21
ವಿಧವೆಯ ಕಾಣಿಕೆ
1ಯೇಸು ಗಮನಿಸುತ್ತಿರುವಾಗ, ಐಶ್ವರ್ಯವಂತರು ತಮ್ಮ ಕಾಣಿಕೆಗಳನ್ನು ದೇವಾಲಯದ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕುವುದನ್ನು ಕಂಡರು. 2ಒಬ್ಬ ಬಡ ವಿಧವೆಯು ಸಹ ಎರಡು ಕಾಸುಗಳನ್ನು#21:2 ಬಹಳ ಕಡಿಮೆ ಬೆಲೆಯ ತಾಮ್ರದ ನಾಣ್ಯ ಪೆಟ್ಟಿಗೆಯಲ್ಲಿ ಹಾಕುವುದನ್ನು ಯೇಸು ಕಂಡರು. 3ಆಗ ಯೇಸು, “ನಾನು ನಿಮಗೆ ನಿಜವಾಗಿ ಹೇಳುತ್ತೇನೆ: ಈ ಬಡ ವಿಧವೆಯು ಅವರೆಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ. 4ಏಕೆಂದರೆ ಇವರೆಲ್ಲರೂ ತಮಗಿರುವ ಸಮೃದ್ಧಿಯಲ್ಲಿ, ದೇವರಿಗೆ ಕಾಣಿಕೆಗಳನ್ನು ಹಾಕಿದ್ದಾರೆ. ಆದರೆ ಈಕೆಯು ತನ್ನ ಬಡತನದಲ್ಲಿಯೂ ತನ್ನ ಜೀವನಕ್ಕೆ ಇದ್ದದ್ದನ್ನೆಲ್ಲಾ ಹಾಕಿದ್ದಾಳೆ,” ಎಂದರು.
ಯುಗದ ಸಮಾಪ್ತಿಯ ಸೂಚನೆಗಳು
5ತರುವಾಯ ಶಿಷ್ಯರಲ್ಲಿ ಕೆಲವರು ದೇವಾಲಯದ ಕುರಿತು ಅದು ಸುಂದರವಾದ ಕಲ್ಲುಗಳಿಂದಲೂ ದೇವರಿಗೆ ಪ್ರತಿಷ್ಠೆಯ ಕೊಡುಗೆಗಳಿಂದಲೂ ಅಲಂಕೃತವಾಗಿದೆ ಎಂದು ಮಾತನಾಡುತ್ತಿದ್ದರು. 6ಆದರೆ ಯೇಸು, “ನೀವು ಕಾಣುತ್ತಿರುವ ಇವೆಲ್ಲವೂ ಕೆಡವಿಹಾಕಿ ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಉಳಿಯದ ಕಾಲ ಬರುವುದು,” ಎಂದರು.
7ಆಗ ಅವರು ಯೇಸುವಿಗೆ, “ಬೋಧಕರೇ, ಇವುಗಳು ಯಾವಾಗ ಆಗುವುವು? ಇವುಗಳು ಸಂಭವಿಸುವುದಕ್ಕಿರುವಾಗ ಯಾವ ಸೂಚನೆ ಇರುವುದು?” ಎಂದು ಕೇಳಿದರು.
8ಅದಕ್ಕೆ ಯೇಸು, “ನೀವು ಮೋಸಹೋಗದಂತೆ ಎಚ್ಚರಿಕೆಯಾಗಿರಿ. ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಅವರು,’ ಎಂದೂ ‘ಸಮಯ ಸಮೀಪಿಸಿದೆ,’ ಎಂದೂ ಹಕ್ಕು ಸಾಧಿಸುವರು. ನೀವು ಅವರನ್ನು ಹಿಂಬಾಲಿಸಬೇಡಿರಿ. 9ನೀವು ಯುದ್ಧಗಳ ಮತ್ತು ಕಲಹಗಳ ವಿಷಯವಾಗಿ ಕೇಳುವಾಗ ದಿಗಿಲುಪಡಬೇಡಿರಿ. ಇವುಗಳೆಲ್ಲಾ ಮೊದಲು ಸಂಭವಿಸಬೇಕು. ಆದರೂ ಕೂಡಲೇ ಅಂತ್ಯ ಬರುವುದಿಲ್ಲ,” ಎಂದರು.
10ಯೇಸು ಅವರಿಗೆ, “ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು. 11ವಿವಿಧ ಕಡೆಗಳಲ್ಲಿ ಮಹಾಭೂಕಂಪಗಳೂ ಬರಗಳೂ ವ್ಯಾಧಿಗಳೂ ಇರುವುವು. ಭಯ ಹುಟ್ಟಿಸುವ ಘಟನೆಗಳೂ ಆಕಾಶದಿಂದ ಮಹಾಸೂಚನೆಗಳೂ ಆಗುವುವು.
12“ಆದರೆ ಇವೆಲ್ಲವುಗಳಿಗಿಂತ ಮೊದಲು ಅವರು ನಿಮ್ಮನ್ನು ಹಿಡಿದು, ಹಿಂಸಿಸಿ ಸಭಾಮಂದಿರಗಳಿಗೂ ಸೆರೆಮನೆಗಳಿಗೂ ಒಪ್ಪಿಸಿ, ನನ್ನ ಹೆಸರಿನ ನಿಮಿತ್ತ ಅರಸುಗಳ ಮತ್ತು ಅಧಿಕಾರಿಗಳ ಮುಂದೆ ನಿಮ್ಮನ್ನು ತರುವರು. 13ಇದು ಸಾಕ್ಷಿ ನೀಡಲು ನಿಮಗೆ ಸದಾವಕಾಶವಾಗಿರುತ್ತದೆ. 14ಆಗ ನೀವು ಏನು ಉತ್ತರಕೊಡಬೇಕೆಂದು ಮುಂದಾಗಿ ಚಿಂತಿಸಬೇಕಾಗಿಲ್ಲವೆಂದು ನಿಮ್ಮ ಹೃದಯಗಳಲ್ಲಿ ನಿಶ್ಚಯಮಾಡಿಕೊಳ್ಳಿರಿ. 15ಏಕೆಂದರೆ ನಿಮ್ಮ ವಿರೋಧಿಗಳು ಸಹ ಪ್ರತಿವಾದಿಸಲಾಗದ ಇಲ್ಲವೆ ವಿರೋಧಿಸಲಾಗದ ಮಾತನ್ನೂ ಜ್ಞಾನವನ್ನೂ ನಾನು ನಿಮಗೆ ಕೊಡುವೆನು. 16ತಂದೆತಾಯಿಗಳೂ ಸಹೋದರರೂ ಬಂಧುಗಳೂ ಸ್ನೇಹಿತರೂ ನಿಮ್ಮನ್ನು ಹಿಡಿದುಕೊಡುವರು ಮತ್ತು ನಿಮ್ಮಲ್ಲಿ ಕೆಲವರನ್ನು ಕೊಲ್ಲಿಸುವರು. 17ಇದಲ್ಲದೆ ನನ್ನ ನಿಮಿತ್ತ ನಿಮ್ಮನ್ನು ಎಲ್ಲರೂ ದ್ವೇಷಿಸುವರು.#21:17 ಮೂಲಭಾಷೆಯಲ್ಲಿ ನನ್ನ ಹೆಸರಿನ ನಿಮಿತ್ತವಾಗಿ 18ಆದರೆ ನಿಮ್ಮ ತಲೆ ಕೂದಲೊಂದಾದರೂ ನಾಶವಾಗುವುದಿಲ್ಲ. 19ನೀವು ನಿಮ್ಮ ಸಹನೆಯಿಂದ, ನಿಮ್ಮ ಪ್ರಾಣಗಳನ್ನು ಕಾಪಾಡಿಕೊಳ್ಳುವಿರಿ.
20“ಸೈನ್ಯಗಳು ಯೆರೂಸಲೇಮಿಗೆ ಮುತ್ತಿಗೆ ಹಾಕುವುದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲವು ಸಮೀಪಿಸಿದೆ ಎಂದು ತಿಳಿದುಕೊಳ್ಳಿರಿ. 21ಆಗ ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ; ಪಟ್ಟಣದ ಮಧ್ಯದಲ್ಲಿರುವವರು ಹೊರಟು ಹೋಗಲಿ; ಇದಲ್ಲದೆ ಹಳ್ಳಿಗಳಲ್ಲಿ ಇರುವವರು ಪಟ್ಟಣಕ್ಕೆ ಪ್ರವೇಶಿಸದೆ ಇರಲಿ. 22ಏಕೆಂದರೆ ಪವಿತ್ರ ವೇದದಲ್ಲಿ ಬರೆದಿರುವವುಗಳೆಲ್ಲವೂ ನೆರವೇರಲು, ಇವು ದಂಡನೆಯ ದಿವಸಗಳಾಗಿವೆ. 23ಆದರೆ ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಹಾಲುಣಿಸುವ ತಾಯಂದಿರಿಗೂ ಕಷ್ಟ! ದೇಶದಲ್ಲಿ ಈ ಜನರು ಮಹಾ ವಿಪತ್ತಿಗೂ ಕೋಪಕ್ಕೂ ಗುರಿಯಾಗುವರು. 24ಇದಲ್ಲದೆ ಅವರು ಖಡ್ಗಕ್ಕೆ ತುತ್ತಾಗಿ ಬೀಳುವರು ಮತ್ತು ಸೆರೆಯಾಗಿ ಎಲ್ಲಾ ರಾಷ್ಟ್ರಗಳಲ್ಲಿ ಒಯ್ಯುವರು. ಯೆಹೂದ್ಯರಲ್ಲದವರ ಕಾಲ ಪರಿಪೂರ್ಣವಾಗುವವರೆಗೆ ಅವರು ಯೆರೂಸಲೇಮನ್ನು ತುಳಿದುಹಾಕುವರು.
25“ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ಸೂಚನೆಗಳು ಕಾಣಿಸಿಕೊಳ್ಳುವುವು. ಭೂಮಿಯಲ್ಲಾದರೋ, ಮೊರೆಯುವ ತೆರೆಗಳ ಮತ್ತು ಭೋರ್ಗರೆಯುವ ಸಮುದ್ರದ ನಿಮಿತ್ತ ಜನಾಂಗಗಳು ದಿಕ್ಕುತೋಚದೆ ಸಂಕಟಕ್ಕೆ ಒಳಗಾಗುವರು. 26ಆಕಾಶದ ಶಕ್ತಿಗಳು ಕದಲುವುದರಿಂದ ಲೋಕಕ್ಕೆ ಏನು ಸಂಭವಿಸುವುದೋ ಎಂಬ ಭಯಭೀತಿಯಿಂದ, ಮಾನವರು ಮನಗುಂದಿಹೋಗುವರು. 27ಆಗ ಮನುಷ್ಯಪುತ್ರನಾದ ನಾನು ಶಕ್ತಿಯಿಂದಲೂ ಮಹಾ ಮಹಿಮೆಯಿಂದಲೂ ಮೇಘದಲ್ಲಿ ಬರುವುದನ್ನು ಜನರು ಕಾಣುವರು. 28ಈ ಸಂಗತಿಗಳು ಸಂಭವಿಸಲು ತೊಡಗುವಾಗ, ತಲೆಯೆತ್ತಿ ನಿಲ್ಲಿರಿ. ಏಕೆಂದರೆ ನಿಮ್ಮ ವಿಮೋಚನೆಯು ಸಮೀಪಿಸಿತು,” ಎಂದರು.
29ಯೇಸು ಶಿಷ್ಯರಿಗೆ ಈ ಸಾಮ್ಯವನ್ನು ಹೇಳಿದರು: “ಅಂಜೂರದ ಮರವನ್ನು ಮತ್ತು ಇತರ ಮರಗಳನ್ನು ಗಮನಿಸಿರಿ. 30ಅವುಗಳ ಎಲೆಗಳು ಚಿಗುರುವುದನ್ನು ಕಾಣುವಾಗ ಬೇಸಿಗೆಯು ಹತ್ತಿರವಾಯಿತೆಂದು ನೀವಾಗಿಯೇ ತಿಳಿದುಕೊಳ್ಳುತ್ತೀರಿ. 31ಅದೇ ಪ್ರಕಾರ, ಇವೆಲ್ಲ ಸಂಭವಿಸುವುದನ್ನು ನೀವು ಕಾಣುವಾಗ, ದೇವರ ರಾಜ್ಯ ಸಮೀಪಿಸಿತೆಂದು ತಿಳಿದುಕೊಳ್ಳಿರಿ.
32“ಇವೆಲ್ಲವೂ ನೆರವೇರುವವರೆಗೆ ಈ ಸಂತತಿಯು ಅಳಿದುಹೋಗುವುದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. 33ಭೂಮ್ಯಾಕಾಶಗಳು ಅಳಿದುಹೋಗುವುವು, ಆದರೆ ನನ್ನ ಮಾತುಗಳು ಅಳಿದುಹೋಗುವುದೇ ಇಲ್ಲ.
34“ನಿಮ್ಮ ಮೇಲೆ ಆ ದಿನವು ಉರುಲಿನಂತೆ ಫಕ್ಕನೆ ಬಾರದಂತೆ ನೀವು ಅತಿಭೋಜನದಿಂದಲೂ ಅಮಲಿನಿಂದಲೂ ಈ ಜೀವನದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗದಂತೆ, ನಿಮ್ಮ ವಿಷಯದಲ್ಲಿ ಜಾಗರೂಕರಾಗಿರಿ. 35ಅದು ಭೂಮಿಯ ಮೇಲೆ ವಾಸವಾಗಿರುವವರೆಲ್ಲರ ಮೇಲೆ ಬರುವುದು. 36ಆದಕಾರಣ ಸಂಭವಿಸುವುದಕ್ಕಿರುವ ಇವೆಲ್ಲವುಗಳಿಂದ, ನೀವು ತಪ್ಪಿಸಿಕೊಳ್ಳುವುದಕ್ಕೆ ಯೋಗ್ಯರೆಂದು ಎಣಿಸಿಕೊಳ್ಳುವಂತೆಯೂ ಮನುಷ್ಯಪುತ್ರನಾದ ನನ್ನ ಮುಂದೆ ನಿಂತುಕೊಳ್ಳುವಂತೆಯೂ ಯಾವಾಗಲೂ ಎಚ್ಚರವಾಗಿದ್ದು ಪ್ರಾರ್ಥಿಸುತ್ತಾ ಇರಿ,” ಎಂದರು.
37ಯೇಸು ಹಗಲಿನಲ್ಲಿ ದೇವಾಲಯದೊಳಗೆ ಬೋಧಿಸುತ್ತಾ ಇದ್ದು, ರಾತ್ರಿಯಲ್ಲಿ ಹೊರಟುಹೋಗಿ ಓಲಿವ್ ಗುಡ್ಡದಲ್ಲಿ ವಾಸಿಸುತ್ತಿದ್ದರು. 38ಜನರೆಲ್ಲರೂ ಬೆಳಗಿನ ಜಾವದಲ್ಲಿ ಎದ್ದು ಯೇಸುವಿನ ಉಪದೇಶವನ್ನು ಕೇಳುವುದಕ್ಕಾಗಿ ದೇವಾಲಯಕ್ಕೆ ಬರುತ್ತಿದ್ದರು.