ಲೂಕ 18
18
ವಿಧವೆಯ ಸಾಮ್ಯ
1ನಿರಾಶರಾಗದೆ ಯಾವಾಗಲೂ ಪ್ರಾರ್ಥಿಸಬೇಕೆಂದು ಯೇಸು ತಮ್ಮ ಶಿಷ್ಯರಿಗೆ ಒಂದು ಸಾಮ್ಯವನ್ನು ಹೇಳಿದರು. 2“ಒಂದು ಪಟ್ಟಣದಲ್ಲಿ ಒಬ್ಬ ನ್ಯಾಯಾಧಿಪತಿ ಇದ್ದನು. ಅವನು ದೇವರಿಗೂ ಭಯಪಡುತ್ತಿರಲಿಲ್ಲ ಮನುಷ್ಯರಿಗೂ ಲಕ್ಷ್ಯಕೊಡುತ್ತಿರಲಿಲ್ಲ. 3ಅದೇ ಪಟ್ಟಣದಲ್ಲಿ ಒಬ್ಬ ವಿಧವೆಯಿದ್ದಳು. ಆಕೆ ಪದೇಪದೇ ಅವನ ಬಳಿಗೆ ಬಂದು, ‘ನನ್ನ ವಿರೋಧಿಯ ಎದುರಾಗಿ ನನಗೆ ನ್ಯಾಯ ದೊರಕಿಸಿಕೊಡು,’ ಎಂದು ಕೇಳಿಕೊಳ್ಳುತ್ತಿದ್ದಳು.
4“ಅವನು ಸ್ವಲ್ಪಕಾಲ ಆಕೆಗೆ ಗಮನಕೊಡಲಿಲ್ಲ. ತರುವಾಯ ಅವನು ತನ್ನೊಳಗೆ, ‘ನಾನು ದೇವರಿಗೆ ಭಯಪಡುವುದಿಲ್ಲ ಹಾಗೂ ಮನುಷ್ಯರಿಗೂ ಲಕ್ಷ್ಯಕೊಡುವುದಿಲ್ಲ, 5ಆದರೂ ಈ ವಿಧವೆಯು ನನಗೆ ತೊಂದರೆಕೊಟ್ಟು ಪದೇಪದೇ ನನ್ನ ಬಳಿಗೆ ಬಂದು, ನನ್ನನ್ನು ಕಾಡಿಸದಂತೆ ನಾನು ಅವಳಿಗೆ ನ್ಯಾಯತೀರಿಸುವೆನು,’ ” ಎಂದುಕೊಂಡನು.
6ಅನಂತರ ಕರ್ತದೇವರು, “ಈ ಅನ್ಯಾಯಗಾರನಾದ ನ್ಯಾಯಾಧಿಪತಿಯು ಹೇಳಿಕೊಂಡಿದ್ದನ್ನು ಕೇಳಿರಿ. 7ದೇವರಾದುಕೊಂಡವರು ದೇವರಿಗೆ ಹಗಲುರಾತ್ರಿ ಮೊರೆಯಿಡುವಾಗ, ದೇವರು ಅವರ ವಿಷಯದಲ್ಲಿ ಅವರಿಗೆ ನ್ಯಾಯವನ್ನು ಕೊಡದೆ ಇರುವರೋ? ದೇವರು ನ್ಯಾಯ ಕೊಡಲು ತಡಮಾಡುವರೋ? 8ದೇವರು ಬೇಗನೇ ಅವರಿಗೆ ನ್ಯಾಯತೀರಿಸುವರೆಂದು, ನಾನು ನಿಮಗೆ ಹೇಳುತ್ತೇನೆ. ಆದರೂ, ಮನುಷ್ಯಪುತ್ರನಾದ ನಾನು ಬಂದಾಗ ಭೂಮಿಯ ಮೇಲೆ ವಿಶ್ವಾಸವನ್ನು ಕಾಣುವೆನೋ?” ಎಂದರು.
ಫರಿಸಾಯ ಹಾಗೂ ಸುಂಕದವನ ಸಾಮ್ಯ
9ತಾವು ನೀತಿವಂತರೆಂದು ತಮ್ಮಲ್ಲಿಯೇ ಭರವಸೆಯನ್ನಿಟ್ಟುಕೊಂಡು ಬೇರೆಯವರನ್ನು ಅಸಡ್ಡೆ ಮಾಡಿದ ಕೆಲವರಿಗೆ, ಯೇಸು ಈ ಸಾಮ್ಯವನ್ನು ಹೇಳಿದರು: 10“ಇಬ್ಬರು ಪ್ರಾರ್ಥನೆಮಾಡುವುದಕ್ಕೆ ದೇವಾಲಯಕ್ಕೆ ಹೋದರು. ಅವರಲ್ಲಿ ಒಬ್ಬನು ಫರಿಸಾಯನು ಮತ್ತೊಬ್ಬನು ಸುಂಕದವನು. 11ಫರಿಸಾಯನು ನಿಂತುಕೊಂಡು: ‘ದೇವರೇ, ಸುಲಿಗೆ ಮಾಡುವವರು, ಅನೀತಿವಂತರು, ವ್ಯಭಿಚಾರಿಗಳು ಆಗಿರುವ ಉಳಿದ ಜನರಂತೆ ನಾನಲ್ಲ, ಈ ಸುಂಕದವನಂತೆಯೂ ನಾನಲ್ಲ. ಆದ್ದರಿಂದ ನಾನು ನಿನಗೆ ಸ್ತೋತ್ರ ಮಾಡುತ್ತೇನೆ. 12ನಾನು ವಾರಕ್ಕೆ ಎರಡು ಸಾರಿ ಉಪವಾಸ ಮಾಡುತ್ತೇನೆ. ನನಗಿರುವ ಎಲ್ಲವುಗಳಲ್ಲಿ ದಶಾಂಶ ಕೊಡುತ್ತೇನೆ,’ ಎಂದು ಹೇಳಿ ತನಗೆ ತಾನೇ ಪ್ರಾರ್ಥಿಸಿದನು.
13“ಆದರೆ ಸುಂಕದವನು ದೂರದಲ್ಲಿ ನಿಂತು, ಆಕಾಶದ ಕಡೆಗೆ ಕಣ್ಣೆತ್ತಿ ನೋಡುವುದಕ್ಕೂ ಧೈರ್ಯಗೊಳ್ಳದೇ ತನ್ನ ಎದೆಯನ್ನು ಬಡಿದುಕೊಳ್ಳುತ್ತಾ, ‘ದೇವರೇ ಪಾಪಿಯಾದವನು ನಾನೇ ನನ್ನನ್ನು ಕರುಣಿಸು,’ ಎಂದು ಪ್ರಾರ್ಥಿಸಿದನು.
14“ನಾನು ನಿಮಗೆ ಹೇಳುತ್ತೇನೆ, ಅವನಲ್ಲ, ಇವನೇ ನೀತಿವಂತನೆಂಬ ನಿರ್ಣಯ ಪಡೆದವನಾಗಿ ತನ್ನ ಮನೆಗೆ ಹೋದನು. ಏಕೆಂದರೆ, ಯಾರಾದರೂ ತಮ್ಮನ್ನು ತಾವೇ ಹೆಚ್ಚಿಸಿಕೊಳ್ಳುವರೋ ಅವರು ತಗ್ಗಿಸಲಾಗುವರು ಮತ್ತು ತಮ್ಮನ್ನು ತಾವೇ ತಗ್ಗಿಸಿಕೊಳ್ಳುವವರು ಹೆಚ್ಚಿಸಲಾಗುವರು,” ಎಂದರು.
ಚಿಕ್ಕಮಕ್ಕಳು ಹಾಗೂ ಯೇಸು
15ಚಿಕ್ಕಮಕ್ಕಳನ್ನು ಯೇಸು ಮುಟ್ಟುವಂತೆ ಕೆಲವರು ಚಿಕ್ಕಮಕ್ಕಳನ್ನು ಅವರ ಬಳಿಗೆ ತಂದರು ಆಗ ಅವರ ಶಿಷ್ಯರು ಇದನ್ನು ಕಂಡು, ಜನರನ್ನು ಗದರಿಸಿದರು. 16ಆದರೆ ಯೇಸುವೋ ಚಿಕ್ಕಮಕ್ಕಳನ್ನು ತಮ್ಮ ಹತ್ತಿರಕ್ಕೆ ಆಹ್ವಾನಿಸಿ ಶಿಷ್ಯರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿರಿ. ಅವುಗಳಿಗೆ ಅಡ್ಡಿಮಾಡಬೇಡಿರಿ. ಏಕೆಂದರೆ ದೇವರ ರಾಜ್ಯವು ಇಂಥವರದೇ. 17ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಯಾರಾದರೂ ಚಿಕ್ಕಮಗುವಿನಂತೆ ದೇವರ ರಾಜ್ಯವನ್ನು ಸ್ವೀಕರಿಸದಿದ್ದರೆ, ಅವರು ಅದರೊಳಗೆ ಸೇರುವುದೇ ಇಲ್ಲ,” ಎಂದರು.
ಸಿರಿವಂತನಾದ ಅಧಿಕಾರಿ
18ಒಬ್ಬ ಅಧಿಕಾರಿಯು ಯೇಸುವಿಗೆ, “ಒಳ್ಳೆಯ ಬೋಧಕರೇ, ನಾನು ನಿತ್ಯಜೀವವನ್ನು ಪ್ರಾಪ್ತಿಮಾಡಿಕೊಳ್ಳುವುದಕ್ಕೆ ಏನು ಮಾಡಬೇಕು?” ಎಂದು ಕೇಳಿದನು.
19ಅದಕ್ಕೆ ಯೇಸು ಅವನಿಗೆ, “ನೀನು ನನ್ನನ್ನು ಒಳ್ಳೆಯವನೆಂದು ಏಕೆ ಕರೆಯುತ್ತಿ? ದೇವರೊಬ್ಬರೇ ಹೊರತು ಬೇರೆ ಯಾರೂ ಒಳ್ಳೆಯವರಲ್ಲ. 20‘ವ್ಯಭಿಚಾರ ಮಾಡಬಾರದು, ನರಹತ್ಯೆ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು,’#18:20 ವಿಮೋ 20:12‑16; ಧರ್ಮೋ 5:16‑20 ಎಂಬ ಈ ಆಜ್ಞೆಗಳು ನಿನಗೆ ಗೊತ್ತಿವೆಯಲ್ಲಾ,” ಎಂದರು.
21ಅದಕ್ಕವನು, “ನನ್ನ ಬಾಲ್ಯದಿಂದಲೇ ನಾನು ಇವೆಲ್ಲವನ್ನೂ ಕೈಕೊಂಡಿದ್ದೇನೆ,” ಎಂದು ಹೇಳಿದನು.
22ಯೇಸು ಇವುಗಳನ್ನು ಕೇಳಿ ಅವನಿಗೆ, “ಆದರೂ ನಿನಗೆ ಒಂದು ಕೊರತೆ ಇದೆ. ನೀನು ಹೋಗಿ ನಿನಗೆ ಇರುವುದೆಲ್ಲವನ್ನು ಮಾರಿ ಬಡವರಿಗೆ ಕೊಡು; ಆಗ ಪರಲೋಕದಲ್ಲಿ ನಿನಗೆ ಸಂಪತ್ತಿರುವುದು ಮತ್ತು ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು.
23ಅವನು ಇದನ್ನು ಕೇಳಿ, ಬಹಳ ದುಃಖವುಳ್ಳವನಾದನು. ಏಕೆಂದರೆ ಅವನು ಬಹಳ ಸಿರಿವಂತನಾಗಿದ್ದನು. 24ಅವನು ಬಹಳ ವ್ಯಥೆಗೊಂಡದ್ದನ್ನು ಯೇಸು ಕಂಡು, “ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ಎಷ್ಟೋ ಕಷ್ಟ! 25ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವುದು ಸುಲಭ,” ಎಂದು ಹೇಳಿದರು.
26ಇದನ್ನು ಕೇಳಿದವರು, “ಹಾಗಾದರೆ ಯಾರು ರಕ್ಷಣೆ ಹೊಂದುವವರು?” ಎಂದರು.
27ಅದಕ್ಕೆ ಯೇಸು, “ಮನುಷ್ಯರಿಗೆ ಅಸಾಧ್ಯವಾದವುಗಳು ದೇವರಿಗೆ ಸಾಧ್ಯವಾಗಿವೆ,” ಎಂದು ಹೇಳಿದರು.
28ಆಗ ಪೇತ್ರನು, “ಇಗೋ, ನಾವು ಎಲ್ಲವನ್ನೂ ಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವಲ್ಲ,” ಎಂದನು.
29ಯೇಸು ಅವರಿಗೆ, “ನಾನು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ, ಮನೆಯನ್ನಾದರೂ ಹೆಂಡತಿಯನ್ನಾದರೂ ಸಹೋದರರನ್ನಾದರೂ ತಂದೆತಾಯಿಗಳನ್ನಾದರೂ ಮಕ್ಕಳನ್ನಾದರೂ ದೇವರ ರಾಜ್ಯಕ್ಕೋಸ್ಕರ ಬಿಟ್ಟುಬಿಡುವವನು, 30ಈ ಕಾಲದಲ್ಲಿ ಅತ್ಯಧಿಕವಾದವುಗಳನ್ನೂ ಬರುವ ಕಾಲದಲ್ಲಿ ನಿತ್ಯಜೀವವನ್ನೂ ಹೊಂದುವನು,” ಎಂದರು.
ಯೇಸು ತಮ್ಮ ಮರಣವನ್ನು ಮುಂತಿಳಿಸಿದ್ದು
31ಯೇಸು ಹನ್ನೆರಡು ಮಂದಿಯನ್ನು ಹತ್ತಿರಕ್ಕೆ ಕರೆದು ಅವರಿಗೆ, “ಇಗೋ, ನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ, ಮನುಷ್ಯಪುತ್ರನಾದ ನನ್ನ ವಿಷಯದಲ್ಲಿ ಪ್ರವಾದಿಗಳಿಂದ ಬರೆದಿರುವುದೆಲ್ಲವೂ ನೆರವೇರಬೇಕು. 32ನಾನು ಯೆಹೂದ್ಯರಲ್ಲದವರ ಕೈಗೆ ಸೆರೆಯಾಗುವೆನು. ಅವರು ನನ್ನನ್ನು ಹಾಸ್ಯಮಾಡಿ, ನನಗೆ ಅವಮಾನ ಮಾಡಿ, ನನ್ನ ಮೇಲೆ ಉಗುಳುವರು. 33ಇದಲ್ಲದೆ ಅವರು ನನ್ನನ್ನು ಕೊರಡೆಗಳಿಂದ ಹೊಡೆದು, ಕೊಂದುಹಾಕುವರು. ಆದರೆ ನಾನು ಮೂರನೆಯ ದಿನ ಜೀವಿತನಾಗಿ ಎದ್ದು ಬರುವೆನು,” ಎಂದರು.
34ಆದರೆ ಶಿಷ್ಯರಿಗೆ ಇವುಗಳಲ್ಲಿ ಒಂದೂ ಅರ್ಥವಾಗಲಿಲ್ಲ. ಈ ಮಾತುಗಳು ಅವರಿಗೆ ಮರೆಯಾಗಿದ್ದುದರಿಂದ, ಯೇಸು ಹೇಳಿದವುಗಳನ್ನು ಅವರು ತಿಳಿದುಕೊಳ್ಳಲಿಲ್ಲ.
ಕುರುಡ ಭಿಕ್ಷುಕನಿಗೆ ದೃಷ್ಟಿ ಬಂದದ್ದು
35ಯೇಸು ಯೆರಿಕೋವಿನ ಸಮೀಪಕ್ಕೆ ಬಂದಾಗ, ಒಬ್ಬ ಕುರುಡನು ದಾರಿಯ ಪಕ್ಕದಲ್ಲಿ ಕುಳಿತುಕೊಂಡು ಭಿಕ್ಷೆಬೇಡುತ್ತಿದ್ದನು. 36ಜನಸಮೂಹವು ಹಾದು ಹೋಗುವುದನ್ನು ಇವನು ಕೇಳಿಸಿಕೊಂಡು, ಅದೇನೆಂದು ವಿಚಾರಿಸಿದನು. 37“ನಜರೇತಿನ ಯೇಸು ಹಾದು ಹೋಗುತ್ತಿದ್ದಾರೆ,” ಎಂದು ಜನರು ಅವನಿಗೆ ಹೇಳಿದರು.
38ಆಗ ಅವನು, “ಯೇಸುವೇ, ದಾವೀದನ ಪುತ್ರನೇ, ನನ್ನನ್ನು ಕರುಣಿಸಿ!” ಎಂದು ಗಟ್ಟಿಯಾಗಿ ಕೂಗಿಕೊಂಡನು.
39ಮುಂದೆ ಹೋಗುತ್ತಿದ್ದವರು ಸುಮ್ಮನಿರುವಂತೆ ಅವನನ್ನು ಗದರಿಸಿದರು, ಆದರೂ ಅವನು, “ದಾವೀದನ ಪುತ್ರರೇ, ನನ್ನನ್ನು ಕರುಣಿಸಿ,” ಎಂದು ಮತ್ತಷ್ಟು ಹೆಚ್ಚಾಗಿ ಕೂಗಿಕೊಂಡನು.
40ಆಗ ಯೇಸು ನಿಂತು ಅವನನ್ನು ತಮ್ಮ ಬಳಿಗೆ ಕರೆತರುವಂತೆ ಅಪ್ಪಣೆಕೊಟ್ಟರು. ಅವನು ಯೇಸುವಿನ ಬಳಿಗೆ ಬಂದಾಗ, ಅವರು ಅವನಿಗೆ, 41“ನನ್ನಿಂದ ನಿನಗೇನಾಗಬೇಕು?” ಎಂದು ಕೇಳಿದರು.
ಅದಕ್ಕವನು, “ಕರ್ತದೇವರೇ, ನನಗೆ ದೃಷ್ಟಿ ಕೊಡಿ,” ಎಂದನು.
42ಆಗ ಯೇಸು ಅವನಿಗೆ, “ನೀನು ದೃಷ್ಟಿ ಪಡೆ; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ,” ಎಂದರು. 43ಕೂಡಲೇ ಅವನು ದೃಷ್ಟಿಯನ್ನು ಪಡೆದನು. ಆಗ ಅವನು ದೇವರನ್ನು ಸ್ತುತಿಸುತ್ತಾ, ಯೇಸುವನ್ನು ಹಿಂಬಾಲಿಸಿದನು. ಎಲ್ಲಾ ಜನರು ಅದನ್ನು ಕಂಡು, ದೇವರಿಗೆ ಸ್ತೋತ್ರ ಸಲ್ಲಿಸಿದರು.
Currently Selected:
ಲೂಕ 18: KSB
Highlight
Share
Copy
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.