್ಮ ಮುಂದೆ ಇದೆ. ನೀವು ಅದರಲ್ಲಿ ವಾಸಿಸಿ, ಅದರಲ್ಲಿ ವ್ಯಾಪಾರಮಾಡಿ,#34:10 ಅಥವಾ ಸ್ವತಂತ್ರ್ಯವಾಗಿ ನಡೆದಾಡಿರಿ ಅದರಿಂದ ಆಸ್ತಿಯನ್ನು ಮಾಡಿಕೊಳ್ಳಿರಿ,” ಎಂದನು.
11ಬಳಿಕ ಶೆಕೆಮನು ಆಕೆಯ ತಂದೆಗೂ, ಆಕೆಯ ಸಹೋದರರಿಗೂ, “ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ, ನೀವು ಕೇಳಿದ್ದನ್ನು ನಾನು ನಿಮಗೆ ಕೊಡುವೆನು. 12ಆದರೆ ಆ ಹುಡುಗಿಯನ್ನು ನನಗೆ ಹೆಂಡತಿಯಾಗಿ ಕೊಡಿರಿ,” ಎಂದನು.
13ಆಗ ಯಾಕೋಬನ ಮಕ್ಕಳು ಶೆಕೆಮನಿಗೂ, ಅವನ ತಂದೆ ಹಮೋರನಿಗೂ ವಂಚನೆಯ ಉತ್ತರವನ್ನು ಕೊಟ್ಟರು. ಏಕೆಂದರೆ ಅವನು ತಮ್ಮ ತಂಗಿ ದೀನಳನ್ನು ಕೆಡಿಸಿದ್ದನು. 14ಯಾಕೋಬನ ಮಕ್ಕಳು ಅವರಿಗೆ, “ನಾವು ಈ ಕಾರ್ಯವನ್ನು ಮಾಡಲಾರೆವು. ಸುನ್ನತಿ ಇಲ್ಲದ ಮನುಷ್ಯನಿಗೆ ನಮ್ಮ ತಂಗಿಯನ್ನು ಕೊಡಲಾರೆವು. ಅದು ನಮಗೆ ಅವಮಾನ. 15ಆದರೆ ನೀವು ನಮ್ಮ ಹಾಗಿದ್ದು, ನಿಮ್ಮಲ್ಲಿರುವ ಗಂಡಸರೆಲ್ಲಾ ಸುನ್ನತಿ ಮಾಡಿಸಿಕೊಂಡರೆ ಮಾತ್ರ ನಾವು ನಿಮಗೆ ಒಪ್ಪುವೆವು. 16ನಮ್ಮ ಪುತ್ರಿಯರನ್ನು ನಿಮಗೆ ಕೊಟ್ಟು, ನಿಮ್ಮ ಪುತ್ರಿಯರನ್ನು ತೆಗೆದುಕೊಳ್ಳುವೆವು. ಇದಲ್ಲದೆ ನಾವು ನಿಮ್ಮೊಂದಿಗೆ ವಾಸಮಾಡಿ, ಒಂದೇ ಜನಾಂಗವಾಗುವೆವು. 17ಆದರೆ ನೀವು ನಮ್ಮ ಮಾತನ್ನು ಕೇಳದೆ, ಸುನ್ನತಿ ಮಾಡಿಸಿಕೊಳ್ಳದೆ ಹೋದರೆ, ನಮ್ಮ ಹುಡುಗಿಯನ್ನು ನಾವು ಕರೆದುಕೊಂಡು ಹೋಗಿಬಿಡುತ್ತೇವೆ,” ಎಂದು ಹೇಳಿದರು.
18ಅವರ ಮಾತುಗಳು ಹಮೋರನಿಗೂ, ಅವನ ಮಗ ಶೆಕೆಮನಿಗೂ ಯೋಗ್ಯವಾಗಿ ಕಂಡವು. 19ಆ ಯೌವನಸ್ಥನು ಯಾಕೋಬನ ಮಗಳನ್ನು ಮೆಚ್ಚಿದ್ದರಿಂದ, ಆ ಕಾರ್ಯವನ್ನು ಮಾಡುವುದಕ್ಕೆ ಹಿಂಜರಿಯಲಿಲ್ಲ. ಅವನು ತನ್ನ ತಂದೆಯ ಮನೆಯವರೆಲ್ಲರಿಗಿಂತ ಗೌರವವುಳ್ಳವನಾಗಿದ್ದನು. 20ಆಗ ಹಮೋರನೂ, ಅವನ ಮಗ ಶೆಕೆಮನೂ ತಮ್ಮ ಪಟ್ಟಣ ದ್ವಾರದ ಬಳಿಗೆ ಬಂದು, ತಮ್ಮ ಪಟ್ಟಣದ ಜನರ ಸಂಗಡ ಮಾತನಾಡಿ ಅವರಿಗೆ, 21“ಈ ಜನರು ನಮ್ಮ ಸಂಗಡ ಸಮಾಧಾನವಾಗಿದ್ದಾರೆ, ಆದ್ದರಿಂದ ಅವರು ದೇಶದಲ್ಲಿ ವಾಸಮಾಡಿ, ಅದರಲ್ಲಿ ವ್ಯಾಪಾರಮಾಡಲಿ. ದೇಶವು ಅವರಿಗಾಗಿ ಸಾಕಷ್ಟು ವಿಸ್ತಾರವಾಗಿದೆ. ಅವರ ಪುತ್ರಿಯರನ್ನು ನಮಗೆ ಹೆಂಡತಿಯರನ್ನಾಗಿ ಮಾಡಿಕೊಳ್ಳೋಣ ಮತ್ತು ನಮ್ಮ ಪುತ್ರಿಯರನ್ನು ಅವರಿಗೆ ಕೊಡೋಣ. 22ಸುನ್ನತಿ ಮಾಡಿಸಿಕೊಂಡರೆ ಮಾತ್ರ ಅವರು ನಮ್ಮ ಸಂಗಡ ವಾಸಮಾಡುವುದಕ್ಕೂ, ಒಂದೇ ಜನಾಂಗವಾಗುವುದಕ್ಕೂ ಒಪ್ಪುವರು. 23ಅವರ ಮಂದೆಗಳೂ, ಅವರ ಸಂಪತ್ತೂ, ಅವರ ಎಲ್ಲಾ ಪಶುಗಳೂ ನಮ್ಮದಾಗುವುವು ಅಲ್ಲವೋ? ಅವರಿಗೆ ನಾವು ಒಪ್ಪಿಕೊಂಡರೆ ಮಾತ್ರ, ಅವರು ನಮ್ಮ ಸಂಗಡ ವಾಸಿಸುವರು,” ಎಂದರು.
24ಆಗ ಪಟ್ಟಣದ ದ್ವಾರದಲ್ಲಿ ಹೋಗುವ ಗಂಡಸರೆಲ್ಲರೂ ಹಮೋರನೂ, ಅವನ ಮಗ ಶೆಕೆಮನೂ ಹೇಳಿದ ಮಾತುಗಳನ್ನು ಕೇಳಿ, ಒಪ್ಪಿಕೊಂಡರು. ಹೀಗೆ ಪಟ್ಟಣದಲ್ಲಿದ್ದ ಎಲ್ಲಾ ಗಂಡಸರು ಸುನ್ನತಿ ಮಾಡಿಸಿಕೊಂಡರು.
25ಮೂರನೆಯ ದಿನದಲ್ಲಿ ಅವರಿಗೆ ನೋವುಂಟಾದಾಗ, ಯಾಕೋಬನ ಮಕ್ಕಳಲ್ಲಿ ಇಬ್ಬರು ಅಂದರೆ, ದೀನಳ ಸಹೋದರರಾದ ಸಿಮೆಯೋನನೂ, ಲೇವಿಯೂ ತಮ್ಮ ತಮ್ಮ ಖಡ್ಗಗಳನ್ನು ತೆಗೆದುಕೊಂಡು ಧೈರ್ಯವಾಗಿ ಪಟ್ಟಣಕ್ಕೆ ಬಂದು, ಗಂಡಸರನ್ನೆಲ್ಲಾ ಕೊಂದುಹಾಕಿದರು. 26ಹಮೋರನನ್ನೂ, ಅವನ ಮಗನಾದ ಶೆಕೆಮನನ್ನೂ ಅವರು ಖಡ್ಗದಿಂದ ಕೊಂದುಹಾಕಿ, ದೀನಳನ್ನು ಶೆಕೆಮನ ಮನೆಯಿಂದ ಕರೆದುಕೊಂಡು ಹೊರಗೆ ಹೋದರು. 27ಅವರು ತಮ್ಮ ಸಹೋದರಿಯನ್ನು ಕೆಡಿಸಿದ್ದರಿಂದ ಯಾಕೋಬನ ಮಕ್ಕಳು ಬಂದು ಆ ಊರನ್ನೇ ಕೊಳ್ಳೆಹೊಡೆದರು. 28ಪಟ್ಟಣದಲ್ಲಿಯೂ, ಹೊಲದಲ್ಲಿಯೂ ಇದ್ದ ಅವರ ಕುರಿ, ದನ, ಕತ್ತೆಗಳನ್ನು ತೆಗೆದುಕೊಂಡರು. 29ಅವರ ಎಲ್ಲಾ ಆಸ್ತಿಯನ್ನೂ, ಅವರ ಎಲ್ಲಾ ಚಿಕ್ಕ ಮಕ್ಕಳನ್ನೂ, ಅವರ ಹೆಂಡತಿಯರನ್ನೂ ಸೆರೆಹಿಡಿದು, ಮನೆಯಲ್ಲಿ ಇದ್ದದ್ದೆಲ್ಲವನ್ನೂ ಅವರು ಕೊಳ್ಳೆಹೊಡೆದರು.
30ಆಗ ಯಾಕೋಬನು ಸಿಮೆಯೋನನಿಗೂ, ಲೇವಿಗೂ, “ನೀವು ನನ್ನನ್ನು ಈ ದೇಶದ ನಿವಾಸಿಗಳಾದ ಕಾನಾನ್ಯರಿಗೂ ಪೆರಿಜೀಯರಿಗೂ ಅಸಹ್ಯವಾಗುವಂತೆ ಮಾಡಿ, ನನ್ನನ್ನು ಕಳವಳಪಡಿಸಿದಿರಿ. ನಾವು ಸ್ವಲ್ಪ ಜನರು, ಹೀಗಿರುವಲ್ಲಿ ಅವರು ನನಗೆ ವಿರೋಧವಾಗಿ ಕೂಡಿಕೊಂಡು ನನ್ನನ್ನು ದಾಳಿಮಾಡುವರು. ಆಗ ನಾನೂ, ನನ್ನ ಮನೆಯವರೂ ನಾಶವಾಗುವೆವು,” ಎಂದನು.
31ಆದರೆ ಅವರು, “ಅವನು ನಮ್ಮ ತಂಗಿಯನ್ನು ವೇಶ್ಯೆಯಂತೆ ನಡೆಸಬಹುದೋ?” ಎಂದರು.
Currently Selected:
ಆದಿಕಾಂಡ 34: KSB
Highlight
Share
Copy
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.