ಆದಿಕಾಂಡ 40
40
ಪಾನದಾಯಕ ಮತ್ತು ರೊಟ್ಟಿಗಾರ
1ಕೆಲವು ಸಮಯದ ನಂತರ ಈಜಿಪ್ಟಿನ ಅರಸನ ಪಾನದಾಯಕನೂ, ರೊಟ್ಟಿಗಾರನೂ ತಮ್ಮ ಅರಸನಿಗೆ ಎದುರಾಗಿ ಅಪರಾಧ ಮಾಡಿದರು. 2ಆಗ ಫರೋಹನು ಪಾನದಾಯಕರಲ್ಲಿ ಮುಖ್ಯಸ್ಥನೂ, ರೊಟ್ಟಿಗಾರರಲ್ಲಿ ಮುಖ್ಯಸ್ಥನೂ ಆಗಿದ್ದ ಅವನ ಇಬ್ಬರು ಉದ್ಯೋಗಸ್ಥರ ಮೇಲೆ ಕೋಪಿಸಿಕೊಂಡು, 3ಅವರನ್ನು ಮೈಗಾವಲಿನವರ ದಳಪತಿಯ ಮನೆಯೊಳಗೆ ಕಾವಲಿರಿಸಿದನು. ಅದು ಯೋಸೇಫನು ಬಂಧಿಯಾಗಿದ್ದ ಸ್ಥಳವಾಗಿತ್ತು. 4ಮೈಗಾವಲಿನ ದಳಪತಿಯು ಅವರನ್ನೂ ನೋಡಿಕೊಳ್ಳುವದಕ್ಕೆ ಯೋಸೇಫನನ್ನು ನೇಮಿಸಿದ್ದರಿಂದ, ಅವನು ಅವರನ್ನು ನೋಡಿಕೊಳ್ಳುತ್ತಿದ್ದನು.
ಅವರು ಕೆಲವು ಕಾಲ ಸೆರೆಯಲ್ಲಿದ್ದರು. 5ಅವರಿಬ್ಬರಿಗೂ ಅಂದರೆ, ಈಜಿಪ್ಟ್ ದೇಶದ ಅರಸನು ಸೆರೆಯಲ್ಲಿ ಹಾಕಿಸಿದ್ದ ಪಾನದಾಯಕನಿಗೂ, ರೊಟ್ಟಿಗಾರನಿಗೂ ಒಂದೇ ರಾತ್ರಿ ಕನಸು ಬಿತ್ತು. ಅವರವರ ಕನಸಿಗೆ ಅದರದೇ ಆದ ಅರ್ಥವಿತ್ತು.
6ಆಗ ಯೋಸೇಫನು ಬೆಳಿಗ್ಗೆ ಅವರ ಬಳಿಗೆ ಬಂದು ಅವರನ್ನು ನೋಡಿದಾಗ, ಅವರು ಚಿಂತೆಯುಳ್ಳವರಾಗಿದ್ದರು. 7ಅವನು ತನ್ನ ಸಂಗಡ ತನ್ನ ಯಜಮಾನನ ಸೆರೆಯಲ್ಲಿದ್ದ ಫರೋಹನ ಅಧಿಕಾರಿಗಳನ್ನು, “ನಿಮ್ಮ ಮುಖಗಳು ಇಂದು ಚಿಂತೆಗೊಂಡಿರುವುದು ಏಕೆ?” ಎಂದು ಕೇಳಿದನು.
8ಅವರು ಯೋಸೇಫನಿಗೆ, “ನಾವು ಕನಸನ್ನು ಕಂಡಿದ್ದೇವೆ, ಆದರೆ ಅದರ ಅರ್ಥವನ್ನು ನಮಗೆ ಹೇಳುವವರಿಲ್ಲ,” ಎಂದರು.
ಯೋಸೇಫನು ಅವರಿಗೆ, “ಅರ್ಥ ಹೇಳುವುದು ದೇವರದಲ್ಲವೋ? ಎಂದು ಹೇಳಿ, ಅವುಗಳನ್ನು ನನಗೆ ಹೇಳಿರಿ,” ಎಂದನು.
9ಆಗ ಮುಖ್ಯ ಪಾನದಾಯಕನು ತನ್ನ ಕನಸನ್ನು ಯೋಸೇಫನಿಗೆ ತಿಳಿಸುತ್ತಾ, “ಕನಸಿನಲ್ಲಿ ನನ್ನ ಮುಂದೆ ದ್ರಾಕ್ಷಿಬಳ್ಳಿ ಇತ್ತು. 10ಆ ದ್ರಾಕ್ಷಿಬಳ್ಳಿಯಲ್ಲಿ ಮೂರು ಕೊಂಬೆಗಳಿದ್ದವು. ಅವು ಚಿಗುರಿ, ಹೂವು ಅರಳಿ, ಅದರ ಗೊಂಚಲುಗಳು ಹಣ್ಣಾದವು. 11ಫರೋಹನ ಪಾತ್ರೆಯು ನನ್ನ ಕೈಯಲ್ಲಿರಲಾಗಿ, ನಾನು ಆ ದ್ರಾಕ್ಷಿಹಣ್ಣುಗಳನ್ನು ತೆಗೆದು ಫರೋಹನ ಪಾತ್ರೆಯಲ್ಲಿ ಹಿಂಡಿ, ಆ ಪಾತ್ರೆಯನ್ನು ಫರೋಹನ ಕೈಯಲ್ಲಿ ಕೊಟ್ಟೆನು,” ಎಂದನು.
12ಅದಕ್ಕೆ ಯೋಸೇಫನು, “ಅದರ ಅರ್ಥ ಏನೆಂದರೆ, ಆ ಮೂರು ಕೊಂಬೆಗಳು ಮೂರು ದಿನಗಳಾಗಿವೆ. 13ಇನ್ನು ಮೂರು ದಿನಗಳಾದ ಮೇಲೆ ಫರೋಹನು ನಿನ್ನನ್ನು ಗೌರವಿಸಿ, ತಿರುಗಿ ನಿನ್ನ ಕೆಲಸದಲ್ಲಿ ಇಡುವನು. ನೀನು ಮೊದಲು ಅವನ ಪಾನದಾಯಕನಾಗಿದ್ದ ಹಾಗೆ ಫರೋಹನ ಪಾತ್ರೆಯನ್ನು ಅವನ ಕೈಗೆ ಕೊಡುವೆ. 14ಆದರೆ ನೀನು ಸುಖದಿಂದಿರುವಾಗ ನನ್ನನ್ನು ನೆನಪಿಸಿಕೊಂಡು, ನನಗೆ ದಯೆತೋರಿಸಿ, ಫರೋಹನ ಮುಂದೆ ನನ್ನ ವಿಷಯ ತಿಳಿಸಿ, ಈ ಸೆರೆಯೊಳಗಿಂದ ನನ್ನನ್ನು ಹೊರಗೆ ಬರುವಂತೆ ಮಾಡಬೇಕು. 15ಏಕೆಂದರೆ ನನ್ನನ್ನು ಹಿಬ್ರಿಯರ ದೇಶದೊಳಗಿಂದ ಹಿಡಿದು ತಂದಿದ್ದಾರೆ. ಇಲ್ಲಿಯೂ ಸಹ ನಾನು ಏನೂ ತಪ್ಪುಮಾಡದೆ ಇದ್ದರೂ ನನ್ನನ್ನು ಸೆರೆಯಲ್ಲಿ ಹಾಕಿದರು,” ಎಂದನು.
16ಯೋಸೇಫನು ಒಳ್ಳೆಯ ಅರ್ಥವನ್ನು ಹೇಳಿದನೆಂದು ಮುಖ್ಯ ರೊಟ್ಟಿಗಾರನು ತಿಳಿದಾಗ, ಅವನು ಯೋಸೇಫನಿಗೆ, “ನನ್ನ ಕನಸಿನಲ್ಲಿಯೂ ಮೂರು ರೊಟ್ಟಿಯ ಪುಟ್ಟಿಗಳು ನನ್ನ ತಲೆಯ ಮೇಲಿದ್ದವು. 17ಮೇಲಿದ್ದ ಪುಟ್ಟಿಯಲ್ಲಿ ಫರೋಹನಿಗೋಸ್ಕರ ರೊಟ್ಟಿಗಾರರು ಮಾಡುವ ಎಲ್ಲಾ ವಿಧವಾದ ಆಹಾರವಿತ್ತು. ನನ್ನ ತಲೆಯ ಮೇಲಿದ್ದ ಪುಟ್ಟಿಯೊಳಗಿದ್ದ ಅದನ್ನು ಪಕ್ಷಿಗಳು ತಿಂದವು,” ಎಂದನು.
18ಅದಕ್ಕೆ ಯೋಸೇಫನು ಉತ್ತರವಾಗಿ, “ಅದರ ಅರ್ಥವು ಇದೇ: ಆ ಮೂರು ಪುಟ್ಟಿಗಳು, ಮೂರು ದಿನಗಳು. 19ಇನ್ನು ಮೂರು ದಿನಗಳಾದ ಮೇಲೆ ಫರೋಹನು ನಿನ್ನ ತಲೆಯನ್ನು ತೆಗೆಸಿ, ನಿನ್ನನ್ನು ಮರದ ಮೇಲೆ ತೂಗು ಹಾಕಿಸುವನು. ಪಕ್ಷಿಗಳು ನಿನ್ನ ಮಾಂಸವನ್ನು ತಿಂದುಬಿಡುವುವು,” ಎಂದನು.
20ಮೂರನೆಯ ದಿನದಲ್ಲಿ ಫರೋಹನ ಜನ್ಮದಿನವಾಗಿದ್ದರಿಂದ ಅವನು ತನ್ನ ಸೇವಕರೆಲ್ಲರಿಗೂ ಔತಣವನ್ನು ಮಾಡಿಸಿ, ಮುಖ್ಯ ಪಾನದಾಯಕನನ್ನು ಮತ್ತು ಮುಖ್ಯ ರೊಟ್ಟಿಗಾರನನ್ನು ತನ್ನ ಅಧಿಕಾರಿಗಳ ಮುಂದೆ ನಿಲ್ಲಿಸಿದನು. 21ಮುಖ್ಯ ಪಾನದಾಯಕನನ್ನು ತಿರುಗಿ ಉದ್ಯೋಗದಲ್ಲಿ ಇರಿಸಿದ್ದರಿಂದ, ಮತ್ತೆ ಅವನು ಫರೋಹನ ಕೈಗೆ ಪಾನಪಾತ್ರೆಯನ್ನು ಕೊಟ್ಟನು. 22ಆದರೆ ಮುಖ್ಯ ರೊಟ್ಟಿಗಾರನನ್ನು ಗಲ್ಲಿಗೇರಿಸಿದನು. ಹೀಗೆ ಯೋಸೇಫನು ಹೇಳಿದ ಹೇಳಿದಂತೆಯೇ ಆಯಿತು.
23ಆದರೂ ಪಾನದಾಯಕರ ಮುಖ್ಯಸ್ಥನು ಯೋಸೇಫನನ್ನು ಜ್ಞಾಪಕಮಾಡಿಕೊಳ್ಳದೆ ಅವನನ್ನು ಮರೆತುಬಿಟ್ಟನು.
Currently Selected:
ಆದಿಕಾಂಡ 40: KSB
Highlight
Share
Copy
![None](/_next/image?url=https%3A%2F%2Fimageproxy.youversionapistaging.com%2F58%2Fhttps%3A%2F%2Fweb-assets.youversion.com%2Fapp-icons%2Fen.png&w=128&q=75)
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.