ಆದಿಕಾಂಡ 38
38
ಯೆಹೂದನು ಮತ್ತು ತಾಮಾರಳು
1ಆ ಕಾಲದಲ್ಲಿ ಯೆಹೂದನು ತನ್ನ ಸಹೋದರರ ಬಳಿಯಿಂದ ಹೊರಟು, ಅದುಲ್ಲಾಮೂರಿನವನಾದ ಹೀರಾನ ಬಳಿಗೆ ಹೋದನು. 2ಅಲ್ಲಿ ಯೆಹೂದನು ಕಾನಾನ್ಯನಾದ ಶೂಗನ ಮಗಳನ್ನು ಕಂಡು, ಅವಳನ್ನು ಮದುವೆಯಾಗಿ ಅವಳನ್ನು ಕೂಡಿದನು. 3ಅವಳು ಗರ್ಭಿಣಿಯಾಗಿ ಮಗನನ್ನು ಹೆತ್ತಳು. ಯೆಹೂದನು ಅವನಿಗೆ ಏರ್ ಎಂದು ಹೆಸರಿಟ್ಟನು. 4ಆಕೆಯು ತಿರುಗಿ ಗರ್ಭಿಣಿಯಾಗಿ ಮಗನನ್ನು ಹೆತ್ತು, ಅವನಿಗೆ ಓನಾನ್ ಎಂದು ಹೆಸರಿಟ್ಟಳು. 5ಆಕೆಯು ಮತ್ತೊಂದು ಸಾರಿ ಮಗನನ್ನು ಹೆತ್ತು, ಅವನಿಗೆ ಶೇಲಹ ಎಂದು ಹೆಸರಿಟ್ಟಳು. ಆಕೆಯು ಅವನನ್ನು ಹೆತ್ತಾಗ, ಯೆಹೂದನು ಕೆಜೀಬಿನಲ್ಲಿ ಇದ್ದನು.
6ಇದಾದ ಮೇಲೆ ಯೆಹೂದನು ತನ್ನ ಜೇಷ್ಠಪುತ್ರ ಏರನಿಗೆ ತಾಮಾರ್ ಎಂಬ ಹೆಣ್ಣನ್ನು ತಂದು ಮದುವೆಮಾಡಿದನು. 7ಆದರೆ ಯೆಹೂದನ ಜೇಷ್ಠಪುತ್ರ ಏರನು ಯೆಹೋವ ದೇವರ ದೃಷ್ಟಿಯಲ್ಲಿ ದುಷ್ಟನಾಗಿದ್ದುದರಿಂದ, ಯೆಹೋವ ದೇವರು ಅವನನ್ನು ಸಾವಿಗೀಡುಮಾಡಿದರು.
8ಆಗ ಯೆಹೂದನು ಓನಾನನಿಗೆ, “ನಿನ್ನ ಸಹೋದರನ ಹೆಂಡತಿಯ ಬಳಿಗೆ ಹೋಗಿ, ಅವಳನ್ನು ಮದುವೆಯಾಗಿ, ನಿನ್ನ ಅಣ್ಣನಿಗೆ ಸಂತತಿಯನ್ನು ಉಂಟುಮಾಡು,” ಎಂದನು. 9ಆದರೆ ಓನಾನನು ಆ ಸಂತತಿಯು ತನ್ನದಾಗತಕ್ಕದ್ದಲ್ಲವೆಂದು ತಿಳಿದುಕೊಂಡು, ತನ್ನ ಅಣ್ಣನಿಗೆ ಸಂತತಿಯನ್ನು ಉಂಟು ಮಾಡದ ಹಾಗೆ, ತನ್ನ ವೀರ್ಯವನ್ನು ನೆಲದ ಮೇಲೆ ಚೆಲ್ಲಿದನು. 10ಅವನು ಮಾಡಿದ್ದು ಯೆಹೋವ ದೇವರ ದೃಷ್ಟಿಯಲ್ಲಿ ಮೆಚ್ಚಿಗೆಯಾಗಿರಲಿಲ್ಲ. ಆದ್ದರಿಂದ ಅವರು ಇವನನ್ನೂ ಸಾವಿಗೀಡುಮಾಡಿದರು.
11ಆಗ ಯೆಹೂದನು ತನ್ನ ಸೊಸೆ ತಾಮಾರಳಿಗೆ, “ನನ್ನ ಮಗ ಶೇಲಹನು ದೊಡ್ಡವನಾಗುವವರೆಗೆ ವಿಧವೆಯಾಗಿದ್ದು, ನಿನ್ನ ತಂದೆಯ ಮನೆಯಲ್ಲಿರು,” ಎಂದನು. ಏಕೆಂದರೆ ಇವನು ಸಹ ತನ್ನ ಸಹೋದರರ ಹಾಗೆ ಸತ್ತಾನೆಂದು ಅಂದುಕೊಂಡನು. ತಾಮಾರಳಾದರೋ ಹೋಗಿ ತನ್ನ ತಂದೆಯ ಮನೆಯಲ್ಲಿ ವಾಸಮಾಡಿದಳು.
12ಬಹಳ ದಿನಗಳಾದ ಮೇಲೆ ಯೆಹೂದನ ಹೆಂಡತಿಯಾಗಿದ್ದ ಶೂಗನ ಮಗಳು ಸತ್ತಳು. ಯೆಹೂದನು ಆದರಣೆ ಹೊಂದಿದ ಮೇಲೆ, ತಾನೂ, ತನ್ನ ಸ್ನೇಹಿತನಾಗಿರುವ ಅದುಲ್ಲಾಮ್ಯನಾದ ಹೀರಾನನೂ ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುವವರ ಬಳಿಗೆ ತಿಮ್ನಾ ಊರಿಗೆ ಹೋದರು.
13ಆಗ ತಾಮಾರಳಿಗೆ, “ನಿನ್ನ ಮಾವನು ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುವುದಕ್ಕೆ ತಿಮ್ನಾ ಊರಿಗೆ ಹೋಗುತ್ತಿದ್ದಾನೆ,” ಎಂದು ತಿಳಿಸಿದಾಗ, 14ಆಕೆಯು ವಿಧವೆಯ ವಸ್ತ್ರಗಳನ್ನು ತೆಗೆದಿಟ್ಟು, ಮುಸುಕುಹಾಕಿ ಮುಚ್ಚಿಕೊಂಡು, ತಿಮ್ನಾ ಊರಿನ ಮಾರ್ಗದಲ್ಲಿರುವ ಏನಯಿಮೂರಿನ ಬಹಿರಂಗ ಸ್ಥಳದಲ್ಲಿ ಕೂತುಕೊಂಡಳು. ಏಕೆಂದರೆ ಶೇಲಹನು ದೊಡ್ಡವನಾಗಿದ್ದರೂ ತನ್ನನ್ನು ಅವನಿಗೆ ಹೆಂಡತಿಯಾಗಿ ಕೊಡಲಿಲ್ಲವೆಂದು ಹಾಗೆ ಮಾಡಿದಳು.
15ಯೆಹೂದನು ಅವಳನ್ನು ಕಂಡಾಗ, ಅವಳು ಮುಖ ಮುಚ್ಚಿಕೊಂಡಿದ್ದರಿಂದ ಅವಳು ವೇಶ್ಯೆಯೆಂದು ತಿಳಿದುಕೊಂಡನು. 16ಮಾರ್ಗದಿಂದ ಆಕೆಯ ಕಡೆಗೆ ತಿರುಗಿಕೊಂಡು ಅವನು, “ನನ್ನನ್ನು ನಿನ್ನ ಬಳಿಗೆ ಬರಗೊಡಿಸು,” ಎಂದನು. ಏಕೆಂದರೆ ಅವಳು ತನ್ನ ಸೊಸೆಯೆಂದು ಅವನಿಗೆ ತಿಳಿದಿರಲಿಲ್ಲ.
ಅವಳು, “ನೀನು ನನ್ನ ಬಳಿಗೆ ಬಂದರೆ, ನನಗೆ ಏನು ಕೊಡುವೆ?” ಎಂದಳು.
17ಅವನು, “ಮಂದೆಯಿಂದ ನಿನಗೆ ಮೇಕೆಯ ಮರಿಯನ್ನು ಕಳುಹಿಸುತ್ತೇನೆ,” ಎಂದನು.
ಅವಳು, “ನೀನು ಅದನ್ನು ಕಳುಹಿಸುವವರೆಗೆ ಈಡು ಕೊಡುವೆಯೋ?” ಎಂದಳು.
18ಅದಕ್ಕೆ ಅವನು, “ನಿನಗೆ ಕೊಡತಕ್ಕ ಈಡು ಏನು?” ಎಂದಾಗ.
ಅವಳು, “ನಿನ್ನ ಮುದ್ರೆಯೂ ನಿನ್ನ ದಾರವೂ ನಿನ್ನ ಕೈಯಲ್ಲಿರುವ ಕೋಲೂ,” ಎಂದಳು. ಆಗ ಅವನು ಅವುಗಳನ್ನು ಆಕೆಗೆ ಕೊಟ್ಟು, ಆಕೆಯನ್ನು ಕೂಡಿದನು. ಹೀಗೆ ಅವಳು ಅವನಿಂದ ಗರ್ಭಿಣಿಯಾದಳು. 19ತರುವಾಯ ಅವಳು ಎದ್ದು ಹೋಗಿ, ಮುಸುಕನ್ನು ತೆಗೆದಿಟ್ಟು, ತನ್ನ ವಿಧವೆಯ ವಸ್ತ್ರಗಳನ್ನು ಹಾಕಿಕೊಂಡಳು.
20ಯೆಹೂದನು ಆ ಸ್ತ್ರೀಯ ಕೈಯಿಂದ ಈಡು ತೆಗೆದುಕೊಳ್ಳುವದಕ್ಕೆ ತನ್ನ ಸ್ನೇಹಿತನಾದ ಅದುಲ್ಲಾಮ್ಯನ ಕೈಯಿಂದ ಮೇಕೆಯ ಮರಿಯನ್ನು ಕಳುಹಿಸಿದಾಗ ಆಕೆಯು ಸಿಗಲಿಲ್ಲ. 21ಅದುಲ್ಲಾಮ್ಯನು ಆಕೆಯ ಊರಿನವರನ್ನು, “ಏನಯಿಮಿನ ಬಹಿರಂಗ ಮಾರ್ಗದ ಬಳಿಯಲ್ಲಿದ್ದ ವೇಶ್ಯೆ ಎಲ್ಲಿ?” ಎಂದು ಕೇಳಿದಾಗ.
ಅವರು, “ಈ ಸ್ಥಳದಲ್ಲಿ ಯಾವ ವೇಶ್ಯೆಯೂ ಇರಲಿಲ್ಲ,” ಎಂದರು.
22ಆಗ ಅವನು ಯೆಹೂದನ ಬಳಿಗೆ ತಿರುಗಿಬಂದು, “ಆಕೆಯು ನನಗೆ ಸಿಕ್ಕಲಿಲ್ಲ, ಇದಲ್ಲದೆ ಆ ಸ್ಥಳದ ಮನುಷ್ಯರು, ‘ಈ ಸ್ಥಳದಲ್ಲಿ ದೇವದಾಸಿ ಇರಲಿಲ್ಲ,’ ಎಂದು ಹೇಳಿದರು,” ಎಂದು ಹೇಳಿದನು.
23ಆಗ ಯೆಹೂದನು, “ನಾವು ಅಪಹಾಸ್ಯಕ್ಕೆ ಒಳಗಾಗದ ಹಾಗೆ ಅವಳು ಅದನ್ನು ತೆಗೆದುಕೊಂಡು ಹೋಗಲಿ, ಈ ಮೇಕೆಯ ಮರಿಯನ್ನು ನಾನು ಕಳುಹಿಸಿದೆನು, ಆದರೆ ಆಕೆಯು ನಿನಗೆ ಸಿಕ್ಕಲಿಲ್ಲ,” ಎಂದನು.
24ಹೆಚ್ಚು ಕಡಿಮೆ ಮೂರು ತಿಂಗಳಾದ ಮೇಲೆ ಯೆಹೂದನಿಗೆ, “ನಿನ್ನ ಸೊಸೆ ತಾಮಾರಳು ವೇಶ್ಯಾವೃತ್ತಿಮಾಡಿ ವ್ಯಭಿಚಾರದಿಂದ ಗರ್ಭಿಣಿಯಾಗಿದ್ದಾಳೆ,” ಎಂದು ತಿಳಿಸಿದರು.
ಆಗ ಯೆಹೂದನು, “ಅವಳನ್ನು ಹೊರಗೆ ತನ್ನಿರಿ, ಅವಳನ್ನು ಸುಡಬೇಕು,” ಎಂದನು.
25ಆಕೆಯನ್ನು ಹೊರಗೆ ತಂದಾಗ, ಆಕೆಯು ತನ್ನ ಮಾವನಿಗೆ, “ಈ ಒತ್ತೆಯ ಸಾಮಾನುಗಳನ್ನು ಕೊಟ್ಟ ಆ ಮನುಷ್ಯನಿಂದಲೇ ನಾನು ಗರ್ಭಿಣಿಯಾಗಿದ್ದೇನೆ. ಆದ್ದರಿಂದ ಈ ಮುದ್ರೆಯೂ ದಾರವೂ ಕೋಲೂ ಯಾರವೆಂದು ತಿಳಿದುಕೋ,” ಎಂದು ಹೇಳಿದಳು.
26ಆಗ ಯೆಹೂದನು ಅವುಗಳನ್ನು ಗುರುತಿಸಿ, “ಆಕೆಯು ನನಗಿಂತ ನೀತಿವಂತಳು, ಏಕೆಂದರೆ ನಾನು ನನ್ನ ಮಗ ಶೇಲಹನಿಗೆ ಅವಳನ್ನು ಕೊಡಲಿಲ್ಲ,” ಎಂದನು. ಅವನು ಮತ್ತೆ ಆಕೆಯೊಡನೆ ಸಂಸರ್ಗವಿಲ್ಲದೆ ಇದ್ದನು.
27ಅವಳು ಹೆರುವ ಸಮಯದಲ್ಲಿ, ಅವಳಿ ಮಕ್ಕಳು ಆಕೆಯ ಗರ್ಭದಲ್ಲಿದ್ದವು. 28ಆಕೆಯು ಹೆರುವಾಗ ಒಂದು ಮಗುವು ತನ್ನ ಕೈಚಾಚಿತು. ಆಗ ಸೂಲಗಿತ್ತಿಯು, “ಇದು ಮೊದಲು ಬಂದದ್ದು,” ಎಂದು ಹೇಳಿ ಅದರ ಕೈಗೆ ಕೆಂಪು ನೂಲನ್ನು ಕಟ್ಟಿದಳು. 29ಆ ಮಗುವು ತನ್ನ ಕೈಯನ್ನು ಹಿಂದಕ್ಕೆ ಎಳೆದಾಗ, ಅವನ ಸಹೋದರನು ಹೊರಗೆ ಬಂದನು. ಆಗ ಅವಳು, “ನೀನು ಕಿತ್ತುಕೊಂಡು ಹೊರಗೆ ಬಂದೆಯಾ?” ಎಂದಳು. ಹೀಗೆ ಅವನಿಗೆ ಪೆರೆಚ್ ಎಂದು ಹೆಸರಾಯಿತು. 30ತರುವಾಯ ತನ್ನ ಕೈಯಲ್ಲಿ ಕೆಂಪು ನೂಲು ಇದ್ದ ಅವನ ಸಹೋದರನು ಹೊರಗೆ ಬಂದನು. ಅವನಿಗೆ ಜೆರಹ ಎಂದು ಹೆಸರಾಯಿತು.
Currently Selected:
ಆದಿಕಾಂಡ 38: KSB
Highlight
Share
Copy
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.