ಆದಿಕಾಂಡ 36
36
ಏಸಾವನ ವಂಶಸ್ಥರು
1ಎದೋಮ್ ಎಂಬ ಏಸಾವನ ವಂಶಾವಳಿ ಇದು:
2ಏಸಾವನು ಕಾನಾನ್ಯರ ಪುತ್ರಿಯರನ್ನು ಅಂದರೆ, ಹಿತ್ತಿಯನಾದ ಏಲೋನನ ಮಗಳಾದ ಆದಾ, ಹಿವ್ವಿಯನಾದ ಸಿಬೆಯೋನನ ಮಗಳಾದ ಅನಾಹಳ ಮಗಳಾಗಿದ್ದ ಒಹೊಲೀಬಾಮ, 3ಇಷ್ಮಾಯೇಲನ ಮಗಳೂ ನೆಬಾಯೋತನ ಸಹೋದರಿಯೂ ಆಗಿದ್ದ ಬಾಸೆಮತ್ ಇವರನ್ನು ಮದುವೆಯಾಗಿದ್ದನು.
4ಆದಾಳು ಏಸಾವನಿಗೆ ಎಲೀಫಜನನ್ನು ಹೆತ್ತಳು. ಬಾಸೆಮತಳು ರೆಯೂವೇಲನನ್ನು ಹೆತ್ತಳು. 5ಒಹೊಲೀಬಾಮಳು ಯೆಯೂಷನನ್ನು, ಯಳಾಮನನ್ನು, ಕೋರಹ ಇವರನ್ನು ಹೆತ್ತಳು. ಇವರು ಕಾನಾನ್ ದೇಶದಲ್ಲಿ ಏಸಾವನಿಗೆ ಹುಟ್ಟಿದ ಪುತ್ರರು.
6ತರುವಾಯ ಏಸಾವನು ತನ್ನ ಹೆಂಡತಿಯರನ್ನೂ ಪುತ್ರಪುತ್ರಿಯರನ್ನೂ ತನ್ನ ಮನೆಯಲ್ಲಿದ್ದ ಎಲ್ಲಾ ಜನರನ್ನೂ ತನ್ನ ಹಿಂಡುಗಳನ್ನೂ ತನ್ನ ಎಲ್ಲಾ ಪಶುಗಳನ್ನೂ ಕಾನಾನ್ ದೇಶದಲ್ಲಿ ತಾನು ಸಂಪಾದಿಸಿದ್ದ ಎಲ್ಲಾ ಸಂಪತ್ತನ್ನೂ ತೆಗೆದುಕೊಂಡು, ತನ್ನ ಸಹೋದರನಾದ ಯಾಕೋಬನ ಬಳಿಯಿಂದ ಸ್ವಲ್ಪ ದೂರವಿದ್ದ ಮತ್ತೊಂದು ಊರಿಗೆ ಹೋದನು. 7ಏಕೆಂದರೆ ಅವರ ಸಂಪತ್ತು ಅವರು ಕೂಡಿ ಇರುವುದಕ್ಕೆ ಆಗದಷ್ಟು ಅಭಿವೃದ್ಧಿಯಾಗಿತ್ತು. ಅವರ ಪಶುಪ್ರಾಣಿಗಳಿಗೋಸ್ಕರ ಅವರು ಪ್ರವಾಸವಾಗಿದ್ದ ದೇಶವು ಅವರಿಗೆ ಸಾಲದೆ ಹೋಯಿತು. 8ಹೀಗೆ ಎದೋಮನು ಎಂಬ ಏಸಾವನು ಸೇಯೀರ್ ಪರ್ವತದಲ್ಲಿ ವಾಸವಾಗಿದ್ದನು.
9ಸೇಯೀರ್ ಪರ್ವತದಲ್ಲಿರುವ ಎದೋಮ್ಯರ ತಂದೆ ಏಸಾವನ ವಂಶಾವಳಿಗಳು ಇವೇ:
10ಏಸಾವನ ಪುತ್ರರ ಹೆಸರುಗಳು ಯಾವುವೆಂದರೆ:
ಏಸಾವನ ಹೆಂಡತಿಯಾಗಿರುವ ಆದಾ ಎಂಬಾಕೆಯ ಮಗನಾಗಿರುವ ಎಲೀಫಜನು, ಏಸಾವನ ಹೆಂಡತಿ ಬಾಸೆಮತಳ ಮಗ ರೆಯೂವೇಲನು.
11ಎಲೀಫಜನ ಮಕ್ಕಳು ಯಾರೆಂದರೆ:
ತೇಮಾನ್, ಓಮಾರ್, ಚೆಫೋ, ಗತಾಮ್, ಕೆನಜ್. 12ತಿಮ್ನಾಳು ಏಸಾವನ ಮಗ ಎಲೀಫಜನಿಗೆ ಉಪಪತ್ನಿಯಾಗಿದ್ದು, ಅಮಾಲೇಕನನ್ನು ಹೆತ್ತಳು. ಏಸಾವನ ಹೆಂಡತಿಯಾಗಿದ್ದ ಆದಾ ಎಂಬಾಕೆಯ ಪುತ್ರರು ಇವರೇ.
13ರೆಯೂವೇಲನ ಮಕ್ಕಳು ಯಾರೆಂದರೆ:
ನಹತ್, ಜೆರಹ, ಶಮ್ಮಾ ಮತ್ತು ಮಿಜ್ಜಾ, ಇವರು ಏಸಾವನ ಹೆಂಡತಿ ಬಾಸೆಮತಳ ಮೊಮ್ಮಕ್ಕಳು.
14ಏಸಾವನ ಹೆಂಡತಿಯಾಗಿದ್ದ ಸಿಬೆಯೋನನ ಮಗಳಾಗಿರುವ ಅನಾಹಳ ಮಗಳಾದ ಒಹೊಲೀಬಾಮಳ ಪುತ್ರರು ಯಾರೆಂದರೆ: ಆಕೆಯು ಏಸಾವನಿಗೆ
ಯೆಯೂಷ್, ಯಳಾಮ್ ಹಾಗೂ ಕೋರಹ ಇವರನ್ನು ಹೆತ್ತಳು.
15ಏಸಾವನ ಪುತ್ರರ ಮುಖಂಡರು ಯಾರೆಂದರೆ:
ಏಸಾವನ ಚೊಚ್ಚಲ ಮಗನಾಗಿರುವ ಎಲೀಫಜನ ಮಕ್ಕಳಾದ
ತೇಮಾನ್, ಓಮಾರ್, ಚೆಫೋ, ಕೆನಜ್, 16ಕೋರಹ, ಗತಾಮ್, ಅಮಾಲೇಕ್, ಎದೋಮ್ಯ ದೇಶದಲ್ಲಿದ್ದ ಎಲೀಫಜನಿಂದ ಬಂದ ಮುಖಂಡರು ಇವರೇ. ಇವರು ಆದಾ ಎಂಬಾಕೆಯ ಮೊಮ್ಮಕ್ಕಳು.
17ಏಸಾವನ ಮಗ ರೆಯೂವೇಲನ ಪುತ್ರರು ಯಾರೆಂದರೆ:
ನಹತ್, ಜೆರಹ, ಶಮ್ಮಾ ಹಾಗೂ ಮಿಜ್ಜಾ; ಎದೋಮ್ ದೇಶದಲ್ಲಿದ್ದ ರೆವುಯೇಲನಿಂದ ಬಂದ ಮುಖಂಡರು ಇವರೇ. ಇವರು ಏಸಾವನ ಹೆಂಡತಿ ಬಾಸೆಮತಳ ಮೊಮ್ಮಕ್ಕಳು.
18ಏಸಾವನ ಹೆಂಡತಿ ಒಹೊಲೀಬಾಮಳ ಪುತ್ರರು ಯಾರೆಂದರೆ:
ಯೆಯೂಷ್, ಯಳಾಮ್ ಮತ್ತು ಕೋರಹ ಇವರೇ. ಇವರು ಅನಾಹನ ಮಗಳೂ ಏಸಾವನ ಹೆಂಡತಿಯೂ ಆಗಿದ್ದ ಒಹೊಲೀಬಾಮಳಿಂದ ಬಂದ ಮುಖಂಡರು.
19ಇವರು ಎದೋಮ್ ಎಂಬ ಏಸಾವನ ಪುತ್ರರು. ಇವರು ಮುಖಂಡರಾಗಿದ್ದರು.
20ದೇಶದಲ್ಲಿ ವಾಸಿಸುತ್ತಿದ್ದ ಹೋರಿಯನಾದ ಸೇಯೀರನ ಪುತ್ರರು ಯಾರೆಂದರೆ:
ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ, 21ದೀಶೋನ್, ಏಚೆರ್, ದೀಶಾನ್ ಇವರು ಎದೋಮ್ ದೇಶದಲ್ಲಿದ್ದ ಸೇಯೀರನ ಮಕ್ಕಳಾದ ಹೋರಿಯರ ಮುಖಂಡರು.
22ಲೋಟಾನನ ಪುತ್ರರು ಯಾರೆಂದರೆ:
ಹೋರಿ ಮತ್ತು ಹೋಮಾಮ್. ಲೋಟಾನನಿಗೆ ತಿಮ್ನಾ ಎಂಬ ಸಹೋದರಿ ಇದ್ದಳು.
23ಶೋಬಾಲನ ಮಕ್ಕಳು ಯಾರೆಂದರೆ:
ಅಲ್ವಾನ್, ಮಾನಹತ್, ಏಬಾಲ್, ಶೆಫೋ ಮತ್ತು ಓನಾಮ್.
24ಸಿಬೆಯೋನನ ಮಕ್ಕಳು:
ಅಯ್ಯಾಹ ಮತ್ತು ಅನಾಹ ಎಂಬುವರು. ತನ್ನ ತಂದೆ ಸಿಬೆಯೋನನ ಕತ್ತೆಗಳನ್ನು ಕಾಯುವಾಗ ಕಾಡಿನಲ್ಲಿ ಬಿಸಿನೀರಿನ ಒರತೆಗಳನ್ನು ಕಂಡುಕೊಂಡವನೂ ಅರಣ್ಯದಲ್ಲಿ ಹೇಸರಗತ್ತೆಗಳನ್ನು ಕಂಡುಕೊಂಡವನು ಈ ಅನಾಹನೇ.
25ಅನಾಹನ ಮಕ್ಕಳು ಯಾರೆಂದರೆ:
ದೀಶೋನ್ ಮತ್ತು ಅನಾಹನ ಮಗಳಾದ ಒಹೊಲೀಬಾಮಳು.
26ದೀಶೋನನ ಮಕ್ಕಳು ಯಾರೆಂದರೆ:
ಹೆಮ್ದಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್.
27ಏಚೆರನ ಮಕ್ಕಳು ಯಾರೆಂದರೆ:
ಬಿಲ್ಹಾನ್, ಜಾವಾನ್ ಮತ್ತು ಆಕಾನ್.
28ದೀಶಾನನ ಮಕ್ಕಳು ಯಾರೆಂದರೆ:
ಊಚ್ ಮತ್ತು ಅರಾನ್.
29ಹೋರಿಯರಿಂದ ಬಂದ ಮುಖಂಡರು ಯಾರೆಂದರೆ:
ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ, 30ದೀಶೋನ್, ಏಚೆರ್, ದೀಶಾನ್.
ಹೋರಿಯರಿಂದ ಹುಟ್ಟಿದ ಸೇಯೀರ್ ದೇಶದಲ್ಲಿ ಮುಖಂಡರು ಇವರೇ.
ಎದೋಮಿನ ಅರಸರು
31ಇಸ್ರಾಯೇಲರನ್ನು ಯಾವ ಅರಸನೂ ಆಳುವುದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸರು ಇವರೇ.
32ಎದೋಮಿನಲ್ಲಿ ಬೆಯೋರನ ಮಗನಾದ ಬೆಲಗನು ಆಳಿದನು. ಅವನ ಪಟ್ಟಣದ ಹೆಸರು ದಿನ್ಹಾಬಾ.
33ಬೆಲಗನ ಮರಣದ ನಂತರ ಅವನ ಬದಲಾಗಿ ಬೊಚ್ರದವನಾದ ಜೆರಹನ ಮಗ ಯೋಬಾಬನು ಉತ್ತರಾಧಿಕಾರಿಯಾದನು.
34ಯೋಬಾಬನ ಮರಣದ ನಂತರ ಅವನ ಬದಲಾಗಿ ತೇಮಾನೀಯರ ದೇಶದ ಹುಷಾಮನು ಅರಸನಾದನು.
35ಹುಷಾಮನ ಮರಣದ ನಂತರ ಅವೀತದ ಬೆದದನ ಮಗ ಹದದ ಅರಸನಾದನು. ಇವನು ಮೋವಾಬ್ ದೇಶದಲ್ಲಿ ನಡೆದ ಯುದ್ಧದಲ್ಲಿ ಮಿದ್ಯಾನರನ್ನು ಸೋಲಿಸಿದ; ಅವನ ರಾಜಧಾನಿಯ ಹೆಸರು ಅವೀತ್.
36ಹದದ ಮೃತನಾದ ಮೇಲೆ ಅವನ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಅರಸನಾದನು.
37ಸಮ್ಲಾಹನ ಮರಣದ ನಂತರ ಅವನ ಬದಲಾಗಿ ಯೂಫ್ರೇಟೀಸ್ ನದಿತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಅರಸನಾದನು.
38ಸೌಲನು ಮೃತನಾದ ಮೇಲೆ ಅಕ್ಬೋರನ ಮಗ ಬಾಳ್ ಹಾನಾನ್ ಅರಸನಾದನು.
39ಅಕ್ಬೋರನ ಮಗ ಬಾಳ್ ಹಾನಾನನು ಮೃತನಾದ ಮೇಲೆ ಅವನ ಬದಲಾಗಿ ಹದದನು ಆಳಿದನು. ಅವನ ಪಟ್ಟಣದ ಹೆಸರು ಪಾವು. ಅವನ ಹೆಂಡತಿಯ ಹೆಸರು ಮೆಹೇಟಬೇಲ್. ಈಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು.
40ಕುಟುಂಬ, ಸ್ಥಳ, ಹೆಸರುಗಳ ಪ್ರಕಾರವಾಗಿ ಏಸಾವನ ಮುಖಂಡರ ಹೆಸರುಗಳು ಯಾವುವೆಂದರೆ:
ತಿಮ್ನಾ, ಅಲ್ವಾ, ಯೆತೇತ,
41ಒಹೊಲೀಬಾಮ, ಏಲಾ, ಪೀನೋನ್,
42ಕೆನಜ್, ತೇಮಾನ್, ಮಿಬ್ಜಾರ,
43ಮಗ್ದೀಯೇಲ್ ಮತ್ತು ಗೀರಾಮ್
ಇವರೇ ತಮ್ಮ ನಿವಾಸಸ್ಥಳಗಳ ಪ್ರಕಾರ ಎದೋಮ್ಯರ ಮುಖಂಡರು.
ಎದೋಮ್ಯರ ತಂದೆ ಏಸಾವನು ವಂಶಾವಳಿ ಇದೇ.
Currently Selected:
ಆದಿಕಾಂಡ 36: KSB
Highlight
Share
Copy
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.